ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್‌ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು. ಪ್ರಾಣಿಗಳನ್ನು ಸಾಕುವ ಪ್ರವೃತ್ತಿ ಇಡೀ ದೇಶದಲ್ಲಿದ್ದರೂ ಉತ್ತರ ಭಾಗದಲ್ಲಿ ಹೆಚ್ಚಾಗಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಸೆನೆಗಲ್ ದೇಶದ ಕುರಿತ ಬರಹ ನಿಮ್ಮ ಓದಿಗೆ
ಪಶ್ಚಿಮ ಆಫ್ರಿಕಾದ ರಾಷ್ಟ್ರಗಳ ಪೈಕಿ ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯವಾದ ದೇಶ ಸೆನೆಗಲ್. ಡಾಕರ್ ಆಲ್ ಆಫ್ರಿಕಾ ಗೇಮ್ಸ್, ಆಫ್ರಿಕಾ ಕಪ್ ಫುಟ್‌ಬಾಲ್ ಚಾಂಪಿಯನ್‌ಶಿಪ್ ಮೊದಲಾದ ಮಹತ್ವದ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಸೆನೆಗಲ್ ದೇಶ. ಫುಟ್‌ಬಾಲ್ ಆಟದ ಕುರಿತು ಸೆನೆಗಲ್‌ನ ಜನರು ವಿಪರೀತವಾದ ಕ್ರೇಜ಼್ ಇಟ್ಟುಕೊಂಡಿದ್ದಾರೆ. ಫುಟ್‌ಬಾಲ್ ಕ್ರೀಡೆಯಲ್ಲಿ ತಮ್ಮ ದೇಶದ ಸಣ್ಣ ಸಣ್ಣ ಗೆಲುವನ್ನೂ ಸಂಭ್ರಮಿಸುವ ಪ್ರವೃತ್ತಿ ಇಲ್ಲಿನ ಜನರದ್ದು. 2002ನೇ ಇಸವಿಯಲ್ಲಿ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಸೆನೆಗಲ್ ಭಾಗವಹಿಸಿತ್ತು. ವಿಶ್ವಕಪ್‌ನಂಥ ಮಹತ್ವದ ಪಂದ್ಯಾವಳಿಯಲ್ಲಿ ಸೆನೆಗಲ್ ಭಾಗವಹಿಸಿದ್ದು ಅದೇ ಮೊದಲು. ಸೆನೆಗಲ್ ಮೊದಲ ಸುತ್ತಿನಲ್ಲಿ ಮುಖಾಮುಖಿಯಾದದ್ದು ಫ್ರಾನ್ಸ್‌ಗೆ. ಅಚ್ಚರಿಯ ವಿಷಯವೆಂಬಂತೆ ಸೆನೆಗಲ್ ಗೆಲುವನ್ನು ಪಡೆಯಿತು. ಇದಾದ ಬೆನ್ನಿಗೆ ಇಡೀ ಸೆನೆಗಲ್ ದೇಶಕ್ಕೆ ರಜಾದಿನವನ್ನು ಘೋಷಿಸಲಾಯಿತು. ಮಹಿಳಾ ಫುಟ್‌ಬಾಲ್ ತಂಡವೂ ಇಲ್ಲಿದೆ. ಬಾಸ್ಕೆಟ್‌ಬಾಲ್ ಇಲ್ಲಿಯ ಇನ್ನೊಂದು ಪ್ರಮುಖ ಕ್ರೀಡೆ. ಆಫ್ರಿಕನ್ ಕುಸ್ತಿ ಇಲ್ಲಿಯ ಸಾಂಪ್ರದಾಯಿಕ ಆಟ. ಇದು ದೇಶದಾದ್ಯಂತ ಜನಪ್ರಿಯ. ಸೆನೆಗಲ್‌ನ ಕುಸ್ತಿಪಟುಗಳು ದೇಶದ ಕ್ರೀಡಾಪಟುಗಳಲ್ಲಿಯೇ ಅತ್ಯಂತ ಪ್ರಸಿದ್ಧರೆನಿಸಿಕೊಂಡಿದ್ದಾರೆ. ಹಬ್ಬ, ಉತ್ಸವಗಳಿದ್ದಾಗಲೂ ಕುಸ್ತಿಯನ್ನಾಡುವ ಸಂಪ್ರದಾಯವಿದೆ.
ದೇಶದ ನಲುವತ್ತು ಭಾಗದಷ್ಟು ಜನರು ವೋಲೋಫ್ ಜನಾಂಗಕ್ಕೆ ಸೇರಿದವರು. ಈ ಜನಾಂಗೀಯ ಗುಂಪು ಸೆನೆಗಲ್‌ನ ಸಮಾಜ ವ್ಯವಸ್ಥೆಯಲ್ಲಿ ಮೊದಲಿನಿಂದಲೂ ಪ್ರಾಮುಖ್ಯತೆ ಗಳಿಸಿತ್ತು. ಧರ್ಮಗುರುಗಳು, ರೈತರು, ಕುಶಲಕರ್ಮಿಗಳು, ಕಮ್ಮಾರರು ಹೀಗೆ ಬೇರೆ ಬೇರೆ ವೃತ್ತಿ, ಆಸಕ್ತಿಯನ್ನು ಒಳಗೊಂಡ ಜನರು ಈ ಗುಂಪಿನಲ್ಲಿದ್ದಾರೆ. ವೋಲೋಫ್ ಜನಾಂಗಕ್ಕೆ ನಿಕಟವಾಗಿರುವ ಜನಾಂಗವೆಂದರೆ ಸೇರರ್. ಹದಿನೈದು ಪ್ರತಿಶತ ಜನರು ಈ ಜನಾಂಗದವರು. ತುಕುಲೋರ್ ಜನಾಂಗದವರನ್ನು ವೋಲೋಫ್ ಮತ್ತು ಫುಲಾನಿ ಎರಡೂ ಜನಾಂಗದ ಜೊತೆ ಗುರುತಿಸಲಾಗುತ್ತದೆ. ತುಕುಲೋರ್‌ಗಳು ಈ ಎರಡೂ ಜನಾಂಗದವರ ಜೊತೆ ವೈವಾಹಿಕ ಸಂಬಂಧ ಏರ್ಪಡಿಸಿಕೊಂಡಿರುವುದೇ ಇದಕ್ಕೆ ಕಾರಣ. ದೇಶದಲ್ಲಿರುವ ಜನರಲ್ಲಿ ಕಡಿಮೆ ಸಂಖ್ಯೆಯಲ್ಲಿರುವವರು ಡಿಯೋಲಾ ಮತ್ತು ಮಾಲಿಂಕೆ ಜನಾಂಗದವರು. ಪ್ರಾಚೀನ ಘಾನಾ ರಾಜ್ಯದ ಆಡಳಿತಗಾರರಾಗಿದ್ದವರು ಸೋನಿಂಕೆ ಜನಾಂಗದವರು. ದಿಮೌರಿ ಜನಾಂಗದವರು ದೇಶದ ಉತ್ತರ ಭಾಗದಲ್ಲಿ ನೆಲೆನಿಂತಿದ್ದಾರೆ. ಲೆಬು ಜನಾಂಗದವರಲ್ಲಿ ಮೀನುಗಾರರೂ ಇದ್ದಾರೆ; ಶ್ರೀಮಂತ ಭೂಮಾಲೀಕರೂ ಇದ್ದಾರೆ. ಎತ್ತರದ ಪ್ರದೇಶಗಳಲ್ಲಿ ನೆಲೆಸಿರುವವರು ದಿಬಸರಿ ಜನರು. ಇವರು ಹಳೆಯ ಕಾಲದಿಂದಲೂ ಇಲ್ಲಿರುವವರು.
ಸೆನೆಗಲ್ ದೇಶದಲ್ಲಿ ರೆಟ್ಬಾ ಹೆಸರಿನ ಸರೋವರವಿದೆ. ಇದರ ನೀರು ವಿಶಿಷ್ಟ ಬಣ್ಣದಿಂದ ಇರುವ ಕಾರಣದಿಂದಾಗಿ ಈ ಸರೋವರ ವಿಶಿಷ್ಟ ಎನಿಸಿಕೊಂಡಿದೆ. ಇದರ ನೀರು ನೀಲಿ ಬಣ್ಣದಲ್ಲಿಲ್ಲ. ಗುಲಾಬಿ ಬಣ್ಣದಲ್ಲಿದೆ. ಡುನಾಲಿಯೆಲ್ಲಾ ಸಲಿನಾ ಎಂಬ ಪಾಚಿ ಈ ಸರೋವರದ ತಳಭಾಗದಲ್ಲಿದೆ. ಇದರಿಂದಾಗಿ ಹೆಚ್ಚು ಉಪ್ಪಿನ ಅಂಶ ಉಂಟಾಗುತ್ತದೆ. ಈ ಕಾರಣಕ್ಕೆ ಸರೋವರದ ನೀರು ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಇದರಲ್ಲಿ ಉಪ್ಪಿನ ಅಂಶ ಅಧಿಕವಾಗಿರುವ ಕಾರಣಕ್ಕೆ ಈ ನೀರಿನಲ್ಲಿ ಈಜುವುದು ಅಷ್ಟೊಂದು ಸೂಕ್ತವಲ್ಲ. ಉಪ್ಪನ್ನು ಸಂಗ್ರಹಿಸುವುದಕ್ಕಾಗಿ ಈ ಸರೋವರಕ್ಕಿಳಿಯುವ ಕೆಲಸಗಾರರು ಶಿಯಾ ಬೆಣ್ಣೆಯನ್ನು ಮೈಕೈಗೆಲ್ಲಾ ಹಚ್ಚಿಕೊಳ್ಳುತ್ತಾರೆ. ಇದರಿಂದಾಗಿ ಅವರ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
ಈ ಸರೋವರವು ಬೇಸಿಗೆ ಕಾಲದಲ್ಲಿ ಪ್ರಕಾಶಮಾನವಾಗಿರುತ್ತದೆ. ಯಾವಾಗಲೂ ಚಟುವಟಿಕೆಯಿಂದ ಕೂಡಿರುವ ಪ್ರದೇಶ ಎನಿಸಿಕೊಂಡಿದೆ ಸರೋವರದ ದಡ. ನೀರಿನ ತಳಭಾಗದಲ್ಲಿರುವ ಉಪ್ಪನ್ನು ಅಗೆಯುವುದಕ್ಕಾಗಿ ಹಲವಾರು ಜನ ಸಿದ್ಧವಾಗಿರುವುದನ್ನು ಇಲ್ಲಿ ಯಾವತ್ತೂ ನೋಡಬಹುದು. ಸೆನೆಗಲ್‌ನಲ್ಲಿ ಅನೇಕ ಸಣ್ಣ ಸಣ್ಣ ದ್ವೀಪಗಳಿವೆ. ಇವುಗಳಲ್ಲಿ ಇಲೆ ಡಿ ಫ್ಯಾಡಿಯೌತ್ ದ್ವೀಪವೂ ಒಂದು. ದೇಶದ ದಕ್ಷಿಣ ಭಾಗದಲ್ಲಿರುವ ಇದು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಪೆನಿನ್ಸುಲಾ ಮತ್ತು ಮ್ಯಾಂಗ್ರೋವ್ ಕಾಡುಗಳ ಮಧ್ಯಭಾಗದ ಸಮುದ್ರದಲ್ಲಿ ಈ ದ್ವೀಪ ನೆಲೆನಿಂತಿದೆ. ಇದರ ವಿಶೇಷತೆಯೆಂದರೆ, ಇದು ಮಾಡಲ್ಪಟ್ಟಿರುವುದು ಚಿಪ್ಪುಗಳಿಂದ. ಇಲ್ಲಿಯ ಬೀದಿಗಳೂ ಸಹ ಚಿಪ್ಪುಗಳಿಂದಲೇ ತಯಾರಾಗಿವೆ. ಮನೆಯ ಅಲಂಕಾರಕ್ಕೂ ಬಳಕೆಯಾಗಿರುವುದು ಚಿಪ್ಪುಗಳು. ಇದರ ಪಕ್ಕದಲ್ಲಿಯೇ ಇರುವ ಇನ್ನೊಂದು ಸಣ್ಣ ದ್ವೀಪ, ಅಲ್ಲಿರುವ ಕ್ರಿಶ್ಚಿಯನ್ ಮುಸ್ಲಿಂ ಸ್ಮಶಾನ ಇವೆಲ್ಲವೂ ಚಿಪ್ಪುಗಳಿಂದಲೇ ಮಾಡಲ್ಪಟ್ಟಿವೆ.
ಬಾಬಾಬ್ ಎನ್ನುವುದು ಸೆನೆಗಲ್‌ನಲ್ಲಿ ಕಂಡುಬರುವ ವಿಚಿತ್ರ ತೋರಿಕೆಯ ಮರವಾಗಿದೆ. ಇಲ್ಲಿ ಬಾಬಾಬ್ ಮರಕ್ಕೆ ವಿಶೇಷವಾದ ಮಹತ್ವವಿದೆ. ಹಿಂದಿನ ಕಾಲದಿಂದಲೂ ಕೂಡಾ ಈ ಮರ ಸೆನೆಗಲ್‌ನಲ್ಲಿ ಕಂಡುಬರುತ್ತದೆ. ಸುಮಾರು ಸಾವಿರದ ಇನ್ನೂರು ವರ್ಷಗಳಷ್ಟು ಹಳೆಯ ಮರವೂ ಇಲ್ಲಿದೆ. ಸೆನೆಗಲ್ ಸಂಸ್ಕೃತಿಯಲ್ಲಿಯೂ ಸಹ ಈ ಮರಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲಾಗಿದೆ. ಕೊಬ್ಬಿರುವ ಕಾಂಡಗಳನ್ನು ಹೊಂದಿರುವ ಈ ಮರ ಸುಮಾರು ಇಪ್ಪತ್ತೈದು ಮೀಟರ್‌ಗಳಷ್ಟು ಸುತ್ತಳತೆಯಲ್ಲಿ ಬೆಳೆದು ನಿಲ್ಲುತ್ತದೆ. ಸಾವಿರಾರು ವರ್ಷ ಬದುಕುವ ಸಾಮರ್ಥ್ಯ ಇದಕ್ಕಿರುತ್ತದೆ. ಬುದ್ಧಿವಂತಿಕೆ ಮತ್ತು ದೀರ್ಘಾಯುಷ್ಯದ ಸಂಕೇತವಾಗಿ ಸೆನೆಗಲ್‌ನ ಜನರು ಇದನ್ನು ಪರಿಭಾವಿಸುತ್ತಾರೆ. ಇದರ ಹಣ್ಣಿನಿಂದ ಬುಯಿ ಹೆಸರಿನ ಕೆಂಪು ಬಣ್ಣದ ಪಾನೀಯ ತಯಾರಾಗುತ್ತದೆ. ಮತ್ತು ಇದರ ತೊಗಟೆಯಿಂದ ಹಗ್ಗವನ್ನು ಮಾಡಲಾಗುತ್ತದೆ. ಸೆನೆಗಲ್‌ನ ರಾಷ್ಟ್ರೀಯ ಲಾಂಛನದಲ್ಲಿಯೂ ಸಹ ಈ ಮರದ ಚಿತ್ರಣವಿದೆ.
ಹಲವು ವಿಶಿಷ್ಟ ಪ್ರಭೇದದ ಪಕ್ಷಿಗಳು ಕಾಣಸಿಗುವುದು ಸೆನೆಗಲ್ ದೇಶದಲ್ಲಿ. ಮಾರಿಟಾನಿಯಾದ ಗಡಿಯ ಸಮೀಪ ಪರ್ಯಾಯ ದ್ವೀಪವಿದೆ. ಇದರ ದಕ್ಷಿಣ ತುದಿಯಲ್ಲಿ ನ್ಯಾಷನಲ್ ಡೆ ಲಾ ಲ್ಯಾಂಗ್ಯೂ ಡಿ ಬಾರ್ಬರಿ ಹೆಸರಿನ ಪಾರ್ಕ್ ಇದೆ. ಇಲ್ಲಿ ಕಂಡುಬರುವ ಹಕ್ಕಿಗಳು ವಿಶಿಷ್ಟವಾಗಿವೆ. ನೂರಾ ಅರುವತ್ತಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ಆಶ್ರಯ ನೀಡಿದೆ ಈ ಪಾರ್ಕ್. ಟರ್ನ್, ಗಲ್, ಪೆಲಿಕನ್, ಗುಲಾಬಿ ಫ್ಲೆಮಿಂಗೊ ಮೊದಲಾದ ಬೇರೆ ಬೇರೆ ಪ್ರಭೇದದ ಜಾತಿಗಳ ಪಕ್ಷಿಗಳು ಇಲ್ಲಿವೆ.
ಫ್ರೆಂಚ್ ಭಾಷೆ ಸೆನೆಗಲ್‌ನ ಅಧಿಕೃತ ಭಾಷೆ. ಅರೇಬಿಕ್ ಭಾಷೆಯೂ ಇಲ್ಲಿನ ಪ್ರಮುಖ ಭಾಷೆ. ಸುಮಾರು ಮೂವತ್ತೊಂಬತ್ತು ಭಾಷೆಗಳು ಇಲ್ಲಿವೆ. ಇಲ್ಲಿ ಅಸ್ತಿತ್ವದಲ್ಲಿರುವ ಆಫ್ರಿಕನ್ ಭಾಷೆಗಳನ್ನು ಎರಡು ವಿಧಗಳಲ್ಲಿ ವರ್ಗೀಕರಿಸಿದ್ದಾರೆ ಭಾಷಾಶಾಸ್ತ್ರಜ್ಞರು. ಅಟ್ಲಾಂಟಿಕ್ ಎನ್ನುವುದು ಇದರಲ್ಲಿ ಒಂದು ವಿಧ. ದೇಶದ ಪಶ್ಚಿಮ ಭಾಗದಲ್ಲಿ ಅಟ್ಲಾಂಟಿಕ್ ಭಾಷಾ ಕುಟುಂಬದ ಭಾಷೆಗಳೇ ಪ್ರಬಲ. ಸೆನೆಗಲ್‌ನಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಗಳು ಇದೇ ಭಾಷಾ ಕುಟುಂಬಕ್ಕೆ ಸೇರಿವೆ. ವೋಲೋಫ್, ಸೇರರ್, ಫುಲಾನಿ, ಡಿಯೋಲಾ ಇವುಗಳು ಪ್ರಮುಖ ಭಾಷೆಗಳು. ಪೂರ್ವ ಭಾಗದಲ್ಲಿ ಕಂಡುಬರುವುದು ಮಂಡೆ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು. ಬಂಬಾರಾ, ಮಾಲಿಂಕೆ, ಸೋನಿಂಕೆ ಮೊದಲಾದ ಭಾಷೆಗಳು ಇದರಲ್ಲಿ ಪ್ರಮುಖವಾದವುಗಳು.
ಸೆನೆಗಲ್‌ನ ಬಹುಸಂಖ್ಯಾತ ಜನರು ಇಸ್ಲಾಂ ಧರ್ಮದ ಅನುಯಾಯಿಗಳು. ಮುಸ್ಲಿಂ ಭ್ರಾತೃತ್ವವನ್ನು ತತ್ವವಾಗಿ ಹೊಂದಿರುವ ಮೂರು ಪ್ರಮುಖ ಗುಂಪುಗಳು ಇಲ್ಲಿವೆ. ಖಾದಿರಿಯಾಹ್, ತಿಜಾನಿಯಾಹ್ ಮತ್ತು ಮುರಿದಿಯಾಹ್ ಈ ಗುಂಪುಗಳು ಇಲ್ಲಿಯ ಮುಸ್ಲಿಮರ ಮಧ್ಯೆ ಸಹೋದರತ್ವವನ್ನು ಮೂಡಿಸುವ ನೆಲೆಯಲ್ಲಿ ಶ್ರಮಿಸುತ್ತಿವೆ. ಇಂತಹದ್ದೊಂದು ಭ್ರಾತೃತ್ವದ ಪರಿಕಲ್ಪನೆಯನ್ನು ಹುಟ್ಟುಹಾಕಿದವರು ಅಮಡೌ ಬಂಬಾ ಎಂಬಾಕೆ. ಇವರು ಹುಟ್ಟಿದ ಸ್ಥಳ ಟೌಬಾ ಹೆಸರಿನ ನಗರ. ಅದು ಇಂದು ಸೆನೆಗಲ್‌ನ ಅತ್ಯಂತ ಪವಿತ್ರ ಸ್ಥಳ ಎನಿಸಿಕೊಂಡಿದೆ. ಸೆನೆಗಲ್‌ನಲ್ಲಿ ಕ್ರೈಸ್ತ ಧರ್ಮೀಯರ ಸಂಖ್ಯೆ ಕಡಿಮೆ. ಆದರೆ ಕ್ರಿಶ್ಚಿಯನ್ ಧರ್ಮ ಬೆಳವಣಿಗೆ ಹೊಂದುತ್ತಿದೆ ಎನ್ನುವುದು ನಿಜ. ಹದಿನೈದನೇ ಶತಮಾನದ ಕೊನೆಯಲ್ಲಿ ಸೆನೆಗಲ್‌ಗೆ ಪರಿಚಯವಾದ ಕ್ರೈಸ್ತ ಧರ್ಮ ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧದಲ್ಲಿ ಹೊಸರೂಪವನ್ನು ಪಡೆದುಕೊಂಡಿತು. ರೋಮನ್ ಕ್ಯಾಥೋಲಿಕ್ ಅನುಯಾಯಿಗಳ ಸಂಖ್ಯೆ ಹೆಚ್ಚಿದೆ. ಪ್ರೊಟೆಸ್ಟೆಂಟ್‌ಗಳ ಸಂಖ್ಯೆ ಸೀಮಿತ. ಇವರೆಲ್ಲರೂ ಮೂಲತಃ ಯುರೋಪ್ ದೇಶಗಳಿಂದ ವಲಸೆ ಬಂದವರ ವಂಶಜರು.
ಸೆನೆಗಲ್‌ನಲ್ಲಿರುವ ಜನರಲ್ಲಿ ಐವತ್ತು ಪ್ರತಿಶತಕ್ಕಿಂತಲೂ ಹೆಚ್ಚಿನ ಜನರು ಬದುಕುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದ ಜನರು ನಗರಗಳ ಸೆಳೆತಕ್ಕೊಳಗಾಗಿದ್ದಾರೆ. ಹಳ್ಳಿಯಿಂದ ಹೊರಟ ಹೆಚ್ಚಿನ ಜನರು ಹೋಗಿ ನೆಲೆ ಕಂಡುಕೊಳ್ಳುವುದು ಡಾಕರ್ ಹೆಸರಿನ ನಗರದಲ್ಲಿ. ಇದು ಸೆನೆಗಲ್‌ನ ರಾಜಧಾನಿ. ನಗರಗಳಲ್ಲಿ ದುಡಿದರೆ ಬಹಳ ಬೇಗ ಹಣ ಮಾಡಿಕೊಳ್ಳಬಹುದು ಎಂಬ ಆಸೆಯಿಂದ ಹಳ್ಳಿ ಬಿಡುವ ರೈತರೂ ಇದ್ದಾರೆ. ಎಲ್ಲಾ ಹಳ್ಳಿಗಳಲ್ಲಿಯೂ ಜನರು ಬದುಕುತ್ತಿದ್ದಾರೆ. ಆದರೆ ಯಾವ ಅಭಿವೃದ್ಧಿಯೂ ಆಗಿಲ್ಲ. ಗ್ರಾಮದ ಆಡಳಿತ ಇರುವುದು ಸೆನೆಗಲ್ ಸರ್ಕಾರದ ಕೈಯ್ಯಲ್ಲಿ. ಸಾಂಪ್ರದಾಯಿಕ ರೀತಿಯಲ್ಲಿ ನಾಮನಿರ್ದೇಶನಗೊಂಡವರು ಇಲ್ಲವೇ ಸರ್ಕಾರದಿಂದ ನೇಮಕಗೊಂಡವರು ಗ್ರಾಮದ ಮುಖ್ಯಸ್ಥರೆನಿಸಿಕೊಳ್ಳುತ್ತಾರೆ. ಇಲ್ಲಿಯವರ ಧಾರ್ಮಿಕ ಜೀವನದ ಮೇಲೆ ಮಾರಬೌಟ್ ಹೆಸರಿನ ಇಸ್ಲಾಂ ಮುಖಂಡರ ಪ್ರಭಾವ ಇರುತ್ತದೆ. ಇವರ ನಿರ್ದೇಶನಕ್ಕೆ ಅನುಸಾರವಾಗಿ ಜನರು ನಡೆದುಕೊಳ್ಳುತ್ತಾರೆ.
ಸೆನೆಗಲ್‌ನ ಪ್ರಮುಖ ನಗರವೆನಿಸಿಕೊಂಡಿರುವ ಸೇಂಟ್ ಲೂಯಿಸ್ ನಿರ್ಮಾಣಗೊಂಡದ್ದು ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ. ಎರಡು ಶತಮಾನಗಳ ನಂತರ ಸ್ಥಾಪನೆಯಾದದ್ದು ಡಾಕರ್ ನಗರ. ಈ ಎರಡು ಪಟ್ಟಣಗಳು ಸೆನೆಗಲ್ ದೇಶದ ಅತ್ಯಂತ ಪ್ರಾಚೀನ ಪಟ್ಟಣಗಳೆನಿಸಿಕೊಂಡಿವೆ. ಸೇಂಟ್ ಲೂಯಿಸ್ ನಗರವನ್ನು ಫ್ರೆಂಚರು ಪಶ್ಚಿಮ ಆಫ್ರಿಕಾದ ರಾಜಧಾನಿ ಎಂದು ಗುರುತಿಸಿದ್ದರು. ಫ್ರೆಂಚ್ ಆಳ್ವಿಕೆಗೆ ಒಳಗಾಗಿದ್ದ ಈ ನಗರ ವಸಾಹತುಶಾಹಿ ಪರಂಪರೆಯಿಂದಲೇ ಮಾನ್ಯತೆ ಪಡೆದಿತ್ತು. 2000ನೇ ಇಸವಿಯಲ್ಲಿ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿತು. ಪಶ್ಚಿಮ ಆಫ್ರಿಕಾದ ರಾಜಧಾನಿ ಎಂಬ ಗುರುತನ್ನು ಸೇಂಟ್ ಲೂಯಿಸ್ ನಗರದಿಂದ ಡಾಕರ್ ನಗರ ಕಿತ್ತುಕೊಂಡದ್ದು 1902ರಲ್ಲಿ. ಈ ಮೂಲಕ ಅದು ಫ್ರೆಂಚ್ ವಸಾಹತುಶಾಹಿತ್ವಕ್ಕೆ ಒಳಪಟ್ಟ ಪಶ್ಚಿಮ ಆಫ್ರಿಕಾದ ರಾಜಧಾನಿ ಎನಿಸಿಕೊಂಡಿತು.
1966ರಲ್ಲಿ ಸೆನೆಗಲ್ ದೇಶವು ವರ್ಲ್ಡ್ ಫೆಸ್ಟಿವಲ್ ಆಫ್ ನೀಗ್ರೋ ಆರ್ಟ್ಸ್ ಎಂಬ ಉತ್ಸವವನ್ನು ಆಯೋಜಿಸಿತು. ಇಂತಹದ್ದೊಂದು ಉತ್ಸವ ನಡೆದದ್ದು ಅದೇ ಮೊದಲು. ಇದರ ಯಶಸ್ಸಿನಿಂದಾಗಿ ಹಿಗ್ಗಿದ ಸೆನೆಗಲ್ ಇದೇ ಮಾದರಿಯಲ್ಲಿ ದೇಶದ ಸಾಂಸ್ಕೃತಿಕ ಸಂಸ್ಥೆಗಳನ್ನು ಆಫ್ರಿಕನ್ ಸಂಪ್ರದಾಯಗಳ ನೆಲೆಗಟ್ಟಿನಲ್ಲಿ ರೂಪಿಸಿತು. ಡೈನಾಮಿಕ್ ಮ್ಯೂಸಿಯಂ, ಡೇನಿಯಲ್ ಸೊರಾನೊ ಥಿಯೇಟರ್ ಮತ್ತು ಟೇಪ್ಸ್ಟಿ ಫ್ಯಾಕ್ಟರಿ ಆಫ್ ಥಿಯೇಸ್ ಮೊದಲಾದ ಸಂಸ್ಥೆಗಳು ನಿರ್ಮಾಣಗೊಂಡದ್ದು ಆಫ್ರಿಕನ್ ಸಂಸ್ಕೃತಿಯ ಪರವಾದ ಕಾಳಜಿಯನ್ನು ಇರಿಸಿಕೊಂಡು. ಮ್ಯೂಸಿಯಂ ಆಫ್ ಬ್ಲ್ಯಾಕ್ ಸಿವಿಲೈಸೇಶನ್ಸ್ ಎನ್ನುವ ವಸ್ತುಸಂಗ್ರಹಾಲಯದಲ್ಲಿ ಆಫ್ರಿಕನ್ ಕಲಾಕೃತಿಗಳ ಅತೀ ದೊಡ್ಡ ಸಂಗ್ರಹವನ್ನು ಕಾಣಬಹುದು. ಡಾಕರ್ ನಗರದಲ್ಲಿ ಸೌಂಬೆಡಿಯಾನ್ ಎಂಬ ಹೆಸರಿನ ಕರಕುಶಲ ಗ್ರಾಮವಿದೆ. ಇಲ್ಲಿ ಆಫ್ರಿಕನ್ ಕರಕುಶಲ ವಸ್ತುಗಳ ಮಾರಾಟ ಮತ್ತು ಖರೀದಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಇನ್‌ಸ್ಟಿಟ್ಯೂಟ್ ಫಾಂಡಮೆಂಟಲ್ ಡಿ ಆಫ್ರಿಕ್ ನೋಯಿರ್ ಎನ್ನುವ ಸಂಸ್ಥೆಯಲ್ಲಿ ಆಫ್ರಿಕನ್ ಕಲಾಕೃತಿಗಳ ಸಂಗ್ರಹವಿದೆ. ಜೊತೆಗೆ ಇದು ಆಫ್ರಿಕಾದ ಮಾನವಶಾಸ್ತ್ರವನ್ನು ಪರಿಶೋಧಿಸುತ್ತದೆ. ಗೋರೀ ದ್ವೀಪದಲ್ಲಿ ವ್ಯಾಪಾರದ ಅವಶೇಷಗಳು ಕಂಡುಬರುತ್ತವೆ. ಇದು ಜನಪ್ರಿಯವಾದ ಪ್ರವಾಸೀ ತಾಣವಾಗಿದೆ. ಇದು 1978ರಲ್ಲಿ ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿದೆ. ಪ್ರಸಿದ್ಧವಾದ ಜಾಝ್ ಸಂಗೀತ ಉತ್ಸವವನ್ನು ಆಯೋಜಿಸುವುದಕ್ಕೆ ಹೆಸರುವಾಸಿಯಾಗಿದೆ ಸೆನೆಗಲ್. ಇಲ್ಲಿನ ಸೇಂಟ್ ಲೂಯಿಸ್ ನಗರದಲ್ಲಿ ಪ್ರತೀ ವರ್ಷ ಮೇ ತಿಂಗಳಿನಲ್ಲಿ ಜಾಝ್ ಉತ್ಸವ ನಡೆಯುತ್ತದೆ. ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದ ಅನೇಕ ಜಾಝ್ ಗಾಯಕರು ಈ ಉತ್ಸವದಲ್ಲಿ ಪಾಲು ಪಡೆಯುತ್ತಾರೆ.
ಸೆನೆಗಲ್‌ನ ಅರುವತ್ತೈದು ಪ್ರತಿಶತ ಜನರು ಕೃಷಿಯ ಬಗೆಗೆ ಆಸಕ್ತಿ ಇಟ್ಟುಕೊಂಡಿದ್ದಾರೆ. ಬಹುತೇಕ ಕೈಗಾರಿಕೆಗಳಿಗೆ ಪೂರಕವಾಗುವ ಹಾಗೆ ಕೃಷಿ ಚಟುವಟಿಕೆಗಳಿವೆ. ಕಡಲೆಕಾಯಿ ಇಲ್ಲಿನ ಪ್ರಮುಖ ಬೆಳೆ. ರಾಗಿ, ಸೋರ್ಗಮ್, ಪೆನ್ನಿಸೆಟಮ್ ಮೊದಲಾದ ಬೆಳೆಗಳು ಇಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಪೆನ್ನಿಸೆಟಮ್ ಬಳಕೆಯಾಗುವುದು ಜಾನುವಾರುಗಳ ಆಹಾರವಾಗಿ. ಭತ್ತವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಬೆಳೆಸಲಾಗುತ್ತಿರುವುದು ಕ್ಯಾಸಮಾನ್ಸ್ ಕಣಿವೆ ಪ್ರದೇಶದಲ್ಲಿ. ಇಲ್ಲಿ ನೀರಾವರಿ ಸೌಕರ್ಯ ಉತ್ತಮವಾಗಿರುವುದರಿಂದ ಹೆಚ್ಚುವರಿಯಾಗಿ ನೀರನ್ನು ಪೂರೈಸಬೇಕಾದ ಅಗತ್ಯ ಕಂಡುಬರುವುದಿಲ್ಲ. ಮೆಕ್ಕೆಜೋಳ, ಮರಗೆಣಸು, ಬೀನ್ಸ್ ಮತ್ತು ಆಲೂಗಡ್ಡೆಗಳನ್ನು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಬರ ಬಂದದ್ದರಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿತ್ತು. ಮಾಲಿ ಪ್ರದೇಶದ ಮನಾಂತಲಿ ಅಣೆಕಟ್ಟಿನ ನೀರನ್ನು ಬಳಸಿಕೊಂಡ ಕಾರಣ ಈ ಸಮಸ್ಯೆ ಸ್ವಲ್ಪಮಟ್ಟಿಗೆ ನಿವಾರಣೆಯಾಯಿತು. ಸೆನೆಗಲ್‌ನ ಹವಾಮಾನ ಜಾನುವಾರುಗಳ ಸಾಕಣೆಗೆ ಪೂರಕವಾಗಿದೆ. ಸವನ್ನಾ ವಿಧದ ಸಸ್ಯವರ್ಗ ಇರುವುದರಿಂದಾಗಿ ಜಾನುವಾರುಗಳ ಆಹಾರಕ್ಕೆ ಯಾವುದೇ ತೊಂದರೆಯಿಲ್ಲ. ದನ, ಮೇಕೆ, ಕುರಿ, ಕುದುರೆ, ಒಂಟೆ, ಕತ್ತೆ, ಹಂದಿ ಮೊದಲಾದ ಪ್ರಾಣಿಗಳನ್ನು ಸಾಕುತ್ತಾರೆ ಸೆನೆಗಲ್ ಜನರು. ಪ್ರಾಣಿಗಳನ್ನು ಸಾಕುವ ಪ್ರವೃತ್ತಿ ಇಡೀ ದೇಶದಲ್ಲಿದ್ದರೂ ಉತ್ತರ ಭಾಗದಲ್ಲಿ ಹೆಚ್ಚಾಗಿದೆ. ಹಣ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಮಾತ್ರವೇ ಈ ಪ್ರಾಣಿಗಳನ್ನು ಸಾಕಲಾಗುತ್ತಿಲ್ಲ. ಮಾಂಸಕ್ಕಾಗಿ ಸಾಕಲಾಗುತ್ತಿದೆ. ಚರ್ಮವನ್ನು ಮಾತ್ರ ರಫ್ತು ಮಾಡಿ, ಆದಾಯ ಗಳಿಸಿಕೊಳ್ಳಲಾಗುತ್ತಿದೆ.
ಸೆನೆಗಲ್‌ನಲ್ಲಿ ಮೀನುಗಾರಿಕೆ ನದಿ ಮತ್ತು ಸಮುದ್ರ ಎರಡನ್ನೂ ಅವಲಂಬಿಸಿದೆ. ಹೆಚ್ಚಿನ ಪ್ರಮಾಣದ ಮೀನುಗಳು ಸಿಗುವುದು ಸಮುದ್ರದಿಂದ. ಈಗ ಮತ್ಸ್ಯೋದ್ಯಮವು ರಫ್ತಿನ ಕಾರಣಕ್ಕೆ ಪ್ರಾಮುಖ್ಯತೆ ಪಡೆದಿದೆ. ಹೀಗೆ ಮೀನುಗಾರಿಕೆಯು ಉದ್ಯಮದ ಸ್ವರೂಪವನ್ನು ಪಡೆದುಕೊಳ್ಳುವಲ್ಲಿ ಸೆನೆಗಲ್ ದೇಶದ ಅಪಾರ ವರ್ಷಗಳ ಪರಿಶ್ರಮವಿದೆ. ಇತರ ಆಫ್ರಿಕನ್ ದೇಶಗಳ ಸಮುದ್ರಗಳಲ್ಲಿ ದೊರೆಯದ ಅದೆಷ್ಟೋ ಜಾತಿಯ ಮೀನುಗಳು ಸೆನೆಗಲ್‌ನ ಅಟ್ಲಾಂಟಿಕ್ ಸಮುದ್ರದಲ್ಲಿ ದೊರೆಯುತ್ತವೆ. ಮೀನುಗಾರಿಕೆಯ ಮೂಲಕವೇ ಅಗಾಧ ಲಾಭ ಗಳಿಸಿಕೊಂಡಿದೆ ಸೆನೆಗಲ್ ದೇಶ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.