ತಾಯಿ ಶ್ರೀಮಂತೆ, ಮೈ ತುಂಬಾ ವಜ್ರದೊಡವೆ, ಬಂಗಲೆ ಕಾರು ಇದ್ದರೂ ಸಹಿತ ಮಾಯಾ ಎಂತಹ ಸ್ವಾಭಿಮಾನಿ ಎಂದರೆ ಅಮ್ಮನಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಅಮ್ಮನ ಕೈಯಡುಗೆ ಉಂಡು ಅವಳೊಂದಿಗೆ ಒಂದಿಷ್ಟು ಆಪ್ತ ಸಮಯ ಕಳೆಯುವುದನ್ನು ಬಿಟ್ಟರೆ ತಾಯಿಯಿಂದ ಏನನ್ನೂ ಅಪೇಕ್ಷಿಸಲಿಲ್ಲ ಮಾಯಾ. ಬಾಲ್ಯದಲ್ಲಿ ತಾಯಿಯ ಜೊತೆ ಬೆಳೆಯದೆ ಹೋದರೂ, ಯೌವ್ವನದಲ್ಲಿ ಆಪ್ತ ಗೆಳತಿಯಾಗಿ, ಹೆರಿಗೆ, ಮಗುವಿನ ಲಾಲನೆ ಪಾಲನೆಯಲ್ಲಿ ತಾಯಿ ಸಖಿ ಆಗುವಳು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಮಾಯಾ ಆಂಜೆಲೋ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ಮಾಯಾ ಆಂಜೆಲೋ ಉರ್ಫ್ ಮಾರ್ಗರೇಟ್ ಅನ್ನೇ ಜಾನ್ಸನ್ ಹುಟ್ಟಿದ್ದು ಏಪ್ರಿಲ್ ೪, ೧೯೨೮, ಸಂತ ಲೂಯಿಸ್ ಮಿಸೌರಿ, ಅಮೇರಿಕಾದಲ್ಲಿ. ಅವರ ತಮ್ಮ ಬೈಲಿ ಜಾನ್ಸನ್ ಸಣ್ಣವನಿದ್ದಾಗ ಅಕ್ಕನ ಹೆಸರು ಉಚ್ಚರಿಸಲು ಬಾರದೆ “ಮ್ಯಾ ಸಿಸ್ಟರ್” ಎಂದು ಕರೆಯುತ್ತಿದ್ದ, ಕ್ರಮೇಣವಾಗಿ ಮ್ಯಾ ಹೋಗಿ ‘ಮಾಯಾ’ ಆಗಿ ರೂಪಾಂತರವಾಯಿತು. ಮಾಯಾ ಸಣ್ಣವಳಿದ್ದಾಗ ಅವಳ ತಂದೆ ತಾಯಿ ವಿಚ್ಛೇದನ ಪಡೆದು, ಅಕ್ಕ ತಮ್ಮ ಇಬ್ಬರನ್ನೂ ಅಜ್ಜಿಯ ಮನೆಗೆ ಕಳುಹಿಸಿ, ಅವರ ಬಾಲ್ಯ ಅಲ್ಲಿಯೇ ಕಳೆಯುವಂತೆ ಆಯಿತು. ಹದಿನೈದನೇ ವಯಿಸ್ಸಿಗೆ ಮಾಯಾ ನಾಗರಿಕ ಹಕ್ಕುಗಳ ಹೋರಾಟಕ್ಕೆ ಮುಂದಾದವಳು. ಜನಾಂಗೀಯ ವರ್ಣಭೇದದ ವಿರುದ್ಧ ಹೋರಾಡಿ, ಸ್ಟ್ರೀಟ್ ಕಾರ್ ಚಾಲಕಿಯಾಗಿ ನೇಮಕವಾದ ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ.

ಅಮೆರಿಕಾದ ಕವಯಿತ್ರಿ, ಸಾಮಾಜಿಕ ಕಾರ್ಯಕರ್ತೆ, ಕಥೆಗಾರ್ತಿ, ಗಾಯಕಿ, ನಟಿ, ನಿರ್ದೇಶಕಿ ಏನೆಲ್ಲವೂ ಆಗಿದ್ದ ಮಾಯಾ ಆಂಜೆಲೋ ಕಪ್ಪು ಹಕ್ಕಿಗಳ ಕೊರಳಾಗಿದ್ದಳು. ಏಳು ವರ್ಷದವಳಾಗಿದ್ದಾಗ ತಾಯಿಯ ಸ್ನೇಹಿತನಿಂದ ಅತ್ಯಾಚಾರಕ್ಕೊಳಗಾದಾಗ, ಮಾಯಾಳ ಚಿಕ್ಕಪ್ಪ ಅತ್ಯಾಚಾರಿಯನ್ನು ಕೊಂದಾಗ, ಅವಳ ಧ್ವನಿ ಒಬ್ಬ ಮನುಷ್ಯನ ಸಾವಿಗೆ ಕಾರಣವಾಯಿತು ಎನ್ನುವ ಪಾಪಪ್ರಜ್ಞೆಯಿಂದಾಗಿ ಮಾಯಾ ಅಪೂಟ ಐದು ವರುಷಗಳ ಕಾಲ ಮೂಕಿಯಾದಳು. ಮುಂದೆ ಹನ್ನೆರಡೂವರೆ ತಾರುಣ್ಯದಲ್ಲಿ ಶ್ರೀಮತಿ ಫ್ಲವರ್ಸ್ ಅವಳನ್ನು ಮತ್ತೆ ಮಾತನಾಡುವಂತೆ ಪ್ರೇರಣೆ ನೀಡುತ್ತಾರೆ‌. ಅವಳಲ್ಲಿ ಕಾವ್ಯದ ಪ್ರೀತಿ ಮೂಡಿಸುತ್ತಾರೆ.

ತಾಯಿ ಶ್ರೀಮಂತೆ, ಮೈ ತುಂಬಾ ವಜ್ರದೊಡವೆ, ಬಂಗಲೆ ಕಾರು ಇದ್ದರೂ ಸಹಿತ ಮಾಯಾ ಎಂತಹ ಸ್ವಾಭಿಮಾನಿ ಎಂದರೆ ಅಮ್ಮನಿಂದ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ. ತಿಂಗಳಿಗೊಮ್ಮೆ ಅಮ್ಮನ ಕೈಯಡುಗೆ ಉಂಡು ಅವಳೊಂದಿಗೆ ಒಂದಿಷ್ಟು ಆಪ್ತ ಸಮಯ ಕಳೆಯುವುದನ್ನು ಬಿಟ್ಟರೆ ತಾಯಿಯಿಂದ ಏನನ್ನೂ ಅಪೇಕ್ಷಿಸಲಿಲ್ಲ ಮಾಯಾ. ಬಾಲ್ಯದಲ್ಲಿ ತಾಯಿಯ ಜೊತೆ ಬೆಳೆಯದೆ ಹೋದರೂ, ಯೌವ್ವನದಲ್ಲಿ ಆಪ್ತ ಗೆಳತಿಯಾಗಿ, ಹೆರಿಗೆ, ಮಗುವಿನ ಲಾಲನೆ ಪಾಲನೆಯಲ್ಲಿ ತಾಯಿ ಸಖಿ ಆಗುವಳು.

ಮಾಯಾಳ ಜೀವನದಲ್ಲಿ ಎರಡು ಮುಖ್ಯ ಘಟನೆಗಳು ಎಂದೂ ಮರೆಯದಂಥವು ಮತ್ತು ಅವಳಲ್ಲಿ ಮಹತ್ವದ ಬದಲಾವಣೆ ತಂದವು.

ಮೊದಲೆನೆಯದು: ೨೦ನೇ ವಯಸ್ಸಿನಲ್ಲಿ ಸಾವಿಗೆ ತೀರಾ ಹೆದರಿಕೊಂಡು ಮನೆಯೊಳಗೇ ಬೀಗ ಜಡಿದು ಅವಿತುಕೊಂಡಳು, ಕೊನೆಗೆ ಒಂದು ದಿನ ಅರಿವಾಗುವುದು ಸಾವು ತಾನಿರುವವರೆಗೂ ಬಾರದು ಮತ್ತು ಅದು ಬಂದ ನಂತರವೂ ನಾನು ಈ ಭೂಮಿ ಮೇಲೆ ಇರುವೆ. ಸಾವಿಗೆ ಹೆದರುವುದರಲ್ಲಿ ಅರ್ಥವೇ ಇಲ್ಲ ಎಂದು ಅರಿತಳು.

ಎರಡನೆಯದು: ಮಾಯಾಳ ತಾಯಿ – ಬಿಥುನೇ, ರೂಸ್ವೆಲ್ಟ ಮತ್ತು ತನ್ನ ತಾಯಿಯ ಪಟ್ಟಿಗೆ ಸೇರಿಸಿ, ಕಣ್ತುಂಬಿಕೊಂಡು ಮನಸಾರೆ ಮಾಯಾಳನ್ನು “ನೀನು ನನ್ನ ಜಗತ್ತಿನ ಶ್ರೇಷ್ಠ ವ್ಯಕ್ತಿ” ಎಂದು ಮನದುಂಬಿ ಹೊಗಳಿದಾಗ. ತನ್ನ ಬಗ್ಗೆ ತನಗೇ ಒಂದು ಅದಮ್ಯ ಆತ್ಮವಿಶ್ವಾಸ ಮೂಡುವುದು.

ಆತ್ಮಚರಿತ್ರೆಯ ಏಳು ಕಂತುಗಳನ್ನು ಬರೆಯುವಳು ಮಾಯಾ.

I. I Know Why the Caged Bird Sings (1969)
II. Gather Together in My Name (1974)
III. Singin’ and Swingin’ and Gettin’ Merry Like Christmas (1976)
IV. The Heart of a Woman (1981)
V. All God’s Children Need Traveling Shoes (1986)
VI. A Song Flung Up to Heaven (2002)
VII. Mom & Me & Mom (2013 )

I Know Why the Caged Bird Sings (1969) ಮಯಾಳ ಆತ್ಮಕಥನ ಒಂದು ಸಂಚಲವನ್ನೇ ಸೃಷ್ಟಿ ಮಾಡುತ್ತದೆ. “Still, I Rise” ಪದ್ಯ ಈಗಲೂ ಸ್ತ್ರೀಲೋಕದ ಧ್ಯೇಯಗೀತೆಯಾಗಿದೆ.

೧೯೬೫-೬೭ ರಲ್ಲಿ ಮುಖ್ಯವಾಹಿನಿಯಲ್ಲಿ ಮಾಯಾ ಕಪ್ಪು ಜನರ ಹಕ್ಕುಗಳಿಗಾಗಿ ತೀವ್ರವಾದ ಹೋರಾಟ ಮಾಡಿದಳು. ಇದಕ್ಕಾಗಿ ಅಮೆರಿಕಾವನ್ನು ಸಹ ತೊರೆದು ಬದುಕಿದವಳು. ಮಾರ್ಟಿನ್ ಲೂಥೆರ್ ಕಿಂಗ್ jr ಹಾಗು ಮಲ್ಕೋಲ್ಮ್ ರ ಹತ್ಯಾಕಾಂಡ ಅಮೆರಿಕಾದ ರಾಜಕೀಯದ ಮೇಲೆ ಹಾಗೂ ಮಾಯಾಳ ಜೀವನದ ಮೇಲೆ ದೊಡ್ಡ ಪರಿಣಾಮ ಉಂಟು ಮಾಡುತ್ತದೆ.

೧೯೯೩ರಲ್ಲಿ ಬಿಲ್ ಕ್ಲಿಂಟನ್ ಅಮೆರಿಕಾದ ರಾಷ್ಟ್ರಪತಿಯಾಗಿ ನೇಮಕವಾದಾಗ, ರಾಷ್ಟ್ರಪತಿಯಾಗಿ ಕಚೇರಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಕ್ಲಿಂಟನ್ ಅವರ ವಿನಂತಿಯ ಮೇರೆಗೆ ಮಾಯಾ ” On the pulse of morning” ಪದ್ಯವನ್ನು ಓದಿದರು. ಅಮೆರಿಕಾದ ಇತಿಹಾಸದಲ್ಲಿಯೇ, ಈ ಗೌರವಕ್ಕೆ ಪಾತ್ರವಾಗುವ ಎರಡನೇ ಕವಿ ಎಂದು ಖ್ಯಾತಿ ಪಡೆದಿದ್ದಾರೆ.

ಮಾಯಾಳ ಕಾವ್ಯ ಸೀದಾ ಎದುರಿಗಿರುವವರ ಎದೆಗೆ ನಾಟುವಂತಹ ತಾಕತ್ತು ಮತ್ತು ತೀವ್ರತೆ ಉಳ್ಳಂತಹದ್ದು. ಹೆಣ್ಣಿನ ಅಂತರಾಳದ ಮಾತುಗಳನ್ನ ಪ್ರತಿಮೆ, ರೂಪಕಗಳ ಮೂಲಕ ಪರಿಣಾಮಕಾರಿಯಾಗಿ ಕಾವ್ಯಕ್ಕೆ ತಂದವರು. ನೇರ ಧ್ವನಿಯನ್ನೇ ಹೆಚ್ಚಾಗಿ ಕಾವ್ಯದಲ್ಲಿ ಬಳಸಿರುವರು ಮಾಯಾ. Just Give Me a Cool Drink of Water ‘fore I Diiie (1971) ಕವನ ಸಂಕಲನ ಪುಲಿಟ್ಜರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

ತಾನು ದೇವರ ಮಗು ಎಂದು ಗುರುತಿಸಿಕೊಳ್ಳುವ ಮಾಯಾ, ತನ್ನಂತೆ ಪರರ ಬಗೆದೊಡೆ ಎನ್ನುವಂತೆ ಜಗತ್ತಿನ ಉಳಿದವರೂ ಕೂಡ ದೇವರ ಮಕ್ಕಳೇ ಭಾವಿಸಿದವಳು. ಬದುಕಿನ ಅನುಭವಗಳಿಂದ ಮಾಯಾ ಕಂಡುಕೊಂಡಿದ್ದೇನೆಂದರೆ, ತಾನು ಅನುಭವಿಸುವ ದುಃಖ, ನೋವು ಹತಾಶೆಗಳಿಗೆ ಮತ್ಯಾರನ್ನೋ ಹೊಣೆ ಮಾಡಾದೇ ಪಾಲಿಗೆ ಬಂದದ್ದೇ ಪಂಚಾಮೃತವೆಂದು ತಿಳಿದು ಎಲ್ಲವನ್ನೂ ಅನುಭವಿಸಿದವಳು. ಎಲ್ಲವನ್ನೂ ಸಕಾರಾತ್ಮಕವಾಗಿಯೇ ಸ್ವೀಕರಿಸಿ ಬದುಕು ಏನನ್ನೋ ಕಲಿಸುವ ಸೂಚನೆ ಸ್ವೀಕರಿಸಿ ಅನುದಿನದ ವಿದ್ಯಾರ್ಥಿಯಾಗಿಯೇ ಬದುಕಬೇಕು ಎಂದು ನಂಬಿ ಜೀವಿಸಿದವಳು.

ಜೀವನದಲ್ಲಿ ಸಾಕಷ್ಟು ನೋವನ್ನುಂಡ ಮಾಯಾ ಇಡೀ ಕಪ್ಪು ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದಳು. ನೊಂದ ನೋವನ್ನು ಹಾಡಾಗಿಸಿದಳು. ತನ್ನ ೮೬ನೇ ವಯಸ್ಸಿಗೆ ಹಾಡುವ ಕೊರಳು ನಿಲ್ಲಿಸಿದರೂ, ಅವಳ ಹಾಡುಗಳು ಇವತ್ತಿಗೂ ಜೀವಂತವಾಗಿವೆ. ಮಾಯಾ ನಮ್ಮೊಂದಿಗೆ ಇದ್ದಾಳೆ. ಮಾಯಾಳ ಕೆಲವು ಪದ್ಯಗಳು ನಿಮ್ಮ ಓದಿಗೆ…

*****

1. ಪಂಜರದ ಹಕ್ಕಿ
Caged Bird

ಗಾಳಿ ಬೆನ್ನೇರಿ ಹಾರಿ
ಹರಿವ ಹೊಳೆಗುಂಟ ತೇಲಿ
ಕಿತ್ತಳೆ ಸೂರ್ಯನ ಕಿರಣಗಳಲಿ
ರೆಕ್ಕೆಯನ್ನದ್ದುತ
ಸ್ವಚ್ಛಂದ ಹಕ್ಕಿಯೊಂದಕೆ
ಆಕಾಶವೇ ತನ್ನದೆನ್ನುವ ದುಃಸ್ಸಾಹಸ

ಪುಟ್ಟ ಪಂಜರದಿ
ಕಳ್ಳ ಹೆಜ್ಜೆಯ ಹಾಕಿ
ಕೋಪದ ಸರಳುಗಳ ದಾಟಿ
ನೋಡಳು ಏನನ್ನೂ
ರೆಕ್ಕೆ ಸವರಿ, ಕಾಲು ಬಿಗಿದು
ಬಾಯಿ ತೆರೆಯುವಳು ಹಾಡಲೆಂದು

ಕಾಣದ ಕಡಲಿಗೆ ಹಂಬಲಿಸಿ
ಪಂಜರದ ಹಕ್ಕಿ ಹಾಡುವುದು
ಭಯದ ಕಂಪನದಲ್ಲಿ,
ದೂರದ ಬೆಟ್ಟಕ್ಕೆ ಕೇಳುವಂತೆ
ಪಂಜರದ ಹಕ್ಕಿ ಹಾಡುವುದು
ಬಿಡುಗಡೆಯ ಹಾಡು

ಮತ್ತೆ ಕನಸುವುದು ತಂಗಾಳಿಗೆ
ನಿಟ್ಟುಸಿರ ಮರಗಳಲಿ ಮಿದುವಾಗಿ
ಸುಳಿವ ಮೂಡಣದ ಗಾಳಿಗೆ
ಹುಲ್ಲು ಹಾಸಿನ ಮೇಲೆ ಕೂತ
ಮೋಟು ಹುಳುವೊಂದು ಕಾದಿದೆ ನಸುಕಿನಲಿ
ಬರೆದಿದೆ ಆಕಾಶವನ್ನು ತನ್ನ ಹೆಸರಿಗೆಂದೇ

ಏನಾದರೇನು ಪಂಜರದ ಹಕ್ಕಿ
ನಿಲ್ಲುವುದು ತನ್ನ ಕನಸುಗಳ ಗೋರಿ ಮೇಲೆ
ಅವಳ ನೆರಳು ಕಿರುಚುವುದು ಕೆಟ್ಟಕನಸ ಕೂಗಿಗೆ
ರೆಕ್ಕೆ ಸವರಿ, ಕಾಲು ಬಿಗಿದು
ಬಾಯಿ ತೆರೆಯುವಳು ಹಾಡಲೆಂದು

ಕಾಣದ ಕಡಲಿಗೆ ಹಂಬಲಿಸಿ
ಪಂಜರದ ಹಕ್ಕಿ ಹಾಡುವುದು
ಭಯದ ಕಂಪನದಲ್ಲಿ,
ದೂರದ ಬೆಟ್ಟಕ್ಕೆ ಕೇಳುವಂತೆ
ಪಂಜರದ ಹಕ್ಕಿ ಹಾಡುವುದು
ಬಿಡುಗಡೆಯ ಹಾಡು

2. ನನ್ನ ಬದುಕು ನೀಲಿಗಟ್ಟಿದೆ
My Life Has Turned Blue

ನಮ್ಮ ಬೇಸಿಗೆ ಕಳೆದು ಹೋಗಿದೆ
ನಿನ್ನೊಂದಿಗೆ ಎಚ್ಚರವಾಗುತ್ತಿದ್ದ
ಆ ನಸುಗೆಂಪು ನಸುಕುಗಳೀಗ ಬೂದು ಬೂದು
ನನ್ನ ಬದುಕೀಗ ನೀಲಿಗಟ್ಟಿದೆ

ಹಸಿರಾಗಿದ್ದ ಹುಲ್ಲುಹಾಸಿಗೆ
ಈಗ ಮಿರುಗುವ ಇಬ್ಬನಿ ಹೊದಿಕೆ
ಕೆಂಪು ಮಡಿವಾಳರ ಹಕ್ಕಿ ಇಲ್ಲ ಈಗ
ನನ್ನ ಒಂಟಿಯಾಗಿಸಿ
ತೆಂಕಣಕೆ ಹಾರಿ ಹೋಯಿತು
ನನ್ನ ಬದುಕೀಗ ನೀಲಿಗಟ್ಟಿದೆ

ಸುದ್ದಿ ಕೇಳಿರುವೆ
ಈ ಚಳಿಗಾಲವೂ ಕಳೆಯುವುದಂತೆ
ವಸಂತ ಬರುವ ಸೂಚನೆಯಲ್ಲವೇ ಅದು
ಕಡೆಗೂ ಮತ್ತೆ ಬರಲಿದೆ ಬೇಸಗೆ
ಹಸುರು ಹುಲ್ಲಿನ ಮೇಲೊರಗಿದ
ನನ್ನ ಬದುಕೀಗ ನೀಲಿಗಟ್ಟಿದೆ

3. ಹೆಂಗಸರ ಮನೆಗೆಲಸ
Woman Work

ಮಕ್ಕಳಿವೆ ನನಗೆ ಸಾಕಿ ಸಲುವಲು
ರಾಶಿ ಬಟ್ಟೆ ಬಿದ್ದಿವೆ ಒಗೆಯಲು
ಗುಡಿಸಿ ಸಾರಿಸಲು ಕಾದಿದೆ ನೆಲ
ಸಂತೆಗೆ ಹೋಗಬೇಕು ದಿನಸಿ ಕೊಳ್ಳಲು
ಹುರಿಯಲು ಕಾದಿದೆ ಕೋಳಿ ಬಾಡು
ಕುಂಚಿಗೆ ಹಾಕಿ ಬೆಚ್ಚಗಿಡಬೇಕು ಮಗುವನ್ನು
ಉಣ್ಣೋಕೆ ಇಕ್ಕಲು ಕಾದಿದೆ ದೊಡ್ಡ ಪರಿವಾರ
ತೋಟದ ಕಳೆತೆಗೆಯಬೇಕು
ರಾಶಿ ಅಂಗಿ ಇಸ್ತ್ರಿಗೆಂದು ಕೂತಿವೆ
ಬಟ್ಟೆ ಹಾಕಿ ಸಿಂಗರಿಸಲು ಪುಟ್ಟ ಮಕ್ಕಳ ಸಾಲು
ಕಸದ ದಂಟು ಬೆಳೆದು ನಿಂತಿದೆ ಕುಯ್ಯಲು
ಈ ಗುಡಿಸಲು ಸಾರಿಸಿ ಶುಚಿ ಮಾಡಬೇಕು
ರೋಗಿಗಳಿಗೆ ಮದ್ದು ಉಣಿಸಿ
ಹೊಲದಲ್ಲಿ ಹತ್ತಿ ಬಿಡಿಸಿ
ಉಶ್!!!

ನನ್ನ ಮೇಲೊಂದಿಷ್ಟು,
ಹೊಳೆಯೇ ಬಿಸಿಲೇ
ಸುರಿಯೇ ಮಳೆಯೇ
ಮೆಲ್ಲ ಬೀಳು ಇಬ್ಬನಿಯೇ
ತಣಿಸ ಬನ್ನಿ ಈ ಜೀವ ಮತ್ತೆ

ಬಿರುಗಾಳಿಯೇ ತೂರಿಬಿಡು
ಇಲ್ಲಿಂದ ನನ್ನ
ತುರುಸಾಗಿ ಬೀಸಿ
ಆಕಾಶದಲ್ಲಿ ತೇಲಬೇಕು ನಾನು
ಜೀವ ತುಸು ತಣ್ಣಗಾಗುವವರೆಗೂ

ನಿಧನಿಧಾನ ಬೀಳು ಹಿಮವೇ
ಬಿಳಿಯ ಚಾದರು ಹೊದಿಸಿ
ತಣಿಸುವ ಮುತ್ತುಗಳನಿತ್ತು ಮಲಗಿಸಿ
ತುಸು ವಿರಮಿಸಲಿ ಜೀವ ಈ ರಾತ್ರಿಗೆ

ಬಿಸಿಲು ಮಳೆ, ಬಾಗುವ ಬಾನು,
ಬೆಟ್ಟ ಕಡಲು, ಎಲೆ, ಹರಳು
ನಕ್ಷತ್ರ ಮೋಹದ ಬೆಳುದಿಂಗಳು
ನನ್ನವರೆಂದು ಹೇಳಲು
ಇರುವುದು ನೀವಷ್ಟೇ
ಅಲ್ಲವೇ!

4. ಗಂಡಸರು
Men

ಸಣ್ಣವಳಿದ್ದಾಗ ಪರದೆಯ ಹಿಂದೆ
ನಿಂತು ಗಮನಿಸುತ್ತಿದ್ದೆ
ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುವ ಗಂಡಸರನ್ನ

ಕರಿಮುಸುಡಿಯ ಗಂಡಸರು
ಮುದಿ ಗಂಡಸರು
ಎಲ್ಲದರಲ್ಲೂ ಮೂಗು ತೂರಿಸುವ
ಚಿಗುರು ಮೀಸೆಯ ಗಂಡಸರು
ಸುಮ್ಮನೆ ಗಮನಿಸಿ
ಗಂಡಸರು ಸದಾ ಎಲ್ಲಿಗೋ ಹೋಗುತ್ತಲೇ ಇರುತ್ತಾರೆ
ಗೊತ್ತಿತ್ತು ಅವರಿಗೆ
ಅಲ್ಲಿಯೇ ಇದ್ದ ಹದಿಹರೆಯದ
ನಾನೊಬ್ಬಳು ಅವರಿಗಾಗಿ ಹಸಿದಿದ್ದೇನೆಂದು

ನನ್ನ ಕಿಟಕಿಯ ಬಳಿ ನಿಲ್ಲುವರು
ತರುಣಿಯ ಮೊಲೆಯಂತೆ ಚೂಪು
ಅವರ ಭುಜ ಹಿಂದೆ ಬರುವವರನ್ನು
ಸವರುವ ಅವರ ಅಂಗಿಯ ಕಸಿಗಳು

ಒಂದಿನ ನಿನ್ನನ್ನೂ
ಅಂಗೈಲಿ ಮೃದುವಾಗಿ ಹಿಡಿಯುವರು
ಜಗತ್ತಿನ ಕಟ್ಟಕಡೆಯ
ಎಳೆಯ ದಾಸವಾಳವೆನ್ನುವ ಹಾಗೆ
ಆಮೇಲೆ ಹಿಡಿತ ಕೊಂಚ ಬಿಗಿಯಾಗಿಸುವರು
ಮೊದಲ ಸಲ ಅವುಕಿದಾಗ ಹಿತವೆನಿಸುತ್ತೆ
ಥಟ್ಟನೆ ಬಿಗಿದಪ್ಪುವರು
ಅಸಹಾಯಕ ನಿನ್ನೊಳಗೆ ಹಾಗೇ
ಮೆತ್ತಗೆ ಜಾರುವರು ಹಾಂ ಇನ್ನೂ ಹಾಗೇ

ಈಗ ಶುರು ನೋಡಿ
ನೋವು ಒದ್ದುಕೊಂಡು ಬರುವುದು
ಭಯವನ್ನ ಮರೆಮಾಚಲು
ನಗುವಿನ ಬಟ್ಟೆ ತೊಟ್ಟು ಬಿಡು
ಎಲ್ಲವೂ ಮುಗಿದ ಮೇಲೆ
ಗೀರಿದ ಬೆಂಕಿ ಕಡ್ಡಿಯ ತಲೆ ಛಿದ್ರವಾಗುವಂತೆ
ನಿನ್ನ ತಲೆ ಚಿಟ್ಟು ಹಿಡಿಯುವುದು
ಸಿಡಿಯುವುದು
ನಿನ್ನ ಜೀವರಸವೇ ಅದು
ಅಗೋ ಅವರ ತೊಡೆಗಳಿಂದ ಇಳಿದು
ತೊಟ್ಟ ಕಾಲ್ಮರಿಗಂಟಿ ಕರೆಯಾಗಿರುವುದು
ಮತ್ತೆ ನೆಲದೊಡಲು ಸಜ್ಜಾದಾಗ
ಮತ್ತೆ ರುಚಿ ಮರಳಿದೆ ಎನ್ನುವಾಗ
ನಿನ್ನ ದೇಹ ಮತ್ತೆಂದೂ ತೆರೆಯದ ಹಾಗೆ
ಕೀಲಿಯಿರದ ಬೀಗ ಜಡಿದುಕೊಳ್ಳುವುದು

ಕಿಟಕಿಯ ಪಡಕು ಪೂರಾ ತೆರೆದಿದೆ
ಅಲ್ಲೇ ಹೊಯ್ದಾಡುವ
ಪರದೆಯ ಹಿಂದೆ ಗಂಡಸರು ಓಡಾಡುತ್ತಾರೆ
ಏನೋ ಗೊತ್ತಿದೆ ಎಲ್ಲಿಗೋ ಹೋಗುತ್ತಿದ್ದಾರೆ
ಆದರೆ ಈ ಬಾರಿ ಬಹುಶಃ
ನಾನು ಸುಮ್ಮನೆ ನಿಂತು ಗಮನಿಸುತ್ತೇನೆ

5. ನೆನೆಕೆ
Remembrance

ಸಿಕ್ಕು ಸಿಕ್ಕಾದ
ಈ ಹಠಮಾರಿ ಹೆರಳು
ನೇವರಿಸುವಾಗ
ನಿನ್ನ ಕೈಗಳು ಅದೆಷ್ಟು
ಹಗೂರ ಆಗುತ್ತವೆ

ಕೆನ್ನೆಯ ಇಳಿಜಾರಿನ ಮೇಲೆ
ನಿನ್ನ ನಗು
ಹೊಳೆ ಹೊಳೆದು
ಚಿಮ್ಮಿ ಹಾರಿ ನೆಗೆದು
ನನ್ನ ಮೇಲೆ ನೀನು ಮುದ್ರೆಯೊತ್ತುವಾಗ
ನನ್ನೆಲ್ಲಾ ನೆಪಗಳೂ ಧ್ವಂಸ
ನಿನ್ನ ಮಾಯಾವಿ
ತುಂಟತನ ದಾಳಿಮಾಡಲು

ನನ್ನೊಳಗೆ ನೆಟ್ಟ
ಆ ಶ್ರೀಗಂಧದ ಕೊರಡನ್ನ
ಆ ಇಂದ್ರಜಾಲದ ತುಣುಕನ್ನ
ಹಗೂರ ಹೊರಗೆಳೆದೆ
ನಿನ್ನ ಮೈಗಂಧ ಮಾತ್ರ
ಈ ಅಮೃತ ಕಳಶಗಳ
ನಡುವೆ ಅಮರಿದಾಗ
ಇರುವಿಕೆಯ ಸವಿಯೇ
ಈ ಆಸೆಬುರುಕ
ಇಂದ್ರಿಯಗಳಿಗೆ ಮೃಷ್ಟಾನ್ನ!

6. ಅನಿದ್ರಾ
Insomnia

ಕೆಲವು ರಾತ್ರಿ
ನಿದ್ರೆ ಹತ್ತಿರವೇ
ಸುಳಿಯದೆ ಅಣಕಿಸುತ್ತದೆ
ದೂರ ಸರಿವುದು
ಹೇವರಿಸಿಕೊಂಡು, ಒಲ್ಲೆಯೆಂದು

ನನ್ನನ್ನು ಗೆಲ್ಲಿಸಲು
ನನ್ನ ಪರ ನಿಂತ ಎಲ್ಲಾ
ಕಣ್ಕಟ್ಟುಗಳು
ಘಾಸಿಗೊಂಡ ಅಹಂಕಾರದಷ್ಟೇ ಜೊಳ್ಳು
ಮತ್ತು ಅದಕೂ ಹೆಚ್ಚು ನೋವುಭರಿತ