ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಎಲ್ಸಿ. ಸುಮಿತ್ರಾ ಬರೆದ ದಿನದ ಕವಿತೆ
ಗೋಡೆಗೆ ಮುಖ ಮಾಡಿದ ಹುಡುಗರ ಬೆನ್ನು ನೋಡಿ
ಸಾಕಾಗಿ ಹೊರಗೆ ನೋಡಿದೆ.
ನಿನ್ನೆಯಷ್ಟೆ ಕತ್ತರಿಸಿದ ಹುಲ್ಲು ಹಾಸಿನ ಮೇಲೆ
ಮೂರು ಹಕ್ಕಿಗಳು,
ವ್ಯಾಗ್ ಟೈಲ್ ಕುಂಡೆಕುಸುಕ ಕ್ಯಾಟ್ವಾಕ್ ಮಾಡ್ತಾ
ಹುಳು ಹುಡುಕ್ತಿದೆ.
ಪುಕ್ಕ ಪಟಪಟಿಸಿ,
ಪುಟು,ಪುಟನೆ ಕುಪ್ಪಳಿಸಿ…
ನೀಲಿಕತ್ತಿನ ಪಾರಿವಾಳ ಕೊಳದ ಸುತ್ತ ಸುತ್ತಿ
ಕೀಟ ಭೋಜನ ಮಾಡುತ್ತಿದೆ..
ಕ್ರಿಸ್ ಮಸ್ ಟ್ರೀ ನೆರಳಲ್ಲಿ
ಸಂತನಂತೆ ಕುಳಿತ ಕಾಗೆ ಮೌನವಾಗಿದೆ.
ದೂರ ದೂರ ಹೋದ ಕುಂಡೆಕುಸುಗ ಚಿಕ್ಕದಾಗಿ
ಹತ್ತಿರದ ಗಿಡದಲ್ಲಿ ಚಿಟ್ಟೆಯಾಗಿ ಕುಳಿತಿದೆ.
ಇವರಿನ್ನೂ ಬರೆಯುತ್ತಿದ್ದಾರೆ.
ಅಲ್ಲೆಲ್ಲೊ ಶಂಖಪುಷ್ಪದ ಪೊದೆಯಲ್ಲಿ
ಚಿಲಿಮಿಲಿಸುವ ಹೂಹಕ್ಕಿ
ಕಂಡೂ ಕಾಣದಂತಿದೆ
ಲೇಖಕಿ ಸುಮಿತ್ರ ಎಲ್.ಸಿ ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ, ಕಾಡು ಕಡಲು, ವಿಭಾವ (ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ) ಹೂ ಹಸಿರಿನ ಮಾತು (ಪಶ್ಚಿಮ ಘಟ್ಟದ ಹೂ ಸಸ್ಯಗಳ ಕುರಿತು) ಇವು ಸುಮಿತ್ರ ಅವರ ಪ್ರಕಟಿತ ಕೃತಿಗಳು.