ಪಿತೃಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಹಾನಿಯಾಗುವಂತೆಯೇ ಪುರುಷರೂ ಇದರ ಹೊರೆಯನ್ನು ಅನುಭವಿಸುತ್ತಾರೆ. ಇಂದಿಗೂ ಕೂಡ ಹುಡುಗರು ಅಥವಾ ಪುರುಷರೆಂದರೆ ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು; ಭಾವನಾಜೀವಿಯಾಗುವುದು ಅಥವಾ ಬಹಿರಂಗವಾಗಿ ಅಳುವುದು ಇವೆಲ್ಲಾ ದೌರ್ಬಲ್ಯದ ಲಕ್ಷಣಗಳು ಎಂದೇ ಭಾವಿಸಲಾಗುತ್ತದೆ. ಇಂದು ಅನೇಕ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಹುಡುಗ ಎಂದರೆ ಅಷ್ಟೇ ದುಡಿಯಬೇಕು; ಇಷ್ಟೇ ದುಡಿಯಬೇಕು ಎನ್ನುವ ಅವಾಸ್ತವಿಕ ನಿರೀಕ್ಷೆಗಳನ್ನು ಪೋಷಿಸಿ ಮದುವೆಯನ್ನೇ ವ್ಯಾಪಾರದ ಸರಕನ್ನಾಗಿ ಪರಿವರ್ತಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಯೇ!
ಮಹಿಳೆ ಮತ್ತು ಪುರುಷರ ಮೇಲಾಗುವ ಪಿತೃಪ್ರಧಾನ ವ್ಯವಸ್ಥೆಯ ಹೊರೆಗಳ ಕುರಿತು ನಮ್ರತಾ ಪೊದ್ದಾರ್ ಬರಹ ನಿಮ್ಮ ಓದಿಗೆ
ಇತ್ತೀಚಿಗೆ ನಾನು ಮಿಸ್ಸೆಸ್ ಹಾಗೂ ದಿ ಗ್ರೇಟ್ ಇಂಡಿಯನ್ ಕಿಚನ್ ಸಿನೇಮಾ ನೋಡಿದೆ. ನನಗೆ ಅದರ ಕಥೆ ಇಂದಿಗೂ ಸಮಂಜಸವೆನಿಸಿತು. ಆದರೆ ಕೆಲವರಿಗೆ ಈ ಚಿತ್ರಗಳಲ್ಲಿ ತೋರಿಸಿರುವ ಕೆಲವು ದೃಶ್ಯಗಳು ಅತಿರೇಕ ಅನ್ನಿಸಬಹುದು. ಪುರುಷರನ್ನು ವಿಲನ್ ರೀತಿ ಬಿಂಬಿಸಿದ್ದಾರೆ ಎಂದೂ ಅನ್ನಿಸಬಹುದು. ಆದರೆ ಸಮಾಜದಲ್ಲಿ ನೆಲೆಯೂರಿರುವ ವಾಸ್ತವ ಸಮಸ್ಯೆಗಳನ್ನು ತೋರಿಸುವಾಗ ಕೆಲವೊಮ್ಮೆ ಅತಿರೇಕದ ದೃಶ್ಯಗಳು ಅನಿವಾರ್ಯವಾಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪಿತೃಪ್ರಧಾನ ವ್ಯವಸ್ಥೆಯ ಕಾರಣದಿಂದ ಪುರುಷರೂ ಕೂಡ ಸಂಕಷ್ಟ ಅನುಭವಿಸುತ್ತಾರೆ. ಅಂಥ ಸಂಕಷ್ಟಗಳಲ್ಲಿ ಸಾರಾಸಗಟು ಪುರುಷ ದ್ವೇಷದ ಬಿಸಿಯನ್ನು ಸಮಾನತೆ ಬಯಸುವ ಪುರುಷರೂ ಅನುಭವಿಸಬೇಕಾದ ಪರಿಸ್ಥಿತಿಯೂ ಒಂದು.
ಪಿತೃಪ್ರಧಾನತ್ವದ ತಳಹದಿಯಲ್ಲಿ ಅಡಗಿಕೊಂಡಿರುವ ಇಂದಿಗೂ ಪ್ರಸ್ತುತವಿರುವ ಮನಸ್ಥಿತಿಗಳ ಬಗ್ಗೆ ಅವಲೋಕಿಸೋಣವೇ? ಒಬ್ಬ ಮಹಿಳೆ ಯಾವ ಪುರುಷನಿಗಿಂತಲೂ ಕಡಿಮೆ ಇಲ್ಲ, ಅವಳು ಏನನ್ನೂ ಸಾಧಿಸಬಲ್ಲಳು ಅಂತ ಹೇಳಿರುವುದಕ್ಕೆ ಲೆಕ್ಕವೇ ಇಲ್ಲ. ಆದರೆ ‘ಪುರುಷನು ಯಾವ ಮಹಿಳೆಗಿಂತ ಕಡಿಮೆ ಇಲ್ಲ, ಅವನು ಏನನ್ನೂ ಸಾಧಿಸಬಲ್ಲ’ ಎನ್ನುವ ಪ್ರಸಂಗ ಇತಿಹಾಸದಲ್ಲೇ ಇಲ್ಲ. ಇದರರ್ಥ ಅವಳಿಗೆ ಅವಳ ಗುರಿ ಸಾಧಿಸುವ ಸಹಜ ಸಾಮರ್ಥ್ಯ ಇಲ್ಲವೆಂದು ನೀವು ಭಾವಿಸಿದಂತಾಯಿತು. ಜೀವನದ ಯಾವುದೇ ಆಯಾಮ ಅಥವಾ ಉದ್ಯಮ ಕ್ಷೇತ್ರಗಳಲ್ಲಿ ಪುರುಷನಾಗಲಿ, ಮಹಿಳೆಯಾಗಲಿ ಸರಿಯಾದ ಅವಕಾಶ, ಬೇಕಾದ ಬೆಂಬಲ ಸಿಕ್ಕಲ್ಲಿ ಇಬ್ಬರಲ್ಲೂ ಗುರಿ ತಲುಪುವ ಸಹಜ ಸಾಮರ್ಥ್ಯವಿದೆ. ನನ್ನ ಸ್ನೇಹಿತೆಯೊಬ್ಬಳು ಅವಳ ಯಶಸ್ವಿಯಾದ ಉದ್ಯಮಕ್ಕೆ ತುಂಬ ಹೊಗಳಿಕೆ ಕೇಳುತ್ತಿದ್ದಳು; ಅದರ ಜೊತೆಗೆ ಕೆಲವು ಸಂಬಂಧಿಕರಿಂದ ಟೀಕೆಗಳು ಕೂಡ. ಅವಳ ಸಂಬಂಧಿ ಸಹೋದರರೊಬ್ಬರು ಅವಳನ್ನು ಸಮಾಧಾನಿಸುತ್ತಾ “ಒಳ್ಳೆಯ ಕೆಲಸಕ್ಕೆ ಟೀಕೆಗಳು ಬರುತ್ತವೆ, ಅದಕ್ಕೆ ಬೇಜಾರು ಮಾಡಿಕೊಳ್ಳಬೇಡಿ. ಅದರಲ್ಲೂ ಹೆಣ್ಣಾಗಿ ಸಾಧಿಸುವುದು ಸಾಮಾನ್ಯವೇ?” ಎಂದರು. ಹೆಣ್ಣಾಗಿ ಸಾಧಿಸುವುದು ಸಾಮಾನ್ಯವಲ್ಲ ನಿಜ. ಏಕೆಂದರೆ ಅವಳ ಸುತ್ತ ಆವರಿಸಿರುವ ಚೌಕಟ್ಟುಗಳು ಹಲವು. ಪುರುಷರ ಬಗ್ಗೆ ಬಂದಾಗ ಅವರ ಸಾಮರ್ಥ್ಯದ ಬಗ್ಗೆ ಪೂರ್ವನಿರ್ಧರಿತ ಭಾವನೆಯಿಲ್ಲ; ಆದರೆ ಮಹಿಳೆಯ ಬುದ್ಧಿಶಕ್ತಿಯ ಬಗ್ಗೆ ಜನರಿಗೆ ಅನುಮಾನ. ಅವಳು ಮಾಡಲು ಹೊರಟಿರುವ ಕೆಲಸದ ಬಗ್ಗೆ ಅವಳಿಗರಿವಿದೆಯೆ? ಅವಳು ಸರಿಯಾದ ನಿರ್ಧಾರ ತಗೆದುಕೊಂಡಿರುವಳೇ ಇತ್ಯಾದಿ. ಗಂಡು ಮಕ್ಕಳು ಹಾಗು ಹೆಣ್ಣು ಮಕ್ಕಳನ್ನು ಬೆಳೆಸುವ ವಾತಾವರಣ ಬೇರೆ ಬೇರೆಯಾಗಿದೆ ಎಂದಾಯಿತು.
ಒಂದು ಮಗು ಸೈಕಲ್ ತುಳಿಯಲು ಕಲಿಯಬೇಕಾದರೆ ಏಳು-ಬೀಳು ಸಹಜ. ಮಗು ಬಿದ್ದಾಗಲೆ ಸೈಕಲ್ ತುಳಿಯಲು ಕಲಿಯುವುದು ಹಾಗು ಅದರ ಮೇಲಿನ ಹಿಡಿತ ಇನ್ನೂ ಬಲವಾಗುವುದು. ನಾವು ಜೀವನದಲ್ಲಿ ಏನನ್ನೋ ಹೊಸದಾಗಿ ಕಲಿಯಲು ಪ್ರಯತ್ನಿಸಿದಾಗ ಸೋಲು ಸಹಜ. ಅದರಿಂದ ಪಾಠ ಕಲಿತು ತಿದ್ದಿಕೊಂಡಾಗಲೇ ನಾವು ಮತ್ತಷ್ಟು ಸಮರ್ಥರಾಗಲು ಮತ್ತು ಬಲಿಷ್ಠರಾಗಲು ಸಾಧ್ಯ. ಇಂತಹ ವಿವೇಕ ಜೀವನದಲ್ಲಿ ಮುನ್ನಡೆಯಲು ಅತ್ಯವಶ್ಯಕ. ಆದರೆ ಈ ಸ್ವಾತಂತ್ರ್ಯ ಎಲ್ಲ ಹೆಣ್ಣು ಮಕ್ಕಳಿಗೆ ಲಭಿಸದು. ಹೆಣ್ಣು ಮಕ್ಕಳನ್ನು ಭಯದ ವಾತಾವರಣದಲ್ಲಿ ಬೆಳೆಸುತ್ತಾರೆ. ಕಲಿಕೆಯ ಹಾದಿಯಲ್ಲಿ ಸಹಜ ತಪ್ಪು ಮಾಡಿ ಹಾಗೂ ಅದರಿಂದ ಪಾಠ ಕಲಿಯಲು ಅವಕಾಶ ಕೊಡದೆ, ಕಟ್ಟಳೆಗಳಲ್ಲಿ ಸಿಲುಕಿಸಿ ‘ಮಹಿಳೆ ಯಾವ ಪುರುಷನಿಗಿಂತಲೂ ಕಡಿಮೆಯಿಲ್ಲ’ ಎಂದೆನುವುದು ನ್ಯಾಯೋಚಿತವಲ್ಲ. ಹೌದು, ಮಹಿಳೆ ಪುರುಷನಿಗಿಂತ ಕಡಿಮೆಯಿಲ್ಲ; ಆದರೆ ಅವಳು ತನ್ನ ದಾರಿಯಲ್ಲಿ ಸಾಗುವಾಗ ಎದುರಿಸಬೇಕಾದ ಎಷ್ಟೊಂದು ಸವಾಲುಗಳಿರುತ್ತವೆ. ಅದರಲ್ಲಿ ಬೇಕು ಅಂತಲೆ ಕಷ್ಟಗಳನ್ನು ಒಡ್ಡಿ ಆ ದಾರಿಯನ್ನು ಕಠಿಣ ಮಾಡುವುದು ತಪ್ಪು. ಈ ಸಮಾಜಕ್ಕೆ ಮಹಿಳೆಯರು ನೀಡಿರುವ ಕೊಡುಗೆಗಳಿಗೆ ಲೆಕ್ಕವೇ ಇಲ್ಲ. ಮೇಡಮ್ ಕ್ಯೂರಿ, ಸಾವಿತ್ರಿಬಾಯಿ ಫುಲೆ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಹೀಗೆ ನೆನೆದರೆ ಎಷ್ಟೊಂದು ಶ್ರೇಷ್ಠ ವ್ಯಕ್ತಿಗಳು ಎಲ್ಲ ಮಹಿಳೆಯರಿಗೂ ದಾರಿದೀಪವಾಗಿದ್ದಾರೆ.

2023ರಲ್ಲಿ ಚಂದ್ರಯಾನ-3ರ ಯಶಸ್ವಿ ಉಡಾವಣೆಯಲ್ಲಿಯೂ ಕೂಡ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಆ ಸಂಭ್ರಮದಲ್ಲಿ ನಾನು ಮುಳುಗಿದ್ದಾಗ ನನ್ನ ಫೇಸ್ಬುಕ್, ವಾಟ್ಸಾಪ್‌ಗಳಲ್ಲಿ ಸಾಲಾಗಿ ಸುದ್ದಿಗಳು, ಮಹಿಳಾ ವಿಜ್ಞಾನಿಗಳ ಫೋಟೊಗಳು ಅದರ ಜೊತೆಗೆ ಕೆಲವರ ಅನಿಸಿಕೆಗಳು ಬರುತ್ತಿದ್ದವು. ಅದರಲ್ಲಿ ಅನೇಕ ಅನಿಸಿಕೆಗಳ ಸಾರ ಹೀಗಿದೆ: “ಇವರು ಸಾಮಾನ್ಯ ಮಹಿಳೆಯರಲ್ಲ, ಇಸ್ರೋ ವಿಜ್ಞಾನಿಗಳು… ಮೈಮೇಲೆ ಸೀರೆ, ಹಣೆಗೆ ಕುಂಕುಮ, ಕೊರಳಲ್ಲಿ ಮಂಗಳಸೂತ್ರ ಧರಿಸಿರುವ ಈ ಸಂಸ್ಕಾರವಂತ ಮಹಿಳೆಯರು ಸಾಮಾನ್ಯ ಗೃಹಿಣಿಯರಲ್ಲ; ಇತ್ತೀಚಿಗೆ ಚಂದ್ರಯಾನ-3ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳು! ಈ ಮಹಿಳೆಯರನ್ನು ನೋಡಿ ಇತರ ಹೆಣ್ಣು ಮಹಿಳಾಮಣಿಗಳು ಕಲಿಯಬೇಕಾದದ್ದು ಏನು ಅಂದರೆ ನೀವು ನಿಮ್ಮ ಸಂಸ್ಕಾರ ಮರೆಯಬೇಡಿ, ಪಾಲಿಸಿ.” ಇದನ್ನು ಓದಿದ ನಾನು ಬೆಚ್ಚಿ ಬಿದ್ದೆ. ಬೇರೆ ಮಹಿಳೆಯರು ಕಲಿಯಬೇಕಾಗಿದ್ದು ಇದಾ? ಅಯ್ಯೋ! ನಾನೆಲ್ಲೊ ಕಲಿಯಬೇಕಾದದ್ದು ಅವರ ಬುದ್ಧಿವಂತಿಕೆ, ಶ್ರಮ, ಶ್ರದ್ಧೆ, ಹಾಗೂ ಛಲ ಅಂದುಕೊಂಡಿದ್ದೆ. ಮಹಿಳಾ ವಿಜ್ಞಾನಿಗಳು ಸರಳವಾಗಿರುವುದು ಮೆಚ್ಚಬೇಕಾದ್ದೆ. ಅವರು ಭಾರತೀಯ ಉಡುಗೆ ತೊಟ್ಟದ್ದು ಚಂದವೆ. ಇಷ್ಟಕ್ಕು ಸಂಸ್ಕಾರ ಅಂದರೆ ಸೀರೆ, ಕುಂಕುಮ, ಮಾಂಗಲ್ಯ ಧರಿಸುವುದ? ಅವರು ಅಷ್ಟು ಮಹತ್ತರ ಸಾಧನೆ ಮಾಡಿದರೂ ಜನರ ಬುದ್ಧಿ ನೋಡಿದ್ದು ಬರಿ ಅವರ ಉಡುಗೆ-ತೊಡುಗೆ! ಆದರೆ ಅವರಿಂದ ನಾವು ಕಲಿಯಬೇಕಾಗಿದ್ದು ಇದು: ಹೆಣ್ಣು ಮಕ್ಕಳಿಗೆ ಅವಕಾಶ ಸಿಕ್ಕರೆ ಅವರು ತಮ್ಮ ಏಳಿಗೆಯ ಜೊತೆ, ದೇಶದ ಏಳಿಗೆಯೂ ಮಾಡಬಲ್ಲರು; ಸಮಾಜವನ್ನು ಮುನ್ನಡೆಸಬಲ್ಲರು. ಕುಂಕುಮ, ಸೀರೆ, ಅಥವಾ ಮಾಂಗಲ್ಯ ಧರಿಸುವುದು ಅವರ ಇಚ್ಛೆ ಆಗಿರಬೇಕೆ ಹೊರತು ಹೇರಿಕೆಯಾಗಬಾರದು. ಅದೆಲ್ಲ ಧರಿಸಿದರೆ ಮಾತ್ರ ಸಂಸ್ಕಾರ ಅನ್ನುವುದು ಸಂಕುಚಿತ ಬುದ್ಧಿ.
ಕಳೆದ ವರ್ಷ ‘ಕರಿಮಣಿ ಮಾಲಿಕ ಯಾರು’ ಅನ್ನುವ ರೀಲ್ ತುಂಬ ವೈರಲ್ ಆಗಿದೆ. ಏನದರ ಅರ್ಥ? ಮಹಿಳೆ ಪುರುಷನ ಸ್ವತ್ತೆ? ಮಾಂಗಲ್ಯ ಅನ್ನುವುದು ಮದುವೆಯ ಸಾಂಕೇತಿಕವಾಗಿ ತೊಡುವ ಆಭರಣ ಅಷ್ಟೆ. ಅದನ್ನು ಧರಿಸುವುದು ಬಿಡುವುದು ಸ್ತ್ರೀಯ ಆಯ್ಕೆ. ಇದಲ್ಲದೆ ಮದುವೆ ಎಂಬುದು ಒಂದು ಗಂಡು ಹೆಣ್ಣು ಪರಸ್ಪರ ಒಪ್ಪಿಕೊಂಡು ಗೌರವ ಪ್ರೀತಿಯಿಂದ ಬಾಳುವ ಒಂದು ಸುಂದರ ಸಂಬಂಧವೇ ಹೊರತು ಯಾವ ವಸ್ತು ಆಭರಣದಲ್ಲಿಯು ಅಡಗಿಲ್ಲ. ಹಾಗೇನಾದರೂ ಇದ್ದಿದ್ದರೆ ಪುರುಷರಿಗೂ ಮದುವೆ ಸಾಂಕೇತಿಕವಾಗಿ ಆಭರಣ ತೊಡುವುದು ಕಡ್ಡಾಯವೇಕೆ ಮಾಡಿಲ್ಲ? ಈ ರೀತಿಯಾಗಿ ಮಹಿಳೆಗೆ ಒಂದು ಮಾದರಿಯಾದ ಉಡುಗೆ-ತೊಡುಗೆ, ಆಭರಣಗಳ ಹೇರಿಕೆ ಮಾಡಿ ಅದನ್ನೆ ಅವಳ ವ್ಯಕ್ತಿತ್ವ ಎಂದು ಬಿಂಬಿಸಿ, ಅದರಾಚೆ ಅವಳು ಬೆಳೆದರೆ ಅವಳನ್ನು ಕೆಟ್ಟವಳಾಗಿ ನೋಡುತ್ತಾರೆ. ಇದಲ್ಲದೆ ಇನ್ನೂ ಎಷ್ಟೊಂದು ಮಾನಸಿಕ ಹಾಗು ದೈಹಿಕ ಕಟ್ಟಳೆಗಳು, ನಿರೀಕ್ಷೆಗಳು ಹೆಣ್ಣು ಮಕ್ಕಳನ್ನು ಸುತ್ತುವರೆದಿವೆ. ಹಲವಾರು ಮಹಿಳೆಯರಿಗೆ ಇಂದಿಗೂ ಬರಿ ಸಂಸಾರ ನೋಡಿಕೊಂಡು ಹೋಗುವುದೆ ಮೊದಲ ಆದ್ಯತೆಯಾಗಿದೆ. ಕೆಲಸಕ್ಕೆ ಹೋಗುವ ಹಲವಾರು ಹೆಣ್ಣು ಮಕ್ಕಳು ಮದುವೆಯಾದ ಮೇಲೆ ಕೆಲಸ ಬಿಡುವುದುಂಟು. ಸ್ವ-ಇಚ್ಛೆಯಿಂದ ಬಿಟ್ಟರೆ ಸರಿ; ಆದರೆ ಮನೆಯವರು ಒತ್ತಾಯಿಸಿ ಬಿಡಿಸುವುದು ತಪ್ಪಲ್ಲವೆ? ಹೋಗಲಿ ಮದುವೆಯಾದ ಮೇಲೆ ಕೆಲಸ ಮಾಡಿದರು ಮಗುವಾದ ಮೇಲೆ ಮಗುವಿಗೊಸ್ಕರ ಕೆಲಸ ಬಿಡುವುದು ಹೆಣ್ಣುಮಕ್ಕಳೆ. ಮಗುವಿನ ಲಾಲನೆ ಪಾಲನೆ ಗಂಡ ಹೆಂಡತಿ ಇಬ್ಬರ ಜವಾಬ್ದಾರಿಯಲ್ಲವೆ? ಕೆಲಸ ಬಿಟ್ಟು ಮತ್ತೆ ಕೆಲಸಕ್ಕೆ ಸೇರಬೇಕೆಂದರೆ ಎಷ್ಟೇ ಅಗಾಧ ಜ್ಞಾನವಿದ್ದರು ವೇತನ ಕಡಿಮೆ. ಅಸಮಾನ ವೇತನೆ, ಮನೆಯ ಜವಾಬ್ದಾರಿಗಳು, ಹೇರಿಕೆಗಳು ಮತ್ತಿನ್ನೆಷ್ಟೊ ಕಟ್ಟಳೆಗಳು ಮಹಿಳೆಯ ಒಟ್ಟಾರೆ ಅಭಿವೃದ್ಧಿಗೆ ಅಡೆತಡೆಗಳು. ಹೀಗಾಗಿ ಹಲವಾರು ಮಹಿಳೆಯರು ತಮ್ಮ ಕನಸಿನ ದಾರಿಯನ್ನು ತುಳಿಯುವುದಿಲ್ಲ. ಅವರ ಪ್ರತಿಭೆಗಳು, ಸಾಮರ್ಥ್ಯಗಳು ಬೆಳಕಿಗೆ ಬರದೆ ಸತ್ತು ಹೋಗುತ್ತವೆ. ಹೀಗೆ ಮಹಿಳೆಗೆ ಎರಡನೇ ದರ್ಜೆಯ ಸ್ಥಾನ ಕೊಟ್ಟಿರುವುದರಿಂದ ಅಸಮಾನ ವೇತನ, ಮಾನಸಿಕ ಹಾಗು ದೈಹಿಕ ದೌರ್ಜನ್ಯಗಳು, ವೇಶ್ಯವಾಟಿಕೆಯಂತಹ ಅನ್ಯಾಯಗಳು ಜರುಗುತ್ತಿವೆ.
ಪಿತೃಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಹಾನಿಯಾಗುವಂತೆಯೇ ಪುರುಷರೂ ಇದರ ಹೊರೆಯನ್ನು ಅನುಭವಿಸುತ್ತಾರೆ. ಇಂದಿಗೂ ಕೂಡ ಹುಡುಗರು ಅಥವಾ ಪುರುಷರೆಂದರೆ ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು; ಭಾವನಾಜೀವಿಯಾಗುವುದು ಅಥವಾ ಬಹಿರಂಗವಾಗಿ ಅಳುವುದು ಇವೆಲ್ಲಾ ದೌರ್ಬಲ್ಯದ ಲಕ್ಷಣಗಳು ಎಂದೇ ಭಾವಿಸಲಾಗುತ್ತದೆ. ಇಂದು ಅನೇಕ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಹುಡುಗ ಎಂದರೆ ಅಷ್ಟೇ ದುಡಿಯಬೇಕು; ಇಷ್ಟೇ ದುಡಿಯಬೇಕು ಎನ್ನುವ ಅವಾಸ್ತವಿಕ ನಿರೀಕ್ಷೆಗಳನ್ನು ಪೋಷಿಸಿ ಮದುವೆಯನ್ನೇ ವ್ಯಾಪಾರದ ಸರಕನ್ನಾಗಿ ಪರಿವರ್ತಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಯೇ! ಮದುವೆಯಾದ ನಂತರ ಬರುವ ಎಲ್ಲಾ ಜವಾಬ್ದಾರಿಗಳನ್ನು ಗಂಡು ಹೆಣ್ಣು ಸಮಾನವಾಗಿ ಹಂಚಿಕೊಂಡು ನಿರ್ವಹಿಸಬೇಕೇ ಹೊರತು ಗಂಡಸಿನ ಮೇಲೆಯೇ ಸಂಪೂರ್ಣ ಆರ್ಥಿಕ ಹೊರೆಯನ್ನೂ ಹೊರಿಸುವುದು ಅವನ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಒಂದು ಸಮಾಜವಾಗಿ ನಾವು ಯೋಚಿಸಬೇಕು.

ಸಮಾಜದ ಮನಸ್ಥಿತಿ ಈ ನಿಟ್ಟಿನಲ್ಲಿ ಬದಲಾಗಬೇಕು. ಮಹಿಳೆಗೆ ದಾನವಿ-ದೇವತೆ ರೂಪ ಬಳಿಯದೆ ಮನುಷ್ಯಳಾಗಿ ನೋಡಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ. ನೋಡೋಣ ಇಂತಹ ಆದರ್ಶ ಸಮಾಜ ಬರಲು ಇನ್ನೆಷ್ಟು ಮಹಿಳಾ ದಿನಗಳುರುಳಬೇಕು ಎಂದು!

ನಮ್ರತಾ ಪೊದ್ದಾರ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು ಮತ್ತು ಬರಹ ಎರಡರಲ್ಲೂ ಅಪಾರ ಆಸಕ್ತಿಯುಳ್ಳವರು. ವಿಜ್ಞಾನ, ಮಾನವೀಯತೆ, ಲಿಂಗ ಸಮಾನತೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ.
