ಕಳೆದ ವರ್ಷ ಲಾಕ್ ಡೌನ್ ಹೇರಿಕೆಯಾಗಿದ್ದಾಗ, ಕಲಾವಿದರು ಬಹಳವೇ ಕಷ್ಟಪಟ್ಟಿದ್ದರು. ಆರ್ಥಿಕತೆಯೇ ಮುಖ್ಯವಾಗಿರುವ ಈ ಕಾಲದಲ್ಲಿ ಕಲೆಯನ್ನು ಎರಡನೇ ಆದ್ಯತೆಯನ್ನಾಗಿ ಪರಿಗಣಿಸುವುದನ್ನು ಕಂಡಾಗ ಬೇಸರವೆನಿಸುವುದು. ಆದರೆ ವಾಸ್ತವವಾಗಿ ಅದು ಸಮಾಜವನ್ನು ಸಂತೈಸುವ ಮಾರ್ಗ. ನಾಟ್ಯಶಾಸ್ತ್ರದ ಶ್ಲೋಕದ ಪ್ರಕಾರ ಅದು ಜನರನ್ನು ತಿದ್ದುವ, ರಂಜನೆಯ ಮೂಲಕ ಅವರಲ್ಲಿ ಮೌಲ್ಯಗಳನ್ನು ಬಿತ್ತುವ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಯೋಚಿಸುವ ಕಲಾವಿದರ ಮನಸ್ಸು ಗಟ್ಟಿಯಾಗಿರುತ್ತದೆ. ಹೊಸ ತಲೆಮಾರಿನ ಕಲಾವಿದರಿಗೂ ಈ ಕಿವಿ ಮಾತು ಅನ್ವಯಿಸುತ್ತದೆ ಎಂಬ ಪುಟ್ಟ ವಿಶ್ಲೇಷಣೆಯನ್ನು ಮಂಡಿಸಿದ್ದಾರೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ.


ಯೋಯಂ ಸ್ವಭಾವೋ ಲೋಕಸ್ಯ ಸುಖದುಃಖ ಸಮನ್ವಿತಃ|

ಸೋಂಗಾದ್ಯಭಿನಯೋಪೇತಃ ನಾಟ್ಯ ಮಿತ್ಯಭಿದೀಯತೆ ||
(ನಾಟ್ಯಶಾಸ್ತ್ರ ದ 122ನೆಯ ಶ್ಲೋಕ)

ಲೋಕದಲ್ಲಿ ನಡೆಯುವ ಸಕಲ ಸ್ವಭಾವಗಳ, ಅಂದರೆ ಸುಖ,ದುಃಖ ಇವುಗಳನ್ನೆಲ್ಲಾ ತೋರ್ಪಡಿಸುವ ಅಭಿನಯವೇ ನಾಟ್ಯ ಎಂದು ನಾಟ್ಯಶಾಸ್ತ್ರದಲ್ಲಿ ವಿವರಿಸಲಾಗಿದೆ. ಜನರಲ್ಲಿ ಒರಟುತನ, ಕೀಳುನಡತೆಯು ಕಂಡುಬಂದಾಗ ಜನರಿಗೆ ಒಳಿತಿನ ದರ್ಶನ ಮಾಡಿಸಿ, ಅವರನ್ನು ಒಳ್ಳೆಯ ದಾರಿಗೆ ಕೊಂಡೊಯ್ಯುವ ಮೂಲಕ,  ಕಾಪಾಡಲು ಹುಟ್ಟಿಕೊಂಡಿರುವುದು ಈ ನಾಟ್ಯಶಾಸ್ತ್ರ ಎಂದೂ ‌ಹೇಳಲಾಗುತ್ತದೆ. ನಾಟ್ಯ, ನಾಟಕಗಳು ಜನರ ಮನಸ್ಸಿಗೆ ಸಂತೋಷವನ್ನು ಕೊಡಬೇಕೇ ಹೊರತು, ಮನದೊಳಗೆ ಮೌನವಾಗಿ ಮಲಗಿರುವ ವಿಕೃತಿಯನ್ನು ಬಡಿದೆಬ್ಬಿಸಿ, ಬೆಳೆಸಬಾರದು ಎಂದೂ ಹೇಳುತ್ತಾರೆ.

ಇಂತಹ ಕಲೆ, ಇಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ನಾಟ್ಯವೆಂದರೆ ಭರತನಾಟ್ಯ. ಗುರುಕುಲ ಪದ್ಧತಿಯಲ್ಲಿದ್ದ ಕಲಿಕೆ ಈಗ ವಿಸ್ತಾರವಾಗುತ್ತಾ, ಸಂಸ್ಥೆಗಳ ಮೂಲಕ, ನೃತ್ಯಶಾಲೆಗಳ ಮೂಲಕ, ಶಿಕ್ಷಣ ಸಂಸ್ಥೆಗಳಲ್ಲಿ ನೃತ್ಯ ಕಲಿತಂತಹ ಗುರುಗಳ ಮುಖೇನ ಹೇಳಿಕೊಡಲಾಗುತ್ತದೆ. ಪಂದನಲ್ಲೂರು, ತಂಜಾವೂರು, ವಳವೂರು, ಕಲಾಕ್ಷೇತ್ರ, ಮೈಸೂರು ಹೀಗೆ ನಾನಾ ಪ್ರಕಾರದ ಶೈಲಿಗಳು ಇವೆ. ಮೈಸೂರು ಶೈಲಿ ಒಂದು ನಮ್ಮ ರಾಜ್ಯದ್ದು ಎಂದು ಹೇಳಬಹುದಷ್ಟೇ, ಉಳಿದವೆಲ್ಲಾ ನೆರೆರಾಜ್ಯದಿಂದ ಬಂದ ಪ್ರಕಾರಗಳು.  ಆದರೂ ಅವೆಲ್ಲವೂ ಕಲೆಯಾಗಿ ಅವನ್ನು ನಮ್ಮದಾಗಿಸಿಕೊಂಡಿದ್ದಾರೆ ನೃತ್ಯ ಕಲಾವಿದರುಗಳು.

ಎಲ್ಲಿಂದ ಬಂದುದೇ ಆಗಿರಲಿ, ನಾಟ್ಯವನ್ನು  ಶಾಸ್ತ್ರ ಬದ್ಧವಾಗಿ ಕಲಿಯುವ ಕ್ರಮವೂ ರೂಢಿಯಲ್ಲಿದೆ. ಪ್ರಾರಂಭಿಕ ಹೆಜ್ಜೆಗಳಿಗೆ ಅಡವುಗಳೆನ್ನುತ್ತಾರೆ. ನಂತರ ನೃತ್ಯ, ನೃತ್ತ ಬಂಧಗಳನ್ನು ಕಲಿಯಲಾಗುತ್ತದೆ. ಅಭಿನಯವೂ ಇಲ್ಲಿ ಪ್ರಧಾನವಾದ ಅಂಶವೇ. ನಾಟ್ಯಾಚಾರ್ಯರುಗಳಾದ ತಂಜಾವೂರು ಸಹೋದರರು ನೃತ್ಯಕಲಿಕೆಗೆ ಒಂದು ಭಾಷ್ಯವನ್ನು ಬರೆದು ‘ಭರತನಾಟ್ಯ ಮಾರ್ಗಂ’ನ್ನು ರೂಪಿಸಿದರು. ನೃತ್ಯ ಕಲಿಯಲು ಒಂದು ಮಾರ್ಗದರ್ಶವೂ ಕೂಡಾ ಅದೇ ಆಗಿದೆ. ಅಡವುಗಳ ಪಾಠದ ನಂತರ, ಅಡವುಗಳಿಂದ ಕೂಡಿದ ಅಲರಿಪು, ಸಂಗೀತವೂ ಅಷ್ಟೇ ಪ್ರಾಮುಖ್ಯತೆ ಯನ್ನು ನೃತ್ಯದಲ್ಲಿ ಬಯಸುವುದರಿಂದ, ಸಂಗೀತದ ಸ್ವರಗಳಿಗೆ ಹೆಜ್ಜೇ ಶಬ್ಧಂ ಪದವರ್ಣ. ತದನಂತರ ಅಭಿನಯದ ಪಾಠ.. ಹೀಗೆ ಕಲಿಕೆಯ ಹಂತಗಳು ಒಂದೊಂದೇ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನೇ ಹೆಚ್ಚಿನ ನೃತ್ಯ ಗುರುಗಳು, ಕಲಾವಿದರು ಅನುಸರಿಸುತ್ತಾ ಹೋಗುತ್ತಿದ್ದಾರೆ.

ಇದು ತುಂಬಾ ಹಿಂದಿನಿಂದ ಬಂದ‌ ಪದ್ಧತಿಯಾದರೆ ಕರ್ನಾಟಕದಲ್ಲಿ ಇನ್ನು ಹೆಚ್ಚು ಪರಿಷ್ಕರಿಸಿ ಅದಕ್ಕೊಂದು ಪಠ್ಯ ಕ್ರಮವನ್ನು ನಿಗದಿಸಿಪಡಿಸಲಾಗಿದೆ. ಕರ್ನಾಟಕ ಪ್ರೌಢ ಶಿಕ್ಣಣ ಮಂಡಳಿ ಪರೀಕ್ಷೆಗಳನ್ನು ನಡೆಸುತ್ತಾ ಬಂದಿದೆ. ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಹೀಗೆ ನಾಲ್ಕು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಶಾಸ್ತ್ರ ಹಾಗೂ ಪ್ರಾಯೋಗಿಕ ಎರಡೂ ಇದೆ. ನೃತ್ಯದಲ್ಲಿ ಪ್ರದರ್ಶನವೇ ಮುಖ್ಯವಾದರೂ ಅದರ ಹಿನ್ನೆಲೆ ಗೊತ್ತಿದ್ದಲ್ಲಿ ಇನ್ನಷ್ಟು ಶಕ್ತವಾಗಿ ನೃತ್ಯವನ್ನು ಅಭಿವ್ಯಕ್ತಿಸಲು ಸಾಧ್ಯ ಎನ್ನುವುದೂ ಸುಳ್ಳಲ್ಲ. ಆ ನಿಟ್ಟಿನಲ್ಲಿ ‌ಶ್ರದ್ಧೆಯಿಂದ ನೃತ್ಯವನ್ನು ‌ಬೋಧಿಸುವವರು, ಕಲಿವವರೂ ಅನೇಕ.

ಕೆಲವೊಮ್ಮೆ ಬರೀ ಪರೀಕ್ಷೆ ಯ ದೃಷ್ಟಿಯಲ್ಲಿ ಮಾತ್ರ ನೃತ್ಯವನ್ನು ಬೋಧಿಸುವವರು ಇರುತ್ತಾರೆ.  ಅಲ್ಲಿ ಬರಿಯ ಮಾರ್ಕ್ಸ್ ಮುಖ್ಯವಾಗುತ್ತದೆ, ಪ್ರದರ್ಶನ ಗೌಣವಾಗುವುದನ್ನೂ ಕಾಣುತ್ತೇವೆ. ಪ್ರದರ್ಶನವೇ ಮುಖ್ಯವಾದಲ್ಲಿ ಈ ಪರೀಕ್ಷೆ ಗಳು ಅಗತ್ಯವೇ ಎಂದರೆ ‘ಹೌದು, ಅಲ್ಲ’ ಎಂಬೆರಡು ಉತ್ತರಗಳು ಸಿಗಬಹುದು. ಆರ್ಥಿಕವಾಗಿ ನೃತ್ಯ ಬೋಧನೆಯನ್ನೇ ಆಶ್ರಯಿಸಿಕೊಂಡಿರುವವರಿಗೆ ಈ ನೃತ್ಯ ಪರೀಕ್ಷೆಗಳು ಆದಾಯದ ರೂಪದಲ್ಲಿ ಸಹಾಯವಾಗುತ್ತವೆ ಎನ್ನುವವರು ಇದ್ದಾರೆ.

ಗುರುಕುಲ ಪದ್ಧತಿಯಲ್ಲಿದ್ದ ಕಲಿಕೆ ಈಗ ವಿಸ್ತಾರವಾಗುತ್ತಾ, ಸಂಸ್ಥೆಗಳ ಮೂಲಕ, ನೃತ್ಯಶಾಲೆಗಳ ಮೂಲಕ, ಶಿಕ್ಷಣ ಸಂಸ್ಥೆಗಳಲ್ಲಿ ನೃತ್ಯ ಕಲಿತಂತಹ ಗುರುಗಳ ಮುಖೇನ ಹೇಳಿಕೊಡಲಾಗುತ್ತದೆ. ಪಂದನಲ್ಲೂರು, ತಂಜಾವೂರು, ವಳವೂರು, ಕಲಾಕ್ಷೇತ್ರ, ಮೈಸೂರು ಹೀಗೆ ನಾನಾ ಪ್ರಕಾರದ ಶೈಲಿಗಳು ಇವೆ.

ಇನ್ನು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ‌ ನೋಡಿದರೆ ಪರೀಕ್ಷೆ ಎಂದಾಗ ಕಲಿಯುವ ಗಂಭೀರತೆ ಹೆಚ್ಚು. ದಿನನಿತ್ಯದ ಕಲಿಕೆಯಲ್ಲಿ ಸ್ವಲ್ಪ ಕಡಿಮೆಯೇ. ಪಟ್ಟಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶನಕ್ಕೆ ವೇದಿಕೆಗಳು ಸಾಕಷ್ಟಿರುತ್ತವೆ. ಆ ಕಾರಣಕ್ಕೇ ಅಭ್ಯಾಸ ಗಟ್ಟಿಗೊಳ್ಳುತ್ತದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗಂಭೀರವಾಗಿ ನೃತ್ಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಈ ಪರೀಕ್ಷೆಗಳು ಸಹಾಯವಾಗುತ್ತವೆ. ಆದರೆ ‌ಅದೆಲ್ಲೋ ಕೆಲವೊಮ್ಮೆ ಅಷ್ಟಕ್ಕೇ ಸೀಮಿತವಾಗುತ್ತವೇಯೇನೋ ‌ಎಂಬ ಆತಂಕವು ಮನೆ ಮಾಡುವುದಿದೆ. ಆದರೆ ಪರೀಕ್ಷೆಯ ಕಾರಣಕ್ಕಾಗಿ ಮಕ್ಕಳು ನಿತ್ಯ ಅಭ್ಯಾಸ ನಿರತರಾಗುವುದು, ಸ್ವಲ್ಪ ಮಟ್ಟಿನ ‌ಜ್ಞಾನಕ್ಕಾಗಿ ಪೋಷಕರು ಮಕ್ಕಳನ್ನು ಜ್ಯೂನಿಯರ್ ಎಕ್ಸಾಂ ಒಂದು ಮುಗಿಸಿಕೊಳ್ಳಲಿ ಎನ್ನುವ ಯೋಚನೆಯೊಂದಿಗೆ ಮಕ್ಕಳನ್ನು ಕಳುಹಿಸುವುದು, ಪರೀಕ್ಷಾ ಕೇಂದ್ರದಲ್ಲಿ ಒಂದಷ್ಟು ಹುರುಪಿನ ‌ನೃತ್ಯ ಆಸಕ್ತರನ್ನು ಕಂಡಾಗ, ನೃತ್ಯ ಕಲಿಕೆ ಜ್ಯೂನಿಯರ್ ಎಕ್ಸಾಂಗಷ್ಟೇ ಸೀಮೀತವಾಗಿರಲಿ ಎಂಬ ಯೋಚನೆಯವರೂ ಮುಂದುವರಿಸಿರುವುದಿದೆ. ಮಕ್ಕಳು ಶೈಕ್ಷಣಿಕ ವಿಷಯವನ್ನು ಕಲಿತಂತೆಯೇ ಅಷ್ಟೇ ಶ್ರದ್ದೇಯಿಂದ ಈ ಕಲಾಪ್ರಕಾರದ ಪರೀಕ್ಷೆಗಳಲ್ಲಿ ತಮ್ಮನ್ನು ತಾವು ಗಂಭೀರವಾಗಿ ತೊಡಗಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ.

ಕೆಲವೊಮ್ಮೆ ಪರೀಕ್ಷೆ ಎಂಬ ಮಾನದಂಡದಲ್ಲಿಗೇ ಈ ಕಲಾಪ್ರಕಾರಗಳು ಸೀಮಿತ ಆಗಿ ಬಿಡುತ್ತವೆಯೋ ಎಂಬ ಭಯವು ಆಗುವುದಿದೆ. ಅಂಕಗಳಿಂದಾಚೆಯೂ ಕಲೆಯ ವಿಸ್ತಾರವನ್ನು ಅರಿತು ಕಲಿಯಬೇಕಾದುದು ಕಲಾವಿದನ ಬೆಳವಣಿಗೆಗೆ ತೀರಾ ಅಗತ್ಯ , ಅನಿವಾರ್ಯವೂ ಹೌದು. ಅಂತಹ ದೃಷ್ಟಿಕೋನವಿದ್ದಾಗ ಕಲೆಯು ಬೆಳೆಯುತ್ತದೆ.

ಆದರೆ ಕರ್ನಾಟಕವನ್ನು ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ ಈ ಕಲಿಕೆಯ ವಿಧಾನಗಳು, ಪರೀಕ್ಯಷೆ ಮಾನದಂಡಗಳು ಭಿನ್ನವಾಗಿವೆ. ಫೈನ್‌ಆರ್ಟ್ಸ್‌ ಕಾಲೇಜುಗಳು  ಪ್ರತ್ಯೇಕವಾಗಿ ಇವೆ ಆದರೂ, ಒಂದೊಂದು ನೃತ್ಯ ಸಂಸ್ಥೆಗಳೇ ವಿವಿಧ ಹಂತಗಳಲ್ಲಿ ಪ್ರದರ್ಶನವನ್ನು ಏರ್ಪಡಿಸಿ, ರಂಗಪ್ರವೇಶದಂತಹ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ‌ ನೃತ್ಯಗುರುಗಳ ಸಮ್ಮುಖದಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಅಳೆದು ಅವರಿಗೆ ಸರ್ಟಿಫಿಕೇಟ್ ಅನ್ನು ನೀಡುವ ಕ್ರಮಗಳು ಇವೆ. ಇವು ಅವರ ನೃತ್ಯ ಪ್ರದರ್ಶನದ ಸಾಮರ್ಥ್ಯವನ್ನು ತೋರಿಸುತ್ತದೆ.

ಕಲೆಯಾಗಿ, ವಿದ್ಯೆಯಾಗಿ ನಮ್ಮ ಮುಂದಿರುವ ಈ ನೃತ್ಯ ಕಲಿಯಲು ನಾನಾ ಅವಕಾಶಗಳಿವೆ. ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ, ಸಂಗೀತಗಳೇ ಮುಖ್ಯವಾಗಿರುವ ಕಾರಣಕ್ಕೆ ಪ್ರತೀ ಪೋಷಕರು ನಮ್ಮ ಮಕ್ಕಳು ನೃತ್ಯದ ಪ್ರಾಥಮಿಕ ಹೆಜ್ಜೆಯನ್ನಾದರೂ ಕಲಿಯಲಿ ಎಂಬ ಹಂಬಲದಿಂದ ನೃತ್ಯ, ಸಂಗೀತವನ್ನು ಅಭ್ಯಸಿಸಲು ಕಳುಹಿಸುತ್ತಾರೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿ ನೃತ್ಯ, ಸಂಗೀತ ಕಲಿಸುವ ಭೋದಕರೂ ಇರುತ್ತಾರೆ.

ಆರ್ಥಿಕತೆಯೇ ಮುಖ್ಯವಾಗಿರುವ ಇಂದಿನ ಕಾಲದಲ್ಲಿ ಕಲಾಪ್ರಕಾರಗಳನ್ನು ಎರಡನೇ ಆದ್ಯತೆಯನ್ನಾಗಿ ಪರಿಗಣಿಸಲಾಗುತ್ತದೆ. ಕೊರೊನಾ ಕಾಲದಲ್ಲಿ ಲಾಕ್ ಡೌನ್ ಹೇರಿದ್ದಾಗ, ಕಲಾವಿದರು ಬಹಳ ಪಡಿಪಾಟಲು ಅನುಭವಿಸಬೇಕಾಯಿತು. ಅದೇ ವೇಳೆಗೆ ಮನೆಗೇ ಸೀಮಿತವಾಗಿದ್ದ ಜನರಿಗೆ, ಸಾಮಾಜಿಕ ರಂಜನೆಗಳು ಎಷ್ಟು ಮುಖ್ಯ ಎಂಬ ಅರಿವೂ ಮೂಡಿದೆ. ಹಾಗಾಗಿ ಹೊಸ ವರ್ಷದಲ್ಲಾದರೂ ಕಲಾಕ್ಷೇತ್ರವನ್ನು ನೋಡುವ ದೃಷ್ಟಿಕೋನ ಬದಲಾಗಬಹುದೆಂಬ ಆಶಯವಿದೆ.

ಮತ್ತೆ ಲಾಕ್ ಡೌನ್ ನ ಆತಂಕ ಎದುರಾಗಿದೆ. ಕರ್ಫ್ಯೂ ಹೇರಿಕೆಯಿಂದಾಗಿ ಸಂಗೀತ ಮತ್ತು ನೃತ್ಯ ಪರೀಕ್ಷೆಗಳನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಮುಂದೂಡಿದೆ. ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಮತ್ತೆ ಆತಂಕ ಕವಿದಿದೆ. ಇವೆಲ್ಲವೂ ಕಲಾವಿದರ ಮನಸ್ಸನ್ನು ಗಟ್ಟಿ ಮಾಡುವುದಕ್ಕೆ ವೇದಿಕೆಯಾಗಬಹುದು.

ನಾಟ್ಯ, ನಾಟಕ ಮುಂದಾದ ಕಲಾಪ್ರಕಾರಗಳನ್ನು ಜನರು ನಿರ್ಲಕ್ಷಿಸುತ್ತಾರೆ ಎಂಬ ಕೊರಗಿಗೆ ಬದಲಾಗಿ ಅವು ಸಮಾಜವನ್ನು ಸಂತೈಸುವ ಮಾರ್ಗಗಳು, ಜನರ ನೋವನ್ನು ಶಮನ ಮಾಡುವ ಮತ್ತು ಅವರಲ್ಲಿ ಪ್ರೇರಣೆಯನ್ನು ತುಂಬುವ ಮಾರ್ಗಗಳು ಎಂಬುದನ್ನು ಕಲಾವಿದರು ಮನಗಾಣಬೇಕಾಗಿದೆ.