ಹೆಜ್ಜೆ ಮೇಲೊಂದು ಹೆಜ್ಜೆ ಇರಿಸುತ್ತಲೇ ಮೂರು ದಾರಿಗಳು ಕೂಡುವ ಬೀದಿಯ ತಿರುವಲ್ಲಿ ಬಂದು ನಿಂತು ಮಂದಹಾಸದಲ್ಲಿ ಉಸಿರನ್ನೊಮ್ಮೆ ದೀರ್ಘವಾಗಿ ಒಳಗೆಳೆದುಕೊಂಡು ಹೊರಗೆ ಚೆಲ್ಲುತ್ತಾ ಹಗೂರಾಗಿ… ಸಾಗಿ ಬಂದ ದಾರಿಯಲ್ಲೊಮ್ಮೆ ಇಣುಕುತ್ತಾಳೆ. ಬೆನ್ನಹಿಂದಿನ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಮುಂದಿನ ಹೆಜ್ಜೆ ಇಡುವ ಅವಳ ನಡೆ ಬಹುಶಃ ಅವಳಿಗೆ ಮಾತ್ರ ಒಲಿದ ಕಲೆಯೇನೋ.. ಅವಳ ಎಡ ತೋಳಿನೆಡೆ ಒಂದು ದಾರಿ, ಬಲ ತೋಳಿನೆಡೆ ಮತ್ತೊಂದು ದಾರಿ ಮತ್ತು ಅವಳು ಸಾಗಿ ಬಂದ ದಾರಿ ಅವಳೆದುರಿನಲ್ಲೇ.
ಕೆ. ಎನ್. ಲಾವಣ್ಯ ಪ್ರಭಾ ಬರಹ ನಿಮ್ಮ ಓದಿಗೆ
ಬೆಳಕಿನ ಕಣ್ಣು ಹೊಳೆಯುವಾಗ…. ನಾಲ್ಕು ಹೆಜ್ಜೆ ಹಿಂದಿಟ್ಟು ಹೊಸ್ತಿಲೊಳಗೇ ನಿಂತವಳು ಯಾಕೋ ಮತ್ತೆ ಮತ್ತೆ ಬೆಳಕ ಸೆಳೆತಕ್ಕೆ ಸಿಲುಕಿ ಸೋತೇ… ಹತ್ತಾರು ಕ್ಷಣ ಯೋಚಿಸುತ್ತಲೇ ಹೆಜ್ಜೆ ಮುಂದಿಡುವ ಸಾಹಸ ಮಾಡುತ್ತಾಳೆ. ಹೊಸ ಬೆಳಕು ಹಳೆಯದೆಲ್ಲವನ್ನೂ ಮರೆಸಿ ಮತ್ತೊಮ್ಮೆ ಹೊಸದಾಗಿ ಹೊಳೆಸುವ ನಿರಂತರ ಕಾಯಕದಲ್ಲಿರುವ ಛಲಗಾರ.
ಬೆಳಕಿನ ಗಾಢವಾದ ದಿವ್ಯತೆಗೆ ಸೋತು ಮನಸ್ಸಿನ ಮಾತುಗಳು ಮೌನವಾಗುತ್ತಿದ್ದಂತೇ… ಒಂದೊಂದೇ ಹೆಜ್ಜೆ ಇರಿಸಿ ಮುಂದೆ, ಹೊಸ್ತಿಲ ದಾಟಿ ಕ್ಷಣ ನಿಂತು ತಳಮಳದಲ್ಲೇ ಅಂಗಳದ ಗೇಟು ತೆರೆದು ರಸ್ತೆಗಡಿಯಿಡುತ್ತವೆ ಅವಳ ಬೆಚ್ಚಗಿನ ಪಾದಗಳು.
ಅಂಗಾತ ಮಲಗಿದ್ದ ರಸ್ತೆ ಪುಳಕಗೊಂಡಿತೇನೋ…
ಹೆಜ್ಜೆ ಮೇಲೊಂದು ಹೆಜ್ಜೆ ಇರಿಸುತ್ತಲೇ ಮೂರು ದಾರಿಗಳು ಕೂಡುವ ಬೀದಿಯ ತಿರುವಲ್ಲಿ ಬಂದು ನಿಂತು ಮಂದಹಾಸದಲ್ಲಿ ಉಸಿರನ್ನೊಮ್ಮೆ ದೀರ್ಘವಾಗಿ ಒಳಗೆಳೆದುಕೊಂಡು ಹೊರಗೆ ಚೆಲ್ಲುತ್ತಾ ಹಗೂರಾಗಿ… ಸಾಗಿ ಬಂದ ದಾರಿಯಲ್ಲೊಮ್ಮೆ ಇಣುಕುತ್ತಾಳೆ. ಬೆನ್ನಹಿಂದಿನ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಮುಂದಿನ ಹೆಜ್ಜೆ ಇಡುವ ಅವಳ ನಡೆ ಬಹುಶಃ ಅವಳಿಗೆ ಮಾತ್ರ ಒಲಿದ ಕಲೆಯೇನೋ.. ಅವಳ ಎಡ ತೋಳಿನೆಡೆ ಒಂದು ದಾರಿ, ಬಲ ತೋಳಿನೆಡೆ ಮತ್ತೊಂದು ದಾರಿ ಮತ್ತು ಅವಳು ಸಾಗಿ ಬಂದ ದಾರಿ ಅವಳೆದುರಿನಲ್ಲೇ.
ಇಂತಹ ಮೂರು ದಾರಿಗಳು ಕೂಡುವೆಡೆಯಲ್ಲಿ ಮಾಘ ಮತ್ತು ಫಾಲ್ಗುಣದಲ್ಲಿ ಮಾತ್ರವೇ ಮೈ ಪೂರಾ ಹಳದಿ ಹೂವರಳಿಸಿಕೊಂಡು ಮೂರು ದಾರಿಗಳ ದಾರಿಹೋಕರನ್ನು ಸೆಳೆಯುವ ಒಂದು ಸಾಮಾನ್ಯ ಮರದ ಬುಡದಲ್ಲಿ ನಿಂತೇ ಮರವನ್ನು ದಿಟ್ಟಿಸುತ್ತಿದ್ದಾಳೆ….
ಮರದ ದೇಹದೊಳಗೆ ಇದೀಗ ಬೆಳಕಿನ ಅಣು ಹೊಕ್ಕಿ ಅದರ ನರನಾಡಿಗಳಲ್ಲೂ ಹರಿದಾಡಿ ಇಡೀ ಮರ ಹೊಳೆವ ಬೆಳಕಿನ ಮರವಾಗುತ್ತಿದೆ… ಮರದ ನೆರಳಿನಲ್ಲಿ ನಿಂತ ಅವಳ ಮುಂಗುರುಳಿನಡಿಯ ಕಣ್ಣ ರೆಪ್ಪೆಯ ಅಲುಗಿನಲ್ಲೂ ಬೆಳಕ ಮಿಂಚಿದೆ.
ಪ್ರತಿ ನಿತ್ಯ ಅವಳ ಬಾಲ್ಕನಿಯೆದುರಿಗೆ ಕಾಣುವ ಈ ಮರ ಹಗಲಿಡೀ ಹೀಗೆ ಹೊಳೆಯುತ್ತದೆ ಬೆಳಕಿನಲ್ಲಿ.
ಇರುಳಿನಲ್ಲಿ…ಇವಳ ಕಣ್ಣೊಳಗೆ ಬೆಳಕು ಹೊಳೆಯುತ್ತದೆ.
ಸೂರ್ಯ ಪಥ ಬದಲಿಸುವ ಹೊತ್ತಿಗೆ …ಮರದಡಿಯ ಮಣ್ಣಿನ ಮಡಿಕೆಗಳನ್ನು ಕೆದರಿ ಕಾಲಬೆರಳಲ್ಲಿ ರಂಗೋಲಿ ಗೀಚುತ್ತಾಳೆ. ಮಾಘ ಮಾಸದ ಮಕರಂದ ಹೊತ್ತ ಹಳದಿ ಹೂಗಳು ಮರದ ತುಂಬಾ ದಳದಳವನ್ನರಳಿಸಿಕೊಂಡು ಬೆಳಕಿನ ಹಣತೆಗಳಾಗಿ ಕೆಳಗುದುರಿ ಅವಳು ಸುತ್ತೂ ರಂಗೋಲಿ ಬರೆಯುವಾಗ ಬೆಳಕಿನೆಸಳು ಇವಳ ಸೀಳು ಬೆನ್ನ ಸವರಿ ಮುದ್ದಿಸಿದ ಸಂಭ್ರಮಕ್ಕೆ ತುಸು ನಾಚಿ ತೊದಲುತ್ತಾ ತೆಕ್ಕೆ ಬಿಚ್ಚಿಕೊಂಡು ನಿಧಾನ… ಕರಗಿ ಬೆಳಕಿನ ಮರದ ಪ್ರಭೆಯಲ್ಲಿ ಪ್ರಾರಂಭ ಪ್ರೇಮ ಸಂಕ್ರಮಣ…
ಮೌನದೇಕಾಂತದಲ್ಲೂ ರಾಗಾನುರಾಗ ತನನನ…
ಬೆಳಕಿಗೆರಡು ಸುಂದರ ಕಣ್ಣುಗಳು ದೊರೆಯಿತು
ಬೆಳಗುವ ಮರವನ್ನೊಂದು ಬಳ್ಳಿ ತಬ್ಬಿ ಹಬ್ಬಿತು…
ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್. ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ. “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ ಹವ್ಯಾಸಗಳು.