ಎದೆ ಬೆಳಕಿನ‌ ಬೆಳೆ

ಮಬ್ಬು ಸಂಜೆ
ನಡು ಮಧ್ಯಾಹ್ನ
ತಿಳಿ ಮುಂಜಾವು
ಕಪ್ಪು ಇರುಳು
ಹೊಸಿಲ ಬಳಿ
ಎದುರೆದುರು
ನಾವು
ದೀಪ ಹಚ್ಚಿದ್ದೆವು

ಮಾತಿನಲಿ
ಭಾವದಲಿ
ಸಾಮಿಪ್ಯದ ಮೋಡಿಯಲಿ
ಕಾರುಣ್ಯದ ಎಣ್ಣೆ
ಬದುಕು ಬೆಳಕಿನ ಬಿತ್ತು

ಒಳ ಹೊರಗೆ
ತುಂತುರು
ಹನಿ ಹನಿದು
ಜಡಿ ಮಳೆ ಸುರಿದಿತ್ತು
ಆರದಿರಲಿ
ಕೈ ಹಿಡಿದು ಜೋಪಾನಗೊಂಡಿತು
ಎದೆ ಬೆಳಕಿನ ಬೆಳೆ

ಸಾವಿತ್ರಿ ಮಡಿಲಿನಲ್ಲಿ
ಸತ್ಯವಾನನಂತೆ
ಉತ್ತರ ಆಗದ
ಪ್ರಶ್ನೆಗಳನ್ನು ಕಾಣಿಸುತ್ತದೆ
ತಣ್ಣನೆ ಹೆದರಿಸುತ್ತದೆ
ದೀಪ ಉರಿಯುತ್ತಿದೆ

ಎಣ್ಣೆ ಸುರಿಯುತ್ತಲೇ ಇರಬೇಕು
‘ನಾನು’ ಉರಿಯುತ್ತಲೇ ಇರಬೇಕು
ಒಳಗೆ ಮಲಗಿರುವ ಸಾವನು ಮರೆಯದೆ
ಬೆಳಕ ತಬ್ಬಲಿಯಾಗಿಸದೆ..