ನಮ್ಮ ಬಂಧುವೊಬ್ಬರದು ಅರಣ್ಯದ ನಡುವಿನ ಒಂಟಿ ಮನೆ. ಒಂದು ಬೇಸಿಗೆಯ ಬೆಳದಿಂಗಳ ರಾತ್ರಿಯಲ್ಲಿ ಹುಲಿ ಮತ್ತು ಕಾಡೆಮ್ಮೆ ಎರಡರ ನಡುವೆ ಭಯಂಕರ ಕಾದಾಟ. ಅವರ ಮನೆಯ ಹಿತ್ತಿಲಿನ ಪಕ್ಕದಲ್ಲಿಯೇ ಇವೆರಡರ ಹೋರಾಟವನ್ನು ಆ ಮನೆಯ ಜನರೆಲ್ಲ ಕುತೂಹಲದಿಂದ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ವೀಕ್ಷಿಸಿದರಂತೆ. ಆ ಪ್ರಾಣಿಗಳ ಹೋರಾಟದ ಜಾಗಕ್ಕೂ ಇವರ ಮಧ್ಯೆ ಕೇವಲ ಒಂದು ಬೇಲಿಯಷ್ಟೆ ಇದ್ದುದು. ಇದು ಎಲ್ಲಿಯೂ ಸುದ್ದಿಯಾಗಲೇ ಇಲ್ಲ. ಮೊಬೈಲ್‌ ಕಾಲವಲ್ಲ, ಹಾಗಾಗಿ, ಫೋಟೋ ತೆಗೆದು ಸ್ಟೇಟಸ್‌ಗೆ ಅಪ್‌ಡೇಟ್‌ ಆಗಲೂ ಇಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಆರನೆಯ ಕಂತಿನಲ್ಲಿ ಮನುಷ್ಯ-ಪ್ರಾಣಿಗಳ ನಡುವಿನ ತಿಕ್ಕಾಟದ ಕುರಿತ ಬರಹ

ಕೋವಿಡ್‌ ೧೯ ಪಿಡುಗು ಅತ್ಯಂತ ಉತ್ತುಂಗದಲ್ಲಿದ್ದ ದಿನಗಳು. ಊರಿಗೆ ಹೋಗಿದ್ದ ನಮಗೆ   ಅಲ್ಲಿಯೇ ಇರುವುದು ಅನಿವಾರ್ಯವಾಗಿತ್ತು. ಮಾನವನ ಚಟುವಟಿಕೆಗಳು ತೀರ ಕಡಿಮೆಯಾಗಿದ್ದವು. ಆದಾಗ್ಯೂ, ಊರಿನ ಸುತ್ತಮುತ್ತಲಿನ ಜನರ ಬಾಯಿಯಿಂದ ಕಾಡುಪ್ರಾಣಿಗಳನ್ನು ಅಲ್ಲಿ ಕಂಡೆ, ಇಲ್ಲಿ ನೋಡಿದೆ ಎನ್ನುವ ಮಾತುಗಳು  ಕೇಳಿಬರುತ್ತಿದ್ದವು. ಮಲೆನಾಡಿನ ಭಾಗದಲ್ಲಿ ಹಂದಿ, ಕಿರುಬಗಳನ್ನು ಕಾಣುವುದು, ಹಂದಿ ಬೆಳೆಗಳನ್ನು ನಾಶಗೈಯುವುದು, ಕಿರುಬ ಕರುಗಳನ್ನೋ, ಸಾಕುನಾಯಿಗಳನ್ನೋ ಕಬಳಿಸುವುದು ತೀರ ಸಾಮಾನ್ಯ ಸಂಗತಿಯೇ. ಆದರೂ ಈ ಬಗೆಯ ಮಾತುಗಳನ್ನು ಕೇಳಿದಾಗ ಇದು ಕಾಡುಪ್ರಾಣಿಗಳ ಬಗೆಗೆ ಮನುಷ್ಯನ ಮನೋಭಾವ ಬದಲಾದುದರ ಸಂಕೇತವೇ? ಎನಿಸುತ್ತಿದೆ.
ನನಗಾಗ ಐದೋ ಆರೋ ವರ್ಷಗಳಿರಬಹುದು, ಕೊಟ್ಟಿಗೆಯ ಮೂಲೆಯಲ್ಲಿ ಕಟ್ಟಿಹಾಕಿದ್ದ ಮೂರ್ನಾಲ್ಕು ತಿಂಗಳ ಕರುವನ್ನು ರಾತ್ರಿ ಹೊತ್ತಿನಲ್ಲಿ ಕೊಟ್ಟಿಗೆಗೆ ಬಂದ ಕಿರುಬ ಅರ್ಧಂಬರ್ಧ ತಿಂದುಹಾಕಿರುವುದನ್ನು ಕಂಡು ಅತ್ತಿದ್ದೆ. ಅವತ್ತೇ ಅಣ್ಣ, ಅಪ್ಪಯ್ಯ ಸೇರಿ ಕೊಟ್ಟಿಗೆಯ ಬಾಗಿಲನ್ನು ಭದ್ರಗೊಳಿಸಿದ್ದರು. ಕೆಲದಿನಗಳಮಟ್ಟಿಗೆ ಸಂಜೆಯಾಗುತ್ತಲೇ ಮನೆಯ ಹಿಂದಿನ ಕೈಸಾಲೆಯಲ್ಲಿ ಕರುವನ್ನು ಕಟ್ಟುತ್ತಿದ್ದರು. ಮಲೆನಾಡಿನಲ್ಲಿ ಇವೆಲ್ಲವೂ ತಾತ್ಕಾಲಿಕ. ದನಗಳನ್ನು ದಿನವೆಲ್ಲ ಕಟ್ಟಿಹಾಕಲಾಗದು. ಅವನ್ನು ಮೇಯಲು ಬಿಟ್ಟಾಗ ಕಿರುಬನೋ, ಹುಲಿಯೋ ತಿಂದುಹಾಕುವುದು ಮಾಮೂಲು. ಆಗಾಗ ಮೇಯಲು ಬಿಟ್ಟ ದನಗಳು ಹುಲಿಯ ಬಾಯಿಗೆ ಹೋಗುವುದಿತ್ತು. ಶಾಲೆ ಮುಗಿಯುತ್ತಲೇ ಅವರ ಮನೆಯ ಕರುವನ್ನು ಕಿರುಬ ತಿಂದಿದೆ ಎಂದೋ ಇವರ ಮನೆಯ ಹಸು/ಎತ್ತು ಹುಲಿಬಾಯಿಗೆ ಬಿದ್ದಿದೆ ಎನ್ನುವ ಸುದ್ದಿಯನ್ನು ಕೇಳಿ ಅದನ್ನು ನೋಡುವ ಕುತೂಹಲದಿಂದ ಹೊರಡುತ್ತಿದ್ದೆವು. ನಮ್ಮ ಯೋಜನೆ ಅದ್ಹೇಗೋ ದೊಡ್ಡವರಿಗೆ ತಿಳಿಯುತ್ತಿತ್ತು. ದೊಡ್ಡವರಿಂದ ಮಂಗಳಾರತಿ ಮಾಡಿಸಿಕೊಂಡು ಪೆಚ್ಚುಮೋರೆ ಹಾಕಿ ಸುಮ್ಮನಾಗಬೇಕಿತ್ತು.
 ಇತ್ತೀಚಿನವರೆಗೂ/ಈಗಲೂ ಸಾಕಿದ ನಾಯಿಯನ್ನು ರಾತ್ರಿಹೊತ್ತಿನಲ್ಲಿ ಮನೆಯ ಅಂಗಳಕ್ಕೆ ಬಂದು ಕಿರುಬ ಹೊತ್ತೊಯ್ಯುವುದು ತೀರ ಅಪರೂಪವೇನಲ್ಲ. ಸಾಕಿದ ನಾಯಿ ಒಂದೆರಡು ದಿನ ಕಾಣದಿದ್ದರೆ ʻಎಲ್ಲೋ ಕಿರುಬನ ಬಾಯಿಗೆ ಬಿದ್ದಿರಬೇಕುʼ ಎಂದೋ ʻಇನ್ನು ಯಾವ ಕಿರುಬ ಹೊತ್ಗೊಂಡು ಹೋಯ್ತೋʼ ಎಂದು ಹೇಳುವುದನ್ನು ಕೇಳುತ್ತಲೇ ಬೆಳೆದವರು ನಾವು. ಸಾಧಾರಣವಾಗಿ ಹುಲಿ ಸುತ್ತಮುತ್ತ ಎಲ್ಲಿಯೋ ಕಾಣಿಸಿಕೊಂಡಿದೆ ಅಂತ ಗೊತ್ತಾದಾಗ ಮಾತ್ರ ಕೆಲವು ದಿನಗಳವರೆಗೆ ದನಗಳನ್ನು ಮೇಯಲು ಬಿಡದೆ ಕೊಟ್ಟಿಗೆಯಲ್ಲಿ ಕಟ್ಟಿ ಸಾಕುತ್ತಿದ್ದರು. ಇಲ್ಲವೇ ಮನೆಯ ಹತ್ತಿರದ ಬೇಣಕ್ಕೆ ಕೂಡುತ್ತಿದ್ದರು. (ಶಾಲೆಗೆ ರಜೆ ಇದ್ದರೆ ಅವನ್ನು ಕಾಯುವುದು ಮಾತ್ರ ನಮ್ಮ ಹೆಗಲಿಗೆ) ಇವ್ಯಾವುದೂ ವಿಶೇಷ ಸಂಗತಿ ಎನಿಸುತ್ತಿರಲಿಲ್ಲ. ಕಾಡುಪ್ರಾಣಿಗಳೊಂದಿಗೆ ಬದುಕುವುದು ಮಲೆನಾಡಿನ ಜನಕ್ಕೆ ರೂಢಿಯಾಗಿತ್ತು. ತಮ್ಮ ರಾಸುಗಳನ್ನು ಕಾಪಾಡಿಕೊಳ್ಳುವುದು ಅಭ್ಯಾಸವಾಗಿತ್ತು. ಆದರೆ ಈಗ ಇವೆಲ್ಲ ಬದಲಾಗಿದೆ. ʻನಿನ್ನೆ ಪೇಟೆಯಿಂದ ಬರುವಾಗ ಹಂದಿ ನನ್ನ ಗಾಡಿಗೆ ಅಡ್ಡಬಂತುʼ ʻಇವತ್ತು ಚಿರತೆ ನನ್ನ ಗಾಡಿ ಲೈಟಿಗೆ ಕಣ್ಣುಕೊಟ್ಟಿದೆʼ ʻಎಲ್ಲೋ ಹುಲಿ ಕೂಗಿದ ಸದ್ದು ಕೇಳಿಸುತ್ತಿದೆʼ ಎನ್ನುವುದು  ಮಲೆನಾಡಿನವರಿಗೂ ಈಗ ಒಂದು ಸುದ್ದಿಯಾಗಿದೆ.
ಒಂದು ಘಟನೆ ನೆನಪಾಗುತ್ತಿದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು. ನಮ್ಮ ಬಂಧುವೊಬ್ಬರದು ಅರಣ್ಯದ ನಡುವಿನ ಒಂಟಿ ಮನೆ. ಒಂದು ಬೇಸಿಗೆಯ ಬೆಳದಿಂಗಳ ರಾತ್ರಿಯಲ್ಲಿ ಹುಲಿ ಮತ್ತು ಕಾಡೆಮ್ಮೆ, (ನಮ್ಮೂರ ಕಡೆ ಇದನ್ನು ಗಮಯ ಎನ್ನುತ್ತಾರೆ) ಎರಡರ ನಡುವೆ ಭಯಂಕರ ಕಾದಾಟ. ಅವರ ಮನೆಯ ಹಿತ್ತಿಲಿನ ಪಕ್ಕದಲ್ಲಿಯೇ ಇವೆರಡರ ಹೋರಾಟವನ್ನು ಆ ಮನೆಯ ಜನರೆಲ್ಲ ಕುತೂಹಲದಿಂದ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ವೀಕ್ಷಿಸಿದರಂತೆ. ಆ ಪ್ರಾಣಿಗಳ ಹೋರಾಟದ ಜಾಗಕ್ಕೂ ಇವರ ಮಧ್ಯೆ ಕೇವಲ ಒಂದು ಬೇಲಿಯಷ್ಟೆ ಇದ್ದುದು. ಇದು ಎಲ್ಲಿಯೂ ಸುದ್ದಿಯಾಗಲೇ ಇಲ್ಲ. ಮೊಬೈಲ್‌ ಕಾಲವಲ್ಲ, ಹಾಗಾಗಿ, ಫೋಟೋ ತೆಗೆದು ಸ್ಟೇಟಸ್‌ಗೆ ಅಪ್‌ಡೇಟ್‌ ಆಗಲೂ ಇಲ್ಲ. ʻಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ಯುʼ ಎನ್ನುವಂತೆ ಅವರ ಮನೆಯ ಹಿತ್ತಿಲಂಚಿನ ಹಣ್ಣಿನ ಗಿಡಗಳು ನಾಶವಾದುದಂತೂ ಹೌದು.
ಇತ್ತೀಚೆಗೆ ಮಲೆನಾಡಿನ ಹಲವೆಡೆ ಬತ್ತ ಬೆಳೆಯುವುದು ಕಡಿಮೆಯಾಗಿದೆ. ಹಿಂದೆಲ್ಲ ಬತ್ತದ ಗದ್ದೆಗೆ ಹಂದಿ ಬಂದು ಒಂದಿಷ್ಟು ಹಾಳುಗೆಡವಿ ಇನ್ನೊಂದಿಷ್ಟು ತಿಂದು ಹೋಗುತ್ತಿದ್ದವು. ಗದ್ದೆ ಬೆಳೆದು ನಿಂತಾಗ ಒಂದಿಷ್ಟು ದಿನಗಳ ಕಾಲ ಗದ್ದೆಯಲ್ಲಿ ಅಟ್ಟಲು ಹಾಕಿಕೊಂಡು ರಾತ್ರಿಯೆಲ್ಲ, ಎಚ್ಚರವಿದ್ದು ಕೂಹಾಕುವುದು, ಪಟಾಕಿ ಸಿಡಿಸುವುದು, ಡಬ್ಬಿಗೆ ಕೋಲುಕಟ್ಟಿ ಸದ್ದಾಗುವಂತೆ ಮಾಡುವ ಮೂಲಕ ಹಂದಿಯಿಂದ ಗದ್ದೆಯ ಬೆಳೆಯನ್ನು ಕಾಪಾಡುತ್ತಿದ್ದರು. ಚಳಿಗಾಲದ ದಿನಗಳು, ಬಯಲಲ್ಲಿ ಮಲಗುವುದು ಸುಲಭವಲ್ಲ, ಆದಾಗ್ಯೂ ಕೆಳಗೆ ಬೆಂಕಿ ಹಾಕಿಕೊಂಡು ಬೆಂಕಿ ಚಪ್ಪರಕ್ಕೆ ಬೀಳದಂತೆ ಬಹಳ ಎಚ್ಚರಿಕೆಯಿಂದ ನಿಭಾಯಿಸುತ್ತಿದ್ದರು. ನಿದ್ದೆ ಬಂದರೆ ಎನ್ನುವ ಹೆದರಿಕೆಯಲ್ಲಿ ಕೆಲವರು ಹೆಚ್ಚು ಹೊದಿಕೆಯನ್ನು ಬಳಸುತ್ತಿರಲಿಲ್ಲ. ಬೆಳೆಯನ್ನು ಹಂದಿಯಿಂದ ಕಾಪಾಡಿಕೊಳ್ಳುವುದು ಅವರ ಮೊದಲ ಆದ್ಯತೆಯಾಗಿತ್ತು. ಇದಕ್ಕೆ ʻಮಾಳ ಕಾಯುವುದುʼ ಎನ್ನುತ್ತಾರೆ. ಈಗಲೂ ಮನೆಗೆ ಬಂದ ನೆಂಟರು ರಾತ್ರಿ ಉಳಿದು ಬೆಳಗ್ಗೆ ಹೊರಟರೆ ʻನೀನೆಂಥ ಮಾಳ ಕಾಯಲು ಬಂದಿರುವುದೇ?ʼ ಎಂದು ತಮಾಶೆ ಮಾಡುತ್ತಾರೆ.

ಈಗೀಗ ನಗರ ಪ್ರದೇಶಕ್ಕೂ ಚಿರತೆ, ಆನೆ ಮುಂತಾದ ಕಾಡುಪ್ರಾಣಿಗಳು ಬರುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿಯೂ ನಗರದ ಹೊರವಲಯದಲ್ಲಿರುವ ಗುಂಪುಮನೆಗಳು ಮತ್ತು    ಕಂಪನಿಗಳ ಸುತ್ತಮುತ್ತಲ ಪ್ರದೇಶಗಳಿಗೆ ಕಾಡು ಪ್ರಾಣಿಗಳು ಬರುತ್ತಿವೆ, ದಾಂಧಲೆ ಮಾಡುವುದೂ ಇದೆ. ಸಾಕಿದ ನಾಯಿಗಳನ್ನು, ಕಾವಲು ನಾಯಿಗಳನ್ನು ಹೊತ್ತೊಯ್ಯುವುದಿದೆ. ಸಣ್ಣಪುಟ್ಟ ಪಟ್ಟಣ ಪ್ರದೇಶಗಳಷ್ಟೇ ಅಲ್ಲ, ಬೆಂಗಳೂರಿನಂತಹ ಮಹಾನಗರದಲ್ಲಿಯೂ ಇಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಇತ್ತೀಚೆಗೆ ತಿರುಮಲ ದೇಗುಲಕ್ಕೆ ಹೋಗುತ್ತಿರುವ ಯಾತ್ರಿಕರ ಮಗುವೊಂದನ್ನು ಚಿರತೆಯೊಂದು ಹೊತ್ತೊಯ್ದು ತಿಂದುಹಾಕಿರುವ ವಿಷಯವನ್ನು ತಿಳಿದು ನಾವೆಲ್ಲ ಬೆಚ್ಚಿಬಿದ್ದಿದ್ದೇವೆ. ಪ್ರಾಣಿಗಳು ಆಹಾರವನ್ನು ಅರಸಿ ಹೀಗೆ ಬರುತ್ತಿವೆ ಎನ್ನುವುದಕ್ಕೆ ಇದು ಉದಾಹರಣೆ. ಸಣ್ಣಪುಟ್ಟ ಊರುಗಳ ಸಮೀಪವೂ ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಈಗಿನ ಮಾಧ್ಯಮಗಳಂತೂ ನಡೆಯಬಾರದ್ದು ನಡೆಯಿತು ಎನ್ನುವಂತೆ ಇಡೀದಿನ ಅದದೇ ಸುದ್ದಿಯನ್ನು ಬಿತ್ತರಿಸುತ್ತವೆ. ಇದರಿಂದಾಗಿ ಮನುಷ್ಯನ ಹೆದರಿಕೆ ಇನ್ನಷ್ಟು ಹೆಚ್ಚುತ್ತಿದೆ. ಸರಕಾರಗಳು ಪ್ರಾಣಿಗಳ ಸಂಚಾರಕ್ಕೆ ತಡೆಯೊಡ್ಡುವ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಅವುಗಳ ಚಲನವಲನಕ್ಕೆ ನಾವು ತಡೆಯಾಗಿದ್ದೇವೆ, ನಗರೀಕರಣವೇ ಇದಕ್ಕೆ ಕಾರಣ ಎಂದು ಬೆಚ್ಚಗೆ ಕುಳಿತು ಚರ್ಚೆಗಳಲ್ಲಿ ಹೇಳುತ್ತೇವೆ. ಇದನ್ನು ನಾವು ಪೂರ್ತಿಯಾಗಿ ಒಪ್ಪಿದ್ದಲ್ಲಿ ನಮ್ಮ ನಡವಳಿಕೆಗಳಲ್ಲಿ ಇದು ವ್ಯಕ್ತವಾಗಬೇಕಿತ್ತಲ್ಲವೇ?

ದನಗಳನ್ನು ದಿನವೆಲ್ಲ ಕಟ್ಟಿಹಾಕಲಾಗದು. ಅವನ್ನು ಮೇಯಲು ಬಿಟ್ಟಾಗ ಕಿರುಬನೋ, ಹುಲಿಯೋ ತಿಂದುಹಾಕುವುದು ಮಾಮೂಲು. ಆಗಾಗ ಮೇಯಲು ಬಿಟ್ಟ ದನಗಳು ಹುಲಿಯ ಬಾಯಿಗೆ ಹೋಗುವುದಿತ್ತು. ಶಾಲೆ ಮುಗಿಯುತ್ತಲೇ ಅವರ ಮನೆಯ ಕರುವನ್ನು ಕಿರುಬ ತಿಂದಿದೆ ಎಂದೋ ಇವರ ಮನೆಯ ಹಸು/ಎತ್ತು ಹುಲಿಬಾಯಿಗೆ ಬಿದ್ದಿದೆ ಎನ್ನುವ ಸುದ್ದಿಯನ್ನು ಕೇಳಿ ಅದನ್ನು ನೋಡುವ ಕುತೂಹಲದಿಂದ ಹೊರಡುತ್ತಿದ್ದೆವು.

ಈಗ ನಗರವಾಸಿಗಳಾಗಿರುವ ನಮ್ಮಲ್ಲಿ ಬಹಳ ಮಂದಿ ಹಳ್ಳಿಯಿಂದ ಬಂದವರೇ. ನಾವು ಚಿಕ್ಕವರಿರುವಾಗ ಕಿರುಬ, ಹುಲಿ, ಹಂದಿ, ಚಿರತೆ ಮುಂತಾದ ಪ್ರಾಣಿಗಳ ಹಾವಳಿಯನ್ನು ಕಂಡವರು, ಕೇಳಿಸಿಕೊಂಡವರು. ಅದರಿಂದ ಬಾಧಿತರಾಗಿ ಅವುಗಳ ಮಧ್ಯೆಯೇ ಬದುಕಿದವರು ನಮ್ಮ ಹಿರಿಯರು. ಮೂಲತಃ ಪ್ರಕೃತಿಯ ಕೂಸೇ ಆಗಿರುವ ಮನುಷ್ಯ ಇವತ್ತು ʻತಾನು ಬೇರೆ, ಎಲ್ಲರಿಗಿಂತ ತಾನು ಶ್ರೇಷ್ಠ ಜೀವಿʼ ಎಂದು ಯೋಚಿಸುತ್ತಿರುವುದು ಇದಕ್ಕೆ ಕಾರಣವೇ ಎನಿಸುತ್ತಿದೆ. ಈಗೀಗ ಮಾನವ ಪ್ರಾಣಿಗಳ ಸಂಘರ್ಷ ಎನ್ನುವ ಪದ ಆಗಾಗ ಕಿವಿಮೇಲೆ ಬೀಳುತ್ತಲೇ ಇರುತ್ತದೆ. ಹಾಗಾದರೆ ಪ್ರಾಣಿ, ಮನುಷ್ಯ ಸಂಬಂಧ ಹೊಸದೇ? ಎಲ್ಲ ಕಾಲಕ್ಕೂ ಎಲ್ಲವು ಸುಸೂತ್ರವಾಗಿಯೇ ಇತ್ತೇ? ನಾವು ಎಷ್ಟೊಂದು ಬಗೆಯಲ್ಲಿ ಪ್ರಾಣಿ, ಪಕ್ಷಿ, ಗಿಡ, ಮರಗಳೊಂದಿಗೆ ಬದುಕನ್ನು ಬೆಸೆದುಕೊಂಡು ಬದುಕುತ್ತಿಲ್ಲವೇ?
ಪ್ರಾಣಿ, ಪಕ್ಷಿಗಳನ್ನು ಸಾಕುವುದಷ್ಟೇ ಅಲ್ಲ, ಹಲವು ರೀತಿಯಲ್ಲಿ ಪೂಜಿಸುತ್ತಲೂ ಬಂದಿದ್ದೇವೆ. ನಮ್ಮ ಹಬ್ಬಗಳನ್ನು ಗಮನಿಸಿದರೆ ಕೆಲವು ಹಬ್ಬಗಳು ಪ್ರಾಣಿ ಮತ್ತು ಮನುಷ್ಯನ ಸಂಬಂಧಗಳನ್ನು ತೆರೆದಿಡುವ ರೀತಿಯಲ್ಲಿ ಕಾಣಿಸುತ್ತವೆ. ಮಲೆನಾಡು ಭಾಗಳಲ್ಲಿ ದೀಪಾವಳಿ ದನಗಳ ಹಬ್ಬ. ಈ ಹಬ್ಬದ ಆಚರಣೆಯಲ್ಲಿನ ಒಂದು ಅನನ್ಯವಾದ ಸಂಗತಿಯೆಂದರೆ ಅಂದು ಮಾಡುವ ಹುಲಿಯಪ್ಪನ ಪೂಜೆ. ಊರಿಗೊಂದು ಹುಲಿಯಪ್ಪನಕಟ್ಟೆ. ಬಲಿಪಾಡ್ಯಮಿ ದಿವಸ ಹುಲಿಯಪ್ಪನ ಪೂಜೆ ಮಾಡುವ ರೂಢಿಯಿದೆ. ಮೇಯಲುಬಿಟ್ಟ ದನಗಳನ್ನು ಹುಲಿ ತಿನ್ನಬಾರದೆಂದು ಕಲ್ಲಿನ ರೂಪದಲ್ಲಿರುವ ಹುಲಿಯನ್ನು ಪೂಜಿಸುವ ಸಂಪ್ರದಾಯ. ಈ ನಂಬಿಕೆ ಎಷ್ಟು ಗಾಢವಾಗಿದೆ ಎಂದರೆ, ನಮ್ಮೂರಲ್ಲಿ ಹಬ್ಬದ ದಿವಸ ಮೇಯಲು ಬಿಟ್ಟ ಗೋಪೂಜೆಯ ಹಸುವನ್ನು ಅಂದೇ ಹುಲಿಯೊಂದು ತಿಂದುಹಾಕಿತಂತೆ. ಹಾಗಾಗಿ ಅಂದಿನಿಂದ ನಮ್ಮೂರಲ್ಲಿ ಹುಲಿಯಪ್ಪನ ಪೂಜೆಯನ್ನು ಮಾಡುವ ಸಂಪ್ರದಾಯಕ್ಕೆ ಕೊನೆಯಾಯಿತು ಎನ್ನುತಾರೆ.
ನಾವು ಆರಾಧಿಸುವ ದೇವರ ವಾಹನಗಳೆಲ್ಲ ಪ್ರಾಣಿ, ಪಕ್ಷಿ, ಸರಿಸೃಪಗಳೇ. ಗಣಪತಿ ಮೂಷಿಕವಾಹನನಾದರೆ, ವಿಷ್ಣು ಗರುಡವಾಹನ. ಸರಸ್ವತಿಯನ್ನು ನವಿಲಿನ ಮೇಲೆ ಕೂರಿಸಿದ್ದೇವೆ. ದತ್ತಾತ್ರೇಯನ ವಾಹನ ನಾಯಿ. ಶನಿದೇವರಿಗಂತೂ ಹಾರಾಡಲು ಕಾಗೆಯೇ ಬೇಕು. ದೇವಿಯನ್ನು ಸಿಂಹವಾಹಿನಿ ಎಂದು ಕರೆಯುತ್ತೇವೆ. ನಾವು ಆರಾಧಿಸುವ ಗಣಪತಿಯ ಹೊಟ್ಟೆಯನ್ನು ಸುತ್ತಿರುವುದು ಹಾವೇ. ಶಿವನ ಕಂಠದಲ್ಲಿರುವುದು ಕೂಡ ಸರ್ಪವೇ. ವಿಷ್ಣುವಂತೂ ಶೇಷಶಾಹಿ. ಸಿಂಹವಾಹಿನಿಯಾದ ದೇವಿಯನ್ನು ಬಹಳ ಭಕ್ತಿ, ಶ್ರದ್ಧೆಗಳಿಂದ ಪೂಜಿಸುತ್ತೇವೆ. ಜೊತೆಗೆ ನಮ್ಮ ದಶಾವತಾರ ಕಲ್ಪನೆಯಲ್ಲಿ ಮೊದಲಿನ ಮೂರು ಅವತಾರಿಗಳು ಪ್ರಾಣಿ ರೂಪದವೇ. ಮತ್ಸ್ಯ, ಕೂರ್ಮ, ವರಾಹ ಎಂದು ವಿಷ್ಣವಿನ ಅವತಾರವನ್ನು ನಾವು ಒಪ್ಪಿ ಪೂಜಿಸುತ್ತೇವೆ. ಆದರೆ ವರಾಹವನ್ನು ಕಂಡರೆ ʻಥೂ ಹಂದಿʼ ಎಂದು ಅಸಹ್ಯಪಡುತ್ತೇವೆ. ಪ್ರಥಮಪೂಜೆ ಸಲ್ಲಿಸುವ ಗಣಪತಿಯ ಹಲವು ಹೆಸರುಗಳಲ್ಲಿ ಗಜಾನನ, ಕರಿವದನ, ದಂತಿಮುಖ ಎನ್ನುವ ಹೆಸರುಗಳು ಸೇರಿವೆ. ಅಂದರೆ ಅವನು ಆನೆಮುಖದವನು. ಆನೆ ಬಹಳ ಹಿಂದಿನಿಂದಲೂ ಸಾಕುಪ್ರಾಣಿ ಮತ್ತು ಕಾಡುಪ್ರಾಣಿ ಎರಡೂ ಹೌದು. ರಾಜ-ಮಹಾರಾಜರುಗಳಿಗೆ, ಮಠಮಾನ್ಯಗಳಿಗೆ ಆನೆ ಇರುವುದು ಒಂದು ಪ್ರತಿಷ್ಠೆಯ ಸಂಕೇತ. ಪ್ರಾಯಶಃ ಇದಕ್ಕಾಗಿಯೇ ʻಆನೆ ಇದ್ದರೂ ಸಾವಿರ, ಸತ್ತರೂ ಸಾವಿರʼ ಎನ್ನುವ ಮಾತಿದೆ. (ಈ ಕಾಲಕ್ಕೆ ಸಾವಿರದ ಬದಲು ಕನಿಷ್ಠ ಲಕ್ಷ ಅಂತಾದರೂ ಆಗಬೇಕು)
ಯಾರನ್ನಾದರೂ ಮಂಗ ಎಂದು ಬೈದರೆ ಸಿಟ್ಟು ಬರುತ್ತದೆ. ಆದರೆ ಅವನನ್ನು ದೈವವೆಂದು ಪೂಜಿಸುತ್ತೇವೆ. ನಮ್ಮಲ್ಲಿ ಬಹಳ ಜನ ಆಂಜನೇಯನ ಭಕ್ತರೇ. ಅಂಜನಾದ್ರಿ ಬೆಟ್ಟ ಇರುವುದು ನಮ್ಮೂರಿನಲ್ಲಿಯೇ ಎಂದು ಅವನ ಹುಟ್ಟೂರಿನ ಮೂಲವನ್ನು ತಮ್ಮ ಲೆಕ್ಕಕ್ಕೆ ಹಾಕಿಕೊಳ್ಳುವ ಮಂದಿಯೂ ಸಾಕಷ್ಟಿದ್ದಾರೆ. ಇತ್ತೀಚೆಗಂತೂ ಹನುಮಾನ್‌ ಚಾಲೀಸ್‌ ಎನ್ನುವುದು ಘರ್ಷಣೆಯ ಮೂಲವಾಗಿರುವುದನ್ನೂ ನಾವು ಕಂಡಾಗಿದೆ. ಜಯಂತಿ ಆಚರಣೆಯ ಸಂಭ್ರಮವೂ ಪ್ರಾರಂಭವಾಗಿದೆ.
ಹುಲಿ, ಸಿಂಹಗಳಂತೂ ಭಯಂಕರ ಹಿಂಸ್ರಪಶುಗಳು. ಈ ಪ್ರಾಣಿಗಳಿಗೆ ಹೆದರದಿರುವವರೇ ಇಲ್ಲ ಎನ್ನಬಹುದು. ಚಿರತೆಯೂ ಇದಕ್ಕೆ ಹೊರತಲ್ಲ. ಆದರೂ ಇವುಗಳ ಸಂತತಿ ಕ್ಷೀಣಿಸದಂತೆ, ಕಾಪಾಡುವ ಯೋಜನೆಗಳಿಗೆ ಆದ್ಯತೆ ಕೊಡಲಾಗಿದೆ. ನಮ್ಮ ದೇಶದಲ್ಲಿ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ತಿಳಿದು ಖುಶಿಪಡುತ್ತೇವೆ. ಹುಲಿ-ಸಿಂಹಧಾಮಗಳು ನಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿರುತ್ತವೆ. ಇವೆಲ್ಲವೂ ಸರಿ, ಆದರೆ ಈ ಪ್ರಾಣಿಗಳು ಮಾನವ ವಸತಿಯ ಸಂಮೀಪ ಬಂದರೆ ಸಾಕು ಹೆದರಿ ಕಂಗಾಲಾಗುತ್ತೇವೆ. ಕೆಲವೊಮ್ಮೆ ನಾವು ಓಡಾಡುವ ಪರಿಸರದಲ್ಲಿ ಕಾಣಿಸಿಕೊಂಡವು ಎಂದರೆ ಅರಣ್ಯ ಇಲಾಖೆಯವರನ್ನು ಬೈಯ್ಯುವುದರಲ್ಲಿ ಸ್ಪರ್ಧೆ ಏರ್ಪಟ್ಟಿರುತ್ತದೆ.
ʻಕಲ್ಲನಾಗರ ಕಂಡರೆ ಹಾಲನು ಎರೆ ಎಂಬರಯ್ಯಾ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯʼ ಎಂದು ಬಸವಣ್ಣನವರು ಹೇಳಿದ್ದರೂ ನಾವು ನಾಗರಪಂಚಮಿಯಲ್ಲಿ, ಕೆಲವೆಡೆ ಸುಬ್ರಹ್ಮಣ್ಯ ಷಷ್ಟಿಯಂದು ಹುತ್ತಕ್ಕೆ ಹಾಲನೆರೆದು ನಾಗಪೂಜೆ ಮಾಡುತ್ತೇವೆ. ನಾನು ಚಿಕ್ಕವಳಿರುವಾಗ ಪ್ರತಿವರ್ಷ ನಾಗರಪಂಚಮಿಯಂದು ನಮ್ಮೂರಿನಲ್ಲಿ ಎಲ್ಲರ ಮನೆಯವರೂ ನಾಗರಕಟ್ಟೆಗೆ ಹೋಗಿ ಪೂಜೆ ಮಾಡುತ್ತಿದ್ದರು. ಉಳಿದ ದಿನಗಳಲ್ಲಿ ನಾಗರಕಟ್ಟೆ ನಾವು ಆಡುವ ಜಾಗ. ಮನೆಯ ಹತ್ತಿರ ಅಥವಾ ನಾವು ಓಡಾಡುವ ಜಾಗಗಳಲ್ಲಿ ಹಾವನ್ನು ಕಾಣುವುದು ಮಾಮೂಲು. ಯಾರೂ ಹೆದರಿ ಮನೆಯಲ್ಲಿ ಕೂರುತ್ತಿರಲಿಲ್ಲ. ಕಂಡ ಹಾವನ್ನೆಲ್ಲ ಕೊಲ್ಲುತ್ತಿರಲೂ ಇಲ್ಲ. ಮನೆಯ ಸಮೀಪದಲ್ಲಿ, ಮಕ್ಕಳು ಆಡುವ ಜಾಗದಲ್ಲಿ ಪದೇಪದೇ ಕಾಣಿಸಿಕೊಂಡರೆ ಮಾತ್ರ ಕೆಲವೊಮ್ಮೆ ಹೊಡೆದು ಕೊಲ್ಲುವುದಿತ್ತು. ನಮಗೆ ಉಪಟಳ ಕೊಟ್ಟಾಗ ನಮ್ಮ ರಕ್ಷಣೆಗಾಗಿ ಅವನ್ನು ನಿವಾರಿಸಿಕೊಳ್ಳುತ್ತಿದ್ದೆವು. ಅನೇಕ ಊರುಗಳಲ್ಲಿ ನಾಗಬನ ಎನ್ನುವ ಒಂದು ನಿರ್ದಿಷ್ಟ ಕಾಡು ಇರುತ್ತದೆ. ಅಲ್ಲಿನ ಮರಗಳನ್ನು ಕಡಿಯುವಂತಿಲ್ಲ. ಹೀಗೆ ಅದನ್ನು ರಕ್ಷಿಸುವ ಪರಿಪಾಠವಿದೆ.

ನಾಗರಹಾವನ್ನು ಕುರಿತ ಪಂಜೆ ಮಂಗೇಶರಾಯರ ʻನಾಗರಹಾವೇ ಹಾವೊಳು ಹೂವೇʼ ಎನ್ನುವ ಪದ್ಯವನ್ನು ಶಾಲೆಯಲ್ಲಿ ಓದದ ಮಕ್ಕಳೇ ಇಲ್ಲ ಎನ್ನಬಹುದು. ಉತ್ತರ ಕರ್ನಾಟಕದ ಕಡೆ ನಾಗರಪಂಚಮಿ ಸಂಭ್ರಮದ ಹಬ್ಬ. ಉಳಿದ ಕಡೆಯೂ ಇದರ ಆಚರಣೆ ಇದೆ. ನಾವು ಶಾಲೆಯ ಪುಸ್ತಕದಲ್ಲಿ ʻನಾಗರ ಪಂಚಮಿ ನಾಡಹೆಣ್ಣಿಗೆ ಹಬ್ಬ ನಾಗಪ್ಪಗ್ಹಾಲ ಎರೆಯೋಣ ನನಗೆಳತಿ ನಾಗರ್ಹೆಡೆಯ ಹಂಗೆ ಆಡೋಣʼ ಎಂದು ಹಾಡಿ ಖುಶಿಪಟ್ಟಿದ್ದೆವು. ಮೂರನೆಯ ತರಗತಿಯಲ್ಲಿ ʻನಾಗರಪಂಚಮಿ ನಾಡಿಗೆ ದೊಡ್ಡದು ನಾರಿಯರೆಲ್ಲರು ನಲಿದರು ನಾಗರಪಂಚಮಿ ಹಾಡನು ಹಾಡಿ ಕೊಟ್ಟರು ಅವರಿಗೆ ಹುರುಪನ್ನುʼ ಎಂದು ಎಲ್ಲರೂ ಸೇರಿ ಒಟ್ಟಾಗಿ ಒಂದೇ ರಾಗದಲ್ಲಿ ಹಾಡಿ ಕುಣಿದದ್ದಿದೆ.

ನಾವು ಪ್ರಾಣಿಗಳನ್ನು ದೂರದಿಂದ ಕಂಡು ಖುಶಿಪಡುವಷ್ಟಕ್ಕೆ ಸೀಮಿತಗೊಂಡಿದ್ದೇವೆ. ಹಾಗಾಗಿ, ಪ್ರಾಣಿಸಂಗ್ರಹಾಲಯದಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅವುಗಳನ್ನು ನೋಡಲು ಕಾತರಿಸುತ್ತೇವೆ. ಈ ಸ್ಥಳಗಳಲ್ಲಿ ಯಾವುದೇ ಅಪಾಯವಾಗುವ ಸಂಭವ ತೀರ ಕಡಿಮೆ. ಅಂದರೆ ಪ್ರಾಣಿಗಳನ್ನು ನೋಡಿ ಸಂತೋಷಗೊಳ್ಳುವ ಮನುಷ್ಯನ ಮೂಲಗುಣಕ್ಕೆ ಇವೆಲ್ಲ ಸಾಕ್ಷಿಯೇ?