ಪಾರ್ಥೇನಿಯಂ

ಎದುರು ಬೆಳೆದ ಪಾರ್ಥೇನಿಯಂ ಗಿಡವನ್ನ
ಅಕ್ಕ ದಿಟ್ಟಿಸುತ್ತಾ ಕುಳಿತಿದ್ದಳು

ಏಕೆ ಈ ಪಾರ್ಥೇನಿಯಂಗಳು
ಸಸ್ಯ ಸಾಮ್ರಾಜ್ಯದಿಂದ ತಿರಸ್ಕಾರಗೊಂಡಿವೆ
ಅಸ್ಪೃಶ್ಯತೆಯ ಬೆಂಕಿ ಇವಕ್ಕೂ ತಾಕಿತೆ?
ಅದೆ ಕವಲೊಡೆದುಕೊಂಡ ಹೂ
ಅದೆ ನೀಳ ಬೇರು ಹಸಿರು ಕಾಂಡ
ಆದರೂ ಮುಟ್ಟಿಸಿಕೊಳ್ಳುವುದಿಲ್ಲ
ಇದೇಕೆ ಎಂದೆ
ಅಕ್ಕ ಸುಮ್ಮನೆ ಕುಳಿತಿದ್ದಳು

ಇವಕ್ಕೂ ಅದೇ ಪರಾಗ ಅದೇ ಘಮಲು
ಅರೆ ಈ ದುಂಬಿಗಳೇಕೆ
ದೂರವೇ ಹೋಗುತ್ತಿವೆ
ಇವೂ ಮತ್ತದೇ ಇಂಗಾಲವನೆ ಉಸಿರಿಗಚ್ಚಿವೆ
ಆಮ್ಲವನೆ ಹೊರಗಟ್ಟಿವೆ
ಶೃಂಗಾರಕೆ ನಗುಮೊಗದ ಹೂವನೇ
ಹಡೆದಿವೆ
ಆದರೂ… ಎಂದೆ
ಅಕ್ಕ ತಲೆ ತಗ್ಗಿಸಿದಳು

ಪಾಪದ ಎಲೆಗಳ ಸೊಂಟಕ್ಕೆ ಸಿಕ್ಕಿಸಿಕೊಂಡು
ಬೇರು ಹಿಡಿದುಕೊಳ್ಳುವ ಮಣ್ಣು
ಎಂದಿಗೂ ವಿರಾಗಿಯಾಗಲಿಲ್ಲ
ಆದರೀ ಬಿರುಕು
ನೇಗಿಲಿಗೆ ಸಿಕ್ಕ ಗಾಯದ ಕಾಂಡವನು
ಮತ್ತೆ ಹುಣ್ಣಾಗಿಸಿ
ಗಾಸಿಗೊಳಿಸುವ ಕ್ರಿಯೆ ವಿಚಿತ್ರ ಎಂದೆ
ಅಕ್ಕ ಮುಖಮುಚ್ಚಿದಳು

ಯಾರೋ ಕಳೆ ಎಂದರು
ಇನ್ಯಾರೋ ರೋಗ ಎಂದರು
ಮತ್ಯಾರೋ ಅನಾಥ ಭೂಮಿಯಲಿ
ಸೊಂಪಾಗಿ ಬೆಳೆದು ನಿಂತಾಗ
ಗಹಗಹಿಸಿ ಮುಂದೆ ಹೋದರು
ಎಂಥಾ ನೋವು ಅಲ್ಲವೆ ಎಂದೆ
ಅಕ್ಕ ಕಣ್ಣಲಿ ನೀರಿಳಿ ಬಿಟ್ಟಳು

 

ಮೂಲತಃ ಹನೂರು ತಾಲೂಕಿನ ಪೊನ್ನಾಚಿಯ ಪ್ರಕಾಶ್ ಸದ್ಯ ಒಡೆಯರ್ ಪಾಳ್ಯದಲ್ಲಿ
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ
ಓದು ಮತ್ತು ಕವಿತೆಗಳ ರಚನೆ ಇವರ ಹವ್ಯಾಸ