Advertisement
ಬನ್ನಿ.. ಸ್ವಯಂಪ್ರಭೆಯರನ್ನು ಸಂಭ್ರಮಾಚರಿಸೋಣ: ಎಲ್.ಜಿ.ಮೀರಾ ಅಂಕಣ

ಬನ್ನಿ.. ಸ್ವಯಂಪ್ರಭೆಯರನ್ನು ಸಂಭ್ರಮಾಚರಿಸೋಣ: ಎಲ್.ಜಿ.ಮೀರಾ ಅಂಕಣ

ಸಾಂಪ್ರದಾಯಿಕ ಸಮಾಜದ ಊಹೆಗೆ ನಿಲುಕದ ಇನ್ನೊಂದು ಜಿಗಿತವನ್ನು ನಮ್ಮ ಹೆಣ್ಣುಮಕ್ಕಳು ಈಗ ಮಾಡುತ್ತಿದ್ದಾರೆ. ಅದೇನೆಂದರೆ ಲಿಂಗ ಎಂಬುದು ಕೇವಲ ಗಂಡು-ಹೆಣ್ಣು ಎಂದು ಎರಡು ತುದಿಗಳಲ್ಲ, ಗಂಡಿನೊಳಗೆ ಹೆಣ್ಣು ಮತ್ತು ಹೆಣ್ಣಿನೊಳಗೆ ಗಂಡು ಬೇರೆ ಬೇರೆ ಪ್ರಮಾಣಗಳಲ್ಲಿ ಇರಬಹುದು, ಹೀಗಾಗಿ ಲಿಂಗ ಎಂಬುದು ಶ್ರೇಣಿ ಎಂಬ ಹೊಸ ತಿಳುವಳಿಕೆಯನ್ನು ತಮ್ಮ ನಡೆನುಡಿ, ಇರಿಸರಿಕೆ, ಹೋರಾಟಗಳಿಂದ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಮೌನ ಮಾತುಗಳಲ್ಲಿ ಈ ಹೊಸ ಬೆಳವಣಿಗೆ ಗಾಳಿಯಂತೆ ಬೀಸುತ್ತಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತನೆಯ ಬರಹ

2025! ಈಗಷ್ಟೇ ಪ್ರಾರಂಭವಾಗಿರುವ ಈ ಹೊಸ ಇಸವಿಯ ಚಳಿಬೆಳಗಿನಲ್ಲಿ ಯೋಚಿಸುತ್ತಿರುವೆ. ನಮ್ಮ ಹೆಣ್ಣುಮಕ್ಕಳು ಎಷ್ಟು ಬದಲಾಗಿದ್ದಾರಲ್ಲ! ಖುಷಿ ತರ್ತಿದೆ ಅವರ ಈ ಬದಲಾವಣೆ. ಮದುವೆ ಮದುವೆ ಮದುವೆ……. ಎಂದು ಹಲುಬದೆ ತಮ್ಮ ವಿದ್ಯಾಭ್ಯಾಸ, ಕೌಶಲ್ಯಗಳು, ವೃತ್ತಿ, ಸಾಧನೆ, ವ್ಯಕ್ತಿತ್ವ, ಆರ್ಥಿಕ ಸ್ವಾಯತ್ತತೆ – ಇವುಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಾ ಇದ್ದಾರೆ; ತಾವು ಅಂದರೆ ಯುವತಿಯರು ಪರಸ್ಪರರಿಗೆ ಉತ್ತಮ ಸ್ನೇಹಿತೆಯರು, ಸುಮನಸ್ಸಿನ ಸಹಜೀವಿಗಳು ಆಗುತ್ತಿದ್ದಾರೆ. ಹಿಂದಿನ ದಶಕಗಳಲ್ಲಿ ಆಗುತ್ತಿದ್ದಂತೆ ಗಂಡ, ಪ್ರೇಮಿ ಈಗ ಅವರ ಜೀವಾಧಾರ, ಜೀವನಾಧಾರ ಅಲ್ಲ, ಬದಲಾಗಿ ಅವನು ಒಬ್ಬ ಸಹಪಯಣಿಗ, ಅಥವಾ ಒಬ್ಬ ಸಂಗಾತಿ. ನಮ್ಮ ಹೆಣ್ಣುಮಕ್ಕಳೀಗ ಸ್ವಯಂಪ್ರಭೆಯರು, ಅಂದರೆ ತಮ್ಮ ಬೆಳಕನ್ನು ತಾವೇ ಉತ್ಪತ್ತಿ ಮಾಡಿಕೊಳ್ಳುವವರು. ಇದು ಸ್ವಯಂಪ್ರಭೆ ಪದದ ಅಕ್ಷರಶಃ ಅರ್ಥವಾದರೆ ಅವಳನ್ನು ಕುರಿತ ಕಥೆಗಳು ಹೀಗಿವೆ ನೋಡಿ.

ಹಿಂದೂಪುರಾಣಗಳ ಪ್ರಕಾರ ಸ್ವಯಂಪ್ರಭಾ ಒಬ್ಬ ತಾಪಸಿ. ಶಾಂಡಿಲ್ಯ ಮುನಿಯ ಮಗಳಾದುದರಿಂದ ಈಕೆಗೆ ಶಾಂಡಿಲಿಯೆಂಬುದು ನಾಮಾಂತರ. ಹೇಮೆಯೆಂಬ ಅಪ್ಸರಸಿಯ ಸಖಿ. ದೇವಶಿಲ್ಪಿಯ ಮಯನ ಪತ್ನಿ ಹೇಮೆ ವಾಸ ಮಾಡಿದ್ದ ಮಯನಿರ್ಮಿತ ದಿವ್ಯಗುಹೆಯಲ್ಲಿ ಹೇಮೆ ಅದನ್ನು ಬಿಟ್ಟ ನಂತರ ಈ ಸ್ವಯಂಪ್ರಭೆ ವಾಸವಾಗಿದ್ದಳು. ಹನುಮಾದಿಗಳು ಸೀತೆಯನ್ನು ಹುಡುಕುವುದಕ್ಕಾಗಿ ತೆಂಕಣ(ದಕ್ಷಿಣ) ದಿಕ್ಕಿಗೆ ತೆರಳಿದಾಗ ನೀರಡಿಕೆಯಿಂದ ಬಳಲಿ ಈ ಗುಹೆಯನ್ನು ಹೊಕ್ಕರು. ಅಲ್ಲಿ ಸ್ವಯಂಪ್ರಭೆಯನ್ನು ಕಂಡು ಅವಳಿಂದ ಸತ್ಕೃತರಾಗಿ ಹೊರಬಂದರು. ಗರುಡನು ಈಕೆಗೆ ಕೇಡನ್ನು ಬಗೆದು ರೆಕ್ಕೆಗಳನ್ನು ಉದುರಿಸಿಕೊಂಡು, ಮರಳಿ ಆಕೆಯ ಅನುಗ್ರಹದಿಂದ ಗರಿಗಳನ್ನು ಪಡೆದನಂತೆ.

ಜೈನರ ಪವಿತ್ರಪುರಾಣವಾದ ಆದಿಪುರಾಣದಲ್ಲೂ ಒಬ್ಬ ಸ್ವಯಂಪ್ರಭೆ ಬರುತ್ತಾಳೆ. ಲಲಿತಾಂಗ – ಸ್ವಯಂಪ್ರಭೆಯರ ಕಥೆಯಲ್ಲಿ ಲಲಿತಾಂಗನ ಮರಣದ ನಂತರ ಅವನಿಗಾಗಿ ಕೊರಗಿ ಕೊರಗಿ ಮುಂದಿನ ಜನ್ಮದಲ್ಲಿ ಶ್ರೀಮತಿ ಎಂಬ ಹೆಣ್ಣಾಗಿ ಜನಿಸಿ, ವಜ್ರಜಂಘನಾಗಿ ಹುಟ್ಟಿದ ಲಲಿತಾಂಗನನನ್ನು ವರಿಸುವ ಹೆಣ್ಣು ಇವಳು. ಇವಳನ್ನು ಒಬ್ಬ ಅಮರ ಪ್ರೇಮಿಕೆಯೆಂದು ಜೈನಪುರಾಣಗಳು ಚಿತ್ರಿಸಿವೆ. ಸ್ತ್ರೀವಾದಿ ಅಧ್ಯಯನದ ದೃಷ್ಟಿಯಿಂದ ನೋಡುವುದಾದರೆ ಸ್ತ್ರೀಯಲ್ಲಿನ ಅನಂತ ಸಾಮರ್ಥ್ಯದ ಒಂದು ಭಾಗ ಮಾತ್ರ ಈ ಸ್ವಯಂಪ್ರಭೆಯಲ್ಲಿ ಪ್ರಕಟಗೊಂಡಿದೆ. ಈ ದೃಷ್ಟಿಯಿಂದ ಇವಳು ಹೆಸರಿಗಷ್ಟೇ ಸ್ವಯಂ`ಪ್ರಭೆ’. ಸದ್ಯಕ್ಕೆ ನಾವು ಅನ್ವರ್ಥನಾಮದ ಸ್ವಯಂಪ್ರಭೆಯರ ಬಗ್ಗೆ ಅಂದರೆ ತಮಗೆ ತಾವೇ ಬೆಳಕಾದ ಮತ್ತು ಆಗುತ್ತಿರುವ ಇಂದಿನ ಯುವತಿಯರ ಬಗ್ಗೆ ಮಾತಾಡುತ್ತಿದ್ದೇವೆ.

ಇಂದು ನಮ್ಮ ಸಮಾಜದ ಯುವತಿಯರು ಮಾಡುತ್ತಿರುವ ಆಯ್ಕೆಗಳು ಎಲ್ಲ ಸಿದ್ಧರೂಪಿ ಪಡಿಯಚ್ಚುಗಳನ್ನು (ಸ್ಟೀರಿಯೋಟೈಪ್‌ಗಳನ್ನು)ಒಡೆದು ನಮ್ಮನ್ನು ಹೊಸ ರೀತಿಯಲ್ಲಿ ಯೋಚಿಸಲು ಬಲವಂತಿಸುತ್ತಿವೆ. ಐವತ್ತು ವರ್ಷಗಳ ಹಿಂದೆ ಸಹ ಅಡಿಗೆ, ಮನೆವಾಳ್ತೆ, ಸೀರೆ-ಒಡವೆಗಳ ಮೇಲಿನ ಆಸೆ, ಪುರುಷನೋಟದ ಪರಿಕ್ರಮಗಳೇ ಉದ್ಯೋಗಸ್ಥ ಮಹಿಳೆಯರ ಒಳಗಿನ ಪ್ರಮುಖ ಗುರಿಯಾಗಿದ್ದವು. ಒಂದು ರೀತಿಯ ಅಪರಾಧೀಪ್ರಜ್ಞೆಯಿಂದಲೇ ಆಕೆ ಕೆಲಸಕ್ಕೆ ಹೋಗುವ ಸಂದರ್ಭ ಇತ್ತು. ಆದರೆ ಜಾಗತೀಕರಣೋತ್ತರ ಉದ್ಯೋಗಕ್ಷೇತ್ರದ ಹೊರಗುತ್ತಿಗೆ ಕೆಲಸಗಳು, ರಾತ್ರಿಪಾಳಿಗಳು, ವಿದೇಶ ಪ್ರಯಾಣಗಳು, ಇವೆಲ್ಲವುಗಳಿಂದಾಗಿ ಒಟ್ಟು ಉದ್ಯೋಗ ಕ್ಷೇತ್ರದಲ್ಲಿನ ಬದಲಾವಣೆಯ ಭಾಗವಾಗಿ ಸ್ತ್ರೀಉದ್ಯೋಗಜಗತ್ತಿನ ಸ್ವರೂಪ ಬದಲಾಯಿತು. ರಾತ್ರಿಬಸ್ಸುಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಆಸನಗಳನ್ನು ಕಾಯ್ದಿರಿಸುವಿಕೆ, ಕೇವಲ ಹೆಂಗಸರೇ ದೇಖರೇಖಿ ಮಾಡುವ ಹೋಟಲು ಕೋಣೆಗಳು… ಈ ಮುಂತಾಗಿ ಸಾರ್ವಜನಿಕ ಉದ್ಯಮ ಪ್ರಪಂಚದಲ್ಲಿ ಬದಲಾವಣೆಗಳಾದವು. ಜೊತೆಗೆ ಬಿಡುವು ಹಾಗೂ ಮನರಂಜನೆಯ ಪ್ರಪಂಚದಲ್ಲೂ, ಕೇವಲ ಹೆಂಗಸರು ಜೊತೆಗೂಡಿ ಅಥವಾ ಒಬ್ಬರೇ ಪ್ರವಾಸ ಹೋಗುವಂಥದ್ದು, ಇಂತಹ ನೂತನ ಹೆಜ್ಜೆಗಳನ್ನು ಕಂಡೆವು. ಗಮನಿಸಬೇಕಾದ ಬಹಳ ಮುಖ್ಯ ಮನೋನೆಲೆ ಅಂದರೆ ಇಂದು ಉದ್ಯೋಗಕ್ಕೆ ಹೆಂಗಸರು ಹೋಗುವುದರ ಬಗ್ಗೆ ಆತ್ಮವಿಶ್ವಾಸ ಇದೆ, ಅಪರಾಧೀಪ್ರಜ್ಞೆ ಇಲ್ಲ. ಇದು ಬಹುದೊಡ್ಡ ಸಾಮಾಜಿಕ ಪಲ್ಲಟ ಎಂದು ನಾವು ಗುರುತಿಸಿಕೊಳ್ಳಬೇಕು.

ಉದ್ಯೋಗ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯಿಂದಾಗಿ ಮದುವೆಯ ವಿಷಯದಲ್ಲೂ ಹೆಣ್ಣುಮಕ್ಕಳು ಯೋಚಿಸುವ ರೀತಿ ಬದಲಾಗಿದೆ. `ಒಳ್ಳೆಯ ಗಂಡ ಸಿಗಲಪ್ಪಾ’ ಎಂಬುದೇ ಎಲ್ಲ ಪೂಜೆ ಪುನಸ್ಕಾರಗಳ ಮೂಲಮಂತ್ರವಾಗಿದ್ದುಕೊಂಡು, ಮದುವೆ ಗೊತ್ತಾದಾಗ `ಫಲಿಸಿತು ಒಲವಿನ ಪೂಜಾಫಲ, ನನಗಿಂದು ಕೂಡಿ ಬಂತೇ ಕಂಕಣಬಲ!’ ಎಂದು ಸಂಭ್ರಮಿಸುವ ಮನೋಮೂಡಿಕೆಗಳು ಗಾಳಿಯಲ್ಲಿದ್ದ ಸನ್ನಿವೇಶವು ಕೇವಲ ಮೂವತ್ತು-ನಲವತ್ತು ವರ್ಷಗಳ ಹಿಂದೆ ಸಹ ಇತ್ತು. `ಮಗಳ ಮದುವೆಯಾದರೆ ಅಲ್ಲಿಗೆ ಮುಗಿಯಿತಪ್ಪ! ಸದ್ಯ ನಮ್ಮ ಜವಾಬ್ದಾರಿ ಕಳೆಯಿತು’ ಎಂದು ನಿಟ್ಟುಸಿರು ಬಿಡುವ ಗಳಿಗೆಗಾಗಿ ಅಪ್ಪ ಅಮ್ಮ ಕಾಯುವುದು ನಮ್ಮ ಸುತ್ತಮುತ್ತಲ ಮನೆಗಳಲ್ಲೂ, ಬಂಧುಬಳಗದಲ್ಲೂ ಮತ್ತು ಸಿನಿಮಾಗಳಲ್ಲೂ ಅಷ್ಟೇ ಏಕೆ ಒಟ್ಟು ಗಾಳಿಯಲ್ಲೂ ಇದೆಯೇನೋ ಎಂಬಂತಹ ವಾತಾವರಣ ಇತ್ತು. ಆದರೆ ಈಗ ಇದರಲ್ಲಿ ಬದಲಾವಣೆ ಕಾಣುತ್ತಿದೆ. ಮದುವೆ ಎಂಬ ಬಹುಪ್ರಾಚೀನ ಸಂಸ್ಥೆಯನ್ನು ಈಗಿನ ಯುವಪೀಳಿಗೆ `ಝೆನ್ – ಝೀ’ ಪ್ರಶ್ನಿಸುತ್ತಿದೆ. ಮದುವೆ ಬೇಡ ಅನ್ನುವ ಹುಡುಗಿಯರು, ಮೂವತ್ತು ವಯಸ್ಸಿನ ನಂತರ ಮದುವೆ ಆಗುತ್ತಿರುವ ಹುಡುಗಿಯರು, ಸಹಜೀವನ(ಲಿವ್ ಇನ್ ರಿಲೇಷನ್‌ಶಿಪ್ – ಮದುವೆಯಾಗದೆ ಗಂಡು ಹೆಣ್ಣು ಒಟ್ಟಿಗೆ ಜೀವಿಸುವುದು), ವಿಚ್ಛೇದನಗಳ ಸಂಖ್ಯೆಯಲ್ಲಿ ಹೆಚ್ಚಳ, ಸಲಿಂಗಕಾಮಕ್ಕೆ ಸಂಬಂಧಿಸಿದ ಆಯ್ಕೆಗಳು – ಇವು ಸಾಂಪ್ರದಾಯಿಕ ಸಮಾಜವನ್ನು ಅಲುಗಾಡಿಸುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಬದಲಾವಣೆಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದರ ಜೊತೆಗೆ ಈ ಯುಗದ ಕೇಂದ್ರಚಾಲಕಶಕ್ತಿಯಾದ ತಂತ್ರಜ್ಞಾನವು ಇವೆಲ್ಲವನ್ನೂ ಎಲ್ಲರ ಗಮನಕ್ಕೂ ಬಹು ವೇಗವಾಗಿ ತಲುಪಿಸುತ್ತಿದೆ ಮತ್ತು ಯುವಜನಾಂಗದ ಜೀವನಶೈಲಿಯನ್ನು ಬಹಳವಾಗಿ ಪ್ರಭಾವಿಸುತ್ತಿದೆ.

ಹಾಗಾದರೆ ನಮ್ಮ ಮುಂದಿನ ಆಯ್ಕೆಯೇನು? `ಕಾಲ ಕೆಟ್ಟು ಹೋಗಿದೆ, ನಮ್ಮ ಹೆಣ್ಣುಮಕ್ಕಳು ಮತ್ತು ಕುಟುಂಬ ವ್ಯವಸ್ಥೆ ಹಿಂದಿನ ಹಾಗಿಲ್ಲ ಅಯ್ಯೋ’ ಎಂದು ಹಳಹಳಿಸುತ್ತಾ ಕೂರುವುದೋ ಅಥವಾ ಈ ಬದಲಾವಣೆಯಲ್ಲಿರುವ ಸ್ವಾತಂತ್ರ್ಯ ಮತ್ತು ಸಂತೋಷದ ಬೀಜಗಳನ್ನು ಗುರುತಿಸುವುದೋ?

ಇದು ಅಂತಿಮವಾಗಿ ಮನಃಸ್ಥಿತಿಯ ಪ್ರಶ್ನೆ. ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲೇ ಇದ್ದ ಹೆಣ್ಣುಮಕ್ಕಳು ಮೊಟ್ಟಮೊದಲು ಸಾರ್ವಜನಿಕ ಶಾಲೆಗೆ ಹೋದಾಗ, ದೇವದಾಸಿಯರಿಗೆ ಮಾತ್ರ ಮೀಸಲು ಎಂದು ಭಾವಿಸಿದ್ದ ಭರತನಾಟ್ಯವನ್ನು ಸಾಂಪ್ರದಾಯಿಕ ಕುಟುಂಬಗಳ ಹೆಣ್ಣುಮಕ್ಕಳು ಕಲಿಯಲು ಆರಂಭಿಸಿದಾಗ, ಯಂತ್ರಜ್ಞಾನ(ಇಂಜಿನಿಯರಿಂಗ್), ವೈದ್ಯಕೀಯ ಶಿಕ್ಷಣ, ವಿಜ್ಞಾನ ಸಂಶೋಧನೆ, ಸೇನೆಯಲ್ಲಿ ಸೇವೆ, ವಾಹನ ದುರಸ್ತಿ ಹಾಗೂ ನಿರ್ವಹಣೆ ಮುಂತಾದ `ಪುರುಷ ಸೀಮಿತ’ವೆಂದು ಭಾವಿಸಲಾಗಿದ್ದ ವೃತ್ತಿಗಳಿಗೆ ಹೆಣ್ಣುಮಕ್ಕಳು ಮೊದಲ ಬಾರಿಗೆ ಹೋದಾಗ ಮನೆಗಳಲ್ಲಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಗಾಬರಿ, ಸಂಚಲನ ಆಗಿತ್ತು ಅಲ್ಲವೇ? ನಿಧಾನವಾಗಿ ನಮಗೆ ಇದು ರೂಢಿಯಾಗುತ್ತಾ ಬಂತು. ಇದೇ ರೀತಿಯಲ್ಲಿ `ನಾನು ಮದುವೆಯನ್ನು ನನ್ನ ಜೀವನದ ಕೇಂದ್ರಆಯ್ಕೆಯಾಗಿಸುವುದಿಲ್ಲ, ಯಾವುದೋ ಒಂದು ಕಲೆ, ಆಸಕ್ತಿ, ಸ್ವ ಉದ್ಯಮ, ಗುರಿಯಲ್ಲಿ ನನಗೆ ಹೆಚ್ಚು ಮನಸ್ಸಿದೆ, ನಾನು ಅವಿವಾಹಿತೆಯಾಗಿ ಅಥವಾ ನನ್ನ ಸ್ನೇಹ ಬಳಗದ ಜೊತೆ ಅಥವಾ ಆಯ್ಕೆ ಮಾಡಿದ ಕುಟುಂಬದ ಜೊತೆ ಯಾವುದೇ ಜೀವವಿರೋಧಿ ಧೋರಣೆ ಇಲ್ಲದೆ ಜೀವಿಸುತ್ತೇನೆ’ ಎಂದು ಹೆಣ್ಣುಮಕ್ಕಳು ಹೇಳಿದರೆ ನಾವು ಏಕೆ ಬೆಚ್ಚಿಬೀಳಬೇಕು? ನಾವು ಈಗಿನ ಯುವತಿಯರ ಭಿನ್ನತೆಯನ್ನು ದೂಷಿಸುವ ಬದಲು ಗೌರವಿಸಬೇಕು, ಸಂಭ್ರಮಾಚರಿಸಬೇಕು ಎಂಬುದು ನನ್ನ ಅಭಿಪ್ರಾಯ.

ನಮ್ಮ ಸಂಸ್ಕೃತಿ, ಪರಂಪರೆಗಳಲ್ಲಿ ಹೆಣ್ಣುಮಕ್ಕಳನ್ನು ವಿದ್ಯಾವಂತೆಯರನ್ನಾಗಿ ಮತ್ತು ಉದ್ಯೋಗಿನಿಯರನ್ನಾಗಿ ನೋಡುವುದು, ನೋಡಲಾಶಿಸುವುದು ಈಗ ತೀರಾ ಹೊಸತೇನಲ್ಲ ಬಿಡಿ. ಕಳೆದ ಶತಮಾನದಿಂದ ಈ ಪರಿಕ್ರಮ ಪ್ರಾರಂಭವಾಯಿತು ಹಾಗೂ ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ಈ ನೋಟರೀತಿಯು ಬಲಗೊಂಡಿತು. ಉದಾಹರಣೆಗೆ ಕನ್ನಡ ಆಧುನಿಕ ಸಾಹಿತ್ಯದಲ್ಲಿ ಉದ್ಯೋಗಿನಿಯರನ್ನು ಚಿತ್ರಿಸುವಾಗ ತ್ರಿವೇಣಿಯವರಲ್ಲಿ ತುಸು ಅಳುಕು ಕಾಣುತ್ತಿದ್ದರೆ ನೇಮಿಚಂದ್ರ ಅವರ ಹೊತ್ತಿಗೆ ಅವಳನ್ನು ಅಭಿಮಾನ ಹಾಗೂ ಆತ್ಮವಿಶ್ವಾಸದಿಂದ ಚಿತ್ರಿಸುವ ಕ್ರಮ ಕಂಡುಬಂತು. ಈಗಂತೂ ಸ್ತ್ರೀಯರು ಭಾರೀವಾಹನ ಚಾಲನೆ, ವಾಯುಸೇನೆ, ವಾಹನ ದುರಸ್ತಿಯ ಗಾಡಿಖಾನೆ(ಗ್ಯಾರೇಜ್) ಮುಂತಾದ ಈ ತನಕ ಕೇವಲ ಪುರುಷರದೆಂದು ಭಾವಿಸಲಾದ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಉಜ್ಜುಗಿಸುತ್ತ ಕಾರ್ಯಕ್ಷೇತ್ರಗಳ ಆಗಸಕ್ಕೆ ಹೊಸಬಣ್ಣಗಳನ್ನು ಬಳಿದಿದ್ದಾರೆ. ಒಬ್ಬರೇ ಪ್ರಯಾಣ ಮಾಡುವುದನ್ನು, ತಮ್ಮ ಗಾಡಿಯಲ್ಲಿ ಎಷ್ಟು ಹೊತ್ತಿಗೆ ಬೇಕಾದರೂ ಒಬ್ಬರೇ ಹೋಗಿ ಬರುವುದನ್ನು, ಒಬ್ಬೊಬ್ಬರೇ ಪ್ರವಾಸಗಳಿಗೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಇದು ಒಂದು ಜಿಗಿತ ಅಂದುಕೊಳ್ಳಬಹುದಾದರೆ ಸಾಂಪ್ರದಾಯಿಕ ಸಮಾಜದ ಊಹೆಗೆ ನಿಲುಕದ ಇನ್ನೊಂದು ಜಿಗಿತವನ್ನು ನಮ್ಮ ಹೆಣ್ಣುಮಕ್ಕಳು ಈಗ ಮಾಡುತ್ತಿದ್ದಾರೆ. ಅದೇನೆಂದರೆ ಲಿಂಗ ಎಂಬುದು ಕೇವಲ ಗಂಡು-ಹೆಣ್ಣು ಎಂದು ಎರಡು ತುದಿಗಳಲ್ಲ, ಗಂಡಿನೊಳಗೆ ಹೆಣ್ಣು ಮತ್ತು ಹೆಣ್ಣಿನೊಳಗೆ ಗಂಡು ಬೇರೆ ಬೇರೆ ಪ್ರಮಾಣಗಳಲ್ಲಿ ಇರಬಹುದು, ಹೀಗಾಗಿ ಲಿಂಗ ಎಂಬುದು ಶ್ರೇಣಿ ಎಂಬ ಹೊಸ ತಿಳುವಳಿಕೆಯನ್ನು ತಮ್ಮ ನಡೆನುಡಿ, ಇರಿಸರಿಕೆ, ಹೋರಾಟಗಳಿಂದ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಮೌನ ಮಾತುಗಳಲ್ಲಿ ಈ ಹೊಸ ಬೆಳವಣಿಗೆ ಗಾಳಿಯಂತೆ ಬೀಸುತ್ತಿದೆ. ಮೂರನೆಯ ಲಿಂಗಿಗಳು ತಮ್ಮ ಅವಕಾಶಕ್ಕಾಗಿ ಹಕ್ಕೊತ್ತಾಯವನ್ನು ಮುಂದಿಡುತ್ತಿರುವ ಹೊತ್ತಿನಲ್ಲೇ ಸ್ತ್ರೀವಾದೀ ಹೋರಾಟವು ಒಂದು ಹೊಸಜಿಗಿತ ಕಂಡದ್ದನ್ನು ಗಮನಿಸಿದಿರಾ?

ವಾಸ್ತವ ಜೀವನದ ಮಾತಿಗೆ ಬಂದರೆ, ರಸ್ತೆ, ಮಾರುಕಟ್ಟೆ, ಉದ್ಯಾನವನ, ಖಾನಾವಳಿಗಳು, ಕಲಾತಾಣಗಳು ಮುಂತಾದ ಸಾರ್ವಜನಿಕ ಸ್ಥಳಗಳು ಅನೇಕ ವರ್ಷಗಳ ಕಾಲ ಸ್ತ್ರೀಯರಿಗೆ ನಿಷಿದ್ಧವಾಗಿದ್ದಂತಹವು ಈಗ ನಿಧಾನವಾಗಿ ಅವರಿಗೆ ತೆರಕೊಳ್ಳುತ್ತಿರುವುದನ್ನು ನಾವು ಗಮನಿಸುತ್ತೇವಲ್ಲ, ಇದನ್ನು ಮಹಿಳಾ ಅಧ್ಯಯನದ ಪರಿಭಾಷೆಯು ಸ್ತ್ರೀದೃಶ್ಯತೆಯ ಹೆಚ್ಚಳ, ಅಂದರೆ ಹೆಂಗಸರ ಕಾಣಿಸುವಿಕೆಯು ಹೆಚ್ಚಾಗುತ್ತಿರುವುದು ಎಂದು ವ್ಯಾಖ್ಯಾನಿಸುತ್ತದೆ (ವಿಸಿಬಿಲಿಟಿ ಆಫ್ ವಿಮೆನ್ ಇನ್ ಪಬ್ಲಿಕ್ ಸ್ಫಿಯರ್).

ನಮ್ಮ ಪಕ್ಕದ ಬೀದಿಯಲ್ಲೊಬ್ಬ ಮಹಿಳೆ ಇದ್ದಾರೆ. ಸುಮಾರು 45 ವಯಸ್ಸಿನ ಅವರು ಕೇವಲ ಗಿಡಗಳೊಂದಿಗೆ ಒಂಟಿಯಾಗಿ ಜೀವಿಸುತ್ತಿದ್ದಾರೆ. ವೃತ್ತಿಯಿಂದ ಆಕೆ ಗಣಕಯಂತ್ರಜ್ಞಾನಿ(ಸಾಫ್ಟ್ವೇರ್ ಇಂಜಿನಿಯರ್). ಮದುವೆಯಾಗಿ ಒಬ್ಬ ಮಗಳಿರುವುದು ಹೌದಾದರೂ ಆಕೆ ಗಂಡನಿಂದ ವಿಚ್ಛೇದನ ಪಡೆದು ತಾನು ಹುಟ್ಟಿದ ಮನೆಯಲ್ಲಿ ಜೀವಿಸುತ್ತಿದ್ದಾರೆ. ದುರದೃಷ್ಟವಶಾತ್ ಬಹಳ ನೋವುಂಟು ಮಾಡುವ ಸಂಗತಿಗಳು ಆಕೆಯ ಜೀವನದಲ್ಲಿ ನಡೆದವು. ಇದ್ದ ಒಬ್ಬ ಅಣ್ಣ ಆತ್ಮಹತ್ಯೆಗೆ ಬಹಳ ವರ್ಷಗಳ ಹಿಂದೆ ಶರಣಾಗಿದ್ದ. ಈಕೆಯ ಅವಿವಾಹಿತ ಅಕ್ಕ ಹಾಗೂ ತಾಯಿ ಕೊರೋನಾ ಮಾರಿಗೆ ಬಲಿಯಾದರು. ಇದಾದ ನಂತರ ಗಾಯದ ಮೇಲೆ ಬರೆ ಎಳೆದಂತೆ ಅವರ ವೃದ್ಧ ತಂದೆಯೂ ಕಾಲವಾದರು. ಒಂದು ರೀತಿಯ ಒಂಟಿತನಕ್ಕೆ ಶರಣಾದ ಅವರು ಮನೆಯ ಕೆಲಸದವರನ್ನು ಸಹ ಕೆಲಸದಿಂದ ಬಿಡಿಸಿ ಗಿಡಗಳನ್ನೇ ತನ್ನ ಸಂಗಾತಿ ಮಾಡಿಕೊಂಡುಬಿಟ್ಟರು. ಮಾನವ ಸಂಬಂಧ, ಸಂಪರ್ಕವೇ ಇಲ್ಲದೆ ಆಕೆ ಬದುಕುತ್ತಿದ್ದಾರೆ. ಸಾಂಪ್ರದಾಯಿಕ ನೋಟಕ್ರಮದ ದೃಷ್ಟಿಯಿಂದ ಇದು ಬಹಳ `ಸಂತೋಷಕರ’ ಜೀವನ ಅಲ್ಲವಾದರೂ ಒಬ್ಬ ಸ್ತ್ರೀ ಹೀಗೆ ಬದುಕಬಹುದು ಎಂಬ ಹೊಸ ಸಾಧ್ಯತೆಯೊಂದನ್ನು ಆಕೆ ಮುಂದಿಟ್ಟಿದ್ದಾರೆ ಎಂಬ ಭಾವನೆ ನನ್ನದು. ಮನೆಯಿಂದಲೇ ಮಾಡಬಹುದಾದ ಕೆಲಸದ ರೀತಿ(ವರ್ಕ್ ಫ್ರಂ ಹೋಂ) ಕೂಡ ಇದಕ್ಕೆ ಅನುಕೂಲ ತಂದಿದೆ. ಈಕೆ ಕೂಡ ಒಬ್ಬ `ಸ್ವಯಂಪ್ರಭೆ’ಯೇ ಅಲ್ಲವೆ?

******

ಹೆಣ್ಣುಮಕ್ಕಳೆಂಬ ಸ್ವಯಂಪ್ರಭೆಯರನ್ನು ಗೌರವಿಸುವ ಕಾಲ ಬಂದಾಗ ನಮ್ಮ ಕುಟುಂಬಗಳು ಹಾಗೂ ಸಮಾಜ ಹೇಗಿರಬಹುದು ಎಂಬ ನನ್ನ ಹೊಂಗನಸೊಂದನ್ನು ಇಲ್ಲಿ ಓದುಗರ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.

1. ಗಂಡು ಮಕ್ಕಳು, ಹೆಣ್ಣುಮಕ್ಕಳು ಹಾಗೂ ತೃತೀಯ ಲಿಂಗದ ಮಕ್ಕಳು ಮೂರೂ ರೀತಿಯ ಮಕ್ಕಳನ್ನೂ ಏಕರೀತಿಯಿಂದ ಮತ್ತು ಸಮಾನ ಪ್ರೀತಿಯಿಂದ ಮನೆಗಳಲ್ಲಿ ಬೆಳೆಸಲಾಗುತ್ತದೆ. ಅಡಿಗೆ ಮಾಡುವುದು, ಗಾಡಿ ಓಡಿಸುವುದು, ಬ್ಯಾಂಕು-ಅಂಚೆ ಕಛೇರಿ ಮುಂತಾದವುಗಳೊಂದಿಗೆ ವ್ಯವಹರಿಸುವುದು, ಆರ್ಥಿಕ ನಿರ್ವಹಣೆ ಮುಂತಾದ ಜೀವನ ಕೌಶಲ್ಯಗಳನ್ನು ನಾವು ಮೂರೂ ರೀತಿಯ ಮಕ್ಕಳಿಗೂ ಸಮಾನವಾಗಿ ಕಲಿಸುತ್ತೇವೆ.

2. ಹೆಣ್ಣುಮಕ್ಕಳು ಅವಿವಾಹಿತರಾಗಿ ಉಳಿಯುವ ಆಯ್ಕೆಯನ್ನು ಮುಂದಿಟ್ಟರೆ ಅಪ್ಪ ಅಮ್ಮ ಮತ್ತು ಬಳಗದವರು ಅಂತಹ ಹೆಣ್ಣುಮಕ್ಕಳನ್ನು ಅಲಿಖಿತ ಬಹಿಷ್ಕಾರಕ್ಕೆ ಒಳಪಡಿಸುವುದಿಲ್ಲ.

3. ಕುಟುಂಬದಲ್ಲಿ ಗಂಡಸರು ಹೆಂಗಸರ ಸ್ವಾತಂತ್ರ್ಯ, ಬಿಡುವು, ಇಚ್ಛೆಗಳಿಗೆ ಕೇವಲ ಬಾಯುಪಚಾರಕ್ಕಲ್ಲದೆ ನಿಜವಾಗಿಯೂ ಬೆಲೆ ಕೊಡುತ್ತಾರೆ. `ಅಯ್ಯೋ….. ಮನೆ ಅಂದರೆ ಬರೀ ಕೆಲಸ, ನಿರ್ಬಂಧ, ಸಂಜೆಗಳ ಸೆರೆಮನೆ’ ಎಂಬ ಭಾವನೆ ಹೆಣ್ಣುಮಕ್ಕಳಲ್ಲಿ ಇರುವುದಿಲ್ಲ. ಏಕೆಂದರೆ ಆಗ, `ಇದು ಗಂಡಸರ ಕೆಲಸ ಮತ್ತು ಇದು ಹೆಂಗಸರ ಕೆಲಸ ಎಂಬ ಅಲಿಖಿತ ಮಾರ್ಗಸೂಚಿ’ ಮನೆಗಳಲ್ಲಿ ಇರುವುದಿಲ್ಲ. ಇಬ್ಬರೂ ಪರಸ್ಪರ ಗೌರವದಿಂದ ಒಬ್ಬರನ್ನೊಬ್ಬರು ನಡೆಸಿಕೊಳ್ಳುತ್ತಾ ಕೆಲಸಗಳನ್ನು ಹಂಚಿಕೊಂಡು ನೆಮ್ಮದಿಯಿಂದ ಬದುಕುತ್ತಾರೆ. ಒಂದು ಸಂಜೆಯಲ್ಲಿ ಅಮ್ಮ `ನಾನು ಗೆಳತಿಯರ ಜೊತೆ ನಾಟಕಕ್ಕೆ ಹೋಗಿ ಬರುತ್ತೇನೆ, ಮನೆ ಮತ್ತು ಮಕ್ಕಳನ್ನು ಇವತ್ತು ನೀವು ನೋಡಿಕೊಳ್ಳಿ’ ಎಂದರೆ ಅದು ಮನೆಮಂದಿಗೆ `ಸಹಜ’ವಾಗಿ ಕೇಳಿಸುತ್ತದೆ, `ಬೇಜವಾಬ್ದಾರಿ ಹೆಣ್ಣು’ ಎಂಬ ಹಣೆಪಟ್ಟಿ ಹಚ್ಚಿಸಿಕೊಂಡು ಆ `ಅಮ್ಮ’ ನೋಯಬೇಕಿಲ್ಲ.

ಈ ಬರಹದ ಕೊನೆಯ ಮಾತಾಗಿ ಬಹುಶಃ ಹೀಗೆನ್ನಬಹುದು – ಬದಲಾವಣೆಯೆಂಬ ಜಗದ ನಿಯಮವು ಸ್ವತಂತ್ರ ಮನಸ್ಸಿನ ಯುವತಿಯರೆಂಬ ಸ್ವಯಂಪ್ರಭೆಯರನ್ನು ತಂದು ನಮ್ಮ ಮುಂದೆ ನಿಲ್ಲಿಸಿದೆ. ಬನ್ನಿ, ಅವರನ್ನು ಸಂಭ್ರಮಾಚರಿಸೋಣ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ