……ಮಧ್ಯಾಹ್ನ

ತಿಳಿ ಗುಲಾಬಿ ಪರದೆಗಳು
ನೆಟ್ಟಗೆ ನಿಂತಿವೆ ಕೊಂಚವೂ ಅಲ್ಲಾಡದೆ
ನೀಲಿಕುಚ್ಚಿನ ಗಂಟೆದಾರಗಳು
ಟಣ್ಣನೆ ಓಲಾಡುವ
ಅವಕಾಶಕ್ಕಾಗಿ ಕಾದಿವೆ
ಬಿಮ್ಮನೆ ಬಿಗಿದ ಮಧ್ಯಾಹ್ನವೊಂದು
ಮೆಲ್ಲನುರುಳಿತ್ತಿದೆ ಗಾಳಿಯರಸುತ್ತ
ಚೂರೂ ಧಾವಂತವಿಲ್ಲದೆ

ನಸುಕಿನ ಗಡಿಬಿಡಿಯ
ಜನರನ್ನು ಅವರ ಡಬ್ಬಿಗೂಡಿ
ಹೊರದಬ್ಬಿ ನಿರಾಳವಾದವಳು
ಕಾಲು ಚಾಚಿದ್ದಾಳೆ ಸೋಫಾದ
ಮೇಲೊಂದು ಕಸೂತಿಯಂತೆ
ಫ್ಯಾನಿನ ಗಾಳಿಗೆ ರೆಪ್ಪೆ ಕೂಡಿದೆ
ಅರ್ಧ ಓದಿದ ಕತೆ ಮುಂದುವರಿದಿದೆ
ಅರೆ ಎಚ್ಚರದ ಮಂಪರಿನಲ್ಲೇ

ಎತ್ತರೆತ್ತರ ಕೋಟೆ ಗೋಡೆಯ
ಸಣ್ಣ ಕಿಂಡಿಯಾಚೆ ಮೂತಿ
ಚಾಚಿದ ತೋಪುಗಳು ಗುರಿಯಿಕ್ಕಿ
ನೋಡುತ್ತಿವೆ ಹಸಿರು ಕಾಲ್ದಾರಿಗಳತ್ತ
ರಾಚುವ ರಣಬಿಸಿಲಿಗೆ ಮೈತೆರೆದ
ಕೆರೆಯಲೆಗಳು ಫಳಫಳ ಮಿನುಗಿ
ದಡದ ಕಲ್ಲಿಗೆ ಮುತ್ತು ಕೊಡುತ್ತಿವೆ

ನವಿಲುಗಣ್ಣಿನ ರೇಶಿಮೆ ಸೆರಗು
ಮರೆಮಾಡಲು ಸೋತ ತುಂಬು
ಮೈಮಾವಿನ ರಾಜಕುವರಿ
ಮಲ್ಲಿಗೆ ಪೊದೆ ಚಾಚಿದ ಕಿಡಕಿಗೊರಗಿ
ಸರಳಿಗೊತ್ತಿದ ಅವಳ ಮೈ ನಿಗಿನಿಗಿ ಗಂಧ

ಚಿರತೆ ಮಾಟದ ಹುಡುಗ
ಕೂತ ಕುದುರೆಯೇ ಬಿಸಿಯೇರುವ
ಹುರಿಮೈ ಬಿಲ್ಲಂತೆ ಬಾಗಿಸಿ
ಉಸಿರು ಹೂಬಾಣ ಮಾಡಿ
ಕೊಳಲೂದುತ್ತಾನೆ
ಕಣಕಣವೂ ಜುಮುಗುಡುವ
ನಾದ ಕಚಗುಳಿಗೆ ನವಿರಾಗಿ
ನಡುಗುವ ಮೈ ಇಷ್ಟಿಷ್ಟೇ
ಅರಳುತ್ತ ಸುಡುಸುಡು ಕೇದಗೆ

ಥಟ್ಟನೆ ಕೆಳಬಿದ್ದ ಪುಸ್ತಕ
ಕಣ್ಬಿಟ್ಟರೆ ಕಿರಲುವ ಫೋನು
ಎದ್ದು ಕೂತರೆ ದಿಂಬಿನ ಮೇಲೊಂದು
ಮಲ್ಲಿಗೆಯೆಸಳು ಅರೆರೆ
ಇದೆಲ್ಲಿಂದ ಬಂತು?
ಕಿಡಕಿಯಾಚೆ ಕುದುರೆ ಕೆನೆದ ಸದ್ದು