ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು. ಯಾರದೋ ಮಕ್ಕಳೇನು; ನಮ್ಮ ಅಕ್ಕಂದಿರ ಮಕ್ಕಳೂ ಇದೇ ಇಂಗ್ಲೀಷ್ ಮೀಡಿಯಂನ ವಿಭ್ರಾಂತಿಗೆ ಸಿಲುಕಿ ಅದು ಅವರನ್ನೂ ಆವರಿಸಿಕೊಂಡು ಬಿಟ್ಟಿದೆಯೆಂದರೆ…. ಅಷ್ಟರಲ್ಲಿ ಹತ್ತಿರದ ಬಂಡೆಯೊಂದರ ಮರೆಯಲ್ಲಿ ಗಂಡು ಬೆಕ್ಕುಗಳೆರಡರ ಕಿರುಚಾಟ ಕೇಳಿಸಿಕೊಳ್ಳತೊಡಗಿತು.
ಮುನವ್ವರ್ ಜೋಗಿಬೆಟ್ಟು ಅಂಕಣ
ಗಂಟು ಮೂಟೆ ಕಟ್ಟಿ ಅಟ್ಟಕ್ಕೆಸೆದಿದ್ದ ಕಥೆಗಳನ್ನು ಮತ್ತೆ ಎತ್ತಿ ತರಬೇಕು, ಬಿಡಿಸಿಟ್ಟು ಹೇಳಿಕೊಳ್ಳಬೇಕು, ಮನಸ್ಸೊಂದಿಷ್ಟು ಹಗುರವಾಗಬೇಕು. ಆದರೆ ಹೇಗೆ ಪ್ರಾರಂಭಿಸುವುದು? ಈ ಜೈಲು ಬದುಕಿನಲ್ಲಿ ಇರುವ ಸಮಯವೆಲ್ಲ ಕಷ್ಟಪಟ್ಟು ಮಲಯಾಳಂ ಓದಿ ಪ್ರತೀ ಪುಟ ಮುಗಿಯುವಾಗಲೂ ಸುಸ್ತಾಗಿ ಅರ್ಧ ಘಂಟೆ ಗಡದ್ದಾಗಿ ನಿದ್ದೆ ಎಳೆದುಕೊಂಡು ಬಿಡುವವನಿಗೆ ಏನಾದ್ರೂ ಮಾಡಲೇಬೇಕೆಂದು ತೀರ್ಮಾನಿಸಿ ಕಲ್ಲು ಕಂಪೌಂಡು ದಾಟಿ, ಹುಣಸೆ ಮರವನ್ನೂ ಹಿಂದಿಕ್ಕಿದೆ. ಎದುರಿನಲ್ಲಿ ಅನಾಥವಾಗಿ ಮಲಗಿದ್ದ ವಿಶಾಲ ಕಲ್ಲು ಬಂಡೆ. ಯಾವ ಮುಂದಾಲೋಚನೆಯೂ ಇಲ್ಲದೆ ಸತ್ತು ಹೋಗಿದ್ದ ತೊರೆಯ ಸುತ್ತಲೂ ವ್ಯಾಪಿಸಿದ ಎತ್ತರದ ಬಂಡೆ. ಏನೋ ಅನಿಸಿದಂತಾಗಿ ಸುಮ್ಮನೆ ಮೇಲೆ ಕುಳಿತುಕೊಂಡೆ. ಸಣ್ಣಗೆ ಗಾಳಿ ಬೀಸುತ್ತಿತ್ತು. ಕೆಂಬೂತವೊಂದು “ಮುಂಫ್ ಮುಂಫ್..” ಎಂದು ಗುಬ್ಬಳಿಸುವುದು ಕೇಳಿಸುತ್ತಲೇ ಇತ್ತು. ಆಗೊಮ್ಮೆ ಈಗೊಮ್ಮೆ ಪರಪರನೆ ಸದ್ದು ಮಾಡುವ ತರಗೆಲೆಗಳು. ಅದು ಇಂಥಹದ್ದೇ ಕಾರಣಕ್ಕೆ ಸದ್ದುಂಟು ಮಾಡುತ್ತದೆಯೆಂಬ ಯಾವ ಕಲ್ಪನೆ, ಕುತೂಹಲವೂ ಇಲ್ಲದೆ ಧ್ಯಾನಸ್ಥನಂತೆ ಕುಳಿತು ದೂರದ ಗುಡ್ಡ ದಿಟ್ಟಿಸುತ್ತಲೇ ಇದ್ದೆ.
ಎಷ್ಟು ಸಣ್ಣ ಮಕ್ಕಳಿದ್ದೆವು ನಾವು. ವರ್ಷಕ್ಕೆ ಎರಡೇ ಜೋಡಿ ಸಿಗುತ್ತಿದ್ದ ಆ ನೀಲಿ ಬಿಳಿ ಸಮವಸ್ತ್ರ. ಇದೇ ತೊರೆಯನ್ನು ದಾಟಿ ಬರುತ್ತಿದ್ದ ನಾವು. ಭೀಕರ ಮಳೆಗಾಲದಲ್ಲಿ, ಬೇಕಂತಲೇ ಡಾಮಾರು ರಸ್ತೆ ಬಿಟ್ಟು ರಭಸವಾಗಿ ಹರಿವ ಈ ತೊರೆಯಲ್ಲಿ ಕಾಲು ಹಾಕುತ್ತಾ ಬರುವ ಖುಷಿಗಾಗಿ ಇದೇ ದಾರಿಯನ್ನೇ ಆಯ್ಕೆ ಮಾಡುತ್ತಿದ್ದುದು, ಪ್ಯಾಂಟ್ ಒದ್ದೆಯಾಗದಿರಲೆಂದು ತೊಡೆಯವರೆಗೂ ಮಡಚುತ್ತಿದ್ದುದು. ಮೈಮರೆತು ಮಂಡೆ ಒದ್ದೆಯಾಗುವಾಗ ಅಷ್ಟೂ ಮಡಚಿದ್ದ ಪ್ಯಾಂಟ್ ಪೂರಾ ಒದ್ದೆ. ಬಟ್ಟೆ ಒದ್ದೆಯಾದುದಕ್ಕೆ ಅಬ್ಬನಿಂದ ದಿನಾ ಹೊಡೆಸಿಕೊಳ್ಳುವುದು ಎಲ್ಲ ನೆನೆದರೆ ಸಣ್ಣಗೆ ನಗುವುಕ್ಕಿ ಬರುತ್ತದೆ.
ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು. ಯಾರದೋ ಮಕ್ಕಳೇನು; ನಮ್ಮ ಅಕ್ಕಂದಿರ ಮಕ್ಕಳೂ ಇದೇ ಇಂಗ್ಲೀಷ್ ಮೀಡಿಯಂನ ವಿಭ್ರಾಂತಿಗೆ ಸಿಲುಕಿ ಅದು ಅವರನ್ನೂ ಆವರಿಸಿಕೊಂಡು ಬಿಟ್ಟಿದೆಯೆಂದರೆ…. ಅಷ್ಟರಲ್ಲಿ ಹತ್ತಿರದ ಬಂಡೆಯೊಂದರ ಮರೆಯಲ್ಲಿ ಗಂಡು ಬೆಕ್ಕುಗಳೆರಡರ ಕಿರುಚಾಟ ಕೇಳಿಸಿಕೊಳ್ಳತೊಡಗಿತು. “ಕ್ಲೀಂವ್” ಎಂದು ತೀಕ್ಷ್ಣವಾಗಿ ಕಿರುಚಿಕೊಂಡ ಕಪ್ಪು ಬೆಕ್ಕು. “ಮೂಂವ್…ss” ಪ್ರತಿಯಾಗಿ ಬೈಯ್ಯುವ ಕಂದು ಬಣ್ಣದ್ದು. ಹಾಳಾಗಿ ಹೋಯಿತು, ಎಂದು ಅಲ್ಲೇ ಇದ್ದ ಕಲ್ಲೊಂದು ಬೀಸಿ ಎಸೆದೆ. ಎತ್ತಲೋ ಓಡಿ ಹೋದವು.
ಬೆಕ್ಕುಗಳು ತಮ್ಮ ತಮ್ಮ ಸರಹದ್ದನ್ನು ಸೃಷ್ಟಿಸಿಕೊಂಡು ಬಿಡುತ್ತವಂತೆ. ತನ್ನ ಮಲವನ್ನು ಮುಚ್ಚಿ ಹಾಕಿ ಮಣ್ಣು ಹಾಕುವ ಬೆಕ್ಕುಗಳು ಅವುಗಳು ಸೃಷ್ಟಿಸಿಕೊಂಡ ಸಾಮ್ರಾಜ್ಯದೊಳಗೆ ಬೇರೊಂದು ಗಂಡು ಬೆಕ್ಕಿನ ಅಕ್ರಮ ಪ್ರವೇಶವನ್ನು ಕಿಂಚಿತ್ತೂ ಸಹಿಸದು. ತನ್ನ ಸೀಮೆಯೊಳಗೆ ಇನ್ನೊಂದು ಬೆಕ್ಕು ಬಂತೆಂದರೆ ಸಾಕು, ಪರಸ್ಪರ ಆಕ್ರಮಣಕ್ಕಿಳಿದು ಹೊಡೆದಾಡಿಕೊಳ್ಳುತ್ತವೆ. ಕೆಲವೊಮ್ಮೆ ಬಲಿಷ್ಟ ಬೆಕ್ಕುಗಳು ಎದುರಾಳಿಗಳ ಪ್ರಾಣವನ್ನೂ ಬಲಿ ಪಡೆಯುವುದುಂಟು. ನಮ್ಮೂರಲ್ಲಿ ಕಾಡು ಬೆಕ್ಕುಗಳು ಇರುವುದು ಬಲ್ಲೆನಾದರೂ ಅವುಗಳು ಬೆಕ್ಕಿನಂತೆ ಕೂಗಿಕೊಳ್ಳುವುದರ ಬಗ್ಗೆ ನನಗೆ ಅರಿವಿಲ್ಲ.
ತಥ್! ಕಥೆ ಹೇಳುತ್ತಿದ್ದ ನಾನು ಎಲ್ಲಿಗೋ ಹೊರಟುಬಿಟ್ಟೆ ನೋಡಿ. ಅಷ್ಟಕ್ಕೇ ಆ ಕಲ್ಲು ಬಂಡೆಯ ಸಹವಾಸ ಸಾಕೆನಿಸಿ ಅಲ್ಲಿಂದೆದ್ದು ಗುಡ್ಡದ ದಾರಿಯಲ್ಲಿ ನಡೆಯುತ್ತಾ ಬಂದೆ. ಅನತಿ ದೂರದಲ್ಲಿ ಕುಟುಂಬಿಕರ ಮನೆಯಿದೆ. ಅವರ ಕಣ್ಣಿಗೆ ಬಿದ್ದರೆ ಅವರ ಮನೆಗೆ ಹೊಕ್ಕು ಅವರನ್ನು ಮಾತನಾಡಿಸಿ ಅವರು ಸತ್ಕರಿಸುವ ಕಪ್ಪುಚಹಾ ಕುಡಿದು ನಮಸ್ಕಾರ ಮಾಡಿ ಬರಬೇಕು. ಅದ್ಯಾವುದರ ಮೇಲೆ ಕೊಂಚವೂ ಆಸಕ್ತಿಯಿಲ್ಲದೆ ಆದಷ್ಟು ಕಣ್ಣು ತಪ್ಪಿಸಿ ಕಾಡ ದಾರಿಯನ್ನೇ ಆಯ್ಕೆ ಮಾಡಿಕೊಂಡೆ.
ಆ ದಾರಿಯಲ್ಲಿ ಎಷ್ಟು ಮರಗಳು. ದೂಪ, ಸಾಗುವಾನಿ, ಸರೊಳಿ, ದೇವದಾರು ಹೆಸರು ಗೊತ್ತಿದ್ದಷ್ಟೂ ಗುರುತಿಸಿಕೊಂಡು ನಡೆದೆ. ಸ್ವಲ್ಪ ದೂರದಲ್ಲಿ ನನ್ನ ಗುರಿಯೋ, ನನ್ನ ಕುತೂಹಲವೋ ಹೆಸರಿಡಲಾಗದ್ದೊಂದು ಬಿದಿರುಮೆಳೆ ಬಳಿ ನನ್ನನ್ನು ತಲುಪಿಸಿತು. ಸುತ್ತಲೂ ಅಭೇದ್ಯ ಕಾಡು ಮತ್ತು ಬಿದಿರ ಪೊದೆಗಳ ಬದುವಿಗೆ ಸಣ್ಣ ಕಿಷ್ಕಿಂದೆ ದಾಟಲು ಮರದಿಂದ ಮಾಡಿದ್ದ ಕಾಲು ಸೇತುವೆ. ಹಿಂದೆ ಒಕ್ಕಲು ಇದ್ದವರು ತಮ್ಮ ಮಕ್ಕಳು ಶಾಲೆಗೆ ಹೋಗಲು ಇದೇ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದರಿಂದಲೇ ಅದು ಪೊದೆಗಳ ಮಧ್ಯೆ ಚಂದದ ಕಾಡು ದಾರಿಯಾಗಿ ಬದಲಾಗಿತ್ತು. ಅದು ಜನವಿಹೀನಗೊಂಡ ಬಳಿಕ ತಥಾಕಥಿತ ಮರದ ಕಾಲು ಸೇತುವೆ ಗೆದ್ದಲಿಗೆ ಊಟವಾಗಿ ಶಿಥಿಲಗೊಂಡು ಬಿಟ್ಟಿತ್ತು. ಈಗಲೋ ಮತ್ತೆಯೋ ಭಾರವಿರುವ ಯಾವ ವಸ್ತು ಅದರ ಮೇಲೆ ಬಿದ್ದರೆ ಸಾಕು, ಲಟ್ಟೆಂದು ಮುರಿದು ಬಿಡುವುದು ನಿಕ್ಕಿಯಾಗಿತ್ತು. ಈ ಸ್ಥಿತಿಯಲ್ಲಿ ಅದರ ಮೇಲೆ ನಡೆದರೆ ದೇವಸ್ಥಾನದ ಹುಂಡಿಗೆ ಹರಕೆಯ ಪಾವಲಿ ಬಿದ್ದಂತೆ ನಾನೂ ಅದರೊಂದಿಗೆ ಆ ಕಣಿವೆಯೊಳಗೆ ಬೀಳುವ ಸಣ್ಣ ಅಳುಕೊಂದು ಒಳಗೊಳಗೆ ಇತ್ತು. ಅನತಿ ದೂರ ಸಾಗಿದರೆ ಅಲ್ಲೊಂದು ಮಾವಿನ ಮರ.
ಬೆಕ್ಕುಗಳು ತಮ್ಮ ತಮ್ಮ ಸರಹದ್ದನ್ನು ಸೃಷ್ಟಿಸಿಕೊಂಡು ಬಿಡುತ್ತವಂತೆ. ತನ್ನ ಮಲವನ್ನು ಮುಚ್ಚಿ ಹಾಕಿ ಮಣ್ಣು ಹಾಕುವ ಬೆಕ್ಕುಗಳು ಅವುಗಳು ಸೃಷ್ಟಿಸಿಕೊಂಡ ಸಾಮ್ರಾಜ್ಯದೊಳಗೆ ಬೇರೊಂದು ಗಂಡು ಬೆಕ್ಕಿನ ಅಕ್ರಮ ಪ್ರವೇಶವನ್ನು ಕಿಂಚಿತ್ತೂ ಸಹಿಸದು. ತನ್ನ ಸೀಮೆಯೊಳಗೆ ಇನ್ನೊಂದು ಬೆಕ್ಕು ಬಂತೆಂದರೆ ಸಾಕು, ಪರಸ್ಪರ ಆಕ್ರಮಣಕ್ಕಿಳಿದು ಹೊಡೆದಾಡಿಕೊಳ್ಳುತ್ತವೆ.
ದ್ರಾಕ್ಷಿಯಾಕಾರದಲ್ಲಿ ಹಣ್ಣಾಗುತ್ತಿದ್ದ ಆ ಮಾವಿನ ಮರದ ಬಗ್ಗೆ ಮಕ್ಕಳು ಕಟ್ಟಿದ್ದು ಅದೆಷ್ಟು ಭೂತದ ಕಥೆಗಳು! ಹುಡುಗಿಯೊಬ್ಬಳಿಗೆ ಅಚಾನಕ್ಕಾಗಿ ಅಲ್ಲಿ ಉದ್ದ ಕೂದಲಿನ ಭೀಭತ್ಸ ಮಹಿಳೆಯನ್ನು ಕಂಡಿದ್ದು, ಬಿಳಿಯ ನೀಳವಸ್ತ್ರ ತೊಟ್ಟಿದ್ದ ಬ್ರಹ್ಮರಾಕ್ಷಸ ನೋಡಿದ್ದ ಶಾಲಾ ಹುಡುಗ. ಎಷ್ಟೆಷ್ಟು ಕಥೆಗಳು… ಯಪ್ಪಾ ಕೇಳಿಸಿಕೊಂಡರೆ ಅಲ್ಲಿದ್ದ ಭೂತಕ್ಕೇ ಹೆದರಿಕೆ ಹುಟ್ಟಿ ಬಿಡುವಷ್ಟು ಕಪೋಲಕಲ್ಪಿತ ಭಯಾಶಂಕೆಗಳು. ಅಲ್ಲೇ ಇಳಿದು ಸಾಗಿದರೆ ಮಣ್ಣಿನ ಬೇಲಿಯ ಬದಿಯಲ್ಲೇ ಸಾಗಿದರೆ ಉಕ್ರಜ್ಜಿಯ ಮನೆ ಸಿಗುವುದು.
ಈಗ ಆ ಬಿದಿರ ಪೊದೆಯ ಕಥೆ ಹೇಳಬೇಕು ನಿಮಗೆ. ಅದೊಂದು ದೊಡ್ಡ ಕಥೆ. ನೇರವಾಗಿ ನಮಗೆ ಉಕ್ರಜ್ಜಿಯೇ ಹೇಳಿದ್ದು. ಎಷ್ಟೊಂದು ವರ್ಷಗಳ ಹಿಂದಿನ ಕಥೆಯದು. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯವೂ ಸಿಕ್ಕಿಲ್ಲ ಅಷ್ಟೂ ಹಳೆಯ ಕಥೆಯದು.
ಉಕ್ರಜ್ಜಿಗೆ ಥೇಟ್ ಕಾರಂತಜ್ಜರ ಮೂಕಜ್ಜಿಯದ್ದೇ ಚಹರೆ. ನೆತ್ತಿಯಲ್ಲಿ ದೊಡ್ಡ ಬೊಟ್ಟು, ಚಳಿಗೆ ಹೊದ್ದುಕೊಂಡಂತೆ ಉಡುವ ಕಾಟನ್ ಸೀರೆ. ಆಗ ಅವರೂ ಸಣ್ಣವರಂತೆ.
ಒಂದು ಹುಣ್ಣಿಮೆಯ ರಾತ್ರಿ. ಚಿಮಿಣಿ ಆರಿಸಿ ಮಲಗಿದ್ದವರಿಗೆ ರಾತ್ರಿ ಏನೋ ಶಬ್ದ ಕೇಳಿ ಎಚ್ಚರವಾಗಿದೆ. ಹೊರಗೆ ಬೋರೆಂದು ಗಾಳಿ ಬೀಸುತ್ತಿದೆ. ಒಣಗಿದ ತೆಂಗಿನ ಗರಿಗಳು ಬಾಗುವಾಗ ನೆಟಿಗೆ ಮುರಿಯುವಂತಹ ಕ್ಷೀಣ ಸದ್ದು. ನೀರವ ಮೌನ. ಜೀರುಂಡೆ, ಕಪ್ಪೆಗಳದ್ದು ಗಾನ ಮೇಳ. ಅಷ್ಟರಲ್ಲೇ ಕಾರಿನ ಸದ್ದು ಮತ್ತು ದೂರದಲ್ಲಿ ಕಾಣುವ ಅದರ ಹೆಡ್ ಲೈಟು ಬೆಳಕು. ಹುಣ್ಣಿಮೆ ಬೆಳಕಿಗೆ ಅದು ಬೆಳ್ಳಗಿನ ಅಂಬಾಸಿಡರ್ ಕಾರೆಂದು ಗುರುತಿಸಬಹುದಿತ್ತು. ಬಾಗಿಲುಗಳಿಲ್ಲದ ಆ ಗುಡಿಸಲಿಗೆ ಬರಿಯ ತೆಂಗಿನ ಗರಿಗಳಿಂದ ನೆಯ್ದ ತಟ್ಟಿ ಬಾಗಿಲು. ಆ ರಂಧ್ರದಿಂದ ಇಣುಕಿದರೆ, ಆ ಕಾರಿನಿಂದ ಎರಡು ಮನುಷ್ಯಾಕೃತಿ ಇಳಿದವು. ಒಬ್ಬನ ಹೆಗಲ ಮೇಲೆ ಸಣ್ಣ ಹುಡುಗಿಯೊಬ್ಬಳಿದ್ದಾಳೆ. ಕಾರಿನ ಇಂಜಿನ್ನು ಆಫ್ ಆಗಿದೆ. ಅವರು ಅಲ್ಲೇ ಮಣ್ಣು ಅಗೆಯುತ್ತಿದ್ದಾರೆ. ಸುಮಾರು ಹೊತ್ತು ತದೇಕಚಿತ್ತದಿಂದ ನೋಡುತ್ತಿದ್ದ ಉಕ್ರಜ್ಜಿ ಭಯದಿಂದ ಬೆವತು ಹೋದರಂತೆ.
ಗಂಡ ಕೆಲಸಕ್ಕೆ ಹೋಗಿ ಬಂದು ಮಲಗಿ ನಿದ್ರಿಸುತ್ತಿದ್ದರಿಂದ ಗಂಡನನ್ನು ನಿದ್ರೆಗೆಡಿಸಲೂ ಆಗದೆ ಮೂಕಳಾಗಿ ಕುಳಿತು ಒಬ್ಬಳೇ ಹೆದರುತ್ತಲೇ ನೋಡುತ್ತಿದ್ದಾಳೆ. ಕ್ಷಣಾರ್ಧಾದಲ್ಲಿ ಒಂದು ಹೆಣ್ಣು ಬಾಲೆಯ ಆರ್ಥನಾದ! ಅದೂ ಇಡೀ ಕಾಡು ತುಂಬಾ ಪ್ರತಿಧ್ವನಿಸುವಂತೆ. ಆ ಬಳಿಕ ಅವಸರದಿಂದಲೇ ಮಣ್ಣು ಹಾಕುತ್ತಿರುವುದು ಕಂಡಿತಂತೆ. ಏನೂ ಪ್ರತಿಕ್ರಯಿಸಲೂ ಆಗದೆ ಉಕ್ರಜ್ಜಿ ಹೋಗಿ ಮಲಗಿದಳಂತೆ. ಬೆಳಕು ಮೂಡಿದ ನಂತರವೇ, ಉಕ್ರಜ್ಜಿಗೆ ಎಚ್ಚರವಾದದ್ದು. ಗಂಡ ಆದಾಗಲೇ ಎದ್ದು ಕೆಲಸಕ್ಕೆ ತಯ್ಯಾರಾಗುತ್ತಿದ್ದಾಗ ಮೆಲ್ಲಗೆ ರಾತ್ರಿ ನಡೆದದ್ದು ಹೇಳಿದಳು ಉಕ್ರಜ್ಜಿ. ತುಂಬಾ ಹೆದರಿದ ಇಬ್ಬರೂ “ಯಾರೋ ನಿಧಿಗಾಗಿ ನರಬಲಿ ಕೊಟ್ಟದ್ದಿರಬೇಕು, ಈ ವಿಚಾರ ಯಾರಿಗೂ ಹೇಳಿಕೊಂಡು ಬರಬೇಡ. ಪೋಲೀಸ್, ಗೀಲೀಸ್ ಅಂತ ಕೇಸ್ ಆದರೆ ಎಂಥ ಕಷ್ಟ ಮಾರಾಯ್ತಿ” ಅಂಥ ಬಾಯಿ ಮುಚ್ಚಿಸಿದನಂತೆ.
ಬಹುಶಃ ಅವರು ಆ ದಿನವೇ ಪ್ರತಿರೋಧಿಸಿದ್ದರೆ ಅವರೇನಾದ್ರೂ ಮಾಡಿ ಕೊಲ್ಲುತ್ತಿದ್ದರೇನೋ? ಇನ್ನಷ್ಟು ಬೆಳಕು ಬರಲೆಂದು ಕಾದು ಉಕ್ರಜ್ಜಿ ಗಂಡನನ್ನು ಕೆಲಸಕ್ಕೆ ಕಳುಹಿಸಿಕೊಟ್ಟು ಕಾದಳಂತೆ. ಹೋಗಿ ನೋಡಿದರೆ ಹಸಿ ಮಣ್ಣು, ಒಂದಿಷ್ಟು ನಿಂಬೆ ಮತ್ತು ದಾಸವಾಳ ಹೂವು ಅಲ್ಲಿ ಇತ್ತಂತೆ. ಮತ್ತೆಂದೂ ಆ ಕಡೆಗೆ ತೆರಳದ ಉಕ್ರಜ್ಜಿ ಹೇಳಿದ್ದು ಖಂಡಿತಾ ಅಲ್ಲೊಂದು ನಿಧಿ ಇದ್ದಿರಬಹುದು ಎಂದು.
ಇಷ್ಟೆಲ್ಲಾ ಕಥೆ ಹೇಳುತ್ತಿದ್ದ ನಾನು ಈಗ ನಿಂತಿರುವುದು ಉಕ್ರಜ್ಜಿ ಹೇಳಿದ ಅದೇ ಜಾಗದಲ್ಲಿ. ಒಬ್ಬಂಟಿಯಾಗಿ. ಕಥೆ ನಿಜಕ್ಕೂ ನಡೆದದ್ದೇ ಇರಬಹುದೇ?, ಅಥವಾ ಉಕ್ರಜ್ಜಿಯ ಭ್ರಮೆಯಾಗಿತ್ತೇ? ಸುಮಾರು ಹೊತ್ತು ನಿಂತು ಯೋಚಿಸಿದೆ. ‘ಅಲ್ಲಿ ನಿಜವಾಗಲೂ ಕೊಂದಿದ್ದು ಯಾರು, ಯಾಕಾಗಿ ಕೊಂದರು, ಕೊಲ್ಲಲ್ಪಟ್ಟ ಹುಡುಗಿ ಯಾರಿರಬಹುದು?’. ಆ ಊಹೆಯಲ್ಲಿ ಕಥೆಗಳನ್ನು ಮತ್ತೆ ಹೆಕ್ಕಿ ಕೇಸ್ ರೀ ಓಪನ್ ಇನ್ವೆಸ್ಟಿಗೇಷನ್ ನಡೆಸುವುದು ಅಸಾಧ್ಯವೂ ಇತ್ತು.
ಮೆಲ್ಲಗೆ ಮುಂದಡಿಯಿಡುತ್ತಾ ಉಕ್ರಜ್ಜಿ ಹೇಳಿದ್ದ ಅದೇ ಬಿದಿರಿನ ಪೊದೆಗಳ ನೇರ ಕೆಳಗೆ ಬಂದೆ. ಅಚಾನಕ್ಕಾಗಿ ಬಿದಿರ ಪೊದೆಗಳ ಮಧ್ಯದಿಂದ “ಗುರ್ರ್…” ಎಂಬ ಹೂಂಕಾರ ಕೇಳಿಸಿತು. ನಾನು ಅಕ್ಷರಶಃ ಬೆಚ್ಚಿ ಕಲ್ಲಾಗಿ ನಿಂತೆ.
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..
ನಿಮ್ಮ ಬರಹಗಳು ತುಂಬಾ ಚೆನ್ನಾಗಿರುತ್ತವೆ. ಓದಲು ಸಂತೋಷವಾಗುತ್ತದೆ.
ಧನ್ಯವಾದಗಳು.
ಥಾಂಕ್ಸ್
ತುಂಬ ಭಾವಪೂರ್ಣವಾಗಿದೆ. ಮನದಾಳದಿಂದ ಒಮ್ಮೆ ಬಾಲ್ಯ ಕಾಲಕ್ಕೆ ಹೊರಟಿ ಹೋದೆ..
ಧನ್ಯವಾದಗಳು