ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!
ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್‌ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

ಆರಂಭವೇ ಹನಿಮೂನ್ ಅವಾಂತರ!

ನಾನು ಓದಿದ ನವೋದಯ ಶಾಲೆಯ ನೆನಪುಗಳನ್ನು ನೆನಪಿಸಿ ಕೊಳ್ಳಲು ಹೊರಟವನಿಗೆ ನಮ್ಮ ಬ್ಯಾಚಿನ ಮೊದಲ ದಿನವನ್ನು ನೆನೆಯದಿದ್ದರೆ ಹೇಗೆ ಎನಿಸಿತು!

ಅದು ನಮ್ಮ ಮೊದಲ ದಿನದ ಮೊದಲ ಇಂಗ್ಲಿಷ್ ಕ್ಲಾಸ್!

“ಡಿಯರ್ ಸ್ಟೂಡೆಂಟ್ಸ್…ಗುಡ್ ಮಾರ್ನಿಂಗ್…” ಎನ್ನುತ್ತಾ, ನಗು ಮೊಗವನ್ನೊತ್ತು ನಮ್ಮ ಹೊಸ ಇಂಗ್ಲಿಷ್ ಮೇಡಂ ತರಗತಿ ಕೋಣೆಗೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿ ಕೊಟ್ಟವರು ತಮ್ಮ ಪರಿಚಯವನ್ನು ಇಂಗ್ಲಿಷ್‌ನಲ್ಲೇ ಮಾಡಿಕೊಂಡು ಶಾಲೆಗೆ ಹೊಸದಾಗಿ ಎಂಟ್ರಿ ಪಡೆದಿರುವ ತನ್ನ ‘ಡಿಯರ್ ಸ್ಟೂಡೆಂಟ್ಸ್’ ಗಳ ಪರಿಚಯಕ್ಕೂ ಮುಂದಾದರು.

ಈ ‘ಡಿಯರ್ ಸ್ಟೂಡೆಂಟ್ಸ್’ ಗಳಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಂದ ಬಂದವರು, ಐದನೇ ತರಗತಿಯಿಂದ ಎ, ಬಿ, ಸಿ, ಡಿ ಕಲಿಯಲು ಆರಂಭಿಸಿದವರು ಆಗಿದ್ದರೂ ಈಗ ಆರನೇ ತರಗತಿಯಲ್ಲಿ ಕುಳಿತು ಎಲ್ಲಾ ಭಾಷೆಗಳಲ್ಲೂ ಒಂದೇ ಆದ ತಮ್ಮ ಹೆಸರು, ತಮ್ಮ ಊರಿನ ಹೆಸರು ಹೇಳಲು ಒಂದಿನಿತೂ ಕಷ್ಟ ಪಡಲಿಲ್ಲ!

ಒಬ್ಬರಾದಂತೆ ಒಬ್ಬರು ಎದ್ದು ನಿಂತು ನಮ್ಮನ್ನು ನಾವು ಪರಿಚಯಿಸಿ ಕೊಳ್ಳುತ್ತಾ ಸಾಗಿದೆವು. ಮೇಡಂರವರೋ ತಮ್ಮ ‘ಡಿಯರ್ ಸ್ಟೂಡೆಂಟ್ಸ್’ ಗಳು ಯಾವುದೋ ಅದ್ಭುತ ವಿದ್ವತ್ತನ್ನು ಪ್ರದರ್ಶಿಸುತ್ತಿರುವರು ಎಂಬಂತೆ “ಗುಡ್.., ವೆರಿಗುಡ್..,” ಎಂಬ ವಿಶೇಷಣಗಳೊಂದಿಗೆ ನಮ್ಮನ್ನು ಹುರಿದುಂಬಿಸುತ್ತಾ ಸಾಗಿದ್ದರು! ಅವರ ಮೊಗದಲ್ಲಿನ ನಗುವನ್ನೂ ಹಾಗೆಯೇ ಕಾಯ್ದುಕೊಂಡಿದ್ದರು!

****

ಹೀಗೆ ಪರಿಚಯವೇನೋ ಮುಗಿಯಿತು. ಆದರೆ ಅವಧಿ ಮುಗಿದಿರಲಿಲ್ಲವಲ್ಲ! ಆದ್ದರಿಂದ ಅವಧಿಯ ಮುಂದುವರೆದ ಭಾಗವಾಗಿ ಮೇಡಂ ತಮ್ಮ ‘ಡಿಯರ್ ಸ್ಟೂಡೆಂಟ್ಸ್’ಗಳ ಇಂಗ್ಲಿಷ್ ಜ್ಞಾನದ ಪರೀಕ್ಷೆಗೂ ಮುಂದಾದರು!

ಪರೀಕ್ಷೆ ಎಂದೊಡನೆ ಗಾಬರಿ ಪಡುವಂತಹದ್ದು ಏನೂ ಇರಲಿಲ್ಲ. ಅದು ಸಾಕಷ್ಟು ಸರಳವಾಗಿಯೇ ಇತ್ತು. ಪ್ರತಿಯೊಬ್ಬರು ‘ಎ’ ನಿಂದ ಆರಂಭಗೊಂಡು ಒಂದೊಂದು ಆಲ್ಫಬೆಟ್‌ಗಳನ್ನು ಹೇಳಿ ಅದಕ್ಕೆ ಸಂಬಂಧಿಸಿದಂತೆ ಪದವೊಂದನ್ನು ಹೇಳುವುದಾಗಿತ್ತು. ಅದೇ ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್, ಸಿ ಫಾರ್ ಕ್ಯಾಟ್, ಡಿ ಫಾರ್… ಹೀಗೆ ಹೇಳುತ್ತಾ ಹೋಗುವುದು!

ಸರಿ, ಎ ಫಾರ್ ಆ್ಯಪಲ್ ನಿಂದ ಆರಂಭಗೊಂಡ ನಮ್ಮ ಈ ಪರೀಕ್ಷೆ ಸುಲಲಿತವಾಗಿಯೇ, ಮೇಡಂ ಮೆಚ್ಚುವಂತೆಯೇ, ತಮ್ಮ ನಗು ಮೊಗವನ್ನು ಕಾಯ್ದುಕೊಳ್ಳುವಂತೆಯೇ ಸಾಗಿತ್ತು; ‘ಎಚ್’ ಅಕ್ಷರ ಬರುವವರೆಗೆ..!

‘ಎಚ್’ ಬಂದದ್ದು ಗೆಳೆಯ ‘ರುದ್ರಸ್ವಾಮಿ ಫ್ರಮ್ ಹೂವಿನಹಳ್ಳಿ’ಯ ಸರದಿಗೆ..

ಅವನೋ ‘ಎಚ್ ಫಾರ್’ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ಪದವನ್ನು ಹೇಳಲು ಯೋಚಿಸುತ್ತಿರುವಾಗಲೇ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಗೆಳೆಯ ಮನು ತುಸು ನಿಧಾನವಾಗಿ ‘ಹನಿಮೂನ್’ ಎಂದು ಬಿಡಬೇಕೆ! ಅದನ್ನು ಕೇಳಿಸಿಕೊಂಡ ನಮ್ಮ ರುದ್ರಸ್ವಾಮಿ ‘ಎಚ್’ಗೆ ಅದೇ ಸೂಕ್ತ ಪದವೆಂದು ಒಡನೆಯೇ ಗ್ರಹಿಸಿ ಮುಗ್ಧವಾಗಿ, ತುಸು ಜೋರಾಗಿಯೇ ‘ಹನಿಮೂನ್’ ಎಂದು ಬಿಟ್ಟಿದ್ದ…!

ಹೀಗೆ ‘ಹನಿಮೂನ್’ ಎಂದವನು ಮೇಡಂರವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ ಮೊದಲೇ ಪಟಾರೆಂದು ಅವನ ಕೆನ್ನೆಗೆ ಜೋರಾದ ಹೊಡೆತವೊಂದು ಬಿದ್ದಿತ್ತು! ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ಎಂಬಂತೆ ಮೇಡಂ ಮೊಗದಲ್ಲಿನ ನಗು ಮಾಯವಾಗಿ ರೌದ್ರತೆಯನ್ನೇ ಆವಾಹಿಸಿಕೊಂಡವರಂತಾಗಿದ್ದರು!

ಅಷ್ಟಕ್ಕೆ ಸುಮ್ಮನಾಗದೆ ತಮ್ಮ ಇಂಗ್ಲಿಷ್ ಭಾಷಾ ಪದಪುಂಜಗಳ ಬ್ರಹ್ಮಾಸ್ತ್ರಗಳನ್ನು ಪುಂಖಾನುಪುಂಖವಾಗಿ ರುದ್ರನ ಮೇಲಲ್ಲದೆ ನಮ್ಮ ಮೇಲೆಯೂ ಪ್ರಯೋಗಿಸಿ ಹೊರ ನಡೆದರು.

ಅವರ ಮಾತುಗಳ ಅರ್ಥ ಅರ್ಥವಾಗದಿದ್ದರೂ ಎಲ್ಲಾ ಭಾಷೆಗಳಲ್ಲೂ ಒಂದೇ ಆದ ಮುಖದಲ್ಲಿನ ಕೋಪ ಮಾತ್ರ ನಮ್ಮೆಲ್ಲರ ಪಾಲಿಗೂ ಅರ್ಥವಾಗುವಂತಿತ್ತು!

ಇನ್ನೂ ರುದ್ದಸ್ವಾಮಿಯೋ
“ತಾನೇನು ತಪ್ಪು ಮಾಡಿದೆ!? ತನಗೆ ಪೆಟ್ಟು ಬಿದ್ದಿದಾದರೂ ಏಕೆ!?” ಎಂಬ ಯಾವೊಂದೂ ಸಂಗತಿಗಳು ಅರ್ಥವಾಗದೇ ದಿಙ್ಮೂಢನಂತಾಗಿ ಪೆಚ್ಚು ಮೋರೆ ಹಾಕಿ ನಿಂತಿದ್ದ!

ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!


ಆದರೆ, ಮೇಡಂರವರ ಕಪಾಳ ಮೋಕ್ಷ ಈ ದಿಸೆಯಲ್ಲಿ ಹೆಚ್ಚಿನ ಜ್ಞಾನಾನ್ವೇಷಣೆಗೆ ಅವನು ಜೊತೆಗೆ ನಾವುಗಳೆಲ್ಲರೂ ತೊಡಗುವಂತಾಗಲು ಪ್ರೇರಣೆಯಾಯಿತೆಂಬುದು ಮುಂದಿನ ಕತೆಯಾದರೂ ಆ ಕ್ಷಣಕ್ಕೆ ರುದ್ರಸ್ವಾಮಿಯ ಮುಗ್ಧತೆಯ ‘ಹನಿಮೂನ್ ಅವಾಂತರ’ ”ಈ ಬ್ಯಾಚಿನ ಹುಡುಗರು ಮುಗ್ಧರಲ್ಲ…” ಎಂಬ ನಟೋರಿಟಿಯನ್ನು ಶಾಲೆಯಲ್ಲಿ ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವೆ ಮೊದಲ ದಿನವೇ ನಮಗೆ ಸುಲಭವಾಗಿ ದಯಪಾಲಿಸಿತ್ತು!