ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್. ಎಸ್. ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ
ಚಿಕ್ಕವರಿದ್ದಾಗ ಆಕಾಶವಾಣಿಯಲ್ಲಿ ಪದೇಪದೇ ಮೂಡಿಬರುತ್ತಿದ್ದ ಹಾಡು…..
ರೆಕ್ಕೆ ಇದ್ದರೆ ಸಾಕೇ?
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ
ಚಿನ್ನಾರಿ ಮುತ್ತ ಚಲನಚಿತ್ರದ ಹಾಡು ಮನೆಮಾತಾಗಿದ್ದ ಸಮಯವದು.
ಎಷ್ಟೊಂದ್ ಜನ,
ಇಲ್ಲಿ ಯಾರು ನನ್ನೋರು
ಎಷ್ಟೊಂದ್ ಮನೆ,
ಇಲ್ಲಿ ಎಲ್ಲಿ ನಮ್ಮನೆ
ಎಷ್ಟೊಂದು ಅರ್ಥಗರ್ಭಿತ ಸಾಲುಗಳು. ಆ ಪದಗಳ ಅರ್ಥ ಮತ್ತು ಅದರ ಹಿಂದೆ ಇದ್ದದ್ದು ಹೆಚ್ ಎಸ್ ವಿ ಅಂತ ತಿಳಿಯುವುದಕ್ಕೆ ಇನ್ನೂ ಸ್ವಲ್ಪ ಸಮಯ ಹಿಡಿಯಿತು.
ಇಡೀ ಒಂದು ಸಮಾಜದ ಸಮಗ್ರ ಚಿತ್ರಣ ಅದು ಹೇಗೆ ಒಂದು ಮಕ್ಕಳ ಹಾಡಿನಲ್ಲಿ ಹಿಡಿದಿಟ್ಟರು. ಈ ಎರಡು ಸಾಲುಗಳನ್ನೇ ನೋಡಿ. ಕೇವಲ ಒಂದು ಪದದ ಅಂತರದಲ್ಲಿ ಎಷ್ಟು ಅರ್ಥಗಳು!
ಕಣ್ಣು ಮೂಗು ಕಾಣದ ಹಾಗೆ
ಬಣ್ಣ ಮೆತ್ತಿದ ಅಕ್ಕ-ತಂಗಿ
ಕಣ್ಣು ಮೂಗು ಕಾಣದ ಹಾಗೆ
ಮಣ್ಣು ಮೆತ್ತಿದ ಅಕ್ಕ-ತಂಗಿ
ನಂತರ ಟಿ ಎನ್ ಸೀತಾರಾಮ್ ಅವರ ‘ಮುಕ್ತ’ ಧಾರವಾಹಿ ಕನ್ನಡದ ಮನೆ ಮಾತಾದ ಸಮಯ. ಆ ಧಾರವಾಹಿಯಷ್ಟೇ ಪ್ರಸಿದ್ಧವಾಗಿದ್ದು ಅದರ ಶೀರ್ಷಿಕೆ ಗೀತೆ. ಆ ಶೀರ್ಷಿಕೆ ಗೀತೆಯಲ್ಲಿ ಈ ಸಾಲುಗಳು
ದೂರದಿಂದ ಜೀವ ಹಿಂಡುತ್ತಿದೆ
ಕಾಣದೊಂದು ಹಸ್ತ
ಎಂದು ಆದೇವು
ನಾವು ಬಂಧಮುಕ್ತ
ಜಾಗತೀಕರಣಕ್ಕೆ ಭಾರತ ಆಗ ತಾನೇ ತನ್ನ ಬಾಗಿಲು ತೆರೆಯುತ್ತಿದ್ದ ಸಮಯದಲ್ಲಿ ಮುಕ್ತ ಬಂದದ್ದು. ದಿನನಿತ್ಯದ ಕಟ್ಟುಪಾಡುಗಳ ಬಗ್ಗೆ ಇಲ್ಲಿ ಹೇಳಿರುವುದೇ? ಅಥವಾ ಜಾಗತೀಕರಣದ ಸಂಕೀರ್ಣಗಳನ್ನು ತೆರೆದಿಟ್ಟರೆ? ಅದು ಹೇಗೆ ಹೆಚ್ಎಸ್ ವಿ ಇಷ್ಟು ಸೂಕ್ಷ್ಮವಾಗಿ ಗ್ರಹಿಸಿಕೊಟ್ಟರು!
ಮುಂದೆ ಹೆಚ್.ಎಸ್.ವಿ. ಯವರ ಕೃಷ್ಣ ಮಾಧವರ ಪ್ರಪಂಚ ತೆರೆದುಕೊಳ್ಳಲು ಹೆಚ್ಚು ಸಮಯಬೇಕಾಗಲಿಲ್ಲ. ಆ ವಯಸ್ಸೇ ಆಗಿತ್ತು….
ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ
ರಾಧೆ ಮತ್ತು ಮಾಧವರ ಪ್ರೀತಿ ಮಾತು ಇಷ್ಟವಾಗಿ ಅರ್ಥವಾಗುತ್ತಿದ್ದ ಸಮಯ. ಕವಿಗಳು ‘ತೆತ್ತ’ ಎಂದರೇಕೆ ಎನ್ನುವ ಕುತೂಹಲ ಮೂಡುತ್ತಿದ್ದ ಸಮಯ.

ರಾಧೆಯ ಮನಸ್ಥಿತಿಯನ್ನು ಹೆಚ್.ಎಸ್.ವಿ. ಯವರಷ್ಟು ನಿಕಟವಾಗಿ ಕನ್ನಡದಲ್ಲಿ ವರ್ಣಿಸಿದವರು ಕಡಿಮೆ..
ಮಧುರೆಗೆ ಹೋದನು ಮಾಧವ
ಬರುವನೋ ಬಾರನೋ ಹೋದವ
ಗೋಕಲದಿಂದ ಮಧುರೆಗೆ ಮಾಧವ ಹೋದ ಮೇಲೆ ರಾಧೆಯ ತಳಮಳವನ್ನು ‘ಬರುವನೋ ಬಾರನೋ’ ಎನ್ನುವ ಪದ ಲಾಲಿತ್ಯದಲ್ಲಿ ಮನಸ್ಸಿಗೆ ಮುಟ್ಟಿಸಿಬಿಟ್ಟರು.
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.
ಇದರಲ್ಲಂತೂ ಹೆಚ್.ಎಸ್.ವಿ. ರಾಧೆಯನ್ನು ಕೃಷ್ಣನ ಕಣ್ಣಿಗೆ ಹೋಲಿಸುವಷ್ಟರಲ್ಲಿಯೇ, ಮುಂದೆ ಅದೇ ಕವನದಲ್ಲಿ ಪ್ರೀತಿಯಲ್ಲಿನ ಪರಿತಾಪ ಬಿಚ್ಚಿಡುವ ಪರಿ ಸೊಬಗಿನದು.
ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.
‘ಯಾರೋ ಮೋಹನ ಯಾವ ರಾಧೆ’ ಎನ್ನುವ ಮೂಲಕ ಮೋಹನ ರಾಧೆಯರ ರೂಪದಲ್ಲಿ ಪ್ರೀತಿ ನಿರಂತರ ಅದು ಕಾಲಾತೀತವೆಂದು ಹೇಳಿಕೊಟ್ಟವರು.
ಪ್ರೀತಿ ಇರುವ ಕಡೆ ಹೃದಯವೇದನೆ ಸಹಜ. ಕಳೆದು ಹೋದ ಪ್ರೀತಿಯ ನೆನಪುಗಳ ಯಾನದಲ್ಲಿ ಕಳೆದುಹೋಗುವಂತೆ ಮಾಡುವ ಅವರ ಈ ಕವನ.
ಆ ನೀಲಿ ಕೊಳವನ್ನು ಪ್ರೀತಿಸುವೆ ನಾನು
ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ
ಆ ಮುರುಕು ಮಂಟಪವ ಪ್ರೀತಿಸುವೆ ನಾನು
ಅಲ್ಲೆ ಒಲಿದಿತ್ತು ನನ್ನ ಆ ಕಪ್ಪು ಹುಡುಗಿ
ನೀಲಿ ಕೋಳ, ಮುರುಕು ಮಂಟಪ, ದೇವಕಣಿಗಿಲೆಗಳ ಮೂಲಕ ಅದೆಷ್ಟು ಒಡೆದ ಹೃದಯಗಳನ್ನು ಮೀಟಿ ಬಿಟ್ಟರು ಹೆಚ್.ಎಸ್.ವಿ.!
ಪ್ರೀತಿಯಿಂದ ದಾಂಪತ್ಯಕ್ಕೆ ತೇರ್ಗಡೆಗೊಂಡು, ಅಲ್ಲಿ ಪ್ರೀತಿ ಎಂಬ ತೂಗುಮಂಚದಲ್ಲಿ ತೇಲುವಾಗ ಹೆಚ್.ಎಸ್.ವಿ ಅವರ ಈ ಉತ್ಕಟ ಪ್ರಣಯ ಗೀತೆಯ ಅಪಾರ ಆಯಾಮ ಅರಿವಾಗತೊಡಗಿದ್ದು…
ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು
ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು
ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತಿದ್ದಳು
ಅದೇನು ಉತ್ಕರ್ಷ ಎಂತಹ ರಸಸ್ವಾದ …. ಸುಮ್ಮನೆ ಕಣ್ಣುಮುಚ್ಚಿ ಸಾಲು ಕೇಳುತ್ತಾ ನಮ್ಮ ನಾವೇ ಕಳೆದುಕೊಳ್ಳುವ ಅನುಭೂತಿ …
ಉತ್ಕರ್ಷದ ಬೆನ್ನಲ್ಲಿ ಇಣುಕುವುದು ಕೆಲವೊಮ್ಮೆ ಸಂಘರ್ಷ…
ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ
ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ
ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ …
ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ
ಮಗಳಂತೂ ಈ ಹಾಡು ತನಗೇ ಬರೆದಿದ್ದು ಎನ್ನುವಂತೆ ಅದರ ಸಾಲುಗಳನ್ನು ತನ್ನ ಮುದ್ದಾದ ಮಾತುಗಳಲ್ಲಿ ಹೇಳುತ್ತಾ , ಅದರ ಸಾಹಿತ್ಯವನ್ನು ತನಗೆ ಬೇಕಾದಂತೆ ಬದಲಿಸುತ್ತಾ ಹಾಡುತ್ತಿದ್ದಾಗ ಅನಿಸಿದ್ದು ಒಬ್ಬ ಕವಿ-ಕಲಾವಿದ ಕಾಲಾತೀತವಾಗುವುದೇ ಈ ಸ್ತರದಲ್ಲಿ…
ಅದೇ ಮಗಳು ಹದಿವಯಸ್ಸಿಗೆ ಕಾಲಿಡುವಾಗ ಮತ್ತೆ ಹೆಚ್.ಎಸ್.ವಿ ಅವರ ಈ ಕವನದ ಕನ್ನಡಿಯ ಮೂಲಕ ನೋಡುವ ಸಂಭ್ರಮ …
ಹುಚ್ಚು ಖೋಡಿ ಮನಸು
ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು
ಮರುಘಳಿಗೇ ಮೌನ
ಬಾಲ್ಯ, ಯೌವನ, ಪ್ರೀತಿ, ಭಗ್ನ ಪ್ರೇಮ, ಪ್ರಣಯ, ವಿರಹ, ದಾಂಪತ್ಯ… ಹೀಗೆ ನಮ್ಮ ನಿಜಜೀವನದ ಎಲ್ಲಾ ಹಂತಗಳಿಗೂ ಹಿನ್ನಲೆ ಹಾಡು ಒದಗಿಸಿದವರು ಹೆಚ್.ಎಸ್.ವಿ.
ಇವುಗಳ ಜೊತೆಯಲ್ಲಿಯೇ ಜೀವನದ ಸಾರವನ್ನು ನವಿರಾಗಿ ಹೇಳಿಕೊಟ್ಟಿದ್ದು ಹೆಚ್.ಎಸ್.ವಿ.
ಇರಬೇಕು ಇರುವಂತೆ
ತೊರೆದು ಸಾವಿರ ಚಿಂತೆ
ಮಳೆಸುರಿಸಿ ಹಗುರಾದ
ಮುಗಿಲಿನಂತೆ..
ಬುದ್ಧನನ್ನು ಆಳವಾಗಿ ಅಧ್ಯಯನ ಮಾಡಿ ಅರಿತಿದ್ದ ಕವಿಗೆ, ಸಂಸಾರ ಚಕ್ರದಲ್ಲಿರುವವರಿಗೆ ಮಾರ್ಗದರ್ಶನ ಮಾಡಿದ್ದು ಈ ಸುಂದರ ಸಾಲುಗಳಲ್ಲಿ …
ಕನ್ನಡದ ಸಾಹಿತ್ಯ, ಭಾವಗೀತೆ, ಸಿನಿಮಾ, ಕಿರುತೆರೆ, ನಾಟಕರಂಗ, ಅಧ್ಯಾತ್ಮ, ಸಾರಸ್ವತ ಲೋಕವನ್ನು ಇನ್ನೊಂದು ವಿಸ್ತಾರಕ್ಕೆ ಇನ್ನೊಂದು ಎತ್ತರಕ್ಕೆ ಬೆಳಸಿದವರು ಹೆಚ್.ಎಸ್.ವಿ..
ಆದರೆ ಈಗ ಅವರು ಒಂದು ನೆನಪು …

ರಾಧ-ಕೃಷ್ಣರ ಪ್ರಸ್ತಾಪ ಬರುವಾಗ, ತುಂಟ ಬೆಣ್ಣೆಕೃಷ್ಣನ ನೆನೆವಾಗ, ತೂಗುಮಂಚದಲ್ಲಿ ಜೀಕುವಾಗ, ಹದಿಹರೆಯದ ಹುಚ್ಚುಖೋಡಿ ಮನಸ್ಸುಗಳನ್ನು ನೋಡಿದಾಗ…. ಕನ್ನಡದಲ್ಲಿ ಜನಮಾನಸದಲ್ಲಿ ಮೂಡುವುದು ಹೆಚ್.ಎಸ್.ವಿ !
ಸಾವಿರ ಚಿಂತೆಯ ತೊರೆದು ಮಳೆ ಸುರಿಸಿ ಹಗುರಾದ ಲೋಕದ ತೂಗುಮಂಚದಲ್ಲಿ ಈಗ ಕೂತಿರುವ ಕವಿಗಳಿಗೆ ನಮನ


ಅತ್ಯಂತ ಆಪ್ತತೆಯಿಂದ ಓದಿಸಿಕೊಂಡು ಹೋದ ಬರಹ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿ ಎಚ್ ಎಸ್ ವ್ಹಿ. ತಮ್ಮ ಬರಹಗಳ ಮುಖಾಂತರ ನಮ್ಮ ಮನಗಳಲ್ಲಿ ಅವರು ಎಂದೆಂದಿಗೂ ಜೀವಂತ
ಅತ್ಯುತ್ತಮವಾಗಿ ಬರೆಯಲಾಗಿದೆ; ಸರ್ ಅವರ ಎಲ್ಲ ಅದ್ಭುತ ಬರಹಗಳನ್ನು ಒಳಗೊಂಡಿದೆ. ಅವರು ಕನ್ನಡ ಸಾಹಿತ್ಯ, ನಾಟಕ, ಮತ್ತು ಭಾವಗೀತೆಗಳಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ. ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡ ಭಾಷೆಯ ವೈಭವವನ್ನು ಹೆಚ್ಚಿಸಿದರು. ಅವರ ಹಾಡುಗಳು ಕನ್ನಡದ ಹೃದಯಭಾವನೆಗಳನ್ನು ಪ್ರತಿಬಿಂಬಿಸುತ್ತವೆ.