Advertisement
ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಿಲ್ದಾಣಕ್ಕೆ ನಡೆಯುವಾಗ ಆಗಾಗ್ಗೆ ಎದ್ದು ಬರುತ್ತಿದ್ದ ಶೂಗಳು ನನ್ನ ನಡಿಗೆಯ ವೇಗವನ್ನು ಕುಂಠಿತಗೊಳಿಸಿದ್ದವು. ನಾನು ತಡವಾಗುತ್ತದೆಯೆಂದು ಭಾವಿಸಿ ಶೂಗಳನ್ನು ಕೈಯಲ್ಲಿ ಹಿಡಿದು ರೈಲ್ವೇ ನಿಲ್ದಾಣ ಸಿಗುವವರೆಗೆ ಓಡಿದೆ. ನನ್ನ ಅದೃಷ್ಟಕ್ಕೆ ರೈಲು ಇನ್ನೂ ಹೋಗಿರಲಿಲ್ಲ. ಟಿಕೇಟ್ ತೆಗೆದುಕೊಂಡು ರೈಲನ್ನು ಹತ್ತಿ ಕುಳಿತೆ. ಇದೇ ಮೊದಲ ಬಾರಿಗೆ ನಾನು ಧಾರವಾಡಕ್ಕೆ ಹೋಗುತ್ತಿದ್ದೆ. ನನ್ನ ಎದುರಿಗೆ ಕುಳಿತಿದ್ದವರ ಬಳಿ ಹೇಗೆ ಹೋಗಬೇಕೆಂದು ಕೇಳಿದಾಗ ಅವರು ಮಾಹಿತಿ ತಿಳಿಸಿದರಲ್ಲದೇ ನನ್ನ ಬಗ್ಗೆ ಕನಿಕರ ತೋರಿ “ನಿಮಗೆ ಕೆಲಸ ಸಿಗದಿದ್ದರೆ ನನಗೆ ಕರೆ ಮಾಡಿ ನಾನು ನಿಮಗೆ ಬೇರೊಂದು ಕೆಲಸ ಕೊಡಿಸುತ್ತೇನೆ” ಎಂದು ಅವರ ನಂಬರ್ ಕೊಟ್ಟು ಹೋದರು.
ಬಸವನಗೌಡ
ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತಾರನೆಯ ಕಂತು ನಿಮ್ಮ ಓದಿಗೆ

ನಮ್ಮ ಜೀವನವು ಈಗಿದ್ದಂತೆಯೇ ಇರುತ್ತೆ ಅಂತಾ ಹೇಳೋಕೆ ಆಗೋಲ್ಲ. ಇಲ್ಲಿ ಟರ್ನಿಂಗ್ ಪಾಯಿಂಟ್‌ಗಳು ಬರುತ್ತವೆ. ಅವು ಕೆಲವರಿಗೆ ಉನ್ನತ ಹಂತಕ್ಕೆ ಕೊಂಡೊಯ್ದರೆ ಕೆಲವರನ್ನು ಕೆಳ ಹಂತಕ್ಕೆ ತಲುಪುವಂತೆ ಮಾಡಬಹುದು. ಇವು ನಮ್ಮ ಹಾರ್ಡ್‌ವರ್ಕ್ ಅನ್ನು ಮೀರಿ ಆಗುವಂತಹವು. ಆಧ್ಯಾತ್ಮದಲ್ಲಿ ಇದನ್ನು ‘ಕರ್ಮ ಫಲ’ ಅಂತಾ ಹೇಳ್ತಾರೆ. ಕೆಲವರು ನಾವು ಹೇಗೆ ಆಲೋಚಿಸುತ್ತೇವೆಯೋ ಅದೇ ರೀತಿ ಆಗುತ್ತೇವೆ ‘ಯದ್ಭಾವಂ ತದ್ಭವತಿ’ ಎಂದು ಹೇಳುತ್ತಾರೆ.  ಇದನ್ನು ‘ಮ್ಯಾನಿಫೆಸ್ಟೇಶನ್’ ಮಾಡೋದು ಅನ್ತಾರೆ. ಇನ್ನೂ ಕೆಲವರು ನಾವು ಏನಾಗಬೇಕೆಂದು ಬಯಸುತ್ತೇವೆಯೋ ಅದು ಮೊದಲೇ ಘಟಿಸಿದಂತೆ ಮಾನಸಿಕವಾಗಿ ಮೊದಲೇ ಕಲ್ಪಿಸಿಕೊಂಡರೆ ಆ ರೀತಿಯೇ ಆಗುತ್ತದೆ ಎಂದು ಹೇಳ್ತಾರೆ!  ನಾವೇನಾಗಬೇಕೆಂದು ಬಯಸುತ್ತೇವೆಯೋ ಅದೇ ರೀತಿ ಕಲ್ಪಿಸಿಕೊಳ್ಳುತ್ತಾ ಅದು ‘ಸಬ್ ಕಾನ್ಸಿಯಸ್ ಮೈಂಡ್’ ಗೆ ಹೋದರೆ ಅದು ನಡೆದೇ ನಡೆಯುತ್ತದೆ ಎಂದು ಹೇಳ್ತಾರೆ.

ಅಬ್ದುಲ್ ಕಲಾಮ್‌ರವರು ತಮ್ಮ ಚಿಕ್ಕಂದಿನಲ್ಲಿ ವಿಮಾನ ಹಾರುವುದನ್ನು ನೋಡಿ ಅವರ ಗುರುಗಳಿಗೆ ಅಷ್ಟು ಭಾರವಿರುವ ವಿಮಾನವು ಹಗುರವಾದ ಹಕ್ಕಿ ಹಾರಿದಂತೆ ಹೇಗೆ ಹಾರುತ್ತದೆ? ಎಂದು ಪ್ರಶ್ನಿಸಿದಾಗ ಅವರ ಗುರುಗಳು “ಪ್ರಾಮಾಣಿಕವಾಗಿ ನನಗದು ಗೊತ್ತಿಲ್ಲ. ನೀನು ದೊಡ್ಡವನಾದ ಮೇಲೆ ಅದರ ಬಗ್ಗೆ ತಿಳಿ” ಎಂದು ಹೇಳಿದಾಗ ಕಲಾಂ ರವರ ಮನದಲ್ಲಿ ಗುರುಗಳು ಹೇಳಿದ ಮಾತು ನಾಟಿ ಮುಂದೆ ದೊಡ್ಡ ವ್ಯಕ್ತಿಯಾಗಲು ನೆರವಾಯಿತಂತೆ. ಇದೇ ರೀತಿ ತೇನ್ ಸಿಂಗ್ ರವರು ಹಿಮಾಲಯ ಪರ್ವತ ಏರಿದಾಗ ಪತ್ರಕರ್ತರೊಬ್ಬರು “ಈ ವಯಸ್ಸಿನಲ್ಲಿ ವಿಮಾನ ಪರ್ವತ ಹತ್ತಿದ್ದು ಹೇಗೆ” ಎಂಬ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದಾಗ ಅವರು ನಗುತ್ತಾ “ನಾನು ಹಿಮಾಲಯ ಪರ್ವತ ಹತ್ತಿದ್ದು 10 ನೇ ವಯಸ್ಸಿನಲ್ಲಿಯೇ” ಎಂದರಂತೆ. ಅದಕ್ಕೆ ಪತ್ರಕರ್ತರು “ನೀವು ಹತ್ತಿದ್ದು ಈಗಲೇ ಅಲ್ಲವೇ?” ಎಂದಾಗ “ದೈಹಿಕವಾಗಿ ಹತ್ತಿದ್ದು ಇವತ್ತೇ ಆದರೆ ಮಾನಸಿಕವಾಗಿ ನಾನು ಹಿಂದೆಯೇ ಹತ್ತಿದ್ದು” ಎಂದರಂತೆ. ಅದರ ಬಗ್ಗೆ ಕೇಳಿದಾಗ ಅವರು “ನನ್ನ ಅಮ್ಮ ಹಾಗೂ ನಾನು ಈ ಪ್ರದೇಶದಲ್ಲಿ ಕುರಿ ಕಾಯಲು ಬಂದಿದ್ದಾಗ ಹಿಮಾಲಯ ಪರ್ವತವನ್ನು ತೋರಿಸಿ, ಮಗಾ ಈ ಪರ್ವತವನ್ನು ಇದುವರೆಗೂ ಯಾರೂ ಹತ್ತಿಲ್ಲ. ನೀನು ದೊಡ್ಡವನಾದ ಮೇಲೆ ಹತ್ತು” ಎಂದರಂತೆ. ಅವರ ತಾಯಿಯ ಆಸೆಯನ್ನು ಅವರು ಈಡೇರಿಸಲು ಅಂದೇ ಅವರು ಮನದಲ್ಲಿಯೇ ನಿಶ್ಚಯಿಸಿ ಮುಂದೆ ಅದೇ ಸಾಧನೆ ಮಾಡಿದರಂತೆ. ಈ ಎರಡು ನಿದರ್ಶನಗಳನ್ನು ನೋಡಿದಾಗ ನಾವು ಮೊದಲು ನಾವೇನಾಗಬೇಕೆಂಬುದನ್ನು ನಿರ್ಧರಿಸಿ ಅದೇ ದಿಕ್ಕಿನಲ್ಲಿ ಪ್ರಯತ್ನಿಸಿದರೆ ನಾವು ಆ ಗುರಿಯನ್ನು ತಲುಪಬಹುದು.

ಒಂದೊಮ್ಮೆ ಈ ರೀತಿ ಭಾವಿಸಿಯೂ, ಪ್ರಾಮಾಣಿಕ ಪ್ರಯತ್ನ ಪಟ್ಟಾಗ್ಯೂ ಆ ಗುರಿ ಈಡೇರದೇ ಇದ್ದಾಗ ಅದಕ್ಕೇ ಜೋತು ಬೀಳದೇ ಬೇರೊಂದು ಕಾರ್ಯದಲ್ಲಿ ತೊಡಗಿಕೊಂಡು ಮೊದಲ ಗುರಿಯತ್ತ ಪ್ರಯತ್ನ ಮಾಡುತ್ತಿರಬೇಕು. ನನ್ನದೇ ಜೀವನದಲ್ಲಿ ನಾನು ಶಿಕ್ಷಕ ಆಗಲೇಬೇಕು ಎಂದು ಅಷ್ಟೆಲ್ಲಾ ಶ್ರಮ ಹಾಕಿಯೂ ಕೂಡ ನಾನು ಮೊದಲ ಸಲ ವಿಫಲನಾದೆ. ಆದರೆ ಕೊರಗುತ್ತಾ ಕೂರಲಿಲ್ಲ. ಬದಲಿಗೆ ಬೇರೆ ಬೇರೆ ಅವಕಾಶಗಳನ್ನು ಹುಡುಕುತ್ತಾ ಹೊರಟೆ.  ಈ ಹಿಂದಿನ ಸಂಚಿಕೆಯಲ್ಲಿ ತಿಳಿಸಿದಂತೆ  ನನಗೆ ಕೆಲಸ ಕೊಡಿಸುತ್ತೇನೆಂದು ಆನಂದ ಹೇಳಿದ ಮಾತನ್ನು ನಂಬಿ ನಾನು ಬೆಂಗಳೂರಿಗೆ ಹೋಗುವುದನ್ನು ಬಿಟ್ಟೆ. ಸಂಜೆ ಆನಂದನ ರೂಮಿನ ಕಡೆ ಹೊರಟೆ. ಅವನು ಈ ಮೊದಲು ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಮುನೀಶ್ ಎಂಬುವವರಿಗೆ ಕರೆ ಮಾಡಿ ನನ್ನ ಬಗ್ಗೆ ತಿಳಿಸಿ ಕೆಲಸ ಕೊಡಿಸಿರೆಂದು ಕೇಳಿಕೊಂಡ. ಅದಕ್ಕವರು ಒಪ್ಪಿ ಮ್ಯಾನೇಜರ್ ಬಳಿ ಮಾತಾಡುತ್ತೇನೆಂದು ಹೇಳಿ ಫೋನ್ ಕರೆಯನ್ನು ಕಟ್ ಮಾಡಿದರು. ನಂತರ ಅರ್ಧ ಗಂಟೆ ಬಿಟ್ಟ ನಂತರ ಕೆಲಸಕ್ಕೆ ಸಂದರ್ಶನಕ್ಕೆಂದು ಧಾರವಾಡಕ್ಕೆ ಹೋಗಬೇಕಂತೆ. ಆದರೆ ಅಲ್ಲಿಗೆ ಹೋಗುವಾಗ ನಿಮ್ಮ ಪದವಿಯ ಅಂಕಪಟ್ಟಿಗಳನ್ನು ತೆಗೆದುಕೊಂಡು ಹೋಗಬೇಕಂತೆ ಎಂದು ಹೇಳಿದರು. ನನಗೆ ಈಗ ಪೀಕಲಾಟ ಶುರುವಾಯ್ತು. ಏಕೆಂದರೆ ನಾನು ಆಗ ಪದವಿಯನ್ನು ಪೂರೈಸಿರಲಿಲ್ಲ. ಪಿಯುಸಿ ನಂತರ ಶಿಕ್ಷಕ ತರಬೇತಿ ಕೋರ್ಸ್ ಓದಿದ್ದೆ ಅಷ್ಟೇ. ಈ ವಿಷಯವನ್ನು ಆನಂದನ ಬಳಿ ಹೇಳಿದೆ. ಅವನು “ಅದಕ್ಯಾಕೆ ಯೋಚಿಸುತ್ತೀರಿ ಸಾರ್? ಬೇರೆಯವರ  ಪದವಿ ಅಂಕಪಟ್ಟಿಗೆ ಹೆಸರಿನ ಜಾಗದಲ್ಲಿ ವೈಟನರ್ ಹಚ್ಚಿ ನಿಮ್ಮ ಹೆಸರನ್ನು ಟೈಪಿಸಿ ನಂತರ ಜೆರಾಕ್ಸ್ ಮಾಡಿಸಿಕೊಡುತ್ತೇನೆ. ಅವರು ಕೇಳಿರುವುದು ಜೆರಾಕ್ಸ್ ತಾನೆ? ಒರಿಜಿನಲ್ ಏನಲ್ವಲ್ಲ?”    ಎಂದು ಹೇಳಿದ. ಅವನು ಅದೇ ರೀತಿ ಮಾಡಿ ಕೊಟ್ಟ!!

ಆದರೆ ಈಗ ಇನ್ನೊಂದು ಸಮಸ್ಯೆ ಶುರುವಾಯ್ತು. ನನಗೆ ಧಾರವಾಡಕ್ಕೆ ಹೋಗಲು ನನ್ನ ಬಳಿ ಹಣ ಹಾಗೂ ಹಾಕಿಕೊಂಡು ಹೋಗಲು ಶೂ ಮತ್ತು ಟೈ ಇರಲಿಲ್ಲ. ಇದನ್ನು ಆನಂದನೇ ವ್ಯವಸ್ಥೆ ಮಾಡಿದನು. ನಾನು ಅವನ ಶೂಗಳನ್ನ ತೆಗೆದುಕೊಂಡು ಬಂದೆ. ಆದರೆ ಆ ಶೂಗಳು ನನಗೆ ಆಗುತ್ತಿರಲಿಲ್ಲ. ತುಂಬಾ ಸಡಿಲವಾಗಿದ್ದವು. ನಾನು ಹಳೇ ಬಟ್ಟೆಗಳನ್ನು ತುಂಬಿ ನಡೆಯುವಾಗ ಹೇಗೋ ಕಾಲಿನಲ್ಲಿ ಬಿಗಿಯಾಗಿರುವಂತೆ ಮಾಡಿಕೊಂಡೆ. ಬಸ್ ಚಾರ್ಜ್ ಗಿಂತ ರೈಲಿನಲ್ಲಿ ಹೋದರೆ ಕಮ್ಮಿ ಹಣ ಬೇಕಾಗಬಹುದೆಂದು ನಿರ್ಧರಿಸಿ ರೈಲಿನ ಸಮಯ ಕೇಳಿಕೊಂಡೆ. ಬೆಳಗಿನ ಜಾವ 5:30 ಕ್ಕೆ ರೈಲು ಇದೆಯೆಂದು ತಿಳಿದು. ವಿಪರ್ಯಾಸ ಅಂದರೆ ನನ್ನ ಬಳಿ ರೈಲಿನಲ್ಲೂ ಹೋಗಲಿಕ್ಕೆ ಹಣ ಇರಲಿಲ್ಲ. ಸರಿಸುಮಾರು 8:00 ಗಂಟೆಯ ವೇಳೆಯಲ್ಲಿ ನಮ್ಮ ಜೊತೆ ಸಹೋದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಮಂಗಲಾ ಮೇಡಂ ಮನೆಗೆ ಹೋಗಿ ಅವರ ಬಳಿ ಸಾಲ ಕೇಳಿದೆ. ಅದಕ್ಕವರು ಖುಷಿಯಿಂದಲೇ ಒಪ್ಪಿ ನನಗೆ 500 ರೂಪಾಯಿ ಕೊಟ್ಟರು. ನನಗೆ ತುಂಬಾ ಖುಷಿಯಾಗಿ ಬೆಳಗ್ಗೆ 4:45 ಗಂಟೆಗೆಲ್ಲಾ ಎದ್ದು ಧಾರವಾಡಕ್ಕೆ ಹೋಗೋಕೆ ರೆಡಿ ಆದೆ. ಇಷ್ಟು ಮುಂಚೆ ಏಳಲು ಕಾರಣವೂ ಇತ್ತು. ದಾವಣಗೆರೆಯ ವಿದ್ಯಾನಗರದಲ್ಲಿ ರೂಮ್ ಇದ್ದುದರಿಂದ ರೈಲ್ವೇ ನಿಲ್ದಾಣಕ್ಕೆ ಅಲ್ಲಿಂದ ಸುಮಾರು 3 ಕಿಮೀ ದೂರ ಹೋಗಬೇಕಾಗಿತ್ತು. ಆಟೋದಲ್ಲಿ ಹೋದರೆ ಹೆಚ್ಚಿನ ಹಣ ಕೇಳುತ್ತಾರೆಂದು ನಡೆದೇ ಹೋಗಲು ತೀರ್ಮಾನಿಸಿದೆ.

ನಿಲ್ದಾಣಕ್ಕೆ ನಡೆಯುವಾಗ ಆಗಾಗ್ಗೆ ಎದ್ದು ಬರುತ್ತಿದ್ದ ಶೂಗಳು ನನ್ನ ನಡಿಗೆಯ ವೇಗವನ್ನು ಕುಂಠಿತಗೊಳಿಸಿದ್ದವು. ನಾನು ತಡವಾಗುತ್ತದೆಯೆಂದು ಭಾವಿಸಿ ಶೂಗಳನ್ನು ಕೈಯಲ್ಲಿ ಹಿಡಿದು ರೈಲ್ವೇ ನಿಲ್ದಾಣ ಸಿಗುವವರೆಗೆ ಓಡಿದೆ. ನನ್ನ ಅದೃಷ್ಟಕ್ಕೆ ರೈಲು ಇನ್ನೂ ಹೋಗಿರಲಿಲ್ಲ. ಟಿಕೇಟ್ ತೆಗೆದುಕೊಂಡು ರೈಲನ್ನು ಹತ್ತಿ ಕುಳಿತೆ. ಇದೇ ಮೊದಲ ಬಾರಿಗೆ ನಾನು ಧಾರವಾಡಕ್ಕೆ ಹೋಗುತ್ತಿದ್ದೆ. ನನ್ನ ಎದುರಿಗೆ ಕುಳಿತಿದ್ದವರ ಬಳಿ ಹೇಗೆ ಹೋಗಬೇಕೆಂದು ಕೇಳಿದಾಗ ಅವರು ಮಾಹಿತಿ ತಿಳಿಸಿದರಲ್ಲದೇ ನನ್ನ ಬಗ್ಗೆ ಕನಿಕರ ತೋರಿ “ನಿಮಗೆ ಕೆಲಸ ಸಿಗದಿದ್ದರೆ ನನಗೆ ಕರೆ ಮಾಡಿ ನಾನು ನಿಮಗೆ ಬೇರೊಂದು ಕೆಲಸ ಕೊಡಿಸುತ್ತೇನೆ” ಎಂದು ಅವರ ನಂಬರ್ ಕೊಟ್ಟು ಹೋದರು.

ನಾನು ಹುಬ್ಬಳ್ಳಿಗೆ ಇಳಿದು ನಂತರ ಧಾರವಾಡಕ್ಕೆ ಹೋದೆ. ಆ ಕಂಪೆನಿಯ ಸೇಲ್ಸ್ ಆಫೀಸರ್ ನನಗೆ ಧಾರವಾಡದ ಕಾಲೇಜೊಂದರ ಬಳಿ ಹೋಗಲು ತಿಳಿಸಿದರು. ಬಹುಶಃ ಎಸ್‌ಡಿಎಂ ಕಾಲೇಜಿರಬೇಕು. ನಾನು ಅಲ್ಲಿಗೆ ಹೋದಾಗ ನನಗೆ ತುಂಬಾ ಮುಜುಗರವಾದಂತಾಯಿತು. ಏಕೆಂದರೆ ನಾನು ಶೂ ಟೈ ಧರಿಸಿ ಸೇಲ್ಸ್ ಮ್ಯಾನ್ ತರಹ ಕಾಣುತ್ತಿದ್ದೆ. ಅಲ್ಲಿನ ಹುಡುಗರು ನನ್ನನ್ನು ವಿಶೇಷವಾಗಿ ನೋಡಲು ಶುರು ಮಾಡಿದರು. ನಾನು ಸೀದಾ ಅಲ್ಲಿದ್ದ ಒಂದು ಮರದ ಬಳಿ ಕೆಳಗೆ ಕುಳಿತು ಆಫೀಸರ್‌ಗೆ ಕಾಯಲು ಶುರು ಮಾಡಿದೆ. ಅವರು ನನಗೆ 11 ಗಂಟೆಗೆ ಬರಲು ಹೇಳಿ ಅವರು ಬಂದಿದ್ದು ಮಾತ್ರ 12 ಗಂಟೆಗೆ. ನನಗೆ ಕಾದು ಕಾದು ಬೇಸರವೆನಿಸಿತ್ತು.  ಬೇರೆ ಯಾರಾದ್ರೂ ಆಗಿದ್ದರೆ ಈ ಸಂದರ್ಶನವೂ ಬೇಡ ಕೆಲಸವೂ ಬೇಡ ಎಂದು ವಾಪಸ್ಸಾಗುತ್ತಿದ್ದರು. ಆದರೆ ನನಗೆ ಕೆಲಸ ಅನಿವಾರ್ಯವಾಗಿತ್ತಲ್ವ? ಅದಕ್ಕೆ ತಾಳ್ಮೆಯಿಂದ ಕಾದು ಕುಳಿತಿದ್ದೆ. ಅಂತೂ ಇಂತೂ ಅವರು 12 ಗಂಟೆಗೆ ಬಂದರು. ಅವರನ್ನು ಪರಿಚಯಿಸಿಕೊಂಡು ನನ್ನ ಬಗ್ಗೆ ವಿಚಾರಿಸಿದರು. ಅವರ ಹೆಸರು ದತ್ತಾತ್ರೇಯ ಅಂತಾ. ಪೋರ್ಟ್ಸ್ ಕಂಪೆನಿಯಲ್ಲಿ ರಿಜಿಯನಲ್ ಸೇಲ್ಸ್ ಮ್ಯಾನೇಜರ್ ಆಗಿದ್ದರು.

ಅವರದ್ದು ಮೂಲತಃ ಬೆಂಗಳೂರು. ನನಗೆ ಅವರು ಸಕ್ಕರೆ ಕಾಯಿಲೆಯ ಅವರದೇ ಕಂಪೆನಿಯ ಮಾತ್ರೆಯ ಬಗ್ಗೆ ಸವಿವರವಾಗಿ ಇರುವ ಒಂದು ಟಾನ್ ಹಾಳೆಯೊಂದನ್ನು ಕೊಟ್ಟು “ಇದನ್ನು ನೀವು ನನಗೆ ಕಲಿತು ನೋಡದೇ ಹೇಳಬೇಕು. ನಿಮಗೆ 1 ಗಂಟೆ ಸಮಯ ಕೊಡುತ್ತೇನೆ” ಎಂದು ಹೇಳಿ ಹೋದರು. ನನಗೆ ಅವರು ಕೊಟ್ಟ ಪ್ರೊಡಕ್ಟ್ ಹೆಸರ ‘ಬೆನ್ಫಿನ್ಯೂರಾನ್ ಪೋರ್ಟ್’. ಇದು ಅವರದೇ ಕಂಪೆನಿಯ ಸಕ್ಕರೆ ಕಾಯಿಲೆಗೆ ಇರೋ ಮಾತ್ರೆ. ಇದನ್ನು ತೆಗೆದುಕೊಂಡರೆ ಇದು ನಮ್ಮ ದೇಹದಲ್ಲಿ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತೆ? ಎಂಬ ಬಗ್ಗೆ ಸಂಪೂರ್ಣ ವೈಜ್ಞಾನಿಕ ವಿವರವಿತ್ತು. ನೆನಪಿಟ್ಟುಕೊಳ್ಳಲು ಕಷ್ಟವಾಗುವಂತಹ ಪದಗಳ ಸಮೂಹವೇ ಅಲ್ಲಿತ್ತು. ನಾನು ಒಂದೆರಡು ಸಲ ಓದಿದೆ. ನನಗೆ ಯಾಕೋ ಕಷ್ಟವಾಗುತ್ತೆ. ಇದು ನನ್ನ ಕೈಲಿ ಸಾಧ್ಯವಿಲ್ಲ ಎಂದು ವಾಪಾಸ್ ಬರಲು ಮನದಲ್ಲಿ ಒಮ್ಮೆ ಅಲೋಚಿಸಿದೆ. ಆದರೆ ಮೊದಲೇ ಕೆಲಸ ಇಲ್ಲ. ವಾಪಾಸ್ ಹೋದರೆ ತೀರಿಸಬೇಕಾದ ಸಾಲ ಬೇರೆ. ಅಲ್ಲದೇ ಸರಿಕರ ಮುಂದೆ ಕೆಳಗೆ ಬಿದ್ದ ಅವಮಾನ ಎದುರಿಸಬೇಕೆಂದು ಕೂಡಲೇ ನನ್ನ ಮನಸ್ಥಿತಿ ಬದಲಾಯಿಸಿ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ನನ್ನಷ್ಟಕ್ಕೆ ನಾನೇ ನಿರ್ಧರಿಸಿ ಮತ್ತೆ ಹಠವಿಡಿದು ಓದುತ್ತಾ ಕುಳಿತೆ. ನನ್ನ ಅದೃಷ್ಟಕ್ಕೆ ಅದನ್ನು ನೋಡದೇ ಹೇಳಲು ಸಾಧ್ಯವಾಯಿತು. ಯಥಾ ಪ್ರಕಾರ ಒಂದಕ್ಷರವನ್ನೂ ಬಿಡದೇ ಹೇಳಿದ್ದಕ್ಕೆ ಅವರು ತುಂಬಾ ಖುಷಿಪಟ್ಟರು. ಅಲ್ಲದೇ ನನಗೆ ಕೆಲಸ ಕೊಡಲು ಒಪ್ಪಿದರು. ಸದ್ಯಕ್ಕೆ ನನ್ನ ಅಂಕಪಟ್ಟಿಗಳ ಬಗ್ಗೆ ಅವರು ವಿಚಾರಿಸಲೇ ಇಲ್ಲ!! ಆದರೆ ಅವರು ಕೊನೆಗೊಂದು ಹೇಳಿದ ಮಾತು ನನ್ನನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿತು. ನನ್ನನ್ನು ಚಿಂತೆಗೀಡು ಮಾಡುವಂತೆ ಮಾಡಿತು. ಕೆಲಸಕ್ಕೆ ನನ್ನ ಲೆವೆಲ್‌ನಲ್ಲಿ ನೀನು ಆಯ್ಕೆಯಾಗಿದ್ದೀಯ! ………… ಎಂದು ಹೇಳಿದ್ದಾಗ ಉಬ್ಬಿದ್ದ ನನ್ನ ಮನದಾಳದ ಆಸೆಯ ಬಲೂನಿಗೆ ಅವರ ಈ ಮಾತಿಂದ ಉಬ್ಬಿದ ಬಲೂನಿಗೆ ಸೂಜಿ ಚುಚ್ಚಿದಂತಾಗಿತ್ತು!!

ಅಷ್ಟಕ್ಕೂ ಅವರು ಹೇಳಿದ ಮಾತೇನು? ನನಗೇಕೆ ಅದು ಚಿಂತೆಗೀಡು ಮಾಡುವಂತೆ ಮಾಡಿತು? ಕೆಲಸದ ಪಾಡು ಏನಾಯ್ತು? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯೋಣ. ನಾವು ಅಂದಕೊಂಡಂತೆಲ್ಲ ನಡೆಯೋಹಾಗಿದ್ರೆ ಭೂಮಿ ಮ್ಯಾಗೆ ಯಾರ ಮಾತನ್ನೂ ಯಾರೂ ಕೇಳುತ್ತಿರಲಿಲ್ಲ. ಆ ವಿಧಿ ಆಗಾಗ ನಮ್ಮ ಜೀವನದಲ್ಲಿ ಕೆಲವೊಂದು ಅನಿರೀಕ್ಷಿತ ತಿರುವುಗಳನ್ನು ತಂದೊಡ್ಡುತ್ತದೆ. ಆ ತಿರುವಿನಲ್ಲಿ ಹುಷಾರಾಗಿ ಹೋಗಬೇಕು ಎಂದು ಕೆಲವರು ತಮ್ಮ ಮಾತಿನ ಮಧ್ಯೆ ಹೇಳುತ್ತಿರುತ್ತಾರೆ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ