Advertisement
ಪೂರ್ಣಚಂದ್ರ ತೇಜಸ್ವಿಯವರ ಮೂರು ಕವಿತೆಗಳು

ಪೂರ್ಣಚಂದ್ರ ತೇಜಸ್ವಿಯವರ ಮೂರು ಕವಿತೆಗಳು

ತೇಜಸ್ವಿಯವರನ್ನು ಕವಿ ಅಂತ ಯಾರೂ ಆ ಕಾಲದಲ್ಲಿ ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಅದಕ್ಕೋ ಏನೋ ಅವರು ನಳಿನಿ ದೇಶಪಾಂಡೆ ಎಂಬ ಹೆಸರಿನಲ್ಲಿ ಮೊದಲು ಕವಿತೆ ಬರೆಯುತ್ತಿದ್ದರು. ತೇಜಸ್ವಿಯವರು ಬಹಳ ವರ್ಷಗಳ ಹಿಂದೆ ಅವರ ನಿಜವಾದ ಹೆಸರಿನಲ್ಲಿ ಬರೆದ ಮೂರು ಅಪರೂಪದ ಕವಿತೆಗಳು ಇಲ್ಲಿವೆ. 

 

 

 

 

 

 

ಯೂನಿವರ್ಸಿಟಿ ಕವಿ

ಲಿಪ್‌ಸ್ಟಿಕ್ಕು, ಲಿಂಗ್ವಿಸ್ಟಿಕ್ಕು,
ಕೆಮಿಸ್ಟ್ರಿ, ಜ್ಯಾಮೆಟ್ರಿ,
ಯೂನಿವರ್ಸಿಟಿ ಪೊಯಿಟ್ರಿ.

ಅಹಹಹ, ವಹವ್ವಾ
ಎದೆಗುದಿತ ಎರೆಯಲೆರಕ
ಎಲಿಯಟ್ಟಿನ ಗೋಲಕ.

ಮೂವ್ವತ್ತರ ಹರೆಯದಲ್ಲು
ಮರೆಯದ ಭಂಗಿಮಾತ್ರ.
ಬಾಯ್ ಬೆರಳಿನ ಬಾಲಕ
ಮೂರ್ಖ——-

ಎಂದೆ ನಾನು ಯಾರಿಗೊ;
ಆ ಅವನೊಡನೆ ನನಗು ಕೂಡಿ
ಅಂದೇ ಬಿಡಿ ದಿsಕ್ಕಾರ:

ಬೆರಗು ಈಗ ಅರಗಿನ ಮನೆ!
ಉಸುರಲ್ಲಿ ಹತ್ತರ್ಥ ಹುಗಿಸಿ
ನಡೆಸುವೀ ಕುಸುರಿ ಕೆಲಸಕ್ಕೆ
ಹೇಸಿದ್ದೇನೆ–ಈಗ;

ಪೆಚ್ಚುಗೊಳಿಸುವುದರಲ್ಲೇನು
ಹೆಚ್ಚುಗಾರಿಕೆ ಇತ್ತು?
ವ್ಯರ್ಥ ಚತುರೋಕ್ತಿಗಳ
ಮೆಚ್ಚಿಕೊಂಡವರ ಕಂಡೆನಲ್ಲ!

ಕೀಲುಗೊಂಬೆಯ ಪಕ್ಕ
ಸಜೀವ ಕವನಕ್ಕೆ,
ನಾಡಿಯಾಡುವ ಜಾಡ ನೋಡಬಲ್ಲ
ಬಲ್ಲಿದ ಮಾತ್ರ ಸಿಕ್ಕಲಿಲ್ಲ!
ಪಂಚೇಂದ್ರಿಯ ಗ್ರಸ್ತ
ನಗು ಹಾಸ ಕೋಪತಾಪಪ್ರವೀಣಸ್ಥಿಮಿತ ಚಿತ್ತ;

(ಲಹರಿ-೧, ೧೯೬೪)

 

 

 

 

 

 

೨. ನವಯತ್ನ ಕಲ್ಪ ಅಥವ ನವ್ಯ ವಿಮರ್ಶಕನಿಗೆ

ಕಾಲ ಕಾಲಕ್ಕೆ ಸರಿಯಾಗಿ ಸ್ಥಳದಲ್ಲಿರಲು
ಸಂಚರಿಸುತ್ತಾರೆ ಇವರು ಯಾವಾಗಲು
ಹತ್ತಿ ಮೋಟಾರು ಸ್ಕೂಟರು ರೈಲು
ಇಂತಿಂಥ ಊರ ಇಂತಿಂಥ ಹೋಟಲಿನ
ತಂತಿ ವಿಳಾಸ, ಇಂತಿಷ್ಟೆ ನಂಬರಿನ ಫೋನು
ಇತ್ಯಾದಿ ಸಮಗ್ರ ಸುದ್ದಿಗಳನ್ನು ಪ್ರಕಟಿಸಿ
ಇಂತಿಂಥವಕ್ಕೆ ಇವರಲ್ಲಿಯೇ ವ್ಯವಹರಿಸಿ:
ಎಂದು ಕೊಡುತ್ತಾರೆ ಎದೆ ತಟ್ಟಿ, ಉದ್ದುದ್ದ ಪಟ್ಟಿ.

ವಾತ, ಪಿತ್ತ, ಕಫ, ಛಳಿ, ಛಳುಕು
ಅತಿ ಭಾವುಕತೆ; ಪ್ರಾಸಕ್ಕೆ ದಾಸರಾಗುವುದು,
ಅನಗತ್ಯ ಚಿತ್ತೋನ್ಮಾದ ಹಾಗೂ
ರಕ್ತನಾಳಗಳಲ್ಲಿ ಛಂದಸ್ಸಿನೊತ್ತಡ
ಕೀಲು ಕೀಲುಗಳಲ್ಲಿ ಸಂಸ್ಕೃತದ ಕಿರಿಕಿರಿ.
ಇಷ್ಟೇ ಅಲ್ಲಯ್ಯಾ, ನಿನ್ನ ಗುಹ್ಯಾಂಗಗಳಲ್ಲಿ ಮೊಳೆವ
ಆತ್ಮೀಯರಿಗೆ ಮಾತ್ರ ಪಿಸುಮಾತಲ್ಲುಸುರುವ
ಒಳ ಪ್ರಜ್ಞೆಯಪಸ್ಮಾರಗಳಿಗೂ ಇವೆ ಇವರ ಬಳಿ

ಲೀವೀಸ್ ಎಲಿಯಟ್ ಇತ್ಯಾದಿಯಾದ
ಹೊರದೇಶದೇಳು ಕೊರಳುಗಳ
ಅಪೂರ್ವ ಸಂಯೋಗ, ಅದೇ ನವಯತ್ನ ಕಲ್ಪ,
ಇದನರಿತೆಯೋ ಕವಿ ಕಿಶೋರ; ನೀನಲ್ಲ ಅಲ್ಪ.
ಮಠ ಗುಂಪು ಪಟಾಲಂಗಳನು ಕಟ್ಟಿ
ಅದೀಯೇ ನೀನೂ ಜಗಜ್ಜಟ್ಟಿ.

(೧೯೬೭)

 

 

 

 

 

 

೩. ಜಗ್ಗದ ಜಗದ್ಗುರು

ಕಾಮಿನಿ ಕಾಂಚನ ತೊರೆದಿದ್ದಾನೊ?
ಪರಿಕಿಸದಿದ್ದರೆ ವಂಚಿತ ನಾನು!
ಇಂದೇ ನೋಡುವೆನೆಂದೇ ನರೇಂದ್ರ
ಹಾಸಿಗೆಯೊಳಗಡೆ ರೂಪಾಯೊಂದ
ಹುದುಗಿಸಿ ನಡೆದ; ಮರೆಯಿಂದ ||೧||

ರಾಮಕೃಷ್ಣರು ಮುಟ್ಟಿದ ಕೂಡಲೆ
ಮುಟ್ಟಿದ ಹಾಗೆ ಕೆಂಡದ ಕಡಲ
ಹಾಸಿಗೆ ಪರಿದಿsಯಾಚೆಗೆ ಹಾರಿ!
ನಿಂತರು ದಿಗ್ಭ್ರಾಂತರ ತರ ಹೌಹಾರಿ.
ಕೇವಲ ಯಃಕಶ್ಚಿತ್ ಒಂದೇ ರೂಪಾಯಿ
-ಗೆ ಹೆದರಿದನಲಾ ಈ ಅವತಾರಿ! ||೨||

ಆದರೆ ನೋಡಿ ನಮ್ಮ ಜಗದ್ಗುರು
ಆರಿಷಡ್ವರ್ಗಕೆ ಸೆಡ್ಡು ಹೊಡೆವರು!
ಕಾಮಿನಿ ಏನು! ಕಾಂಚನವೇನು!
ಆ ಪರಮಾತ್ಮನ ಲೀಲೆ ಇದೆಂದು
ಅಂಜದೆ ಅಳುಕದೆ ಸ್ವೀಕರಿಸುವರು.
ತಮ್ಮನು ತಾವೇ ಸಮರ್ಪಿಸುವರು. ||೩||

ರೂಪಾಯೊಂದಕೆ ತತ್ತರಗುಟ್ಟಿದ
ಕಾಳೀಮಾತೆಯ ಪುಕ್ಕಲು ಸಿಪಾಯಿ!
ಜಗ್ಗರು ಜಗ್ಗರು ನಮ್ಮ ಜಗದ್ಗುರು
ಪಲ್ಲಕ್ಕಿ ಇರಲಿ! ಅವಲಕ್ಕಿ ಇರಲಿ!
ಹಾಸಿಗೆಯೊಳಗೋ! ಹಾಸಿಗೆ ಮೇಲೋ!
ರೂಪಾಯಿರಲಿ! ರೂಪಸಿ ಇರಲಿ!
ಜಗ್ಗರು ಜಗ್ಗರು ನಮ್ಮ ಜಗದ್ಗುರು!! ||೪||

ಹಾಸಿಗೆಯೊಳಗಿನ ಕಾಸಿಗೆ ಹೆದರಿದ
ಪರಮ ಹಂಸರಿಗಿಂತಲು ಇವರು
ಪವಾಡ ಪುರುಷರು ಮಿಗಿಲಾದವರು!
ನೆತ್ತಿನ ಮೇಲೆ ಹೊತ್ತಿದ್ದಾರೆ
ವಜ್ರ ವೈಢೂರ್ಯದ ಹೊನ್ನ ಕಿರೀಟ!
ಪರಮ ಹಂಸನೂ; ಆ ಸಿದ್ಧಾರ್ಥನು
ಬಿಡೋ ಇವನೆದುರು ಕ್ಷುಲ್ಲಕ ಕೀಟ!
ಭಕ್ತವರೇಣ್ಯರಿಗಿವನೇ ಕೊಡುವನು
ಮೋಕ್ಷ ಪ್ರಾಪ್ತಿಗೆ ನೇರ ತಿಕೀಟ! ||೫||

(೧೯೭೨)
(ಕೃಪೆ: ಶ್ರೀಮತಿ ರಾಜೇಶ್ವರಿ ತೇಜಸ್ವಿ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ