Advertisement
ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ

ಪೆಟ್ಟುಮಾಡಿಕೊಂಡ ಕಿಟ್ಟಪ್ಪನಿಗೆ ಸಂದ ಪೂಜೆ…: ಎಚ್. ಗೋಪಾಲಕೃಷ್ಣ ಸರಣಿ

ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು. ಅದಾದ ಮೇಲೆ ಮೊಸರನ್ನ ಜತೆಗೆ ಬಾಳಕದ ಮೆಣಸಿನಕಾಯಿ. ಇದು ನನಗೆ ತುಂಬಾ ಇಷ್ಟದ್ದು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆರಡನೆಯ ಕಂತು

ಹೀಗೆ ಹಿಂದಿನದು (ಸಂಚಿಕೆ )ಮುಕ್ತಾಯ ಕಂಡಿತ್ತು..

ಮತ್ತೆ ನಾನು ಬಿದ್ದ ಜಾಗಕ್ಕೆ. ಸತ್ತಿಲ್ಲ ಅಂತ ಕನ್ಫರ್ಮ್ ಆಗಿತ್ತಲ್ಲ. ಮೇಲಕ್ಕೆ ಏಳಲು ಹೊರಳಿದೇನಾ.. ಎಡಗೈ ನನ್ನ ಮಾತು ಕೇಳಿಸಿಕೊಳ್ಳುತ್ತಿಲ್ಲ ಅಂತ ಖಾತ್ರಿ ಆಯಿತು. ಬಲಕ್ಕೆ ತಿರುಗಿ ಕಷ್ಟಪಟ್ಟು ಕಾಲಿನ ಮೇಲೆ ನಿಂತೆ. ಮೈ ಕೈ ಕೊಡವಿಕೊಂಡು ಬಟ್ಟೆಗೆ ಅಂಟಿದ್ದ ಮರಳು ಬಿಡಿಸಿದೆ. ಮೈ ನಿಗುರಿಸಿ ಸೈಕಲ್ ಹತ್ತಿರ ಬಂದೆ. ಎಡಗೈ ಪೂರ್ತಿ ಸ್ಟ್ರೈಕ್ ಮಾಡ್ತಾ ಇತ್ತು. ಬಲಗೈನಿಂದ ಸೈಕಲ್ ಬಲದ ಹ್ಯಾಂಡಲ್ ಹಿಡಿದುಕೊಂಡು ಮನೆಯತ್ತ ಹೆಜ್ಜೆ ಹಾಕಿದೆ. ಕುರುಕ್ಷೇತ್ರ ಯುದ್ಧದಲ್ಲಿ ಅಂದಿನ ಡ್ಯೂಟಿ ಮುಗಿಸಿ ಮನೆಗೆ ಹೋಗುವ ಸೈನಿಕ ನೆನಪಾದ. ಇಡೀ ಜೀವನ ಒಂದು ರೀತಿ ಮಹಾಭಾರತ ಅಲ್ವೇ ಅಂತ ಅನಿಸಿತು.

ಅಕಸ್ಮಾತ್ ಇವತ್ತು ನಾನು ಸತ್ತು ಹೋಗಿದ್ದರೆ, ಮನೆ ಮೌಲ್ಡಿಂಗ್ ಆಗ್ತಾ ಇತ್ತಾ ಅನ್ನುವ ಯೋಚನೆ ಶುರು ಆಯಿತು. ಮನೆ ಸೇರಿದ ನಂತರ ಬಿದ್ದ ಕತೆ ಹೇಳಬೇಕೋ ಬೇಡವೋ ಎನ್ನುವ ಜಿಗ್ಞಾಸೆ. ಅಕಸ್ಮಾತ್ ಸತ್ತು ಹೋಗಿದ್ದರೆ ಸರಿ ರಾತ್ರಿಯಲ್ಲಿ ಸುದ್ದಿ ಹೇಗೆ ತಿಳಿಸುತ್ತಾ ಇದ್ದರು?.. ಹೀಗೆ ವಿಚಿತ್ರ ಯೋಚನೆಯಲ್ಲಿ ಮನೆ ಸೇರಿದೆ. ಮನೆ ಪಕ್ಕದಲ್ಲೇ ನಮ್ಮದೇ ಕಾರ್ಖಾನೆಯ ಮಹಿಳಾ ಉದ್ಯೋಗಿ ವಾಸ ಇದ್ದರು. ನನ್ನ ಹೆಂಡತಿ ಅವರಿಗೆ ಮುಖ ಕೊಟ್ಟು ಮಾತಾಡುತ್ತಿದ್ದಳು, ಅವಳ ಬೆನ್ನು ನನ್ನ ಕಡೆ. ಮಾತಿನ ಮಧ್ಯೆ ನನ್ನನ್ನ ನೋಡಿದರು.

ನಿಮ್ಮ ಯಜಮಾಣ್ರು.. ಅಂತ ಹೇಳಿದವರು ಮಾತು ಅರ್ಧಕ್ಕೆ ನಿಲ್ಲಿಸಿದರು. ಏನಾಯ್ತು ಸಾರ್…. ಅಂತ ಹತ್ತಿರ ಬಂದರು! ನನಗೆ ಶಾಕ್ ಹೊಡೆದ ಹಾಗಾಯ್ತು! ಇಷ್ಟೂ ಆರಾಮವಾಗಿ ಬಂದಿದ್ದೀನಿ, ಇವರು ಯಾಕೆ ಹೀಗೆ ಕೇಳ್ತಿದ್ದಾರೆ ಅಂತ… ಹೆಂಡತಿ, ನನ್ನ ಹೆಂಡತಿ ರೌಂಡ್ ಅಬೌಟ್ ಟರ್ನ್ ಆದಳು….

ಅಯ್ಯೋ ಏನಿದು…. ಅಂತ ಅವಳೂ ಅನ್ನಬೇಕೇ…?

ಇಬ್ಬರೂ ಹತ್ತಿರ ಬಂದರು.

ಏನಾಯ್ತು ಯಾಕೆ ಹೀಗಿದ್ದೀರಿ ಯಾಕೆ ಇಷ್ಟು ಹೊತ್ತು…..? ಪ್ರಶ್ನೆಗಳ ಸುರಿಮಳೆ ಅಥವಾ ಜಡಿ ಮಳೆಯೋ ಏನೋ ಒಂದು ಅಪ್ಪಳಿಸಲು ಶುರು ಹಚ್ಕೋತಾ……..? ಮುಂದೇನಾಯ್ತು, ಏನು ಸಮಜಾಯಿಶಿ ಹೇಳಿದೆ ಅನ್ನುವುದನ್ನು ಮುಂದೆ ವಿವರವಾಗಿ ವರದಿಸುತ್ತೇನೆ, ಸರಿ ತಾನೇ. ಅಲ್ಲಿಯವರೆಗೆ ಕೊಂಚ ಕಾಯಿರಿ ಸರ, ಕಾಯಿರಿ ಮೇಡಂ…..

ಮುಂದಕ್ಕೆ….

ಅಷ್ಟು ಹುಷಾರಾಗಿ ಪೆಟ್ಟು ಬಿದ್ದಿದೆ ಎನ್ನುವ ಅನುಮಾನ ತಿಲ ಮಾತ್ರವೂ ಬರದ ಹಾಗೆ ಕೇರ್ ತಗೊಂಡಿದ್ದೀನಿ, ಎಚ್ಚರ ವಹಿಸಿದ್ದೀನಿ ಅಂತ ಮನಸಿನಲ್ಲಿ ಒಂದು ರೀತಿ ಕಾನ್ಫಿಡೆನ್ಸ್ ಬಿಲ್ಡ್ ಮಾಡಿಕೊಂಡಿದ್ದೆ. ತಿಲ ಅಂದರೆ ಎಳ್ಳು ಅಂತ ಕೇಳಿದ್ದೆ. ಆದರೆ ಇವರು ನನ್ನ ನೋಡಿದ ಕೂಡಲೇ ಏನಾಯ್ತು ಯಾಕೆ ಹೀಗಿದ್ದೀರಿ ಅಂತ ಕೋಶ್ಚನ್ ಮಾಡ್ತಾ ಇದಾರೆ. ನನ್ನಾಕೆ ಇನ್ನೂ ಮುಂದೆ ಹೋಗಿ ಯಾಕಿಷ್ಟು ತಡ ಅಂತ ಕೇಳ್ತಾ ಇದ್ದಾಳೆ. ನಾನು ಬಿದ್ದದ್ದು, ಸಾವಿನಿಂದ ಒಂದಡಿ ದೂರದಲ್ಲಿ ತಪ್ಪಿಸಿಕೊಂಡಿದ್ದು ಇವರಿಗೆ ಆಗಲೇ ಗೊತ್ತಾಗಿ ಬಿಟ್ಟಿತೇ… ಎನ್ನುವ ಗೊಂದಲ ಶುರು ಆಯಿತು. ಅಷ್ಟರಲ್ಲಿ ಮತ್ತೆ ನಮ್ಮ ಪಕ್ಕದ ಮನೆ ಹೆಂಗಸು, ನಮ್ಮ ಫ್ಯಾಕ್ಟರಿಯಲ್ಲಿ ಉದ್ಯೋಗದಲ್ಲಿದ್ದವರು ಮತ್ತೆ ಏನಾಯ್ತು ಸಾರ್ ಯಾಕೆ ಸಾರ್ ಹೀಗಿದ್ದೀರಿ ಅಂತ ಕೇಳಿದರು! ಅದುವರೆಗೆ ನಾನು ಬಿಲ್ಡ್ ಮಾಡಿಕೊಂಡು ಮನಸ್ಸಿನಲ್ಲೇ ಕಟ್ಟಿಕೊಂಡು ಸನ್ನದ್ಧನಾಗಿದ್ದ ಡಿಫೆನ್ಸ್ ಕೋಟೆ ಸಡಿಲ ಆಯಿತು ಮತ್ತು ಒಮ್ಮೆಗೇ ಧೂಳಿಪಟ ಸಹ ಆಯಿತು ಅಂತ ಹೇಳಬೇಕಿಲ್ಲ..

“ರೂಫ್‌ನಿಂದ ಬಿದ್ದೆ…..” ಅಂತ ನಿಧಾನಕ್ಕೆ ಹೇಳಿದೆ. ಆ ವೇಳೆಗೆ ಸೈಕಲ್ ಗೋಡೆಗೆ ಒರಗಿಸಿದ್ದೆ. ಎಡಗೈ ಇನ್ನೂ ನೇತಾಡುತ್ತಾ ಇತ್ತು ಮತ್ತು ನೋವು ಹೆಚ್ಚುತ್ತ ಹೆಚ್ಚುತ್ತಾ ಹೋಗುತ್ತಿತ್ತು.

“ಬಿದ್ರಾ? ಹೇಗೆ? ಮೇಲೆ ಯಾಕೆ ಹೋದ್ರಿ? ಮಲ್ಲಯ್ಯ ಏನು ಮಾಡ್ತಾ ಇದ್ದ…..?”

ಕೋರ್ಟ್ ಮಾರ್ಷಲ್ ಶುರು ಆಯ್ತು. ಅಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಮಾಡಿ ಹತ್ತಿದೆ. ಹಿಂದೆ ಹೆಂಡತಿ ಅವಳ ಹಿಂದೆ ಪಕ್ಕದ ಮನೆ ಹೆಂಗಸು ಬಂದರು. ಮಗ ಎಲ್ಲೋ ಆಡುತ್ತಿತ್ತು. ಮತ್ತೆ ಸ್ಟೆಪ್ ಬೈ ಸ್ಟೆಪ್ ಕತೆ ಹೇಳಿದೆ, ಕತೆ ಅನ್ನುವುದಕ್ಕಿಂತ ಹರಿಕತೆ ಅಂದರೆ ಸರಿ ಏನೋ! ಆದರೆ ಕತೆ ಹೇಳಿದ್ದು ನಾನು ಗೋಪಾಲಕೃಷ್ಣ, ಅದರಿಂದ ಅದು ಗೋಪುಕತೆ ಅಥವಾ ಕೃಷ್ಣಕತೆ ಅಂದರೆ ತುಂಬಾ ಸೂಕ್ತ ಅನಿಸಬಹುದು.

ಸಗಣಿ ಸಾರಿಸಿದ ಮೇಲಿನ ಚಾವಣಿ, ಅದರ ಮೇಲೆ ನಾನು ಅತ್ಯಂತ ಜಾಗರೂಕನಾಗಿ ಹೆಜ್ಜೆ ಇಟ್ಟಿದ್ದು ಮತ್ತು ಎಲ್ಲೋ ಚಾವಣಿ ಸಿಗದೆ ಕಾಲು ತೊಸಕ್ ಅಂತ ಪೂರ್ತಿ ಕುಸಿದದ್ದು ಮತ್ತು ನಾನು ಹತ್ತು ಹನ್ನೆರೆಡು ಅಡಿ ಮೇಲಿನಿಂದ ಭೂಮಿಗೆ ಬಂದದ್ದು….(ಪದ ಕುಸಿಯೇ ನೆಲವಿಹುದು ಎಂದು ಹೇಳಲಿಲ್ಲ. ಹೇಳಿದ್ದರೆ ಬುರುಡೆ ಒಡೆದು ಹಾಕುತ್ತಾ ಇದ್ದಳು) ಕತೆ ಈ ಹರವಿನಲ್ಲಿ ಸಾಗಿತು ಅಂತ ಕಾಣುತ್ತೆ. ಹೆಂಡತಿ ಮುಖ ಕೆಂಪಗೆ ಆಗಿತ್ತು. ಮೊದಲೇ ಅವಳ ಮುಖ ಕೆಂಪಗೆ, ಈಗ ಆ ಒರಿಜಿನಲ್ ಕೆಂಪಿಗೆ ಸ್ವಲ್ಪ ಕುಂಕುಮ, ಟೊಮೆಟೊ ಸಾಸು ಮತ್ತು ಲಿಂಬೇಕಾಯಿ ಉಪ್ಪಿನಕಾಯಿ ರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಅವಳ ಮುಖಕ್ಕೆ ಪ್ಯಾಕ್ ಥೆರಪಿ ಮಾಡಿದ ಹಾಗೆ ಕಂಡಳು. ಅವಳ ಪಕ್ಕ ನಿಂತು ನಾನು ಈ ತನಕ ಹೇಳಿದ ಗೋಪಿಕತೆ ಕೇಳುತ್ತಾ ಇದ್ದ ಪಕ್ಕದ ಮನೆಯ ಯಜಮಾನಿ ಮುಖದ ಮೇಲೆ ಒಂದು ರೀತಿ ನಸುನಗೆ ಕಾಣಿಸುತ್ತಿತ್ತು. ಈ ಹೆಂಗಸು ನಕ್ಕರೆ ತುಂಬಾ ಚೆನ್ನಾಗಿ ಕಾಣುತ್ತಾಳೆ ಅಂತ ಮನಸಿನಲ್ಲೇ ಒಂದು ಹೊಸಾ ಚಿಂತನೆ ಶುರು ಮಾಡಿದ್ದೆ…

ಒಮ್ಮೆಲೇ ಸಿಡಿಲು ಹೊಡೆದ ಶಬ್ದ ಕೇಳಿಸಬೇಕೇ?

ತಲೇಲಿ ಸಗಣಿ ತುಂಬಿಕೊಂಡು ಇದೀಯಾ ನೀನು? ಯಾರೂ ಇಲ್ಲದೇ ಇರಬೇಕಾದರೆ ನಿನ್ನನ್ನ ಯಾವನು ಮೇಲೆ ಹತ್ತಿ ಹೋಗು ಅಂತ ಹೇಳಿದ್ದು? ಅವರು (ಅಂದರೆ ಮಲ್ಲಯ್ಯ ಮತ್ತು ಗ್ಯಾಂಗ್)ಯಾರಿಗಾದರೂ ಗೊತ್ತಾ ಒಂದು ಹುಚ್ಛ (ಅಂದರೆ ನಾನು ಮತ್ತು ಹುಚ್ಚ ಎನ್ನುವ ಪದಕ್ಕೆ ಮಹಾಪ್ರಾಣದ ಒತ್ತಕ್ಷರ ಯಾಕೆ ಅಂದರೆ ಕೇಳುಗನನ್ನು ಇಂಪ್ರೆಸ್ ಮಾಡಲು) ಮೇಲೆ ಹೋಗಿದೆ ಅಂತ? ತಲೆ ಸರಿ ಇತ್ತಾ ನಿನಗೆ? ಬಿದ್ಯೆಲ್ಲಾ? ಆಗೊಂದು ಕಂಬಿ ಬೆನ್ನಿಂದ ಹೊಟ್ಟೆ ಮೂಲಕ ಅಥವಾ ಹೊಟ್ಟೆಯಿಂದ ಹೊಕ್ಕು ಬೆನ್ನಿನಿಂದ ಆಚೆ ಬಂದಿದ್ದರೆ ಏನು ಗತಿ? ಒಂದು ಪುಟ್ಟ ಮಗು ಇದೆ ನಿನಗೆ ಅದರ ಜವಾಬ್ದಾರಿ ನಿನ್ನದು ಅನ್ನೋ ಜ್ಞಾನ ಇದೆಯಾ ನಿನಗೆ….? (ನಿಮ್ಮ ಮನೇಲಿ ಹೇಗೋ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಲಾಗಾಯ್ತಿನಿಂದಲೂ ಹೆಂಡತಿಗೆ ಕೋಪ ಬಂದರೆ ಗಂಡ ಅನ್ನುವ ಮರ್ಯಾದೆ ಇಲ್ಲದೆ ಏಕವಚನದಲ್ಲಿ ಹೋಗೋ ಬಾರೋ ಅನ್ನುತ್ತಾಳೆ)ಹೆಚ್ಚು ಕಮ್ಮಿ ಈ ಧಾಟಿಯಲ್ಲಿ ನನ್ನ ಕೋರ್ಟ್ ಮಾರ್ಷಲ್ ನಡೆಯಿತು. ಹೇಳಿ ಕೇಳಿ ಈ ಪ್ರಸಂಗ ನಡೆದು ನಲವತ್ತು ಪ್ಲಸ್ ವರ್ಷಗಳು ಆಗಿದೆ. ಅದರಿಂದ ಏನು ಹೇಳಿದೆನೋ ಅದೆಲ್ಲಾ ನನ್ನ ಆಳವಾದ ನೆನಪಿಂದ. ಮಾತು ಅಂದರೆ ಬೈಗುಳ ಇನ್ನೂ ತೀಕ್ಷ್ಣವಾಗಿ, ಸ್ಟ್ರಾಂಗ್ ಆಗಿ ಹೆಚ್ಚು ಪೆನಿಟ್ರೆಟ್ ಆಗುವ ಹಾಗೂ ಇದ್ದಿರಬಹುದು, ಆದರೆ ಸಾಫ್ಟ್ ಆಗಿ ಖಂಡಿತ ಇರಲಿಲ್ಲ. ಹೆಂಡತಿ ಇಷ್ಟು ಬೈತಾ ಇರಬೇಕಾದರೆ ಪಕ್ಕದ ಮನೆ ಹೆಂಗಸು ಸುಮ್ಮನಿತ್ತಾ?

ಒಂದು ಗಂಡಸು ಹೀಗೆ ಹಿಗ್ಗಾ ಮುಗ್ಗಾ ಸ್ವಂತ ಕಟ್ಟಿಕೊಂಡವಳಿಂದ ಎಕ್ಕಿಸಿಕೊಳ್ಳಬೇಕಾದರೆ ಜತೆಯಲ್ಲಿ ಮತ್ತು ಎದುರಿಗೇ ಇರುವ ಯಾವುದಾದರೂ ಹೆಂಗಸು ತೆಪ್ಪಗಿರಲು ಸಾಧ್ಯವೇ? ದೇವರು ಅದನ್ನು ಅಂದರೆ ಹೆಣ್ಣು ಜೀವವನ್ನು ಯಾವಾಗಲೂ ವಟವಟ ಎನ್ನುವ ಕಪ್ಪೆ ಜಾತಿಗೆ ಸೇರಿದ ಹಾಗೆ ಸೃಷ್ಟಿ ಮಾಡಿದ್ದಾನೆ. ಈ ಹೆಂಗಸು ಸಹ ಆಗಾಗ ಸಪ್ಲಿಮೆಂಟ್ ಪ್ರಶ್ನೆಗಳನ್ನು ನನ್ನವಳಿಗೆ ಫೀಡ್ ಮಾಡುತ್ತಾ ಇತ್ತು. ಇವಳ ಅಂದರೆ ನನ್ನಾಕೆಯ ತೀಕ್ಷ್ಣವಾದ ಬಾಣಗಳ ಪ್ರಯೋಗ ಆಗಬೇಕಾದರೆ ಅವಳ ಅಂದರೆ ಪಕ್ಕದ ಮನೆಯ ಹೆಂಗಸಿನ ಮುಖದಲ್ಲಿ ಕೆಲವು ಸಲ ನಸುನಗೆ, ಕೆಲವು ಸಲ ಶಬ್ದ ರಹಿತ ಮುಗುಳ್ನಗು ಹಾದು ಹೋಗುತ್ತಿತ್ತು. ಕೆಲವು ಸಲ ಗೋಡೆ ಕಡೆಗೆ ತಿರುಗಿ ಕೆಮ್ಮುತ್ತಿದ್ದಳು. ಆಕೆಯ ನಗು ತುಂಬಾ ಆಕರ್ಷಕವಾಗಿತ್ತು. ಕೋಲಿನೊಸ್ ಅಂತ ಆ ಕಾಲದಲ್ಲಿ ಒಂದು ಟೂತ್ ಪೇಸ್ಟ್ ಬರುತ್ತಿತ್ತು ಮತ್ತು ಅದರ ಜಾಹಿರಾತಿಗೆ ಕಿವಿಯಿಂದ ಕಿವಿವರೆಗೆ ನಗುತ್ತಿದ್ದ ಒಂದು ಹೆಂಗಸಿನ ಫೋಟೋ ಹಾಕುತ್ತಿದ್ದರು. ಚೆನ್ನಾಗಿ ನಗುವ ಹೆಂಗಸನ್ನು ಕಂಡರೆ ಆಹಾ ಕೋಲಿನೊಸ್ ನಗೆ ಎನ್ನುವ ಬ್ರಾಂಡ್ ನೇಮ್ ಹುಟ್ಟಿತ್ತು. ಆಕೆಯದು ಕೋಲಿನೊಸ್ ನಗೆ ಗಿಂತಲೂ ನೂರು ಪಟ್ಟು ಹೆಚ್ಚು ಆಕರ್ಷಕ ಅನಿಸಿತು. ಪಕ್ಕದ ಹೆಂಗಸಿಗೆ ನೀವು ನಕ್ಕರೆ ತುಂಬಾ ಚೆನ್ನಾಗಿ ಕಾಣಿಸುತ್ತೀರಾ ಅಂತ ಹೇಳಬೇಕು ಅಂತ ಎರಡು ಮೂರುಸಲ ಪ್ರಯತ್ನ ಪಟ್ಟೆ, ಆದರೆ ಆಗಲಿಲ್ಲ. ನನ್ನಾಕೆಯ ಮಾತಿನ ಬಾಣ ಪ್ರಯೋಗ ಅದಕ್ಕೆ ಬಿಡುವು ಕೊಡಲಿಲ್ಲ! ಹೀಗೆ ಒಂದು ಒಂದೂವರೆ ಗಂಟೆ ಅಷ್ಟೋತ್ತರ ಪೂರ್ಣ ಪೂಜೆ ಆಯ್ತಾ?(ಈಗ ನೆನಪಿಗೆ ಬರ್ತಾ ಇದೆ. ಕೊನೆಗೂ ಆ ಹೆಂಗಸಿಗೆ ಅದರ ನಗು ತುಂಬಾ ಚೆನ್ನಾಗಿತ್ತು ಎಂದು ಹೇಳಲು ಸಾಧ್ಯವೇ ಆಗಲಿಲ್ಲ. ಈಗೊಂದು ಹತ್ತು ಹದಿನೈದು ವರ್ಷಗಳ ಹಿಂದೆ ಆಕೆ ಭವಾನಿ ಪಾದ ಸೇರಿದಳು. ಆಕೆ ಅಂಭಾ ಭವಾನಿ ಭಕ್ತೆ. ನನ್ನ ಹಲವು ಸಹಸ್ರ ತೀರದ ಆಸೆಗಳಲ್ಲಿ ಇದೂ ಸಹ ಒಂದು ಮತ್ತು ಇದು ನನ್ನನ್ನು ಜೀವಮಾನ ಪೂರ್ತಿ ಕಾಡುತ್ತದೆ! ಇದು ಹಾಗಿರಲಿ, ಈಗ ಮತ್ತೆ ಮುಖ್ಯ ವಾಹಿನಿಗೆ).
ಅಷ್ಟೋತ್ತರ ಪೂಜೆಯ ಕೊನೇ ಹಂತದಲ್ಲಿ ಏಕ್ ದಂ ಪ್ರಪಂಚಕ್ಕೆ ಬಂದಳು.

“ನೆಡಿ ಆಸ್ಪತ್ರೆಗೆ ಹೋಗೋಣ….” ಅಂದಳು.

“ಆಗಲೇ ಹನ್ನೊಂದು, ಈಗ ಯಾರೂ ಸಿಗುಲ್ಲ….” ಅಂದೆ. ನನ್ನ ತಲೇಲಿ ನಮ್ಮ ಫ್ಯಾಕ್ಟರಿ ಆಸ್ಪತ್ರೆ ಮಾತ್ರ ಇತ್ತು. ಅವಳ ತಲೆಯಲ್ಲಿ ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳೂ ಓಡುತ್ತಿತ್ತು. ಪಕ್ಕದ ಹೆಂಗಸು ಇನ್ನೂ ನಿಂತಿದ್ದರು.

ಟ್ಯಾಕ್ಸಿ ಡ್ರೈವರ್ ಒಬ್ಬರು ಗೊತ್ತು ನನಗೆ. ಅವರ ಮನೆಗೆ ಯಾರನ್ನಾದರೂ ಕಳಿಸಲಾ…

ಆಗಿನ್ನೂ ಈಗಿನ ಹಾಗೆ ಮೊಬೈಲ್ ಫೋನು ಇರಲಿಲ್ಲ ಮತ್ತು ಲ್ಯಾಂಡ್ ಲೈನ್ ಪೋನ್ ತುಂಬಾ ಸಾಹುಕಾರರ ಮನೆಯಲ್ಲಿ ಮಾತ್ರ. ಯಾರನ್ನೋ ಟ್ಯಾಕ್ಸಿ ಡ್ರೈವರ್‌ನ ಹುಡುಕಲು ಕಳಿಸಿ ಅವನು ಸಿಗಲಿಲ್ಲ ಅಂದರೆ ಅನ್ನುವ ಪಾಸಿಂಗ್ ಥಾಟ್ಸ್ ಬಂತಾ? ಅದನ್ನೇ ಹೇಳಿ ಬೆಳಿಗ್ಗೆ ಬೇಗೆದ್ದು ಕಾರ್ಖಾನೆ ಆಸ್ಪತ್ರೆಗೆ ಹೋಗೋಣ ಅಂತ ಐಡಿಯಾ ಬಿಟ್ಟೆ.

“ಬುರುಡೆಗೆ ಏಟು ಬಿದ್ದಿದ್ದು ಅದು ರಾತ್ರಿ ಸೀರಿಯಸ್ ಆದರೆ…..” ಹೆಂಡತಿಗೆ ಈ ತಲೆನೋವು.

ಪಕ್ಕದವರೂ ಇನ್ನೂ ಇದ್ದರು. ಇಬ್ಬರಲ್ಲೂ ಗುಸು ಗುಸು ನಡೆಯಿತು. ಅವರು ಮನೆಗೆ ಹೊರಟರು.(ಮುಂಡೇದು ಹೇಗೆ ಬಿತ್ತು ಅಂತೆಲ್ಲಾ ಹೇಳಿದೆ ವಿವರವಾಗಿ. ಅದರಿಂದ ತಲೆಗೆ ಅಂತ ಪೆಟ್ಟು ಬಿದ್ದಿರೋ ಹಾಗಿಲ್ಲ. ತಲೆಗೆ ಪೆಟ್ಟು ಬಿದ್ದಿದ್ದರೆ ಅದಕ್ಕೆ ಇಷ್ಟು ಮಾತಾಡುಕ್ಕೆ ಆಗ್ತಾ ಇರಲಿಲ್ಲ.(ಅದು ಅಂದರೆ ನಾನು, ಮುಂಡೇದು ಅಂದರೆ ಅದೂ ನಾನೇ)ಬೆಳಿಗ್ಗೆ ಹೋಗೋದೇ ವಾಸಿ ಅಂತ ಆಕೆ ಐಡಿಯಾ ಕೊಡ್ತು, ಅದು ನಮ್ಮದಕ್ಕೂ ಒಪ್ಪಿಗೆ ಆಯ್ತು.. ಇದು ಎಷ್ಟೋ ದಿವಸದ ನಂತರ ನನಗೆ ತಿಳಿದದ್ದು)

ಅವರು ಮನೆಗೆ ಹೋದರು. ಇಲ್ಲಿ ನನ್ನ ಸಂಪೂರ್ಣ ತಲಾಶ್ ನಡೆಯಿತು. ಎಡಗೈ ಇನ್ನೂ ನೇತಾಡುತ್ತಾ ಇತ್ತಲ್ಲ. ಅದನ್ನ ಹೇಗೋ ಮಡಿಸಿ ಒಂದು ಪಂಚೆಯನ್ನ ಸ್ವಿಂಗ್ ತರಹ ಮಾಡಿ ಕೊರಳಿಗೆ ನೇತು ಹಾಕಿದ್ದಳು. ಇಷ್ಟು ಹೊತ್ತಿಗೆ ಮೈಮೇಲೆ ಬಂದಿದ್ದ ಚಾಮುಂಡಿ ದೇವತೆ ಕೊಂಚ ಶಾಂತವಾಗಿತ್ತು. ತಟ್ಟೆಯಲ್ಲಿ ಅನ್ನ, ದಂಟಿನ ಸೊಪ್ಪಿನ ಹುಳಿ ಕಲಸಿ ಕೊಟ್ಟಳು. ಅದಾದ ಮೇಲೆ ಮೊಸರನ್ನ ಜತೆಗೆ ಬಾಳಕದ ಮೆಣಸಿನಕಾಯಿ. ಇದು ನನಗೆ ತುಂಬಾ ಇಷ್ಟದ್ದು. ಕೆಲವರಿಗೆ ಬಾಡೂಟ ಅಂದರೆ ಎಷ್ಟು ಇಷ್ಟವೋ ಅದರ ಹತ್ತರಷ್ಟು ಇಷ್ಟ ಇದು ನನಗೆ. ಈ ಪುಟ್ಟ ಪ್ರಸಂಗ ನಡೆದು ನಲವತ್ತು ವರ್ಷಗಳ ಮೇಲಾಗಿದೆ, ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀ ಅಂತ ನೀವು ಕೇಳ್ತೀರಿ ಅಂತ ನನಗೆ ಗೊತ್ತು. ಜೀವನದಲ್ಲಿ ಸಂತೋಷ ಕೊಟ್ಟ ಪ್ರತಿ ಕ್ಷಣವೂ ಮನಸಿನಲ್ಲಿ ಅಚ್ಚು ಒತ್ತಿದ ಹಾಗೆ ಇದೆ ಅಷ್ಟೇ! ಆದರೆ ಅದೇ ನೋವು ಕೊಟ್ಟ ಸಂಗತಿ ಇಲ್ಲವೇ ಅಂದರೆ ಅದೂ ಸಹ ಇದೆ. ಕೆಲಸಕ್ಕೆ ಸೇರಿದ ಹೊಸದರಲ್ಲಿ ಇಪ್ಪತ್ತು ರೂಪಾಯಿ ಸಾಲ ಇಸಕೊಂಡ ಗೆಳೆಯ ಅದಕ್ಕೆ ನಾಮ ಹಾಕಿದ್ದು, ಅದನ್ನ ಮರೆತೇ ಹೋಗಿದ್ದೂ ಇನ್ನೂ ನೆನಪಲ್ಲಿದೆ. ಆದರೆ ಅದನ್ನೇ ನೆನೆದು ನೆನೆದು ಕೊರಗುವ ಹಂತ ದಾಟಿ ತುಂಬಾ ದೂರ ಬಂದು ಬಿಟ್ಟಿದ್ದೀನಿ!

ಅವತ್ತು ಅವಳೇ ಅಂದರೆ ನನ್ನಾಕೆಯೇ ಹಾಸಿಗೆ ಹಾಸಿದಳು (ಇದು ನಮ್ಮಿಬ್ಬರ ನಡುವಿನ ಅನ್‌ರಿಟನ್ ಒಪ್ಪಂದದ ರೀತ್ಯಾ ನನ್ನ ಕೆಲಸ. ಈ ಲಾ ಹೇಗೆ ಕೆಲಸ ಮಾಡ್ತಾ ಇದೆ ಅಂದರೆ ಇಷ್ಟು ವರ್ಷಗಳ ನಂತರವೂ ಸಹ ಈ ಜವಾಬ್ದಾರಿ ನನ್ನದೇ..! ಇದು ನಮ್ಮ ಸಂಸಾರದ ಗುಟ್ಟು. ಯಾರಿಗೂ ಹೇಳಬೇಡಿ) ಇದಾದ ಎಷ್ಟೋ ವರ್ಷಗಳ ನಂತರ ಅವತ್ತು ನಾನು ಮನೆಗೆ ಬಂದಾಗ ಹೇಗೆ ಕಾಣಿಸುತ್ತಾ ಇದ್ದೆ ಎಂದು ಒಳ್ಳೆಯ ಮೂಡ್‌ನಲ್ಲಿದ್ದಾಗ ಹೆಂಡತಿ ಹೇಳಿದಳು. ಅದನ್ನು ನಿಮಗೆ ವಿವರಿಸಿ ಮುಂದಕ್ಕೆ ಹೋಗುತ್ತೇನೆ, ಇಲ್ಲವಾದಲ್ಲಿ ಇಂತಹ ಪ್ರಸಂಗ ಮರೆತುಬಿಡುತ್ತೆ ಮತ್ತು ನಮ್ಮ ಸಾರಸ್ವತ ಲೋಕಕ್ಕೆ ಒಂದು ಜಾಗತಿಕ ದಾಖಲೆ ತಪ್ಪಿ ಹೋಗುತ್ತದೆ!

“ಮುಖ ಚದುರಿ ಹೋಗಿತ್ತು, ತಲೆಯ ಗುಂಗುರು ಕೂದಲು ನೇರ ಆಗಿ ಆಕಾಶ ನೋಡುತ್ತಾ ಇದ್ದವು. ಬಟ್ಟೆ ಹರಿದಿತ್ತು, ಮುಖ ಅದೇ ನಿನ್ನ ಕರೀ ಮೂತಿ ಕೆಂಚಗಾಗಿತ್ತು…. ವರ್ಣನೆ ಹೀಗಿತ್ತು. ಯಾವುದೋ ಬೀಸ್ ಸಾಲ್ ಬಾದ್ ಸಿನಿಮಾದ ಮುಂದುವರೆದ ಭಾಗದ ಮೈನ್ ಕ್ಯಾರೆಕ್ಟರ್ ತರಹ ಇದ್ದೆ. ಯಾರಿಗಾದರೂ ನೋಡಿದ ಕೂಡಲೇ ಭಯ ಆಗೋ ಹಾಗಿದ್ದೆ. ಇವತ್ತೂ ನಿನ್ನ ಅವತ್ತಿನ ಮುಖ ಆಕಾರ ಕಣ್ಣಿಗೆ ಕಟ್ಟಿದ ಹಾಗೇ ಇದೆ…..” ಇದಕ್ಕಿಂತ ಬೇರೆ ಡಿಸ್ಕ್ರಿಪ್ಷನ್ ಬೇಕಾ…?

ಮಾರನೇ ದಿವಸ ಆಸ್ಪತ್ರೆಗೆ ಬೇಗ ಹೋದೊ. ಅಲ್ಲಿ ಡಾಕ್ಟರು ನೋಡಿದ್ರಾ?

“ಮಾಡಿ ಮೇಲಿಂದ ಬಿದ್ರಿ, ಯಾರಾದರೂ ತಳ್ಳಿದರಾ? ಯಾಕೆ ಕೇಳ್ತೀನಿ ಅಂದರೆ ಯಾರಾದರೂ ತಳ್ಳಿದ್ದರೆ ಅದು ಅಟೆಂಪ್ಟ್ ಟು ಮರ್ಡರ್. ಪೊಲೀಸ್ ಕೇಸು. ಅವರನ್ನ ಕರೆಸಬೇಕಾಗುತ್ತೆ…”

ಅವರನ್ನ ಕರೆಸೋದು ಅಂದರೆ ಯಾರನ್ನ? ತಲೇಲಿ ಕನ್ಫ್ಯೂಷನ್ ಶುರು ಆಯ್ತಾ..?

“ಅವರು ಅಂದರೆ ಯಾರು…?” ಅಂದೆ.

ಕಕ್ಕಾಬಿಕ್ಕಿ ಆದರು. ನನ್ನ ಮುಖ ನೋಡಿದರು, ನನ್ನಾಕೆ ಮುಖ ನೋಡಿದರು.

“ಏನಮ್ಮಾ ಕೇಳಿದ್ದಕ್ಕೆ ಸರಿಯಾಗಿ ಅನ್ಸರ್ ಮಾಡ್ತಾ ಇದಾರಾ? ಸೆನ್ಸ್ ಸರಿಯಾಗಿದೆಯಾ….” ಅಂತ ಕೇಳಿದರು.

“ಹೂಂ ಈಗ ಹೇಳಿ ಗೋಪಾಲಕೃಷ್ಣ. ಮೊದಲಿಂದ ಹೇಳಿ. ನೀವು ಸೈಟ್ ಹತ್ರ ಹೋಗಿದ್ದು, ಮಾಡಿ ಹತ್ತಿದ್ದು ಹೇಳಿ…”

ಸರಿ ಮೊದಲಿಂದ ಶುರು ಮಾಡಿದೆ. ಮಧ್ಯ ಮಧ್ಯ ಸಪ್ಲಿಮೆಂಟ್ ಪ್ರಶ್ನೆ ಎಸೆದರಾ..? ಹೆಂಡತಿ ಕಡೆ ತಿರುಗಿದರು.(ಏನಾದರೂ ಈಗ ಅವತ್ತು ಬಿದ್ದ ಹಾಗೆ ಬಿದ್ದಿದ್ದರೆ ಮೊದಲು ಆಸ್ಪತ್ರೆಗೆ ಸೇರಿಸಿ ಎಲ್ಲಾ ತರಹದ ಪ್ರಯೋಗ ಮಾಡಿ ಮಿನಿಮಮ್ ಒಂದೂವರೆ ಕೋಟಿ ಬಿಲ್ ಮಾಡ್ತಾ ಇದ್ದರು. ಅದಕ್ಕೆ ನನಗೆ ಏನು ಖುಷಿ ಅಂದರೆ ಆಗ ಅಂದರೆ ಎಪ್ಪತ್ತೈದು ವರ್ಷ ಮೊದಲು ಹುಟ್ಟಿದ್ದರಿಂದ ಎಷ್ಟೊಂದು ಹಣ ಅದರಲ್ಲೂ ಮಿನಿಮಮ್ ಒಂದೂವರೆ ಕೋಟಿ ಮಿಗಿಸಿದೆ ಅಂತ)

“ಬುರುಡೆಗೆ ಏನೂ ಏಟು ಬಿದ್ದ ಹಾಗಿಲ್ಲಮ್ಮ. ಆದರೂ ಕೇರ್ ಫುಲ್ ಆಗಿರಬೇಕು. ತಲೆನೋವು ತಲೆಸುತ್ತು ವಾಂತಿ ಕಣ್ಣು ಮಂಜು ಅಂತ ಏನಾದರೂ ಅಂದರೆ ಕೂಡಲೇ ಕರ್ಕಂಡು ಬನ್ನಿ. ಈಗ ಅನಸ್ತೇಶಿಯಾ ಕೊಟ್ಟು ಮೂಳೆ ಜೋಡಿಸಬೇಕು..

……ಎಚ್ಚರ ಆದಾಗ ಕೈಗೆ ಪ್ಲಾಸ್ಟರ್ ಹಾಕಿದ್ದರು. ಕೊರಳಿಂದ ಒಂದು ಪಟ್ಟಿ ನೇತು ಹಾಕಿ ಅದರಲ್ಲಿ ಕೈ ತೂರಿಸಿದ್ದರು…!

“ಆರು ವಾರ ಈ ಕಟ್ಟು ಇರಬೇಕಂತೆ… ಹೊಸದಾಗಿ ಯಾವುದೇ ಸರ್ಕಸ್ ಮಾಡಬಾರದು ಅಂತ ಹೇಳಿದ್ದಾರೆ…..”‌ ಅಂದಳು ಹೆಂಡತಿ!

ಕೈ ಹೀಗೆ ನೇತು ಹಾಕಿಕೊಂಡು ಅದೇನು ಸರ್ಕಸ್ ಮಾಡಲು ಸಾಧ್ಯ ಅಂತ ಗೊಣಗಿಕೊಂಡೆ. ಇದು ರೂಫ್ ಮೇಲಿಂದ ಉರುಟಿಕೊಂಡ ಕತೆ. ಇನ್ನು ಮನೆ ಕತೆಗೆ ಹಾರುತ್ತೇನೆ.

ಕೈಗೆ ಪ್ಲಾಸ್ಟರ್ ಹಾಕಿಕೊಂಡೇ ಸೈಟ್ ಬಳಿ ಹೋದೆ. ಮಲ್ಲಯ್ಯ ಅವನ ಗ್ಯಾಂಗ್ ಸುತ್ತಲೂ ನಿಂತು ಕತೆ ಕೇಳಿದರು. ಅಯ್ಯೋ ಸಾಮಿ ಸತ್ತು ಬದುಕಿದೀರಾ ನೀವು. ದೇವರು ನಿಮ್ಮನ್ನ ಕಾಪಾಡಿದ. ಅಮ್ಮನೋರಿಗೆ ಹೇಳಿ ದೇವರಿಗೆ ಮುಡಿಪು ಕಟ್ಟಿಸಿ ಅಂತ ಅಡ್ವೈಸ್ ಮಾಡಿದ. ನಾನು ಅದನ್ನ ಅಲ್ಲೇ ಮರೆತೆ! ತುಂಬಾ ವರ್ಷಗಳ ನಂತರ ನಾನು ರಿಟೈರ್ ಆದಮೇಲೆ ಯಾವುದೋ ಪುಣ್ಯಕ್ಷೇತ್ರಕ್ಕೆ ಹೆಂಡತಿ ಬಲವಂತಕ್ಕೆ ಹೋಗಿದ್ದೆವು. ಅಲ್ಲಿ ಹೆಂಡತಿ ದೇವರಿಗೆ ಅದೇನೋ ಸೇವೆ ಮಾಡಿಸಿದಳು. ಹಿಂದಿನ ಒಂದು ಹರಕೆ ಇವತ್ತು ಒಪ್ಪಿಸಿದೆ ಅಂತ ಹೇಳುತ್ತಾ ಇದ್ದದ್ದು ಕಿವಿಗೆ ಬಿತ್ತು. ಅದಕ್ಕೂ ನಾನು ಬಿದ್ದದ್ದಕ್ಕೂ ಲಿಂಕ್ ಕಲ್ಪಿಸಲು ಆಗ ನೆನಪಾಗಲಿಲ್ಲ!

ಸೈಟ್ ಏರಿಯಾದ ನೆಲದ ಮೇಲೇ ನಿಂತು ಅಂದರೆ ಕೆಳಗೇ ನಿಂತು ಕೊಡಬೇಕಾದ ಸಲಹೆಗಳನ್ನು ಯತೇಚ್ಛಾಗಿ ಕೊಟ್ಟೆ. ಮೌಲ್ಡಿಂಗ್ ದಿವಸ ಕೆಲಸಗಾರರಿಗೆ ಊಟ ಹಾಕುವ ಒಂದು ಸಂಪ್ರದಾಯ ಇತ್ತು ಆಗ. ಸರಿ ಅದಕ್ಕೆ ಒಂದು ಪುಟ್ಟ ಸಿದ್ಧತೆ ಬೇಕಲ್ಲಾ. ಈ ವೇಳೆಗೆ ನಾನು ಬಿದ್ದು ಕೈ ಮುರಿದುಕೊಂಡ ಸುದ್ದಿ ಇಡೀ ಪ್ರಪಂಚಕ್ಕೆ ತಿಳಿದು ಬಂಧುಗಳು ವಿಚಾರಿಸಲು ಶುರು ಮಾಡಿದ್ದರು. ಮೊದಲನೇ ಸರ್ಕಲ್‌ನವರು ಮನೆಗೆ ಬಂದು ವಿಚಾರಿಸಿದ್ದರು. ಮೌಲ್ಡಿoಗ್ ಹಿಂದಿನ ದಿವಸ ನನ್ನ ಭಾಮೈದ ಬಂದರು.

ನಾವಿದ್ದ ಬಾಡಿಗೆ ಮನೆ ಹತ್ತಿರ ಒಂದು ಪುಟ್ಟ ಮನೆಯಲ್ಲಿ ಗಂಡ ಹೆಂಡತಿ ಎರಡು ಪುಟ್ಟ ಮಕ್ಕಳು ಇದ್ದ ಸಂಸಾರ ಬೆಳಿಗ್ಗೆ ಇಡ್ಲಿ ಮಾಡಿ ಕೇಟರ್ ಮಾಡುತ್ತಿದ್ದರು. ಪೊಟ್ಟಣ ಕಟ್ಟಲು ನಮ್ಮ ಮನೆಯಿಂದ ಪೇಪರ್ ಒಯ್ಯುತ್ತಿದ್ದರು. ಆಗಾಗ ನಾವೂ ಇಡ್ಲಿ ತರುತ್ತಿದ್ದೆವು. ಅದರಿಂದ ಪರಿಚಯ ಹೆಚ್ಚಿತ್ತು. ಅವರಿಗೇ ಹೇಳಿ ಬಿಸಿಬೇಳೆ ಭಾತ್ ಮೊಸರನ್ನ ಒಂದು ಸಿಹಿ ಆರೇಂಜ್ ಆಯ್ತಾ?

ಮೌಲ್ಡಿಂಗ್ ದಿವಸ ಮಳೆಯೋ ಮಳೆ. ಮೌಲ್ಡಿಂಗ್ ಶುರು ಆದಮೇಲೆ ಮಳೆ ಹೊಡೆದು ಹೊಡೆದು ಚಚ್ಚಿ ಹಾಕಿ ಬಿಡ್ತು. ಊಟ ಅಲ್ಲಿಗೆ ಬರಲಿ ಅಂತ ನಾನು ಸೈಟ್ ಬಳಿ ಇಲ್ಲಿ ಮನೆ ಹತ್ತಿರವೂ ಮಳೆ..! ಮೌಲ್ಡಿಂಗ್ ಆಗುತ್ತೋ ಇಲ್ಲವೋ ಎನ್ನುವ ಅನುಮಾನ ಮನೆಯಲ್ಲಿ. ಅಡುಗೆ ಬೇಡ ಅನ್ನುವುದೂ ಬೇಡ ಅನ್ನುವುದೂ ತಿಳಿಯದ ಅಯೋಮಯ ಸ್ಥಿತಿ!

ಅಯೋಮಯ ಎನ್ನುವ ಪದಕ್ಕೆ ನಿಜವಾಗಲೂ ನನಗೆ ಅರ್ಥ ಗೊತ್ತಿಲ್ಲ! ನನಗಿಂತ ಬುದ್ಧಿವಂತರು ಮತ್ತು ನವ್ಯ ಸಾಹಿತಿಗಳು ಈ ಪದ ತುಂಬಾ ಉಪಯೋಗಿಸುತ್ತಿದ್ದರು ಎಂದು ಈ ಪದ ಹಾಕಿದೆ. ಇಲ್ಲಿ ನಾನು ಅಯೋಮಯ ಪದವನ್ನು ಎಬ್ಬಂಕನ ಮನೋಸ್ಥಿತಿಯನ್ನು ವಿವರಿಸಲು ಉಪಯೋಗಿಸಿದ್ದೇನೆ. ಯಾಕೆ ಈ ಸ್ಥಿತಿ ಅಂದರೆ ಆಗ ಮೊಬೈಲ್ ಫೋನು ಎನ್ನುವ ಮಾಯಾಂಗನೆ ಇನ್ನೂ ಜನ್ಮ ತಳೆದಿರಲಿಲ್ಲ! ಅದರಿಂದ ಯಾವ ಸಮಾಚಾರವೂ, ಸುದ್ದಿಯೂ ಬೇಗ ರೀಚ್ ಆಗುತ್ತಿರಲಿಲ್ಲ!

ಸರಿ ಈ ಗೊಂದಲದಲ್ಲೇ ಅಡುಗೆ ರೆಡಿ ಆಗಿಬಿಟ್ಟಿತು. ಇದು ಮನೆಯ ಬಳಿ. ಸೈಟ್ ಹತ್ತಿರ ಮಳೆ ಐದು ನಿಮಿಷ ಹತ್ತು ನಿಮಿಷ ಗ್ಯಾಪ್ ಅಂದರೆ ಬಿಡುವು ಕೊಟ್ಟರೆ ಅದರಲ್ಲೇ ಕಾಂಕ್ರೀಟ್ ಸುರಿಯೋದು, ಅದರ ಮೇಲೆ ಟಾರ್ಪಾಲ್ ಹಾಕೋದು… ಹೀಗೆ ದೊಡ್ಡ ಸರ್ಕಸ್ ಮಾಡಿ ರೂಫ್‌ಗೆ ಕಾಂಕ್ರೀಟ್ ಸುರಿಯೋದು ಮಾಡಿದ ಮಲ್ಲಯ್ಯ. ಪೂರ್ತಿ ಮಳೆನೀರು ಮತ್ತು ಮನೆ ಹತ್ತಿರ ಉಂಟಾಗಿದ್ದ ಹಳ್ಳದಲ್ಲಿ ತುಂಬಿಕೊಂಡ ನೀರು ಮನೆ ರೂಫ್ ಕಾಂಕ್ರಿಟ್ ಹಾಕಲು ಉಪಯೋಗ ಆಯಿತು! ಅಂದರೆ ನೀರಿನ ಸದುಪಯೋಗ, ರಿ ಸೈಕ್ಲಿಂಗ್ ಅನ್ನು ನಮ್ಮ ದೇಶದ ಪರಿಸರವಾದಿಗಳು ಕಂಡು ಹಿಡಿಯುವ ಮೊದಲೇ ನಾನು ಪ್ರಯೋಗಿಸಿದ್ದೆ!

ಊಟ ಎರಡು ದೊಡ್ಡ ಡಬರಿಯಲ್ಲಿ ಇಟ್ಟುಕೊಂಡು ರಿಕ್ಷಾದಲ್ಲಿ ಹೊತ್ತು ಕೆರೆ ಮೇಲೆ ಅತ್ತ ಇತ್ತ ಹೊಯ್ದಾಡುತ್ತಾ ಹೇಗೋ ಸೈಟ್ ಹತ್ತಿರ ಭಾಮೈದ ಮತ್ತು ಹೆಂಡತಿ ಮಗು ತಂದರು! ಸ್ವೀಟು ಒಂದು ರಟ್ಟಿನ ಡಬ್ಬದಲ್ಲಿ ಇತ್ತು.

ಮಳೆಯಲ್ಲಿ ಮೌಲ್ಡಿಂಗ್‌ ಮುಗಿಸಿದ ಖುಷಿ ಮತ್ತು ಮಲ್ಲಯ್ಯನ ಹಾರ್ಡ್ ವರ್ಕ್ ಒಂದು ರೀತಿ ನನ್ನ ಉತ್ಸಾಹ ಹೆಚ್ಚಿಸಿತ್ತು ಅಂತ ಕಾಣುತ್ತೆ. ಪೂರ್ತಿ ಗ್ಯಾಂಗ್‌ಗೆ ಊಟ ಮತ್ತು ನನಗೆ ಸ್ವಲ್ಪ ಭಾರ ಅನಿಸಿದ ಭಕ್ಷೀಸು ವಿತರಣೆ ಆಯ್ತಾ..?

ಒಂದು ಕೈ ಸ್ಲಿಂಗ್‌ನಲ್ಲಿ ಇದ್ದ ಹಾಗೇ ಮನೆ ಸೇರಿದೋ. ಮುಂದೆ ನಾಲ್ಕು ವಾರ ನೀರು ಬಿಡೋದು, ಅದಕ್ಕೆ ಕಟ್ಟೆ ಕಟ್ಟೋದು ಇದು ನಮ್ಮ ವಾಚ್ಮನ್ ಚೌರಿ ಕೆಲಸ. ಮಲ್ಲಯ್ಯ ಆಗಾಗ ಬಂದು ಮುಂದೆ ಏನು ಮಾಡಬೇಕು ಅಂತ ಪ್ಲಾನ್ ಮಾಡೋದು. ಈಗ ಕೈಲಿ ಇದ್ದ ಕಾಸು, ಬ್ಯಾಂಕ್‌ನವರು ಕೊಟ್ಟಿದ್ದ ಎರಡನೇ ಕಂತು ಸಹ ಖಾಲಿ ಆಗಿತ್ತು. ಎಲ್‌ಐಸಿ ಮುಂತಾದ ಕಡೆ ಕೈಸಾಲ ಸಿಗುವಷ್ಟು ಹಣ ಇಟ್ಟಿರಲಿಲ್ಲ. ಅದಕ್ಕಿಂತ ತಮಾಷೆ ಅಂದರೆ ನನ್ನ ತರಹ ಸಾಲ ಸೋಲ ಮಾಡಿ ಮನೆ ಕಟ್ಟಿದವರು ಮನೆಯಲ್ಲಿದ್ದ ಚಿನ್ನ ಮಾರಿ ದುಡ್ಡು ಹೊಂದಿಸುತ್ತಾ ಇದ್ದರು. ಚಿನ್ನ ಇರುವುದು ಆಪತ್ ಕಾಲಕ್ಕೆ ಎನ್ನುವ ಗಟ್ಟಿಯಾದ ನಂಬಿಕೆ ಸಾಮಾನ್ಯವಾಗಿ ತಳ ಮಧ್ಯಮ ವರ್ಗದ ಎಲ್ಲರಲ್ಲೂ ಆಗ ಆಳವಾಗಿ ಬೇರೂರಿತ್ತು!

ಹಣದ ಅಗತ್ಯ ಬಿದ್ದಾಗ ನನಗೆ ತಿಳಿದಿದ್ದ ಉತ್ತರ ಕರ್ನಾಟಕದ ಸಹೋದ್ಯೋಗಿ ಒಬ್ಬರು ಕುಬೇರಪ್ಪ ಅಂತ ಅವರ ಹೆಸರು ಇರಬೇಕು (ಇದು ಅಸ್ಪಷ್ಟ, ಕ್ಷಮಿಸಿ) ಅವರು ಚಿನ್ನ ಮಾರಿದ್ದು ನೋಡಿದ್ದೆ. ನೋಡಿದವನು ಸಖತ್ ಆಶ್ಚರ್ಯ ಪಟ್ಟಿದ್ದೆ. ಆಶ್ಚರ್ಯ ಯಾಕೆ ಅಂತ ಹೇಳ್ತೀನಿ ಕೇಳಿ.

ಕುಬೇರಪ್ಪನ ಮನೆ ಮತ್ತೀಕೆರೆಯಲ್ಲಿ. ಮೊದಲನೇ ಶಿಫ್ಟ್ ಮುಗಿಸಿ ಮನೆಗೆ ಸೈಕಲ್ ಮೇಲೆ ಹೋದರ? ಎರಡು ಜೋಳದ ಕಡಕ್ ರೊಟ್ಟಿ ಜತೆಗೆ ಅಲಸಂದೆ ಕಾಳು ಪಲ್ಯ ತಿಂದರಾ? ಒಂದು ಕಪ್ ಕಡಕ್ ಮಸಾಲೆ ಚಾ ಕುಡಿದರಾ? ಕಬೋರ್ಡ್ ಬಾಗಿಲು ತೆಗೆದರಾ.. ಅದರಲ್ಲಿ ಇಟ್ಟಿದ್ದ ಡಾಬು, ಒಂಕಿ, ಓಲೆ, ಅವಲಕ್ಕಿ ಸರ ಕಾಸಿನ ಸರ… ಹೀಗೆ ಎಲ್ಲವನ್ನೂ ಆಚೆ ತೆಗೆದರಾ .. ಮೊದಲೇ ಒಂದು ಬ್ಯಾಗ್ ಅಡಿಗೆಮನೆಯಿಂದ ತಂದಿದ್ದ. ನಲವತ್ತು ಐವತ್ತು ವರ್ಷ ಹಿಂದೆ ಯಾವುದೋ ಇಂಗು ಬರ್ತಾ ಇತ್ತು. ಎಸ್ ಎಸ್ ಪಿ ಬ್ರಾಂಡಾ? ಇರಬಹುದು. ಅದರ ಹೆಸರು ಹಳದಿ ಬಣ್ಣದ ಬಟ್ಟೆ ಬ್ಯಾಗ್ ಮೇಲೆ, ಕೆಂಪು ಅಕ್ಷರದಲ್ಲಿ ಇಂಗು ಬ್ರಾಂಡಿನ ಹೆಸರು. ಅಂಗಡಿಗೆ ಒಯ್ದು ಒಂದು ಐದು ಕೇಜಿ ಜೋಳ ಹಿಡ್ಕೊಂಡು ಬರೋಷ್ಟ್ ದೊಡ್ಡದು ಬ್ಯಾಗು. ಅದರಲ್ಲಿ ಚಿನ್ನದ ಒಡವೆ ಹಾಕಿದ. ಬ್ಯಾಗ್ ಕೈಗೆ ತಗೊಂಡು ಲೇ ಉಸಾರು. ಯಶವಂತ ಪುರ ಹೋಗಿದ್ ಬರ್ತೀನಿ ಅಂತ ಚೀಲ ಕೈಲಿ ಹಿಡಿದು ಆರಾಮವಾಗಿ ಬ್ಯಾಗ್ ಅಲ್ಲಾಡಿಸುತ್ತಾ ನಡೆದುಕೊಂಡು ಯಶವಂತಪುರಕ್ಕೆ ಹೋದ!

ಅಲ್ಲಿನ ಪಾನ್ ಬ್ರೋಕರ್ ಅಂಗಡಿಯಲ್ಲಿ ಅದನ್ನ ಮಾರಿದ. ಪಾನ್ ಬ್ರೋಕರ್ ಅಂದರೆ ಚಿನ್ನ ಬೆಳ್ಳಿ ಅಡವು ಇಟ್ಟುಕೊಂಡು ಅಥವಾ ಕೊಂಡುಕೊಂಡು ಹಣ ಕೊಡೋ ಅಂಗಡಿ. ಆಗಲೂ ಈಗಲೂ ಇದು ರಾಜಸ್ಥಾನದ ಮಾರವಾಡಿ ಗುಂಪು ನಡೆಸುವ ವ್ಯವಹಾರ. ಆಗ ನೂರಕ್ಕೆ ಇಬ್ಬರೋ ಮೂರು ಜನ ಶೆಟ್ಟರು ಈ ವ್ಯವಹಾರ ಮಾಡುತ್ತಿದ್ದರು. ಈಗೊಂದು ಹತ್ತು ವರ್ಷದಲ್ಲಿ ಈ ವ್ಯವಹಾರಕ್ಕೆ ಕೇರಳದ ಜನ, ಆಂಧ್ರದ ಶೆಟ್ಟರು ಹೆಚ್ಚಾಗಿ ಬಂದಿದ್ದಾರೆ. ಇಡೀ ಬೆಂಗಳೂರಿನ ಎಲ್ಲಾ ಕಡೆ ಅಂದರೆ ದೊಡ್ಡ ದೊಡ್ಡರಸ್ತೆಗಳಲ್ಲಿ ಕೇರಳದ ಜನ ಮತ್ತು ಆಂಧ್ರದವರು ಚಿನ್ನ ಬೆಳ್ಳಿ ಅಂಗಡಿ ತೆರೆದು ವ್ಯವಹಾರ ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ. ಈಗ ಈ ಉದ್ಯಮಕ್ಕೆ ಉತ್ತರ ಭಾರತದವರು ಸಹ ಸೇರುತ್ತಿದ್ದು ಬೆಂಗಳೂರು ಎಲ್ಲರಿಗೂ ಒಂದು ಆಡುಂಬೋಲ, ಸರ್ವ ಜನಾಂಗದ ಶಾಂತಿಯ ತೋಟ!

ಮತ್ತೆ ಕುಬೇರಪ್ಪನ ಕತೆಗೆ. ಇವನು ಹಳದಿ ಬ್ಯಾಗ್‌ನಲ್ಲಿ ತುಂಬಿಕೊಂಡು ಹೋದ ಹಳದಿ ಬಣ್ಣದ ಚಿನ್ನ ಅಲ್ಲಿ ಪಾನ್ ಬ್ರೋಕರ್‌ಗೆ ಮಾರಿದ. ಇಪ್ಪತ್ತೆರಡು ಸಾವಿರ ದುಡ್ಡು ಬಂತು. ಆಗ ಚಿನ್ನಕ್ಕೆ ತೊಲಕ್ಕೆ ಸಾವಿರ ರೂಪಾಯಿಗೂ ಕಡಿಮೆ ಬೆಲೆ ಇದ್ದದ್ದು! ತೊಲ ಅಂದರೆ ಎಂಟು ಗ್ರಾಂ ಅಂತೆ, ನನಗೆ ಗೊತ್ತಿಲ್ಲದ ಸಂಗತಿ ಇದು! ಈ ಸಂಗತಿಯನ್ನು ಇಷ್ಟು ವಿವರವಾಗಿ ಯಾಕೆ ಹೇಳಿದೆ ಅಂದರೆ ಈಗ ಐದು ಗ್ರಾಂ ಚಿನ್ನ ಮಾರಬೇಕು ಅಂದರೂ ಎಷ್ಟು ಜತನದಿಂದ ಜೋಪಾನವಾಗಿ ತಗೊಂಡು ಹೋಗುತ್ತಾರೆ ಅಂತ….! ನಮ್ಮ ನೆಂಟರು ಒಬ್ಬರು ಬ್ಯಾಂಕ್‌ನ ಲಾಕರ್‌ನಲ್ಲಿ ಇವರ ಒಂದು ಎರಡು ಗ್ರಾಮ್‌ನ ಚಿನ್ನದ ಉಂಗುರ ಇಡಬೇಕಾದರೇನೆ ಅವರ ಗಂಡ ಎರಡು ಗಂಡು ಮಕ್ಕಳು ಒಬ್ಬ ಕೆಲಸದ ಯುವಕ ಇವರ ಮಧ್ಯೆ ಕಾವಲಿನಲ್ಲಿ ಹೋಗುತ್ತಾರೆ!

ಚಿನ್ನ ಅಂದ ಕೂಡಲೇ ಮತ್ತೊಂದು ನೆನಪು ತೀರಾ ಈ ಚಿನದು, ಬರೇ ಇಪ್ಪತ್ತು ವರ್ಷ ಹಿಂದಿನದು ಹೇಳಬೇಕು ನಿಮಗೆ. ನಮ್ಮ ಕಾರ್ಖಾನೆಗೆ ಐವತ್ತು ತುಂಬಿತು ಮತ್ತು ಅದೇ ಸಮಯಕ್ಕೆ ನವರತ್ನ ಸ್ಟೇಟಸ್ ಸಹ ಬಂತು. ಅಲ್ಲಿ ಕೆಲಸ ಮಾಡುವ ನಮಗೆ ಭಕ್ಷೀಸು ಲೆಕ್ಕದಲ್ಲಿ ಎಂಟು ಗ್ರಾಂ ಚಿನ್ನದ ನಾಣ್ಯ ಕೊಟ್ಟರು. (ಅದೇ ವರ್ಷವೋ ಅಥವಾ ಒಂದೆರೆಡು ವರ್ಷಗಳ ಅಂತರದಲ್ಲಿ ಕೆಲವು ಸರ್ಕಾರಿ ಬ್ಯಾಂಕ್‌ಗಳು ಇದೇ ತರಹ ಹಬ್ಬ ಮಾಡಿಕೊಂಡವು. ಅದರ ನೌಕರರಿಗೆ ಭಕ್ಷೀಸು ರೂಪದಲ್ಲಿ ಐದು ಗ್ರಾಂ ಚಿನ್ನ ಕೊಟ್ಟವು. ಮೂರು ಗ್ರಾಂ ಹೆಚ್ಚು ಸಿಕ್ಕಿತಲ್ಲ, ನಾವು ಎಂತಹ ಲಕ್ಕಿ ಎಂದು ಆಗ ನಾನು ಬೀಗಿದ್ದೆ)

ನಮಗೆ ಚಿನ್ನ ಕೊಟ್ಟ ಕಾಲದಲ್ಲಿ ಆಗ ಅದರ ಬೆಲೆ ಕೆಲವು ಸಾವಿರ ಆದರೂ ಅಂದಿಗೆ ಅದು ದೊಡ್ಡದು. ಮೊನ್ನೆ ಅಂದರೆ ಕಳೆದ ತಿಂಗಳು ಚಿನ್ನ ಏರಿತು ಏರಿತು ಏರಿತು ನೋಡಿ, ಆಗ ಸುಮ್ಮನೆ ನನಗೆ ಕೊಟ್ಟಿದ್ದ ಎಂಟು ಗ್ರಾಂ ಚಿನ್ನದ ನಾಣ್ಯ ಎಷ್ಟು ಬಾಳುತ್ತೆ ಅಂತ ಲೆಕ್ಕ ಹಾಕಿದೆ! ಹೆಚ್ಚೂ ಕಮ್ಮಿ ಒಂದು ಲಕ್ಷ ಅದರ ಈಗಿನ ಕಿಮ್ಮತ್ತು! ನಾಣ್ಯ ಇನ್ನೂ ನಮ್ಮ ಹತ್ತಿರವೇ ಇದೆ. ಏಕ್ ದಂ ಒಂದು ಲಕ್ಷ ಈ ವಯಸ್ಸಲ್ಲಿ ನಿಮ್ಮ ಹತ್ತಿರ ಇದೆ ಅಂದರೆ ಅದೆಂತಹ ಫೀಲಿಂಗ್ ಅಲ್ಲವಾ? ಇನ್ನೂ ತಮಾಷೆ ಅಂದರೆ ಈ ಎಂಟು ಗ್ರಾಂ ಚಿನ್ನದ ನಾಣ್ಯವನ್ನು ಕೆಲವರು ಹೆಂಡತಿಗೆ ಗೊತ್ತಿಲ್ಲದ ಹಾಗೆ ಮಾರಿದರು. ಅಂತಹ ಚಿನ್ನದ ನಾಣ್ಯವನ್ನು ಆಗ ಕೆಲವು ಸಾವಿರ ಕೊಟ್ಟು ಕೊಂಡಿದ್ದ ನನ್ನ ಗೆಳೆಯರೊಬ್ಬರು ಇವತ್ತು ಅಂತಹ ಹದಿನಾರು ಕಾಯಿನ್ ಓನರ್! ಅವರ ಕಿಮ್ಮತ್ತು ಈಗ ಎಷ್ಟು?

ಮತ್ತೆ ಕುಬೇರಪ್ಪನ ಕತೆಗೆ. ಕುಬೇರಪ್ಪ ಚಿನ್ನ ಮಾರಿ ದುಡ್ಡು ತಂದ ಮತ್ತು ಆಪತ್ತಿಗೆ ಆಯಿತು. ನನ್ನ ಆಪತ್ತಿಗೆ ನನ್ನ ಹತ್ತಿರ ಚಿನ್ನವೇ ಇರಲಿಲ್ಲ. ನನಗೆ ಆಪತ್ತು ಬರೋದೇ ಇಲ್ಲ ಎನ್ನುವ ಅಚಲವಾದ ನಂಬಿಕೆ ನನಗೆ!

ನನ್ನಾಕೆ ಹತ್ರ ಒಂದು ಮುಕ್ಕಾಲು ಗ್ರಾಮ್‌ನ ತಾಳಿ ಒಂದಿತ್ತು ಮತ್ತು ಈಗಲೂ ಇದೆ. ಕೈಗೆ ಬಂದದ್ದು ಬಾಯಿಗೆ ಅಂತ ಚಿನ್ನದ ಮೇಲೆ ಆಸೆ ಪಟ್ಟು ಅದರ ಮೇಲೆ ಇನ್ವೆಸ್ಟ್ ಮಾಡಿರಲಿಲ್ಲ. ಅಮ್ಮ ಸೊಸೆಗೆ ಕೊಟ್ಟಿದ್ದ ಒಂದು ಸರ. ಮಾರಿದರೆ ಆಗ ಒಂದೆರೆಡು ಸಾವಿರ ಅಥವಾ ಕೆಲವು ನೂರು ಸಿಗ್ತಾ ಇತ್ತೇನೋ ಅಷ್ಟೇ…! ದುಡ್ಡಿನ ಯೋಚನೆ ಹತ್ತಿದರೆ ಆಕಾಶ ತಲೆಮೇಲೆ ಬಿದ್ದಹಾಗೆ ತಾನೇ? ಈ ಲಾಜಿಕ್ ಮುಂದೆ ಸಂಸಾರ ಬೆಳೆಯುತ್ತಾ ಬೆಳೆಯುತ್ತಾ ಬದಲಾಯಿತು ಮತ್ತು ನಿಧಾನಕ್ಕೆ ಚಿನ್ನ ಸೇರಿಸಿದ ಕತೆ ಮುಂದೆ ಯಾವಾಗಲಾದರೂ ಹೇಳುತ್ತೇನೆ! ಇದು ಅಂದಿನ ಸುಮಾರು ಕೆಳ ಮಧ್ಯಮ ವರ್ಗದವರ (ಅಂದರೆ lower middle class) ಕತೆ ಮತ್ತು ವ್ಯಥೆ.

ಚಾವಣಿ ಹಾಕಿದ ಮೇಲೆ ನಿಜವಾದ ಕಷ್ಟ ಗೊತ್ತಾಗೋದು ಮನೆ ಕಟ್ಟಬೇಕಾದರೆ ಅಂತ ಕೇಳಿದ್ದೆ. ಹಣ ಎಷ್ಟಿದ್ದರೂ ಸಾಲದು ಅಂತಲೂ ಹೇಳೋದು ಕೇಳಿದ್ದೆ. ಕೈಸಾಲ ಅನಿವಾರ್ಯ ಅಂತ ಹೆದರಿಸಿ ಬೇರೆ ಇದ್ದರು.

ಕೂತು ಮುಂದೆ ಆಗಬೇಕಾದ ಕೆಲಸಗಳ ಒಂದು ಪಟ್ಟಿ ತಯಾರಿಸಿದೆ, ಸತ್ಯಣ್ಣನ ಹೆಲ್ಪ್ ತಗೊಂಡು. ಬ್ಯಾಂಕ್‌ನಿಂದಾ ಇನ್ನೂ ಹನ್ನೊಂದು ಸಾವಿರ ಮೂರನೇ ಕಂತು ಬರಬೇಕಿತ್ತು. ಖರ್ಚು ಅದರ ಮೂರು ನಾಲ್ಕು ಪಟ್ಟು! ಕೈಸಾಲ ಅದೂ ಮೂರು ನಾಲ್ಕು ಪರ್ಸೆಂಟ್ ತಿಂಗಳಿಗೆ ಕೊಟ್ಟು ಮಾಡಲೇಬಾರದು ಅಂತ ನಿಶ್ಚಯಿಸಿ ಆಗಿತ್ತು. ಆಗಿನ ಕೈ ಸಾಲದ ಬಡ್ಡಿ ರೇಟು ತಿಂಗಳಿಗೆ ನೂರಕ್ಕೆ ಐದು ರುಪಾಯಿವರೆಗೆ ಇತ್ತು. ದುಡ್ಡು ಬೇಕು ಅಂದರೆ ಹುಡುಕಿಕೊಂಡು ಬಂದು ಕೊಡುವ ಜನ ಇದ್ದರು ಮತ್ತು ಅವರು ನನಗೆ ಗೊತ್ತಿತ್ತು ಸಹ. ಹಿಂದೆ ಫೈನಾನ್ಸ್ ಅಂಗಡಿ ಹುಡುಕಿ ಹೋಗಿದ್ದು ಹೇಳಿದ್ದೆ ತಾನೇ? ಒಂದು ರೌಂಡ್ ಹಾಕಿದರೆ ಒಂದು ಐವತ್ತು ಜನ ಸಾಲ ಕೊಡುವ ಜನ ಸಿಕ್ತಾ ಇದ್ದರು!

ಬೇರೆ ದಾರಿ ಹುಡುಕಬೇಕಿತ್ತು. ಬಡ್ಡಿ ಇಲ್ಲದೇ ಸುಮ್ಮನೆ ಫ್ರೆಂಡ್ ಶಿಪ್ ಸಾಲ ಯಾರು ಕೊಡಬಹುದು, ನನ್ನ ಹಮ್ಮಿಗೆ (ಇದಕ್ಕೆ ನಾನು ಕೊಬ್ಬು, ತಿಮಿರು ಅಂತ ಅರ್ಥ ಕೊಟ್ಟಿದ್ದೆ) ಧಕ್ಕೆ ಬಾರದ ಹಾಗೆ ಯಾರನ್ನು ಕೇಳಬಹುದು ಅಂತ ಮನಸಿನಲ್ಲೇ ಒಂದು ಅಂದಾಜು ಮಾಡಿದೆ. ಕೆಲವರು ಮೊದಲನೇ ಸ್ಕ್ರೀನಿಂಗ್‌ನಲ್ಲೇ ಪಟ್ಟಿಯಿಂದ ಹೋದರು. ಐದಾರು ಪರಿಷ್ಕರಣೆಯ ನಂತರ ಆರೇಳು ಸ್ನೇಹಿತರ ಹೆಸರು ಉಳಿದವು. ಅದರಲ್ಲಿ ಕಾನ್ಫಿಡೆನ್ಸ್ ಆಗಿ ಯಾರನ್ನ ಕೇಳಬಹುದು ಅಂತ ಇನ್ನೊಂದು ಪಟ್ಟಿ ತಯಾರಿಸಿ ಅವರನ್ನು ಕೇಳಬೇಕಿತ್ತು. ಆದರೆ ಹಾಗೆ ಕೇಳುವ ಪ್ರಸಂಗವೇ ಬರಲಿಲ್ಲ. ಇದು ಹೇಗೆ ಸಾಧ್ಯವಾಯಿತು ಮತ್ತು ಯಾವ ಮ್ಯಾಜಿಕ್ ಇಲ್ಲಿ ಕೆಲಸ ಮಾಡಿತು? ಇದರ ವಿವರ ಮುಂದೆ ಹೇಳ್ತೀನಿ. ಈ ನೆನಪುಗಳು ಅದೇನೋ ನಿನ್ನೆ ಮೊನ್ನೆ ನಡೆದ ಹಾಗೆ ಮನಸಿನಲ್ಲಿ ಕಲ್ಲಿನ ಮೇಲೆ ಕೆತ್ತಿದ ಅಶೋಕನ ಕಾಲದ ಶಾಸನಗಳಂತೆ ಉಳಿದುಹೋಗಿದೆ. ಅದನ್ನು ಹೆಕ್ಕಿ ಹೆಕ್ಕಿ ಒಂದು ಕಡೆ ಪೇರಿಸಿ ಯಾವುದು ಮೊದಲು ಯಾವುದು ನಂತರ ಅಂತ ಜೋಡಿಸಬೇಕು….

ಅಲ್ಲಿಯ ತನಕ ಕೊಂಚ ನೀವು ಕಾಯಲೇ ಬೇಕು….

ಇನ್ನೂ ಇದೆ…..

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ