ಹಾಸನ ಮೂಲದ ಕನ್ನಡದ ಹೆಸರಾಂತ ಲೇಖಕಿ ಬಾನು ಮುಷ್ತಾಕ್ ಅವರಿಗೆ ೨೦೨೫ರ ಬೂಕರ್ ಪ್ರಶಸ್ತಿ ಲಭಿಸಿದೆ. ಇವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯನ್ನು ದೀಪಾ ಭಾಸ್ತಿ “ಹಾರ್ಟ್ ಲ್ಯಾಂಪ್” ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದು, ಈ ಅನುವಾದಿತ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.
ಹಲವು ದಿನಗಳಿಂದ ಕನ್ನಡದ ಬರಹಗಾಗರು ಹಾಗೂ ಓದುಗರು ಕಾತರದಿಂದ ಕಾಯುತ್ತಿದ್ದ ಘಳಿಗೆಯೊಂದು ಸಿಹಿಸುದ್ದಿಯನ್ನು ಹೊತ್ತು ತಂದಿದೆ… ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರೆತಿದೆ. ಮೇ 21ರಂದು ಲಂಡನ್‌ನಲ್ಲಿ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯನ್ನು ದೀಪಾ ಭಾಸ್ತಿ “ಹಾರ್ಟ್ ಲ್ಯಾಂಪ್” ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದು, ಈ ಅನುವಾದಿತ ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದೆ. ಬೂಕರ್ ಪ್ರಶಸ್ತಿ 50 ಸಾವಿರ ಪೌಂಡ್ (ಅಂದಾಜು 57.28 ಲಕ್ಷ ರೂ.) ಒಳಗೊಂಡಿದೆ. ಇದೇ ಅನುವಾದಿತ ಕೃತಿಗೆ ಈ ಹಿಂದೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.
ಅಂತಿಮ ಘಟ್ಟಕ್ಕೆ ಆರು ಕೃತಿಗಳು ತಲುಪಿದ್ದವು. ಅವುಗಳ ಪೈಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ.
ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ. ‘ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು’ ಎಂದು ಹೇಳಿದ್ದಾರೆ. ‘ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು’ ಎಂದು ಅನುವಾದಕಿ ಭಾಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

(ಅನುವಾದಕಿ ದೀಪಾ ಭಾಸ್ತಿ ಹಾಗೂ ಬಾನು ಮುಷ್ತಾಕ್)
ಮುಷ್ತಾಕ್ ಅವರು ಇಲ್ಲಿಯವರೆಗೆ ಆರು ಸಣ್ಣ ಕಥಾ ಸಂಕಲನಗಳು, ಒಂದು ಕಾದಂಬರಿ, ಒಂದು ಪ್ರಬಂಧ ಸಂಗ್ರಹ ಮತ್ತು ಒಂದು ಕವನ ಸಂಕಲನ ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ಸೇರಿದಂತೆ ಅವರ ಸಾಹಿತ್ಯ ಕೃತಿಗಳಿಗಾಗಿ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಅನೇಕ ಕಥೆಗಳು ಉರ್ದು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದಿಸಲ್ಪಟ್ಟಿದ್ದು, ಇಂಗ್ಲಿಷ್‌ಗೆ ಮೊದಲ ಪುಸ್ತಕ ಅನುವಾದ ಹಾರ್ಟ್ ಲ್ಯಾಂಪ್ 2025 ರಲ್ಲಿ ಪ್ರಕಟವಾಗಿದ್ದು, ಇದು ಪ್ಯಾರಿಸ್ ವಿಮರ್ಶೆಯಲ್ಲಿ ಪ್ರಕಟವಾಗಿದೆ. ಇವರ “ಕರಿನಾಗರಗಳು” ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಅವರು ‘ಹಸೀನಾ’ ಚಿತ್ರ ನಿರ್ದೇಶಿಸಿದ್ದರು. ಬಾನು ಅವರ ಅನೇಕ ಕತೆಗಳು ಹಿಂದಿ, ಇಂಗ್ಲಿಷ್, ಉರ್ದು, ಮಲಯಾಳಂ, ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ.
“ಹಾರ್ಟ್ ಲ್ಯಾಂಪ್” ಕಥೆಗಳ ಗುಚ್ಛವು 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಸಂಕಲನ. ಇಲ್ಲಿನ ಕತೆಗಳು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ, ಬಾಲಕಿಯರ ದೈನಂದಿನ ಬದುಕಿನ ಸಿಹಿ-ಕಹಿ ಘಟನೆಗಳನ್ನು ಆಧರಿಸಿವೆ. ಹೆಣ್ಣು ಎಂದಾಕ್ಷಣ ಭಾಷೆ, ಜಾತಿ, ಧರ್ಮದ ಅತೀತವಾಗಿ ಅವರನ್ನಾಗಲೇ ತಕ್ಕಡಿಯಲ್ಲಿಟ್ಟು ತೂಗಲಾರಂಭಿಸತ್ತೆ ಈ ಜಗತ್ತು. ಅದು ನಾವೀಗ ಕರೆಯುವ ಮಾರ್ಡನ್ ಯುಗದಲ್ಲೂ ನಿಂತಿಲ್ಲ. ಅಂತರ್ಜಾಲದ ಪುಟಗಳಲ್ಲಿ ಪ್ರಕಟವಾಗುವ ಸಾಕಷ್ಟು ಫೋಟೋಗಳಿಗೆ ಬರುವ ಚಿತ್ರ-ವಿಸಿತ್ರ ಕಾಮೆಂಟುಗಳೇ ಇದಕ್ಕೆ ಕನ್ನಡಿ! ಇಂತಹ ಸಂದರ್ಭದಲ್ಲಿ ಭಾನು ಮುಷ್ತಾಕರ ಇಂಥವೇ ಕಥಾನಕಗಳನ್ನೊಳಗೊಂಡ ಕತೆಗಳಿಗೆ ಹಾಗೂ ಅನುವಾದಿಸಿರುವ ದೀಪಾ ಭಾಸ್ತಿಯವರ ಅಂಗೈಯಲ್ಲಿ ಬೂಕರ್ ಬಂದು ಕುಳಿತಿರುವುದು ಹೆಣ್ಣುಮಕ್ಕಳ ಕನಸಿನ ಮೋಟಾರಿಗೆ, ಪ್ರೋತ್ಸಾಹದ ಇಂಥನವನ್ನು ತುಂಬಿದಂತಾಗಿದೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ