ಅವನ ಮನೆಯಿಂದ ಹೊರಬಿದ್ದು ಆಫೀಸಿಗೆ ನುಗ್ಗಿ ಕಂದಸ್ವಾಮಿ ಸಾವ್ಕಾರ್ರನ್ನ ಭೇಟಿ ಮಾಡಲು ಕೇಳಿಕೊಂಡಳು. ಮ್ಯಾನೇಜರ್ ಸೀಟಿನಲ್ಲಿ ಕೂತ ಕಂದಸ್ವಾಮಿ ಎಲ್ಲವನ್ನೂ ಆಲಿಸಿದ. ಎರಡು ಬಾರಿ ಅನಿಮೇಶನಿಗೆ ಫೋನ್ ಮಾಡಿದರೂ ಅವನು ಫೋನ್ ಎತ್ತಲಿಲ್ಲ. ‘ನಿಂಗಾಗಿದ್ದು ಅನ್ಯಾಯ ಭಾಗಿ. ನಾನು ಇದನ್ನ ನ್ಯಾಯಯುತವಾಗೇ ಬಗೆಹರಿಸುತ್ತೇನೆ. ನಿನ್ನ ತಮ್ಮ ಬೇರೆ ಅನಾಹುತ ಕೆಲಸಗಾರ. ನಿಮ್ಮನ್ನು ಬಿಟ್ಟರೆ ನಮ್ಮ ಎಲಿಟ್ ರೆಸಿಡೆನ್ಸಿಯೇ ಇಲ್ಲ’ ಎಂದು ‘ಸಂಜೆ ಬಾ, ಎಲ್ಲವನ್ನೂ ಸರಿ ಮಾಡೋಣ. ಅನಿಮೇಶನ ಜುಟ್ಟು ಬಗ್ಗಿಸೋಣ’ ಎಂಬ ಧಾಟಿಯಲ್ಲಿ ಮಾತನಾಡಿದ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಬರೆದ ಈ ಭಾನುವಾರದ ಕತೆ “ರಸಮಲಾಯಿ” ನಿಮ್ಮ ಓದಿಗೆ

`ಭಾಡ್ಕೋವ್, ಏನಂತ ಸೇವ್ ಮಾಡೀಯಲೇ ನನ್ನ ಹೆಸರನ್ನಾ? ತಗೀ ನಿನ್ನ ಮೊಬೈಲು, ತೋರ್ಸು ಈಗಂದ್ರ ಈಗ‘ ಎನ್ನುತ್ತ ಅಡುಗೆ ಮನೆಗೆ ನುಗ್ಗಿದ ಭಾಗಿರ್ತಿ ಇನ್ನೇನು ಅನಿಮೇಶನ ಕಾಲರನ್ನು ಹಿಡಿಯಬೇಕು ಅನ್ನೋವಷ್ಟರಲ್ಲಿ ಒಲೆ ಮೇಲೆ ಇಟ್ಟಿದ್ದ್ ಛಾ ಉಕ್ಕಿ, ಛುಶ್ ಎಂದು ಸದ್ದು ಮಾಡಿ, ಜ್ವಾಲೆಗಳೂ ಪರಗುಟ್ಟಿ ಆ ಕ್ಷಣಕ್ಕೆ ಯುದ್ಧರಂಗವಾಗಬೇಕಿದ್ದ ಅನಿಮೇಶನ ಅಡುಗೆ ಮನೆ ಇದ್ದುದರಲ್ಲೇ ಥಂಡಾಯಿತು.

ಭಾಗಿರ್ತಿ ತನ್ನ ಕನ್ನಡ ಬೆರೆಸಿದ ಹಿಂದಿಯನ್ನು ಪೂರ್ತಿ ಮರೆತು, ಬೆಂಗಳೂರಿನ ಪಾಲಿಶ್ಡ್ ಕನ್ನಡವನ್ನೂ ಬದಿಗಿಟ್ಟು ಬಯಲುಸೀಮೆಯ ದುರಗವ್ವಳಾಗಿದ್ದಳು.

ಅನಿಮೇಶ ಥಟ್ಟನೆ ಸಂಭಾಳಿಸಿಕೊಂಡು `ಭಾಗೀ ಏಕ್ ಮಿನಿಟ್, ಪ್ಯಾಂಟ್ ಹಾಕಿ ಬರ್ತೀನಿ’ ಎಂದವನೇ ಬಾಕ್ಸರಿನಲ್ಲಿ ಅಡಗಿದೆ ಎಂದು ಅಂವ ತಿಳಿದಿದ್ದ ತನ್ನ ಮಾನ ಕಾಪಾಡಿಕೊಳ್ಳಲು ವಾಯುವೇಗದಲ್ಲಿ ಪಕ್ಕದ ಬೆಡ್ರೂಮಿಗೆ ನುಗ್ಗಿದ.

ಅನಿಮೇಶ ಪ್ಯಾಂಟನ್ನ ಹಾಕಿದ್ದಾನೋ ಇಲ್ಲವೋ, ಅವನ ಮಾನ ಮುಚ್ಚಿದೆಯೋ ತೆರೆದಿದೆಯೋ ಇದೆಲ್ಲ ನೋಡುವ ಸಮಯ, ಇಚ್ಛೆ ಭಾಗಿರ್ತಿಗೆ ಇದ್ದಂತಿರಲಿಲ್ಲ.

`ಏಯ್ ಹಲ್ಕಟ್, ಮಾಡಬಾರದ್ದು ಮಾಡಿ ಈಗ ಹಗಲುವೇಶ ಹಾಕ್ತಿಯೇನ್ಲೇ? ಅಪಾರ್ಟ್‌ಮೆಂಟಿನ ಆಪೀಸೀಗೇ ಹೊಂಟೇನಿ. ಸಾವ್ಕಾರ್ರು ಕಂದಸ್ವಾಮಿ ಎದ್ರೇ ಎಲ್ಲಾ ನಿಕಾಲಿ ಆಗ್ಲಿ. ಎದ್ಯಾಗ ನೀರಿದ್ದಂವ ಇದ್ದಿ ಅಂದ್ರ ಬಾ ಅಲ್ಲಿ’ ಬೆಡ್ರೂಮಿನ ಬಾಗಿಲಿಗೆ ಗುರಿಯಿಟ್ಟು ನಿಂತು ಇವಿಷ್ಟನ್ನ ಹೇಳಿ, ಚಪ್ಪಲಿಯನ್ನೂ ಅನಿಮೇಶನ ಹೊಸ್ತಿಲಲ್ಲೇ ಬಿಟ್ಟು ಏಣಿಯಿಳಿದು ನಡೆದಳು.

ಎಷ್ಟೋ ವರ್ಷಗಳಿಂದ ಎಲಿಟ್ ರೆಸಿಡೆನ್ಸಿ ಹಾಗೂ ಅದರ ಪಕ್ಕದ ಪಿ.ಡಿ. ನೆಸ್ಟ್ ಅಪಾರ್ಟ್‌ಮೆಂಟಿನ ಮನೆಗಳಲ್ಲಿ ಅಡುಗೆ ಕೆಲಸ ಮಾಡುತ್ತ ಸಂಜೆಯ ಸಮಯದಲ್ಲಿ ಒಂದಷ್ಟು ಹೊಲಿಗೆ – ರಿಪೇರಿ ಮಾಡುತ್ತ ತಮ್ಮ ರವಿಕಾಂತನೊಂದಿಗೆ ಬಿಡಾರ ಹೂಡಿಕೊಂಡಿದ್ದ ಭಾಗಿರ್ತಿ ಹೀಗೆಲ್ಲ ಆವೇಶ ಬಂದಂತೆ ಆಡಿದ್ದು ಕಡಿಮೆಯೇ.

ಬೆಳಗಿಂಜಾವದಿಂದ ಮಧ್ಯಾನ್ನ ಎರಡರವರೆಗೆ ಆರು ಮನೆಗಳಲ್ಲಿ ಅಡುಗೆ ಕೆಲಸ ಅವಳದ್ದು. ತರಕಾರಿ ಹೆಚ್ಚಿ, ರೊಟ್ಟಿ ಬಡಿದು, ಚಪಾತಿ ನಾದಿ, ಅದದೇ ಮನೆಯವರ ಸ್ವಾದಕ್ಕೆ ಅನುಸಾರವಾಗಿ ಚಹಾ ಸೂಪು ಜ್ಯೂಸುಗಳನ್ನು ಮಾಡುವ ಸೂಕ್ಷ್ಮ ಕೆಲಸಗಳಿಂದಾಗಿ ಭಾಗಿರ್ತಿ ಸ್ವಭಾವದಲ್ಲೂ ನಾಜೂಕಾಗಿದ್ದಳು. ಬಯಲುಸೀಮೆ ದಾಸನಕೊಪ್ಪದಿಂದ ಸುಮಾರು ವರ್ಷಗಳ ಹಿಂದೆ ಬಂದಾಗ ಆಡುತ್ತಿದ್ದ ಭಿಡೆ ಇಲ್ಲದ ಜವಾರಿ ಮಾತುಕತೆಗಳು ಬಹಳ ಬದಲಾಗಿದ್ದವು.

ಭಾಗಿರ್ತಿ ತಮ್ಮ ರವಿಕಾಂತನನ್ನು ಬಗಲಿಗೆ ಹಾಕಿಕೊಂಡು ಬೆಂಗಳೂರಿಗೆ ಬಂದದ್ದು ಕೂಡಾ ಒಂದು ಸ್ವಾರಸ್ಯವೇ. ಆ ಕತೆಯನ್ನು ಅವಳು ಈಗೀಗ ಮರೆತೇಬಿಟ್ಟಿದ್ದಾಳಾದರೂ ಬಂದ ಹೊಸತರಲ್ಲಿ, ನಂಬಿಕೆಗೆ ಯೋಗ್ಯ ಎಂದುಕೊಂಡವರಲ್ಲಿ ಅವಳು ಕತೆ ಹೇಳಿಕೊಂಡು ಮರುಗುವುದಿತ್ತು. ಜೀವನ ಹದಕ್ಕೆ ಬಂದದ್ದೇ ಪ್ರೀತಿ ಪ್ರೇಮ ಮೋಹವನ್ನೆಲ್ಲ ಗುಂಡಿ ತೋಡಿ ಹುಗಿದ ಮೇಲೆ ಎಂದು ವ್ಯಾಖ್ಯಾನಿಸುವುದಿತ್ತು.

ದಾಸನಕೊಪ್ಪದಲ್ಲೇ ಹುಟ್ಟಿ, ಎಂಟೊಬತ್ತು ತರಗತಿಯವರೆಗೆ ಶಾಲೆಗೆ ಹೋದ ಶಾಸ್ತ್ರ ಮಾಡಿ, ದಾಸನಕೊಪ್ಪದಲ್ಲೇ ಪ್ರಾಯಕ್ಕೆ ಬಂದು, ಅಪ್ಪ ಅಬ್ಬೆಯಿಲ್ಲದ ಪಾಪದ ತಮ್ಮನನ್ನು ನೋಡಿಕೊಳ್ಳುವ ನೆಪವೊಂದನ್ನೇ ಮುಂದುಮಾಡಿ ಹತ್ತಿರದ ಗೊಬ್ಬರದ ಫ್ಯಾಕ್ಟರಿಯಲ್ಲಿ ದಿನಕ್ಕೆ ಆರು ಗಂಟೆ ನಿಯತ್ತಿನಿಂದ ದುಡಿದು ಮಯ್‍ಕಯ್‌ ತುಂಬಿಕೊಂಡು ಹಾಯಾಗಿದ್ದವಳು ಭಾಗಿರ್ತಿ.

ಊರಿಗೆ ಹೊಸದಾಗಿ ಎಂಟ್ರಿ ಕೊಟ್ಟ ಟ್ರಾಕ್ಟರ್ ಧನ್ರಾಜನನ್ನು ಅವಳು ಬೇಕಂತ ನೋಡತೊಡಿದ್ದಲ್ಲ.

ಹೊಸ ಮನೆಗೆ ಇಟ್ಟಿಗೆ ಹೊಡೆಯುವುದಿರಲಿ, ಗದ್ದೆಗೆ ಗೊಬ್ಬರ ಸಾಗಿಸುವುದಿರಲಿ, ಸೊಸೈಟಿಗೆ ಭತ್ತ ಕಳಿಸುವುದಿರಲಿ, ರಸ್ತೆಗೆ ಮಣ್ಣು ಹಾಸುವುದಿರಲಿ ಹತ್ತು ಮೈಲಿ ದೂರದಿಂದ ಧನ್ರಾಜನ ಟ್ರಾಕ್ಟರ್ ದಾಸನಕೊಪ್ಪಕ್ಕೆ ಬರಲೇಬೇಕು. ಬೆಳಗಿನ ಟ್ರಿಪ್ಪುಗಳಿಗೆ ಶರಣು ಶರಣಯ್ಯ, ನೆಟ್ಟಮಧ್ಯಾನ್ನದಲ್ಲಿ ತುತ್ತಾ ಮುತ್ತಾ, ಸಂಜೆಯಾಗುತ್ತಿದ್ದಂತೆ ರಾಮಾಚಾರಿ ಹಾಡುವಾ ಲಾಲಿಹಾಡು ಕೇಳವಾ ಹಾಡುಗಳನ್ನ ಜೋರಾಗಿ ಹಾಕಿದ ಟ್ರಾಕ್ಟರು ದಾಸನಕೊಪ್ಪದ ರಸ್ತೆಗಳಲ್ಲಿ ಬಿಂದಾಸ್ ಹೋಗುತ್ತಿದ್ದರೆ ಊರವರು ಭಪ್ಪರೆ ಮಗನ! ಎನ್ನುತ್ತಿದ್ದರು.

ಗೊಬ್ಬರ ಫ್ಯಾಕರಿಯಲ್ಲಿ ಗಾಡಿ ಲೋಡಾಗುವಾಗ, ರಸ್ತೆಗೆ ಟ್ರಾಕ್ಟರಿನಿಂದ ಮಣ್ಣಿಳಿಸುವಾಗ ಶುರುವಾದ ಕಣ್ಣಿನ ಮಾತು ಭಾಗಿರ್ತಿಯ ಹೃದಯಕ್ಕಿಳಿಯಲು ತೆಗೆದುಕೊಂಡಿದ್ದು ಮೂರು ಮತ್ತೊಂದು ತಿಂಗಳುಗಳು ಮಾತ್ರ.

ಟ್ಯಾಕ್ಟ್ರು ಧನ್ರಾಜಂಗೆ ಮದುವ್ಯಾಗೈತಿ, ಅಂವ ಭಾರೀ ಚೈನೀ ಮನಷಾ, ಸ್ವಂತ್‌ ಬುದ್ಧಿ ಕಮ್ಮಿ ಅವಂಗ, ಹುಣ್ಮೀ ಚಂದ್ರನ ಹಂಗದೀ – ಅಮಾಸೀ ಬಾಳು ಮಾಡೂ ಫಜೀತಿ ನಿಂದೇನು ಅಂಬೋ ಊರವರ ಗೊಣಗಾಟ ಇನ್ನು ಸಾಕು ಎನ್ನುವ ಹಾಗೆ, ಒಂದು ಶುಭೋದಯ, ಊರಿನ ಅರಳೀಕಟ್ಟೆಯ ನಾಗರಕಲ್ಲುಗಳ ಎದುರು ಧನ್ರಾಜನಿಂದ ತಾಳಿ ಕಟ್ಟಿಸಿಕೊಂಡಳು ಭಾಗಿರ್ತಿ.

ಧನ್ರಾಜ ತನ್ನೂರಿನ ಕಡೆ ಮುಖ ಹಾಕದೇ ಭಾಗಿರ್ತಿಯ ಮನೆಯಲ್ಲೇ ಉಳಿದು ಟ್ರಾಕ್ಟರ್ ಕಾರಬಾರು ಮಾಡತೊಡಗಿದ. ಹಾಡಿನ ಹುಚ್ಚು, ಕೈ ಮಡಚಿದಾಗ ದಪ್ಪ ಕೋಳಿಮೊಟ್ಟೆಯುಬ್ಬಿಸುವ ತೋಳು, ಇಂಗ್ಲಿಶ್ ಹೆಸರಿನ ಸೆಂಟು ಇದೆಲ್ಲ ನೋಡಿದ ರವಿಕಾಂತನಿಗೆ ಬಾಮೈದನೇ ಹೊಸ ಹೀರೋ. ಬಚ್ಚಲ ತಟ್ಟಿಯಿಂದ ಬೆಳಗ್ಗೆ ಬರುವ ಸದ್ದುಗಳು, ಅಕ್ಕ ಊಟಕ್ಕೆ ಬಡಿಸುವಾಗ ಶುರುವಾದ ಹೊಸ ಕೊಮಣೆಗಳು, ಇದ್ದ ಒಂದೇ ಒಂದು ಫೈಬರ್ ಬಾಗಿಲಿನ ರೂಮು ಮಧ್ಯಾನ್ನವೂ ಮುಚ್ಚಿರುವುದು ಈ ಎಲ್ಲ ಸಂಗತಿಗಳು ರವಿಕಾಂತನಲ್ಲಿ ಯೌವನವನ್ನು ತುಸು ವೇಗವಾಗಿಯೇ ತಂದವು.

ಇದೆಲ್ಲ ನಾಲ್ಕು ದಿನದ ಭ್ಯಾಗವೆಂದು ಭಾಗಿರ್ತಿಗೆ ಗೊತ್ತಿದ್ದರೆ ಧನ್ರಾಜನನ್ನು ಇನ್ನಷ್ಟು ಸೂರೆ ಹೊಡೆಯುತ್ತಿದ್ದಳೇನೋ.

ಮಳೆಗಾಲ ಮುಗಿದು ಬಯಲುಗಳಿಂದ ಶೀತಗಾಳಿ ಬೆಳ್ಳಂಬೆಳಗ್ಗೆಯೇ ಬೀಸತೊಡಗಿತ್ತು. ಧನ್ರಾಜನಿಗೆ ಹೊಟ್ಟೆಯಿಂದ ನಡುಕ. ಮೂರುದಿನ ಹಾಸಿಗೆಯಲ್ಲೇ ಊಟ ತಿಂಡಿಗಳೆಲ್ಲವೂ. ನಾಲ್ಕನೆಯ ದಿನ ಉಗುರ ಸಂದುಗಳು, ಕಣ್ಣಿನ ಮೂಲೆ ಎಲ್ಲವೂ ಹಳದಿ ಹಳದಿ. ಹೊಟ್ಟೆಯಲ್ಲಿ ಮಾರುತವೆದ್ದಂತ ಸೆಳೆತ. ಅರಿಶಿಣ ಕಾಮಾಲೆಯೆಂದು ಡಾಕ್ಟರ್ ಹೇಳಿದ ಮೇಲೆ ಭಾಗಿರ್ತಿ ಪಥ್ಯದ ಅಡುಗೆಯನ್ನೇ ಮಾಡಿ ಮೂರೂ ಹೊತ್ತು ಧನ್ರಾಜನಿಗೆ ನಾಗಪಹರೆ ಇಟ್ಟಳು. ಒಂದು ವಾರದಲ್ಲಿ ಸ್ವಲ್ಪ ಚೇತರಿಕೊಂಡಿದ್ದ. ಒಂದು ಇಳಿ ಮಧ್ಯಾನ್ನ ಜಗಲಿಯಲ್ಲಿ ಕೂತು ಹಾಡು ಕೇಳುತ್ತ ಕೂತಿದ್ದ ಅವ. ಭಾಗಿರ್ತಿ ಜೀರಿಗೆ ಬತ್ತಿಸುತ್ತಿದ್ದಳು.

ಅಂಗಳದಲ್ಲಿ ಗಾಡಿ ಬಂದು ನಿಂತ ಸದ್ದು. ಭಾಗಿರ್ತಿ ಕಿಟಕಿಯಿಂದ ಇಣುಕಿದಾಗ ಕಂಡದ್ದು ಗಾಳಿ ಮರದಂತೆ ಎತ್ತರವಿರುವ, ಕೆಂಪು ಕಪ್ಪು ಸೆರಗನ್ನು ಸೊಂಟಕ್ಕೆ ಬೇಕಾಬಿಟ್ಟಿಯಾಗಿ ಸಿಕ್ಕಿಸಿ ಯಾವುದೋ ಧಾವಂತದ ಹೆಂಗಸು. ಗಾಡಿಯ ಸೈಡ ಸ್ಟಾಂಡ್ ಹಾಕಲೂ ಪುರುಸೊತ್ತು ಕಮ್ಮಿ ಎನ್ನುವಂತೆ ತಡಬಡಾಯಿಸುತ್ತಿರುವ ಚೌಕಳಿ ಲುಂಗಿಯ ಗಂಡಸು.

ಅಡುಗೆ ಜಾಗವನ್ನು ಜಗುಲಿಯಿಂದ ಬೇರ್ಪಡಿಸಿದ ಬೆಡ್ಶೀಟಿನ ಕರ್ಟನ್ನನ್ನು ಸರಿಸಿ ’ಯಾರು?’ ಅನ್ನುತ್ತ ಭಾಗಿರ್ತಿ ಇನ್ನೇನು ಹೊರ ಬೀಳಬೇಕು, ಆಗಲೇ ಜಗುಲಿಗೆ ಬಂದ ಇವರಿಬ್ಬರನ್ನು ನೋಡಿ ಧನ್ರಾಜ ಎದ್ದು ನಿಂತಿದ್ದ. ತನ್ನ ನಿಶ್ಶಕ್ತ ಕೈಯಿಂದ ಗೋಡೆ ಹಿಡಿದಿದ್ದ. ’ನಾಟ್ಕ ಸಾಕಾತೇಳು. ಯಾವಳಿಗೋ ಅರಳೀಕಟ್ಟೆಲ್ಲಿ ಮಾಲೀ ಹಾಕಿದ್ರೆ ನೀನೇನ್ ಆಕಿ ಯಜಮಾನಾದೀಯೇನು? ಹುಶಾರಿಲ್ದೇ ನೀನ್ ಬಿದ್ದಾಗ ನಿನ್ನ ತಲೀ ಮುಂಚಿ ಕೂತು ಕಾಲಾ ಜಾದೂ ಮಾಡಿದ್ಲಂದ್ರ ಆಕಿ ನಿನ್ ಯಜಮಾನ್ತಿ ಆಕ್ಕಾಳೇನು? ಇಂತಾವ್ ಭಾಳ್ ಕಂಡೇನ್ ನಾನು’ ಒಂದು ಕ್ಷಣ ಮಾತು ನಿಲ್ಲಿಸಿದಳು.

ಗಂಟಲನ್ನು ತನ್ನ ಕೈಯ್ಯೇ ಒತ್ತಿಹಿಡಿದಂತೆ ತ್ರಾಸು ಅನುಭವಿಸುತ್ತಿರುವ ಭಾಗಿರ್ತಿ ಒಂದೂ ಮಾತಾಡಲಿಲ್ಲ. ’ನಾಲ್ಕಾನೀ ಸಾಕಿದ್ನಂದ್ರೆ ಗಂಡ್ಸೇನೂ ಅರಸಾಂಗಗಿಲ್ಲ. ಅರಶ್ಣ ದಾರ ಕಟ್ಟಿಸ್ಕೊಂಡು ಕಾಲ್ ಕಿಸಿದ್ಬಿಟ್ಲಂದ್ರೆ ಹೆಂಗಸೇನೂ ಗರತ್ಯಾಗಂಗಿಲ್ಲ. ಮಾನಾ ಮರ್ಯಾದಿ ಐತಂದ್ರೆ ಬ್ಯಾರೆ ಹಾದಿ ಹಿಡ್ಕೊಂಡು ಹೋಗತ್ತಗ’ ಎಂದು ಒಂದೇ ಸಮನೆ ಮಾತಾಡಿ, ಭಾಗಿರ್ತಿಯನ್ನೇ ದಿಟ್ಟಿಸಿ ನೋಡಿದಳು ಹೆಂಗಸು. ಬವಳಿ ಬಂದತೆ ನಿಂತ ಧನ್ರಾಜನ ಕಂಕುಳಿಗೆ ಕೈಹಾಕಿ ಅನಾಮತ್ತು ಎತ್ತಿ ಬಾಗಿಲು ದಾಟಿಸಿದಳು. ಚೌಕುಳಿ ಲುಂಗಿಯ ಗಂಡಸು ಸಹಾಯ ಮಾಡಿದ.

ಮುಂದಿನ ಮೂವತ್ತು ಸೆಕೆಂಡುಗಳಲ್ಲಿ ಬೈಕಿನ ಮೇಲೆ ಧನ್ರಾಜ ಅವರಿಬ್ಬರ ನಡುವೆ ಅಪ್ಪಚ್ಚಿಯಾಗಿ ಕೂತಿದ್ದ. ನಂತರದ ಇಪ್ಪತ್ತು ಸೆಕೆಂಡುಗಳಲ್ಲಿ ಬೈಕು ಭಾಗಿರ್ತಿಯ ಅಂಗಳವನ್ನು ಹಾರಿಕೊಂಡು ಹೋಗಿತ್ತು.

ಕತ್ತಲು ಕವಿದ ಮೇಲೆ ಮನೆಗೆ ಬಂದ ರವಿಕಾಂತನಿಗೆ ಮಾತ್ರ ಬಾಗಿಲು ತೆಗೆದ ಭಾಗಿರ್ತಿ ಮನೆಯಿಂದ ಹೊರಬರಲೇಯಿಲ್ಲ. ಮೂರನೇ ಇರುಳು ಎಂಟು ಗಂಟೆಗೆ ಶುರುವಿಟ್ಟು ಬೆಳಗಿಂಜಾವದ ಹೊತ್ತಿಗೆ ಐವತ್ತು ಹೂರಣದ ಹೋಳಿಗೆ ಮಾಡಿ, ಬಾಡಿಸಿದ ಬಾಳೆ ಎಲೆಯಲ್ಲಿ ಕಟ್ಟಿಟ್ಟಳು. ಬೆಳಕಾಗುವ ಮೊದಲು ರವಿಕಾಂತನನ್ನು ಎಬ್ಬಿಸಿ ಸ್ನಾನ ಮಾಡೆಂದಳು. ಬಾಳೆಲೆಯಲ್ಲಿ ಕಟ್ಟಿಟ್ಟ ಹೋಳಿಗೆಯ ಪೊಟ್ಟಣ ಕೊಟ್ಟು ’ಇದು ಬ್ರಂಬಟ್ರಕೇರಿ ಗಾಳಿಮಾರಿ ಗುಡಿಗೆ ಹೋಳಿಗೆ ತೋರಣ. ಒಪ್ಸಿ ಬಾ’ ಎಂದಳು.

ದಾಸನಕೊಪ್ಪದ ಪಕ್ಕದ ಊರು ದನ್ನಳ್ಳಿಯ ಬ್ರಂಬಟ್ರಕೇರಿ ಗಾಳಿಮಾರಿ ಘಟಾನುಘಟಿ. ಇಲ್ಲಸಲ್ಲದ ಆರೋಪ ಬಂದು ತಲೆ ಎತ್ತಲಾಗದ ಸ್ಥಿತಿಯಲ್ಲಿದ್ದ ಹುಲು ಮಾನವರು ಈ ದೇವತೆಯನ್ನ ಬೇಡಿ, ಗುಡಿಯ ಬಾಗಿಲ ದಾರಂದಕ್ಕೆ ಹೋಳಿಗೆ ತೋರಣ ಕಟ್ಟಿ, ಕಾಪಾಡು ತಾಯೇ ಎಂದರೆ ಆ ಅಪವಾದವೆಲ್ಲ ಆಶೀರ್ವಾದವಾಗಿ ಬದಲಾಗುತ್ತದೆ ಎಂಬ ಅಪಾರ ನಂಬಿಕೆ. ಕಳ್ಳತನ, ವಂಚನೆ, ಹಾದರ, ಕೊಲೆ, ಮುಟ್ಟು, ಮಡಿ, ಮೈಲಿಗೆ, ಸುಳ್ಳು ಇಂಥವು ಏನೇ ಇರಲಿ, ಸತ್ಯ ಬೇರೆಯಿದ್ದರೆ ಎದೆ ಗಟ್ಟಿ ಮಾಡಿಕೊಂಡು ಹೋಳಿಗೆ ತೋರಣ ಮಾಡಿ ಶರಣಾಗುವುದೊಂದೇ ಆರೋಪಿಯ ಕೆಲಸ. ಬಾಕಿಯದೆಲ್ಲ ಗಾಳಿಮಾರಿಗೆ ಸಂತು.

ಒಡೆಯನ ಬಂಟ ನಂದಿಯೇ ಸ್ವಾಮಿದ್ರೋಹದ ಅಪವಾದಕ್ಕೆ ಸಿಕ್ಕಿ ಶಿವನ ಕೃಪೆಯನ್ನು ಮತ್ತೆ ಪಡೆಯಲು ಗಾಳಿಮಾರಿಯ ಮೊರೆ ಹೊಕ್ಕಿದ್ದ ಎನ್ನುವುದು ಈ ದೇವತೆಯ ಸತ್ಯವಂತೆ.

ರವಿಕಾಂತನಿಗೆ ಅಕ್ಕ ಮತ್ತೇನೂ ವಿವರಿಸುವುದು ಬೇಕಿರಲಿಲ್ಲ. ಅವನು ಗುಡಿಗೆ ಹೋಗಿ ಬಂದ ಕೆಲವು ಗಂಟೆಗಳಲ್ಲೇ ಅಕ್ಕ ತಮ್ಮ ಮನೆ ಬಿಟ್ಟು ನಡೆದಿದ್ದರು. ಹಾವೇರಿಯ ಮಾರ್ಗವಾಗಿ ಬೆಂಗಳೂರು ಸೇರಿದ್ದರು. ಭಾಗಿರ್ತಿ ಭಾಗಿಯೂ, ರವಿತೇಜನು ರವಿಯೂ ಆಗಿದ್ದರು.

ಬೆಳಗಿನ ಟ್ರಿಪ್ಪುಗಳಿಗೆ ಶರಣು ಶರಣಯ್ಯ, ನೆಟ್ಟಮಧ್ಯಾನ್ನದಲ್ಲಿ ತುತ್ತಾ ಮುತ್ತಾ, ಸಂಜೆಯಾಗುತ್ತಿದ್ದಂತೆ ರಾಮಾಚಾರಿ ಹಾಡುವಾ ಲಾಲಿಹಾಡು ಕೇಳವಾ ಹಾಡುಗಳನ್ನ ಜೋರಾಗಿ ಹಾಕಿದ ಟ್ರಾಕ್ಟರು ದಾಸನಕೊಪ್ಪದ ರಸ್ತೆಗಳಲ್ಲಿ ಬಿಂದಾಸ್ ಹೋಗುತ್ತಿದ್ದರೆ ಊರವರು ಭಪ್ಪರೆ ಮಗನ! ಎನ್ನುತ್ತಿದ್ದರು.

ಹಾಲಿಯಾಗಿ ಅನಿಮೇಶನ ಮೇಲೆ ಉರಿದುರಿದು ಬಿದ್ದ ಭಾಗಿರ್ತಿಯ ಕೋಪದ ಕತೆಯನ್ನು ಪೂರ್ತಿಯಾಗಿ ತಿಳಿಯಲು ಮತ್ತೂ ಸ್ವಲ್ಪ ಇತಿಹಾಸ ತಡಕಬೇಕು. ಅನಿಮೇಶನ ಮನೆಯಲ್ಲಿ ಅಡುಗೆ ಹ್ವಾರ್ಯವನ್ನು ಭಾಗಿರ್ತಿ ಶುರುಮಾಡಿ ಕೆಲವು ವರ್ಷಗಳು ಸಂದವು. ಇಡೀ ಮನೆಗೆ ಈ ಅನಿಮೇಶನೊಬ್ಬನೇ. ವರ್ಷದಲ್ಲಿ ಎರಡು ತಿಂಗಳು ಕೊಲ್ಕತ್ತಾದಿಂದ ತಾಯಿ ಬಂದು ಇವನ ಜತೆ ಇರುತ್ತಿದ್ದದ್ದು ಬಿಟ್ಟರೆ ಬಾಕೀ ದಿನವೆಲ್ಲ ಇವನಿಗೆ ಮಾತ್ರ ಅಡುಗೆ. ಬೆಳಗಿನ ತಿಂಡಿ, ಮಧ್ಯಾನ್ನಕ್ಕೆ ಮೂರು ಚಪಾತಿ, ಒಂದು ಸಬ್ಜಿ, ಬೌಲಿನ ತುಂಬ ದಾಲು, ಸೌತೇಕಾಯಿ ಗಾಲಿಗಳು. ದಿನವೂ ಇದಿಷ್ಟು ಮಾತ್ರ.

ಈ ಅಪಾರ್ಟ್‍ಮೆಂಟು ಕಟ್ಟಿದಾಗಿನಿಂದ ಇಲ್ಲೇ ಗೋಡೆಯೊಡೆದು ಅವತರಿಸಿದನೇನೋ ಎಂಬಂತೆ ಇದ್ದ ಅನಿಮೇಶ. ಅಪಾರ್ಟ್‌ಮೆಂಟಿನ ಓನರ್ಸ್ ಅಸೋಸಿಯೇಷನ್ನು ಆರಂಭಿಸಿದ್ದು ಕೂಡ ಇವನೆಯಂತೆ. ಅಲ್ಲಿನ ಕೆಲಸಗಳು, ಹಣಕಾಸು ವ್ಯವಹಾರಗಳು ಅನಿಮೇಶನ ಕಣ್ಣಿನ ಸರ್ತವೇ ನಡೆಯುತ್ತಿತ್ತು. ಅವನಿಗೆ ಸಾಕಷ್ಟು ವಿರೋಧಗಳೂ ಇದ್ದವು. ಗಾಳಿಸುದ್ದಿಗೇನು ಬರ? ಇದೇ ಅನಿಮೇಶ ನೊಯಿಡಾದಲ್ಲಿ ಮೂರು ಹುಡುಗಿಯರ ಜೊತೆ ಒಂದೇ ಮನೆಯಲ್ಲಿ ಇರುತ್ತಿದ್ದ; ಎರಡು ವರ್ಷದ ಕೆಳಗೆ ಆಫೀಸಿನಲ್ಲಿ ಕಲೀಗ್ ಒಬ್ಬಳ ಜತೆ ಅನುಚಿತ ವರ್ತನೆ ಮಾಡಿದ್ದರಿಂದ ಇವನ್ನು ಕೆಲಸದಿಂದ ತೆಗೆದರು ಎನ್ನುವುದರಿಂದ ಹಿಡಿದು ರಾತ್ರಿಯಿಡೀ ಬ್ಲೂ ಫಿಲಂ ನೋಡುತ್ತಾನೆ ಅವನು, ಬೆಳಗ್ಗೆ ನೀನು ಅಡುಗೆ ಮಾಡುವಾಗ ಹುಶಾರು ಎನ್ನುವಷ್ಟು ಧಾರಾಳ ಸಲಹೆಗಳು ಭಾಗಿರ್ತಿಗೆ ಬಂದಿದ್ದವು.

ಅಪಾರ್ಟ್‌ಮೆಂಟಿನ ಉಸಾಬರಿಯನ್ನು ಮೈಮೇಲೆ ಎಳೆದುಕೊಂಡು ಸದಾ ಫೋನಿನಲ್ಲಿ ಇರುತ್ತಿದ್ದ ಅನಿಮೇಶ ’ಭಾಗಿ, ಇಂತಿತಂದ್ದು ಮಾಡು’ ಎಂದು ಒಂದು ವಾಕ್ಯದಲ್ಲಿ ಹೇಳುತ್ತಿದ್ದ ಅಷ್ಟೇ. ಮೂವತ್ತನೇ ತಾರೀಖಿಗೆ ತಪ್ಪದೆ ಸಂಬಳ ಕೊಡುತ್ತಿದ್ದ. ಇಷ್ಟು ವರ್ಷಗಳಲ್ಲಿ ಆಗೀಗ ಸಹಾಯ ಕೇಳಿದಾಗ ತಪ್ಪದೇ ಮಾಡಿಕೊಡುತ್ತಿದ್ದ ಅನಿಮೇಶನನ್ನು ಬೇರೆ ದೃಷ್ಟಿಯಿಂದ ನೋಡುವ ಪ್ರಸಂಗ ಭಾಗಿರ್ತಿಗೆ ಇರಲಿಲ್ಲ. ಜೊತೆಗೆ ದೊಡ್ಡ ಮನುಷ್ಯರಿಗೆಲ್ಲ ಈ ಕಾರ್ಪಣ್ಯಗಳು ಜೀವನೌಷಧವಿದ್ದಂತೆ ಎಂದು ನಂಬಿದ್ದಳು ಅವಳು. ತಮ್ಮ ರವಿಗೆ ಅನಿಮೇಶನ ವಶೀಲಿಯನ್ನೇ ಹಚ್ಚಿ ಅಪಾರ್ಟ್‌ಮೆಂಟಿನ ಗಾರ್ಡನರ್ ಪಟ್ಟ ಕೊಡಿಸಿದ್ದಳು.

ಕೆಲವರ್ಷ ಗಾರ್ಡನರ್ ಆಗಿ ಕೆಲಸ ಮಾಡಿದ ರವಿ, ಇತ್ತೀಚೆಗೆ ತನ್ನ ಸುತ್ತಮುಲಿನ ಹುಡುಗರ ಗುಂಪು ಸೇರಿಸಿಕೊಂಡು ಅಪಾರ್ಟ್‌ಮೆಂಟಿಗೆ ನೀರು ಪೂರೈಸುವುದು, ಸೆಕ್ಯೂರಿಟಿ ಒದಗಿಸುವುದು ಇದೆಲ್ಲವನ್ನೂ ಹಚ್ಚಿಕೊಂಡ. ಅನಿಮೇಶನ ಅಭಯ ರವಿಗೆ. ಆಫೀಸಿನ ಕಾರುಬಾರು ನೋಡುವ ಕಂದಸ್ವಾಮಿಯ ಜತೆಗೆ, ನಿವಾಸಿಗಳ ಸುಖ ದುಃಖ ನೋಡುವ ಅನಿಮೇಶನ ಜತೆಗೆ ದಿನವೂ ಮಾತಾಡುವ ಅವಶ್ಯಕತೆ ರವಿಗೆ ಬೀಳುತ್ತಿತ್ತು.
ಕೆಲಸದಲ್ಲಿ ಭಡ್ತಿ ಸಿಕ್ಕಿದ ದಿನದಿಂದಲೂ ನಮ್ಮ ಸ್ಸರು, ನಮ್ಮ ಸ್ಸರು ಎಂದು ಮಾತಾಡುತ್ತಿದ್ದ ರವಿ ಈಗೊಂದು ವಾರದ ಹಿಂದಿನಿಂದ ಅಪಾರ್ಟ್‌ಮೆಂಟಿನ ಬಗ್ಗೆ ಜಾಸ್ತಿ ಹೇಳುತ್ತಿರಲಿಲ್ಲ. ಜತೆ ಕೆಲಸ ಮಾಡುವ ಹುಡುಗರೊಂದಿಗೆ ಗುಟ್ಟಾಗಿ ಫೋನಿನಲ್ಲಿ ಮಾತನಾಡುತ್ತಾನೆ ಎಂದು ಭಾಗಿರ್ತಿಗೆ ಆಗಾಗ ಅನ್ನಿಸುತ್ತಿತ್ತು.

ಯಾವುದೋ ಕೇಸಿಗೆ ಸಂಬಂಧಿಸಿ ಪೋಲಿಸರು ಎಲಿಟ್ ರೆಸಿಡೆನ್ಸಿಯ ಆಫೀಸಿಗೆ ಎಡತಾಕಿದ್ದರು ಎಂಬುದು ಬೇರೆಯವರ ಮುಖಾಂತರ ಭಾಗಿರ್ತಿಗೆ ಗೊತ್ತಾಗಿತ್ತು. ಸುತ್ತಿ ಬಳಸಿ ಆ ವಿಷಯವೆತ್ತಿದ್ದರೂ ರವಿ ಮಾತು ಬೆಳೆಸುವ ಉತ್ಸಾಹ ತೋರಿರಲಿಲ್ಲ. ಅವಳೂ ಹೆಚ್ಚು ಕೆದಕಲು ಹೋಗಲಿಲ್ಲ.
ಆದರೆ, ಹಿಂದಿನ ರಾತ್ರಿ ಊಟ ಮಾಡುವಾಗ ‘ನಮ್ಮ ಸ್ಸರು ನಾನೂ ನೀನೂ ತಿಳಿದಷ್ಟು ಸರಳಿಲ್ಲ ಬಿಡವ‘ ಎಂದು ಅಚಾನಕ್ಕಾಗಿ ಹೇಳಿದ್ದ. ಏನೂ ಏರಿಳಿತವಿಲ್ಲದ ಅವನ ದನಿ ಕೇಳಿ ಭಾಗಿರ್ತಿ ಅಚ್ಚರಿಗೊಂಡಳು. ‘ಯಾಕಪಾ? ಏನಾರಾ ಅಂದ್ರೇನು?‘ ಎಂದಳು. ಮತ್ತೈದು ನಿಮಿಷ ಮಾತಾಡಲಿಲ್ಲ ರವಿ. ತಟ್ಟೆಯ ಮೂಲೆಯಲ್ಲಿದ್ದ ಉಪ್ಪಿನಕಾಯಿಯನ್ನು ಇನ್ನಷ್ಟು ಮೂಲೆಗೆ ತಳ್ಳಿ ’ಹೊಸಲ ಮನಷಾ ಅಂವ. ಯಾಕೋ ಸರಿಬರಾಕತ್ತಿಲ್ಲ’ ಎಂದು ಸುಮ್ಮನಾದ. ತಟ್ಟೆ ಬಿಟ್ಟು ಎದ್ದೇಬಿಟ್ಟ.

ಭಾಗಿರ್ತಿಯ ಮೌನ ರವಿಯನ್ನು ಇನ್ನಿಲ್ಲದೇ ಚುಚ್ಚಿರಬೇಕು. ಒತ್ತುತ್ತಿದ್ದ ಮೊಬೈಲನ್ನು ಟೀವಿಯೆದುರು ಬಿಟ್ಟು ಅಕ್ಕನ ಬಳಿ ಬಂದ. ಹೋದ ವಾರದ ಘಟನೆಯನ್ನು ನೆನಪು ಮಾಡಿದ.

ಸುಮಾರು ಹತ್ತು ದಿನಗಳ ಹಿಂದೆ, ಸಂಜೆ ಏಳರ ಹೊತ್ತಿಗೆ ಅನಿಮೇಶನ ಮೊಬೈಲಿನಿಂದ ಭಾಗಿರ್ತಿಗೆ ಫೋನು ಬಂದಿತ್ತು. ರವಿ ಮಾತಾಡಿ ತನ್ನ ಫೋನು ಛಾರ್ಜಿಲ್ಲದೇ ಸತ್ತು ಮಲಗಿದೆಯೆಂದೂ, ಆಫೀಸಿನ ಕೆಲಸ ಮುಗಿದು ಮನೆಗೆ ಬರುವುದು ತಡವಾಗುತ್ತದೆಂದೂ ತನಗಾಗಿ ಕಾಯದೇ ಊಟ ಮಾಡಿ ಮಲಗು ಎಂದೂ ಅಕ್ಕನಿಗೆ ತಿಳಿಸಿದ್ದ. ಎಲ್ಲೋ ತಿಂಗಳಿಗೆ ಒಮ್ಮೆ ಹೀಗೆ ರವಿ ಫೋನು ಮಾಡುವುದೂ ತಡವಾಗಿ ಬರುವುದೂ ಹೊಸತಲ್ಲ.

’ಸ್ಸರು ಆಫೀಸ್ನಾಗೆ ಏನೋ ಕೆಲ್ಸದ ಮ್ಯಾಗಿದ್ರು, ಅವರೇ ಫೋನ್ ಮಾಡಿ ಕೊಟ್ಟಿದ್ದು ನಿಂಗೆ.’ ಮತ್ತೆ ನಿಲ್ಲಿಸಿದ.

ಭಾಗಿರ್ತಿ ರವಿಯ ಮುಂದಿನ ಮಾತಿಗೆ ಕಾಯದ ಹೊರತು ಮತ್ತೇನು ದಾರಿ?

ಸಟ್ಟನೆ ತಿರುಗಿ ಅಲ್ಲಿ ಅಡುಗೆ ಮನೆಯ ಮಾಡ್ಗುಣಿಯಲ್ಲಿ ಸಾಮಾನು ಚೀಟಿ ಬರೆಯುವ ಪೆನ್ನು ಹಾಳೆಯನ್ನೆತ್ತಿಕೊಂಡ. ಬರೆದು ಭಾಗಿರ್ತಿಯ ಮುಖದೆದುರು ಹಿಡಿದ.

`ನೋಡ… ಹಿಂಗಂತ ಸೇವ್ ಮಾಡ್ಯಾರ ನಿನ್ನ ನಂಬರ್ನ್ನಾ…’

ಭಾಗಿರ್ತಿ ಓದೇ ಓದಿದಳು. ಮತ್ತೆ ಮತ್ತೆ ಓದಿದಳು.

`ರೊಶೊಮೊಲೈವಾಲಿ’

ಇನ್ನೊಮ್ಮೆ ನಿಧಾನಕ್ಕೆ ಸಶಬ್ದವಾಗಿ ಓದಿದಳು `ರೊ.ಶೊ.ಮೊ.ಲೈ.ವಾ.ಲಿ’

ತಲೆಯೆಲ್ಲ ಧಿಂ ಅಂದು ತಮ್ಮನೆದುರು ಬರಿಮೈಲಿ ನಿಂತ ಅನುಭವ ಭಾಗಿರ್ತಿಗೆ. ತಲೆ ಎತ್ತಲೇ ಇಲ್ಲ ಅವಳು.

ಇನ್ನೊಂದು ಶಬ್ದ ಮಾತನಾಡಿದರೂ ಅಲ್ಲಿ ಸ್ಫೋಟವೊಂದು ಸಂಭವಿಸೀತು ಎಂಬಂತೆ ರವಿ ಆ ತಗಡಿನ ಮಾಡು ಹೊಚ್ಚಿದ ಮನೆಯಿಂದ ಹೊರನಡೆದಿದ್ದ.

ನಿದ್ದೆಯಿರದ ರಾತ್ರಿ ಕಳೆದ ಭಾಗಿರ್ತಿ ಮಾರನೇ ಬೆಳಗ್ಗೆ ಅನಿಮೇಶನ ಮನೆಗೆ ನುಗ್ಗಿ ದುರಗವ್ವಳಾಗಿದ್ದಳು.

ಅವನ ಮನೆಯಿಂದ ಹೊರಬಿದ್ದು ಆಫೀಸಿಗೆ ನುಗ್ಗಿ ಕಂದಸ್ವಾಮಿ ಸಾವ್ಕಾರ್ರನ್ನ ಭೇಟಿ ಮಾಡಲು ಕೇಳಿಕೊಂಡಳು. ಮ್ಯಾನೇಜರ್ ಸೀಟಿನಲ್ಲಿ ಕೂತ ಕಂದಸ್ವಾಮಿ ಎಲ್ಲವನ್ನೂ ಆಲಿಸಿದ. ಎರಡು ಬಾರಿ ಅನಿಮೇಶನಿಗೆ ಫೋನ್ ಮಾಡಿದರೂ ಅವನು ಫೋನ್ ಎತ್ತಲಿಲ್ಲ. ’ನಿಂಗಾಗಿದ್ದು ಅನ್ಯಾಯ ಭಾಗಿ. ನಾನು ಇದನ್ನ ನ್ಯಾಯಯುತವಾಗೇ ಬಗೆಹರಿಸುತ್ತೇನೆ. ನಿನ್ನ ತಮ್ಮ ಬೇರೆ ಅನಾಹುತ ಕೆಲಸಗಾರ. ನಿಮ್ಮನ್ನು ಬಿಟ್ಟರೆ ನಮ್ಮ ಎಲಿಟ್ ರೆಸಿಡೆನ್ಸಿಯೇ ಇಲ್ಲ’ ಎಂದು ’ಸಂಜೆ ಬಾ, ಎಲ್ಲವನ್ನೂ ಸರಿ ಮಾಡೋಣ. ಅನಿಮೇಶನ ಜುಟ್ಟು ಬಗ್ಗಿಸೋಣ‘ ಎಂಬ ಧಾಟಿಯಲ್ಲಿ ಮಾತನಾಡಿದ.

ಸಂಜೆ ಆರರವರೆಗೆ ಕಾದ ಭಾಗಿರ್ತಿ ಮತ್ತೆ ಬಂದಳು ಆಫೀಸಿಗೆ. ಬೆಳಗಿನ ಆವೇಶ ಕಳೆದಂತಿದ್ದಳು. ಬಾಗಿಲ ಬಳಿ ನಿಂತು ಕಂದಸ್ವಾಮಿಗೆ ಕಾದಳು. ಐದು ನಿಮಿಷದ ನಂತರ ದೇವರು ಕೃಪೆದೋರಿದಂತೆ ’ಅರೆ ಭಾಗಿರ್ತಿ, ನಿಂಗೇ ಕಾಯ್ತಾ ಇದ್ದೆ’ ಎಂದ. ಮಾತಿನಲ್ಲು ಬೆಳಗ್ಗೆಯಿಲ್ಲದ ಗತ್ತು ಇಣುಕುತ್ತಿತ್ತು.
`ಅನಿಮೇಶ ಸಾರ್ ಕೂಡ ಮಾತಾಡಿದೆ.’

`ರವಿ ನೋಡಿದ್ದು ಸುಳ್ಳೇ ಸುಳ್ಳು. ಅವನೇನು ಹೇಳಿದನೋ, ಇವಳೇನು ಕೇಳಿಸಿಕೊಂಡಳೋ. ಇದೆಲ್ಲ ಸುಳ್ಳು. ಮೊನ್ನೆ ಪೋಲಿಸರು ಬಂದಾಗ ರವಿಯನ್ನ ಉಳಿಸಿದ್ದೇ ನಾನು. ರವಿಯ ಪರ ನಾನು ಮಾತಾಡದೇ ಇದ್ದಿದ್ದರೆ ಅವನ ಜಾಮೀನಿಗಾಗಿ ಈ ಅಡುಗೆಯವಳು ಅಲೆಯಬೇಕಿತ್ತು. ಹದಿನಾರೂ ತುಂಬದ ಹುಡುಗನ ಬರ್ತ್ ಸರ್ಟಿಫಿಕೇಟನ್ನು ತಿದ್ದಿ ಇಲ್ಲಿ ಕೆಲಸಕ್ಕೆ ಹಚ್ಚಿದ್ದಾನೆ ಎಂಬ ಕಂಪ್ಲೈಂಟಿಗೆ ಮತ್ತೆ ಉತ್ತರ ಬರೆಯಲಾ ಎಂದು ಕೇಳಿಬಿಟ್ಟರು ಅನಿಮೇಶ್ ಸಾರ್. ನೋಡು ಭಾಗಿರ್ತಿ, ಇದನ್ನ ಎಳೆಯೋದು ಬೇಡ. ಇಷ್ಟಕ್ಕೇ ಬಿಡೋದು ಎಲ್ಲರಿಗೂ ಸುಕ’ ಹೇಳುತ್ತ ಹೋದ ಕಂದಸ್ವಾಮಿ. ನ್ಯಾಯ ಉರುಲು ಹಾಕ್ಕೊಂಡೈತಿ ಇಲ್ಲಿ ಎಂದು ಸಶಬ್ದವಾಗಿ ಹೇಳಿದ ಭಾಗಿರ್ತಿ ಆಫೀಸಿನ ಬಾಗಿಲು ಮುಂದು ಮಾಡಿ ಹೊರಟಳು.

ಇನ್ನೇನು ಅಪಾರ್ಟ್‌ಮೇಂಟಿನ ಗೇಟನ್ನು ದಾಟಿ ರಸ್ತೆಗೆ ಬೀಳಬೇಕು. ಮಕ್ಕತ್ತಲಾಗುತ್ತಿದ್ದ ಸಮಯ.

ಮೇನುಗೇಟಿನ ಪಕ್ಕದಲ್ಲಿ ಅಪಾರ್ಟ್‌ಮೆಂಟಿನ ಪಂಪ್ ಹೌಸು. ಪಂಪ್ ಹೌಸಿನ ಬಾಗಿಲು ತೆಗೆದು ಒಳಗೆ ಹೋದರೆ ಎದುರುಗಡೆಯೇ ನಾಲ್ಕಡಿಯ ಇನ್ನೊಂದು ಭಾರದ ಬಾಗಿಲು. ಹಿಡಿಕೆಯನ್ನು ಹಿಡಿದು ಜುಯ್ಯಂನೆ ಬಾಗಿಲು ಸರಿಸಿದಳು ಭಾಗಿರ್ತಿ.

ಎಂಟುಹತ್ತು ಅಡಿ ಆಳದವರೆಗೆ ನೀರು ನಿಲ್ಲಿಸಿಕೊಂಡ ಅಂಡರ್‌ಗ್ರೌಂಡು ಸಂಪು. ಎಲಿಟ್ ರೆಸಿಡೆನ್ಸಿ ನಿವಾಸಿಗಳ ಮನೆಯಲ್ಲಿ ಹಾಯಾಗಿ ಹಗಲು ರಾತ್ರಿಯಾಗಬೇಕೆಂದರೆ ಇಲ್ಲಿಂದಲೇ ನೀರು ಹೋಗಬೇಕು.

ಭಾಗಿರ್ತಿ ತುಸು ತಲೆ ಬಗ್ಗಿಸಿ ಬಾಗಿಲಿನ ಒಳಗೆ ಹೋದಳು. ಸಂಪು ನೀರಿನ ತಂಗಾಳಿ ಮುಖಕ್ಕೆ ಎರಚಿದ್ದರಿಂದ ಅವಳಿಗೆ ಹಾಯೆನಿಸಿತು.
ಎರಡೇ ಎರಡು ಸಿಮೆಂಟು ಮೆಟ್ಟಿಲು, ಆ ಮೆಟ್ಟಿಲು ಮುಗಿಯುತ್ತಿದ್ದಂತೆ ಎಡಕ್ಕೆ ಫಳಫಳ ಹೊಳೆಯುತ್ತಿರುವ ಸ್ಟೇನ್‌ಲೆಸ್‌ ಸ್ಟೀಲಿನ ಏಣಿ. ಆ ಏಣಿ ಸಂಪಿನಾಳಕ್ಕೂ ಇಳಿದಿದೆ.

ಬಲಗಾಲನ್ನು ಕೊನೆಯ ಮೆಟ್ಟಿಲಿಗೆ ಆನಿಸಿ, ಎಡಗಾಲನ್ನು ಏಣಿಯ ಕಂಬಕ್ಕೆ ಕೊಟ್ಟು, ಒಂದು ಕೈಯನ್ನು ಆಧಾರಕ್ಕಾಗಿ ಗೋಡೆಗಾನಿಸಿ, ಇನ್ನೊಂದು ಕೈಯಲ್ಲಿ ಸೀರೆ ಲಂಗವನ್ನು ಒಟ್ಟಿಗೇ ಎತ್ತಿ ಮುದ್ದೆ ಮಾಡಿ ಸೊಂಟವನ್ನು ತುಸುವೇ ಮುಂದಕ್ಕೆ ವಾಲಿಸಿ ದೇಹವನ್ನು ಹಗುರಾಗಿಸಿದ ತತ್‌ಕ್ಷಣ ತೊಡೆಗಳ ಮಧ್ಯದಿಂದ ಗಂಗೆಯಂತೆ ಹರಿಯಿತು ಧಾರೆ. ಮಧ್ಯಾನ್ನದಿಂದ ಕಟ್ಟಿಟ್ಟುಕೊಂಡ ಕಾರಣವೋ, ಮನಸಿನ ನಿರಾಳವೋ ಅಂತೂ ಎರಡು ನಿಮಿಷಕ್ಕೂ ಮಿಕ್ಕಿ ಉಕ್ಕಿ ಹರಿದ ಮೇಲೆ ಭಾಗಿರ್ತಿಯ ಮನವೂ ಸ್ತಬ್ದ, ಸಂಪಿನ ನೀರೂ ಸರೋವರದಂತೆ ಶಾಂತ.

ಇದೆಲ್ಲವೂ ನಡೆದದ್ದು ಐದೇ ಐದು ನಿಮಿಷದಲ್ಲಿ. ಗೇಟಿನಿಂದ ಹೊರಬಿದ್ದು ಕಾಲಿನಲ್ಲಿ ದೆವ್ವ ಹೊಕ್ಕಂತೆ ಬಡಬಡ ನಡೆದ ಭಾಗಿರ್ತಿ ಮನೆಗೆ ಬಂದು ಮೊಬೈಲು ತಿಕ್ಕುತ್ತ ಕೂತ ರವಿಕಾಂತನನ್ನು ನೋಡಿ ’ಏಯ್, ಎತ್ತಲೆ ಗಾಡಿ. ಬ್ರಂಬಟ್ರಕೇರಿ ಗಾಳಿಮಾರಿಗೆ ಹೋಳಿಗೆ ತೋರಣ ಹಾಕಿ ಬರೂಣಂತ’ ಎನ್ನುತ್ತ ಹುಚ್ಚುಸಂಭ್ರಮದಿಂದ ಒಳನಡೆದಳು.