ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು. ಬಾಮೈದ ಗಟ್ಟಿಯಾಗಿ ಕೈ ಹಿಡಿದು ತೊಡಿಸಲು ನೋಡಿದಾಗ ಮಂಜ ಇನ್ನೂ ಜೋರಾಗಿ ತಲೆಯನ್ನು ಒದರಿ, ಕೈ ಹಿಂದಕ್ಕೆ ತೆಗೆದುಬಿಟ್ಟ. ಮಾವನವರು ಕಂಗಾಲಾಗಿಬಿಟ್ಟರು, ಮಂಜ ಕೆಟ್ಟ ಅಳಿಯನಾಗಿದ್ದ!
ಪ್ರವೀಣ್ ಕುಮಾರ್ ಜಿ. ಬರೆದ ಕತೆ “ಈಡು ಜೋಡು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
-೧-
“ಆಕಿ ಒಬ್ಬಾಕಿ ಇದ್ದಿದ್ರೆ..” ಎಂದು ಕ್ಯಾನ್ಸರ್ನಿಂದ ತೀರಿದ್ದ ಹೆಂಡತಿಯನ್ನು ನೆನೆಸಿಕೊಂಡು ಕಣ್ತುಂಬಿಕೊಂಡರು ಸಾಫ್ಟ್ವೇರ್ ಮಂಜನ ಮಾವನವರು. ಹೆಂಡತಿ ತೀರಿ ಹೋದ ಏಡಿನೊಳಗೆ (ವರ್ಷ) ಮಗಳನ್ನು ಮತ್ತು ತಮ್ಮದೇ ಊರಿನವನಾಗಿದ್ದ ಆಗ ದುಬೈನಲ್ಲಿದ್ದ ಈ ಮಂಜನಿಗೆ ಈಡು ಜೋಡು ಚೆನ್ನಾಗಿ ಇರುತ್ತದೆಂದು ಕೊಟ್ಟಿದ್ದರು. “ನೂರಾರು ವರ್ಷಗಳಿಂದ ನಮ್ ಹಿರೇರು ಬಾಳಿ, ತಮ್ ಬದ್ಕು ಕಟ್ಗೆಂಡಿದ್ ಇಶ್ಟ್ ದೊಡ್ಡ್ ಮನೀನ ಬಿಟ್ಟು ನಾನ್ ಯಾಕ ಪರದೇಶಿಗುಳಂಗ ಕಲ್ಯಾಣ ಮಂಟಪದಾಗ ಮದ್ವಿ ಮಾಡ್ಬೇಕು? ಮಗುಂದಾನಾ ಆಗ್ಲಿ ಮಗುಳ್ದಾನ ಆಗ್ಲಿ, ನಾನು ಮನಿ ಮುಂದೇ ಮದ್ವಿ ಮಾಡ್ಸಾದು.” ಎನ್ನುತ್ತಿದ್ದವರು ಮಾತಿನಂತೆಯೇ ಮಗಳ ಮದುವೆಯನ್ನು ಬಿಸಿಲ ಬಳ್ಳಾರಿಯ ಸಿರಿವಾರವೆಂಬ ಹಳ್ಳಿಯ ದೊಡ್ಡ ಮನೆಯ ಅಂಗಳದಲ್ಲಿ, ಸಾವಿರಾರು ಮಂದಿಯ ಎದುರು ಮಾಡಿದ್ದರು.
ಜೆನ್ಜ಼ೀ ಮಗಳು ಮತ್ತು ಮಿಲೇನಿಯಲ್ ಅಳಿಯ ಚೆನ್ನಾಗಿ ಹೊಂದಿಕೊಂಡಿದ್ದನ್ನು ಕಂಡು ಮಾವನವರು ನಿರಾಳವಾಗಿದ್ದರು. ಮಂದಿಯ ಮುಂದಿನ ಮೆತ್ತಗಿನ ಅಳಿಯ, ಮನೆಯೊಳಗೆ ಎಂಥವನೋ ಎನ್ನುವುದಕ್ಕಿಂತಲೂ ಮಾವನವರಿಗೆ ಚಿಂತೆ ಇದ್ದಿದ್ದು ಮಗಳದ್ದೇ. ಒಬ್ಬಳೇ ಮಗಳು ಎಂದು ಹೆಚ್ಚೇ ಮುದ್ದಿನಿಂದ ಬೆಳೆಸಿದ್ದರಿಂದ ಅವಳಲ್ಲಿ ತುಸು ಸಿಟ್ಟು, ಹಟಗಳೂ ಹುಟ್ಟಿಕೊಂಡಿದ್ದವು. ಮದುವೆಯಾದ ಮೇಲೆ ತನ್ನಲ್ಲಿ ಅವು ಎಂದಿಗೂ ಇದ್ದೇ ಇರಲಿಲ್ಲ ಎನ್ನುವಷ್ಟು ಅವಳು ಬದಲಾಗಿದ್ದು ಕಂಡು “ಮದ್ವಿ ಮಾಡಿದ್ರೆ ಮಕ್ಳು ದಾರೀಗೆ ಬರ್ತಾರ ಅನ್ನಾದು ಕರೇವಾಯ್ತು ನೋಡವಾ.” ಎಂದು ರೇಗಿಸಿದ್ದರು.
ಮದುವೆಯಾದ ಮೇಲೆ ಬೆಂಗಳೂರಿನಲ್ಲಿದ್ದ ಮಗಳು ಅಳಿಯ ಕೊಟ್ಟ ಸುದ್ದಿಯಿಂದ ಐದೇ ತಿಂಗಳಲ್ಲಿ ಮನೆಯಂಗಳವು ಸೀಮಂತಕ್ಕೆ ಅಣಿಯಾಯ್ತು. ಮಗಳಿಗೆ ಐದು ತುಂಬಿದಾಗ ಮುತ್ತೈದೆಯರು ಬಂದು ಶಾಮಿಯಾನದ ಅಡಿಯಲ್ಲಿ ಸೊಗಸಾಗಿ ಅಣಿ ಮಾಡಿದ್ದ ಕಟ್ಟೆಯ ಮೇಲೆ ಹಾಕಿದ್ದ ಮಹಾರಾಜ ಕುರ್ಚಿಯಲ್ಲಿ ಹೊಸ ಸೀರೆಯಲ್ಲಿದ್ದ ಮಗಳು ಮತ್ತು ಪದ್ಧತಿಯಂತೆ ತಾವು ಕೊಡಿಸಿ ಹೊಲಿಸಿದ್ದ ಹೊಸ ಬಟ್ಟೆಗಳಲ್ಲಿ ಮಿಂಚುತ್ತಿದ್ದ ಅಳಿಯನಿಗೆ ಕಳಸದ ಆರತಿ ಎತ್ತಿದರು. ಸೊಡರುಗಳ (ದೀಪ) ಬೆಳಗಲ್ಲಿ ಮಗಳು ತಾಯ್ತನದಿಂದ ಮಿನುಗುತ್ತಿರುವುದು ಕಂಡ ಗಳಿಗೆಯೇ ಮಾವನವರಿಗೆ “ಆಕಿ ಒಬ್ಬಾಕಿ ಇದ್ದಿದ್ರೆ..” ಎಂದು ತಮ್ಮ ಹೆಂಡತಿಯ ನೆನಪಾಗಿದ್ದು.
ಮಂಜನ ಮನೆಯವರು ಬೀಗರ ಸೀಮಂತದ ಏರ್ಪಾಡುಗಳಿಂದ ಹಾಯಾಗಿದ್ದರು. ಮಾವನವರ ಪಾಳಿ ಬಂತು, ಅವರು ಮಂಜನ ಒಬ್ಬನೇ ಬಾಮೈದನಿಗೆ ಅಂದರೆ ಇನ್ನೂ ಮದುವೆಯಾಗದ ತಮ್ಮ ಮಗನಿಗೆ ಸನ್ನೆ ಮಾಡಿದಾಗ, ಅವನು ಮನೆಯೊಳಗೆ ಓಡಿ ಹೋಗಿ ಬೀರುವಿನಿಂದ ಒಂದು ತೊಲೆಯ ಚಿನ್ನದ ಉಂಗುರವಿದ್ದ ಪುಟ್ಟ ಡಬ್ಬಿಯನ್ನು ತಂದು ದೂರದಿಂದ ತೋರಿಸಿದ. ಮಾವನವರು ಬಳಗದೊಂದಿಗೆ ಕಟ್ಟೆ ಏರಿದರು. ತನ್ನಡೆಗೆ ಚಾಚಿದ ಡಬ್ಬಿಯನ್ನು ಕಂಡ ಮಾವನವರು ನೀನೇ ಹಾಕು ಎಂಬಂತೆ ಬಾಮೈದನಿಗೆ ಸನ್ನೆ ಮಾಡಿದರು. ಡಬ್ಬಿಯನ್ನು ತೆರೆದಾಗ ಉಂಗುರ ಮಿನುಗುತ್ತಿತ್ತು. ಸಣ್ಣಪುಟ್ಟ ಕುರಿಪುಗಳಿಗೆ (ವಿಷಯ) ಮನೆಯಲ್ಲಿ ತನ್ನನ್ನು ಗೋಳಾಡಿಸುತ್ತಿದ್ದ ತಮ್ಮನೀಗ ಮನೆಯ ಹಿರಿಯನಂತೆ ಕಾರ್ಯ ನಡೆಸುತ್ತಿರುವುದನ್ನು ಕಂಡು ಮಂಜನ ಹೆಂಡತಿಯ ಕಣ್ತುಂಬಿದವು. ಅದಕ್ಕಿಂತಲೂ ಹೆಚ್ಚಾಗಿ ಕಟ್ಟೆಯ ಮೇಲೆ ಬಳಗದವರೊಂದಿಗೆ ತನ್ನ ತಾಯಿ ಇಲ್ಲದಿರುವುದನ್ನು ಮತ್ತು ತನ್ನಿಂದ ದೂರದಲ್ಲಿ ಒಂಟಿಯಾಗಿ ನಿಂತ ಅಪ್ಪನನ್ನು ಕಂಡವಳಿಗೆ ಅಳು ತಡೆಯಲಾಗಲಿಲ್ಲ, ದಳದಳ ಅಳಲತ್ತಿದಳು. ಮಂಜನ ಅಮ್ಮ, ಅಕ್ಕ ಓಡಿ ಬಂದು ಮಾಡಿದ ತಣಿವು (ಸಮಾಧಾನ) ಕೆಲಸ ಮಾಡಲಿಲ್ಲ. ಬಸುರಿಯ ಕಣ್ಣೀರನ್ನು ಕಂಡು ಕಟ್ಟೆಯ ಮೇಲಿನವರು ಅಳುತ್ತಿದ್ದಂತೆ, ಅಂಗಳದಲ್ಲಿ ಹರಡಿಕೊಂಡಿದ್ದ ಹೆಂಗಸರೆಲ್ಲರೂ ಕಟ್ಟೆಯ ಬಳಿ ನೆರೆದು ಅಳಲತ್ತಿದರು.
ಇತ್ತ ಬಾಮೈದನು ತನ್ನ ಬಲಗೈಯಲ್ಲಿ ಉಂಗುರ ಹಿಡಿದು, ಎಡಗೈಯಲ್ಲಿ ಮಂಜನ ಕೈ ಹಿಡಿದು ತೊಡಿಸಲು ಮುಂದಾದಾಗ ಮೊದಲಿಗೆ ಮಂಜನ ಕೈ ಮೇಲೇಳಲಿಲ್ಲ. ಅಕ್ಕನ ಅಳುವಿನಲ್ಲಿ ತಾನೂ ಕಣ್ತುಂಬಿಕೊಂಡಿದ್ದ ಬಾಮೈದ ಉಂಗುರವನ್ನು ಮತ್ತೆ ಬೆರಳ ಹತ್ತಿರ ಹೊಯ್ದಾಗ ಮಂಜನ ಕೈ ಇನ್ನಶ್ಟು ಹಟ ಮಾಡಿತು. ಬಾಮೈದ ಮಂಜನನ್ನು ನೋಡಿದ, ಮಂಜನ ಮಾರಿ ನೆಲ ನೋಡುತ್ತಾ, ಬೇಡ ಬೇಡ ಎಂಬಂತೆ ಅತ್ತಿತ್ತ ಒದರಾಡುತ್ತಿತ್ತು. ಬಾಮೈದ ಮಾವನವರನ್ನು ನೋಡಿದ, ಸುತ್ತಿನವರು ಇನ್ನೂ ಬೆರಳು ಏರದ ಉಂಗುರವನ್ನೇ ನೋಡುತ್ತಿದ್ದರು. ಬಾಮೈದ ಗಟ್ಟಿಯಾಗಿ ಕೈ ಹಿಡಿದು ತೊಡಿಸಲು ನೋಡಿದಾಗ ಮಂಜ ಇನ್ನೂ ಜೋರಾಗಿ ತಲೆಯನ್ನು ಒದರಿ, ಕೈ ಹಿಂದಕ್ಕೆ ತೆಗೆದುಬಿಟ್ಟ. ಮಾವನವರು ಕಂಗಾಲಾಗಿಬಿಟ್ಟರು, ಮಂಜ ಕೆಟ್ಟ ಅಳಿಯನಾಗಿದ್ದ!
ಬಾಮೈದ ಮಾವನವರನ್ನು ದೂರ ಕರೆದು, “ಬ್ಯಾಡ ಅನ್ನಾಕತ್ತಾರ.” ಎನ್ನುವಶ್ಟರಲ್ಲಿ ಬಂದಿದ್ದ ಬಳಗದ ಹೆಂಗಸರಿಗೆ ಗೊತ್ತಾಯ್ತು. ಅಳಿಯನಿಗೆ ಬಂಗಾರ ಸಾಲುತ್ತಿಲ್ಲ! ‘ಎಶ್ಟು ಬೇಕೆಂದಿದ್ದರೆ ಅಶ್ಟೇ ತರುತ್ತಿದ್ದೆʼ ಎಂದುಕೊಂಡ ಮಾವನವರಿಗೆ ಮುಂದೇನೂ ತೋಚಲಿಲ್ಲ. ಅಳಿಯ ಕೊಸರಾಡುವನು, ಮಗಳು ನೋಯುವಳು, ಬಸುರೊಳಗಣ ಕೂಸು ಬಳಲುವುದು ಎಂದು ಕೊರಗಲತ್ತಿದರು. “ಎರಡು ತೊಲಿ ಉಂಗ್ರ ತಗಳ್ರಿ ಅಂತ ಹೇಳಿದೆ ಅವತ್ತೇ.” ಎಂದು ಬಾಮೈದ ಮಾವನವರನ್ನು ಆಡಿಕೊಂಡ.
ಗಳಿಗೆಗಳ ಮೇಲೆ ನಡು ಬಗ್ಗಿಸಿದ ಮಾವ, ಬಾಮೈದ ಮತ್ತವರ ಬಳಗದ ಹೆಂಗಸರು ಸೊಕ್ಕಿನ ಮಂಜನನ್ನು ಬೈದುಕೊಳ್ಳುತ್ತಲೇ ಬಂದು ಮಂಜನ ಮುಂದೆ ನಿಂತರು. ಬೀಗರ ಪರವಾಗಿದ್ದ ಮಂಜನ ಅಪ್ಪ ಎಲ್ಲೋ ಹೋಗಿದ್ದರು. ತನ್ನಶ್ಟು ಓದದ ಮನೆಯ ಬೇರೆಯವರಿಗೆ ಈ ಮಂಜ ಬಗ್ಗುತ್ತಿರಲಿಲ್ಲ, ಇವನಿಗೆ ಅವರೇ ಸರಿ ಎಂದು ಮಾವನವರು ಅವರಿಗಾಗಿ ಕಾದರು. ಮಂಜನ ಬಳಿಗೆ ಬಂದ ಹೆಂಡತಿಯ ದೊಡ್ಡಮ್ಮ “ನೋಡಪಾ ತಮ್ಮಾ, ನೀನು ಅಶ್ಟಾಕೊಂದು ದುಡೀತಿ. ನಿನೀಗೆ ಒಂದು ತೊಲ ಬಂಗಾರ ಸಣ್ಣುದು ಹೌದು. ನೀನು ಮನ್ಸು ಮಾಡಿದ್ರೆ ಇಂಥಾವು ನೂರು ತಗಂತೀ. ಆದ್ರೆ ನಿಮ್ ಮಾವೋರು ನಿಮ್ಮಶ್ಟು ಸಾವ್ಕಾರ್ರು ಅಲ್ಲ. ತಗಳಪಾ. ಬ್ಯಾಡ ಅನ್ಬ್ಯಾಡಪಾ. ಬಡುವ್ರು.” ಎಂದರು, ಕಣ್ಣೀರಾದರು. ಮಂಜ ಕರಗಲಿಲ್ಲ. ಹೆಂಡತಿಯ ಅಳು ತಾಯಿಯ ನೆನಪಲ್ಲಿ ಇನ್ನೂ ನಿಂತಿರಲಿಲ್ಲ. ಬಾಮೈದ “ಮಾಮ, ಇವತ್ತೊಂದಿಸ ಇದನ್ನ ಹಾಕ್ಕೆಳ್ರಿ ಸಾಕು. ನಾಳಿನೇ ಹೊಸಾದು ಹಾಕ್ತೀವಿ.” ಎಂದು ಅವ್ವನಾಣೆ ಮಾಡಿದ. ಎತ್ತದ ತಲೆಯೊಂದಿಗೆ ಮಂಜನ ಬಾಯಿಯೂ ಈಗ “ಬ್ಯಾಡ, ಬ್ಯಾಡ.” ಎನ್ನಲತ್ತಿತ್ತು.

ಆಗುತ್ತಿರುವುದೆಲ್ಲಾ ಅರಿವಾದ ಕೂಡಲೇ ಹೆಂಡತಿಯು, ಬಾಗಿದ್ದ ಮಂಜನ ತಲೆಯೆತ್ತಿ ತನ್ನತ್ತ ತಿರುಗಿಸಿಕೊಂಡು ‘ರೀ, ಪ್ಲೀಸ್..ʼ ಎಂಬಂತೆ ಅಳುತ್ತಲೇ ಸನ್ನೆ ಮಾಡಿದಾಗ, ಅದೇ ಹೊತ್ತಿಗೆ ಮಗನನ್ನೇ ಗುರಾಯಿಸುತ್ತಾ ದಡದಡನೇ ಕಟ್ಟೆಯನ್ನು ಏರುತ್ತಿದ್ದ ಅಪ್ಪನ ಕಣ್ಣಿಗೆ ಬೀಳುವ ಮೊದಲೇ ಮಂಜ, ಕೈ ಚಾಚಿದ. ಟಕ್ಕನೇ ಬಾಮೈದ ಉಂಗುರವೇರಿಸಿಬಿಟ್ಟ. ಎಲ್ಲರೂ ಚಪ್ಪಾಳೆ ತಟ್ಟಿದರು. ಮೆಲ್ಲಗೆ ತಲೆ ಎತ್ತಿದ ಮಂಜ ಸುತ್ತಲೂ ನೋಡಿದಾಗ ಅಪ್ಪ ಯಾಕೋ ತನ್ನನ್ನು ಬೈಯ್ಯುತ್ತಿದ್ದಂತಿತ್ತು. ಹೆಂಡತಿಯ ಕಡೆಯವರೆಲ್ಲರೂ ತನ್ನನ್ನು ಕೇಡಿಯಂತೆ ನೋಡುತ್ತಿರುವುದು ಕಂಡಿತು. ಮಾವನವರು ನಾಳೆಯೇ ಬಳ್ಳಾರಿಗೆ ಹೋಗಿ ಹೊಸ ಉಂಗುರವನ್ನು ಕೊಡಿಸಿ ತರಲು ಎಲ್ಲಾ ಏರ್ಪಾಡು ಮಾಡಿಕೊಂಡರು.
-೨-
ನಡುಹಗಲು ಊಟ ಮಾಡುವಾಗ ಹತ್ತಿರದಲ್ಲಿ ಯಾರೂ ಇರದಾಗ ಮೆಲ್ಲನೆ “ನೀವ್ ಯಾಕ್ ಅತ್ರಿ?” ಎಂದು ಕಣ್ಣಲ್ಲಿ ಕಣ್ಣಿಟ್ಟು ಹೆಂಡತಿ ಕೇಳಿದಳು ಮಂಜನಿಗೆ. ತನ್ನ ತಲ್ಲಣವನ್ನು ಗುರುತಿಸಿದ್ದ ಹೆಂಡತಿಯೆಡೆಗೆ ಮಂಜನ ಒಲವು ಕೋಟಿ ಪಾಲು ಹೆಚ್ಚಾಯಿತು. ಇವನು ಆಗಿದ್ದೆಲ್ಲವನ್ನೂ ಹೇಳಿದ, ಅವಳು ಮನಸಾರೆ ನಕ್ಕಳು.
ಆಗಿದ್ದೇನೆಂದರೆ “ಬ್ಯಾಡ ಅಂದ್ರೂ ಪದ್ಧತಿ ಅಂತ ಇವಾಗ ಕೊಡ್ಸಿರಾ ಬಟ್ಟೀ ಸಾಕು, ನಿಮ್ಮಪ್ಪೋರು ಬಂಗಾರ ಗಿಂಗಾರ ಕೊಡಾಕ ಬಂದ್ರೆ ಬ್ಯಾಡ ಅಂತೀನಿ.” ಎಂದು ಸೀಮಂತಕ್ಕೆ ಬರುವ ಮೊದಲೇ ಹೆಂಡತಿಗೆ ಗಟ್ಟಿಯಾಗಿ ಹೇಳಿದ್ದ ಮಂಜು. ಶಾಸ್ತ್ರಗಳ ಹೆಸರಲ್ಲಿ ಹೆಣ್ಣಿನ ಕಡೆಯವರನ್ನು ಸುಲಿಯುವುದು ಒಳ್ಳೆಯದಲ್ಲವೆಂದು ಗೊತ್ತಿತ್ತು ಮಂಜನಿಗೆ. ಸೀಮಂತದಲ್ಲಿ ತಾಯಿಯನ್ನು ನೆನೆಸಿಕೊಂಡು ಹೆಂಡತಿ ಅಳುವವರಗೆ ಎಲ್ಲವೂ ಚೆನ್ನಾಗಿತ್ತು. ಹೆಂಡತಿಯ ಕಣ್ಣೀರು ನೋಡುತ್ತಲೇ ಮೆತ್ತನೆಯ ಮನಸ್ಸಿನ ಮಂಜನ ಹೆಂಗರುಳು ಎಚ್ಚರವಾಗಿ ಕಂಬನಿ ಜಿನುಗಲತ್ತಿತ್ತು. ತುಂಬಿಕೊಳ್ಳುತ್ತಿರುವ ಕಣ್ಣೀರನ್ನು ಕಣ್ಣಲ್ಲೇ ಇಂಗಿಸಲು ತುಂಬಾ ಕಶ್ಟಪಡಲತ್ತಿದ್ದ. ಗಳಿಗೆ ಗಳಿಗೆ ಹೆಚ್ಚಾಗುತ್ತಿದ್ದ ಹೆಂಡತಿಯ ಅಳು ಮಂಜನನ್ನು ಸೋಲಿಸಿಬಿಟ್ಟಿತ್ತು. ತಾನು ಅಳುತ್ತಿರುವುದು ಮಂದಿಗೆ ಗೊತ್ತಾಗಿ ಗಂಡಸಾಗಿ ಅಳುತ್ತಿದ್ದಾನೆಂದು ಆಡಿಕೊಳ್ಳುತ್ತಾರೆಂದು ಒಡನೇ ತಲೆ ಕೆಳಗೆ ಮಾಡಿದ್ದ. ಕೈಬಟ್ಟೆ ತೆಗೆದರಂತೂ ಅಳು ಗೊತ್ತಾಗಿ ಬಿಡುವುದೆಂದು ಅದು ಮಾಡದೇ ಮೆಲ್ಲ ಮೆಲ್ಲಗೆ ರೆಪ್ಪೆ ಬಡಿಯುತ್ತಾ ಹದವಾಗಲು ಪರದಾಡುತ್ತಿದ್ದ. ಅದೇ ಹೊತ್ತಿಗೆ ಸರಿಯಾಗಿ ಬಾಮೈದ ಉಂಗುರ ತೊಡಿಸಲು ಕೈ ಎಳೆದಿದ್ದು! ಕಟ್ಟಿದ ಗಂಟಲಿನಲ್ಲಿ ಅವನಿಗೆ, “ನನೀಗೆ ಇದೆಲ್ಲಾ ಬ್ಯಾಡ, ಬಟ್ಟೀ ಮಾಡೀರಲ್ಲಾ ಸಾಕು.” ಎನ್ನುವಶ್ಟು ಕಸುವಿರಲಿಲ್ಲ. ಗಂಟಲಲ್ಲೂ ಅಳು ತುಂಬಿಕೊಂಡಿತ್ತು. ಬಾಮೈದ ಮತ್ತೆ ಮತ್ತೆ ಉಂಗುರ ಹಾಕಲು ಬಂದಾಗೆಲ್ಲಾ ಮಂಜ, ಬ್ಯಾಡ ಬ್ಯಾಡ ಎಂದು ಕೈ ಕೊಡವಿದ್ದ, ತಲೆ ಒದರಿದ್ದ. ಪಾಪ ಮಂಜನ ಕಶ್ಟ ಮಂಜನಿಗೆ.
ಮಾವ ಮತ್ತು ಬಾಮೈದ ಮಾತಾಡಿಕೊಳ್ಳಲು ಹೋದಾಗ ತುಸು ಹದಕ್ಕೆ ಬಂದಿದ್ದವನು, ಬಂಗಾರ ಬೇಡವೆಂದು ಇವಳು ಅವರಿಗೆ ಹೇಳಿಲ್ಲ. ಹೇಳಿದ್ದರೂ ಇವರು ಯಾಕೆ ತಂದರು? ಎಂದು ಬೈದುಕೊಂಡ. ಜೊತೆಗೆ, ಅಳುವವರನ್ನು ನೋಡಿದ ಕೂಡಲೇ ತಾವೂ ಅತ್ತು (ಅದೇ ಕಾರಣಕ್ಕೋ ಬೇರೆಯದಕ್ಕೋ ಯಾರಿಗೆ ಗೊತ್ತು?) ಮನಸ್ಸನ್ನಂತೂ ಹಗುರ ಮಾಡಿಕೊಳ್ಳುವ ಅವಕಾಶ ಗಂಡಿಗೆ ಯಾಕಿಲ್ಲ? ಹೆಣ್ಣಿನಶ್ಟು ಹಾಯಾಗಿ ಗಂಡು ಯಾಕೆ ಅಳಬಾರದು? ಗಂಡಸರೇ ಕಟ್ಟಿರುವ ಈ ಕೂಡಣವು (ಸಮಾಜ) ಅಳು ಎನ್ನುವುದು ಗಂಡಿನ ಡಿಎನ್ಎ ಅಲ್ಲಿಯೇ ಇಲ್ಲ ಎಂದು ನಂಬಿಸಿ ಗಂಡಸರ ಬದುಕನ್ನು ಹಾಳು ಮಾಡಿಬಿಟ್ಟಿದೆ. ಗಂಡು ಹೀಗೆ ಅತ್ತು ಹಗುರಾಗಲು ಕಶ್ಟಪಡುತ್ತಿರುವುದು, ಲಕ್ಷಾಂತರ ಏಡುಗಳಿಂದ ಧರ್ಮ, ಶಾಸ್ತ್ರ, ಪದ್ಧತಿ, ಸಂಪ್ರದಾಯ, ಕಾನೂನುಗಳ ಹೆಸರುಗಳನ್ನು ಹೇಳಿಕೊಂಡು ತನ್ನನ್ನು ಕಟ್ಟಿ ಹಾಕಿರುವ ಗಂಡು ಕುಲಕ್ಕೆ ಹೆಣ್ಣು ಕೊಟ್ಟಿರುವ ಶಾಪವೂ ಆಗಿರಬಹುದು ಎಂದೆಲ್ಲಾ ಅನಿಸಿ ಕಾಡಲತ್ತಿತ್ತು. ಬೀಗರೆಲ್ಲರೂ ಮತ್ತೆ ಬಂದು ಏನೇನೋ ಅಂದಾಗ, ತಲೆ ಬಗ್ಗಿಸಿ ಅಳುವನ್ನು ಹತೋಟಿಗೆ ತರಲು ಬೆಟ್ಟದಶ್ಟು ಕಶ್ಟಪಡುತ್ತಿದ್ದ ಮಂಜನನ್ನು ಹೆಂಡತಿ, ತಲೆ ಹಿಡಿದೆತ್ತಿ ತುಂಬಿದ ಕಂಗಳಲ್ಲಿ “ಹಾಕ್ಕೆಳ್ರಿ” ಎಂದು ಕೇಳಿದ್ದಕ್ಕೆ, ಆಮೇಲೆ ತಿರುಗಿಸುವ ತೀರ್ಮಾನ ಮಾಡಿ ಉಂಗುರವನ್ನು ಏರಿಸಿಕೊಂಡಿದ್ದ.
-೩-
ಇರುಳು ಹೆಂಡತಿ ಕೋಣೆಗೆ ಬಂದಳು. ನನ್ನ ಅಳು ನೆನೆದು ಈಗ ಇವಳು ಮತ್ತೆ ನಗುವಳು ಎಂದುಕೊಂಡಿದ್ದವನ ಕಿವಿಗೆ, “ರೀ, ನಿಮಿಗೇನ್ ತಲಿಗಿಲಿ ಐತೋ ಇಲ್ಲೋ? ಬ್ಯಾಡ ಬ್ಯಾಡ ಅಂತಿದ್ದೋರು ನಾನು ಸನ್ನಿ ಮಾಡಿದ್ಗುಟ್ಲೇ ಟಕ್ ಅಂತ ಯಾಕ್ ಉಂಗ್ರ ಹಾಕಿಸ್ಗೆಂಡ್ರಿ?!” ಎಂದವಳು ನಿಲ್ಲಿಸದೇ “ಗಂಡುನ್ನ ಎಶ್ಟು ಕಂಟ್ರೋಲಾಗ ಇಟ್ಗಂಡಾಳ ನೋಡು, ಅಂತ ರೇಗುಸ್ತೈದಾರ ಗೊತ್ತಾ ನನ್ನ?” ಎಂದು ಸಿಟ್ಟಾದಳು. “ದೇವ್ರೇ, ಈ ಗಂಡುಸ್ರುನ್ನ ಕಾಪಾಡಪ್ಪಾ” ಎಂದು ದೇವರನ್ನು ಬೇಡಿಕೊಂಡು “ರೀ” ಎನ್ನುತ್ತಾ ಹೆಂಡತಿಯೆಡೆಗೆ ಸಾಗಿದ ಮಂಜ. ಹೆಂಡತಿಗೆ ರೀ ಎನ್ನುವ ಮಂಜನ ಈ ಸುದ್ದಿ ಸುತ್ತಲಿನ ಹೆಂಗಸರಿಗೆಲ್ಲಾ ಬೆರಗಾಗಿತ್ತು. ಏನೂ ಅಲ್ಲದ ನಡೆಯೊಂದು ಹೆಂಗಸರಿಗೆ ಬೆರಗಿಗಾಗಿ ಕಂಡಾಗ “ಹಿಂದಿನ ಕಾಲದ ಗಂಡುಸ್ರು ಈಗಿನ ಕಾಲದ ಗಂಡುಸ್ರಿಗೆ ಎಶ್ಟೊಂದು ಲೋ ಸ್ಟ್ಯಾಂಡರ್ಡ್ಸ್ ಸೆಟ್ ಮಾಡ್ಯಾರಲ್ಲಾ?” ಎಂದುಕೊಂಡು ನಕ್ಕಿದ್ದ ಮಂಜ.
ಸಿಟ್ಟಿನಲ್ಲಿ ಗೊಣಗುತ್ತಲೇ ಇದ್ದ ತನ್ನನ್ನು ಗಂಡ ಕೈ ಹಿಡಿದು ಸೋಕಿದಾಗ ಹೆಂಡತಿ ಮಾತು ನಿಲ್ಲಿಸಿದಳು. ಮಂಜ “ರೀ,” ಎಂದು ಕಣ್ಣಲ್ಲಿ ಕಣ್ಣಿಟ್ಟಾಗ ಅವಳಿಗೆ ಗೊತ್ತಿಲ್ಲದಂತೆಯೇ ಆ ಉಲಿಗೆ ಕರಗಿ ಅವನನ್ನು ತಬ್ಬಿಕೊಂಡಿದ್ದಳು. ತಾಯಿಯಂತೆ ಬೆಚ್ಚಗಿತ್ತು ಗಂಡನ ಅಪ್ಪುಗೆ. ಬಸುರೊಳಗಿನ ಕೂಸು ಅಮ್ಮನ ಉಸಿರಲ್ಲಿ ಕಂಡ ನೆಮ್ಮದಿಯಿಂದ ನಲಿದಾಡಿತು.

ಬೆಳಿಗ್ಗೆ ಹಾಯಾಗಿ ಅಣಿಯಾಗಿ ತಿಂಡಿಗೆ ಕುಳಿತಾಗ ಮಾವ ಮತ್ತು ಬಾಮೈದ ಎಲ್ಲಿಗೋ ಹೊರಟವರು ಮಂಜನನ್ನು ಕಂಡು ನಿಂತು ಸಣ್ಣದಾಗಿ ನಕ್ಕರು. ಆ ನಗುವಿನಿಂದಲೇ ಗೊತ್ತಾಗುತ್ತಿತ್ತು, ನಿನ್ನೆಯ ಕತೆಯನ್ನೆಲ್ಲಾ ಹೆಂಡತಿ ಒದರಿಬಿಟ್ಟಿದ್ದಾಳೆಂದು. ಸಿಗ್ಗಿನಲಿ ಮುಳುಗುತ್ತಿದ್ದ ಮಂಜ ಮಾವನವರೊಂದಿಗೆ ಮಾತಾಡಲು ಮತ್ತೆ ಕಶ್ಟದ ಮೇಲೆ ಕಶ್ಟಪಡಲತ್ತಿದ. ಬೆರಳಲ್ಲಿದ್ದ ಉಂಗುರ ಮಂಜನನ್ನು ನೋಡಿ ಮಿಂಚುತ್ತಾ, ನಗುವಿನಲಿ ಕಣ್ಣು ಹೊಡೆಯಲತ್ತಿತು.

ಪ್ರವೀಣ್ ಕುಮಾರ್ ಜಿ. ಬರಹಗಾರ ಮತ್ತು ಸಿನಿಮಾ ನಿರ್ದೇಶಕ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಪದವಿಧರ. ಮೂಲತಃ ಬಳ್ಳಾರಿಯವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಮರ ಪ್ರೇಮಿ ಅರುಣ್ (2025) ಸಿನಿಮಾದ ಕತೆಗಾರ ಮತ್ತು ನಿರ್ದೇಶಕ. ಎಡೆ (2024) ಮತ್ತು ಬಯಲು ಇವರ ಪ್ರಕಟಿತ ಕಥಾ ಸಂಕಲನಗಳು. ಚಂದನ ವಾಹಿನಿಯಲ್ಲಿ ಈಗ ಪ್ರಸಾರವಾಗುತ್ತಿರುವ ಕುಂ.ವೀ ಅವರ ಕಾದಂಬರಿ ಆಧಾರಿತ ಮತ್ತು ಮಂಸೋರೆ ಅವರ ನಿರ್ದೇಶನದ ಅರಮನೆ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ.
