ಬೀದಿಯಲ್ಲಿ ಬರುವವರು ಹೋಗುವವರು ಹುಡುಗಿಯರನ್ನು ನೋಡಿಕೊಂಡು ಹೋಗುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಅವರಿಬ್ಬರ ಸುತ್ತಲೂ ನಿಂತುಕೊಂಡು ಹೂವಿನ ಜಡೆಗಳನ್ನು ಮತ್ತು ಅವರಿಬ್ಬರನ್ನೂ ನೋಡಿ ಒಳಗೊಳಗೆ ನಾವೂ ಇಂತಹ ಮಲ್ಲಿಗೆ ಮೊಗ್ಗಿನ ಜಡೆಗಳನ್ನ ಹಾಕಿಕೊಂಡರೆ ಹೇಗಿರುತ್ತದೆ ಎನ್ನುವ ಕನಸಿನಲ್ಲಿ ನಿಂತಕಡೆಯೇ ತೇಲಾಡುತ್ತಿದ್ದರು. ಪಕ್ಕದ ಮನೆಗಳ ಕೆಲವು ಮಹಿಳೆಯರು ಬಂದು “ಯಾರು ಈ ಮೊಗ್ಗಿನ ಜಡೆಗಳನ್ನು ಹಾಕಿದ್ದು?” ಎಂದಾಗ ಪಕ್ಕದಲ್ಲಿದ್ದ ಮಹಿಳೆಯೊಬ್ಬರು “ಇನ್ಯಾರು ಅಲಮೇಲು. ವೆಲ್ಲೂರು ಕಡೆಯವರು ಹೂಕಟ್ಟುವುದರಲ್ಲಿ ತುಂಬಾ ಫೇಮಸ್ ಅಲ್ಲವೇ?” ಎಂದಳು. ಬಂದವರೆಲ್ಲ “ತುಂಬಾ ಚೆನ್ನಾಗಿದೆ” ಎಂದು ಹೊಗಳುತ್ತಿದ್ದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತನೆಯ ಕಂತು ನಿಮ್ಮ ಓದಿಗೆ
ಎರಡು ತಿಂಗಳಾದ ಮೇಲೆ ಒಂದು ಸಾಯಂಕಾಲ ವೆಲ್ಲೂರು ಕಡೆಯ ಸೇನೂರು ಹಳ್ಳಿಯಿಂದ ಮಣಿಯ ಅತ್ತೆ ಅಲಮೇಲು, ಮಗಳು ಸುಶೀಲಳೊಡನೆ ದಿಢೀರನೆ ಮನೆ ಮುಂದೆ ಪ್ರತ್ಯಕ್ಷರಾದರು. ಜೊತೆಗೆ ಬಹಳ ಅಪರೂಪವಾಗಿ ಅಲಮೇಲು ದೊಡ್ಡ ಮಗ ಸೀನಿ ಕೂಡ ಬಂದಿದ್ದನು. ಸೀನಿ ಆಟೋ ಇಳಿಯುವಾಗ ಒಂದು ಸಣ್ಣ ಅಕ್ಕಿ ಮೂಟೆ ಮತ್ತು ತರಕಾರಿ ಇದ್ದ ಗೋಣಿ ಚೀಲದೊಂದಿಗೆ ಕೆಳಕ್ಕೆ ಇಳಿದುಕೊಂಡ. ಕನಕ ಒಂದು ಬಕೆಟ್‌ನಲ್ಲಿ ನೀರು ಮತ್ತು ಚೆಂಬನ್ನು ತಂದು ಮನೆ ಹೊರಗಿಟ್ಟಳು. ಕನಕ ಮತ್ತು ಸುಶೀಲ ಕೈಕಾಲು ಮುಖ ತೊಳೆದುಕೊಂಡು ಮನೆ ಒಳಕ್ಕೆ ಬಂದರು. ಸೀನಿ ಎರಡೂ ಮೂಟೆಗಳನ್ನು ಮನೆ ಒಳಕ್ಕೆ ತೆಗೆದುಕೊಂಡು ಬಂದ ಮೂಲೆಯಲ್ಲಿ ಇಡುತ್ತಿದ್ದಂತೆ, ಕನಕ ಸೀನಿಯನ್ನು “ಎಷ್ಟು ದಿನ ಆಯಿತು ಸೀನಿ ನಿನ್ನನ್ನು ನೋಡಿ” ಎಂದು ಮೈದಡವಿ ಕುಳಿತುಕೊಳ್ಳುವಂತೆ ಹೇಳಿದಳು.
ಕನಕ, ಸುಶೀಲಳ ಕೈ ಹಿಡಿದುಕೊಂಡು “ಎಷ್ಟು ಮುದ್ದಾಗಿದ್ದೀಯ? ನನ್ನ ದೃಷ್ಠೀನೆ ನಿನಗೆ ತಗುಲಿಬಿಡುತ್ತೇನೋ” ಎಂದು ಎರಡು ಮೆಣಸಿನಕಾಯಿ, ಒಂದೆರಡು ಉಪ್ಪು ಕಲ್ಲುಗಳನ್ನು ತೆಗೆದುಕೊಂಡು ಹುಡುಗಿಯ ಮುಖಕ್ಕೆ ಸುತ್ತಿ ಉರಿಯುತ್ತಿದ್ದ ಒಲೆಗೆ ಹಾಕಿ ಅವು ಪಟಪಟ ಎಂದು ಸಿಡಿಯತೊಡಗಿದವು. ಅಲಮೇಲು ಗೋಡೆಯ ಮೇಲಿದ್ದ ಸೆಲ್ವಮ್ ಪಟ ನೋಡಿ ಗೊಳೊ ಎಂದು ಅತ್ತಳು. ನಂತರ ಬಟ್ಟೆ ಚೀಲದಲ್ಲಿ ಒದ್ದೆ ಬಟ್ಟೆಯಲ್ಲಿ ಸುತ್ತಿಕೊಂಡು ಬಂದಿದ್ದ ಮಲ್ಲಿಗೆ ಹೂವಿನ ಹಾರವನ್ನು ಪಟಕ್ಕೆ ಹಾಕಿ ಕೈಮುಗಿದು ಕಣ್ಣೀರು ಒರಿಸುತ್ತ ಕೆಳಗೆ ಕುಳಿತುಕೊಂಡಳು. ಜೊತೆಗೆ ಚೀಲದಲ್ಲಿದ್ದ ಮಲ್ಲಿಗೆ ಬಿಡಿ ಹೂವುಗಳ ದೊಡ್ಡ ಪೊಟ್ಟಣವನ್ನು ತೆಗೆದುಕೊಟ್ಟು ಇದು ಸುಮತಿಗೆ ಎಂದಳು. ಸೀನಿ ಕೂಡ ಎದ್ದುನಿಂತು ಸೆಲ್ವಮ್ ಪಟಕ್ಕೆ ಕೈ ಮುಗಿದು ಕೆನ್ನೆಗಳಿಗೆ ಹೊಡೆದುಕೊಂಡು ದುಃಖಿತಗೊಂಡ. ಕನಕ, “ಸುಮತಿ ನಿಮ್ಮ ಮಾವನನ್ನು ಮಾತನಾಡಿಸು” ಎಂದಳು. ಸುಮತಿ, ನಾಚಿಕೆ ಪಡುತ್ತ “ಚೆನ್ನಾಗಿದ್ದೀಯ ಮಾವ” ಎಂದಳು. ಸುಮತಿಗಿಂತ ಹೆಚ್ಚಾಗಿ ಸೀನಿ ನಾಚಿಕೆ ಪಡುತ್ತ ಗೋಡೆ ಪಕ್ಕಕ್ಕೆ ತಿರುಗಿಕೊಂಡ.
ಕನಕ ಮೂವರಿಗೂ ಟೀ ಮಾಡಿಕೊಟ್ಟಾಗ ಸುಶೀಲ ನಾನು ಟೀ ಕುಡಿಯುವುದಿಲ್ಲ ಎಂದಳು. ಸುಮತಿ, “ಸುಶೀಲ ನೀನು ಟೀ ಕುಡಿಯುವುದಿಲ್ಲವೆ?” ಎಂದಿದ್ದೆ, ಕನಕ, “ಕೆಜಿಎಫ್ ಅಲ್ಲಮ್ಮ ಅದು. ಪಳ್ಳಿಕೂಡು. ಇಲ್ಲಿನ ತರಹ ಅಲ್ಲಿ ಸೀರುಂಡೆಗಳು ಎಲ್ಲಿ ಸಿಗುತ್ತೆ. ಸುಶೀಳಲನ್ನು ನೋಡಿ ಸ್ವಲ್ಪ ಕಲಿತುಕೊ” ಎಂದಳು ಮಗಳಿಗೆ. ಸುಮತಿ ನಕ್ಕಳು. ಪಕ್ಕದ ಮನೆಯ ಗೋವಿಂದನ ಪತ್ನಿ ಧರಣಿ ಮನೆ ಒಳಕ್ಕೆ ಇಣಿಕಿ ನೋಡಿ “ಏನು ಅಲಮೇಲು ಚೆನ್ನಾಗಿದ್ದೀಯ? ಮಗಳನ್ನು ಅಳಿಯನಿಗೆ ತೋರಿಸುವುದಕ್ಕೆ ಕರ‍್ಕೊಂಡು ಬಂದಿಯ? ಏನು” ಎಂದು ನಕ್ಕಳು. ಅಲಮೇಲು ನಗುತ್ತಾ “ನಮ್ಮ ಹುಡುಗೀನ ಮಣಿ ಮಾಡಿಕೊಳ್ಳಬೇಕಲ್ಲ!” ಎಂದಳು. ಕನಕ, “ಯಾಕೆ ಮಾಡಿಕೊಳ್ಳುವುದಿಲ್ಲ? ನಮ್ಮ ಸುಶೀಲಳಿಗಿಂತ ಸುಂದರವಾದ ಹುಡುಗಿ ಮಣಿಗೆ ಸಿಗ್ತಾಳಾ?” ಎಂದಳು. ಅಲಮೇಲು, “ಅಷ್ಟು ಆಗಿಬಿಟ್ಟರೆ ಸಾಕು. ಆ ಉದ್ದಂಡಮ್ಮನಿಗೆ ಹರಿಕೆ ಕೂಡ ಹೊತ್ತುಕೊಂಡಿದ್ದೀನಿ” ಎಂದಳು. ಧರಣಿ, “ನಿಮ್ಮ ಅತ್ತಿಗೇನೆ ಹೇಳಿಬಿಟ್ಟರಲ್ಲ ಇನ್ನೇನು ಬಿಡು. ಖಂಡಿತ ಆಗುತ್ತೆ” ಎಂದಳು.
ಹೀಗೆ ಮಹಿಳೆಯರ ಮಾತುಗಳು ಮುಂದುವರಿದಿದ್ದವು. ಧರಣಿ, “ನಾನು ಬರ್ತೀನಿ ಇನ್ನೂ ಅಡಿಗೆ ಮಾಡಿಲ್ಲ” ಎಂದು ಎದ್ದು ನಿಂತಳು. ಕನಕ, “ಧರಣಿ ಸ್ವಲ್ಪ ಹೂ ತೆಕೊ. ಅನಂತರ ತರಕಾರಿ ಕೊಡ್ತೀನಿ ಇನ್ನೂ ಮೂಟೆ ಬಿಚ್ಚಿಲ್ಲ” ಎಂದು ಪೊಟ್ಟಣದಲ್ಲಿದ್ದ ಸ್ವಲ್ಪ ಮಲ್ಲಿಗೆ ಹೂವುಗಳನ್ನು ತೆಗೆದುಕೊಡಲು ಹೋದಳು. ಧರಣಿ, “ಹಾಗೆ ಇಡಿ ಎಲ್ಲಿಗೋಗ್ತೀನಿ ನಾನು. ಒಟ್ಟಿಗೆ ಮಲ್ಲಿಗೆ ಹೂ ಕಟ್ಟಿದ ಮೇಲೆ ತೆಕೊಂಡು ಹೋಗ್ತೀನಿ” ಎಂದು ಹೇಳಿ ಹೋದಳು.
ಕನಕ, ಅಲಮೇಲು, ಸುಮತಿ ಮತ್ತು ಸುಶೀಲ ಇನ್ನೂ ಊಟ ಮಾಡದೆ ಮಣಿಗಾಗಿ ಕಾಯುತ್ತಿದ್ದರು. ಸೀನಿ ಟೌನ್ ಸುತ್ತಾಡಿಕೊಂಡು ಬರಲು ಹೋದವನು ಇನ್ನೂ ಮನೆಗೆ ವಾಪಸ್ ಬಂದಿಲ್ಲ. ಬಹುಶಃ ರಾಬರ್ಟ್ಸನ್‌ಪೇಟೆಯ ಯಾವುದೋ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋಗಿರಬೇಕು ಎಂದುಕೊಂಡರು. ಮಣಿ ಎಷ್ಟೊತ್ತಿಗೆ ಬರುತ್ತಾನೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಅಂತೂ ಕೊನೆಗೂ ಮಣಿ ನೇರವಾಗಿ ಮನೆ ಒಳಕ್ಕೆ ಬಂದ. ಮನೆಯ ಒಳಗೆ ಒಂಟಿ ಬಲ್ಬ್ ಉರಿಯುತ್ತಿದ್ದು ಅಷ್ಟೇನೂ ಬೆಳಕಿಲ್ಲದ ಕಾರಣ ಬಂದಿದ್ದೆ ಮಣಿ, “ಯಾರಮ್ಮ ಇದು?” ಎಂದ. ತಾಯಿ “ಯಾರೋ ನೀನೇ ನೋಡಪ್ಪ” ಎಂದಳು. “ಓ! ಅತ್ತೆ” ಎಂದು ಹತ್ತಿರಕ್ಕೆ ಬಂದು ಪಕ್ಕದಲ್ಲಿ ಕುಳಿತುಕೊಂಡು ತಬ್ಬಿಕೊಂಡು “ಅತ್ತೆ” ಎಂದ. ಕನಕ, “ಅತ್ತೆ ಮೇಲೆ ಅಳಿಯನಿಗೆ ಏನು ಪ್ರೀತೀನೊ ನೋಡು?” ಎಂದಳು. ಪಕ್ಕದಲ್ಲಿಯೇ ಕುಳಿತುಕೊಂಡಿದ್ದ ಸುಶೀಲಳನ್ನು ನೋಡಿ “ಇದು ಯಾರು?” ಎಂದ. ಸುಮತಿ ಅವಳ ಮುಖವನ್ನು ಹಿಡಿದೆತ್ತಿ “ನೋಡು ಯಾರೂ ಅಂತ” ಎಂದಳು.
ಒಂದು ಕ್ಷಣ ಅವಳ ಕಡೆಗೆ ಕಣ್ಣುಗಳನ್ನು ಕುಗ್ಗಿಸಿ ನೋಡಿ “ಸುಶೀಲ” ಎಂದ ಅಷ್ಟೇ. ಅವಳ ಮುಖದಲ್ಲಿ ದಿಢೀರನೆ ಸೆಲ್ವಿ ಮುಖ ಕಾಣಿಸಿಕೊಂಡು “ಭದ್ರ, ನನ್ನನ್ನು ಬಿಟ್ಟು ಯಾವ ಹುಡುಗಿನಾದರೂ ನೋಡಿದಿಯೋ ಆ ದಿನಾನೆ ಸೈನಾಟ್ ಗುಡ್ಡದ ಮೇಲಿಂದ ಕೆಳಕ್ಕೆ ಹಾರಿಬಿದ್ದು ಸತ್ತೋಗ್ತೀನಿ” ಎಂದಳು. ಮಣಿ ಎದ್ದು ಮನೆ ಹೊರಕ್ಕೆ ಬಂದು ಕಲ್ಲು ಬಂಡೆ ಮೇಲೆ ಕುಳಿತುಕೊಂಡುಬಿಟ್ಟ. ಎಲ್ಲರೂ ಒಬ್ಬರನ್ನೊಬ್ಬರು ನೋಡಿಕೊಂಡರು. ಹೊರಕ್ಕೆ ಎದ್ದುಬಂದ ಕನಕ, “ಯಾಕೊ ಏನಾಯಿತು? ಅತ್ತೆ ಬಂದರೆ ಹಾಗಾ ಮಾಡುವುದು? ಏನಂದುಕೊಳ್ತಾರೆ ಅವರು” ಎಂದಳು. ಸ್ವಲ್ಪ ಸುಧಾರಿಸಿಕೊಂಡ ಮಣಿ “ಹಸಿವಾಗ್ತಾ ಇದೆ ಊಟ ಕೊಡಮ್ಮ. ಒಳಗಡೆ ಎಲ್ಲರೂ ಕುಳಿತುಕೊಳ್ಳುವುದಕ್ಕೆ ಸ್ಥಳ ಎಲ್ಲಿದೆ?” ಎಂದ. ಕನಕ ತಟ್ಟೆಗೆ ಅನ್ನ ಸಾರಾಕಿ ಸುಶೀಲಳ ಕೈಗೆ ಕೊಟ್ಟಳು. ಅವಳು ಭಯದಿಂದಲೇ ಹೊರಗೆ ಬಂದು ಮಣಿ ಕೈಗೆ ತಟ್ಟೆ ಕೊಟ್ಟಳು. ಹಿಂದೆಯೇ ಸುಮತಿ ನೀರು ತಂದು ಕೊಟ್ಟಳು.
ಅಷ್ಟರಲ್ಲಿ ಸೀನಿ ಬಂದು ಎದುರಿಗೆ ನಿಂತುಕೊಂಡ. ಮಣಿ ಯಾರಿದು ಎನ್ನುವಂತೆ ಅವನ ಕಡೆಗೆ ಅರೆ ಕತ್ತಲಲ್ಲಿ ದಿಟ್ಟಿಸಿ ನೋಡಿ, “ಓ ಸೀನಿ? ನೀನು ಯಾವಾಗ ಬಂದೆ?” ಎಂದು ಎದ್ದುನಿಂತು ತಿನ್ನುತ್ತಿದ್ದ ಕೈಗಳಿಂದಲೇ ಸೀನಿಯ ಕೈಗಳನ್ನು ಹಿಡಿದುಕೊಂಡು ಎದೆಗೆ ತಬ್ಬಿಕೊಂಡ. ಸೀನಿ, “ನಾವು ಸಾಯಂಕಾಲಾನೆ ಬಂದೆವು” ಎಂದ. ಮಣಿ, “ಬಾ ಕುಳಿತುಕೊ. ಅಮ್ಮ ಸೀನಿಗೆ ಊಟ ಕೊಡಮ್ಮ” ಎಂದ. ಸುಮತಿ ಊಟದ ತಟ್ಟೆ ತಂದುಕೊಟ್ಟಳು. ಇಬ್ಬರೂ ಹೊರಗೆ ಕಲ್ಲಿನ ಮೇಲೆ ಕುಳಿತುಕೊಂಡು ಮಾತನಾಡುತ್ತ ಊಟ ಮಾಡಿದರು. ಇಬ್ಬರೂ ಸುಮಾರು ಹೊತ್ತು ಅಲ್ಲೇ ಕುಳಿತುಕೊಂಡು ಮಾತನಾಡಿದರು. ಮನೆ ಒಳಗೆ ಎಲ್ಲರೂ ಮಲಗಿಕೊಳ್ಳುವುದಕ್ಕೆ ಸ್ಥಳವಿಲ್ಲದ ಕಾರಣ ಮಣಿ, “ಅಮ್ಮ ಇವತ್ತು ನಾನು, ಸೀನಿ ಇಬ್ಬರೂ ಕಮ್ಯೂನಿಟಿ ಹಾಲ್‌ನಲ್ಲಿ ಮಲಗಿಕೊಂಡು ಬೆಳಿಗ್ಗೆ ಬರ್ತೀವಿ” ಎಂದ. ಕನಕ ಒಂದು ಚಾಪೆ ಎರಡು ರಗ್ಗು, ಎರಡು ಸಣ್ಣ ತಲೆದಿಂಬುಗಳನ್ನು ತಂದುಕೊಟ್ಟಳು. ಮಣಿ ಮತ್ತು ಸೀನಿ ಇಬ್ಬರೂ ಬಟ್ಟೆಗಳನ್ನು ತೆಗೆದುಕೊಂಡು ಕಮ್ಯೂನಿಟಿ ಹಾಲ್ ಕಡೆಗೆ ಹೊರಟರು.
*****
ಗಣಿ ನಗರದಲ್ಲಿ ರಾತ್ರಿ ಮುಗಿದು ಬೆಳಗು ಮೂಡಿತ್ತು. ಬೆಳಕು ಮೂಡುವುದಕ್ಕೆ ಮುಂಚೆಯೇ ಕನಕ ಮತ್ತು ಅಲಮೇಲು ಎದ್ದು ಶೌಚಾಲಯಕ್ಕೆ ಹೋಗಿ ಬಂದು ಮನೆ ಒಳಗೆ ಕುಳಿತುಕೊಂಡು ಅದೂ ಇದೂ ಮಾತನಾಡಿಕೊಳ್ಳುತ್ತಿದ್ದರು. ಸ್ವಲ್ಪ ಆತಂಕಕ್ಕೆ ಒಳಗಾದಂತೆ ಕುಳಿತಿದ್ದ ಅಲಮೇಲುಳನ್ನು ನೋಡಿದ ಕನಕ, “ಅಲಮೇಲು ನೀನ್ಯಾಕೆ ಮಂಕಾಗಿ ಕುಳಿತಿದ್ದೀಯ? ಮಣಿಗೆ ಕೆಲಸ ಸಿಕ್ಕಿಲ್ಲ ಅಂತ ಬೇಜಾರಿನಲ್ಲಿದ್ದಾನೆ, ಅಷ್ಟೇ. ಅವನ ಮದುವೆ ಬಗ್ಗೆ ನಾವು ಎಲ್ಲಿ ಮಾತುಗಳನ್ನು ತೆಗೆದುಬಿಡುತ್ತೇವೊ ಎಂದು ರಾತ್ರಿ ಹಾಗೆ ಮಾಡಿರಬೇಕು. ಬೆಳಿಗ್ಗೆ ಬರ್ಲಿ ಅವನಿಗೆ ಸರಿಯಾಗಿ ಕೇಳ್ತೀನಿ” ಎಂದಳು. ಮಣಿ ಒಬ್ಬಳು ಹುಡುಗಿಯನ್ನು ಲವ್ ಮಾಡುತ್ತಿರುವ ವಿಷಯ ಸುಮತಿಗೆ ತಿಳಿದಿದ್ದರೂ ಆಕೆ ಯಾರ ಮುಂದೆಯೂ ಬಾಯಿ ಬಿಡಲಿಲ್ಲ. ಕನಕಳ ಕಿವಿಗಳಿಗೂ ವಿಷಯ ಸಣ್ಣದಾಗಿ ಬಿದ್ದಿದ್ದು ಮಣಿ ಅದ್ಯಾರೋ ಹುಡುಗಿಯನ್ನು ಮದುವೆ ಮಾಡಿಕೊಳ್ಳುವಷ್ಟು ಮುಂದುವರಿಯಲಾರ ಎಂದುಕೊಂಡಳು. ಒಟ್ಟಿನಲ್ಲಿ ಮಣಿ ರಾತ್ರಿ ನಡೆದುಕೊಂಡ ರೀತಿಯಿಂದ ಅಲಮೇಲು ಮನಸ್ಸಿನಲ್ಲಿ ಸ್ವಲ್ಪ ಅನುಮಾನದ ಮೊಳಕೆ ಹೊಡೆದಿತ್ತು. ರಾತ್ರಿ ಅಲಮೇಲು ಎಷ್ಟು ಆತಂಕದಿಂದ ಕಾಲ ಕಳೆದಳೊ, ಕನಕಳ ಮನಸ್ಸಿನಲ್ಲೂ ಅಷ್ಟೇ ಆತಂಕ ತುಂಬಿಕೊಂಡಿತ್ತು. ಕನಕ, ಸೆಲ್ವಮ್ ಬದುಕಿದ್ದರೆ ನನಗೆ ಇಂತಹ ಕಷ್ಟಗಳು ಬರುತ್ತಿರಲಿಲ್ಲ ಎಂದುಕೊಂಡಳು.
ಬೆಳಿಗ್ಗೆ ನಿಧಾನವಾಗಿ ಅದೂಇದೂ ಮಾತನಾಡುತ್ತ ಮನೆ ಕೆಲಸಗಳನ್ನು ಮಾಡುತ್ತಲೇ ತಿಂಡಿ ಮಾಡಿ ಮುಗಿಸಿದರು. ಅಷ್ಟರಲ್ಲಿ ಮಣಿ ಮತ್ತು ಸೀನಿ ಇಬ್ಬರೂ ಕಮ್ಯೂನಿಟಿ ಹಾಲ್‌ನಿಂದ ಎದ್ದು ಬಂದು ಮುಖ ತೊಳೆದುಕೊಂಡು ಮನೆ ಹೊರಗೆ ಕಲ್ಲಿನ ಮೇಲೆ ಕುಳಿತುಕೊಂಡರು. ಕನಕ ಇಬ್ಬರಿಗೂ ತಿಂಡಿ ಕೊಟ್ಟು ಇಬ್ಬರೂ ತಿಂದು ಮುಗಿಸಿದರು. ನಂತರ ಟೀ ಕುಡಿಯುತ್ತಿದ್ದಂತೆ ಸೀನಿ ಊರಿಗೆ ಹೋಗುವುದಾಗಿ ಹೇಳಿದ. ಆದರೆ ಮಣಿ ನಾಳೆ ಬೆಳಿಗ್ಗೆ ಹೋಗುವೆ ಇರು ಎಂದ. ಸೀನಿ, “ಇಲ್ಲ ಅಪ್ಪ, ಸುಶೀಲ ಮತ್ತು ಅಮ್ಮನನ್ನು ಬಿಟ್ಟು ಬೆಳಿಗ್ಗೆ ಬೇಗನೇ ಬಂದುಬಿಡು ಅಂತ ಹೇಳಿದ್ದಾರೆ. ತೋಟದಲ್ಲಿ ಕೆಲಸ ಇದೆ” ಎಂದ. ಮಣಿ, “ಸಾಯಂಕಾಲ ಚಿಕನ್ ಇಲ್ಲ ಮಟನ್ ತರ್ತೀನಿ. ತಿಂದುಕೊಂಡು ಬೆಳಿಗ್ಗೇನೆ ಹೊರಟುಹೋಗು” ಎಂದು ಅವನನ್ನು ಹೋಗುವುದಕ್ಕೆ ಬಿಡಲಿಲ್ಲ. ತಿಂಡಿ ತಿಂದ ಮೇಲೆ ಮಣಿ ಗಣಿಗಳ ಕಡೆಗೆ ಸುತ್ತಾಕಿಕೊಂಡು ಬರಲು ಸೀನಿಯನ್ನು ಕರೆದುಕೊಂಡು ಹೊರಟ.
ಮೊದಲಿಗೆ ಇಬ್ಬರೂ ಉದ್ದಂಡಮ್ಮಾಳ್ ದೇವಸ್ಥಾನಕ್ಕೆ ಹೋದರು. ಮಣಿ ದೇವಾಲಯದಲ್ಲಿ ದೇವತೆಯ ಮುಂದೆ ಅಡ್ಡಬಿದ್ದು ಬೇಗನೆ ಕೆಲಸ ದೊರಕಲಿ ಎಂದು ಬೇಡಿಕೊಂಡ. ಹೊರಕ್ಕೆ ಬಂದು ವಾಡೆಯರ್ ರಸ್ತೆಯ ಉದ್ದಕ್ಕೂ ಆಕಡೆ ಈಕಡೆ ಇರುವ ಗಣಿ ಶ್ಯಾಫ್ಟ್‌ಗಳ ಕಡೆಗೆ ಕೈ ತೋರಿಸುತ್ತ ಆವುಗಳ ಹೆಸರುಗಳನ್ನೆಲ್ಲ ಹೇಳುತ್ತಾಹೋದ. ಮಣಿ, “ಇದು ಜಗತ್ತಿನಲ್ಲಿಯೇ ಅತಿ ಆಳಕ್ಕೆ ಇಳಿದಿರುವ ಗಣಿ. ಇದುವರೆಗೂ 8ಂಂ ಟನ್ನು ಬಂಗಾರ ತೆಗೆದಿದ್ದಾರಂತೆ. ಇನ್ನೂ ಎಷ್ಟೋ ಟನ್ನುಗಳು ಬಂಗಾರ ಗಣಿಗಳ ಒಳಗಿದೆ. ಎಲ್ಲಾ ಸುರಂಗಗಳನ್ನು ಒಟ್ಟು ಗೂಡಿಸಿದಾಗ ಕೆಜಿಎಫ್‌ನಿಂದ ಚೆನ್ನೈಗೆ ಎಂಟು ಸಲ ಹೋಗಿ ಬರಬಹುದಂತೆ. ತಮಿಳಿನವರೇ ಈ ಗಣಿಗಳನ್ನ ಮಾಡುತ್ತಿರುವುದು. ಕಲ್ಲು ತೋಂಡ್ರ ಮಣ್ಣು ತೋಂಡ್ರ ತಮಿಳ್ ಮುನ್‌ತೋಂಡ್ರ (ಕಲ್ಲು ತೋಡಿ ಮಣ್ಣು ತೋಡಿ ತಮಿಳು ಮಂಚೆ ತೋಡಿ) ಎಂಬ ಗಾದೇ ಮಾತೆ ಇದೆಯಲ್ಲ” ಎಂದ. ಮುಂದುವರಿದು “ಅಂದರೆ ತಮಿಳು ಅಥವಾ ತಮಳಿರು ಕಲ್ಲು ಮಣ್ಣು ಹುಟ್ಟುವುದಕ್ಕಿಂತ ಮುಂಚೆಯೇ ಭೂಮಿಗೆ ಬಂದವರು. ನೀನು ಮತ್ತೆ ಕೆಜಿಎಫ್‌ಗೆ ಬರುವುದರೊಳಗೆ ನಾನು ಗಣಿಯಲ್ಲಿ ಕೆಲಸ ಮಾಡುತ್ತಿರುತ್ತೇನೆ. ಆಗ ನಿನ್ನನ್ನು ಜಗತ್ತಿನ ಆಳದ ಗಣಿಯೊಳಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದ. ಸೀನ, ಮಣಿಯ ಮಾತುಗಳನ್ನು ಕೇಳಿ ಮಣಿಗೆ ಎಷ್ಟು ವಿಷಯಗಳು ಗೊತ್ತಿದೆ ಎಂದುಕೊಂಡ. ಜೊತೆಗೆ ಸೀನಿಗೆ ತನ್ನ ಬಗ್ಗೆ ಸ್ವಲ್ಪ ಕೀಳರಿಮೆ ಒಳಗೊಳಗೆ ಎದ್ದಿತ್ತು. ಇಬ್ಬರೂ ಅನಂತರ ಕಾಲು ನಡುಗೆಯಲ್ಲೇ ಆಂಡರ‍್ಸನ್‌ಪೇಟೆಗೆ ಹೋಗಿ ಲಕ್ಷ್ಮೀ ಟಾಕೀಸ್‌ನಲ್ಲಿ ಎಂಜಿಆರ್ ಜಯಲಲಿತಾ ನಟಿಸಿದ “ಅಡಿಮೈ ಪೆಣ್” ತಮಿಳು ಸಿನಿಮಾ ನೋಡಿಕೊಂಡು ಮಧ್ಯಾಹ್ನ ಮನೆಗೆ ಬಂದರು.
ಅಷ್ಟರಲ್ಲಿ ಅಡಿಗೆ ಮಾಡಿ ಮುಗಿಸಿದ್ದ ಕನಕ, ಸೀನಿ ಮತ್ತು ಮಣಿಗೆ ಮೊದಲು ಊಟ ಬಡಿಸಿ ಅವರು ತಿಂದು ಮುಗಿಸಿದ ಮೇಲೆ ಮಹಿಳೆಯರು ಕುಳಿತುಕೊಂಡು ಊಟ ಮಾಡಿದರು. ಮಣಿ ಮತ್ತು ಸೀನ ಊಟ ಮಾಡಿ ಮತ್ತೆ ಎಲ್ಲಿಗೊ ಪಟ್ಟಣ ಸುತ್ತಲು ಹೊರಟುಹೋದರು. ಮಧ್ಯಾಹ್ನ ಮೂರು ಗಂಟೆಗೆ ಕನಕ, ಸುಶೀಲ ಮತ್ತು ಸುಮತಿಯನ್ನು ಮನೆಯಲ್ಲೇ ಇರುವಂತೆ ಹೇಳಿ ಅಲಮೇಲುಳನ್ನು ಕರೆದುಕೊಂಡು ರಾಬರ್ಟ್ಸನ್‌ಪೇಟೆಯ ಎಂ.ಜಿ. ಮಾರುಕಟ್ಟೆ ತಲುಪಿದರು. ನಿನ್ನೆ ಸಾಯಂಕಾಲ ಗಿಡಗಳಿಂದ ಬಿಡಿಸಿದ್ದ ಮಲ್ಲಿಗೆ ಹೂವುಗಳು, ದವಣಮ್ ಎಲೆಗಳು ಮತ್ತು ಬಣ್ಣಬಣ್ಣದ ರೋಜಾ ಹೂವುಗಳನ್ನು ಮತ್ತು ಒಂದು ಉಂಟೆ ದಾರ ತೆಗೆದುಕೊಂಡರು. ಅನಂತರ ಮನೆಗೆ ಬೇಕಾದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಮಲ್ಲಿಗೆ ಮೊಗ್ಗುಗಳು ಒಣಗಿ ಹೋಗುತ್ತವೆಂದು ಬೇಗನೆ ಆಟೋದಲ್ಲಿ ಕುಳಿತುಕೊಂಡು ಮನೆ ತಲುಪಿದರು. ಮನೆ ತಲುಪಿದ ಮೇಲೆ ಮೊಗ್ಗುಗಳನ್ನು ನೀರಾಕಿ ಒದ್ದೆ ಬಟ್ಟೆಯಲ್ಲಿ ಸುತ್ತಿಟ್ಟರು.
ಮಧ್ಯಾಹ್ನ ನಾಲ್ಕು ಗಂಟೆಗೆ ಎಲ್ಲವನ್ನೂ ತೆಗೆದುಕೊಂಡು ಚಾಪೆ ಹಾಸಿಕೊಂಡು ನಾಲ್ವರು ಕುಳಿತುಕೊಂಡರು. ಅಲಮೇಲು ಮೊಗ್ಗಿನ ಜಡೆ ಕಟ್ಟುವುದರಲ್ಲಿ ಎತ್ತಿದ ಕೈಯಾದ್ದರಿಂದ ಯಾರನ್ನೂ ಕರೆಯದೇ ಅವರೇ ಕುಳಿತುಕೊಂಡರು. ಆದರೆ ಪಕ್ಕದ ಮನೆ ಧರಣಿ ಸರಿಯಾದ ಸಮಯಕ್ಕೆ ಬಂದು ಅವರ ಜೊತೆಗೆ ಸೇರಿಕೊಂಡಳು. ಇಬ್ಬರೂ ಹುಡುಗಿಯರಿಗೆ ಉದ್ದವಾದ ಕೂದಲು ಇರುವುದರಿಂದ ಮೊಗ್ಗಿನ ಜಡೆಗಳನ್ನು ಅವರ ಕೂದಲಿಗೆ ಜಡೆಯಾಕಿ ಕಟ್ಟಬಹುದಾಗಿತ್ತು. ಗಂಟೆ ಐದರ ಒಳಗೆ ಮೊಗ್ಗಿನ ಜಡೆಗಳನ್ನು ಕಟ್ಟಿ ಮುಗಿಸಲಾಯಿತು. ಅನಂತರ ಇಬ್ಬರೂ ಹುಡುಗಿಯರನ್ನು ಮುಖಗಳು ತೊಳೆದು ಪೌಡರ್ ಹಾಕಿಕೊಂಡು ಬರುವಂತೆ ಹೇಳಿ ಇಬ್ಬರಿಗೂ ಮೊಗ್ಗಿನ ಜಡೆಗಳನ್ನು ಇಟ್ಟು ಕಟ್ಟಲಾಯಿತು. ಹಣೆಗೆ ಬೊಟ್ಟುಗಳನ್ನಿಟ್ಟು ಹಣೆಯ ಮೇಲೆ ಹೊಳೆಯುವ ನಕಲಿ ಒಡವೆಗಳನ್ನು ಇಳಿಬಿಡಲಾಯಿತು. ಕತ್ತು, ಕಿವಿಗಳಿಗೂ ನಕಲಿ ರೋಲ್ಡ್ ಗೋಲ್ಡ್ ಆಭರಣಗಳನ್ನು ಹಾಕಲಾಯಿತು. ಚಿನ್ನದ ಗಣಿಗಳಲ್ಲಿ ಗಣಿ ಕಾರ್ಮಿಕರು ತಮ್ಮ ಇಡೀ ಜೀವನ, ಶಿಲೆಗಳ ಜೊತೆಗೆ ಹೋರಾಡಿ ಚಿನ್ನ ತೆಗೆದರೂ ಅವರ ಹೆಣ್ಣುಮಕ್ಕಳು ಮಾತ್ರ ಬದುಕಿನ ಉದ್ದಕ್ಕೂ ಒಂದೇ ಒಂದು ಎಳೆ ಬಂಗಾರದ ಒಡವೆಯನ್ನು ಸಹ ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಚರಿತ್ರೆಯ ಅತಿ ದೊಡ್ಡ ವಿಪರ್ಯಾಸ! ಯಾರೋ ಅಲ್ಲೊಬ್ಬರು ಇಲ್ಲೊಬ್ಬರು ಬಡ್ಡಿ ವ್ಯಾಪಾರ ಮಾಡುವವರ ಹೆಣ್ಣುಮಕ್ಕಳ ಚಿನ್ನದ ಒಡವೆಗಳನ್ನು ಧರಿಸುತ್ತಿದ್ದರು.
ಸಾಯಂಕಾಲ ಹುಡುಗಿಯರಿಬ್ಬರು ಲಂಗಾ ದಾವಣಿ ಉದ್ದನೆ ಮೊಗ್ಗಿನ ಜಡೆಗಳನ್ನು ಹಾಕಿಕೊಂಡು ಮನೆ ಹೊರಗೆ ಕಲ್ಲಿನ ಮೇಲೆ ಕುಳಿತುಕೊಂಡು ಚೌಕಾಬಾರಾ ಆಡುತ್ತಿದ್ದರು. ಕನಕ, ಅಲಮೇಲು ಮನೆ ಒಳಗೆ ಕುಳಿತುಕೊಂಡು ಮಾತನಾಡುತ್ತಿದ್ದರು. ಕನಕ, “ನನ್ನ ಮಗ ಬಂದು ಸುಶೀಲಾನ ನೋಡಲಿ. ಆ ಮೇಲೆ ಸುಶೀಲಾನ ಹೇಗೆ ಮದುವೆ ಮಾಡಿಕೊಳ್ಳುವುದಿಲ್ಲ ಅನ್ನುತ್ತಾನೊ ನೋಡೋಣ” ಎಂದಳು. ಕನಕಳ ಮಾತಿಗೆ ಅಲಮೇಲು ಸಣ್ಣದಾಗಿ ನಕ್ಕಳು. ಬೀದಿಯಲ್ಲಿ ಬರುವವರು ಹೋಗುವವರು ಹುಡುಗಿಯರನ್ನು ನೋಡಿಕೊಂಡು ಹೋಗುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಅವರಿಬ್ಬರ ಸುತ್ತಲೂ ನಿಂತುಕೊಂಡು ಹೂವಿನ ಜಡೆಗಳನ್ನು ಮತ್ತು ಅವರಿಬ್ಬರನ್ನೂ ನೋಡಿ ಒಳಗೊಳಗೆ ನಾವೂ ಇಂತಹ ಮಲ್ಲಿಗೆ ಮೊಗ್ಗಿನ ಜಡೆಗಳನ್ನ ಹಾಕಿಕೊಂಡರೆ ಹೇಗಿರುತ್ತದೆ ಎನ್ನುವ ಕನಸಿನಲ್ಲಿ ನಿಂತಕಡೆಯೇ ತೇಲಾಡುತ್ತಿದ್ದರು. ಪಕ್ಕದ ಮನೆಗಳ ಕೆಲವು ಮಹಿಳೆಯರು ಬಂದು “ಯಾರು ಈ ಮೊಗ್ಗಿನ ಜಡೆಗಳನ್ನು ಹಾಕಿದ್ದು?” ಎಂದಾಗ ಪಕ್ಕದಲ್ಲಿದ್ದ ಮಹಿಳೆಯೊಬ್ಬರು “ಇನ್ಯಾರು ಅಲಮೇಲು. ವೆಲ್ಲೂರು ಕಡೆಯವರು ಹೂಕಟ್ಟುವುದರಲ್ಲಿ ತುಂಬಾ ಫೇಮಸ್ ಅಲ್ಲವೇ?” ಎಂದಳು. ಬಂದವರೆಲ್ಲ “ತುಂಬಾ ಚೆನ್ನಾಗಿದೆ” ಎಂದು ಹೊಗಳುತ್ತಿದ್ದರು.
ಅಷ್ಟರಲ್ಲಿ ಕಾರ್ಮಿಕರ ಯುನಿಯನ್ ಮುಖ್ಯಸ್ಥ ಅಯ್ಯಪ್ಪ ಮತ್ತು ಇನ್ನೊಬ್ಬರು ಮನೆಯ ಹತ್ತಿರಕ್ಕೆ ಬಂದು “ಮಣಿ ಮಣಿ” ಎಂದು ಕರೆದರು. ಕನಕ ಹೊರಕ್ಕೆ ಬಂದು “ಏನಣ್ಣ? ಬನ್ನಿ ಕುಳಿತುಕೊಳ್ಳಿ. ಮಣಿ ಎಲ್ಲಿಗೋ ಹೋಗಿದ್ದಾನೆ” ಎಂದಳು. ಅಯ್ಯಪ್ಪ, “ನಿಮಗೊಂದು ಒಳ್ಳೆ ಸುದ್ದಿ ತಂದಿದ್ದೀನಮ್ಮ. ಸೆಲ್ವಮ್ ಕೆಲಸ ಮಾಡುತ್ತಿದ್ದ ಗಣಿಯಲ್ಲೇ ಮಣಿಗೆ ಕೆಲಸ ಸಿಕ್ಕಿದೆ. ಈ ಆರ್ಡರ್ ಕಾಪಿ ಅವನಿಗೆ ಕೊಟ್ಟು ನಮ್ಮನ್ನ ಬಂದು ನೋಡುವುದಕ್ಕೆ ಹೇಳಿ” ಎಂದರು. ಕನಕ ಅಲಮೇಲುಳನ್ನು ಹೊರಕ್ಕೆ ಕರೆದು ಆರ್ಡರ್ ಕಾಪಿಯನ್ನು ತೆಗೆದುಕೊಳ್ಳುವಂತೆ ಹೇಳಿದಳು. ಅಲಮೇಲು ಹೊರಕ್ಕೆ ಬಂದು ಆರ್ಡರ್ ಕಾಪಿಯನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡಳು. ಅಯ್ಯಪ್ಪನನ್ನು ಟೀ ಕುಡಿಯುವಂತೆ ವಿನಂತಿಸಿಕೊಂಡು, ಅವರು ಬೇರೆ ಕೆಲಸ ಇದೆ ಎಂದು ಹೊರಟುಹೋದರು. ಕನಕ ಗಂಡನನ್ನು ನೆನಪು ಮಾಡಿಕೊಂಡು ಭಾವುಕಳಾಗಿ “ಈ ಗಣಿ ಸಹವಾಸವೇ ಬೇಡ ಎಂದುಕೊಂಡರೂ ಅದನ್ನು ಬಿಟ್ಟರೆ ನಮಗೆ ಬೇರೆ ದಾರಿಯೇ ಇಲ್ಲ” ಎಂದಳು. ಅಲಮೇಲು, “ಕನಕ ನಮ್ಮ ತಮಿಳ್‌ನಾಡ್‌ನಲ್ಲಿ ಬಂದು ನೋಡು. ಜನರು ಹೇಗೆ ಬದುಕ್ತಾ ಇದ್ದಾರೆ ಅಂತ. ಕೆಜಿಎಫ್ ಗಣಿಗಳು ನಮ್ಮಂತವರಿಗೆ ಸ್ವರ್ಗ ಅಲ್ಲವೆ? ಹುಟ್ಟು ಸಾವು ಇದ್ದೇಇದೆ. ನಮ್ಮ ಸುಶೀಲಾನಾ ಮಣಿ ಮದುವೆ ಮಾಡಿಕೊಂಡುಬಿಟ್ಟರೆ ಸಾಕು. ನಾನೂ ನಿಮ್ಮಣ್ಣ ಇಬ್ಬರೂ ತಂಬಾ ನೆಮ್ಮದಿ ಆಗ್ಬಿಡ್ತೀವಿ. ತಾಯಿ ಉದ್ದಂಡಮ್ಮಾಳ್ ಅದೊಂದು ಕೋರಿಕೆ ನೆರವೇರಿಸಿಕೊಟ್ಟರೆ ಸಾಕು” ಎಂದು ಕೈಎತ್ತಿ ಮುಗಿದಳು.
ಕನಕ, “ಈಹೊತ್ತು ಒಳ್ಳೆ ದಿನಾ ನೋಡು. ಹೆಣ್ಣುಮಕ್ಕಳಿಬ್ಬರಿಗೂ ಹೂಜಡೆ ಹಾಕಿದ್ದೆ ಮಣಿಗೆ ಕೆಲಸ ಬಂತು. ಅದರಲ್ಲೂ ಸುಶೀಲ ತುಂಬಾ ಅದೃಷ್ಟವಂತೆ. ದೇವರೆ ಸುಶೀಲಾನ ಮಣಿಗೆ ಮದುವೆ ಮಾಡಿಸಿಬಿಡಪ್ಪ” ಎಂದು ಕೈಎತ್ತಿ ಪ್ರಾರ್ಥಿಸಿದಳು. ಅಲಮೇಲು, ಕನಕಳ ಕೈಗಳನ್ನು ಹಿಡಿದುಕೊಂಡು ಹಣೆಗೆ ಇಟ್ಟುಕೊಂಡಳು. ಕನಕ, “ಸುಶೀಲ, ಸುಮತಿ ಕತ್ತಲಾಯಿತು ಒಳಗಡೆ ಬನ್ನಿ” ಎಂದು ಕರೆದಿದ್ದೆ ಅವರಿಬ್ಬರು ಚೌಕಾಬಾರಾ ಆಡುವುದನ್ನು ನಿಲ್ಲಿಸಿ ಮನೆ ಒಳಕ್ಕೆ ಬಂದರು. ಕನಕ ಉಪ್ಪು ಮತ್ತು ಮೆಣಸಿನ ಕಾಯಿಗಳನ್ನು ತೆಗೆದುಕೊಂಡು ಇಬ್ಬರ ಮುಖಗಳಿಗೆ ಮೂರು ಸುತ್ತು ಸುತ್ತಿ ಬೆಂಕಿಗೆ ಹಾಕಿದಳು. ಅವು ಪಟಪಟ ಎಂದು ಜೋರಾಗಿ ಸದ್ದು ಮಾಡಿದವು. ಮತ್ತೆ ಪೊರಕೆ ಕಡ್ಡಿಗಳನ್ನು ತೆಗೆದುಕೊಂಡು ಬೆಂಕಿ ಹೊತ್ತಿಸಿ ಇಬ್ಬರ ಮುಖಗಳ ಮುಂದೆ ಮೂರು ಸಲ ದೀವಿಸಿ ಇಬ್ಬರನ್ನೂ ತುಃ ತುಃ ಎಂದು ಉಗಿಯುವಂತೆ ಹೇಳಿದಳು. ಅನಂತರ ಮೂರು ಸಲ ಅವರ ಮುಂದೆ ದೀವಿಸಿ ಗೋಡೆಯ ಮೂಲೆಯಲ್ಲಿ ನಿಲ್ಲಿಸಿದಳು. ಅವೂ ಕೂಡ ಪಟಪಟನೆ ಉರಿದು ಬೂದಿಯಾಗಿ ನೆಲಕ್ಕೆ ಬಿದ್ದವು. ಬಿದ್ದ ಬೂದಿಯನ್ನು ಬೆರಳುಗಳಲ್ಲಿ ತೆಗೆದುಕೊಂಡ ಕನಕ ಇಬ್ಬರು ಹುಡುಗಿಯರ ಅಂಗೈಗಳ ಮಧ್ಯೆ ಮತ್ತು ಎಡಗಾಲಿನ ಹೆಬ್ಬೆರಳುಗಳ ಕೆಳಗೆ ಬೊಟ್ಟಿನಂತೆ ಇಟ್ಟಳು. ಕನಕ ಮತ್ತು ಅಲಮೇಲುಗೆ ಈಗ ಏನೋ ಸಮಾಧಾನವಾಗಿತ್ತು.
(ಹಿಂದಿನ ಕಂತು: ಕಲ್ಲುಬಂಡೆ ಮೇಲೆ ಕುಳಿತಿದ್ದ ಸೆಲ್ವಂ, ಸತ್ತುಹೋದನು)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.