‘ಬಂದಂತೆ ಮರು ವಸಂತ, ನೀ ಬಂದೆ ಬಾಳಿಗೆ; ಅನುರಾಗಆಮೋದ ಎದೆಯಲ್ಲಿ ತುಂಬಿದೆ’  ಎಂಬ ಸಾಲುಗಳು ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರದು. ಎದೆಯಲ್ಲಿ ಅನುರಾಗ ಸೆಲೆಯನ್ನು ತುಂಬುವ ಪ್ರೇಮವು ಸದಾ ಜೀವನ್ಮುಖಿ.  ಕಾಲ ದೇಶಗಳ ಹಂಗಿಲ್ಲದ ಜೀವಜಗತ್ತಿನ ಗಾಲಿಯನ್ನು ಮುನ್ನಡೆಸುವ ಪ್ರೇಮದ ಕುರಿತು ಬರೆಯದವರಾರು ? ತರ್ಕವನ್ನು ಮೀರಿದ ಪ್ರೀತಿಗೆ ಕಾವ್ಯವೇ ಆಸರೆ. ಪ್ರೇಮದ ನೆನಪುಗಳ ಜತನ ಮಾಡಿಕೊಳ್ಳುವುದೆಂದರೆ ಬದುಕಿಗೊಂದು ಚೈತನ್ಯದ ಬುತ್ತಿ ಕಟ್ಟಿಕೊಂಡಂತೆ.  ಅಂತಹ ಪ್ರೇಮದೀಪದ ಬೆಳಕನ್ನು ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ಕೆಲವು ಸುಂದರ ಕವಿತೆಗಳು ಇಲ್ಲಿವೆ. 

ಚಿತ್ರಕೂಟ: ಎನ್. ಎಸ್. ಲಕ್ಷ್ಮೀ ನಾರಾಯಣ ಭಟ್ಟ

ನೀನೊಲಿದ ಗಳಿಗೆ.
ಹೊಕ್ಕುಳಲ್ಲಿ ಹೂಗುಟ್ಟಿ
ಬಾಯಿಗೆ ಬರದವನೆ,
ಮಕ್ಕಳ ಕಣ್ಣುಗಳಲ್ಲಿ
ಬಾಗಿಲು ತೆರೆದವನೆ.
ಬುದ್ದಿ ಸೋತು ಬಿಕ್ಕುವಾಗ.
ಹಮ್ಮು ಹಠಾತ್ತನೆ ಕರಗಿ
ಬದುಕು ಕಾದು ಉಕ್ಕುವಾಗ
ಜಲನಭಗಳ ತೆಕ್ಕೆಯಲ್ಲಿ
ದೂರ ಹೊಳೆವ ಚಿಕ್ಕೆಯಲ್ಲಿ
ನಕ್ಕು ಸುಳಿಯುವೆ.
ಆಗ ಕೂಗಿದರೆ ನಾನು
ನನ್ನ ದನಿ
ತೂಗುವ ಜೇನು, ಸಂಜೆಗೆ
ಮಾಗುವ ಬಾನು, ಹುಣ್ಣಿಮೆ
ತಾಜಮಹಲಿನ ಕಮಾನು

ಕ್ಷಣದಲ್ಲಿ ಹೊಳೆದವನು
ದಿನವಿಡೀ ಕಾಯಿಸುವೆ
ಮುಗಿಲ ಬಟ್ಟಲಿನಲ್ಲಿ ಜಲವ ತುಂಬಿಟ್ಟು
ಗಾಳಿಗೈಯಲ್ಲಿ ಅದನ್ನು
ಘಟ್ಟನೆ ಒಡೆಯುವೆ.

ಕಟ್ಟುವ ಕೆಡೆಯುವ
ಈ ಕಣ್ಣು ಮುಚ್ಚಾಲೆ
ಇನ್ನು ಸಾಕು
ನೀನೊಲಿದ ಗಳಿಗೆ
ಅನಂತತೆಗೆ ಬೆಳೆಯುವುದು ಬೇಕು.

 

 

 


ಹೃದಯ ಮೋಹಿನಿಗೆ: ಕೆ.ಎಸ್. ನರಸಿಂಹ ಸ್ವಾಮಿ

ನಿದ್ದೆಯ ಬೇಲಿಯ ಕನಸಿನ ಬನದಲಿ
ಆಡುವ ಹೆಣ್ಣೆ, ನೀನಾರು ?

ಕಾಮನ ಬಿಲ್ಲಿನ ಸೀರೆಯ ಹೆಣ್ಣೆ,
ಜಡೆಯಲಿ ತಾರೆಯ ಮುಡಿದಿಹ ಹೆಣ್ಣೆ,
ಮಿಂಚುವ ಕಂಗಳ ಸಂಚಿನ ಹೆಣ್ಣೆ,
ಬಿಂಕದ ಹೆಣ್ಣೆ, ನೀನಾರು ?

ಎತ್ತಿದ ಮುಖವೊ ಚೆಲುವಿನ ಗೋಪುರ ;
ಕಂಗಳೊ ಕಳಸದ ಜೊತೆದೀಪ,
ಕೊರಳೊ ಕೇಳದ ದನಿಯ ವಿಮಾನ –
ಹೃದಯದ ಮರುಳೆ, ನೀನಾರು ?

ವಸಂತ ಹಸೆಮಣೆ ನಿನ್ನ ಹಣೆ;
ನಡುವೆ ಕುಂಕುಮದ ಚಿತ್ರಲತೆ –
ಕರೆದರೆ ನಿಲ್ಲದೆ ತಿರುಗಿ ನೋಡದೆ
ತೆರಳುವ ಹೆಣ್ಣೆ, ನೀನಾರು ?

ಕನಸಿನ ಬನದಲಿ ಕಮಲಾಕರದಲಿ
ಕನಕ ವೀಣೆಯನು ದನಿಮಾಡಿ,
ನನ್ನ ನೆರಳಿಗೇ ಯೋಜನ ಹಾರುವ
ಒಲಿಯದ ಹೆಣ್ಣೆ, ನೀನಾರು ?

ಕೆನ್ನೆಯ ಬಾನಲಿ ಮುತ್ತಿನ ಚಂದಿರ
ಮೂಡದ ಹೆಣ್ಣೆ, ನೀನಾರು ?
ಪ್ರೇಮಪದಪದುಮ ಸೋಂಕದ ಮಂದಿರ
ಮಾಯಾಮೋಹಿನಿ, ನೀನಾರು ?

 

 

 

ತೂಗುಮಂಚ: ಎಚ್. ಎಸ್. ವೆಂಕಟೇಶ ಮೂರ್ತಿ 

ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು

ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ ಹಮ್ಮನುಸಿರ ಬಿಟ್ಟಳು
ಸೆರಗು ಜಾರುತಿರಲು ಕೆಳಗೆ ಬಾನುಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ ಬೆಳ್ಳಿಹಾಲ ಬಟ್ಟಲು

ಚಾಚುತಿರಲು ಅರಳಿಗರಳು ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು ಹಾಯಿದೋಣಿ ತೆಲಿತೋ
ತನಗೆ ತಾನೇ ತೂಗುಮಂಚ ತಾಗುತಿತ್ತು ದೂರದಂಚ
ತೆಗೆಯೋ ಗರುಡ ನಿನ್ನ ಚುಂಚ ಹಾಲುಗಡಿಗೆ ಹೇಳಿತು

 

 

 

 

ನೀಲು ಕಾವ್ಯ: ಪಿ. ಲಂಕೇಶ್

ಕನಸು, ಕಾತರವಿಲ್ಲದ
ಪ್ರೇಮ
ತುಂಬೆ ಗಿಡ ಕೂಡ ಇಲ್ಲದ
ಬಯಲಿನಂತೆ

ತಪಸ್ಸನ್ನು ಮುಕ್ತಿಗಾಗಿ
ಮಾಡುವವರಿಗಿಂತ
ಚಿಂತೆಯನ್ನು ಗೆಳತಿಯ
ಪ್ರತ್ಯಕ್ಷಕ್ಕಾಗಿ ಮಾಡುವವರೇ
ಹೆಚ್ಚು

ಅಷ್ಟು ಪ್ರೀತಿ ಇಷ್ಟು ಪ್ರೀತಿ: ದ.ರಾ. ಬೇಂದ್ರೆ

ಅಷ್ಟು ಪ್ರೀತಿ ಇಷ್ಟು ಪ್ರೀತಿ–
ಎಣಿಸಿ ಕಷ್ಟಬಡದಿರು
ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು—ತಮ್ಮ ಕಿರಣ ತಮಗೆ ಹಗಲು ;
ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
ಉಳಿದ ಲೋಕ ಹಿತ್ತಲು.

ಮುತ್ತಿನೆಕ್ಕಸರವನಿಕ್ಕೆ
ಮುದ್ದಿಗೆ ಕಳೆಕಟ್ಟಿತೆ ?
ತೊಯ್ದ ಎವೆಗೆ ಮುದ್ದನಿಡಲು
ಮುದ್ದಿಗೆ ಅದು ತಟ್ಟಿತೆ ?
ಕುದಿದ ಬಂದ ಕಂಬನಿಯಲು
ಕಂಪು ಬರದೆ ಬಿಟ್ಟಿತೆ ?

ಮುತ್ತು ರತುನ ಹೊನ್ನು ಎಲ್ಲ
ಕಲ್ಲು ಮಣ್ಣ ವೈಭವಾ
ಎಲವೊ ಹುಚ್ಚು ಮಾನವಾ
ಒಂದು ಷೋಕು—ಬರಿಯ ಝೋಕು
ಬದುಕಿನೊಂದು ಜಂಬವು
ಒಲವೆ ಮೂಲ ಬಿಂಬವು.

ಸಪ್ತ ನಾಕ ಸಪ್ತ ನರಕ
ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
ಅದರ ಕೋಟೆ ಕೊತ್ತಲು
ಸಿಂಹಾಸನವನೇರಿ ಕುಳಿತೆ ;
ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
ಅದರೊಳೇನು ಹೆಚ್ಚಿದೆ?

ಎದೆಯ ಕಣ್ಣ ಮುಚ್ಚಿಕೊಂಡು
ಏಕೊ ಏನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
ಅಲ್ಲೆ ಒಲವು ಮೆರೆಯದೇ
ನಲಿವು ಮೇರೆವರಿಯದೇ?