ಬದುಕಿನ ಅನಿಶ್ಚಿತತೆ, ಮನುಷ್ಯನ ಬದುಕಿನಲ್ಲಿ ವಿಧಿಯು ಆಡುವ ಆಟ, ಎಷ್ಟೇ ಪ್ರಯತ್ನ ಮಾಡಿದರೂ ತನ್ನ ವಿಧಿಯಲ್ಲಿ ಬರೆದ ದುರಂತದಿಂತ ತಪ್ಪಿಸಿಕೊಳ್ಳಲಾಗದ ಮನುಷ್ಯನ ಅಸಹಾಯಕತೆ – ಇವುಗಳನ್ನು ಈ ಮಹಾನ್ ನಾಟಕ ಮನೋಜ್ಞವಾಗಿ ಹೇಳುತ್ತದೆ. ಒಂದು ಸಂದರ್ಭದಲ್ಲಿ `ಅಯ್ಯೋ, ದುರ್ವಿಧಿಯೇ? ನಾಳೆ ಎಂಬುದು ಏನೆಂದು ಗೊತ್ತಿರದ ಮನುಷ್ಯನ ಪಾಡೆ!! ಓಹ್ …. ಅಯ್ಯೋ .., ಸಾಯುವವರೆಗೂ ಯಾರನ್ನೂ ಸುಖಿ ಅನ್ನಬೇಡ’’ ಎಂಬ ಮಾತನ್ನು ನಾಟಕಕಾರ ಸಫೋಕ್ಲಿಸ್ ಒಂದು ಎಚ್ಚರಿಕೆಯೆಂಬಂತೆ, ಒಂದು ಪಾತ್ರದ ಬಾಯಿಂದ ಹೇಳಿಸಿದ್ದಾನೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೇಳನೆಯ ಬರಹ
“ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.
ಹಲವುತನದ ಮೈಮರೆಸುವಾಟವಿದು ನಿಜವು ತೋರದಲ್ಲ”
– ಎಂ.ಗೋಪಾಲಕೃಷ್ಣ ಅಡಿಗ (`ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ’ ಕವಿತೆಯಿಂದ)
ನಮ್ಮ ನವ್ಯಕಾವ್ಯದ ಈ ಆದ್ಯಕವಿ ಯಾವ ಗಳಿಗೆಯಲ್ಲಿ ಈ ಸಾಲುಗಳನ್ನು ಬರೆದರೋ ಏನೋ, ಇದು ಮನುಷ್ಯನ ಬದುಕಿಗೊಂದು ನಿತ್ಯಸತ್ಯವಾದ ಭಾಷ್ಯವಾಗಿಬಿಟ್ಟಿದೆ. ಹೌದು. ಬಾಳನ್ನು ತಿಳಿಯುವುದು ಸುಲಭ ಅಲ್ಲ. ತಿಳಿದೆ ಎಂದು ನಾವು ಒಂದು ಗಳಿಗೆ ಮೆರೆದೆವು ಅನ್ನಿ, ಮರುಗಳಿಗೆಗೆ ಅದು ಬದಲಾಗಿ `ನೋಡೀಗ, ಏನು ಮಾಡ್ತೀಯ!?’ ಎಂದು ಸವಾಲೆಸೆದು ನಮ್ಮನ್ನು ಅಣಕಿಸುತ್ತದೆ!! ಮನುಷ್ಯನೆಂಬ ವಿದ್ಯಾರ್ಥಿಯು `ಒಟ್ಟು ಬದುಕು ಮತ್ತು ನನ್ನ ಬದುಕು’ ಎಂಬ ವಿಷಯವನ್ನು ಕುರಿತು ತನಗೆ ಲಭ್ಯವಿರುವ ಪ್ರಶ್ನೆಪತ್ರಿಕೆ ಹಿಡಿದು `ಅಹಾ, ನಾನು ಎಲ್ಲಕ್ಕೂ ಉತ್ತರ ಬರೆಯಲು ಸಿದ್ಧನಾದೆನಲ್ಲ! ನಾನೆಂತಹ ಜಾಣ!!’ ಅಂದುಕೊಳ್ಳುವಷ್ಟರಲ್ಲಿ ಬದುಕೆಂಬ ಶಿಕ್ಷಕ ಇವನಿಗೆ ಸಂಬಂಧಿಸಿದ ಪ್ರಶ್ನೆಪತ್ರಿಕೆಯಲ್ಲಿ ಪಠ್ಯಭಾಗವನ್ನೇ ಬದಲಾಯಿಸಿರುತ್ತಾನೆ! ಓದದೆಯೇ ಶಾಲಾಪರೀಕ್ಷೆಗೆ ಬಂದ ವಿದ್ಯಾರ್ಥಿಯಂತೆ ತಬ್ಬಿಬ್ಬಾಗಿ, ಕಣ್ಣು ಕಣ್ಣು ಬಿಡುತ್ತಾ ಕೂರುವ ಪಾಡು ಆ ಮನುಷ್ಯನದು.
ತರಗತಿಯಲ್ಲಿ ಮಕ್ಕಳಿಗೆ/ಹದಿಹೆರಯದವರಿಗೆ/ನವಯೌವನಿಗರಿಗೆ ಪಾಠ ಮಾಡುವ ವೃತ್ತಿಯಲ್ಲಿರುವ ನನ್ನಂತಹ ಶಿಕ್ಷಕ ವೃತ್ತಿಯವರು ತರಗತಿಯ ನಾಲ್ಕು ಗೋಡೆಗಳ ಒಳಗೆ, ನಮ್ಮ ನಮ್ಮ ಅಧ್ಯಯನ ವಿಷಯಗಳಿಗೆ ಸಂಬಂಧಿಸಿದಂತೆ `ಪಾಠ ಮಾಡುವುದರಲ್ಲಿ ನಾನು ಸೈಸೈ, ನನಗೆ ಜೈಜೈ’ ಎಂದು ಎಷ್ಟೇ ಖುಷಿ ಪಟ್ಟರೂ, ಬದುಕಿನ ಮಟ್ಟಿಗೆ ನಾವು ಸಹ ವಿದ್ಯಾರ್ಥಿಗಳೆ. ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದ ಎನ್. ಆರ್. ನಾರಾಯಣಮೂರ್ತಿಯವರು ಹೇಳಿದಂತೆ `ವಯಸ್ಕ ಜೀವನದಲ್ಲಿ ಪ್ರತಿದಿನವೂ ಒಂದು ಪರೀಕ್ಷೆಯೇ.’ ಹೌದಲ್ಲವೆ? ಶಾಲೆ, ಕಾಲೇಜಿನಲ್ಲಿ ಮೊದಲು ಪಾಠ, ನಂತರ ಪರೀಕ್ಷೆ, ಆದರೆ ನಿಜ ಜೀವನದಲ್ಲಿ ಮೊದಲು ಪರೀಕ್ಷೆ, ನಂತರ ಪಾಠ.
****
ಹಾಗಾದರೆ ಅಸಲಿಗೆ ಈ ಬದುಕು ಎಂದರೇನು? `ಒಳ್ಳೆಯ ಬಾಳು’ ಎಂದರೆ ಏನು? ನಾವು ಚೆನ್ನಾಗಿ ಬಾಳಿದ್ದೇವೆಯೆ ಇಲ್ಲವೆ ಎಂದು ನಿರ್ಧಾರ ಮಾಡುವವರು ಯಾರು? ನಾವೊ ಅಥವಾ ಬೇರೆಯವರೊ? ಈ ಬದುಕು ಈ ಭೂಮಿಗೆ ಮುಗಿಯುತ್ತದೊ? ಅಥವಾ ಸಾವಿನ ನಂತರ ಮುಂದುವರಿಯುತ್ತದೊ? “ಇಲ್ಲೇ ಸ್ವರ್ಗ ಇಲ್ಲೇ ನರಕ ಮೇಲೇನಿಲ್ಲ ಸುಳ್ಳು, ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು” ಎಂದು ಒಬ್ಬ ಸಿನಿಮಾಕವಿ ಹೇಳಿದ್ದು ಸರಿಯೊ? ಅಥವಾ `ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂದು ಹರಿದಾಸರು ಹೇಳಿದ್ದು ಸರಿಯೊ? ಬದುಕನ್ನು ಸ್ವಲ್ಪ ಮಟ್ಟಿಗಾದರೂ ಅರಿತವರು ಯಾರು? ಪುಟ್ಟ ಮಕ್ಕಳೊ, ಇಲ್ಲ ವೃದ್ಧರೊ? ತೃಪ್ತಿ ಅನ್ನುವುದು ಯಾರಲ್ಲಿ ನೆಲೆಸಿರುತ್ತದೆ? ಬಡವರಲ್ಲೊ ಅಥವಾ ಶ್ರೀಮಂತರಲ್ಲೊ? ಸ್ವದೇಶದಲ್ಲಿ ಉಳಿದವರಲ್ಲೊ, ವಿದೇಶಕ್ಕೆ ಹೋದವರಲ್ಲೊ? ಇಂತಹ ಪ್ರಶ್ನೆಗಳು ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತವೆ ಅಲ್ಲವೆ?
ಇನ್ನು ಎಲ್ಲರೂ ಬದುಕಿನ ಗುರಿ ಎಂದು ತಿಳಿಯುವ `ಸುಖ-ಸಂತೋಷ’ಗಳ ಮಾತಿಗೆ ಬರೋಣ. ಸುಖ, ಸಂತೋಷ ಇವು ಎಷ್ಟೊಂದು ವ್ಯಕ್ತಿನಿಷ್ಠವಾದ ಪದಗಳಲ್ಲವೆ? ಒಬ್ಬರಿಗೆ ಮಾತಿನಲ್ಲಿ ಸುಖ, ಇನ್ನೊಬ್ಬರಿಗೆ ಮೌನದಲ್ಲಿ ಸುಖ. ಒಬ್ಬರು ಏಕಾಂಗಿಯಾಗಿದ್ದರೆ ಸಂತೋಷವಾಗಿರುತ್ತಾರೆ, ಇನ್ನೊಬ್ಬರಿಗೆ ಜನರ ಜೊತೆಯಲ್ಲಿದ್ದರೆ ಸಂತೋಷ. ಕೆಲವರು ಪ್ರವಾಸದಲ್ಲಿ ತಮ್ಮ ಜೀವನದ ಸಾರ್ಥಕ್ಯ ಕಂಡರೆ ಇನ್ನು ಕೆಲವರು ಇರುವ ಜಾಗದಲ್ಲೇ ಇರಲು ಸಂತೋಷ ಪಡುತ್ತಾರೆ. ಕೆಲವರು ದೊಡ್ಡ ದೊಡ್ಡ ಸಾಧನೆ ಮಾಡುವುದರಲ್ಲಿ ಸಂತೋಷ ಕಂಡರೆ ಇನ್ನು ಕೆಲವರು ಗಿರೀಶ್ ಕಾರ್ನಾಡ್‌ರು ತಮ್ಮ `ಯಯಾತಿ’ ನಾಟಕದಲ್ಲಿ ಹೇಳಿದಂತೆ `ಸಾಮಾನ್ಯರಿಗೆ ಸಾಮಾನ್ಯತೆಯೇ ಸಾಕು’. ಬೆರಗಾಗಿಸುವ ಇನ್ನೊಂದು ವಿಷಯ ಅಂದರೆ ಮನುಷ್ಯನ ಸ್ವಂತ ಇಚ್ಛೆ, ಆಯ್ಕೆಗಳಲ್ಲೇ ಕಾಲ ಸರಿದಂತೆ ಎಷ್ಟು ಬದಲಾವಣೆ ಆಗುತ್ತದೆ ಅಂದರೆ, ಹತ್ತು ವರ್ಷಗಳ ಹಿಂದೆ ತುಂಬ ಇಷ್ಟ ಅನ್ನಿಸಿದ್ದ ವಿಷಯವು ಇವತ್ತು ಅವನಿಗೆ ಇಷ್ಟವಾಗದೆ ಹೋಗಬಹುದು! ದಿನ ಕಳೆದಂತೆ ಅವನ ಆದ್ಯತೆಗಳು ಬದಲಾಗಬಹುದು. ಜೀವನ ವಿವೇಕವನ್ನು ಬಹಳ ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ನುಡಿಯುತ್ತಿದ್ದ ಸಿದ್ಧೇಶ್ವರ ಸ್ವಾಮಿಗಳು ಒಮ್ಮೆ ಹೇಳಿದ್ದರು `ಯಾವುದೂ ಇದ್ದಂಗಿರಲ್ಲ’. ಹೌದಲ್ಲವೆ? ಬದುಕಿನ ಮಹಾಪ್ರಯಾಣದಲ್ಲಿ ಯಾವುದೂ ಇದ್ದಂಗಿರಲ್ಲ.

ಜೀವನದ ವೈಚಿತ್ರ್ಯ ಅಂದಾಗ ಗ್ರೀಕ್ ಪುರಾಣ ಕಥೆಗಳಲ್ಲಿ ಬರುವಂತಹ ಈಡಿಪಸ್ ರಾಜ ನೆನಪಾಗದೆ ಇರುವುದಿಲ್ಲ. ಪ್ರಾಚೀನ ನಾಟಕಕಾರ ಸಫೋಕ್ಲಿಸ್ ಈ ಕಥೆಯನ್ನು `ದೊರೆ ಈಡಿಪಸ್’ ಎಂಬ ಹೆಸರಿನ ಒಂದು ಅಮರ ನಾಟಕವಾಗಿಸಿದ್ದಾನೆ. ಈಡಿಪಸ್ ಹುಟ್ಟುವ ಮೊದಲೇ `ಈ ಮಗುವು ದುರದೃಷ್ಟದ ಹರಿಕಾರ. ಇವನು ಮುಂದೆ ತನ್ನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾನೆ.’ ಎಂಬ ಮೈ ನಡುಗಿಸುವ ಭವಿಷ್ಯವಾಣಿ ಮೊಳಗಿರುತ್ತದೆ. ಮಗುವು ಹುಟ್ಟಿದ ತಕ್ಷಣ ಅದರ ತಂದೆಯು ಅದನ್ನು ಸಾಯಿಸಲು ವ್ಯವಸ್ಥೆ ಮಾಡಿದರೂ ವಿಧಿಲೀಲೆಯಿಂದ ಮಗುವು ಬದುಕುಳಿಯುತ್ತದೆ. ಬೇರೆ ರಾಜ್ಯದಲ್ಲಿ ಚೆನ್ನಾಗಿ ಬೆಳೆದು ಯುವಕನಾಗುತ್ತದೆ. ಈ ಯುವಕನು ತಾನು ಹುಟ್ಟಿದ ನಗರವನ್ನು ಕಾವಲು ಕಾಯುತ್ತಿದ್ದ ಸ್ಫಿಂಕ್ಸ್ ಕೇಳಿದ ಪ್ರಶ್ನೆಗೆ ಸರಿಯುತ್ತರ ನೀಡುತ್ತಾನೆ. ಮುಂದೆ ವಿಧಿ ಹೇಳಿದಂತೆಯೇ ಆಗುತ್ತದೆ. ತನ್ನ ನಿಜವಾದ ತಂದೆ ತಾಯಿ ಯಾರು ಎಂಬ ಗುರುತು ಗೊತ್ತಿರದ ಯುವಕ ತಂದೆಯನ್ನು ಒಂದು ಕ್ಷುಲ್ಲಕ ಜಗಳದ ನೆಪದಲ್ಲಿ ಕೊಲ್ಲುತ್ತಾನೆ, ಹಾಗೂ ಸ್ಫಿಂಕ್ಸ್ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟದ್ದಕ್ಕಾಗಿ, ಆ ಊರಿಗೆ ರಾಜನಾಗಿ ಆ ರಾಜ್ಯದ ರಾಣಿಯನ್ನು ಅಂದರೆ ತನ್ನ ತಾಯಿಯನ್ನೇ ಮದುವೆ ಸಹ ಆಗುತ್ತಾನೆ! ತಾನೇ ಹಿಂದಿನ ರಾಜನನ್ನು ಕೊಂದಿದ್ದೇನೆಂಬ ಅರಿವಿಲ್ಲದೆ ರಾಜನನ್ನು ಕೊಂದವನಿಗಾಗಿ ಹುಡುಕುತ್ತಾನೆ! ಕೊನೆಗೆ, ಪೂಜಾರಿಯೊಬ್ಬನಿಂದ ನಿಜ ವೃತ್ತಾಂತವನ್ನು ಅರಿತು ಅತ್ಯಂತ ಆಘಾತಕ್ಕೊಳಗಾಗಿ ತಾನು ಮಾಡಿದ ಪಾಪಕಾರ್ಯಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಕಣ್ಣನ್ನು ಕಿತ್ತಿಸಿಕೊಂಡು ರಾಜ್ಯ ಬಿಟ್ಟು ಸೈಬೀರಿಯಾದ ಮರುಭೂಮಿಗೆ ಹೊರಟುಹೋಗುತ್ತಾನೆ. ಇವನು ತನ್ನ ಮಗನೆಂಬ ಅರಿವಿಲ್ಲದೆ ಈ ಪಾಪದ ಭಾಗವಾದ ಅವನ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಎಂತಹ ವಿಪರ್ಯಾಸ ನೋಡಿ! ಇಂದು ಮಹಾರಾಜನಾಗಿ ಮೆರೆಯುತ್ತಿದ್ದ ಈಡಿಪಸ್ ನಾಳೆ ಸೈಬೀರಿಯಾದ ಮರುಭೂಮಿಗಳಲ್ಲಿ ಕುರುಡನಾಗಿ ಅಲೆಯುವ ಪರಿಸ್ಥಿತಿ ಬರುತ್ತದೆ! ಬದುಕಿನ ಅನಿಶ್ಚಿತತೆ, ಮನುಷ್ಯನ ಬದುಕಿನಲ್ಲಿ ವಿಧಿಯು ಆಡುವ ಆಟ, ಎಷ್ಟೇ ಪ್ರಯತ್ನ ಮಾಡಿದರೂ ತನ್ನ ವಿಧಿಯಲ್ಲಿ ಬರೆದ ದುರಂತದಿಂತ ತಪ್ಪಿಸಿಕೊಳ್ಳಲಾಗದ ಮನುಷ್ಯನ ಅಸಹಾಯಕತೆ – ಇವುಗಳನ್ನು ಈ ಮಹಾನ್ ನಾಟಕ ಮನೋಜ್ಞವಾಗಿ ಹೇಳುತ್ತದೆ. ಒಂದು ಸಂದರ್ಭದಲ್ಲಿ `ಅಯ್ಯೋ, ದುರ್ವಿಧಿಯೇ? ನಾಳೆ ಎಂಬುದು ಏನೆಂದು ಗೊತ್ತಿರದ ಮನುಷ್ಯನ ಪಾಡೆ!! ಓಹ್ …. ಅಯ್ಯೋ .., ಸಾಯುವವರೆಗೂ ಯಾರನ್ನೂ ಸುಖಿ ಅನ್ನಬೇಡ’’ ಎಂಬ ಮಾತನ್ನು ನಾಟಕಕಾರ ಸಫೋಕ್ಲಿಸ್ ಒಂದು ಎಚ್ಚರಿಕೆಯೆಂಬಂತೆ, ಒಂದು ಪಾತ್ರದ ಬಾಯಿಂದ ಹೇಳಿಸಿದ್ದಾನೆ. ಈ ನಾಟಕವನ್ನು ಓದಿದ ಅಥವಾ ಈ ಕತೆಯನ್ನು ಕೇಳಿದ ಯಾರಿಗೇ ಆದರೂ ನಮ್ಮ ಬದುಕಿನಲ್ಲಿ ನಮ್ಮ ಪಾತ್ರವೆಷ್ಟು? ವಿಧಿಯದೆಷ್ಟು? ಮನುಷ್ಯ ಎಂದರೆ ಏನು? ತನ್ನಿಚ್ಛೆಯನ್ನು ಎಷ್ಟು ಮಾತ್ರಕ್ಕೂ ನಡೆಸಲಾಗದವನೇ? ಕೇವಲ ವಿಧಿಯ ಕೈಗೊಂಬೆಯೇ ಅವನು? ಎಂಬ ಪ್ರಶ್ನೆಗಳು ಮನಸ್ಸಿಗೆ ಬರುತ್ತವೆ.

ಹ್ಮ್‌ಂ… ವಿಧಿ! ಐದಾರು ವರ್ಷಗಳ ಮುಂಚೆ ತೀರಿಕೊಂಡ ನನ್ನ ಚಿಕ್ಕಮ್ಮ ನೆನಪಾಗುತ್ತಾರೆ. ನನ್ನ ತಾಯಿಯ ತಂಗಿ. ಚಿಕ್ಕಂದಿನಲ್ಲಿ ಬಹಳ ಬಡತನವಿದ್ದ ಮನೆ ಅವರದು. ಸಿಹಿತಿಂಡಿ, ಊಟ, ಚೆನ್ನಾಗಿ ಬಟ್ಟೆ ತೊಡುವುದು, ಒಡವೆ ಮಾಡಿಸಿಕೊಳ್ಳುವುದು ಮುಂತಾದ ಜೀವನದ ಸರಳಸಂಗತಿಗಳಲ್ಲಿ ಹೆಚ್ಚಿನ ರುಚಿ ಹೊಂದಿದ್ದ ಚಿಕ್ಕಮ್ಮನಿಗೆ ಅವರ ಬಡತನದ ಬಾಲ್ಯ, ಹದಿಹರೆಯಗಳು ಇವಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಸಣ್ಣಮಟ್ಟದ ಸರ್ಕಾರಿ ಉದ್ಯೋಗಿಯೊಬ್ಬರನ್ನು ಹಿರಿಯರು ನೋಡಿ ಮದುವೆ ಮಾಡಿದಾಗ ಈ ಚಿಕ್ಕಮ್ಮ ತಮ್ಮ ಕನಸುಗಳನ್ನು ಎದೆಯಲ್ಲಿಟ್ಟುಕೊಂಡೇ ಗಂಡನ ಮನೆಗೆ ಹೋದರು. ಗಂಡನ ಮನೆಯವರೂ ಅಂತಹ ಶ್ರೀಮಂತರೇನಲ್ಲ. ತೀರಾ ಹೊಟ್ಟೆಗಿಲ್ಲ ಎನ್ನುವ ಪರಿಸ್ಥಿತಿ ಇರಲಿಲ್ಲವಾದರೂ ಕೈಬಿಟ್ಟು ಹಣ ಖರ್ಚು ಮಾಡುವಂತೆಯೂ ಇರಲಿಲ್ಲ. ಮದುವೆಯಾಗುವಾಗ ಪಿಯುಸಿ ಮುಗಿಸಿದ್ದ ಚಿಕ್ಕಮ್ಮ (ಆ ಕಾಲದಲ್ಲಿ ಅಂದರೆ 1940-50ರ ವರ್ಷಗಳಲ್ಲಿ ಹೆಣ್ಣುಮಕ್ಕಳಿಗೆ ದೊಡ್ಡ ಓದು ಇದು!) ತಾನು ಕೆಲಸಕ್ಕೆ ಸೇರಿ ನಾಲ್ಕು ಕಾಸು ಸಂಪಾದಿಸುವ ಆಸೆ ಹೊತ್ತು, ತಾವಿದ್ದ ಹಳ್ಳಿಯಿಂದ ಇಪ್ಪತ್ತು ಕಿಲೊಮೀಟರ್ ದೂರ ಇದ್ದ ಪಟ್ಟಣವೊಂದರಲ್ಲಿ ನಡೆಯುತ್ತಿದ್ದ `ಶಿಶುವಿಹಾರ ಶಿಕ್ಷಕಿಯರ ತರಬೇತಿ’ಗೆ ಸೇರಿಕೊಂಡರು. ಕಷ್ಟಪಟ್ಟು ದಿನಾ ಬಸ್ಸಿನಲ್ಲಿ ಓಡಾಡಿ ತಿಂಗಳಾನುಗಟ್ಟಲೆ ಓದಿ ಆ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದರು. ನಾನು ಹೇಳುತ್ತಿರುವುದು ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು. ಸಾರಿಗೆ ಸಂಪರ್ಕ, ಸಂವಹನಗಳು ಇಷ್ಟೆಲ್ಲ ಮುಂದುವರಿಯದ ಆ ಕಾಲದಲ್ಲಿ, ಕೆಳ ಮಧ್ಯಮ ವರ್ಗದ ಒಬ್ಬ ಹೆಣ್ಣುಮಗಳಿಗೆ ಇದನ್ನು ಮಾಡುವುದು ಸುಲಭದ ಕೆಲಸವೇನಾಗಿರಲಿಲ್ಲ. ಹಾಗೂ ಛಲ ಬಿಡದೆ, ಶಿಕ್ಷಣ ಮುಗಿಸುತ್ತಿದ್ದಂತೆ ತಮ್ಮ ಊರಿನ ಶಾಲೆಯೊಂದರಲ್ಲಿ ಶಿಶುವಿಹಾರದ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ಬರುತ್ತಿದ್ದುದು ಚಿಕ್ಕ ಸಂಬಳವಾದರೂ ಅದು ತಾನು ಕಷ್ಟಪಟ್ಟು ಸಂಪಾದಿಸಿದ ಹಣ ಎಂಬ ತೃಪ್ತಿ, ಸಂತೋಷ ಇದ್ದಿರಬೇಕು ಆ ಜೀವಕ್ಕೆ. ಈ ಹಂತದಿಂದ ಅವರ ಆರ್ಥಿಕ ಸ್ಥಿತಿಗತಿ ಕೊಂಚ ಸುಧಾರಿಸಿತು. ರೇಷ್ಮೆ ಸೀರೆ ಅಂಗಡಿ, ಚಿನ್ನದ ಒಡವೆಯ ಅಂಗಡಿಗಳಲ್ಲಿ ಚೀಟಿ ಕಟ್ಟಿ ಕಟ್ಟಿ ಒಂದಿಷ್ಟು ಸೀರೆ, ಒಡವೆ ಕೊಂಡರು. `ತನ್ನ ಬಾಲ್ಯ, ಹದಿಹರೆಯಗಳಲ್ಲಿ ಬರೀ ಕೊರತೆ ಅನುಭವಿಸಿದ್ದ ಇವರು ಒಂದಿಷ್ಟು ಖುಷಿ ಪಡುವ ಕಾಲ ಬಂತಲ್ಲ’ ಎಂದು ನಾವು ನೆಂಟರಿಷ್ಟರು ಭಾವಿಸಿದೆವು. ಆದರೆ ನಮ್ಮ ಭಾವನೆ ಎಷ್ಟು ತಪ್ಪು ಎಂದು ನಮಗೆ ಬಹಳ ಬೇಗ ಗೊತ್ತಾಯಿತು.
ಕೇವಲ ನಲವತ್ತು ವಯಸ್ಸಿಗೆ ಈ ಚಿಕ್ಕಮ್ಮನಿಗೆ ತೀರಾ ತೀವ್ರ ಮಟ್ಟದ ಸಕ್ಕರೆ ಖಾಯಿಲೆ ಬಂದುಬಿಟ್ಟಿತು! ಆಸ್ಪತ್ರೆಗಳಿಗೆ ತಿರುಗುವುದು, ರಕ್ತಪರೀಕ್ಷೆ ಮಾಡಿಸುತ್ತಿರುವುದು, ಹೊತ್ತು ಹೊತ್ತಿಗೆ ಮಾತ್ರೆಗಳ ಸಾಲು, `ಅದು ತಿನ್ನಬೇಡ, ಇದು ತಿನ್ನಬೇಡ’ ಎಂಬ ಭಯಂಕರ ಪಥ್ಯ ಇವು ಪ್ರಾರಂಭ ಆಗಿ ಈ ಕಸರತ್ತಿನಲ್ಲಿ ಇವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತೇ ಹೊರತು ಉತ್ತಮಗೊಳ್ಳಲಿಲ್ಲ. ಖಾಯಿಲೆ ಎಷ್ಟರ ಮಟ್ಟಿಗೆ ಹೆಚ್ಚಾಯಿತೆಂದರೆ ಪ್ರತಿದಿನ ಬೆಳಿಗ್ಗೆ-ಸಂಜೆ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವ ಹಂತಕ್ಕೆ ಬಂತು. ಹಬ್ಬಕ್ಕೋ ಇನ್ಯಾವುದಾದರೂ ಸಂದರ್ಭಕ್ಕೋ ನಮ್ಮ ಮನೆಗೆ ಬಂದಾಗ ಬೆಳಿಗ್ಗೆ-ಸಂಜೆ ಚುಚ್ಚಿಸಿಕೊಳ್ಳುವ ಅವರ ಪಾಡು, ಗೋಳಾಟ ನೋಡುವಾಗ ಬಹಳ ಬೇಸರವಾಗುತ್ತಿತ್ತು ನನಗೆ. ಎಲ್ಲಕ್ಕಿಂತ ಹೆಚ್ಚು ಬೇಸರ ಅಂದರೆ ಸಿಹಿ ತಿನ್ನುವುದು, ಅಚ್ಚುಕಟ್ಟಾಗಿ ಊಟ ಮಾಡುವುದು, ಉಟ್ಟು ತೊಟ್ಟು ಓಡಾಡಿಕೊಂಡಿರುವುದು ….. ಇಂತಹ `ಸರಳ’ ಖುಷಿಗಳಿಗಾಗಿ ಜೀವನ ಪೂರ್ತಿ ಆಸೆ ಪಟ್ಟ ಚಿಕ್ಕಮ್ಮ, ಅವೆಲ್ಲವೂ ತಮ್ಮ ವಶದಲ್ಲೇ ಇರುವ ಹಂತಕ್ಕೆ ಬಂದರೂ ಅವುಗಳನ್ನು ಸವಿಯಲು ಸಾಧ್ಯ ಆಗಲಿಲ್ಲ. “ನೋಡು ಮೀರಾ, ಚಿಕ್ಕವಳಿದ್ದಾಗ ಆರೋಗ್ಯ ಇತ್ತು, ಊಟ-ವಸ್ತು-ಒಡವೆ ಇರ್ಲಿಲ್ಲ. ಈಗ ಊಟ-ವಸ್ತು-ಒಡವೆ ಇದೆ, ಆದ್ರೆ ಆರೋಗ್ಯವೇ ಇಲ್ಲ. ಹೀಗಿದೆ ಕಣಮ್ಮ ನನ್ನ ಹಣೆಬರಹ” ಎಂದು ತುಂಬ ನೊಂದುಕೊಳ್ಳುತ್ತಿದ್ದರು. `ಅಯ್ಯೋ, ಬದುಕಿನ ವಿಪರ್ಯಾಸವೆ! ಹಲ್ಲಿದ್ರೆ ಕಡಲೆ ಇಲ್ಲ, ಕಡಲೆ ಇದ್ರೆ ಹಲ್ಲಿಲ್ಲ ಅಂತ ಆಯ್ತಲ್ಲಾ’ ಅನ್ನಿಸಿ ನಾನು ನಿಟ್ಟುಸಿರು ಬಿಡುತ್ತಿದ್ದೆ. ಚಿಕ್ಕಮ್ಮನಿಗೆ ಸಮಾಧಾನ ಹೇಳಲು ಪದಗಳಿಲ್ಲದೆ ಸುಮ್ಮನಾಗುವ ಪರಿಸ್ಥಿತಿ ಬರುತ್ತಿತ್ತು. ಏನೋ ವಿಷಯಾಂತರ ಮಾಡಿ ಆ ನೋವಿನ ಮಾತನ್ನು ಆ ಕ್ಷಣಕ್ಕೆ ನಿಲ್ಲಿಸುವಂತೆ ಮಾಡುತ್ತಿದ್ದೆ. ಆದರೆ ಬದುಕಿನ ಈ ಬ್ರಹ್ಮಗಂಟನ್ನು ಬಿಡಿಸಲು ಯಾರಿಗೆ ಸಾಧ್ಯ ಹೇಳಿ.

ಇನ್ನು ನಾವು ಮಾಡಿದ ಸಾಧನೆಗಳ ಬಗೆಗಿನ ಶಾಶ್ವತತೆಯ ಭ್ರಮೆಯಲ್ಲಿ ಬದುಕೋಣವೆ? ರಾಜ್ಯ ಸಾಮ್ರಾಜ್ಯಗಳನ್ನು ಕಟ್ಟಿ ಮೆರೆದು ಮೆಟ್ಟಿಂಗಾಲಿಟ್ಟು `ತಾನೇ ದೊಡ್ಡವನು’ ಎಂದು ಬೀಗಿದ ರಾಜಮಹಾರಾಜರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. `ಬದುಕು ಹೀಗೇ ಇರುತ್ತೆ, ನಾಳೆಗಳು ಹೀಗೆಯೇ ಜರುಗುತ್ತವೆ’ ಎಂದು ಹೇಳಲು ಯಾರಿಗೆ ತಾನೆ ಗೊತ್ತು? ಹಾಗೆಂದು ನಿನ್ನೆಗಳ ಬಗ್ಗೆ ಕೊರಗುತ್ತಾ ಕೂರುವುದು ಬದುಕೆ? ಅಲ್ಲ. ಬಹುಶಃ ಸದ್ಯತನ ಅಂದರೆ ವರ್ತಮಾನದಲ್ಲಿ ಮನಸ್ಸಿಟ್ಟು ಅದನ್ನು ಮನಸಾರೆ ಅನುಭವಿಸುವುದು ಮತ್ತು ಬದುಕೆಂಬ ಶಿಕ್ಷಕನಿಂದ ಕಲಿಯುವ ವಿನಯ ಇವೆರಡೇ ನಮಗೆ ಕೊನೆಗೂ ಸಹಾಯ ಮಾಡುವುದು ಅನ್ನಿಸುತ್ತೆ. ಹೀಗಾಗಿ ಶಿಕ್ಷಕರ ದಿನಾಚರಣೆಯಂದು ಎಲ್ಲರೂ ತಮ್ಮ ತಮ್ಮ ಶಿಕ್ಷಕರಿಗೆ ನಮಿಸುತ್ತಾರಾದರೆ, ಶಿಕ್ಷಕರು ನಮಿಸುವುದು ತಮಗೆ ಪಾಠ ಮಾಡಿದ ಶಿಕ್ಷಕರಿಗೆ ಹಾಗೂ ಅತಿಮುಖ್ಯವಾಗಿ ಜೀವನವೆಂಬ ಮಹಾಶಿಕ್ಷಕನಿಗೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ನಮ್ಮ ಬದುಕನ್ನು ಹೇಗೆ ನಡೆಸಬೇಕು, ಹೇಗೆ ಸವಿಯಬೇಕು ಎಂಬುದರ ಕುರಿತು ಅತ್ಯಂತ ಸಮಾಯೋಚಿತ ಬರಹ. ಧನ್ಯವಾದಗಳು ಮೇಡಮ್ 🙏🙏