Advertisement
ಪಾಥಾಳದಲ್ಲೊಂದು ಭಯಾನಕ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಾಥಾಳದಲ್ಲೊಂದು ಭಯಾನಕ ಅಪಘಾತ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

…ಆಗಿನ ಜಗತ್ತೇ ಬೇರೆ ಈಗಿನ ಜಗತ್ತೇ ಬೇರೆ. ನಮ್ಮ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳುವುದು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಬರುವುದಕ್ಕೆ ನನಗೆ ಯೂನಿವರ್ಸಿಟಿಯಿಂದ ಸಹಾಯ ಕೂಡ ಸಿಕ್ಕಿದೆ. ಮನುಷ್ಯ ಹುಟ್ಟಿದ ಮೇಲೆ ಏನಾದರು ಒಂದು ಒಳ್ಳೆಯ ಕೆಲಸ ಮಾಡಬೇಕು. ಏನೂ ಮಾಡದೆ ಹಾಗೇ ಸತ್ತೋದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ” ಎಂದಳು. ಎಂ.ಡಿ. “ಎಷ್ಟು ವಯಸ್ಸು ನಿಮಗೆ? ಓ! ಐ ಯಾಮ್ ಸಾರಿ ಹೆಣ್ಣುಮಕ್ಕಳ ವಯಸ್ಸು ಕೇಳಬಾರದಲ್ಲ?…”
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

ಅಧ್ಯಾಯ – ೧೦

ದಿನಾಂಕ: ೨೦ ಜನವರಿ 5ನೇ ತಾರೀಖು. ಸ್ಥಳ: ಕೋಲಾರ ಚಿನ್ನದ ಗಣಿಗಳ ಮುಖ್ಯ ಆಡಳಿತ ಕಚೇರಿ “ಸುವರ್ಣ ಭವನ”. ಸಮಯ: ಬೆಳಿಗ್ಗೆ ೧೦ ಗಂಟೆ. ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ (ಬಿ.ಜಿ.ಎಮ್.ಎಲ್) ಕಚೇರಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ (ಎಂ.ಡಿ.) ತಮ್ಮ ಕೋಣೆಯಲ್ಲಿ ಕುಳಿತುಕೊಂಡಿದ್ದಾರೆ. ಒಂದು ಟ್ರಂಕಾಲ್ ಬಂದು ಅವರ ಕೆಳಗಿನ ಅಧಿಕಾರಿ ಅದನ್ನು ಎಂ.ಡಿ. ಕೈಗೆ ತೆಗೆದುಕೊಟ್ಟರು. ಎಂ.ಡಿ. ಕೈಗೆ ತೆಗೆದುಕೊಂಡು ರೀಡಿಂಗ್ ಡೆಸ್ಕ್ ಮೇಲೆ ಇಟ್ಟುಕೊಂಡು ಕಣ್ಣಾಡಿಸಿದರು. ಅದು ಲಂಡನ್‌ನ ಅರಮನೆ ರಸ್ತೆ ಕನ್ನಾಟ್ ಸ್ಟ್ರೀಟ್‌ನ ಜಾನ್ ಟೇಲರ್ ಕಂಪನಿ ಕಛೇರಿಯಿಂದ ಬಂದಿರುವ ಟ್ರಂಕಾಲ್ ಪತ್ರ… Miss. Rosie Smith visit to Kolar Gold Mines on 15th Jan 2000. She will be there as research scholar from 15th – 29th Jan 2000. Kindly make necessary arrangements for her stay, study and mines visit.. ಪತ್ರ ಓದಿದ ಎಂ.ಡಿ. ಸಹಿ ಹಾಕಿ ಆಡಳಿತಾಧಿಕಾರಿಗೆ ರೆಫರ್ ಮಾಡಿದರು. ಆ ಅಧಿಕಾರಿ ಅದನ್ನು ಫೈಲ್‌ನಲ್ಲಿಟ್ಟು ಮೆಸೆಂಜರ್ ಮೂಲಕ ಆಡಳಿತಾಧಿಕಾರಿಗೆ ಕಳುಹಿಸಿಕೊಟ್ಟರು. ಪತ್ರ ಆಡಳಿತಾಧಿಕಾರಿಗೆ ತಲುಪಿ ಅವರು ಪತ್ರವನ್ನು ಓದಿ, ಲಂಡನ್‌ನಿಂದ ಬರಲಿರುವ ರೋಸೀ ಸ್ಮಿಥ್ ಅವರು ಉಳಿದುಕೊಳ್ಳಲು ಮನೆ, ಗಣಿಗಳನ್ನು ನೋಡಿಬರಲು ವಾಹನದ ವ್ಯವಸ್ಥೆ ಮತ್ತು ಮೈನಿಂಗ್ ಲೈಬ್ರರಿಯಲ್ಲಿರುವ ಪುಸ್ತಕಗಳು: ಗಣಿಗಳ ಇತಿಹಾಸ, ಮೈನಿಂಗ್ ವಿಜ್ಞಾನ, ಮೈನಿಂಗ್ ಬುಲೆಟಿನ್‌ಗಳು, ಸಂಚಿಕೆಗಳು ಮತ್ತು ಇತರ ವರದಿಗಳನ್ನು ಓದಲು ಅವಕಾಶ ಮಾಡಿಕೊಡುವಂತೆ ಆಯಾ ವಿಭಾಗಗಳಿಗೆ ಟಿಪ್ಪಣಿ ಬರೆದು ತಲುಪಿಸಿದರು. ನಂತರ ಎಂ.ಡಿ. ಬಂಗಲೆ ಕಾಂಪೌಂಡ್ ಒಳಗಿರುವ ವಿಶೇಷ ಅತಿಥಿ ಗೃಹವನ್ನು ಸಜ್ಜುಗೊಳಿಸಿ ಪ್ರತ್ಯೇಕ ಬಾಣಸಿಗನನ್ನು ಏರ್ಪಾಡು ಮಾಡುವಂತೆ ಮತ್ತು ಆಕೆಯ ಸಹಾಯಕ್ಕೆ ಒಬ್ಬರು ಮಹಿಳೆಯನ್ನು ನೇಮಿಸುವಂತೆ ಆಜ್ಞೆ ಮಾಡಿದರು.

***

ಹದಿನೈದು ದಿನಗಳಾದ ಮೇಲೆ ಸುವರ್ಣ ಭವನ ಕಛೇರಿಯಲ್ಲಿ ಎಂ.ಡಿ. ಕುಳಿತುಕೊಂಡಿದ್ದಾರೆ. ಬಿ.ಜಿ.ಎಮ್.ಎಲ್ ವಾಹನ ಸುವರ್ಣ ಭವನ ಕಚೇರಿಯ ಮುಖ್ಯ ಬಾಗಿಲು ಮುಂದೆ ಬಂದು ನಿಂತುಕೊಳ್ಳುತ್ತದೆ. ಮಿಸ್ ರೋಸೀ ಸ್ಮಿಥ್‌ಳನ್ನು ಅಧಿಕಾರಿಯೊಬ್ಬರು ಒಳಗೆ ಕರೆದುತರುತ್ತಾರೆ. ಒಳಗೆ ಬಂದ ಆಕೆ, “ಐ ಯಾಮ್ ರೋಸೀ ಸ್ಮಿಥ್” ಎಂದಿದ್ದೆ ಎಂ.ಡಿ. ಕೈಕುಲಕಿ “ವೆಲ್ಕಂ ಟು ಲ್ಯಾಂಡ್ ಆಫ್ ಗೋಲ್ಡ್” ಎನ್ನುತ್ತಾರೆ. ಎಂ.ಡಿ. “ಕಾಫಿ, ಜ್ಯೂಸ್, ಏನು ತೆಗೆದುಕೊಳ್ತೀರಿ?” ಎನ್ನುತ್ತಾರೆ. ರೋಸೀ “ಐ ಲೈಕ್ ಇಂಡಿಯನ್ ಫಿಲ್ಟರ್ ಕಾಫಿ” ಎನ್ನುತ್ತಾಳೆ. ಎಂ.ಡಿ. ನಗುತ್ತಾ “ಓ.. ರೈಟ್ ನೌವ್ ಓನ್ಲಿ ಕಾಫಿ. ಐ ವಿಲ್ ಅರೇಂಜ್ ಫಿಲ್ಟರ್ ಕಾಫಿ ಇನ್ ಯುವರ್ ಸೂಟ್” ಎನ್ನುತ್ತಾರೆ. ಕೋಣೆಯ ಮೂಲೆಯಲ್ಲಿ ನಿಂತಿದ್ದ ಸೇವಕನಿಗೆ ಎರಡು ಕಾಫಿ ತರುವಂತೆ ಆದೇಶಿಸುತ್ತಾರೆ.

ಮುಂದುವರಿದ ಎಂ.ಡಿ, “ನೀವು ಹದಿನೈದು ದಿನ ಇಲ್ಲಿ ಇರ್ತೀರಿ ಅಂತ ನಮಗೆ ಸುದ್ದಿ ಬಂದಿದೆ. ಯಾವ ಕೆಲಸದ ಮೇಲೆ ಅಂತ ನಾನು ತಿಳಿದುಕೊಳ್ಳಬಹುದೆ?” ಎನ್ನುತ್ತಾರೆ. ರೋಸೀ, “ಸಾರಿ. ಕೋಲಾರ ಚಿನ್ನದ ಗಣಿಗಳಲ್ಲಿ ಕೇವಲ ೧೦ ದಿನಗಳು ಮಾತ್ರ ನಾನು ಉಳಿದುಕೊಳ್ಳುತ್ತೇನೆ. ಉಳಿದ ಐದು ದಿನಗಳು ಕರ್ನಾಟಕದ ಪ್ರವಾಸಿ ಸ್ಥಳಗಳನ್ನು ನೋಡಿಕೊಂಡು ಇಂಗ್ಲೆಂಡಿಗೆ ವಾಪಸ್ ಹೋಗುತ್ತೇನೆ. ಕಮಿಂಗ್ ಟು ಫಸ್ಟ್ ಪಾರ್ಟ್. ನಮ್ಮ ಮೂಲಸ್ಥರು ಕೆಲವರು ಈ ಚಿನ್ನದ ಗಣಿಗಳಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ನಮ್ಮ ತಂದೆ, ಅಜ್ಜ ಇಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ಅಜ್ಜಿ ಕೆಜಿಎಫ್ ಬಗ್ಗೆ ಒಂದು ನಾಸ್ಟಾಲ್ಜಿಯಾ ಪುಸ್ತಕವನ್ನೇ ಬರೆದಿದ್ದಾಳೆ. ಅದನ್ನೆಲ್ಲ ಓದಿದ ಮೇಲೆ ಈ ಚಿನ್ನದ ಗಣಿಗಳನ್ನು ನೋಡಬೇಕು ಮತ್ತು `ಲಿಟ್ಲ್ ಇಂಗ್ಲೆಂಡ್’ ಬಗ್ಗೆ ಒಂದಷ್ಟು ಅಧ್ಯಯನ ಮಾಡಬೇಕು ಅಂತ ಆಸೆಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ರೂಟ್ಸ್ ಇಂಗ್ಲೆಂಡ್‌ನಲ್ಲಿದ್ದರೂ ನಮ್ಮ ಮೂಲಸ್ಥರು ಜಗತ್ತಿನ ಬಹಳಷ್ಟು ದೇಶಗಳನ್ನ ಆಳಿದ ಮತ್ತು ದೇಶಗಳನ್ನ ಕಟ್ಟಿದ ಸಾಹಸಗಾಥೆಗಳನ್ನ ನೋಡಬೇಕು ಎನಿಸಿತು.

…ಆಗಿನ ಜಗತ್ತೇ ಬೇರೆ ಈಗಿನ ಜಗತ್ತೇ ಬೇರೆ. ನಮ್ಮ ಹಿಂದಿನ ಇತಿಹಾಸವನ್ನು ತಿಳಿದುಕೊಳ್ಳುವುದು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿಗೆ ಬರುವುದಕ್ಕೆ ನನಗೆ ಯೂನಿವರ್ಸಿಟಿಯಿಂದ ಸಹಾಯ ಕೂಡ ಸಿಕ್ಕಿದೆ. ಮನುಷ್ಯ ಹುಟ್ಟಿದ ಮೇಲೆ ಏನಾದರು ಒಂದು ಒಳ್ಳೆಯ ಕೆಲಸ ಮಾಡಬೇಕು. ಏನೂ ಮಾಡದೆ ಹಾಗೇ ಸತ್ತೋದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ” ಎಂದಳು. ಎಂ.ಡಿ. “ಎಷ್ಟು ವಯಸ್ಸು ನಿಮಗೆ? ಓ! ಐ ಯಾಮ್ ಸಾರಿ ಹೆಣ್ಣುಮಕ್ಕಳ ವಯಸ್ಸು ಕೇಳಬಾರದಲ್ಲ? (ನಗುತ್ತಾ) ಆದರೆ ನೀವು ಇಷ್ಟು ವಯಸ್ಸಿಗೆ ಇಷ್ಟೆಲ್ಲ ಅಭಿಲಾಷೆಗಳನ್ನು ಇಟ್ಟುಕೊಂಡಿದ್ದೀರಲ್ಲ. ತುಂಬಾ ಸಂತೋಷ” ಎಂದರು. ರೋಸೀ ಸುಮ್ಮನೆ ನಕ್ಕಳು. ಕಾಫಿ ಬಂದು ಕಾಫಿ ಆಸ್ವಾಧಿಸಿದ ರೋಸೀ, “ನೈಸ್ ಕಾಫಿ” ಎಂದಳು.

ಎಂ.ಡಿ, “ನಿಮಗೆ ಏನು ಬೇಕೊ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಆದರೆ ಒಂದೇಒಂದು ಷರತ್ತು” ಎಂದರು. ರೋಸೀ, “ಏನು ಷರತ್ತು ಎಂದಳು” ಎಂ.ಡಿ. “ಕೊನೆಯಲ್ಲಿ ನೀವು ತಯಾರು ಮಾಡುವ ವರದಿಯ ಒಂದು ಕಾಪಿ ನಮಗೆ ಕೊಡಬೇಕು. ಅದನ್ನು ನಾವು, ನಮ್ಮ ಲೈಬ್ರರಿಯಲ್ಲಿ ಇಡುತ್ತೇವೆ” ಎಂದರು. ರೋಸೀ, “ಖಂಡಿತ ಕೊಡುತ್ತೇನೆ. it is my privilege’’ ಎಂದಳು. ಎಂ.ಡಿ, “ಇನ್ನೂ ಏನಾದರೂ ಇದೆಯಾ ಹೇಳುವುದು?” ಎಂದಿದ್ದಕ್ಕೆ ರೋಸೀ, “ನಮ್ಮ ಪೂರ್ವಜರನ್ನು ಹೂಳಿರುವ ಸಮಾಧಿಗಳನ್ನು ನೋಡಬೇಕು” ಎಂದಳು. ಎಂ.ಡಿ. “ಆಯಿತು. ಖಂಡಿತ ತೋರಿಸೋಣ. ಆದರೆ ಅವೆಲ್ಲ ಒಳ್ಳೆ ಪರಿಸ್ಥಿತಿಯಲ್ಲಿ ಇಲ್ಲ” ಎಂದು ಬೆಲ್ ಹೊಡೆದರು. ಅಧಿಕಾರಿ ಒಳಕ್ಕೆ ಬಂದು ರೋಸೀಯನ್ನು ಕೋಣೆಯಿಂದ ಹೊರಕ್ಕೆ ಕರೆದುಕೊಂಡು ಬಂದು, ಬಾಗಿಲಲ್ಲಿ ನಿಂತಿದ್ದ ವಾಹನದಲ್ಲಿ ರೋಸೀ ಕುಳಿತುಕೊಂಡಳು.

ಅಲ್ಲೇ ನಿಂತಿದ್ದ ಸಹಾಯಕನನ್ನು ರೋಸೀಗೆ ಪರಿಚಯಿಸಿ, “ಈತ ಮಣಿ, ನಿಮ್ಮ ಜೊತೆಗೆ ಬರುತ್ತಾನೆ. ಮಣಿ ಇವರನ್ನು ಎಂ.ಡಿ. ಅತಿಥಿ ಗೃಹಕ್ಕೆ ಕರೆದುಕೊಂಡೋಗು” ಎಂದರು. ಮಣಿ ಚಾಲಕನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ವಾಹನ ಅತಿಥಿ ಗೃಹದ ಕಡೆಗೆ ಹೊರಡುತ್ತದೆ. ತಕ್ಷಣವೇ ಎಂ.ಡಿ. ಆಡಳಿತಾಧಿಕಾರಿಗೆ ಫೋನ್ ಮಾಡಿ “ಮಿಸ್ ರೋಸೀ ಬ್ರಿಟಿಷರ ಸಮಾಧಿಗಳನ್ನು ನೋಡಬೇಕಂತೆ ಒಂದೋ ಎರಡೋ ಕಡೆ ಸ್ವಲ್ಪ ಕ್ಲೀನ್ ಮಾಡಿ ಇಟ್ಟುಕೊಳ್ಳಿ” ಎಂದು ಫೋನ್ ಇಟ್ಟರು. ಆಡಳಿತಾಧಿಕಾರಿ ಸೆಕ್ಯೂರಿಟಿಯನ್ನು ಕರೆದು ಎರಡು ಸಮಾಧಿಗಳ ಹೆಸರುಗಳನ್ನು ಹೇಳಿ ಅವುಗಳನ್ನು ಸ್ವಚ್ಛ ಮಾಡಿ ಇಡಿ. ಹಾಗೇ ಸಮಾಧಿಗಳ ಮೇಲಿರುವ ಕಲ್ಲುಗಳ ಮೇಲೆ ಅವರವರ ಹೆಸರುಗಳನ್ನು ಬರೆಯಲು ಸಾಧ್ಯವೇನೊ ನೋಡಿ” ಎಂದರು. ಆದರೆ ಅಧಿಕಾರಿಗೆ ಗೊತ್ತು ಅದರಿಂದ ಯಾವ ಪ್ರಯೋಜನವೂ ಇಲ್ಲವೆಂದು.

***

ರೋಸೀ ಇರುವ ವಾಹನ ಎಂ.ಡಿ.ಬಂಗಲೆ ಕಾಂಪೌಂಡ್ ಒಳಗಿರುವ ಸಣ್ಣ ಅತಿಥಿ ಗೃಹದ ಮುಂದೆ ನಿಂತುಕೊಂಡಿತು. ಮಣಿ, ರೋಸೀಗೆ ದಾರಿ ತೋರಿಸುತ್ತ ಅತಿಥಿ ಗೃಹದ ಹತ್ತಿರಕ್ಕೆ ಕರೆದುಕೊಂಡು ಹೋದ. ಅಲ್ಲಿ ಆಗಲೇ ಒಬ್ಬ ಆಂಗ್ಲೋ-ಇಂಡಿಯನ್ ಸಹಾಯಕಿ ಮತ್ತು ಬಾಣಸಿಗ ಕಾಯುತ್ತಿದ್ದರು. ಅವರಿಬ್ಬರು ರೋಸೀಯನ್ನು ಸ್ವಪರಿಚಯ ಮಾಡಿಕೊಂಡರು. ನನ್ನ ಹೆಸರು ಮೇರಿ, ಸಹಾಯಕಿ. ನಾನು ಜಾನ್ಸನ್ ಚೆಫ್ ಎಂದ. ಹತ್ತಿರಕ್ಕೆ ಬಂದ ಮಣಿ, “ವಾಹನ ಮತ್ತೆ ಯಾವಾಗ ಬರಬೇಕು? ಮ್ಯಾಮ್?” ಎಂದಾಗ ರೋಸೀ “ಅನಂತರ ತಿಳಿಸುತ್ತೇನೆ” ಎಂದು ಹೇಳಿ ಕಳುಹಿಸಿದಳು. ಮಣಿ ಗಣಿಗಳಲ್ಲಿ ೨೦ ವರ್ಷ ಅಂಡರ್‌ಗ್ರೌಂಡ್ ಕೆಲಸ ಮಾಡಿದ ಮೇಲೆ ಹತ್ತಾರು ಸಲ ಯಾವುದಾದರೂ ಕಛೇರಿಯಲ್ಲಿ ಕೆಲಸ ಕೊಡಿ ಎಂದು ವಿನಂತಿಸಿಕೊಂಡ ಮೇಲೆ ಕಛೇರಿಯಲ್ಲಿ ಸಹಾಯಕನಾಗಿ ಕೆಲಸ ಕೊಟ್ಟಿದ್ದರು. ಮಣಿಗೆ ನರಕದಿಂದ ಸ್ವರ್ಗಕ್ಕೆ ಬಡ್ತಿ ಸಿಕ್ಕಿದಂತಿತ್ತು.

ಸಹಾಯಕಿ ರೋಸೀ ಮತ್ತು ಅಡಿಗೆಯವನನ್ನು ಇನ್ನಷ್ಟು ವಿವರಗಳನ್ನು ಕೇಳಿ ತಿಳಿದುಕೊಂಡಳು. ಮೇರಿ, ರೋಸೀಗೆ ಅತಿಥಿ ಗೃಹದ ಒಳಗೆ ಕರೆದುಕೊಂಡು ಹೋಗಿ ಎಲ್ಲವನ್ನು ತೋರಿಸಿದಳು. ಜಾನ್ಸನ್, “ತಮಗೆ ಏನೇನು ಬೇಕು ಎಂದು ಮೊದಲೇ ಹೇಳಿದರೆ, ಬೇಕಾದದ್ದನ್ನು ತಯಾರು ಮಾಡಿಕೊಡುತ್ತೇನೆ” ಎಂದ. ಜಾನ್ಸನ್ ಗೋಡೆಯ ಮೇಲಿದ್ದ ಕಾಲಿಂಗ್ ಬೆಲ್ ತೋರಿಸಿ “ತಾವು ಈ ಬೆಲ್ ಒತ್ತಿದರೆ ಸಾಕು ನಾನು ಬರುತ್ತೇನೆ” ಎಂದ. ರೋಸೀ, “ಈಗ ಸ್ವಲ್ಪ ಹೊತ್ತು ರಿಲ್ಯಾಕ್ಸ್ ಆಗಿ ಆಮೇಲೆ ಕರೆಯುತ್ತೇನೆ” ಎಂದು ಹಾಸಿಗೆ ಮೇಲೆ ಉರುಳಿಕೊಂಡು, ಅಲ್ಲೇ ಗೋಡೆಯ ಮೇಲೆ ಹಾಕಿದ್ದ ನಕ್ಷೆಯನ್ನು ನೋಡಿ ಇಂಗ್ಲೆಂಡ್ ಎಲ್ಲಿ ಕೆಜಿಎಫ್ ಎಲ್ಲಿ ಎಂದುಕೊಂಡಳು. ಆಕೆಯ ಪೂರ್ವಜರು ಲಂಡನ್‌ನಿಂದ ಗೋವಾ ಇಲ್ಲವೇ ಮದ್ರಾಸಿಗೆ ತಿಂಗಳುಗಟ್ಟಲೇ ಹಡಗುಗಳಲ್ಲಿ ಬರುತ್ತಿದ್ದರು. ಆದರೆ ಈಗ ರೋಸೀ ಲಂಡನ್‌ನಿಂದ ಬೆಂಗಳೂರಿಗೆ ದೆಹಲಿ ಮೂಲಕ ಕೇವಲ 14 ಗಂಟೆಗಳ ಅವಧಿಯಲ್ಲಿ ಕೆಜಿಎಫ್ ತಲುಪಿದ್ದಳು.

(ಹಿಂದಿನ ಕಂತು: ಇನ್ನು ಮೇಲೆ ನಾವು ಮೂವರೇ)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ