Advertisement
ಬದುಕೆಂದರೆ ಜಟಕಾ ಬಂಡಿಯೇ ಇನ್ನೇನೂ ಅಲ್ಲ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಬದುಕೆಂದರೆ ಜಟಕಾ ಬಂಡಿಯೇ ಇನ್ನೇನೂ ಅಲ್ಲ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಪಕ್ಕದಲ್ಲಿ ಸ್ಟೂಲ್ ಮೇಲೆ ಕುಳಿತಿರುವ ವಿಜಯ ಕೂಡ ಸಣ್ಣಗೆ ಇಳಿದುಹೋಗಿದ್ದಾಳೆ. ಆದರೂ ಅವಳ ಮುಖದ ಮೇಲಿನ ಕಾಂತಿ ಇನ್ನೂ ಒಂದಷ್ಟು ಉಳಿದುಕೊಂಡಿದೆ. ಅವಳ ಗಂಡ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಜ್ಞಾಪಕದಂತೆ ಅವಳ ಕಿವಿಗಳಲ್ಲಿ ಚಿನ್ನದ ಓಲೆಗಳು ಕಾಣಿಸುತ್ತಿವೆ. ವಾರ್ಡ್‌ನ ಎರಡೂ ಕಡೆ ಗೋಡೆಗಳ ಪಕ್ಕ ಸಾಲಾಗಿ ಹಾಸಿರುವ ಹಾಸಿಗೆಗಳ ಮೇಲೆ ಗಣಿ ಕಾರ್ಮಿಕರು ಹಾಸಿಗೆಗಳಲ್ಲಿ ಕುಳಿತು ಮಲಗಿ ಮಾತನಾಡುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಬರೀ ಗಣಿ ರೋಗಗಳಿಂದ ಬಳಲುತ್ತಿರುವ ಕಾರ್ಮಿಕರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

ಅಧ್ಯಾಯ – 8

(ಮಣಿ ವಯಸ್ಸು ಈಗ 40 ವರ್ಷಗಳ ಆಸುಪಾಪಾಸು. ಸೆಲ್ವಮ್ ಫೋಟೋ ಗೋಡೆಯ ಮೇಲೆ ನೇತು ಹಾಕಲಾಗಿದೆ. ಮಣಿ ತಾಯಿ ಕನಕ ಇನ್ನೂ ಬದುಕಿದ್ದಾಳೆ. ಮಣಿ ಮತ್ತು ಸೆಲ್ವಿಗೆ ಇಬ್ಬರು ಮಕ್ಕಳು ಕಾರ್ತಿಕ್ ಮತ್ತು ಕೋಮಲ. ಹದಿನೆಂಟು ವರ್ಷದ ಕಾರ್ತಿಕ್ ಕೋಮಲಳಿಗಿಂತ ಎರಡು ವರ್ಷ ದೊಡ್ಡವನು. ಕಾರ್ತಿಕ್ ಪಿ.ಯುಸಿ ಓದುತ್ತಿದ್ದರೆ ಕೋಮಲ ಎಸ್.ಎಸ್.ಎಲ್.ಸಿ ಓದುತ್ತಿದ್ದಾಳೆ).

***

ಅದೇ ಗುಡಿಸಿಲು ಮನೆ. ಸೆಲ್ವಿ ಎಂದಿನಂತೆ ಬೆಳಿಗ್ಗೆ ಮನೆಯಲ್ಲಿ ತಿಂಡಿ ತಯಾರು ಮಾಡುತ್ತಿದ್ದಾಳೆ. ಮಣಿ ತಯಾರಾಗಿ ತಿಂಡಿ ತಿಂದು ಯೂನಿಫಾರ್ಮ್ ಧರಿಸಿ, ಬೂಟುಗಳನ್ನು ಹಾಕಿಕೊಂಡು ಮನೆ ಹೊರಕ್ಕೆ ಬಂದು ಕಲ್ಲಿನ ಮೇಲೆ ಕುಳಿತುಕೊಂಡ. ಸೆಲ್ವಿ ಟೀ ತಂದುಕೊಟ್ಟು, ಟೀ ಕುಡಿಯುತ್ತ ಬೀಡಿಯನ್ನು ಕೊನೆಯವರೆಗೂ ಸೇದಿ ಕಾಲುವೆಗೆ ಬಿಸಾಕಿದ. ನಂತರ ಮನೆ ಹಿಂದೆ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ತನ್ನ ಸೈಕಲ್ ತೆಗೆದುಕೊಂಡು ರಸ್ತೆಗೆ ಬಂದ. ಅಷ್ಟರಲ್ಲಿ ಸೆಲ್ವಿ ತಿಂಡಿ ಇದ್ದ ಡಬ್ಬಿಯನ್ನು ತಂದುಕೊಟ್ಟು ಮಣಿ ಬಟ್ಟೆ ಬ್ಯಾಗ್ ಒಳಕ್ಕೆ ಹಾಕಿಕೊಂಡ. ಮಣಿ ತಂದೆ ಸೆಲ್ವಮ್ ಸೈಕಲ್ ಹಳೆಯದಾಗಿ ಗೋಡೆಯ ಪಕ್ಕದಲ್ಲಿ ಗಿಡಗಳಿರುವ ಬೇಲಿಗೆ ಕಾಯಿಲೆ ಬಿದ್ದಿರುವ ಗಣಿ ಕಾರ್ಮಿಕನಂತೆ ಒರಗಿಕೊಂಡಿದೆ. ಅದಕ್ಕೆ ಸುಮಾರು 3೦ ವರ್ಷಗಳಾದರೂ ಆಗಿರಬೇಕು! ಮಣಿ, ತಂದೆ ಸೆಲ್ವಮ್ ಗುರುತಿಗಾಗಿ ಅದನ್ನು ಹಾಗೇ ಇಟ್ಟುಕೊಂಡಿದ್ದಾನೆ.

ಈಗ ಮಣಿ ತನ್ನದೇ ಆದ ಒಂದು ಹೊಸ ಸೈಕಲ್ ತೆಗೆದುಕೊಂಡಿದ್ದಾನೆ. ಮಣಿ ಮನೆಯಿಂದ ಹೊರಡುವಾಗ ಗೋಡೆಯ ಮೇಲಿರುವ ಸೆಲ್ವಮ್ ಫೋಟೋ ನೋಡದೇ ಹೋದರೂ ಸರಿ. ತನ್ನ ಸೈಕಲ್ ತೆಗೆದುಕೊಳ್ಳುವಾಗ ಮಾತ್ರ ತಂದೆ ಸೆಲ್ವಮ್ ಸೈಕಲ್‌ಅನ್ನು ನೋಡದೇ ಹೋಗುವುದಿಲ್ಲ. ಅದು ಒಂದು ರೀತಿಯಲ್ಲಿ ಅವನಿಗೆ ಎದುರಿಗೆ ಕಾಣಿಸುತ್ತಿರುವ ದೇವರಂತೆ. ಸೆಲ್ವಮ್ ಕೆಲಸಕ್ಕೆ ಹೋಗುವಾಗ ಪ್ರತಿ ದಿನವೂ ಕನಕ ಹಿಂದೆ ನಿಂತುಕೊಂಡು ನೋಡುತ್ತಿದ್ದಳು. ಅದೇ ರೀತಿ ಈಗ ಮಣಿ ಕೆಲಸಕ್ಕೆ ಹೋಗುವಾಗ ಸೆಲ್ವಿ ಹಿಂದೆ ನಿಂತುಕೊಂಡು ನೋಡುತ್ತಾಳೆ. ಮಣಿ ರಸ್ತೆಯಲ್ಲಿ ಕಾಣದೆ ಹೋಗುವವರೆಗೂ ಸೆಲ್ವಿ ಮನೆ ಮುಂದೆ ಹಾಗೇ ನಿಂತಿರುತ್ತಾಳೆ. ಯಾಕೆಂದರೆ ಪ್ರತಿಯೊಂದು ದಿನವೂ ಈ ಗಣಿ ಕಾರ್ಮಿಕರು ಯಮರಾಜನ ಹತ್ತಿರಕ್ಕೆ ಹೋಗಿ ಅವನ ಎದುರಿಗೆ ನಿಂತು ಹೋರಾಡಿ ಗೆದ್ದು ಹಿಂದಕ್ಕೆ ಬರಬೇಕು!

***

ಕಾರ್ತಿಕ್, “ಅಮ್ಮ ನೀನು ಡೈಮಂಡ್ ತರಹ ಇಷ್ಟು ಸುಂದರವಾಗಿದ್ದೀಯ. ಅದೇಗಮ್ಮ ನಮ್ಮ ಅಪ್ಪನನ್ನು ಮದುವೆಯಾದೆ?” ಎಂದ. ಸೆಲ್ವಿ, “ಯಾಕೆ ನಿಮ್ಮಪ್ಪ ಸುಂದರವಾಗಿಲ್ಲವ?” ಎಂದಳು. ಕಾರ್ತಿಕ್, “ಅಯ್ಯೊ ನಮ್ಮಪ್ಪನ ಸುಂದರತೆ ಬಗ್ಗೆ ನೀನು ಮಾತಾಡಬೇಡಮ್ಮ” ಎಂದ. ಸೆಲ್ವಿ, “ನೀನು ಬಹಳ ದೊಡ್ಡ ಮನುಷ್ಯ ಬಾಯಿ ಮುಚ್ಚಿಕೊಂಡು ತಿಂಡಿ ತಿಂದು ಕಾಲೇಜ್‌ಗೋಗು” ಎಂದಳು. ಕೋಮಲ, “ಅಮ್ಮ ಅಣ್ಣ ಏನೋ ಮಸ್ಕಾ ಹೊಡೀತಾ ಇದ್ದಾನೆ” ಎಂದಳು. ಕಾರ್ತಿಕ್, “ಕೋಮಲ ದೊಡ್ಡವರು ಮಾತಾಡುವಾಗ ಮಧ್ಯೆ ಬಾಯಿ ಹಾಕಬಾರದು” ಎಂದ. ಸೆಲ್ವಿ “ಇನ್ನೇನು ಹತ್ತೋ ಇಪ್ಪತ್ತೋ ರೂಪಾಯಿ ಹಣ ಬೇಕು” ಎಂದು ಅವನ ತಟ್ಟೆಗೆ ಇನ್ನಷ್ಟು ಇಡ್ಲಿಗಳನ್ನು ಹಾಕಿದಳು. ಕಾರ್ತಿಕ್, “ಅದೇಗಮ್ಮ ಅಷ್ಟು ಕರಕ್ಟಾಗಿ ಹೇಳ್ತೀಯಾ ನೀನು” ಎಂದ. ಸೆಲ್ವಿ, “ನನಗೆ ಇನ್ನೂ ತುಂಬಾ ಕೆಲಸ ಇದೆ. ನಿಮ್ಮ ಜೊತೆಗೆ ಕುಳಿತುಕೊಂಡು ಹರಟೆ ಹೊಡೆಯುವುದಕ್ಕೆ ಸಮಯ ಇಲ್ಲ. ಆ ಡಬ್ಬಿ ಕೆಳಗೆ 10 ರೂಪಾಯಿ ಇದೆ, ತೆಗೆದುಕೊ” ಎಂದಳು. ಕಾರ್ತಿಕ್ ದಿಢೀರನೆ ಎದ್ದು ನಿಂತು, 10ರ ಬದಲಿಗೆ 20 ರೂಪಾಯಿ ತೆಗೆದುಕೊಂಡು ಜೇಬಿಗೆ ಹಾಕಿಕೊಂಡ.

ಸೆಲ್ವಿ, “ಲೋ ಕಾರ್ತಿಕ್ ಟಿಫಿನ್ ಬಾಕ್ಸ್‌ನಲ್ಲಿ ನಾಲ್ಕು ಇಡ್ಲಿ ಹಾಕ್ತೀನಿ ತೆಕೊಂಡು ಹೋಗು” ಎಂದಳು. ಕಾರ್ತಿಕ್, “ಅಮ್ಮ ನಾನು ಕಾಲೇಜ್ ಓದುವುದು. ಹೈಸ್ಕೂಲ್ ಅಲ್ಲ. ಟಿಫಿನ್ ಬಾಕ್ಸ್ ತೆಕೊಂಡು ಹೋಗುವುದಕ್ಕೆ” ಎಂದ. ಕೋಮಲ ನಗುತ್ತಾ, “ಹೋಗು ಕಾಲೇಜ್‌ನಲ್ಲಿ ಹಸಿವಾದರೆ ಗೊತ್ತಾಗುತ್ತೆ” ಎಂದಳು. ಕಾರ್ತಿಕ್ ತನ್ನ ಹೊಸ ಸೈಕಲ್ ತೆಗೆದುಕೊಂಡು ಹೊರಟುಹೋದ. ಕೋಮಲ ಜೊತೆಗೆ ಓದುವ ಇಬ್ಬರು ಗೆಳತಿಯರು ಬಾಗಿಲು ಹತ್ತಿರಕ್ಕೆ ಬಂದು “ಕೋಮಲ” ಎಂದು ಕರೆದರು. ಕೋಮಲ, “ಬಂದೆ” ಎಂದು ಹೊರಕ್ಕೆ ಬಂದು ಎಲ್ಲರೂ ಕೂಡಿ ಶಾಲೆಯ ಕಡೆಗೆ ನಡೆಯುತ್ತಾ ಹೊರಟರು. ಕೋಮಲ ಜೊತೆಗೆ ಓದುವ ಇಬ್ಬರು ಹುಡುಗಿಯರು ಮನೆ ಹತ್ತಿರಕ್ಕೆ ಬಂದಿದ್ದೆ ಸೆಲ್ವಿಗೆ ಯಾವಾಗಲೂ ತನ್ನ ಗೆಳತಿಯರಾದ ರಾಜಿ ಮತ್ತು ಪಾರ್ವತಿಯರ ಜ್ಞಾಪಕ ಬಂದುಬಿಡುತ್ತಿತ್ತು. ಅದಕ್ಕಾಗಿಯೇ ಸೆಲ್ವಿ ಏನು ಕೆಲಸ ಮಾಡುತ್ತಿದ್ದರೂ ಹೊರಕ್ಕೆ ಬಂದು ಆ ಇಬ್ಬರು ಹುಡುಗಿಯರಿಗೆ ಕೈ ಬೀಸಿ ಹೋಗುತ್ತಿದ್ದಳು.

ಕಾರ್ಮಿಕರ ಮುಖಂಡ ಅಯ್ಯಪ್ಪ ಕೆಜಿಎಫ್ ಮೈನಿಂಗ್ ಆಸ್ಪತ್ರೆಯ ದೊಡ್ಡ ವಾರ್ಡ್ ಒಂದರಲ್ಲಿ ಹಾಸಿಗೆ ಮೇಲೆ ಮಲಗಿಕೊಂಡಿದ್ದಾನೆ. ದೈತ್ಯನಾಗಿದ್ದ ಅಯ್ಯಪ್ಪನ ದೇಹ ಕುಗ್ಗಿಹೋಗಿ ಮುಖ ಕರ್ರಗಾಗಿದೆ. ಪಕ್ಕದಲ್ಲಿ ಸ್ಟೂಲ್ ಮೇಲೆ ಕುಳಿತಿರುವ ವಿಜಯ ಕೂಡ ಸಣ್ಣಗೆ ಇಳಿದುಹೋಗಿದ್ದಾಳೆ. ಆದರೂ ಅವಳ ಮುಖದ ಮೇಲಿನ ಕಾಂತಿ ಇನ್ನೂ ಒಂದಷ್ಟು ಉಳಿದುಕೊಂಡಿದೆ. ಅವಳ ಗಂಡ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುತ್ತಿರುವ ಜ್ಞಾಪಕದಂತೆ ಅವಳ ಕಿವಿಗಳಲ್ಲಿ ಚಿನ್ನದ ಓಲೆಗಳು ಕಾಣಿಸುತ್ತಿವೆ. ವಾರ್ಡ್‌ನ ಎರಡೂ ಕಡೆ ಗೋಡೆಗಳ ಪಕ್ಕ ಸಾಲಾಗಿ ಹಾಸಿರುವ ಹಾಸಿಗೆಗಳ ಮೇಲೆ ಗಣಿ ಕಾರ್ಮಿಕರು ಹಾಸಿಗೆಗಳಲ್ಲಿ ಕುಳಿತು ಮಲಗಿ ಮಾತನಾಡುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಬರೀ ಗಣಿ ರೋಗಗಳಿಂದ ಬಳಲುತ್ತಿರುವ ಕಾರ್ಮಿಕರನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ. ಕಾರಣ ಗಣಿ ಕಾರ್ಮಿಕರು ಸಿಲಿಕೋಸಿಸ್ ರೋಗದಿಂದ ಬಳಲುವುದನ್ನು ಇತರೆ ಸಾಧಾರಣ ರೋಗಿಗಳು ನೋಡಬಾರದು ಎನ್ನುವುದು ಗಣಿ ಆಡಳಿತದ ಉದ್ದೇಶ.

ಮಣಿ ಮತ್ತು ಸೆಲ್ವಿ ಅಯ್ಯಪ್ಪನನ್ನು ನೋಡಲು ಆಸ್ಪತ್ರೆಯ ವಾರ್ಡ್ ಒಳಕ್ಕೆ ಬರುತ್ತಾರೆ. ಮಣಿ ಕೈಯಲ್ಲಿ ಹಣ್ಣುಗಳ ಚೀಲ ಇದೆ. ಹಾಸಿಗೆಗಳ ಮೇಲಿರುವ ಕೆಲವು ಕಾರ್ಮಿಕರು ಕೆಮ್ಮುತ್ತಿದ್ದಾರೆ. ಮಣಿ ಮತ್ತು ಸೆಲ್ವಿ ಅಯ್ಯಪ್ಪನ ಹತ್ತಿರಕ್ಕೆ ಬರುತ್ತಿದ್ದಂತೆ ಅಯ್ಯಪ್ಪನಿಗೆ ಕೆಮ್ಮು ಬಂದುಬಿಡುತ್ತದೆ. ವಿಜಯ ಟವೆಲ್ ತೆಗೆದು ಕೊಡುತ್ತಾಳೆ. ಅಯ್ಯಪ್ಪ ಒಂದೇ ಸಮನೇ ಕೆಮ್ಮುತ್ತಾ ಬಾಯನ್ನು ಟವೆಲ್‌ನಿಂದ ಒರೆಸಿಕೊಳ್ಳುತ್ತಾನೆ. ಟವೆಲ್ ತುಂಬಾ ರಕ್ತ ಕಾಣಿಸುತ್ತದೆ. ಅಯ್ಯಪ್ಪ ಹಾಗೇ ಮಂಚಕ್ಕೆ ಒರಗಿಕೊಂಡು ಉಸಿರಾಡುತ್ತಿದ್ದರೆ ಎದೆಗೂಡು ಉಸಿರು ತಿತ್ತಿಯಂತೆ ಕಾಣಿಸುತ್ತಿದೆ. ವಿಜಯ ಮುಖ ಮುಚ್ಚಿಕೊಂಡು ಅಳುತ್ತಾಳೆ. ಸೆಲ್ವಿ ಅಮ್ಮನ ಬೆನ್ನುಮೇಲೆ ಕೈಹಾಕಿ ಸವರುತ್ತಾ ಸಮಾಧಾನ ಮಾಡುತ್ತಾಳೆ. ಅಯ್ಯಪ್ಪ ಗಣಿ ಸುರಂಗಗಳ ಧೂಳಿನಲ್ಲಿ ಹತ್ತಾರು ವರ್ಷಗಳು ಕಾಲ ಕೆಲಸ ಮಾಡಿದ ಕಾರಣ ಸಿಲಿಕೋಸಿಸ್/ನಿಮ್ಯಾಟೋಸಿಸ್ ಗಣಿ ಕಾಯಿಲೆ ಬಂದಿದೆ. ಅಂದರೆ ಉಸಿರುಗೂಡು ಪೂರ್ಣವಾಗಿ ಹಾನಿಗೊಂಡಿದೆ.

ಮಣಿ, ವಾರ್ಡ್ ಕೊನೆಯಲ್ಲಿದ್ದ ವೈದ್ಯರ ಕೋಣೆಗೆ ಹೋಗಿ ಅಯ್ಯಪ್ಪನ ಆರೋಗ್ಯದ ಬಗ್ಗೆ ವೈದ್ಯರನ್ನು ವಿಚಾರಿಸಿದ. ವೈದ್ಯರು, “ಸಧ್ಯಕ್ಕೆ ಪ್ರಾಣಕ್ಕೆ ಏನೂ ಅಪಾಯವಿಲ್ಲ. ಆದರೆ ಕೆಲಸಕ್ಕೆ ಅನ್‌ಫಿಟ್ ಅಂತ ನಾವು ಶಿಫಾರಸು ಮಾಡಬೇಕಾಗುತ್ತದೆ. ಉಸಿರುಗೂಡಲ್ಲಿ ಮಲ್ಟಿಪಲ್ ತೂತುಗಳು ಬಿದ್ದಿದ್ದು ಉಸಿರುಗೂಡು ಅಪಾಯದಲ್ಲಿದೆ. ಇವರು ಇನ್ನು ಮುಂದೆ ಗಣಿಯಲ್ಲಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಹಳ್ಳಿಗಳ ಕಡೆಗೋಗಿ ಗಿಡಮರಗಳಿರುವ ತಣ್ಣನೆ ಪ್ರದೇಶದಲ್ಲಿ ವಿಶ್ರಾಂತಿ ಪಡೆದರೆ ಇನ್ನಷ್ಟು ದಿನ ಬದುಕುತ್ತಾರೆ” ಎಂದರು. ಮಣಿ, “ಡಾಕ್ಟರೆ ದಯವಿಟ್ಟು ಒಂದು ಸಲ ಬಂದು ನೋಡಿ. ಕೆಮ್ಮಿದಾಗ ತುಂಬಾ ರಕ್ತ ಬಂದಿದೆ” ಎಂದು ವಿನಂತಿಸಿಕೊಂಡ.

ವೈದ್ಯರು ಕೋಣೆಯಿಂದ ಹೊರಕ್ಕೆ ಬಂದು ಅಯ್ಯಪ್ಪನ ಎದೆಗೂಡನ್ನು ಪರೀಕ್ಷಿಸಿ “ನೋಡಿ ಅಯ್ಯಪ್ಪ ಇನ್ನೂ ಎರಡು ದಿನ ಇಲ್ಲೇ ಇರಿ. ಕೋಲಾರ ಕಮಲಾ ನೆಹರೂ ಆಸ್ಪತ್ರೆಯಲ್ಲಿ (ಗಣಿ ಕಾರ್ಮಿಕರಿಗಾಗಿ ಕಟ್ಟಿದ ವಿಶೇಷ ಕ್ಷಯ ಆಸ್ಪತ್ರೆ) ಒಂದಷ್ಟು ದಿನ ವಿಶ್ರಾಂತಿ ಪಡೆದುಕೊಳ್ತೀರಾ. ಹೇಳಿ, ಬರೆದುಕೊಡ್ತೀನಿ” ಎಂದರು. ಆಯ್ಯಪ್ಪ, “ಆಯಿತು ಸ್ವಾಮಿ. ಎರಡು ದಿನಗಳಲ್ಲಿ ಹೇಳ್ತೀನಿ” ಎಂದು ಮತ್ತೆ ಕೆಮ್ಮ ತೊಡಗಿದರು. ವೈದ್ಯರು, “ನಾನು ಬರೆದುಕೊಟ್ಟಿರುವ ಆ ಮಾತ್ರೆಗಳನ್ನೇ ಕೊಡಿ” ಎಂದು ಮುಂದಿನ ರೋಗಿಯ ಕಡೆಗೆ ಹೋದರು. ವಿಜಯ, ಅಯ್ಯಪ್ಪನ ಹತ್ತಿರಕ್ಕೆ ಬಂದು ನಿಂತುಕೊಂಡಳು. ಅಯ್ಯಪ್ಪನ ಮುಖ ಬೆವರುತ್ತಿದ್ದು ವಿಜಯ ಬಟ್ಟೆ ತೆಗೆದುಕೊಂಡು ಮುಖವನ್ನು ಮೃದುವಾಗಿ ಒರೆಸಿತೊಡಗಿದಳು.

ಮಣಿ, ಅಯ್ಯಪ್ಪನ ಪಕ್ಕದಲ್ಲಿ ನಿಂತುಕೊಂಡಿದ್ದು, ಅಯ್ಯಪ್ಪ, “ಮಣಿ ನೀನು ಅಂಡರ್‌ಗ್ರೌಂಡ್‌ನಲ್ಲಿ ಕೆಲಸ ಮಾಡುವುದು ಬಿಟ್ಟು ಸರ್ಫೇಸ್‌ನಲ್ಲಿ ಎಲ್ಲಾದರೂ ಕೆಲಸಕ್ಕೆ ಹಾಕಿಕೊಳ್ಳುವುದು ಒಳ್ಳೇದು. ನಾನು ಯಾರಿಗಾದರೂ ಹೇಳ್ತೀನಿ. ಅಂಡರ್‌ಗ್ರೌಂಡ್‌ನಲ್ಲಿ ಜಾಸ್ತಿ ದಿನ ಕೆಲಸ ಮಾಡಿದರೆ ಬೇಗನೇ ಸಿಲಿಕೋಸಿಸ್ ಬಂದುಬಿಡುತ್ತೆ. ನನಗೆ ಬಹಳ ಜನ ಹೇಳಿದರು. ನಾನು ಯಾರ ಮಾತೂ ಕೇಳಲಿಲ್ಲ. ನನಗೇನಾಗುತ್ತೆ ಗಟ್ಟಿಮುಟ್ಟಾಗಿದ್ದೀನಿ ಎನ್ನುತ್ತಿದ್ದೆ. ಈಗ ನೋಡು ಏನಾಯಿತು? ಸಾಲದ್ದಕ್ಕೆ ಕುಮಾರ್ ಕೂಡ (ದೊಡ್ಡಮಗ) ಅಂಡರ್‌ಗ್ರೌಂಡ್‌ನಲ್ಲೆ ಕೆಲಸ ಮಾಡ್ತಾಇದ್ದಾನೆ” ಎಂದ. ಸೆಲ್ವಿ, ಮಣಿ ಕಡೆಗೆ ನೋಡಿದಳು. ಮಣಿ, “ಹಾಗೇ ಮಾಡ್ತೀನಿ ಮಾವ” ಎಂದ. ಅಯ್ಯಪ್ಪ, “ಸೆಲ್ವಿ, ಮಣಿ, ನೀವಿಬ್ಬರೂ ಹೋಗಿ ಕತ್ತಲಾಗ್ತಾ ಇದೆ. ಹಾಗೇ ನಿಮ್ಮ ತಾಯೀನ ಮನೆ ಹತ್ತಿರ ಬಿಟ್ಟೋಗಿ. ನನಗೇನು ತೊಂದರೆ ಇಲ್ಲ. ಎಲ್ಲಾ ಸರಿಯೋಗುತ್ತೆ” ಎಂದ. ವಿಜಯ, “ಇಲ್ಲ ನಾನು ಇಲ್ಲೇ ಇರ್ತೀನಿ ಕುಮಾರ್ ಬರೋವರಿಗೂ” ಎಂದಳು. ಅಯ್ಯಪ್ಪ, “ಕುಮಾರ್ ಬಂದ ಮೇಲೆ ನೀನು ಒಬ್ಬಳೆ ಹೇಗೋಗ್ತಿಯಾ?” ಎಂದ. ಸೆಲ್ವಿ, “ಆಯಿತು ಇರಪ್ಪ. ಅಣ್ಣ ಬಂದಮೇಲೇನೆ ನಾವೆಲ್ಲ ಒಟ್ಟಿಗೆ ಹೋಗ್ತೀವಿ” ಎಂದಳು.

ಅಷ್ಟರಲ್ಲಿ ಕುಮಾರ್ ಟಿಫಿನ್ ಕ್ಯಾರಿಯರ್ ಜೊತೆಗೆ ವಾರ್ಡ್ ಒಳಕ್ಕೆ ಬಂದ. ಕುಮಾರ್ ಬಂದಿದ್ದೆ, “ಅಪ್ಪ ಈಗೇಗಿದೆ?” ಎಂದ. ಅಯ್ಯಪ್ಪ, “ಏನೂ ತೊಂದರೆ ಇಲ್ಲಪ್ಪ ಕುಮಾರ್” ಎಂದ. ಕುಮಾರ್ ಟಿಫಿನ್ ಕ್ಯಾರಿಯರ್ ಮಂಚದ ಪಕ್ಕದಲ್ಲಿದ್ದ ಬಾಕ್ಸ್ ಒಳಗಿಟ್ಟ. ವಿಜಯ, ಕುಮಾರ್‌ನನ್ನು ಬಾಗಿಲು ಹತ್ತಿರಕ್ಕೆ ಕರೆದುಕೊಂಡು ಬಂದು, “ಕುಮಾರ್ ನಿಮ್ಮಪ್ಪ ಕೆಮ್ಮಿದಾಗ ಬಟ್ಟೆಯಲ್ಲ ರಕ್ತ…” ಎಂದು ಅಳತೊಡಗಿದಳು. ಕುಮಾರ್ ಮುಖದಲ್ಲಿ ಆತಂಕ ಕಾಣಿಸಿಕೊಂಡಿತು. ಸೆಲ್ವಿ ಹತ್ತಿರಕ್ಕೆ ಬಂದು ನಿಂತುಕೊಂಡಳು. ಮೂವರೂ ಸ್ವಲ್ಪ ಹೊತ್ತು ಅಲ್ಲೇ ನಿಂತುಕೊಂಡಿದ್ದು ನಂತರ ವಾರ್ಡ್ ಒಳಕ್ಕೆ ಬಂದರು. ಈಗ ಕುಮಾರ್, ಮಣಿಯನ್ನು ನೋಡಿ, “ಮಾಪಿಳ್ಳೆ ಹೇಗಿದ್ದೀಯ?” ಎಂದ. ಮಣಿ, “ಚೆನ್ನಾಗಿದ್ದೀನಿ ಮಚ್ಚ” ಎಂದ. ಕುಮಾರ್, “ಆಯಿತು. ಎಲ್ಲರೂ ಮನೆಗೋಗಿ. ನಾನು ರಾತ್ರಿ ಇಲ್ಲೇ ರ್ತೀನಿ” ಎಂದ. ಎಲ್ಲರೂ ಅಯ್ಯಪ್ಪನ ಕಡೆಗೆ ನೋಡುತ್ತ ಕೈಬೀಸುತ್ತಾ ವಾರ್ಡ್‌ನಿಂದ ಹೊರಕ್ಕೆ ಬಂದರು. ವಿಜಯ ಹೊರಗೆ ಬಂದಿದ್ದೆ ಅಳತೊಡಗಿದಳು. ಸೆಲ್ವಿ, “ಅಮ್ಮ ಸುಮ್ಮನೇ ಇರಮ್ಮ. ಯಾಕಳ್ತೀಯ” ಎಂದಳು. ವಿಜಯ ಮುಂದೆ ಏನೂ ಮಾತನಾಡಲಿಲ್ಲ. ಮೂವರೂ ಕತ್ತಲಲ್ಲಿ ನಡೆಯುತ್ತಾ ಹೊರಟರು. ಗಣಿಗಳು, ಗಣಿ ಮಿಲ್‌ಗಳು ನಡೆಯುತ್ತಿರುವ ಸದ್ದು ಕಾಡಿನಲ್ಲಿ ಹರಿಯುವ ನದಿಗಳಂತೆ ಸುತ್ತಲೂ ಬೋರ್ಗರೆಯುತ್ತಿದ್ದವು.

(ಹಿಂದಿನ ಕಂತು: ಹಸೆಮಣೆಯೇರಿದ ತಾಯಿ…)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ