ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ಮೂರನೆಯ ಕಂತು ನಿಮ್ಮ ಓದಿಗೆ
ವಿಪರೀತ ಕಷ್ಟದ ದಿನಗಳು ಅವು. ಬದುಕು ಇನ್ನೇನು ಸ್ಥಿರವಾಯಿತು ಅಂತ ಅನ್ನುವಷ್ಟರಲ್ಲಿ ಅಪ್ಪ ನಡೆಸುತ್ತಿದ್ದ ಕಿರಾಣಿ ಅಂಗಡಿ ಸಂಪೂರ್ಣವಾಗಿ ಬರಿದಾಗುತ್ತ ಬಂದಿತು. ಅದಕ್ಕೆ ಕಾರಣ ಅಪ್ಪನ ಬೇಜವಾಬ್ದಾರಿಯೊ ಅಥವಾ ಅಪ್ಪ ಮಾಡಿಕೊಂಡ ಸಾಲಗಳೋ ಒಂದು ತಿಳಿಯದು. ಆದರೆ ಅದನ್ನು ಮುಚ್ಚಲಿಲ್ಲ. ಇದ್ದುದರಲ್ಲಿಯೆ ಸಣ್ಣದಾಗಿ ಚಹಾ ಮಾರುತ್ತ ಸಾಯಂಕಾಲದ ಸಮಯದಲ್ಲಿ ಬೋಂಡ ಮಾರುತ್ತ ಜೀವನ ಸಾಗಿಸುವ ಪರಿಸ್ಥಿತಿ ಬಂತು. ಒಂದಿಷ್ಟು ದುಡಿಮೆಯ ಅವಕಾಶಗಳು ಬಂದರೂ ಅಪ್ಪ ಅವುಗಳನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲನಾದ ಅನಿಸುತ್ತದೆ. ಅಂತಹ ಸಮಯದಲ್ಲಿ ಬೇರೆಯವರಿಗೆ ಹಣಕೊಟ್ಟು ಸಹಾಯಮಾಡಿ ಅವರಿಂದ ತಿರುಗಿ ವಾಪಸ್ ಬರದೆ ಇದ್ದಾಗ ಮನೆಯಲ್ಲಿ ಅನ್ನಕ್ಕೆ ತೊಂದರೆಯಾಗುವಂತಹ ಪರಿಸ್ಥಿತಿ ಬಂದಾಗ ನಾನು ಒಂದಿಷ್ಟು ಹಣ ಕೂಡಿಡಬೇಕಿತ್ತು ಎಂದು ಅನೇಕ ಸಾರಿ ಅಂದುಕೊಳ್ಳುತ್ತಿದ್ದ. ಆದರೆ ಕಾಲಮಿಂಚಿಹೋಗಿತ್ತು. ಇದ್ದಕ್ಕಿದ್ದಂತೆ ಅಪಘಾತವೊಂದು ಉಳಿಸಿ ಹೋಗುವ ವಿಷಾದದ ಹಾಗೆ ಜೀವನದುದ್ದಕ್ಕೂ ಕಾಡುವ ಹಾಗೆ ಪದೆಪದೆ ಪುನರುಚ್ಚರಿಸುತ್ತಿದ್ದ.
ಅಂತಹ ದಿನಗಳಲ್ಲಿ ಅಮ್ಮ ಗಾಣದೆತ್ತಿನಂತೆ ಕೆಲಸ ಮಾಡುತ್ತಿದ್ದಳು. ಅಮ್ಮನದು ನಿರ್ಲಿಪ್ತವಾದ ಮನಸ್ಸು. ಬದುಕು ಬಂದಂತೆ ಸ್ವೀಕರಿಸಬೇಕು ಅನ್ನೋದಷ್ಟೆ ನಿಲುವಾಗಿತ್ತು. ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ದುಡಿದೆ ದುಡಿಯುತ್ತಿದ್ದಳು. ಬೀಡಿ ಸುತ್ತುವ ಕಾಯಕವೆ ನಮಗೆ ಅನ್ನಕ್ಕೆ ಆಧಾರವಾಗಿತ್ತು. ಅದನ್ನು ನಿಷ್ಟೆಯಿಂದ ಮಾಡುತ್ತಿದ್ದಳು. ನಾನು ಸಹ ಶಾಲೆಯಿಂದ ಬಂದಮೇಲೆ ಅದೆ ಕೆಲಸ ಮಾಡಬೇಕಾಗಿತ್ತು. ಆಗ ಒಂದು ಸಾವಿರ ಬೀಡಿ ರೆಡಿ ಮಾಡಿಕೊಟ್ಟರೆ ಹತ್ತು ಹದಿನೈದು ರೂಪಾಯಿಯಷ್ಟೆ ಸಿಗುತ್ತಿತ್ತು. ವಾರಕ್ಕೊಮ್ಮೆ ಮಾಲೀಕರಿಗೆ ಕೊಡಬೇಕಾಗಿತ್ತು. ನನ್ನ ಎರಡನೆ ಅಕ್ಕ ಒಂದು ದಿನ ಒಲೆ ಮುಂದೆ ಅಡಿಗೆ ಮಾಡುವಾಗ ಕಟ್ಟಿಗೆ ಉರಿಯಲಿಲ್ಲ ಎಂಬ ಕಾರಣಕ್ಕೆ ಒಂದಿಷ್ಟು ಸೀಮೆಎಣ್ಣೆ ಸುರಿದು ಹಚ್ಚೋಣ ಎಂದು ಬೆಂಕಿ ಹಚ್ಚುವಾಗ ಕೈಗೂ ತಗುಲಿ ಎರಡು ಕೈಯ ಬೆರಳುಗಳು ಸುಟ್ಟಿದ್ದವು. ಅಂತಹ ಗಂಭೀರವಾಗಿ ಸುಡದೆ ಇದ್ದರೂ. ಒಂದಿಷ್ಟು ವಿಶ್ರಾಂತಿ ಅವಶ್ಯಕತೆ ಇದ್ದರೂ ಆ ದಿನ ಕೆಲಸವನ್ನು ಮಾಡಿ ಬೀಡಿ ಕೆಲಸ ಸಂಪೂರ್ಣವಾಗಿ ಮಾಡಿ ಮಾಲೀಕರಿಗೆ ಕೊಟ್ಟಿದ್ದರು. ಯಾಕೆಂದರೆ ಆಕೆ ಮಾಡುವ ಕೆಲಸ ನಮ್ಮ ಮನೆಯಲ್ಲಿ ಬೇರೆ ಯಾರಿಗೂ ಬರುತ್ತಿರಲಿಲ್ಲ. ನಾನಿನ್ನು ಚಿಕ್ಕವನಾದ್ದರಿಂದ ಸಣ್ಣ ಪುಟ್ಟ ಕೆಲಸವಷ್ಟೆ ನಮ್ಮ ಪಾಲಿನದು ಮತ್ತು ನಮ್ಮ ಕೈಲಾಗುವಂಥದ್ದು. ಇಷ್ಟೆಲ್ಲ ಕೆಲಸಗಳ ಮಧ್ಯೆಯೂ ಅಮ್ಮ ಎಂದೂ ನಮ್ಮನ್ನು ಉಪವಾಸ ಇರಿಸಲಿಲ್ಲ. ಎಲ್ಲರದೂ ಊಟವಾದ ಬಳಿಕವಷ್ಟೆ ಅಮ್ಮ ಊಟ ಮಾಡುತ್ತಿದ್ದಳು. ಬಹುಶಃ ತಾಯಿಗಷ್ಟೆ ಇಂತಹದ್ದು ಮನಸ್ಸು ಇರಲು ಸಾಧ್ಯ. ತಾಯಿ ಅನ್ನೊ ಪದಕ್ಕೆ ಆ ಶಕ್ತಿ ಕೊಟ್ಟಿರಬೇಕು ಅನಿಸುತ್ತದೆ.
ಹೀಗಿರಬೇಕಾದರೆ ಅದೊಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಗೆ ಸಂಬಂಧಿಕರು ಬಂದರು. ಅವರಿಗೆ ನಮ್ಮ ಊರಿನಲ್ಲಿ ಕೆಲಸವಿತ್ತೆಂದು ಹೇಳಿದರು. ಅನಿವಾರ್ಯವಾಗಿ ನಮ್ಮ ಮನೆಯಲ್ಲಿಯೆ ಉಳಿದುಕೊಳ್ಳಬೇಕಾಗಿ ಬಂದಿದ್ದರಿಂದ ಅವರಿಗೆ ನಮ್ಮ ಹುಳುಕು ಕಾಣದಂತೆ ಚೆನ್ನಾಗಿ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಗೌರವವನ್ನು ಕಾಪಾಡಿಕೊಳ್ಳಬೇಕಾದ ಸಂದರ್ಭ ಎರಡೂ ಅಮ್ಮನ ಜವಾಬ್ದಾರಿಯಾಯಿತು. ಅಮ್ಮ ಅಂಗಡಿಗೆ ಹೋಗಿ ಒಂದು ಸ್ಯಾವಿಗೆ ಪ್ಯಾಕೆಟ್ ತಂದಳು. ಅದಕ್ಕೆ ಮನೆಯಲ್ಲಿದ್ದ ಒಂದಿಷ್ಟು ರವೆ ಬೆಲ್ಲ ಹಾಕಿ ಪಾಯಸ ಮಾಡಿದಳು. ಮನೆಯಲ್ಲಿದ್ದ ಅಳಸಂದೆ ಕಾಳಿನದೆ ಒಂದಿಷ್ಟು ಪಲ್ಯ ಮಾಡಿ ಉಣಬಡಿಸಿದಳು. ಬಂದ ಸಂಬಂಧಿಕರು ಚೆನ್ನಾಗಿದೆ ಎಂದೆ ಸವಿದು ಊಟ ಮಾಡಿದರು. ಅದರಲ್ಲಿಯೆ ನಮಗೊಂದಿಷ್ಟು ಊಟ ಪ್ರಸಾದವಾಯಿತು. ಅಲ್ಲಿಗೆ ಆ ಹೊತ್ತಿನ ಊಟವೇನೊ ಮುಗಿಯಿತು. ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು. ಅವರ ಮುಂದೆ ಬೇರೆಯವರ ಹತ್ತಿರ ಕಡ ತರಲು ಮುಜುಗರ ಅಪ್ಪ ಮಾತ್ರ ತಿಂಡಿ ತಿಂದು ಹೋಗ್ರಿ ಎಂದು ಹೇಳುತ್ತಿದ್ದ. ಮನೆಯ ಕಷ್ಟಗಳು ಅಪ್ಪನಿಗೆ ಎಂದೂ ತಿಳಿಯಲೆ ಇಲ್ಲ ಎಂದು ಅಮ್ಮ ಹೇಗೆ ಇಲ್ಲಿಯವರೆಗೂ ನಮ್ಮನ್ನು ಸಾಕಿದಳು ಎಂದು ನಾವೆಲ್ಲ ಅಕ್ಕಂದಿರು ಕೂಡಿ ಮಾತನಾಡುವಾಗ ಈಗಲೂ ಮಾತನಾಡಿಕೊಳ್ಳುತ್ತೇವೆ. ಅಂತೂ ಆ ದಿನವೂ ಯಾವ ಮಾಯದಲ್ಲಿ ಅಕ್ಕಿ ಕಡ ತಂದಳೊ ಅವರಿಗೆ ಬೆಳಗಿನ ಉಪಾಹಾರ ಮಾಡಿ ಬಡಿಸಿದ್ದಳು. ಅವರು ಖುಷಿಯಿಂದಲೆ ಉಂಡುಹೋದರು.
ಅಪ್ಪನಿಗೆ ಹಣದ ಆವಶ್ಯಕತೆ ಬಂದಾಗಲೆಲ್ಲಾ ಪದೆ ಪದೆ ರೇಗಾಡುತ್ತಿದ್ದ. ಆಗಾಗ ಮನೆಯಲ್ಲಿ ಸಣ್ಣ ಪುಟ್ಟ ಜಗಳ ನಡೆಯುತ್ತಿದ್ದವು. ಅಮ್ಮ ಯಾವುದಕ್ಕೂ ಎದೆಗುಂದುತ್ತಿರಲಿಲ್ಲ. ಬದುಕನ್ನು ಬಂಡೆಯಂತೆ ನಿಂತು ನಡೆಸುತ್ತಿದ್ದಳು. ಬಡತನದಲ್ಲಿ ಬದುಕುವ ಎಲ್ಲಾ ಅಮ್ಮಂದಿರಿಗೂ ಇಂತಹದೊಂದು ಮನಸ್ಥಿತಿಯನ್ನು ದೇವರೆ ಕರುಣಿಸುತ್ತಾನೊ ಇಲ್ಲ ಪರಿಸ್ಥಿತಿಯೆ ಅಂತಹದೊಂದು ಚೈತನ್ಯವನ್ನು ಕೊಡುತ್ತದೆಯೊ ಗೊತ್ತಿಲ್ಲ. ನನಗೆ ಬದುಕು ಕೌತುಕ ಎನಿಸುವುದು ಇದೆ ಕಾರಣಕ್ಕೆ. ಅಮ್ಮ ಇಂತಹ ಕಷ್ಟಗಳ ಪರಿಸ್ಥಿತಿಯಲ್ಲೂ ಕಷ್ಟಕಾಲಕ್ಕಿರಲಿ ಎಂದು ಹಣ ಕೂಡಿಡುತ್ತಿದ್ದಳು. ನಾವು ಸಹ ಅಕ್ಕಪಕ್ಕದವರಂತೆ ಬದುಕಬೇಕು. ಆ ಮನೆಯವರು ದೊಡ್ಡಪಾತ್ರೆಕೊಂಡರು. ಈ ಮನೆಯವರು ಹೆಡ್ಲಿಹಂಡೆ ತಗೊಂಡರು ನಾವು ತಕೋಬೇಕು ಅನ್ನುತ್ತಿದ್ದಳು. ಯಾವ ಮಾಯದಲ್ಲಿಯೋ ಅಪ್ಪನ ಕಣ್ತಪ್ಪಿಸಿ ಹಣ ಕೂಡಿಡುತ್ತಿದ್ದಳು. ಮನೆತುಂಬಾ ಒಂದಿಷ್ಟು ಪಾತ್ರೆಗಳನ್ನು ಕೂಡಿಹಾಕಿದಳು. ನಮಗೆ ಅಗತ್ಯವಾದುದನ್ನು ಕಷ್ಟಪಟ್ಟು ತಕೋಬೇಕು ಬೇರೆಯವರ ಹತ್ತಿರ ಹೋಗಿ ಕೈ ಚಾಚಬಾರದು ಎಂಬ ಸ್ವಾಭಿಮಾನದ ಪಾಠ ನಮಗೂ ಹೇಳುತ್ತಿದ್ದಳು.
ಹೀಗಿರುವಾಗ ತಾಮ್ರದ ಹಂಡೆಯೊಂದನ್ನು ತಗೋಬೇಕು ಎಂದು ಇಷ್ಟಿಷ್ಟೆ ಹಣ ಕೂಡಿಟ್ಟಿದ್ದಳು. ಅದು ಮುಂಗಾರು ಸಮಯ ಪ್ರತಿ ಮುಂಗಾರಿಗೂ ಮಳೆ ಬಿದ್ದಮೇಲೆ ಹೊಲ ಹಸನು ಮಾಡಿಸುವುದು ಅಪ್ಪನ ಕೆಲಸವಾಗಿತ್ತು. ಆ ವರ್ಷ ಬಹುಬೇಗನೆ ಮಳೆಯೂ ಬಂದಿತ್ತು. ನಮ್ಮ ಹೊಲದ ಪಕ್ಕದ ಜಮೀನಿನವನು ಹೊಲ ಹಸನು ಮಾಡಿಸಿದ್ದ. ಅಪ್ಪನಿಗೆ ಅಂಗಡಿಯಿಂದ ಯಾವ ಲಾಭವೂ ಇರಲಿಲ್ಲ. ಆತ ವಿಪರೀತ ಚಡಪಡಿಕೆಯಲ್ಲಿದ್ದ. ಪದೆ ಪದೆ ಮನೆಯಲ್ಲಿ ರೇಗಾಡುತ್ತಿದ್ದ. ಅದು ಮನೆಯಲ್ಲಿ ಎಲ್ಲರಿಗೂ ಸಾಮಾನ್ಯವಾಗಿತ್ತು.
ನಾನಾಗ ಏಳನೆಯ ತರಗತಿ ಪಾಸಾಗಿದ್ದೆ. ಮುಂದಿನ ಶಾಲೆಗೆ ನನ್ನ ವಾರಗೆಯ ಗೆಳೆಯರೆಲ್ಲ ಹೋಗುವ ಶಾಲೆಗೆ ಬಿಟ್ಟು ನನ್ನೊಬ್ಬನನ್ನೆ ಆಗತಾನೆ ಹೊಸದಾಗಿ ಪ್ರಾರಂಭವಾದ ಶಾಲೆಯೊಂದಕ್ಕೆ ಸೇರಿಸಿದ್ದರು. ನಮ್ಮ ಊರಿನಿಂದ ಆ ಶಾಲೆಗೆ ಹೋಗುತ್ತಿದ್ದದ್ದು ನಾನೊಬ್ಬನೇ. ನನಗೆ ಒಂಟಿತನ ಕಾಡುತ್ತಿತ್ತು. ಮನೆಯಲ್ಲಿ ನನ್ನನ್ನು ಆ ಶಾಲೆಗೆ ಸೇರಿಸಿ ಎಂದು ಬೇಡಿದೆ, ಕಾಡಿದೆ ಅಲವತ್ತುಕೊಂಡೆ, ಅತ್ತೂ ಗೋಳಾಡಿದೆ. ಇದ್ಯಾವುದು ನಮ್ಮಪ್ಪನ ಹತ್ತಿರ ನಡೆಯಲಿಲ್ಲ. ಯಾಕೆಂದರೆ ಆ ಶಾಲೆ ತೆರೆದವರು ನಮ್ಮಪ್ಪನಿಗೆ ಬೇಕಾದವರಾಗಿದ್ದರು. ಕೊನೆಗೆ ಆ ಆಸೆ ಬಿಟ್ಟೆನಾದರೂ ಈ ಮುಂಗಾರಿನ ಹೊಲ ಹಸನು ಮಾಡುವ ಅಪ್ಪನ ಚಡಪಡಿಕೆಯ ಸಮಯ ನನಗೆ ಸಹಾಯವಾಗಬಹುದೆಂದು ಭಾವಿಸಿ ಅಮ್ಮನಿಲ್ಲದ ಸಮಯದಲ್ಲಿ ಅಪ್ಪನಿಗೆ ಅಮ್ಮ ಕೂಡಿಟ್ಟ ಜಾಗವನ್ನು ತೋರಿಸಿದೆ. ಇದರಿಂದ ಅಪ್ಪನಿಗೆ ಖುಷಿಯಾಗುತ್ತೆ, ನಾನು ಈಗ ಕೇಳಿದರೆ ನನ್ನನ್ನು ಖಂಡಿತ ಆ ಶಾಲೆಗೆ ಸೇರಿಸುತ್ತಾನೆ ಎಂದುಕೊಂಡಿದ್ದ ಎಣಿಕೆ ಸುಳ್ಳಾಯಿತು. ಅಪ್ಪನನ್ನು ಕೇಳಿದರೆ ಅವರು ನನಗೆ ಬೇಕಾದವರು ನೀನು ಅವರ ಶಾಲೆಯಲ್ಲಿಯೆ ಓದಬೇಕೆಂದು ನನಗೆ ತಾಕೀತು ಮಾಡಿದರು. ನಾನು ಗೋಳಾಡಿ ಸುಮ್ಮನಾದೆ. ಕಾಲ ಸರಿದಂತೆ ನನಗೂ ಆ ಶಾಲೆ ಹಿಡಿಸಿತು. ಮುಂದೆ ಎಸ್ ಎಸ್ ಎಲ್ ಸಿ ಯಲ್ಲಿ ಎರಡೂ ಶಾಲೆಗಳಿಂದಲೂ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿ ನಾನಾಗಿದ್ದೆ ಎಂಬುದು ಅದು ಬೇರೆ ಮಾತು. ಆದರೆ ಹಣ ತೆಗೆದುಕೊಂಡ ಅಪ್ಪ ಹೊಲವನ್ನೇನೊ ಹಸನು ಮಾಡಿದ; ಆದರೆ ಮನೆಗೆ ಬಂದ ಅಮ್ಮನ ಕಣ್ಣಲ್ಲಿ ಕಂಡ ನೀರು ನನ್ನನ್ನು ಆಗಾಗ ಹಣ ತೋರಿಸಿ ಅಮ್ಮನಿಗೆ ನೋವುಂಟು ಮಾಡಿದೆ ಅನಿಸುತ್ತದೆ. ಹೆಡ್ಲಿಹಂಡೆ (ಕಟ್ಟಿಗೆ ಒಲೆಗೆ ಇಡುವ ನೀರಿನ ತಾಮ್ರದ ಗಡಿಗೆ) ಯನ್ನು ಕೊನೆಗೂ ಅಮ್ಮ ಕೊಂಡುಕೊಳ್ಳಲೆ ಇಲ್ಲ. ಈಗ ಕೇಳಿದರೆ ಅದರ ಅವಶ್ಯಕತೆ ಇಲ್ಲ ಬಿಡು ಎನ್ನುತ್ತಾಳೆ. ಆಕೆ ಬದುಕಿದ ಬಡತನದ ಬದುಕಿನ ಪಾಠ ನನ್ನ ಕಣ್ಮುಂದೆಯೆ ಇದೆ.
*****
ಇನ್ನೊಂದು ಘಟನೆ ನಿಮಗೆ ಹೇಳಲೇಬೇಕು. ನಮ್ಮ ಶಾಲೆ ಇದ್ದದ್ದು ಊರಿನ ಹಂಚಿಗೆ ಇರುವ ಅರಳಿಕಟ್ಟೆಯ ಎದುರಿಗೆ ಮಣ್ಣು ಮತ್ತು ಸಣ್ಣ ಪುಟ್ಟ ಕಲ್ಲುಗಳಿಂದ ಕಟ್ಟಿದ ತುಂಬಾ ಹಳೆಯ ಕಟ್ಟಡ. ನನ್ನ ಮೊದಲ ಅಕ್ಷರದ ಬೀಜ ಮೊಳೆತದ್ದು ಅಲ್ಲಿಯೆ. ಸ್ಲೇಟು ಬಳಪವ ಹಿಡಿದು ಕನ್ನಡ ವರ್ಣಮಾಲೆಯ ಅಕ್ಷರದ ಮರ ಬೆಳೆದು ಬದುಕಿಗೆ ನೆರಳಾದದ್ದು ‘ಮಠ’ ಎಂದು ಕರೆಯುವ ಗಾಳಿ ಬೆಳಕಿನ ಸೋಂಕಿಲ್ಲದ ಮುರಿದ ಬಾಗಿಲೊಂದೆ ನಮ್ಮನ್ನು ಸ್ವಾಗತಿಸಿ ಬರಮಾಡಿಕೊಳ್ಳುತ್ತಿದ್ದದು. ಈಗಲೂ ಅದು ಕಣ್ಣಿಗೆ ಕಟ್ಟಿದಂತಿದೆ. ಕುಳಿತುಕೊಳ್ಳಲು ಸಗಣಿ ಬಳಿದ ನೆಲ ನಮಗಿಂತ ದೊಡ್ಡ ತರಗತಿಯವರೆಗೆ ಹಲಗೆಯ ಮಣೆ ಇರುತ್ತಿತ್ತು. ನಾನಾಗ ಎರಡು ಅಥವಾ ಮೂರನೆ ತರಗತಿ ಓದುತ್ತಿದ್ದೆನೆಂಬ ನೆನಪು. ಒಂದೆ ಕೋಣೆಯಲ್ಲಿ ನಾಲ್ಕು ತರಗತಿಗಳು ಪೂರ್ವ ದಿಕ್ಕಿಗೆ ಮುಖ ಮಾಡಿ ಒಂದು ಮತ್ತು ಎರಡನೆ ತರಗತಿ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಮೂರು ಮತ್ತು ನಾಲ್ಕನೆ ತರಗತಿ ಮಕ್ಕಳು ಕುಳಿತುಕೊಳ್ಳುತ್ತಿದ್ದರು. ನಾಲ್ಕು ತರಗತಿಗಳನ್ನು ನರಸಿಂಹಯ್ಯ ಮೇಷ್ಟ್ರು ನಿಭಾಯಿಸುತ್ತಿದ್ದರು. ಅವರೆಂದು ಪ್ಯಾಂಟು ತೊಟ್ಟಿದ್ದು ನೋಡಿಲ್ಲ. ಅವರು ಶಾಲೆಗೆ ಬರುತ್ತಿದ್ದದ್ದೆ ಪಂಚೆಯಲ್ಲಿ ಮತ್ತು ಕಾಲಿಗೆ ಹವಾಯಿ ತರದ್ದು ಚಪ್ಪಲಿ. ಕನ್ನಡಕ ಯಾವಾಗಲೂ ಇರುತ್ತಿತ್ತು. ಪದ್ಯಗಳನ್ನು ರಾಗವಾಗಿ ಹೇಳಿಕೊಡುತ್ತಿದ್ದರು. ನಾವು ಅದನ್ನು ಒಬ್ಬರಾದ ಮೇಲೆ ಒಬ್ಬರು ಹೇಳಿಕೊಡುತ್ತಿದ್ದೆವು. ಅವರಿಗೆ ವಿಮಾನ ಬಂತೆಂದರೆ ಸಾಕು “ಈರಪ್ಪನ್ನು ಪಿಳ್ಳೆ ಬಂತು ಬಂತು” ಎಂದು ಹೊರಗೆ ಬಂದು ನೋಡುತ್ತಿದ್ದರು. ನಾವು ಓ… ಎಂದು ಕೂಗಿಕೊಂಡು ಹೊರಗೆ ಬರುತ್ತಿದ್ದೆವು. ಅದ್ಯಾಕೆ ಹಾಗೆ ಮಾಡುತ್ತಿದ್ದರೊ ತಿಳಿಯದು. ನಮ್ಮನ್ನು ಖುಷಿಗೊಳಿಸುವ ಸಲುವಾಗಿ ಎಂದು ಅಂದುಕೊಳ್ಳುತ್ತಿದ್ದೆವು. ತುಂಬಾ ಹಳೆಯ ಕಟ್ಟಡವಾದ್ದರಿಂದ ಇಲಿ ಹೆಗ್ಗಣಗಳ ಬಿಲಗಳು ಪ್ರತಿ ಶನಿವಾರ ಭಾನುವಾರದ ರಜೆಕಳೆದು ಸೋಮವಾರ ಶಾಲೆಗೆ ಬಂದಾಗ ಅವುಗಳನ್ನು ಮುಚ್ಚುವುದೆ ನಮ್ಮ ಕೆಲಸವಾಗಿರುತ್ತಿತ್ತು. ಒಮ್ಮೆ ಸೋಮವಾರದೊಂದಿನ ಕಸ ಗುಡಿಸುವ ಕೆಲಸ ನನ್ನ ಮತ್ತು ಸಹಪಾಠಿದಾಗಿತ್ತು. ಬಾಗಿಲು ತೆಗೆದ ತಕ್ಷಣವೆ ದುರ್ನಾತ ನಮ್ಮ ನಾಸಿಕ ಹೊಕ್ಕು ಒಮ್ಮೆ ಉಸಿರು ಕಟ್ಟಿದಂತಾದರೂ ಮೂಗನ್ನು ಬಿಗಿಯಾಗಿ ಮುಚ್ಚಿಕೊಂಡೆ ಕಸ ಗುಡಿಸಿದೆವು. ಮೇಷ್ಟ್ರು ಬಂದಾಗ ಅವರಿಗೂ ಇದು ತಿಳಿದು ನಾವು ಕುಳಿತುಕೊಳ್ಳುತ್ತಿದ್ದ ಭಾಗವನ್ನು ನೋಡಿದಾಗ ಅಲ್ಲೊಂದು ದೊಡ್ಡ ಬಿಲ ಇರುವುದು ಕಂಡಿತ್ತು. ಅದನ್ನು ಶನಿವಾರವೆ ಮುಚ್ಚಿ ಹೋಗಿದ್ದೆವು. ಅದರಲ್ಲಿ ಹೆಗ್ಗಣ ಇರಲು ಸಾಧ್ಯವಿಲ್ಲ ಎಂದು ಶಾಲೆಯ ಹೊರಭಾಗವನ್ನೆಲ್ಲ ಸೂಕ್ಷ್ಮವಾಗಿ ನೋಡಿದಾಗ ಹೊರಭಾಗದಲ್ಲಿ ದೋರು ಇರುವುದು ತಿಳಿದು. ತರಗತಿಯ ದೊಡ್ಡ ಹುಡುಗರಿಂದ ಅದನ್ನು ಹಗೆಸುತ್ತಾ ಹೋದರು. ಚಿಕ್ಕಮಕ್ಕಳನ್ನು ಶಾಲೆಯಿಂದ ಹೊರಗೆ ಆಟವಾಡಿಕೊಳ್ಳಲು ಬಿಡಲಾಯಿತು. ಹೆಗ್ಗಣವೊಂದು ಸತ್ತು ಬಿದ್ದಿದ್ದು ಎರಡು ದಿನ ರಜೆ ಇದ್ದಿದ್ದರಿಂದ ಅದು ಕೊಳೆತು ವಾಸನೆ ಅಧಿಕವಾಗಿ ನಮಗೆ ತೊಂದರೆಯಾಗಿತ್ತು. ಐದಾರು ತಿಂಗಳಲ್ಲೆ ಹೊಸಕಟ್ಟಡವು ಈ ಕಟ್ಟಡದ ಹಿಂಭಾಗದಲ್ಲಿ ನಿರ್ಮಾಣವಾದವು. ಎಲ್ಲಾ ತರಗತಿಗಳು ಅಲ್ಲಿಗೆ ಶಿಫ್ಟಾದವು. ಮಠ ಎಂದೆ ಕರೆಯುತ್ತಿದ್ದ ಶಾಲೆ ಒಂದೆರಡು ಮಳೆಗಾಲಕ್ಕೆ ಬಿದ್ದು ಹೋಯಿತು. ಆದರೆ ಅದು ನಮಗೊಂದು ಬದುಕು ಕೊಟ್ಟಿದೆ, ಕನಸು ಕೊಟ್ಟಿದೆ, ಜ್ಞಾನದ ದೀಪ ಹೊತ್ತಿಸಿದೆ.
ನಾನೀಗ ಶಿಕ್ಷಕನಾಗಿದ್ದೇನೆ. ಶಿಖರದಷ್ಟು ಸಾಧಿಸಿದರೂ ಇಟ್ಟ ಮೊದಲನೆ ಹೆಜ್ಜೆಯೆ ಬುನಾದಿಯಲ್ಲವೆ. ಆ ಕಟ್ಟಡದ ನೆನಪು ನನ್ನ ಸ್ಮೃತಿಪಟಲದಲ್ಲಿ ಹಾಗೇ ಉಳಿದಿದೆ. ಊರಿಗೆ ಹೋದಾಗೆಲ್ಲಾ ಆ ಕಟ್ಟಡದ ಜಾಗ ಸಾವಿರ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ಆ ನೆನಪುಗಳಲ್ಲಿ ಅಕ್ಷರ ಕಲಿಸಿದ ಮೇಷ್ಟ್ರು ಎಲ್ಲರೂ ಇದ್ದಾರೆ ಇದೆಲ್ಲವೂ ನವ ಚೈತನ್ಯ ಮೂಡಿಸುತ್ತದೆ.
ಚೆನ್ನಾಗಿ ಮೂಡಿಬಂದಿದೆ ಈ ವಾರದ ಬರಹ…. ಬಹುತೇಕ ನನ್ನ ಬದುಕನ್ನೇ ಬರೆದಂತಿದೆ ಗೆಳೆಯ..
ಅಂತಹ ನಿಕೃಷ್ಟ ಬಾಲ್ಯವನ್ನು ದೇವರು ಅದೇಕೆ ಕೊಟ್ಟನು ಎಂದು ಈಗಲೂ ಕಾಡುತ್ತದೆ..?!