ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ. ಆರ್ಕಿಡ್‌ಗಳು, ಕ್ಯಾಕ್ಟಸ್‌ಗಳ ಜೊತೆಗೆ ದೇಸೀ ಹೂಗಳಿಗೂ ಹೆಚ್ಚಿನ ಆಸಕ್ತಿ ಕೊಡಬೇಕಿದೆ. ಈ ಮಧ್ಯೆ ಹಬ್ಬ-ಹರಿದಿನ ಉತ್ಸವಾದಿಗಳಲ್ಲೂ ನೈಸರ್ಗಿಕ ಹೂಗಳ ಅಲಂಕಾರ ಹೋಗಿ ಕೃತಕ ಹೂವಿನ ಅಲಂಕಾರ ಬಂದಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ಮಂಜಿನ ನಗರಿ ಮಡಿಕೇರಿ ಎನ್ನುವುದೂ ಸರಿಯೇ; ಇದಕ್ಕೊಂದು ಪರ್ಯಾಯ ಹೆಸರು ಕೊಡಬಹುದಾದರೆ ಪುಷ್ಪ ನಗರಿ ಎನ್ನಬಹುದು. ಎಲ್ಲಿ ನೋಡಿದರಲ್ಲಿ ರಾಮ ಎನ್ನುವಂತೆ ಮಡಿಕೇರಿಯಲ್ಲಿ ಎಲ್ಲಿ ನೋಡಿದರೂ ಹೂಗಳೇ ಹೂಗಳು… ಕಾಡು ಹೂವಾದರೂ ಎಷ್ಟು ಸೊಗಸು. ಶಾಲೆಗೆ ಹೋಗುವಾಗ ಕಾಡು ಮಲ್ಲಿಗೆಯ ಪರಿಮಳವನ್ನು ಆಘ್ರಾಣಿಸಿ ಹೋಗುತ್ತಿದ್ದೆವು. ಗುಲಾಬಿ ಪರಿಮಳ ಮತ್ತೊಂದು ಅನುಭೂತಿ. ವಾಟರ್ ಲಿಲ್ಲಿ, ಜರ್ಬೆರಾ, ಗ್ಲಾಡಿಯೋಲ, ಪಾಪಿ, ಪೇಪರ್ ಫ್ಲವರ್ ಒಂದೇ ಎರಡೆ…… ಮುಂಗಾರು ಮಳೆಯ ಹಿತವಾದ ವಾತಾವರಣದಲ್ಲಿ ಬೆಚ್ಚಗೆ ಮನೆಯಲ್ಲಿ ಕುಳಿತು ನವಿರಾದ ಹೂವಿನ ಪರಿಮಳ ಆಘ್ರಾಣಿಸುವ ಪರಿಯ ಅನನ್ಯತೆಯ ಕುರಿತು ಏನೆನ್ನುವುದು. ಮುಂಗಾರು ಮಳೆಯ ಮಣ್ಣಿನ ಕಂಪಿನ ವಾತಾವರಣದಲ್ಲಿಯೆ ಮಡಿಕೇರಿಯ ರಾಜಾಸೀಟಿನಲ್ಲಿ ಫಲಪುಷ್ಟ ಪ್ರದರ್ಶನ ಏರ್ಪಡಿಸುತ್ತಿದ್ದರು. ಅದಕ್ಕೆಂದೇ ಮಡಿಕೇರಿಗರು ಕಾಯುತ್ತಿದ್ದೆವು.
ಅದೊಂದು ವಿಶಿಷ್ಟ ಅನುಭೂತಿ ರೈತ ಮಹಿಳೆಯರು, ಇಕೆಬಾನ ಶೈಲಿಯ ಹೂವುಗಳ ಜೋಡಣೆಯಂತೂ ಮತ್ತೊಮ್ಮೆ ಮಗದೊಮ್ಮೆ ನೋಡುವಂತಾಗಿಸುತ್ತಿತ್ತು. ಈ ಮೊದಲ ಮಳೆ ಬಂದ ತುಸು ದಿನಗಳಲ್ಲಿ ಹಳೆಯ ಕಾಂಪೌಂಡುಗಳ ಮೇಲೆ ನೀರು ಕಡ್ಡಿಗಳು ಬೆಳೆಯುತ್ತಿದ್ದವು. ಇದರ ವೈಜ್ಞಾನಿಕ ಹೆಸರು, ರೂಢಿಯ ಹೆಸರು ಗೊತ್ತಿಲ್ಲ. ಆ ನೀರು ಕಡ್ಡಿಗಳನ್ನು ಸಾಹಸ ಮಾಡಿ ಕಿತ್ತು ಸ್ಲೇಟು ಒರೆಸುತ್ತಿದ್ದೆವು. ಕೆಲವರು ಕೈಯಲ್ಲಿ ಒರೆಸುತ್ತಿದ್ದರು. ಇನ್ನು ಕೆಲವರು ಅದಕ್ಕೊಂದು ಬಟ್ಟೆ ತರುತ್ತಿದ್ದರು. ಈಗೆಲ್ಲಾ ಸ್ಲೇಟ್ ಬಳಪ ಇಲ್ಲ. ಸ್ಮಾರ್ಟ್ ಆಗಿವೆ. ಕೊಡಗಿನಲ್ಲಿ ಬೆಳೆಯುವ ಸಸ್ಯಗಳು ಬಯಲು ಸೀಮೆಯಲ್ಲಿ ಕಾಣಸಿಗುವುದಿಲ್ಲ. ಬೇಲಿ ಬೆಳೆಸಲು ಅಲ್ಲಿ ಬಳಸುವ ಹಚ್ಚ ಹಸುರಿನ ಸಸ್ಯವೆ ಚಂದ. ಮಡಿಕೇರಿಯ ಮನೆ ಮನೆಗಳಲ್ಲಿ ಹೂತೋಟ ಇದ್ದೇ ಇರುತ್ತದೆ. ನಾವು ಚಿಕ್ಕವರಿದ್ದಾಗ ರೋಸ್ ಗಿಡಗಳು ಇದ್ದವು; ಈಗ ಆಂತೋರಿಯಮ್, ಹಾಗು ಇತರೆ. ಮನೆ ಒಳಗೆ ಹೊರಗೆ ನೈಜ ಹೂಗಳೆ ಇರುತ್ತಿದ್ದವು. ಆದರೆ ಈಗ ಕೃತಕ ಹೂಗಳದ್ದೆ ಕಾರುಬಾರು.
“ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು. ಘಮ ಘಮ ಹೂಗಳು ಬೇಕೇ ಎನ್ನುತ ಹಾಡುತ ಬರುತಿಹಳು” ಬಿಳುಪಿನ ಮಲ್ಲಿಗೆ, ಹಳದಿಯ ಸಂಪಿಗೆ, ಹಸುರಿನ ಮರುಗ, ಹೊಸ ಸೇವಂತಿಗೆ ಹೊಸ ಇರುವಂತಿಗೆ ಅರಸಿನ ತಾಳೆ, ಅರಳಿದ ಹೊಸಕಮಲ, ಬಿಳುಪಿನ ಜಾಜಿ ಅರಳಿದ ಬಿಳಿ ಕಮಲ ಎಂದ ಪ್ರೊ. ಎಂ.ವಿ. ಸೀತಾರಾಮಯ್ಯನವರ “ಹೂವಾಡಗಿತ್ತಿ” ಪದ್ಯ ಹೆಚ್ಚಿನವರಿಗೆ ನೆನಪಿದೆ ಅನ್ನಿಸುತ್ತಿದೆ. ಇವುಗಳೆಲ್ಲ ದೇಸಿ ಹೂಗಳು ಇವುಗಳಲ್ಲಿ ಹೆಚ್ಚಿನವು ಈಗ ಬರೆಹದಲ್ಲಿ ಮಾತ್ರವೆ ಇವೆ. ಇಂದಿನ ಮಕ್ಕಳನ್ನು ಕೇಳಿದರೆ ಈ ಯಾವ ಹೂಗಳ ಹೆಸರಾಗಲಿ, ಪರಮಳವಾಗಲಿ ಅವರಿಗೆ ಗೊತ್ತಿಲ್ಲ. ದವನ ಗೊತ್ತ? ಗೊತ್ತಿಲ್ಲ… ಮರುಗ ಗೊತ್ತ? ಗೊತ್ತಿಲ್ಲ ಎನ್ನುತ್ತಾರೆ.. ಮುಡಿತುಂಬ ಹೂ ಮುಡಿಯೋ ಕಾಲ ಹೋಗಿ ಎಷ್ಟೋ ದಿನಗಳಾಗಿವೆ. ಹೂವಲ್ಲದ ಹೂ ಮುಡಿಯೋ ಕಾಲ ಇದು. ಥೇಟ್ ಹೂವನ್ನು ಹಾಗೆ ಇರುವ ಕಾಣುವ ಕೃತಕ ಹೂಗಳನ್ನು ಮುಡಿದು ಹಾಗೆ ಎತ್ತಿಡುವ ಕಾಲವಿದು. ಈ ಮಟ್ಟಿನ ಕೃತಕತೆ ಬಹಳ ಕಷ್ಟ ಅನ್ನಿಸುತ್ತದೆ. ಏನೋ ಡಾನ್ಸ್, ನಾಟಕ ಇದ್ದಾಗ ಮಕ್ಕಳಿಗೆ ಪೇಪರ್ ಹೂಗಳನ್ನು ಮುಡಿಸುತ್ತಿದ್ದು ಇದೆ. ಆದರೆ ಸಹಜವಲ್ಲದ್ದು ಸಹಜವಾಗಿ ಬದಲಾಗುತ್ತಿರುವುದು ಖೇದಕರ.
ಕೊಡಗಿನಲ್ಲಿ ಬೆಳೆಯುವ ಸಸ್ಯಗಳು ಬಯಲು ಸೀಮೆಯಲ್ಲಿ ಕಾಣಸಿಗುವುದಿಲ್ಲ. ಬೇಲಿ ಬೆಳೆಸಲು ಅಲ್ಲಿ ಬಳಸುವ ಹಚ್ಚ ಹಸುರಿನ ಸಸ್ಯವೆ ಚಂದ. ಮಡಿಕೇರಿಯ ಮನೆ ಮನೆಗಳಲ್ಲಿ ಹೂತೋಟ ಇದ್ದೇ ಇರುತ್ತದೆ. ನಾವು ಚಿಕ್ಕವರಿದ್ದಾಗ ರೋಸ್ ಗಿಡಗಳು ಇದ್ದವು; ಈಗ ಆಂತೋರಿಯಮ್, ಹಾಗು ಇತರೆ. ಮನೆ ಒಳಗೆ ಹೊರಗೆ ನೈಜ ಹೂಗಳೆ ಇರುತ್ತಿದ್ದವು. ಆದರೆ ಈಗ ಕೃತಕ ಹೂಗಳದ್ದೆ ಕಾರುಬಾರು.
ಮಲ್ಲಿಗೆ ದಂಡೆಗೆ ಕಲರ್ ಪೇಂಟ್ ಸ್ಪ್ರೇ ಮಾಡೋ ಟ್ರೆಂಡ್ ಇತ್ತು. ಈಗ ತರಹೆವಾರಿ ಕೃತಕ ಹೂ ಕುಚ್ಚುಗಳನ್ನು ತಂದು ನಿಲ್ಲಿಸಿದೆ. ಹೂ ಬೆಳೆಯುತ್ತಾರೆ ಆದರೆ ಮುಡಿಯುವ ಹೂಗಳನ್ನಲ್ಲ; ಸೌಸವವಿಲ್ಲದ ಅಲಂಕಾರಿಕ ಹೂಗಳನ್ನು. ಸನ್ಮಾನಕ್ಕೆ ನಿಜ ಹೂವಿನ ಹಾರ ಹಾಕುವುದು ವಿರಳಾತಿವಿರಳವಾಗಿದೆ. ಮಣಿ ಮಾಲೆಗಳನ್ನು ಹಾಕಿ ಹಾಕಿ ಅದೊಂದಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗಿದೆ. ಈ ಎಲ್ಲವನ್ನು ಗಮನಿಸುತ್ತಿದ್ದರೆ ನಮ್ಮ ದೇಶಿ ಹೂಗಳನ್ನು ಬೆಳೆಯುವವರು ತೀರಾ ಕಡಿಮೆ ಎನ್ನಿಸುತ್ತದೆ. ಬೆಳೆದರೂ ಹೂವಿನ ಬೆಲೆ ಬಲು ದುಬಾರಿ. ಹಾಗಾಗಿ ಅದು ಕೈಗೆಟುಕದ ಕುಸುಮ ಅನ್ನುವುದು ದಿಟವಾಗಿದೆ.
ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ. ಆರ್ಕಿಡ್‌ಗಳು, ಕ್ಯಾಕ್ಟಸ್‌ಗಳ ಜೊತೆಗೆ ದೇಸೀ ಹೂಗಳಿಗೂ ಹೆಚ್ಚಿನ ಆಸಕ್ತಿ ಕೊಡಬೇಕಿದೆ. ಈ ಮಧ್ಯೆ ಹಬ್ಬ-ಹರಿದಿನ ಉತ್ಸವಾದಿಗಳಲ್ಲೂ ನೈಸರ್ಗಿಕ ಹೂಗಳ ಅಲಂಕಾರ ಹೋಗಿ ಕೃತಕ ಹೂವಿನ ಅಲಂಕಾರ ಬಂದಿದೆ. ಕುಸುಮಂ ವರ್ಣಸಂಪನ್ನಂ ಗಂಧ ಹೀನಂ ನಃ ಶೋಭತೆ ಎಂಬ ಮಾತಿನಂತೆ ಎಷ್ಟೇ ವರ್ಣರಂಜಿತವಾದ ಪುಷ್ಪವಾದರೂ ಪರಿಮಳವಿಲ್ಲದಿರೆ ಅದು ಅಷ್ಟು ಸೊಗಸದು. ಹಾಗಾಗಿ ನಮ್ಮ ದೇಸೀ ಸೌಸವ ಬೀರುವ ಪುಷ್ಪಗಳ ವೃದ್ಧಿಯ ಕುರಿತು ಗಂಭೀರ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ದೇಸಿ ಹೂಗಳನ್ನು ಬೆಳೆದರೆ ಮನೆ ಮುಂದೆ ಅಲಂಕಾರಕ್ಕೂ ಆಗುತ್ತದೆ ಪರಿಮಳಕ್ಕೂ ಆಗುತ್ತದೆ. ಈಗ ಮಾರುಕಟ್ಟೆಯಲ್ಲಿ ವಿದೇಶಿ ಹಣ್ಣು- ತರಕಾರಿಗಳು ಸುಲಭವಾಗಿ ಸಿಗುತ್ತವೆ. ಸ್ವದೇಶಿ ಸಿಗಲ್ಲ. ಹಾಗೆ ಹೂಗಳಿಗೂ ಆಗಬಹುದು. ಖಂಡಿತಾ ಈ ವಿಚಾರದಲ್ಲಿ ಎಚ್ಚರ ಬೇಕು “ಸೋಜುಗಾದ ಸೂಜು ಮಲ್ಲಿಗೆ…..” ಈ ಹಾಡು ಎಲ್ಲರ ಬಾಯಲ್ಲಿ ಇರುವಂಥದ್ದೆ. ಮಂಡೆಮ್ಯಾಲೆ ದುಂಡು ಮಲ್ಲಿಗೆ ಹೊತ್ತ ಶಿವನ್ನು ಸ್ತುತಿಸುವ ಹಾಡು ಮೈಸೂರು ಪ್ರದೇಶವನ್ನು ಸಂಕೇತಿಸುವ ಮಲ್ಲಿಗೆಯ ಎರಡು ಪ್ರಕಾರಗಳಾದ ಸೂಜು ಮಲ್ಲಿಗೆ ಮತ್ತು ದುಂಡುಮಲ್ಲಿಗೆಗಳನ್ನು ಹೇಳುತ್ತದೆ. ‘ಚೆಲ್ಲಿದರೂ ಮಲ್ಲಿಗೆಯಾ’ ಈ ಹಾಡೂ ಕೂಡ ಮಾದೇವನನ್ನು ಕುರಿತಾಗಿರುವುದು.. ಘಮಘಮಿಸುವ ಮಲ್ಲಿಗೆ ಮೊಗ್ಗಿನ ಜಡೆ ಹಾಕಿಸಿಕೊಳ್ಳುವುದು ಒಂದು ಸಂಭ್ರಮವಾಗಿತ್ತು, ಈಗ ಕೃತಕವಾಗಿದೆ. ಅದರ ಕುರಿತು ಆಸಕ್ತಿ ಕೂಡ ಇಲ್ಲ. ಇಲ್ಲಿ ದುಂಡು ಮಲ್ಲಿಗೆ ಸೂಜು ಮಲ್ಲಿಗೆ, ಶಂಕರಪುರಂ ಮಲ್ಲಿಗೆ ಹೀಗೆ ಅನೇಕ ಜಾತಿಯ ಮಲ್ಲಿಗೆ ಇವೆ. ಈ ಬಗ್ಗೆ ಅನೇಕರಿಗೆ ಗೊತ್ತಿಲ್ಲ ಬೆಳ್ಳಗಿರೋದೆಲ್ಲ ಮಲ್ಲಿಗೆ ಅನ್ನುವ ಹಾಗಾಗಿದೆ. ಮಲ್ಲಿಗೆ ಮಾತ್ರವಲ್ಲ ಎಲ್ಲಾ ದೇಸೀ ಹೂಗಳ ವಿಚಾರದಲ್ಲೂ ಅವಜ್ಞೆ ಇದೆ.
“ಪುಷ್ಪವಿಲ್ಲದೆ ಗಂಧನರಿಯಬಲ್ಲುದೆ” ಎಂದ ವಚನವಿದೆ. ಆದರೆ ಇದಕ್ಕೆ ಅಪವಾದವೆಂಬಂತೆ ಸುಗಂಧ ದ್ರವ್ಯಗಳಲ್ಲಿ, ಅಗರಬತ್ತಿಗಳಲ್ಲಿ ಟಾಲ್ಕಮ್ ಪೌಡರ್ಗಳಲ್ಲಿ, ರೂಮ್ ಫ್ರೆಷ್ನರ್‌ಗಳಲ್ಲಿ, ನೆಲ ಒರೆಸುವ ಫ್ಲೋರ್ ಕ್ಲೀನರ್‌ಗಳಲ್ಲಿ ಸುಗಂಧ ದ್ರವ್ಯಗಳನ್ನು ಬಳಸುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ.
ಹಬ್ಬಹರಿದಿನಗಳಲ್ಲಿ ಮಾತ್ರ ನಾವು ದೇಸಿ ಹೂಗಳನ್ನು ಬಯಸುತ್ತೇವಾದ್ದರಿಂದ ಅವುಗಳ ಬೆಲೆ ಬಲು ದುಬಾರಿ. ರಾಷ್ಟ್ರೀಯ ಹಬ್ಬಗಳು ನಾಡಹಬ್ಬಗಳು ಬಂದಾಗ ಲಕ್ಷಾಂತರ ರೂಗಳನ್ನು ವ್ಯಯಿಸಿ ವಿದೇಶಿ ಹೂಗಳ ಅಲಂಕಾರ ಮಾಡುವುದರ ಜೊತೆಗೆ ದೇಸಿ ಹೂಗಳ ಅಲಂಕಾರಕ್ಕೂ ಆದ್ಯತೆ ನೀಡಬಹುದು. ಫಲ-ಪುಷ್ಪ ಪ್ರದರ್ಶನಗಳಲ್ಲಿ ವಿದೇಶಿ ತಳಿಯ ಪುಷ್ಪಗಳ ಅಲಂಕಾರಕ್ಕೆ ಪ್ರೋತ್ಸಾಹ ಕೊಡುವುದರ ಜೊತೆಗೆ ದೇಸೀ ಪುಷ್ಪಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಪರಿಮಳವಿಲ್ಲದ ಹೂಗಳಿಗಿಂದ ಪರಿಮಳ ಯುಕ್ತ ದೇಸೀ ಹೂಗಳ ಬೆಳೆಗೆ ಯೋಜನೆ ಹಾಕಿಕೊಳ್ಳಬೇಕಾಗಿದೆ ಈಗಾಗಲೆ ಅನೇಕ ದೇಸೀ ಹೂಗಳು ನಗರೀಕರಣದ ಕಾರಣದಿಂದ ನೇಪಥ್ಯಕ್ಕೆ ಸರಿದಿವೆ. ನಮ್ಮ ಮುಂದಿನ ಪೀಳಿಗೆಗೂ ನಮ್ಮ ಸಹಜ ಸೌಸವ ಬೀರುವ ಪುಷ್ಪಗಳ ಪರಿಚಯ ಅತ್ಯಂತ ಅಗತ್ಯವಾಗಿದೆ. ‘ಕೈಗೆಟುಕದ ಕುಸುಮ’, ‘ಮುಗಿಲ ಮಲ್ಲಿಗೆ’ ಅನ್ನುವುದು ಕೇವಲ ನುಡಿಗಟ್ಟುಗಳಲ್ಲ ಬೆಲೆ ಏರಿಕೆಯ ಕಾರಣದಿಂದ ಪದಶಃ ಸತ್ಯವಾಗಿದೆ. ಆದರೆ ಪುಷ್ಪವಿಲ್ಲದೆ ಪರಿಮಳನರಿಯಬಹುದೆ ಅಯ್ಯಾ? ಅನ್ನುವ ಮಾತು ಸತ್ಯವಾಗಿದೆ. ತಾಂತ್ರಿಕತೆ ಇಷ್ಟು ಮುಂದುವರೆದಿರುವಾಗ ದೇಸಿ ಪುಷ್ಪಗಳ ವೃದ್ಧಿ ಕಷ್ಟಸಾಧ್ಯವಲ್ಲ ಎಲ್ಲರಲ್ಲೂ ಆಸಕ್ತಿ ಬೇಕಷ್ಟೆ! ನಿಜಪರಿಮಳ ಬೀರುವ ದೇಸಿ ಹೂಗಳ ಉಳಿವಿಗೆ ಪ್ರಯತ್ನಿಸೋಣ. ಹೂಗಳು ತಾವೂ ಅರಳಿ ಮುದುಡಿದ ಮನಸ್ಸುಗಳನ್ನೂ ಅರಳಿಸುತ್ತವೆ.
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.