Advertisement
ನೇತ್ರಾವತಿಯಲ್ಲಿ ಹರಿದು ಹೋದ ನೀರೆಷ್ಟೋ…

ನೇತ್ರಾವತಿಯಲ್ಲಿ ಹರಿದು ಹೋದ ನೀರೆಷ್ಟೋ…

ಏನೇನೋ ಚಿಂತಿಸುತ್ತ ಇದಿನಬ್ಬ ಕುಳಿತಿದ್ದಾನೆ; ಅಷ್ಟರಲ್ಲೇ ದೂರದಲ್ಲಿ ಒಂದು ಸಣ್ಣ ತಂಡ ನಡೆದು ಬರುತ್ತಿದೆ. ಇದಿನಬ್ಬನಿಗೆ ಮತ್ತೆ ಬದುಕುವ ಆಸೆ ಚಿಗುರಿತು, ಅಪರಿಚಿತರಾದರೇನು? ಮನುಷ್ಯರನ್ನು ಕಂಡೆನಲ್ಲಾ ಅನ್ನುವ ಖುಷಿ. ಹತ್ತಿರವಾದಂತೆ ಮುಖ ಚಹರೆ ಸ್ಪಷ್ಟವಾಗತೊಡಗಿತು. ಹೌದು, ಯೂಸುಫ್ ಮತ್ತು ಇತರ ಸಹ ಯಾತ್ರಿಕರು. ದೂರದಲ್ಲಿ ಬಂದವರಿಗೂ ಪರಿಚಯ ಸಿಕ್ಕಿರಬೇಕು. ಎಲ್ಲರೂ ಇದಿನಬ್ಬರ ಕಡೆಗೆ ಓಡಿ ಬಂದರು.  ಉಳಿದವರು ಎಲ್ಲಿ ಹೋದರೋ ಗೊತ್ತಾಗಲಿಲ್ಲ. ಮನೆಮುಟ್ಟುವ ಆಸೆಯೊಂದು ಮತ್ತೆ ಚಿಗುರಿತು. ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಿರುಕಾದಂಬರಿಯ ಹನ್ನೆರಡನೆಯ ಕಂತು.

ಮೂರು ದಿನಗಳ ನಂತರ, ಒಂದು ಮುಂಜಾನೆ. ಶಾಂತವಾದ ತಂಗಾಳಿ ಬೀಸುವ ಕಡಲ ತೀರ. ಒಂದು ಕಡೆ ಉಟ್ಟ ಬಟ್ಟೆಯೆಲ್ಲ ಚಿಂದಿಯಾಗಿ ತಲೆಗೂದಲು ಕೆದರಿ ಮೈಮೇಲೆಲ್ಲ ಮರಳು ಮೆತ್ತಿಕೊಂಡ ದೇಹವೊಂದು ನಿಶ್ಚಲವಾಗಿ ಬಿದ್ದಿದೆ. ಕೈಯಲ್ಲಿ ಒಂದು ಪೆಟ್ಟಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ನಿರ್ಜನ ತೀರ ಪ್ರದೇಶವಾದ್ದರಿಂದ ಯಾರೂ ನೋಡದೆ ಹಾಗೆಯೇ ಇದೆ. ಕೊಂಚ ಹೊತ್ತಾದಾಗ ಆ ದೇಹ ಸಣ್ಣಗೆ ಕಂಪಿಸುತ್ತಿದೆ. ಕೈಕಾಲುಗಳಲ್ಲಿ ಜೀವ ಚೈತನ್ಯ ಮಿಸುಕಾಡಿದಂತೆ ಮಂದ ಮಂದವಾಗಿ ಅಲುಗಾಡುತ್ತಿದೆ. ಆ ನಿರ್ಜನ ಸಮುದ್ರ ತೀರದಲ್ಲಿ ಅನಾಥವಾಗಿ ಬಿದ್ದಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ಇದಿನಬ್ಬ. ಇದಿನಬ್ಬನಿಗೆ ತಲೆಯೆಲ್ಲಾ ಗಿರ ಗಿರನೆ ಸುತ್ತಿದಂತೆ, ಒಮ್ಮೆಲೆ ಕೆಮ್ಮಿನ ಜೊತೆ ಗಂಟಲಿನಿಂದ ಉಪ್ಪು ನೀರು ಹೊರ ಬರುವಾಗ ತಟ್ಟಿ ಎಚ್ಚರಿಸಿದಂತೆ ಕೆಮ್ಮುತ್ತ ಮೆಲ್ಲಗೆ ಎದ್ದು ಕುಳಿತ. ಅರೆ, ಇದೇನು ತಾನಿನ್ನೂ ಬದುಕಿದ್ದೇನೆ. ಹತ್ತಿರದಲ್ಲೇ ಕಬ್ಬಿಣದ ಪೆಟ್ಟಿಗೆಯೂ ಅನಾಥವಾಗಿ ಬಿದ್ದಿದೆ.

ಇದಿನಬ್ಬ ಮನಸ್ಸಿನಲ್ಲೇ ದೇವರನ್ನು ಸ್ತುತಿಸಿದ. ಚಂಡಮಾರುತದ ಅಬ್ಬರಕ್ಕೆ ಬಲಿಯಾಗದೆ ಕಡಲಿನಿಂದಲೂ ತನ್ನನ್ನು ಸುರಕ್ಷಿತವಾಗಿ ತೀರಕ್ಕೆ ತಂದು ಮತ್ತೊಮ್ಮೆ ಜೀವಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸೃಷ್ಟಿಕರ್ತನನ್ನು ನೆನೆದು ಬಿಕ್ಕಳಿಸಿದ. ಆದರೆ ತನ್ನ ಜತೆಗಿದ್ದವರ ಕುರಿತು ನೆನೆದಾಗ ಖಿನ್ನನಾದ. ಊರಿಗೆ ಹೋದಾಗ ತನ್ನ ಸಹಾಯಕ್ಕೆ ನಿಲ್ಲುವೆನೆಂದು ಮಾತು ಕೊಟ್ಟಿದ್ದ ಯೂಸುಫ್ ರನ್ನು ನೆನೆದು ಇದಿನಬ್ಬನಿಗೆ ಅತೀವ ದುಃಖವಾಯಿತು. ಈಗ ಯೂಸುಫ್ ಮತ್ತು ಜೊತೆಗಿದ್ದವರು ಎಲ್ಲಿರಬಹುದು? ಅವರು ನನ್ನಂತೆಯೇ ಒಬ್ಬೊಬ್ಬರಾಗಿ ಯಾವುದೋ ತೀರದಲ್ಲಿ ಬಿದ್ದಿರಬಹುದೇ? ಕೈ ಕಾಲುಗಳಲ್ಲಿ ವಿಪರೀತ ನೋವು, ಕಣ್ಣು ಉರಿತ. ಅಪಾರವಾದ ಹಸಿವು. ಇದಿನಬ್ಬ ನಡುಗುತ್ತ ಮೈಯಲ್ಲಿದ್ದ ಮರಳನ್ನು ತಟ್ಟಿ ಕೊಂಡು ಎದ್ದೇಳುವಾಗ ನೋಡುವುದೇನು. ಎದುರಲ್ಲಿ ವಿಶಾಲವಾಗಿರುವ ಹಸಿರು ಪ್ರಪಂಚ. ಸಮುದ್ರ ದಡವನ್ನು ಅಲಂಕರಿಸಿ ಬಾಗಿ ನಿಂತ ತೆಂಗಿನ ಮರಗಳು. ಒಂದೊಂದು ತೆಂಗೂ ಒಂದೊಂದು ಕಡೆಗೆ ವಾಲಿ ನಿಂತು ಇಜ್ಜಡೆಯ ಬಾಲೆಯರಂತೆ ಪ್ರಕೃತಿ ರಮಣೀಯತೆಗೆ ಇನ್ನಷ್ಟು ಮೆರುಗು ನೀಡುತ್ತಿತ್ತು.

ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅಲ್ಲೇ ಬಾಗಿ ನಿಂತಿದ್ದ ತೆಂಗಿನಿಂದ ಒಂದಷ್ಟು ಎಳನೀರುಗಳನ್ನು ಕಿತ್ತು ಕಲ್ಲಿನಿಂದ ಜಜ್ಜಿ ಒಂದೇ ಗುಟುಕಿಗೆ ಕುಡಿದು ಬಿಟ್ಟ. ಎರಡೂವರೆ ದಿನ ಏನೂ ಹೊಟ್ಟೆಗಿಲ್ಲದವನ ಪಾಡು ಹೇಳಬೇಕೇ? ಜೀವ ಇದೆ. ಆದರೆ ತಾನು ಬಂದು ಸೇರಿದ ಸ್ಥಳ ಯಾವುದು, ಯಾವ ಊರು, ಬಹುಶಃ ತನ್ನ ಊರೇ ಆಗಿರಬಹುದೇ? ಇತ್ಯಾದಿ ಪ್ರಶ್ನೆಗಳನ್ನು ಹೊತ್ತು ಇದಿನಬ್ಬ ತೀರದಲ್ಲಿ ನಡೆದ. ಸೂರ್ಯನ ಬಿಸಿಲು ಸಾಧಾರಣವಾಗಿತ್ತು. ಈಗಲೋ ಆಗಲೋ ಮಳೆ ಬೀಳುವ ಲಕ್ಷಣವಿತ್ತು. ಕೊಂಚ ದೂರ ನಡೆದು ಒಂದು ಆಯಕಟ್ಟಿನ ಸ್ಥಳದಲ್ಲಿ ಇದಿನಬ್ಬ ಕುಳಿತುಕೊಂಡ. ತೆಂಗಿನ ಮರಗಳ ಹಿಂದೆ ದಟ್ಟವಾದ ಕಾಡು. ಕಾಡನ್ನು ಭೇದಿಸಿ ಒಳನುಗ್ಗಲು ಇದಿನಬ್ಬನಿಗೆ ಧೈರ್ಯ ಸಾಕಾಗಲಿಲ್ಲ. ಇನ್ನು ಅದೆಷ್ಟು ಭಯಾನಕವಾಗಿರಬಹುದೋ ಏನೋ.

ಹಸಿವಿನಿಂದ ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಅಲ್ಲೇ ಬಾಗಿ ನಿಂತಿದ್ದ ತೆಂಗಿನಿಂದ ಒಂದಷ್ಟು ಎಳನೀರುಗಳನ್ನು ಕಿತ್ತು ಕಲ್ಲಿನಿಂದ ಜಜ್ಜಿ ಒಂದೇ ಗುಟುಕಿಗೆ ಕುಡಿದು ಬಿಟ್ಟ. ಎರಡೂವರೆ ದಿನ ಏನೂ ಹೊಟ್ಟೆಗಿಲ್ಲದವನ ಪಾಡು ಹೇಳಬೇಕೇ?

ಏನೇನೋ ಚಿಂತಿಸುತ್ತ ಇದಿನಬ್ಬ ಕುಳಿತಿದ್ದಾನೆ; ಅಷ್ಟರಲ್ಲೇ ದೂರದಲ್ಲಿ ಒಂದು ಸಣ್ಣ ತಂಡ ನಡೆದು ಬರುತ್ತಿದೆ. ಇದಿನಬ್ಬನಿಗೆ ಮತ್ತೆ ಬದುಕುವ ಆಸೆ ಚಿಗುರಿತು, ಅಪರಿಚಿತರಾದರೇನು? ಮನುಷ್ಯರನ್ನು ಕಂಡೆನಲ್ಲಾ ಅನ್ನುವ ಖುಷಿ. ಹತ್ತಿರವಾದಂತೆ ಮುಖ ಚಹರೆ ಸ್ಪಷ್ಟವಾಗತೊಡಗಿತು. ಹೌದು, ಯೂಸುಫ್ ಮತ್ತು ಇತರ ಸಹ ಯಾತ್ರಿಕರು. ದೂರದಲ್ಲಿ ಬಂದವರಿಗೂ ಪರಿಚಯ ಸಿಕ್ಕಿರಬೇಕು. ಎಲ್ಲರೂ ಇದಿನಬ್ಬರ ಕಡೆಗೆ ಓಡಿ ಬಂದರು. ಯೂಸುಫ್ ಓಡಿ ಬಂದು ಇದಿನಬ್ಬನನ್ನು ಆಲಂಗಿಸಿಕೊಂಡರು. ಇಬ್ಬರ ಕಣ್ಣುಗಳು ಹನಿಯುತ್ತಿದ್ದವು. ಮೊನ್ನೆ ರಾತ್ರಿ ಮರದ ತುಂಡೊಂದು ಸಿಕ್ಕಿ ನಾಲ್ಕೈದು ಜನ ಒಟ್ಟಾಗಿ ಈಜಿ ದಡ ಸೇರಿದರೆಂದೂ ಉಳಿದವರಲ್ಲಿ ಕೆಲವರು ಇಲ್ಲಿ ತಲುಪಿದರೆಂದೂ, ಹೆಚ್ಚಿನವರು ನೀರು ಪಾಲಾದರೆಂದೂ ಅವರು ಹೇಳಿದರು. “ಅಂತೂ ನೀನು ಬದುಕಿ ಬರುವುದು, ನಮಗೆ ಧೈರ್ಯವಿರಲಿಲ್ಲ” ವೆನ್ನುವಾಗ ಇದಿನಬ್ಬ ದೇವನನ್ನು ನೆನೆದ. ಅವರೆಲ್ಲರೂ ಮಡಗಾಸ್ಕರ್ ದ್ವೀಪಕ್ಕೆ ತಲುಪಿದ್ದರು.

ಕಥೆ ಕೇಳುತ್ತಿದ್ದ ಚಿಕ್ಕಪ್ಪ ಅಷ್ಟರಲ್ಲಿ ಎಚ್ಚೆತ್ತು, ” ಮಡಗಾಸ್ಕರ್.. ಮಡಗಾಸ್ಕರ್ ಅಂದರೆ ಆಫ್ರಿಕಾದಿಂದ ೧೭೦೦ ಕಿ ಮೀ ದೂರ! ಮಡಗಾಸ್ಕರ್ ಎಂದರೆ ಪ್ರಕೃತಿ ರಮಣೀಯ ನಾಡು. ವಿವಿಧ ಜಾತಿಯ, ವಿಶಿಷ್ಟ ಜಾತಿಯ ಪ್ರಾಣಿ ಸಂಕುಲಗಳು ಅಲ್ಲಿನ ವಿಶೇಷತೆ” ಎಂದರು.
ಅಜ್ಜ ನಸು ನಗುತ್ತಾ ” ಹೌದಾ” ಎನ್ನುತ್ತಾ ಕಥೆ ಮತ್ತೆ ಮುಂದುವರಿಸಿದರು.

ಸುಮಾರು ಹತ್ತು ಹದಿನೈದು ಮಂದಿ ಹಡಗು ಮುಳುಗಿದಲ್ಲಿಂದ ಈಜಿಕೊಂಡು, ಮರದ ದಿಮ್ಮಿಯಲ್ಲಿ ತೇಲಿಕೊಂಡು ದಡ ಸೇರಿದ್ದರು. ಅವರು ತಲುಪಿದ ಪ್ರದೇಶ ಕಗ್ಗಾಡು. ಮನುಷ್ಯನ ಹಸ್ತಕ್ಷೇಪ ಅಷ್ಟಾಗಿ ಇಲ್ಲದಿದ್ದರೂ ಕಾಡು ಮನುಷ್ಯರು ವಾಸಿಸುತ್ತಿದ್ದರು. ಹಡಗು ಅಪಘಾತವಾಗಿ ನಾಲ್ಕನೇ ದಿನವದು. ಎಲ್ಲರೂ ಪಟ್ಟಣ ಹುಡುಕುತ್ತ ನಡೆಯೋಣವೆಂದು ತೀರ್ಮಾನಿಸಿ ಕಾಡಿನ ದಾರಿಯಲ್ಲಿ ನಡೆಯತೊಡಗಿದರು. ತುಂಬಾ ಹೊತ್ತು ನಡೆದರೂ ಅಗಮ್ಯ ಕಾಡು ಬೆಟ್ಟಗಳೇ ಬಿಟ್ಟರೆ ಬೇರೇನೂ ಕಾಣುವಂತಿರಲಿಲ್ಲ. ಆ ದಿನ ರಾತ್ರಿಯಾಯಿತು. ಕಲ್ಲು ಕಲ್ಲುಗಳನ್ನು ತೀಡಿ, ಒಂದು ಮರದಡಿಯಲ್ಲಿ ಸುತ್ತಲೂ ಸ್ವಲ್ಪ ತರೆಗೆಲೆಗಳನ್ನುಜ್ಜಿ ಬೆಂಕಿ ಹಾಕಿ ಎಲ್ಲರೂ ಮಲಗಿದರು. ರಾತ್ರಿಯಲ್ಲಿ ಹೆಜ್ಜೆ ಸಪ್ಪಳ, ಪರ ಪರ ಸದ್ದು ಕೇಳುತ್ತಿದ್ದವು. ಬೆಂಕಿ ಹಾಕಿದ್ದರಿಂದ ಯಾರೂ ಹೆದರಲೂ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅವರಿಗೆಲ್ಲಾ, ಈಜಿದ ಸುಸ್ತು ಬಹುವಾಗಿ ಕಾಡಿ ಗಡದ್ದಾಗಿ ನಿದ್ದೆ ಹೋಗಿದ್ದರು. ಬೆಳಗ್ಗೆ ಸೂರ್ಯನ ಕಿರಣಗಳು ಬೀಳುತ್ತಿದ್ದಂತೆ ಹಕ್ಕಿಗಳ ಕಲರವ ಕೇಳಿ ಎಲ್ಲರೂ ಎಚ್ಚರಗೊಂಡರು.

ತಿಳಿ ನೀರ ಝರಿಯಲ್ಲಿ ಕೈ ಕಾಲು ತೊಳೆದುಕೊಂಡರು. ಅಚಾನಕ್ಕಾಗಿ ಗುಂಪಿನಲ್ಲಿದ್ದ ಯಾರೋ ಒಬ್ಬ ” ಡೇವಿಡ್ ಕಾಣುತ್ತಿಲ್ಲ” ಎಂದು ಜೋರಾಗಿ ಕಿರುಚಿದ. ಒಮ್ಮೆ ಎಲ್ಲರಿಗೂ ಭಯ ಹತ್ತಿತ್ತು. “ಇಲ್ಲೇ ಎಲ್ಲಾದರೂ ಹೋಗಿರಬಹುದು ಹುಡುಕಿ” ಎಂದು ಮತ್ತೊಬ್ಬ ಧೈರ್ಯ ತುಂಬಿದ. ಯಾರಿಗೂ ಯಾರನ್ನೂ ಹುಡುಕುವ ವ್ಯವಧಾನವಿರಲಿಲ್ಲ. ಅವರಿಗೆ ಅವರವರ ರಕ್ಷಣೆಯೇ ಮುಖ್ಯ ಅನ್ನುವಷ್ಟು ಕಾಡಿಗೆ ಕಾಡೇ ಹೆದರಿಕೆ ಹುಟ್ಟಿಸುತ್ತಿತ್ತು. ಎಲ್ಲರೂ ಜೊತೆಯಾಗಿ ಹೋಗುವುದೆಂದು ತೀರ್ಮಾನಿಸಿದರು. ಸರಿ, ಒಬ್ಬರೊಬ್ಬರನ್ನು ಹಿಂಬಾಲಿಸುತ್ತಾ ನಡೆಯುತ್ತಲೇ ಇದ್ದರು. ಆ ಕೂಡಲೇ ಗುಂಪಿನಲ್ಲೊಬ್ಬ ಜೋರಾಗಿ ಕಿರುಚಿಕೊಂಡ. ” ಅಗೋ ಅಲ್ನೋಡಿ” . ಎಲ್ಲರ ಕಣ್ಣು ಅತ್ತ ಹರಿಯಿತು. ಅರ್ಧ ಕತ್ತು ಕೊಯ್ದು ಮಾಂಸ ಬಾಚಿ ಅರ್ಧಕ್ಕರ್ಧ ಸಿಗಿದ ಮನುಷ್ಯಾಕೃತಿಯೊಂದು ಮರದಲ್ಲಿ ಕಟ್ಟಿ ಹಾಕಿದಂತೆ ನೇತಾಡುತ್ತಿತ್ತು. ಹತ್ತಿರದಲ್ಲೇ ಬೆಂಕಿಯಲ್ಲಿ ಮಾಂಸ ಸುಟ್ಟು ತಿಂದ ಕುರುಹುಗಳೂ ವೇದ್ಯವಾಗುತ್ತಿತ್ತು. ಮರದಲ್ಲಿ ನೇತು ಹಾಕಿದ್ದು ಡೇವಿಡ್ ನ ಕಳೇಬರವೆಂದು ಅವರೆಲ್ಲರಿಗೂ ಖಚಿತವಾಗಿತ್ತು. ಆ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಡೇವಿಡ್ ನನ್ನು ಸ್ಥಳೀಯ ಕಾಡು ಮನುಷ್ಯರು ಕೊಂದು ತಿಂದು ಹಾಕಿದ್ದರು.

ಆತನೆನ್ನುವುದಕ್ಕೆ ಇಂಬು ನೀಡಿದ್ದು ಮರದ ಬುಡದಲ್ಲಿ ರಕ್ತಸಿಕ್ತವಾಗಿ ಬಿದ್ದ ಆತ ಹೊದ್ದಿದ್ದ ಶಾಲು. ಎಲ್ಲರನ್ನು ಭಯ ಇನ್ನಷ್ಟು ಇರಿಯುತ್ತಿತ್ತು. ಪ್ರತಿಯೊಬ್ಬರೂ ಯಾರದಾದರೂ ಸಲಹೆಗೆ ಕಾಯುತ್ತಿದ್ದರು. ಅವರ್ಯಾರೂ ಸ್ವಂತ ತೀರ್ಮಾನಗಳನ್ನು ತೆಗೆಯದಷ್ಟು ಅಬಲರಾಗಿ ಬಿಟ್ಟಿದ್ದರು. ಎಲ್ಲರೂ ಶೋಕದಿಂದ ಸ್ವಲ್ಪ ದೂರ ಮೌನವಾಗಿಯೇ ನಡೆದರು.

ಆ ಸಮಯದಲ್ಲಿ ಏನೋ ಹೊಳೆದವನಂತೆ ಇದಿನಬ್ಬ , “ನಾವೆಲ್ಲರೂ ಈ ಕಾಣುವ ಬೆಟ್ಟದ ತುದಿಯಿಂದ ನಿಂತು ನೋಡೋಣ. ದೂರದಲ್ಲೆಲ್ಲಾದರೂ ಮನುಷ್ಯರು ಜೀವಿಸುವ ಪಟ್ಟಣ ಕಾಣ ಬಹುದು”ಎಂದು ಸಲಹೆ ಕೊಟ್ಟ. ಎಲ್ಲರಿಗೂ ಅದು ಸರಿಯೆನ್ನಿಸಿ, ಅಕ್ಷರಶಃ ಪಾಲಿಸಲು ಸಿದ್ಧರಾದರು. ಅದಕ್ಕೂ ಹೆಚ್ಚಾಗಿ ಭಯ ಅವರನ್ನು ಒಪ್ಪುವಂತೆ ಮಾಡಿತು. ಒಬ್ಬರ ಹಿಂದೆ ಒಬ್ಬರಂತೆ ಬೆಟ್ಟ ಹತ್ತತೊಡಗಿದರು. ಪುಣ್ಯಕ್ಕೆ ಅರ್ಧ ಹತ್ತುತ್ತಿದ್ದಂತೆ ಸಣ್ಣ ಪಟ್ಟಣವೊಂದು ಬಲಭಾಗದ ತುದಿಯಲ್ಲಿ ದೃಗ್ಗೋಚರವಾಯಿತು. ಖುಷಿಯಿಂದ ಎಲ್ಲರೂ ಜೋರಾಗಿ ” ಹೋ…” ಎಂದು ಕೂಗಿಕೊಂಡರು. ಅಷ್ಟರಲ್ಲೇ ಇದಿನಬ್ಬ ” ಯಾರು ಖುಷಿ ಪಡುವಷ್ಟು ಸುರಕ್ಷಿತರಾಗಿಲ್ಲ. ಕತ್ತಲಾಗುವ ಮೊದಲು ಅಲ್ಲಿ ಸೇರಿಕೊಂಡರೆ ನಮ್ಮ ಯಾತ್ರೆ ಕ್ಷೇಮ” ಎಂಬ ಎಚ್ಚರಿಕೆ ರವಾನಿಸಿ ಬಿಟ್ಟ. ಪ್ರತಿಯೊಬ್ಬರೂ ತಲೆಯಲ್ಲಾಡಿಸಿದರು. ಎಲ್ಲರೂ ಅತ್ತ ಕಡೆ ವೇಗವಾಗಿ ಹೆಜ್ಜೆ ಹಾಕ ತೊಡಗಿದರು. ದಿಣ್ಣೆ, ತೊರೆ, ಬೆಟ್ಟಗಳನ್ನು ದಾಟಿ ಸಂಜೆ ಯಾಗುವಷ್ಟರಲ್ಲಿ ಎಲ್ಲರೂ ಪಟ್ಟಣ ತಲುಪಿದರು.

ಅದೊಂದು ಸಣ್ಣ ಪಟ್ಟಣ. ಅಲ್ಲೂ ಕರಿಯರದ್ದೇ ಸಾಮ್ರಾಜ್ಯ. ಜನರ ಮೈ ಬಣ್ಣ ಕಪ್ಪು ಅಂದರೆ ಆಫ್ರಿಕಾದ ಜನರಂತೆಯೇ ಇದ್ದರು. ಅವರು ರೆಡ್ ಇಂಡಿಯನ್ಗಳಂತೆಯೇ ಇರುವವರು. ಬಹುಶಃ ಅವರ ತಲೆಮಾರು ಆಫ್ರಿಕಾ ಮತ್ತು ಇಂಡಿಯನ್ಗಳ ರಕ್ತಗಳ ಸಂಚಯನ.

ಕೂಲಿಕಾರರ ಗುಂಪೇ ಆ ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ನಾಗರಿಕರೆಲ್ಲರೂ ಒಂದು ಕ್ಷಣ ಅವಕ್ಕಾಗಿ ಹೋಗಿದ್ದರು. ಗುಂಪಿನ ನಾಯಕನಂತಿದ್ದ ಯೂಸುಫ್ ಅಂಗಡಿಯವನ ಬಳಿ ಬಂದು ಮಾತನಾಡತೊಡಗಿದ. ಅವನಿಗೆ ಯೂಸುಫರ ಇಂಗ್ಲೀಷ್ ಸ್ವಲ್ಪವೂ ಅರ್ಥವಾಗದೆ ಹತ್ತಿರದ ಕಟ್ಟಡದ ಕಡೆಗೆ ಕುಳಿತಿದ್ದ ಯುವಕನ ಕಡೆಗೆ ಕೈ ತೋರಿದ. ಯೂಸುಫ್ ಆ ಕಡೆಗೆ ತೆರಳಿ ” ನಾವೆಲ್ಲರೂ ಹಡಗು ಅಪಘಾತದಲ್ಲಿ ಬದುಕಿಳಿದವರು. ಕಾಡಿನಲ್ಲಿ ಒಂದು ದಿನ ಕಳೆದು ಇಲ್ಲಿಗೆ ತಲುಪಿದ್ದೇವೆ. ನಮಗೆ ಭಾರತಕ್ಕೆ ತಲುಪಲು ವ್ಯವಸ್ಥೆ ಮಾಡಬಹುದೇ ” ಎಂದು ಕೇಳಿಕೊಂಡರು. ತಕ್ಷಣವೇ ಸ್ಪಂದಿಸಿದ ಅವನು ಹತ್ತಿರದ ಕೊಠಡಿಯಲ್ಲಿದ್ದ, ಆಫಿಸರ್ ಬಳಿ ಸ್ವಲ್ಪ ಹೊತ್ತು ಮಾತನಾಡಿದ. ಹಡಗು ಅಪಘಾತದ ಸುದ್ದಿ ಮೊದಲೇ ತಿಳಿದಿದ್ದ ಅಧಿಕಾರಿ ಒಡೋಡಿ ಬಂದ. ಅವನು, ವೆಲ್ಲೆಸ್ಲಿ ಮಡಗಾಸ್ಕರ್ ದ್ವೀಪದ ಮೇಲುಸ್ತುವಾರಿ ನೋಡುತ್ತಿದ್ದ ಅಧಿಕಾರಿ. ಮೂಲತಃ ಅವನ ತಂದೆ- ತಾಯಿಯರಿಬ್ಬರೂ ಬ್ರಿಟಿನ್ ನವರು. ಹುಟ್ಟಿದ್ದು ಮಾತ್ರ ಮಡಗಾಸ್ಕರ್ ನಲ್ಲಿ. ಅವನ ತಂದೆ ಇದೇ ದ್ವೀಪದಲ್ಲಿ ನೌಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ.

ಹಡಗು ಅಪಘಾತದಲ್ಲಿ ಎಲ್ಲರೂ ತೀರಿ ಹೋಗಿದ್ದಿರಬಹುದೆಂದು ಸುದ್ದಿ ಬಿತ್ತರಗೊಂಡಿದ್ದರಿಂದ, ಹೀಗೆ ಬದುಕುಳಿದು ಈಜಿ ಬಂದವರನ್ನು ನೆನೆದು ಅವನು ಆಶ್ಚರ್ಯ ಚಕಿತನಾಗಿದ್ದ. ಅವರಿಗೂ ಹರಕು ಮುರುಕು ಇಂಗ್ಲೀಷ್ ಬರುತ್ತಿದ್ದರಿಂದ ಉಳಿದವರಲ್ಲೂ ಹಡಗು ಅಪಘಾತದ ಚರಿತ್ರೆಯ ಬಗ್ಗೆ ವಿವರವಾಗಿ ಕೇಳಿದ. ಆ ವರದಿಯನ್ನು ಅವನು ನೌಕಾಧಿಕಾರಿಗೆ ತಲುಪಿಸುವ ತುರ್ತು ಅವನಿಗಿತ್ತು. ಬದುಕಿಳಿದವರಲ್ಲಿ ಸತ್ತು ಹೋದ ಡೇವಿಡ್ ನ ವಿಚಾರ ಹೇಳಿದಾಗ, ಅಧಿಕಾರಿ ” ಈ ದ್ವೀಪದಲ್ಲಿ ಸುರಕ್ಷಿತ ತಾಣವೆಂದರೆ ಪಟ್ಟಣಗಳು. ಇಲ್ಲಿನ ಕಾಡುಗಳೆಂದರೆ ಮಹಾ ಅಪಾಯಕಾರಿ. ನರಭಕ್ಷಕ ಕಾಡು ಮನುಷ್ಯರು, ವಿಷಪೂರಿತ ಹಾವುಗಳ ನೆಲೆಬೀಡಿದು. ಸರಕಾರದಿಂದ ಹಲವಷ್ಟು ಜನ ಅಧ್ಯಯನಕ್ಕೋಸ್ಕರ ಬಂದಿದ್ದರೂ ಹೆಚ್ಚಿನವರು ಹೋದದ್ದು ಹೆಣವಾಗಿ. ಭಯ ಪಡಬೇಕಾಗಿಲ್ಲ, ನಿಮಗೆ ಭಾರತಕ್ಕೆ ಹೋಗುವ ವ್ಯವಸ್ಥೆ ಮಾಡೋಣ. ಒಂದೆರಡು ತಿಂಗಳಾದರೂ ಕಾಯ ಬೇಕಷ್ಟೇ” ಎಂದು ಹುರಿದುಂಬಿಸಿದ. ಆ ಬಳಿಕ ಯಾರೂ ಕಾಡಿಗೆ ಹೋಗಲಿಲ್ಲ. ಹಡಗು ಬರುವಷ್ಟು ದಿನ ಕಾಯಲು, ಅದಕ್ಕೆ ಪೂರಕವಾದ ದಾಖಲೆಗಳ ಮಾಡ ಬೇಕಾದ ಸಮಯವನ್ನು ಆತನೇ ಮಾಡುವುದಾಗಿ ಒಪ್ಪಿಕೊಂಡು ಸರಕಾರದ್ದೇ ಖಾಲಿ ಚತ್ರವೊಂದನ್ನು ನೀಡಿ ತಂಗಲು ವ್ಯವಸ್ಥೆ ಮಾಡಿದ.

ದಿನವುರುಳತೊಡಗಿತು. ಸರಕಾರದಿಂದಲೇ ಅಹಾರದ ವ್ಯವಸ್ಥೆ ಇತ್ತು. ವಿಶೇಷ ಅಡುಗೆಗಾಗಿ ಮೀನು ಹಿಡಿಯುತ್ತಿದ್ದರು. ಇದಿನಬ್ಬನ ಮೀನಿನ ಅಡುಗೆಗೆ ವೆಲ್ಲೆಸ್ಲಿ ಮಾರು ಹೋಗಿದ್ದ. ವಾರಕ್ಕೊಮ್ಮೆಯೋ, ಎರಡೋ ದಿನ ದೊಡ್ಡ ಮೀನುಗಳನ್ನು ತಂದು ಪಾಕ ಮಾಡಿ ಕೊಡುವಂತೆ ಹೇಳಿಕೊಳ್ಳುತ್ತಿದ್ದ. ಕುಟುಂಬ ಸಮೇತ ಬಂದು ತಿಂದುಂಡು ಅವರು ಮರಳುತ್ತಿದ್ದರು ಮತ್ತು ಇದಿನಬ್ಬನಿಗೆ ಕಾಣಿಕೆಯಾಗಿ ಏನಾದರೂ ಸಿಗುತ್ತಿತ್ತು.

*****

ತಿಂಗಳುಗಳು ಕಳೆಯಿತು. ಸೌಕರ್ಯಗಳಿಗೆ ಯಾವುದೇ ತೊಂದರೆ ಬರಲಿಲ್ಲ. ಕೊನೆಗೆ ಭಾರತಕ್ಕೆ ಮರಳುವ ಹಡಗು ವಾರದ ಕೊನೆಯಲ್ಲಿ ತಲುಪಲಿದೆ ಎಂಬ ಮಾಹಿತಿ ಬಂತು. ತಾಯ್ನಾಡಿಗೆ ಹೋಗುವುದೆಂದರೆ ಒಂದು ವಾರ ಕಾಯುವುದೇನು, ಆ ದಿನಗಳು ಅತ್ಯಂತ ದೀರ್ಘ ದಿನಗಳಂತೆ ಭಾಸವಾಗುತ್ತಿದ್ದವು.ಎರಡು ತಿಂಗಳು ಕಳೆದು ಹೋದದ್ದು ತಿಳಿಯಲೇ ಇಲ್ಲ. ಅಂತೂ ಹಡಗು ಬಂದರು ತಲಪಿತು. ತನ್ನ ಬಳಿ ಜೋಪಾನವಿದ್ದ ಅರ್ಧ ಪವನಿನಷ್ಟು ಚಿನ್ನ ಇದಿನಬ್ಬರಿಂದ ಖರ್ಚಾಗಿ ಹೋಗಿದ್ದವು. ಅಲ್ಲಿ ಮೀನುಗಳು ಅಗ್ಗಕ್ಕೆ ದೊರೆಯುತ್ತಿರಲಿಲ್ಲ. ಪುಗಸಟ್ಟೆ ಮೀನು ಹಿಡಿಯುವಂತಿರಲಿಲ್ಲ. ಸರಕಾರದ ಬೊಕ್ಕಸಕ್ಕೆ ಇಂತಿಷ್ಟು ಹಣ ನೀಡಿಯೇ ಮೀನುಗಾರಿಕೆ ನಡೆಸಬೇಕಿತ್ತು. ಅಧಿಕಾರಿ ಮೀನು ಅಡುಗೆ ಮಾಡಲು ತಂದರೆ ಉಳಿದ ಚೂರು ಪಾರೇನಾದರೂ ದಕ್ಕುತ್ತಿತ್ತು. ಹದಿನೇಳು ವರ್ಷದ ಕಠಿಣ ಶ್ರಮದಿಂದ ಇನ್ನುಳಿದ ಆರುವರೆ ಪವನ್ ಚಿನ್ನ ಉಳಿದು, ಭಾರತದ ಕಡೆ ಹಡಗು ಯಾತ್ರೆ ಹೊರಟಿತು. ಸಾವಿಗೆ ಸಂಜೀವಿನಿಯಾದ ಮಡಗಾಸ್ಕರ್ ಅದ್ಭುತ ದ್ವೀಪದಿಂದ ಹಡಗು ಮೆಲ್ಲಗೆ ದೂರವಾಗ ತೊಡಗಿತು. ಸುಮಾರು ೪೫ ದಿನಗಳ ಪ್ರಯಾಣವದು.

ಮತ್ತೆ ಹಡಗಿನಲ್ಲಿ ಮಾತು ಕಥೆಗಳು- ಕಷ್ಟ ಸುಖಗಳು ವಿನಿಮಯಗೊಂಡವು. ಕೊನೆಗೊಂದು ದಿನ ಮಡಗಾಸ್ಕರ್ ನಿಂದ ಹೊರಟ ಹಡಗು ಮಂಗಳೂರು ಬಂದರಿಗೆ ಹತ್ತಿರವಾಗತೊಡಗಿತು. ಸಾಕಷ್ಟು ದೂರದಲ್ಲಿ ಬಂದರು ಕಾಣತೊಡಗಿತು. ತಾಯ್ನಾಡಿನ ಪ್ರೀತಿ, ತಾಯಿಯ ವಾತ್ಸಲ್ಯ ನೆನೆಯುತ್ತಿದ್ದಂತೆ ಇದಿನಬ್ಬನಿಗೆ ಮೈನವಿರೇಳತೊಡಗಿತು. ದೂರದಲ್ಲೇ ಬಂದರು ಹತ್ತಿರವಾದಂತೆ ಕಣ್ಣುಗಳು ತೋಯುತ್ತಿದ್ದವು. ಆ ರಾತ್ರಿ ನಿದ್ದೆ ಹತ್ತಲಿಲ್ಲ. ಇಡೀ ಬಂಕರು ತುಂಬಾ ಇದಿನಬ್ಬ ಅಲೆದಾಡುತ್ತಲೇ ಇದ್ದ. ಯೂಸುಫರಿಗೆ ಇದಿನಬ್ಬನ ಅಂತರಾಳ ಅರ್ಥವಾಗುತ್ತಿತ್ತು. ಮಾರನೇ ದಿನ ಮಂಗಳೂರಿನ ಬಂದರಿಗೆ ಹಡಗು ಬಂದು ತಲುಪಿತು. ಪ್ರಯಾಣದ ಮದ್ಯೆ ಇದಿನಬ್ಬನಿಗೆ ನಾಲ್ಕೈದು ಸಾಲು ಮರೆತು ಹೋದ ಬ್ಯಾರಿ ಮಾತುಗಳನ್ನು ಯೂಸೂಫರು ಕಲಿಸಲು ಶ್ರಮಿಸಿದ್ದರು.

ಕೂಲಿಯವರನ್ನೂ ಸೇರಿ ಉಳಿದ ಯಾತ್ರಿಕರು ಹಡಗಿನಿಂದ ಎಲ್ಲರೂ ಇಳಿಯ ತೊಡಗಿದರು. ಬಂದರಿನಿಂದಿಳಿದು ತಾಯ್ನಾಡ ಮಣ್ಣು ಕಂಡಿದ್ದೇ ತಡ, ಇದಿನಬ್ಬ ಭಾವುಕನಾದ. ಅವನು ಬಾಗಿ ನೆಲಕ್ಕೆ ಮುತ್ತನ್ನಿಟ್ಟ.

ಮಂಗಳೂರು ಬದಲಾಗಿತ್ತು. ಮೀಸೆ ಚಿಗುರುವ ಮುನ್ನ ಕಂಡಿದ್ದ ಮಂಗಳೂರು ಮತ್ತು ಇಪ್ಪತ್ತಾರು ವರ್ಷಗಳ ನಂತರ ಕಾಣುತ್ತಿರುವ ಮಂಗಳೂರಿನ ನಡುವೆ ಎಷ್ಟೋ ವ್ಯತ್ಯಾಸ ಇತ್ತು. ಇದಿನಬ್ಬನಿಗೆ ತನ್ನ ಮನೆಯಿಂದ ಮಂಗಳೂರಿಗೆ ಬಂದಿದ್ದ ನೆನಪುಗಳ್ಯಾವುವೂ ಉಳಿದಿರಲಿಲ್ಲ. ವಾಸ್ತವವಾಗಿ ಮಂಗಳೂರು ಪಟ್ಟಣವನ್ನು ಇಡಿಯಾಗಿ ಎಂದೂ ನೋಡಿರದ ಇದಿನಬ್ಬ ಯಾರದೋ ಕೈಕೆಳಗಿನ ಕೆಲಸಗಾರನಾಗಿ ಹರಾಜು ಮೂಲಕ ತಮಿಳುನಾಡಿಗೆ ಹೋಗಿದ್ದ. ಅಲ್ಲಿಂದ ಎಲ್ಲೆಲ್ಲಿಗೋ ಹೋಗಿ ಎಂತೆಂತದೋ ಸಂಕಷ್ಟಗಳಿಗೆ ಗುರಿಯಾಗಿ ಜೀವಂತವಾಗಿ ಮರಳಿ ಈಗ ಸ್ವತಂತ್ರವಾಗಿ ತನ್ನ ಊರಿಗೆ ಹಿಂದಿರುಗುತ್ತಿದ್ದ. ಕೈಯಲ್ಲಿ ಸಣ್ಣ ಪ್ರಮಾಣದ ಸಂಪತ್ತೂ ಇತ್ತು.

ಹಡಗಿನಿಂದ ಇಳಿದ ಮೇಲೆ ಇದಿನಬ್ಬ ಹೇಳುವ ಊರಿನ ದಾರಿ ಯಾವುದೂ ಯೂಸುಫರಿಗೆ ತಿಳಿಯುತ್ತಿರಲಿಲ್ಲ. ಪುಣ್ಯಕ್ಕೆ ಆಫ್ರಿಕಾದ ಚಿನ್ನದ ಗಣಿಗೆ ಬಂದ ಟೆಲಿಗ್ರಾಂ ಅವರ ಬಳಿ ಇತ್ತು. ಅದನ್ನು ಮಂಗಳೂರಿನ ಬಂದರಿನ ಮೂಲಕ ಕಳಿಸಿದ್ದರಿಂದ, ಅದು ಉಪ್ಪಿನಂಗಡಿಯಿಂದ ಬಂದಿದೆಯೆಂದೂ ತಿಳಿದು ಬಂತು. ತುಂಬಾ ದಿನಗಳು ಇದಿನಬ್ಬರ ತಾಯಿಯ ಹಠದಿಂದ ಹುಡುಕಿದ್ದರ ಫಲವಾಗಿ ಪತ್ರವೊಂದು ತಲುಪಿಸಲು ಮಾಡುವ ಪ್ರಯತ್ನದ ಫಲವಾಗಿ ಅವರಿಗೂ ಅಸ್ಪಷ್ಟ ಮಾಹಿತಿ ಸಿಕ್ಕಿದ್ದರಿಂದ ಸರಕಾರದ ಪಟ್ಟಿಯಲ್ಲೂ ಕೂಲಿಯಾಳಾಗಿ ಹೊರಟು ಅಲ್ಲೊಬ್ಬ ಇದಿನಬ್ಬ ಇದ್ದಾನೆ ಎನ್ನುವುದು ತಿಳಿದಿತ್ತು. ಅದು ಅದೇ ಇದಿನಬ್ಬನೇ ಎನ್ನುವುದಕ್ಕೆ ಯಾವ ಪುರಾವೆಯೂ ಉಳಿದಿರಲಿಲ್ಲ.

ಅಕಸ್ಮಾತ್ ಇದಿನಬ್ಬನ ಊರಿನ ಯಾರಾದರೂ ಸಿಕ್ಕಿದರೂ ಸಣ್ಣ ಹುಡುಗನಾಗಿದ್ದಾಗ ನೋಡಿದ ಮುಖಕ್ಕೂ ಈಗ ಗಡ್ಡ ಮೀಸೆ ಬೆಳೆದ ಯುವಕನ ಮುಖಕ್ಕೂ ತಾಳೆಯಾಗದೆ ಅವರು ಇದಿನಬ್ಬನನ್ನು ಗುರುತಿಸುವುದು ಬಹಳ ಕಷ್ಟದ ವಿಷಯವೇ ಆಗಿತ್ತು. ಇನ್ನು ಮನೆಯವರೂ ಸಹ ಗುರುತಿಸುವುದು ನಂಬಲಸಾಧ್ಯವಾಗಿತ್ತು. ಮಾತ್ರವಲ್ಲದೆ ಇದಿನಬ್ಬನಿಗೆ ಮಾತೃಭಾಷೆಯೇ ಸರಿಯಾಗಿ ಬರುತ್ತಿರಲಿಲ್ಲ. ಇದೆಲ್ಲದರ ಪರಿಣಾಮ ಯೂಸುಫ್ ರಿಗೆ ಚಿಂತೆಯಾಯಿತು. ಅಂತೂ ಕೊನೆಗೆ ಏನಾದರಾಗಲಿ, ಅಜಿಲಮೊಗರು ಹೋಗುವುದೆಂದು ತೀರ್ಮಾನಿಸಿ ಎತ್ತಿನ ಗಾಡಿ ಗೊತ್ತು ಪಡಿಸಿ ಪ್ರಯಾಣ ಶುರು ಮಾಡಿದರು. ಹೊಸ ಹೊಸ ಹೆಂಚಿನ ಮನೆಗಳು ಬಂದಿವೆ. ದಾರಿ ಅಗಲವಾಗಿದೆ. ಹೊಸ ದಾರಿಗಳು ನಿರ್ಮಾಣವಾಗಿವೆ. ಇದಿನಬ್ಬನಿಗೆ ಏನೋ ಹಿಂದಿನವುಗಳನ್ನು ನೆನಪಿಸಲಾಗುತ್ತಿಲ್ಲ. ಎರಡು ದಿನಗಳಲ್ಲಿ ಗಾಡಿ ಅಜಿಲಮೊಗರು ನೇತ್ರಾವತಿ ನದಿಯ ದಕ್ಷಿಣ ದಂಡೆಗೆ ತಲುಪಿತು. ಗಾಡಿಯಿಂದಿಳಿದ ಯೂಸುಫ್ ಅಲ್ಲೇ ಹತ್ತಿರದಲ್ಲಿದ್ದ ಮನೆಗೆ ಹೋಗಿ ವಿಚಾರಿಸಿದರು.

” ಇಲ್ಲಿ ಇದಿನಬ್ಬ ಅನ್ನುವವನು ಯಾರಾದರೂ ಕಾಣೆಯಾಗಿದ್ದರೇ ”
” ಇದಿನಬ್ಬ?? ”
” ಹೌದು, ಬಹಳ ವರ್ಷಗಳ ಹಿಂದೆ. ಯಾಕೆ? ”
” ಆಫ್ರಿಕಾದಿಂದ ನನ್ನ ಜೊತೆ ಆತನನ್ನು ಕರೆತಂದಿರುವೆ. ದಾರಿ ಸಿಕ್ಕರೆ ಅವರ ಮನೆಗೆ ತಲುಪಿಸಿಲು ಅಂತ ಕರೆದಿಕೊಂಡು ಬಂದಿದ್ದೇನೆ”
” ಹಾ ಹೇಳುವುದು ಕೇಳಿದ್ದೇನೆ, ಹಲೀಮಾ ಅವರ ಮಗ ಇರಬೇಕು. ಅವರ ಮನೆ ನದಿ ದಾಟಿ ಹೋಗಬೇಕು ”
ಮನೆಯವರು ಬಂದು ಗಾಡಿಯ ಬಳಿ ಬಂದೊಮ್ಮೆ ನೋಡಿದರು. ನೀಳ ಗಡ್ದ ದ ಧೃಡಕಾಯ ಯುವಕನೊಬ್ಬ ಗಾಡಿಯಲ್ಲಿ ಕುಳಿತಿದ್ದಾನೆ.
” ನಿನ್ನ ಹೆಸರೇನು?”

ಇದಿನಬ್ಬನಿಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಯೂಸುಫ್ ರವರು ಮನೆಯ ದಾರಿ ಸಿಕ್ಕ ವಿಚಾರ ಹೇಳುವಾಗ ಅವನ ಖುಷಿಗೆ ಪಾರವಿರಲಿಲ್ಲ.ಅವನ ಕಪ್ಪು ತುಟಿ ತುಂಬಾ ನಗು ಎಳೆದುಕೊಂಡು ಮನೆಯವರನ್ನು ಕೃತಜ್ಞತೆಯಿಂದ ನೋಡಿದ. ಮತ್ತೆ ಗಾಡಿ ಮುಂದುವರಿಯಿತು. ನೇತ್ರಾವತಿ ನದಿ ಬಳಿ ನಿಂತಿತು. ನದಿ ದಾಟಲು ದೋಣಿಯೂ ಬಂತು. ನದಿ ದಾಟುತ್ತಿರುವಾಗ ಇದಿನಬ್ಬನಿಗೆ ಬಹುತೇಕ ಹಳೆಯದೆಲ್ಲ ಮೆಲ್ಲಗೆ ನೆನಪಿಗೆ ಬಂದವು. ದೊಡ್ಡಮ್ಮನ ಜೊತೆ ಹದಿನಾರು ವರ್ಷಗಳ ಕೆಳಗೆ ದೋಣಿಯಲ್ಲಿ ಮನೆಯಿಂದ ಬಂದ ನೆನಪಾಯಿತು. ಆಮೇಲೆ ಏನೆಲ್ಲ ನಡೆದು ಹೋಯಿತು. ಪಾಪ ದೊಡ್ಡಮ್ಮ ಈಗ ಹೇಗಿರಬಹುದು, ಮನೆಯಲ್ಲಿ ಯಾರೆಲ್ಲ ಇರಬಹುದು. ಅಪ್ಪ ಅಮ್ಮ ಸಹೋದರಿಯರು ಹೇಗಿರಬಹುದು. ಇದಿನಬ್ಬ ಅಳು ಒತ್ತರಿಸಿ ಬಂತು. ದೋಣಿ ನದಿ ದಾಟಿ ಅಜಿಲಮೊಗರು ಮಸೀದಿ ತಲುಪಿಸಿತು. ಇದಿನಬ್ಬನಿಗೆ ಈಗ ಅಲ್ಪ ಸ್ವಲ್ಪ ದಾರಿ ಅರ್ಥವಾಗುವಂತಿತ್ತು. ಒಬ್ಬನೇ ಮುಂದೆ ನಡೆದ. ಅವನ ಮನಸ್ಸಿನ ಉದ್ವೇಗ ಯೂಸುಫರಿಗೆ ಅರ್ಥವಾಗುತ್ತಿತ್ತು. ಯೂಸುಫರು ಹಿಂದೆ ಹಿಂದೆ ನಡೆಯುತ್ತಿದ್ದರು. ಅವನ ಒಂದೊಂದು ಹೆಜ್ಜೆಗಳಿಗೆ ವಿಪರೀತ ವೇಗವಿತ್ತು. ಒಂದು ಕಡೆ ಸಣ್ಣ ಮನೆಯ ಮುಂದೆ ಜನರು ಜಮಾಯಿಸಿದ್ದರು.

ಅವರಲ್ಲೊಬ್ಬರನ್ನು ಯೂಸುಫರು ವಿಚಾರಿಸಿದರು;
” ಇಲ್ಲಿ ಇಪ್ಪತ್ತೈದು ವರ್ಷದ ಹಿಂದೆ ಯಾರದರೂ ಕಾಣೆಯಾಗಿದ್ದರೇ”
” ಯಾರು?”
ಯೂಸುಫ್ ಕತೆಯೆಲ್ಲ ಕೇಳಿದ ಬಳಿಕ ಅಲ್ಲಿದ್ದವರೆಲ್ಲಾ ಇದಿನಬ್ಬನನ್ನು ಅಡಿಯಿಂದ ಮುಡಿಯವರೆಗೆ ಒಮ್ಮೆ ನೋಡಿದರು. ಹಲವು ವರ್ಷಗಳಿಂದ ಊರಿನಲ್ಲಿ ಕೇಳಿ ಬರುತ್ತಿದ್ದ ನಾಪತ್ತೆಯ ಕತೆಯ ಮೂಲ ಪುರುಷನನ್ನು ಕಣ್ಣಾರೆ ಕಂಡ ಉದ್ವೇಗದಲ್ಲಿದ್ದ ಅವರು ಇದಿನಬ್ಬನ ಮನೆಯ ದಾರಿ ಹೇಳಿಕೊಟ್ಟರು.”ಅಲ್ಲಿಗೆ ತುಂಬಾ ಜನ ಹೋಗುತ್ತಿದ್ದಾರೆ, ಒಂದೆರಡು ಕುಟುಂಬ ದಾರಿ ಕೇಳುತ್ತ ಬಂದಿತ್ತು. ಇವತ್ತು ಏನೋ ಅಲ್ಲಿ ಕಾರ್ಯಕ್ರಮ ಇರಬೇಕು” ಎಂದೂ ಹೇಳಿ ಕಳುಹಿಸಿ ಬಿಟ್ಟರು. ಯೂಸುಫ್ ಆ ವಿಚಾರವನ್ನು ಇದಿನಬ್ಬನಿಗೆ ಬಿಡಿಸಿ ಹೇಳಿದ. ಈಗ ಇಬ್ಬರಿಗೂ ಮನಸ್ಸಿನಲ್ಲೇ ಭಯ ಶುರುವಾಯಿತು. ಇದಿನಬ್ಬ ಮನಸ್ಸಿನಲ್ಲೇ “ದೇವರೇ, ನನ್ನ ತಂದೆ ತಾಯಿ ಗೆ ಏನೂ ಆಗದಿರಲಿ, ಮನೆಯವರನ್ನೆಲ್ಲ ನೋಡುವ ಭಾಗ್ಯ ನನ್ನದಾಗಲಿ “ಎಂದೆಲ್ಲ ಪ್ರಾರ್ಥಿಸುತ್ತ ವೇಗವಾಗಿ ನಡೆಯ ತೊಡಗಿದ. ಒಂದು ಕಡೆ ಒಮ್ಮೆಲೆ ಗಕ್ಕನೆ ನಿಂತು ಹಿಂದೆ ತಿರುಗಿದ. ಗದ್ದೆಯಲ್ಲಿ ಮಹಿಳೆಯರೆಲ್ಲಾ ಸುಗ್ಗಿ ಹಾಡುತ್ತಾ ತೆನೆ ಕತ್ತರಿಸುತ್ತಿದ್ದರು. ಯೂಸುಫ ರಿಗೆ ಅರ್ಥವಾಯಿತು. ತಕ್ಷಣವೇ ಅವರು ಗದ್ದೆಗಿಳಿದು ಅಲ್ಲಿದ್ದ ಕೆಲಸಗಾರರಲ್ಲಿ ಕೇಳಿಯೇ ಬಿಟ್ಟರು.
” ನಿಮ್ಮಲ್ಲಿ ಯಾರಾದ್ರೂ ಇಪ್ಪತ್ತೈದು ವರ್ಷಗಳ ಹಿಂದೆ ಕಾಣೆಯಾಗಿದ್ರಾ?” ಎಂದು ಕೇಳಿದರು. ಗುಂಪಿನಲ್ಲಿದ್ದ ಮಹಿಳೆಯೊಬ್ಬರು.

” ಹಾ ನಂಡೆ ಮೋನು ಕಾಣಾಂಟಾಯಿರೆ ” ( ಹೌದು, ನನ್ನ ಮಗ ಕಾಣೆಯಾಗಿದ್ದ ) ಎಂದು ಉದ್ಗರಿಸಿದರು.
ಅವರ ಕಣ್ಣುಗಳಲ್ಲಿ ಹೊಳಪಿತ್ತು. ಗುಂಪಿನಿಂದ ಎದ್ದು ಬಂದ ಹಲೀಮಾದರನ್ನು ನೋಡಿದ ತಕ್ಷಣ ಇದಿನಬ್ಬರ ಕಣ್ಣುಗಳು ಹನಿಯತೊಡಗಿದವು. ಉಮ್ಮ! ತನ್ನ ಹೆತ್ತ ತಾಯಿ, ಒಂದು ಕ್ಷಣ ಜಗವನ್ನೇ ಗೆದ್ದ ಅನುಭವ. ಯೂಸುಫ್ ಇದಿನಬ್ಬನ ಕಡೆ ಕೈ ತೋರಿಸುತ್ತ
” ಇಗೋ ನೋಡಿ, ನಿಮ್ಮ ಮಗ ಮತ್ತೆ ಬಂದಿದ್ದಾನೆ ”

“ಇದ್ದಿ ಇದ್ದಿ” ಹಲೀಮಮ್ಮ ಗದ್ದೆಯ ಕೆಸರಲ್ಲಿ ಅಡ್ಡ ಅಡ್ಡ ಕಾಲು ಹಾಕುತ್ತಾ ಓಡೋಡಿ ಬಂದರು. ನೀಳ ಗಡ್ಡ ಬಿಟ್ಟ ಇದಿನಬ್ಬ ಸಂಪೂರ್ಣ ಬದಲಾಗಿದ್ದ. ಮಾತೃ ಹೃದಯ ಆಲಂಗಿಸುತ್ತಿದ್ದಂತೆ ಕರುಳ ಬಳ್ಳಿಗಳ ಸಮ್ಮಿಲನ ನೋಡಿ ನಿಂತ ಕೂಲಿ ಮಹಿಳೆಯರ ಕಣ್ಣುಗಳು ಸುಧೆಯಾದವು. ಮನೆಯಲ್ಲಿ ತಂಗಿಯ ಮದುವೆಗೆ ಚಪ್ಪರ ಹಾಕಿತ್ತು. ಮರುದಿನವೇ ಇದಿನಬ್ಬನ ತಂಗಿಯ ಮದುವೆ ನಿಶ್ಚಯಾವಾಗಿತ್ತು. ಮದುವೆಗೆ ದಾರಿ ಕೇಳಿ ಬರುತ್ತಿದ್ದ ಕುಟುಂಬದವರನ್ನೇ ವ್ಯಕ್ತಿ ಹೇಳಿದ್ದ. ಊರಿಗೆ ಊರೇ ವಾರ್ತೆ ಹಬ್ಬಿದ ಕಾರಣ ಇದಿನಬ್ಬ ಮನೆಗೆ ಹೋಗುವಷ್ಟರಲ್ಲಿ ಇಡೀ ಊರಿನ ಜನರೆಲ್ಲರೂ ನೋಡಲು ಜಮಾಯಿಸಿದ್ದರು. ಮನೆಯಲ್ಲಿ ಇದಿನಬ್ಬನಿಗೆ ಭವ್ಯ ಸತ್ಕಾರ ದೊರೆಯಿತು. ತಂದೆ ತೀರಿ ಹೋಗಿ ಏಳು ವರ್ಷಗಳೇ ಸಂದಿದ್ದವು ಅಂತೂ ತಂಗಿಯ ಮದುವೆಯ ಚಿನ್ನದ ವೆಚ್ಚ ಇದಿನಬ್ಬ ಭರಿಸಿಕೊಂಡ. ಊರಿಗೆ ಊರೇ ಇದಿನಬ್ಬನನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡಿತು.

*****

ಕಥೆ ಮುಗಿಸಿದ ಅಜ್ಜ ಕಣ್ಣೀರೊರೆಸಿಕೊಂಡರು. ” ನಾನಿನ್ನು ಬರಲೇ” ಎನ್ನುತ್ತಾ ಹೊರಡಲನುವಾದರು. ಉಮ್ಮ ಮತ್ತೆ ತೆಂಗಿನ ಗರಿಗಳನ್ನು ಕಟ್ಟಿ, ಸೂಡಿ ಮಾಡಿ, ಅದಕ್ಕೆ ಬೆಂಕಿ ತಾಗಿಸಿ ಕಾಡು ದಾರಿಗೆ ಬೆಳಕು ಮಾಡಿ ಕೊಟ್ಟರು. ಅಜ್ಜ ಮೆಲ್ಲಗೆ ಹೊಸ್ತಿಲು ದಾಟಿ ಹೊರಟರು. ” ಈ ಇದಿನಬ್ಬ ಈಗೆಲ್ಲಿದ್ದಾರಜ್ಜ” ಅಂತ ಕೇಳಿದೆ. ಅವರೊಮ್ಮೆ ನನ್ನ ಕಡೆಗೆ ನೋಡಿದರು. ಸೂಟೆಯ ಬೆಳಕಿಗೆ ಕರಗಿದ ಕಣ್ಣು ಜ್ವಾಜಲ್ಯಮಾನವಾಗಿ ಪ್ರಕಾಶಿಸುತ್ತಿತ್ತು. ನೀಳ ಗಡ್ಡ ದೃಢ ಕಾಯ ಶರೀರ , ಜೀವ ಚೈತನ್ಯ ಅವರಲ್ಲಿ ಎದ್ದು ಕಂಡಿತು. ಮೌನವಾಗಿಯೇ ಮರು ಮಾತನಾಡದೆ ಅಮಾವಾಸ್ಯೆ ಕಗ್ಗತ್ತಲನ್ನು ಸೀಳಿಕೊಂಡು ದೂರ ದೂರವಾದರು.
(ಮುಗಿಯಿತು)

About The Author

ಮುನವ್ವರ್, ಜೋಗಿಬೆಟ್ಟು

ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ