ಫೈಜಾ಼ಳ ಗಂಡನಿಗೆ ಸರಿಯಾದ ಕೆಲಸವಿಲ್ಲ. ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ ಇಬ್ಬರು ಮಕ್ಕಳನ್ನು ಆಕೆ ನಿಭಾಯಿಸಬೇಕು. ಆದಾಯದ ಕೊರತೆ. ಅದಕ್ಕಾಗಿ ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ. ಒಲಿಸಿಕೊಳ್ಳಲು ಮಾಡುವ ಪ್ರಯತ್ನಕ್ಕೆ ತಣ್ಣೀರು.
ಎ.ಎನ್. ಪ್ರಸನ್ನ ‘ಲೋಕ ಸಿನಿಮಾ ಟಾಕೀಸ್’ ನಲ್ಲಿ ಈಜಿಪ್ಟ್‌ನ ʻಕೈರೋ 678’ ಸಿನಿಮಾದ ಕುರಿತ ಬರಹ.
ಅದು ಕೈರೋ. ಈಜಿಪ್ಟಿನ ರಾಜಧಾನಿ. ದೊಡ್ಡ ನಗರ. ಆದರೆ ಅಭಿವೃದ್ಧಿ ಪಥದಲ್ಲಿರುವ ದೇಶಗಳಲ್ಲಿ ತಲೆದೋರುವ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುವ ಪರಿಸ್ಥಿತಿ ಅಲ್ಲಿಯೂ ಇದೆ. ಇದರಲ್ಲಿ ನಮ್ಮಲ್ಲಿಯ ಹಾಗೆ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ಪ್ರಯಾಣಿಸಲು ಸಾರ್ವಜನಿಕ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗುವುದು ಅನಿವಾರ್ಯ. ಇಂಥ ಪರಿಸ್ಥಿತಿಗೆ ಒಳಗಾಗಿ ಸರ್ಕಾರಿ ಆಫೀಸೊಂದರಲ್ಲಿ ಕೆಲಸ ಮಾಡುತ್ತಾಳೆ ಫೈಜಾ಼. ಇವಳಿಗಿಂತ ಸಮಾಜದಲ್ಲಿ ಸ್ವಲ್ಪಮಟ್ಟಿನ ಮೇಲ್ಮಟ್ಟದವಳಾದ ಸೆಬಾ ಎನ್ನುವಾಕೆ ಡಾಕ್ಟರೊಬ್ಬನ ಹೆಂಡತಿ. ಇನ್ನೊಬ್ಬಳು ನೆಲ್ಲಿ. ಸಮಾಜದ ಇನ್ನೊಂದು ಸ್ತರಕ್ಕೆ ಸೇರಿದವಳು. ಕಾಮಿಡಿ ಪ್ರಯೋಗಗಳನ್ನು ಮಾಡುವಾತನ ಪ್ರೇಯಸಿ. ಹೀಗೆ ಸಮಾಜದ ವಿವಿಧ ಮಟ್ಟದವರನ್ನು ಒಳಗೊಂಡ ಈ ಮೂರು ಜನ ಹೆಣ್ಣುಮಕ್ಕಳಿಗೆ ಸಮಾನವಾದ ಸಮಸ್ಯೆಯೊಂದಿದೆ; ಲೈಂಗಿಕ ದೌರ್ಜಕ್ಕೆ ಒಳಗಾಗುವುದು. ಅನುಭವಿಸಲೇಬೇಕಾದ ಈ ದೌರ್ಜನ್ಯವನ್ನು ಪ್ರತಿರೋಧಿಸಲು ಸಾಧ್ಯವೇ? ಪ್ರತಿರೋಧಿಸಲು ಸಾಧ್ಯವಾದಲ್ಲಿ ಅದರ ಮಾರ್ಗ ಎಂಥದು? ಹಾಗೆ ಪ್ರತಿರೋಧಿಸುವುದರಿಂದ ಉಂಟಾಗುವ ಪರಿಣಾಮವೇನು. ಅವುಗಳನ್ನು ಎದುರಿಸಲು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು? ಇವುಗಳನ್ನು ಕುರಿತು ಸತ್ಯವಾದ ಕಥೆಯನ್ನು ಆಧರಿಸಿದ ಚಿತ್ರ ಈಜಿಪ್ಟಿನ ಮಹಮ್ಮದ್ ದಿಯಾಬ್ ನಿರ್ದೇಶನದ 2010ರ ʻಕೈರೋ 678ʼ.
ಹೆಣ್ಣು ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಲೈಂಗಿಕ ಹಿಂಸೆಗೆ ಒಳಗಾಗುವುದು ಎಂದಿನಿಂದಲೂ ಇದ್ದದ್ದೆ. ಅವುಗಳ ರೀತಿ ಆಯಾ ಸಂದರ್ಭ ನಿರ್ಧರಿಸುತ್ತಷ್ಟೆ. ದಿನನಿತ್ಯ ಭರ್ತಿಯಾಗಿ ತುಂಬಿದ ಬಸ್ ನಂಬರ್ 678ಲ್ಲಿ ಪ್ರಯಾಣ ಮಾಡುವ ಫೈಜಾ಼ಳಿಗೆ ಹೇಳಲಾಗದ ಸಂಕಟ. ತುಂಬಿದ ಜನರ ಮಧ್ಯೆ ಅವಳನ್ನು ಬೇಕಂತಲೇ ಒತ್ತಿಕೊಂಡು ನಿಂತು ಅವಕಾಶ ಒದಗಿದ ಕಡೆ ಸ್ಪರ್ಶಿಸುವ ಪುರುಷನಿಂದ ಹಿಂಸೆ. ಅದನ್ನು ಅನುಭವಿಸಿಕೊಂಡೇ ಅವಳು ಆಫೀಸಿನ ಕೆಲಸಕ್ಕೆ ಹೋಗಬೇಕು. ಚಿತ್ರದ ಕಥನಕ್ಕೆ ಪ್ರಮುಖವಾಗುವ ಬಸ್ ನಂಬರನ್ನೆ ಚಿತ್ರಕ್ಕೂ ಇಟ್ಟಿದ್ದಾನೆ ನಿರ್ದೇಶಕ ಮಹಮದ್ ದಿಯಾಬ್. ಎರಡನೆಯವಳಾದ ಸೆಬಾ ಸಮಯದ ಅಭಾವದಿಂದ ಯಾವಾಗಲೂ ಒದ್ದಾಡುವ ಗಂಡನ ಜೊತೆ ಫುಟ್ಬಾಲ್ ಮ್ಯಾಚ್ ನೀಡಲು ಹೋದಾಗ ಉಂಟಾಗುವ ಅರ್ಥವಿಲ್ಲದ ಗಲಭೆಯಲ್ಲಿ ಅವಳು ಅನುಭವಿಸುವ ಲೈಂಗಿಕ ಹಿಂಸೆ. ಮೂರನೆಯವಳಾದ ನೆಲ್ಲಿ ತನ್ನಷ್ಟಕ್ಕೆ ತಾನು ಸುಮ್ಮನೆ ರಸ್ತೆಯಲ್ಲಿ ಹೋಗುವಾಗಲೂ ಕಾರಿನಲ್ಲಿ ಓಡಾಡುವವನಿಂದ ಲೈಂಗಿಕ ದೌರ್ಜನ್ಯ. ಚಿತ್ರದಲ್ಲಿ ಈ ಮೂರು ಜನ ಮಹಿಳೆಯರು ತಮಗಾದ ದೌರ್ಜನ್ಯದ ವಿರುದ್ಧ ತೆಗೆದುಕೊಂಡ ನಿಲುವು ಎಂಥದ್ದು ಎನ್ನುವುದೇ ಪ್ರಧಾನ.
ಮಧ್ಯಮವರ್ಗದ ಮಿತಿಗಳಿಗೆ ಹೊಂದಿಕೊಳ್ಳಬೇಕಾದ ಫೈಜಾ಼ಳಿಗೆ ಸರಿಯಾದ ಕೆಲಸವಿಲ್ಲದೆ ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ ಇಬ್ಬರು ಮಕ್ಕಳು. ಒಂದು ಮಗು ಆರೇಳು ವರ್ಷದ್ದಾಗಿದ್ದರೆ, ಮತ್ತೊಂದು ಮಗು ನಾಲ್ಕೈದು ವರ್ಷದ್ದು. ಆ ಇಬ್ಬರು ಮಕ್ಕಳಿಗೆ ಸ್ಕೂಲಿನ ಫೀಸ್ ಕಟ್ಟಲು ತೊಂದರೆ ಅನುಭವಿಸುವವಳು. ತನಗೆ ಬರುವ ಸಂಬಳದಲ್ಲಿ ಅವಳಿಗೇ ಗೊತ್ತಿಲ್ಲದಂತೆ ಸಾಕಷ್ಟು ಮುರಿದುಕೊಂಡು ಪಡೆಯುವ ಪರಿಸ್ಥಿತಿ. ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ, ಗೋಳಾಟಗಳು ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ. ಒಲಿಸಿಕೊಳ್ಳಲು ಮಾಡುವ ಪ್ರಯತ್ನಕ್ಕೆ ತಣ್ಣೀರು. ಅವನ ದುಡಿತದಿಂದ ಬರುವ ವರಮಾನದಲ್ಲಿ ಸಂಸಾರದ ವೆಚ್ಚ ನಿರ್ವಹಿಸಬೇಕೆಂದು ಒತ್ತಾಯ. ಇನ್ನಿಬ್ಬರು ಹೆಂಗಳೆಯರಿಗೆ ಈ ಬಗೆಯ ಹಣದ ಬಿಗುವಿನ ಪರಿಸ್ಥಿತಿಯಿಲ್ಲ. ಸೆಬಾ ಲೈಂಗಿಕ ದೌರ್ಜಕ್ಕೆ ಒಳಗಾಗದ ಮಹಿಳೆಯರಿಗೆ ಮಾರ್ಗ ದರ್ಶನ ಮಾಡಲು ಟೀವಿಯಲ್ಲಿ ಜಾಹಿರಾತು ಕೊಟ್ಟು ಅದನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವಾಕೆ. ಮೂರನೆಯವಳಾದ ನೆಲ್ಲಿ ಪ್ರಿಯಕರ ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಕೆ. ಈ ಬಗೆಯಲ್ಲಿ ಸಮಾಜದ ಮೂರು ವಿವಿಧ ಸ್ತರಗಳಲ್ಲಿ ಜೀವಿಸುತ್ತಿರುವ ಹೆಂಗಳೆಯರನ್ನು ತಾನು ಪರಿಕಲ್ಪಿಸಿರುವ ಸಮಸ್ಯೆಯ ನಿರ್ವಹಣೆಗೆ ನಿರ್ದೇಶಕ ಮಹಮದ್ ದಿಯಾಬ್ ಬಳಸಿಕೊಂಡಿದ್ದಾನೆ.
ಚಿತ್ರದಲ್ಲಿ ಹೆಚ್ಚಿನ ಒತ್ತು ಕೊಟ್ಟಿರುವುದು ಫೈಜಾ ಪ್ರಕರಣದಲ್ಲಿ. ಇಡೀ ಚಿತ್ರದಲ್ಲಿ ಪಾತ್ರವೊಂದು ಅನಿಯಮಿತ ರೋಷ-ದ್ವೇಷ, ತಪ್ಪು-ಒಪ್ಪು, ಕಠಿಣ-ಮೃದುತನ, ಉದ್ವೇಗ-ಸಮಾಧಾನ ಮುಂತಾದ ಮನುಷ್ಯ ಸಹಜವಾದ ಭಾವಗಳನ್ನು ಅಭಿವ್ಯಕ್ತಿಸುವುದಕ್ಕೆ ಅವಕಾಶವಿವುರುವಂತೆ ಫೈಜಾ಼ಳ ಪಾತ್ರ ಪರಿಕಲ್ಪಿಸಿ ಅದಕ್ಕೆ ತಕ್ಕ ಪೋಷಣೆಯನ್ನು ಯಶಸ್ವಿಯಾಗಿ ಒದಗಿಸಿದ್ದಾನೆ ನಿರ್ದೇಶಕ ದಿಯಾಬ್. ಗಂಡ, ಮಕ್ಕಳು, ಆಫೀಸಿನವರು, ಬಸ್ಸಿನೊಳಗಿನ ಜನರು, ಲೈಗಿಕ ದೌರ್ಜನ್ಯಕ್ಕೆ ಒಪ್ಪಿಸಿಕೊಳ್ಳದೆ ಪ್ರತಿರೋಧಿಸುವ ಛಲ, ಅಂತಹ ಸಂದರ್ಭದಲ್ಲಿ ಹತ್ತಾರು ಜನರನ್ನು ಎದುರಿಸುವ ಎದೆಗಾರಿಕೆ ಮುಂತಾದುವನ್ನು ಆ ಪಾತ್ರ ನಿರ್ವಹಿಸುವ ವಿಸ್ತಾರ ಆ ಪಾತ್ರಕ್ಕಿದೆ. ಸಮರ್ಥ ಅಭಿನಯದಿಂದ ಇವೆಲ್ಲಕ್ಕೂ ನ್ಯಾಯ ಒದಗಿಸಿರುವುದು ಎದ್ದು ತೋರುತ್ತದೆ. ಇವುಗಳನ್ನು ನಮಗೆ ರವಾನಿಸಲು ನಿರ್ದೇಶಕ ದಿಯಾಬ್ ಸಹಜ ಲಯದ ಸಮೀಪ(ಕ್ಲೋಸ್) ಹಾಗೂ ಮಧ್ಯಮ(ಮೀಡಿಯಂ)ಚಿತ್ರಿಕೆಗಳನ್ನು ಬಳಸಿದ್ದಾರೆ. ಇದಕ್ಕೆ ಅನುಕೂಲವೆನ್ನುವಂತೆ ದೂರ(ಲಾಂಗ್) ಚಿತ್ರಿಕೆಯ ಅವಶ್ಯಕತೆಯೇ ಅಲ್ಲೊಂದು-ಇಲ್ಲೊಂದು ಎನ್ನುವುವಂತಿದೆ.
ಸಮಾಜದ ವಿವಿಧ ಮಟ್ಟದವರನ್ನು ಒಳಗೊಂಡ ಈ ಮೂರು ಜನ ಹೆಣ್ಣುಮಕ್ಕಳಿಗೆ ಸಮಾನವಾದ ಸಮಸ್ಯೆಯೊಂದಿದೆ; ಲೈಂಗಿಕ ದೌರ್ಜಕ್ಕೆ ಒಳಗಾಗುವುದು. ಅನುಭವಿಸಲೇಬೇಕಾದ ಈ ದೌರ್ಜನ್ಯವನ್ನು ಪ್ರತಿರೋಧಿಸಲು ಸಾಧ್ಯವೇ? ಪ್ರತಿರೋಧಿಸಲು ಸಾಧ್ಯವಾದಲ್ಲಿ ಅದರ ಮಾರ್ಗ ಎಂಥದು?
ಚಿತ್ರದಲ್ಲಿ ಸೆಬಾ ಮತ್ತು ನೆಲ್ಲಿ ಪಾತ್ರಗಳನ್ನು ನಮಗೆ ಪರಿಚಯಿಸುವ ವಿಧಾನದಲ್ಲಿ ಕಾಲ(ಟೈಂ) ಹಿಂದಕ್ಕೆ ಮುಂದಕ್ಕೆ ಹಠಾತ್ ಚಲಿಸುವ ರೀತಿಯಲ್ಲಿದೆ. ಹೆಚ್ಚು ಆತುರವಿದ್ದಂತೆ ಕಾಣುತ್ತದೆ. ಈ ಹಂತ ಮುಗಿದ ನಂತರ ಕೇವಲ ವಾಸ್ತವದ ನೆಲೆಯಲ್ಲಿ ಚಲಿಸುವುದು ಸರಳವಾಗಿದೆ. ಇಷ್ಟನ್ನು ಹೊರಪಡಿಸಿದರೆ ಪಾತ್ರಗಳ ಅಂತರಂಗವನ್ನು ಬಿಂಬಿಸಲು ಲಭ್ಯವಾದ ಅವಕಾಶದಲ್ಲಿಯೇ ರೂಪಕಗಳನ್ನು ಬಳಸುವ ಪ್ರಯತ್ನ ಕಡಿಮೆ. ಎಲ್ಲವೂ ಪೂರ್ಣವಾಗಿ ನೇರ ರೀತಿಯಲ್ಲಿ. ಮಾತು, ಭಾವ, ಅರ್ಥಗಳಲ್ಲಿ ನೇರ ಹೊಂದಾಣಿಕೆ. ಅವುಗಳಾಚೆ ನೆರಳು, ಬೆಳಕಿನ ವಿನ್ಯಾಸದಲ್ಲಾಗಲಿ, ವರ್ಣಗಳ ವಿನ್ಯಾಸದಲ್ಲಾಗಲಿ ಬಿಂಬಿಸುವ ಪ್ರಯತ್ನ ಇಲ್ಲವೆಂದೇ ಹೇಳಬಹುದಾದಷ್ಟು ಕಡಿಮೆ.
ಸೆಬಾ ಸ್ವಂತವಾಗಿ ಲೈಂಗಿಕ ವಿಷಯದಲ್ಲಿ ತೀವ್ರ ಅಸಂತುಷ್ಟಳಾಗಿದ್ದರೂ ಅವಳು ಸಾಮಾಜಿಕ ನೆಲೆಯಲ್ಲಿ ವಿಶಿಷ್ಟವೆನಿಸುವ ರೀತಿಯಲ್ಲಿ ತೊಡಗುವುದು ನಿಜಕ್ಕೂ ವಿಶೇಷವೇ. ಸಾಧ್ಯವಾದಷ್ಟು ಹೆಂಗಳೆಯರು ಲೈಂಗಿಗ ದೌರ್ಜನ್ಯಕ್ಕೆ ಒಳಗಾದುದನ್ನು ಅರಿತುಕೊಳ್ಳಬೇಕೆಂಬ ಮನೋಭೂಮಿಕೆಯೇ ಹೊಸತೆಂದು ತೋರುತ್ತದೆ. ಅವಳು ಅದನ್ನು ಕೈಗೊಳ್ಳುವ ಕ್ರಮವೂ ಒಪ್ಪತಕ್ಕದ್ದೆ. ಒಂದಿಲ್ಲೊಂದು ಬಗೆಯಲ್ಲಿ ಲೈಂಗಿಕ ವಿಷಯದಲ್ಲಿ ಅಹಿತಕರ ಅನುಭವಕ್ಕೆ ಒಳಗಾದ ಹೆಂಗಸರನ್ನು ಆಗಾಗ ಒಂದೆಡೆ ಒಗ್ಗೂಡಿಸುವ ಪ್ರಯತ್ನ ಮಾಡುತ್ತಾಳೆ. ಇದರ ಮುಖಾಂತರ ಅಂತರಂಗದಲ್ಲಿ ಹುದುಗಿಟ್ಟ ಅವರ ಸಂಕಟ, ನೋವು, ಅಸಹಾಯಕತೆ, ಮುಂತಾದವನ್ನು ಹೊರಹಾಕಲು ತನ್ಮೂಲಕ ಸಾಧ್ಯವಾದಷ್ಟು ತಕ್ಕಮಟ್ಟಿಗೆ ಬಿಡುಗಡೆ ದೊರಕಿಸಿಕೊಡುವ ಉದ್ದೇಶ. ಇಂಥದೊಂದು ಬಗೆಯ ಪರಿಕಲ್ಪನೆ ಇರುವ ಸೆಬಾಳ ಪಾತ್ರ ಅವಳ ಅಂತರಂಗಕ್ಕೂ ಪರೋಕ್ಷ ರೀತಿಯಲ್ಲಿ ಬಿಡುಗಡೆ ಒದಗಿಸುವಂಥದ್ದು. ಒಂದಿಲ್ಲೊಂದು ಬಗೆಯಲ್ಲಿ ಲೈಂಗಿಕ ಹಿಂಸೆ, ದೌರ್ಜನ್ಯಕ್ಕೆ ತುತ್ತಾದ ಹೆಂಗಳೆಯರು ತನ್ನನ್ನು ಸಂಪರ್ಕಿಸಲು ಟೀವಿ ಮೂಲಕ ಇಡೀ ದೇಶಕ್ಕೆ ತಿಳಿಸುತ್ತಾಳೆ. ಇಂಥದೊಂದು ಕರೆಗೆ ಯಾರೂ ಉತ್ತರಿಸುವುದಿಲ್ಲ ಮತ್ತು ಪಕ್ಷ ಉತ್ತರಿಸಿದರೂ ತಮ್ಮ ಅಂತಗಂಗದಲ್ಲಿ ಇರುವುದನ್ನು ಹೇಳಲು ಸಾಧ್ಯವೇ ಇಲ್ಲವೆಂದು ಎಲ್ಲ ಕಡೆ ಇರುವಂತಿರುವ ಅಲ್ಲಿನ ಪುರುಷ ಸಮಾಜ ಭಾವಿಸಿರಲು ಸಾಧ್ಯ. ಆದರೆ ಅನೇಕ ಹೆಣ್ಣುಮಕ್ಕಳಂತೆ ಫೈಜಾ಼ ಕಾರ್ಯಕ್ರಮಕ್ಕೆ ಹಾಜರಾಗುತ್ತಾಳೆ. ಸಾಮಾನ್ಯವಾಗಿ ಹತ್ತಿಪ್ಪತ್ತು ಹರೆಯದ ಸೇರುವ ಈ ಕೂಟಕ್ಕೆ ತಪ್ಪದೆ ಮತ್ತೆ ಮತ್ತೆ ಹೋಗುತ್ತಾಳೆ. ಸೆಬಾ ಅವರೆಲ್ಲರಿಗೂ ಲೈಂಗಿಕ ದೌರ್ಜನ್ಯ ಕುರಿತಂತೆ ಕೇಳುವ ಪ್ರಶ್ನೆಗಳು ಮೂರು. ಪ್ರಶ್ನೆಗಳು ಅತಿ ಸೂಕ್ಷ್ಮ ಮತ್ತು ಅತ್ಯಂತ ವೈಯಕ್ತಿಕ ಸ್ವರೂಪದ್ದಾದ್ದರಿಂದ ಅವರು ಉತ್ತರಗಳನ್ನು ಬಾಯಿಬಿಟ್ಟು ಹೇಳಬೇಕಾಗಿಲ್ಲ, ಸಂಕ್ಷಿಪ್ತವಾಗಿ ಬರೆದು ತಿಳಿಸಲು ಹೇಳುತ್ತಾಳೆ. ಅದರಂತೆ ಬಂದಿರುವವರು ತೋಚಿದ ರೀತಿಯಲ್ಲಿ ಬರೆದು ತಿಳಿಸುತ್ತಾರೆ. ಆದರೆ ಫೈಜಾ಼ ಅವಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಿರುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ʻಏನಿಲ್ಲʼ ಎಂದು ಬರೆದಿರುವುದನ್ನು ಸೆಬಾ ಗಮನಿಸಿರುತ್ತಾಳೆ. ಅದನ್ನು ಕಂಡು ರೋಸಿ ಹೋದ ಸೆಬಾ ಲೈಂಗಿಕ ಹಿಂಸೆಗೆ ಒಳಗಾಗದಿದ್ದ ಪಕ್ಷದಲ್ಲಿ ಇಲ್ಲಿಗೆ ಬಂದದ್ದೇಕೆ ಎಂದು ಪ್ರಶ್ನಿಸುತ್ತಾಳೆ. ಆದರೂ ಅವಳಿಗೆ ತನ್ನ ಅಂತರಂಗವನ್ನು ಬಿಚ್ಚಿಡಲು ಸಾಧ್ಯವಾಗುವುದಿಲ್ಲ. ಇನ್ನಷ್ಟು ರೋಷಗೊಂಡ ಸೆಬಾ ಸೂಜಿ ಅಂಥದನ್ನು ಕೊಟ್ಟು, ಅಂತಹ ಸಂದರ್ಭ ಒದಗಿದರೆ ಉಪಯೋಗಿಸಲು ಹೇಳುತ್ತಾಳೆ.
ಫೈಜಾ಼ ಅದನ್ನು ತಾನು ಪ್ರಯಾಣಿಸುವ ಬಸ್‌ನಲ್ಲಿ ಪ್ರಯೋಗಿಸುತ್ತಾಳೆ. ಅಲ್ಲಿ ಎಂದಿನಂತೆ ಅಳತೆ ಮೀರಿ ತುಂಬಿರುವ ಜನರು. ತನ್ನ ಹಿಂದುಗಡೆಯೇ ಒತ್ತಿಕೊಂಡು ನಿಂತು ಅವಕಾಶವಿರುವ ಕಡೆ ಸ್ಪರ್ಶಿಸುವ ಗಂಡಿಗೆ ಮರ್ಮಸ್ಥಾನಕ್ಕೆ ತಗಲುವಂತೆ ಸೂಜಿಯಿಂದ ಚುಚ್ಚುತ್ತಾಳೆ. ಇದು ಅವಳು ತನ್ನ ಅಂತರಂದ ತುಮುಲ, ಅಸಹ್ಯ ಭಾವಗಳಿಂದ ಬಿಡುಗಡೆ ಪಡೆಯಲು ತೆಗೆದುಕೊಳ್ಳುವ ಕ್ರಮ. ಜೊತೆಗೆ ಪ್ರತಿರೋಧಿಸುವುದನ್ನು ಕೇವಲ ಕನಸು ಕಾಣುತ್ತ ಕುಳಿತುಕೊಳ್ಳದೆ ಕಾರ್ಯರೂಪಕ್ಕೆ ತಂದೆನೆಂಬ ಸಮಾಧಾನ. ಅತ್ಯಂತ ತೀವ್ರತರ ಭಾವನೆಗಳನ್ನು ಉದ್ದೀಪಿಸುವ ವ್ಯಕ್ತಿಯ ಕೃತ್ಯ ಫೈಜಾ಼ಳ ಪ್ರತಿರೋಧಿಸುವ ಕ್ರಿಯೆ ಮುಂತಾದವುಗಳ ಚಿತ್ರಿಕೆಗಳು ಕ್ಲೋಸ್‌ನಲ್ಲಿದ್ದು ಉದ್ದೇಶ ಪೂರೈಸುತ್ತವೆ. ಇದರಿಂದ ಬೊಬ್ಬೆ ಹಾಕುವ ಆ ವ್ಯಕ್ತಿ ವರ್ತನೆಯಿಂದ ಸಹಜವಾಗಿಯೇ ಬಸ್ಸಿನಲ್ಲಿ ಹಾಹಾಕಾರವಾಗುತ್ತದೆ. ಚುಚ್ಚಿಸಿಕೊಂಡವನನ್ನು ಉಪಚರಿಸಲು ಬಸ್ಸಿನೊಳಗಿನ ಜನ ಮುಂದಾಗುತ್ತಾರೆ. ಈ ರೀತಿಯ ಪ್ರಕರಣ ಅಲ್ಲಿಗೇ ಮುಗಿಯುವುದಿಲ್ಲ. ಮತ್ತೆ ಮತ್ತೆ ಸಂಭವಿಸುವ ಈ ಬಗೆಯ ಪ್ರಕರಣ ಸರ್ಕಾರದ ಗಮನಕ್ಕೆ ಬರುತ್ತದೆ..
ಉಳಿದ ಎರಡು ಪಾತ್ರಗಳ ಸಮಸ್ಯೆಗಳು ಬೇರೆ ರೀತಿಯವು. ಸೆಬಾಳಿಗೆ ತನ್ನನ್ನು ಸುಮ್ಮನೆ ಉಪಯೋಗಿಸಿಕೊಂಡು ಅತ್ತ ಬಿಸುಡುವಂತೆ ಸುಮ್ಮನೆ ಕೆಲಸದ ಗಡಿಬಿಡಿ ಎಂದು ನೆಪ ಹೇಳುತ್ತ ಮದುವೆಯನ್ನು ಮುಂದಕ್ಕೆ ಹಾಕುತ್ತಿರುವ ಡಾಕ್ಟರನನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಅಂಥವನಿಂದ ಆಗಲಿರುವ ಮಗು ಬೇಡ ಎನ್ನುವ ನಿಲುವು ಹೊಂದುತ್ತಾಳೆ. ಆದರೆ ಗರ್ಭಪಾತ ಮಾಡಿಸಿಕೊಳ್ಳುವುದು ಕಾನೂನು ಬಾಹಿರವಾಗಿರುವ ಅನೇಕ ದೇಶಗಳಿವೆ. ಇನ್ನು ಮದುವೆಯಾಗಿರದಿದ್ದರಂತೂ ವಿಪರೀತದ ಪರಿಸ್ಥಿತಿ. ಇದನ್ನೇ ವಸ್ತುವಾಗಿಟ್ಟುಕೊಂಡು ರುಮೇನಿಯಾದ ಕ್ರಿಸ್ಚಿಯನ್ ಮುಂಗು ನಿರ್ದೇಶನದ ʻ4 ಮಂತ್ಸ್, 3 ವೀಕ್ಸ್ ಮತ್ತು 2 ಡೇಸ್ʼ ಚಿತ್ರ ನೆನಪಾಗುವುದು ಸಹಜವೇ.
ಚಿತ್ರದಲ್ಲಿ ಮೊದಲಿಬ್ಬರು ಹೆಂಗಳೆಯರಿಗಿಂತ ಹೆಚ್ಚಿನ ಸಾರ್ವಜನಿಕ ಸಂಪರ್ಕದಲ್ಲಿರುವ ನೆಲ್ಲಿ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಹಾಗೆ ಮಾಡಿದವನಮೇಲೆ ಪೊಲೀಸ್ ಕೇಸ್ ಹಾಕುತ್ತಾಳೆ. ಇದರಿಂದ ಅವಳ ಮನೆಯವರು ತಬ್ಬಿಬ್ಬು. ಇಂಥ ಪ್ರಕರಣ ತಮ್ಮ ಮನೆಯಲ್ಲಿಯೇ ಆಯಿತಲ್ಲ ಎಂದು ಹೇಳಲಾರದಷ್ಟು ಬೇಸರ. ಪ್ರೇಮಿ, ಮನೆಯವರು ಮತ್ತು ಉಳಿದವರು ಒತ್ತಾಯಿಸಿ ಕೇಸ್ ಹಿಂತೆಗೆದುಕೊ ಎಂದರೂ ಹಠ ಬಿಡುವುದಿಲ್ಲ. ನಮ್ಮಲ್ಲಿರುವಂತೆಯೇ ಹಲವಾರು ದೇಶಗಳಲ್ಲಿ ಹೆಣ್ಣೊಬ್ಬಳು ಈ ರೀತಿ ಕೇಸ್ ಹಾಕುವುದೆಂದರೆ ಇಡೀ ಸಂಸಾರಕ್ಕೇ ಅಪಖ್ಯಾತಿ! ಪ್ರಸ್ತುತ ವಿಷಯ ಈ ಮಟ್ಟ ತಲುಪಿದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳುವ ಅಗತ್ಯವುಂಟಾಗುತ್ತದೆ. ಸಮಾಜಿಕವಾಗಿ ವಿಪರೀತವೆನಿಸಿದ ಇಂಥ ಪ್ರಕರಣಗಳ ಪರಿವೀಕ್ಷಣೆಗೆ ಪೊಲೀಸ್ ನಿಯುಕ್ತರಾಗಲು ಕಾರಣವಾಗುತ್ತದೆ. ಅವನಿಗೂ ತಕ್ಷಣವೇ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಿರುವುದು ಸಾಧ್ಯವಾಗುವುದಿಲ್ಲ.
ಇನ್ನಷ್ಟು ಪ್ರಯತ್ನದ ನಂತರ ಪೊಲೀಸ್ ಅಧಿಕಾರಿಗೆ ಈ ಮೂರು ಹೆಂಗಳೆಯರನ್ನು ಅನುಮಾನಿಸಿ ತನ್ನದೇ ಆದ ರೀತಿಯಲ್ಲಿ ಕಂಡು ಹಿಡಿಯಲು ಸಫಲನಾಗುತ್ತಾನೆ. ಅವನ ಪ್ರಯತ್ನಗಳ ರೀತಿಯಿಂದ ಚಿತ್ರದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಲಘುವಾದ ಹಾಸ್ಯ ಸನ್ನಿವೇಶಗಳು ಉಂಟಾಗುತ್ತವೆ. ಇದಕ್ಕೆ ಪೋಲೀಸ್ ಅಧಿಕಾರಿಯ ಪಾತ್ರದ ವರ್ತನೆಯಷ್ಟೇ ಅಲ್ಲದೆ ಅವನ ದಢೂತಿ ಆಕಾರವೂ ಹಾಸ್ಯದ ತುಣುಕುಗಳಿಗೆ ಬೆಂಬಲವಾಗುತ್ತದೆ.
ಚಿತ್ರದಲ್ಲಿ ನಟಿಸಿರುವ ಮೂವರೂ ಸಮರ್ಥ ಅಭಿನಯ ನೀಡಿದ್ದರೂ ಫೈಜಾ಼ ಪಾತ್ರದ ಬೂಶ್ರಾ ವಿಶೇಷ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಸಂದರ್ಭಕ್ಕೆ ತಕ್ಕ ಭಾವಗಳು ನಿರೂಪಿತವಾಗಿವೆ. ಉಳಿದಿಬ್ಬರು ಕೂಡ ನಿರೀಕ್ಷಿತ ಮಟ್ಟದಲ್ಲಿಯೇ ಅಭಿನಯಿಸಿರುವುದು ಕಾಣುತ್ತದೆ. ಇವೆಲ್ಲದರ ಪರಿಣಾಮವಾಗಿ ಮಹಮದ್ ದಿಯಾಬ್ ತಮ್ಮ ಮೊದಲನೆಯ ನಿರ್ದೇಶಿತ ಚಿತ್ರದಲ್ಲಿ ಸಾಕಷ್ಟು ಒಪ್ಪಿಗೆಯಾಗುವ ರೀತಿಯಲ್ಲಿ ನಿರೂಪಣಾ ಕ್ರಮವನ್ನು ಪರಿಕಲ್ಪಿಸಿದ್ದಾರೆ. ಈ ಚಿತ್ರ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದದ್ದು ನಿಜಕ್ಕೂ ಸಂತೋಷದ ವಿಷಯವೇ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.