ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.
“ಹೊಳೆವ ನದಿ” ಅಂಕಣದಲ್ಲಿ ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ

“ಹೊತ್ತಿ ಉರಿಯುವ ಮೇ ತಿಂಗಳ
ಮಧ್ಯಾಹ್ನಗಳಲ್ಲಿ
ತೋಪಿನೊಳಗಿನ ಮಾವಿನ ಮರಗಳು
ಕೋಗಿಲೆಗಳ ಕುಹೂಗಳಿಗೆ
ತಾವೂ ಧ್ವನಿ ಸೇರಿಸುತ್ತವೆ.”
– ಮೀತಾ ಅಹ್ಲುವಾಲಿಯಾ

ಒಬ್ಬ ರಾಜನಿದ್ದ. ಅವನು ಸೂರ್ಯ ದೇವನ ಪುತ್ರಿ ಸೂರ್ಯಬಾಯಿಯ ಮೋಹಕ್ಕೆ ಸಿಲುಕಿದ್ದ. ಅವರಿಬ್ಬರ ಪ್ರೀತಿಯ ಕಂಡು ಅಸೂಯೆಗೊಂಡ ಮಾಂತ್ರಿಕನೊಬ್ಬ ಆಕೆಯನ್ನು ನೀರಿನ ಕೆರೆಯೊಳಕ್ಕೆ ಎಸೆದುಬಿಟ್ಟ. ಸೂರ್ಯಬಾಯಿ ಮುಳುಗಿ ಹೋದ ಆ ತೊಟ್ಟಿಯಲ್ಲಿ ಮನೋಹರವಾದ ಕಮಲವೊಂದು ಅರಳಿತು. ಸೂರ್ಯಬಾಯಿಯನ್ನು ಕಳೆದುಕೊಂಡು ಖಿನ್ನಗೊಂಡಿದ್ದ ರಾಜನ ಕಣ್ಣಿಗೆ ಈ ಕಮಲ ಬಿತ್ತು. ಇದರಿಂದ ಮತ್ತೆ ಅಸೂಯೆಗೊಂಡ ಮಾಂತ್ರಿಕ ಆ ಕಮಲವನ್ನೂ ಸುಟ್ಟುಬಿಟ್ಟ. ಕಮಲದ ಆ ಬೂದಿಯೊಳಗಿಂದ ದೊಡ್ಡ ಮರವೊಂದು ಎದ್ದು ನಿಂತಿತು. ಆ ಮರದಿಂದ ಹಣ್ಣಾದ ಮಾವೊಂದು ಕಳಚಿ ನೆಲಕ್ಕೆ ಬಿತ್ತು. ಅದು ನೆಲವನ್ನು ತಾಕುತ್ತಿದ್ದಂತೆ ಸೂರ್ಯ ಬಾಯಿ ಆ ಹಣ್ಣಿನಿಂದ ಹೊರಬಂದು ರಾಜನ ಜೊತೆ ಸೇರಿಕೊಂಡಳು.

ಯಾಕೋ ಈಗಲೂ ಮಾವಿನ ಹಣ್ಣನ್ನು ನೋಡಿದಾಗಲೆಲ್ಲ ನನಗೆ ಕೆರೆಯೊಳಗೆ ಕಾಣದಾದ ಸೂರ್ಯಬಾಯಿಯಂತಹ ನನ್ನ ಬಾಲ್ಯ ನೆನಪಾಗುತ್ತದೆ. ಬೇಸಿಗೆ ರಜೆ ಅಂದ ತಕ್ಷಣ ಮಾವಿನ ಜೊತೆಗಿನ ನೆನಪುಗಳ ಕಾರಂಜಿ ಎದೆ ತುಂಬಿಕೊಳ್ಳುತ್ತದೆ. ದಾರಿಯಲ್ಲಿ ಓಡಾಡುವಾಗ ಯಾರದ್ದೋ ಹೊಲದಲ್ಲಿದ್ದ ಮಾವಿನಮರದಲ್ಲಿ ತೂಗಾಡುತ್ತಿದ್ದ ಮಾವಿನ ಗೊಂಚಲನ್ನು ಕಂಡು ತಡೆಯಲಾಗದೆ, ಹತ್ತಲೂ ಬಾರದೆ ಸಿಕ್ಕ ಕಲ್ಲುಗಳನ್ನು ತೂರಿ ಒಂದೋ ಎರಡೂ ಗುರಿ ತಲುಪಿ ಕಾಯಿ ಬೀಳೋ ಹೊತ್ತಿಗೆಲ್ಲ ಮಾಲೀಕನಿಂದ ಅಟ್ಟಿಸಿಕೊಂಡು ಓಡಿ ಹೋಗಿ ಬಚ್ಚಿಟ್ಟುಕೊಂಡ ನೆನಪುಗಳು ಪ್ರತಿ ಬೇಸಿಗೆಯಲ್ಲೂ ಇಣುಕುತ್ತವೆ.

ನಮ್ಮ ತಾತ ಕೈಲಾಸ ಸೇರುವ ಮುನ್ನ ತಮ್ಮ ತೆಂಗಿನ ತೋಟವನ್ನು ತಮಗಿದ್ದ ಐದು ಗಂಡುಮಕ್ಕಳಿಗೂ ಐದೈದು ಎಕರೆ ಬರುವಂತೆ ಪಾಲು ಮಾಡಿದ್ದರು. ಅದರ ಒಂದು ಭಾಗದಲ್ಲಿ ಮಾತ್ರ ಆರು ಮಾವಿನ ಮರಗಳಿವೆ. ಅದು ನನ್ನ ದೊಡ್ಡಪ್ಪ ಅಂದರೆ ನನ್ನ ಅಪ್ಪನ ಮೊದಲನೇ ಅಣ್ಣನ ಭಾಗಕ್ಕೆ ಸೇರಿವೆ. ಇದೊಂದು ಕಾರಣಕ್ಕೆ ಸ್ವರ್ಗದಲ್ಲಿರುವ ನನ್ನ ತಾತನೊಂದಿಗೆ ಇಂದಿಗೂ ಮಾವಿನ ಸೀಸನ್ ಬಂದಾಗೆಲ್ಲ ಮಾವಿನ ಮರಗಳಿರುವ ಭಾಗವನ್ನು ನನ್ನಪ್ಪನಿಗೆ ಕೊಡಲಿಲ್ಲ ಎಂದು ಜಗಳವಾಡಲು ಅವರು ಇರಬೇಕಿತ್ತು ಎಂದು ಸಿಟ್ಟಾಗುತ್ತದೆ. ಆಹಾ ಅದೆಷ್ಟು ಸಿಹಿ ಆ ಮರದ ಹಣ್ಣುಗಳು. ಸಕ್ಕರೆ ಪಾಕದಲ್ಲದಿಟ್ಟ ಹಾಗೆ. ಪರಿಮಳವಂತೂ ಮಾವಿನ ಪ್ರಿಯರ ತಲೆ ಕೆಡಿಸದೇ ಇರಲಾರದು.

ನನಗಿನ್ನೂ ನೆನಪಿದೆ; ಆಗ ನಾನು ಮತ್ತು ಅಣ್ಣ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆವು. ಈ ಮಾವಿಗೋ ಬೇರೆ ಯಾವ ತಿಂಗಳು ಸಿಗದು ಸರಿಯಾಗಿ ಬೇಸಿಗೆ ರಜೆ ಹೊತ್ತಿಗೆ ಬಂದುಬಿಡುತ್ತದೆ. ನಮಗೆ ಮಾವಿನ ಚಪಲ. ಅದು ದೊಡ್ಡಪ್ಪ ತಮ್ಮ ತೋಟದಿಂದ ಕಿತ್ತು ತಂದು ನಮ್ಮ ಹಾವಳಿ ತಡೆಯಲಾರದೆ ಅವರ ರೂಮಿನ ಮಂಚದ ಕೆಳಗೆ ದೊಡ್ಡ ದೊಡ್ಡ ರಟ್ಟಿನ ಡಬ್ಬಕ್ಕೆ ಹುಲ್ಲು ಹಾಸಿ ಅಡೆ ಹಾಕಿದ ಮಾವಿನದ್ದೇ ಚಪಲ. ಅದರ ರುಚಿ ಬಣ್ಣ ಮತ್ತು ಪರಿಮಳ ತಿಂದ ಎಂಥವನನ್ನೂ ವರ್ಷಗಳ ಕಾಲ ಕಾಡಿಸದೆ ಬಿಡುವುದಿಲ್ಲ.

ದೊಡ್ಡಪ್ಪನೇನು ನಮ್ಮ ವೈರಿಯಲ್ಲ ಅವೆಲ್ಲ ಹಣ್ಣಾದ ಮೇಲೆ ತಮ್ಮನ ಮಕ್ಕಳಿಗೂ ಕೊಡದೆ ತಿಂದುಬಿಡುವಷ್ಟು ಕಟುಕನಲ್ಲ. ಆದರೆ ಅಲ್ಲಿವರೆಗೂ ಕಾಯುವ ಸಂಯಮವೇ ಇಲ್ಲದ ನಾವು ದೊಡ್ಡಪ್ಪ ಕೆಲಸದ ಮೇಲೆ ತೋಟಕ್ಕೋ ಇಲ್ಲ ಇನ್ಯಾವುದೋ ಊರಿಗೆ ಹೋಗುವುದನ್ನೇ ಕಾದು ಕೂತು ಮೆಲ್ಲಗೆ ಮನೆಯೊಳಗೆ ನುಸುಳಿಕೊಂಡರೆ ಕದಿಯುವ ಕೆಲಸಕ್ಕೆ ಅಂಜುತ್ತಿದ್ದ ಅಣ್ಣ ಅಡುಗೆ ಮನೆಯಲ್ಲಿ ನನ್ನ ದೊಡ್ಡಮ್ಮನನ್ನು ಅದು ಇದು ನೆಪ ತೆಗೆದು ಮಾತನಾಡಿಸುವ ಕೆಲಸ ಮಾಡುತ್ತಿದ್ದ. ಇತ್ತ ನಾನು ಮೆಲ್ಲಗೆ ರೂಮಿನ ಮಂಚದ ಕೆಳಗೆ ತೂರಿ ಕತ್ತಲೆ ಮತ್ತು ಭಯಗಳನ್ನು ವೀರ ನಾರಿಯಂತೆ ಮೆಟ್ಟಿ ನಾಲ್ಕು ಹಣ್ಣು ತೆಗೆದು ಅಲ್ಲಿಂದ ಆಚೆ ಬರುವ ಆತುರದಲ್ಲಿ ಮಂಚದ ಪಟ್ಟಿಗೆ ತಲೆ ಒಡೆಸಿಕೊಂಡು ನೊಂದರೂ ಏನೂ ಆಗೇ ಇಲ್ಲ ಎಂಬಂತೆ ಸದ್ದು ಮಾಡದೆ ಮತ್ತದೇ ಕಳ್ಳ ಹೆಜ್ಜೆ ಹಾಕುತ್ತಾ ಆಚೆ ಹೋಗಿ ಸೀಟಿ ಹೊಡೆಯಲು ಬಾರದೆ ಜೋರಾಗಿ ಕೆಮ್ಮಿ ಅಣ್ಣನಿಗೊಂದು ಸಿಗ್ನಲ್ ಕೊಟ್ಟು ಓಡಿ ಹೋಗಿಬಿಡುತ್ತಿದ್ದೆ.

ಅಷ್ಟು ಹೊತ್ತು ಎರಡು ದೇಹ ಒಂದೇ ಪ್ರಾಣದಂತೆ ಕೆಲಸ ಮಾಡಿ ಮುಗಿಸಿದ ನಾವಿಬ್ಬರು ಕದ್ದ ಮಾವು ಹಂಚಿಕೊಳ್ಳುವಾಗ ಪರಮ ದ್ವೇಷಿಗಳಾಗಿಬಿಡುತ್ತಿದ್ದೆವು. ಇದ್ದ ನಾಲ್ಕು ಹಣ್ಣನ್ನು ಭಾಗ ಮಾಡಿಕೊಳ್ಳಲು ಯುದ್ಧ ನಡೆಸುತ್ತಿದ್ದೆವು. ಅವುಗಳ ಬಣ್ಣ ರುಚಿ ಪರಿಮಳಕ್ಕಾಗಿ ಕಿತ್ತಾಟ. ನಾನು ಕಷ್ಟ ಪಟ್ಟು ಕದ್ದೆ ನನಗೆ ಜಾಸ್ತಿ ಎಂದು ನಾನಂದರೆ ದೊಡ್ಡಮ್ಮನನ್ನು ಎಷ್ಟು ಕಷ್ಟ ಪಟ್ಟು ಅತ್ತ ಬರದಂತೆ ತಡೆದೆ? ನನಗೆ ಹೆಚ್ಚು ಎನ್ನುತ್ತಿದ್ದ ಅಣ್ಣ. ಹೀಗೆ ಕಿತ್ತಾಡುತ್ತಲೇ ಹೇಗೋ ತಿಂದು ಮುಗಿಸಿ ಮಾಡಿದ ಸರ್ಕಸ್ ನೆನೆಸಿಕೊಂಡು ಪಕಪಕ ನಗುತ್ತಿದ್ದೆವು.

ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಹುಟ್ಟಿದ ನಾವು ಅದೆಷ್ಟು ಭಾಗ್ಯಶಾಲಿಗಳು. ಒಂದು ಮಾವಿನಹಣ್ಣಿನೊಳಗೆ ಅದೆಷ್ಟು ಸಿಹಿ ನೆನಪುಗಳು.

ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿ ರಾತ್ರಿಯೂಟವನ್ನ ಒಟ್ಟಿಗೆ ಕುಳಿತು ಮಾಡುವಾಗ ಮಾವಿನ ಸೀಸನ್‌ನಲ್ಲಿ ಪ್ರತಿನಿತ್ಯವು ಊಟದ ಜೊತೆ ಮಾವಿನ ಹಣ್ಣು ಇರಲೇಬೇಕು, ಇಂದಿಗೂ ಕೂಡ. ನಾಲ್ಕು ಹಣ್ಣುಗಳನ್ನು ಕತ್ತರಿಸಿಕೊಂಡು ನೆಂಜಿಕೊಳ್ಳುತ್ತಾ ಎಲ್ಲರೂ ಊಟ ಮಾಡುವಾಗ ಅಡುಗೆಮನೆಯೊಳಗೆ ಇಟ್ಟಿರುತ್ತಿದ್ದ ಮಾವಿನ ವಾಟೆಯ ಮೇಲೆ ನನ್ನ ಒಂದು ಕಣ್ಣು ಇದ್ದರೆ ಅಣ್ಣನ ಎರಡೂ ಕಣ್ಣುಗಳನ್ನು ಅದರ ಮೇಲೆ ನೆಟ್ಟಿರುತ್ತಿತ್ತು, ಅದಕ್ಕಾಗಿ ಸರಿಯಾಗಿ ಊಟವನ್ನೂ ಮಾಡದೇ, ಒಡಹುಟ್ಟಿದವರು ಎನ್ನುವುದನ್ನು ಒಂದು ನಿಮಿಷ ಮರೆತು ಶತ್ರುಗಳಂತೆ ಕಿತ್ತಾಡಿ, ವಾಟೆ ಸಿಕ್ಕರೆ ಯುದ್ಧ ಗೆದ್ದಂತೆ, ಸಿಗದಿದ್ದಾಗ ಹಲ್ಲುಮಸೆದು ಶಾಪ ಹಾಕುತ್ತಾ ಕೈತಪ್ಪಿ ಹೋದ ವಾಟೆ ನೋಡಿಕೊಂಡು ಪರಿತಪಿಸುತ್ತಿದ್ದೆ. ಸಿಕ್ಕ ವಾಟೆ ಬೋಳು ತಲೆಯಂತಾಗಿ ಹಳದಿ ಬಣ್ಣ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗುವವರೆಗೂ ಅದನ್ನು ಚೀಪಿ ಕೊನೆಗೆ ಇನ್ನೇನು ಉಳಿದಿರಲು ಸಾಧ್ಯವೇ ಇಲ್ಲ ಅಂತ ಖಾತ್ರಿ ಮಾಡಿಕೊಂಡು ಅದನ್ನು ಎಸೆಯಲು ಮನಸ್ಸಾಗದೆ ಗಿಡ ಹುಟ್ಟಲಿ ಎಂಬ ಮಹದಾಸೆಯೊಂದಿಗೆ ಹಿತ್ತಿಲಲ್ಲಿ ಹೂಳುತ್ತಿದ್ದೆ. ನಂತರ ಗಂಟೆಗಟ್ಟಲೆ ಮನೆಯ ಮುಂದಿನ ಬಟ್ಟೆ ಒಗೆವ ಕಲ್ಲಿನ ಮೇಲೆ ಕೂತು ಹಲ್ಲಿನ ಸಂಧಿಗಳಲ್ಲಿ ಸೇರಿಕೊಂಡ ನಾರನ್ನು ತೆಗೆಯುವಷ್ಟರಲ್ಲಿ ಕೈ-ಬಾಯಿ ಸೋತಿರುತ್ತಿತ್ತು. ಆದರೂ ಅದರಲ್ಲೇನೋ ಮಜಾ. ಅದು ಆಟ ಆಡಿಸಿದಷ್ಟು ನನಗಿಲ್ಲಿ ಮತ್ತಷ್ಟು ಹಠ. ನಾನೋ ನೀನೊ ಎಂಬ ಜುಗಲ್ಬಂದಿ. ಬೆರಳಿಗೆ ಸಿಗದಿದ್ದರೆ ಉಗುರಲ್ಲಿ ಅದಕ್ಕೂ ಸಿಗದಿದ್ದರೆ ಕೊರಳಲ್ಲಿ ಕಟ್ಟಿದ್ದ ತಾಯತದ ದಾರದಲ್ಲಿ ಹಲ್ಲಿಗೆ ಚುಚ್ಚಲೆಂದೆ ಕಾಪಿಡುತ್ತಿದ್ದ ಬಟ್ಟೆ ಪಿನ್ನಿನಲ್ಲಿ ನಾರು ಸಂಪೂರ್ಣವಾಗಿ ಬರುವವರೆಗೂ ಕುಳಿತ ಜಾಗ ಬಿಟ್ಟು ಕದಲುತ್ತಿರಲಿಲ್ಲ.

ಇನ್ನೂ ಹೆಣ್ಣುಮಕ್ಕಳಿಗೂ ಹುಳಿ ಮಾವಿನಕಾಯಿಗೂ ಪುರಾತನ ಅನುಬಂಧವೆಂಬಂತೆ ಮಾವಿನ ಮರ ಯಾರಪ್ಪನ ಹೊಲದ್ದೆ ಆದರೂ ಸರಿ ಹೋಗಿ ಹೇಗೋ ಯಾರನ್ನಾದರೂ ಗೋಗರೆದೋ ಕಾಲು ಕಟ್ಟಿಕೊಂಡಾದರು ಸರಿ ಒಂದೆರಡು ತಂದುಬಿಡುತ್ತಿದ್ದೆ. ಅಮ್ಮ ಅವನ್ನು ತೊಳೆದು ಗಂಟೆಗಟ್ಟಲೆ ಈಳಿಗೆಮಣೆ ಮೇಲೆ ಕೂತು ಸಣ್ಣಗೆ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೊಂದಿಷ್ಟು ಖಾರದಪುಡಿ, ಉಪ್ಪು ಮತ್ತು ಒಂದಿಷ್ಟು ತುರಿದ ಬೆಲ್ಲ ಸೇರಿಸಿ ಕಲಸುತ್ತಿದ್ದರೆ ಬಾಯಲ್ಲಿ ನೀರು ಸುರಿಸುತ್ತಾ ಕುಳಿತಿರುವುದ ಕಂಡರೂ ಅಮ್ಮ ಅಷ್ಟು ಸುಲಭಕ್ಕೆ ಕೊಡದೇ ಅದನ್ನರ್ಧ ಗಂಟೆ ನೆನೆಯಲು ಇಟ್ಟು ಉಪ್ಪುಖಾರವನ್ನ ಹೀರಿಕೊಂಡು ರಸಬಿಟ್ಟ ಮೇಲೆ ಕೊಡುತ್ತಿದ್ದದ್ದು. ಇಲ್ಲೆಲ್ಲಾ ಕದಿಯುವ ಆಟ ನಡೆಯದೆ ಕಾದು, ಅವಳು ಕೊಟ್ಟಾಗಲೇ ಚಪ್ಪರಿಸಿ ಪಾತ್ರೆಯಲ್ಲಿ ಉಳಿದ ರಸಕ್ಕಾಗಿ ಅಮ್ಮ ಎನ್ನುವುದನ್ನೂ ಮರೆತು ವೈರತ್ವ ಕಟ್ಟಿಕೊಂಡು ಗಲಾಟೆ ನಡೆಸಿ ಅವಳಿಗೂ ಉಳಿಸದ ಹಾಗೆ ಅದೆಷ್ಟೋ ಸಲ ಪಾತ್ರೆಯನ್ನೆಲ್ಲಾ ನಾಲಿಗೆಯಿಂದ ನೆಕ್ಕಿ ತೊಳೆದಂತೆ ಮಾಡಿದ್ದೂ ಇದೆ.

ಇಂದಿನ ಮಕ್ಕಳಿಗೆಲ್ಲಿ ಈ ಪರಿಯ ನೆನಪುಗಳ ಸರಮಾಲೆ. ಅವರದ್ದೇನಿದ್ದರೂ ಮೊಬೈಲ್, ದೂರದರ್ಶನಗಳ ಹಂಗು. ಮರ ಹತ್ತುವುದು, ಕಾಯಿಗೆ ಗುರಿಯಿಟ್ಟು ಕಲ್ಲು ತೂರುವುದು, ಬಿದ್ದ ಒಂದು ಕಾಯಿಗೆ ಹತ್ತು ಕೈಗಳು ಕಿತ್ತಾಡುವುದು, ಸಿಕ್ಕ ಸಣ್ಣ ಚೂರಿನ ರುಚಿಯನ್ನೇ ದಿನವಿಡೀ ಮೆಲುಕು ಹಾಕುತ್ತ ಮತ್ತೊಂದು ಕಾಯಿಗಾಗಿ ಚಡಪಡಿಸುವುದು ಈ ಯಾವ ತಾಪತ್ರಯಗಳು ಇವರಿಗೆ ಬೇಕಿಲ್ಲ. “ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು” ಎಂಬಂತೆ ಹಣ್ಣು ಸಿಕ್ಕರೆ ಸಾಕು ಕತ್ತರಿಸಲು ಕಾಯದೆ ಹಾಗೆ ತಿರುಳನ್ನೆಲ್ಲ ಹೀರಿಕೊಂಡುಬಿಡುತ್ತಿದ್ದ ನಾವೆಲ್ಲಿ? ಒಂದೆರಡು ಪಾಲು ಹೆಚ್ಚಿಗೆ ತಿಂದರೆ ಬೇದಿಯಾಗಿ ಇಟ್ಟಾಡುವ ಈಗಿನ ಮಕ್ಕಳೆಲ್ಲಿ. ಎಲಚಿ ಹಣ್ಣು, ಜಂಗಲ್ ಜಿಜೇಬಿ ಹಣ್ಣು, ನೇರಳೆ ಹಣ್ಣು, ಹಿಪ್ಪು ನೇರಳೆ ಹಣ್ಣು ಇವುಗಳ ರುಚಿ ಇರಲಿ ಹೆಸರನ್ನು ಸಹ ಕೇಳಿಲ್ಲ ಎನ್ನುವುದು ಈಗಿನ ಮಕ್ಕಳ ದುರ್ದೈವವೇ ಸರಿ!