ಕಾದಂಬರಿಯೊಂದು ಮ್ಯಾನೇಜಮೆಂಟ್ ತತ್ವಗಳನ್ನು ಕಲಿಸುತ್ತದೆ ಎಂದರೆ ಸೋಜಿಗ ಬೆರಗಿನಲ್ಲಿ ಬದಲಾಗುವುದಿಲ್ಲವೇ? ವಿಶ್ವದ ಅತ್ಯಂತ ಜನಪ್ರಿಯ ಮ್ಯಾನೇಜ್ಮೆಂಟ್ / ಬಿಸಿನೆಸ್ ಪುಸ್ತಕವು ವಾಸ್ತವದಲ್ಲಿ ಒಂದು ಕಾದಂಬರಿ ಎಂದರೆ ಅಚ್ಚರಿಯಾಗದೇ? ಬಿಸಿನೆಸ್ಸನ್ನು ಸುಸೂತ್ರ ನಡೆಸುವ ಕಾರ್ಯಪದ್ಧತಿಯನ್ನು ವಿವರಿಸಲು “ಕೇಸ್ ಸ್ಟಡಿ”ಯಾಗಿ ಕಾದಂಬರಿಯನ್ನು ಬಳಸುವುದು ಮತ್ತು ತತ್ಸಂಬಂಧಿ ಸಿದ್ಧಾಂತವನ್ನು ತನ್ಮೂಲಕ ಪ್ರಸ್ತುತಪಡಿಸುವುದು ಬರಹಸಂಕರ ಪ್ರಯೋಗಗಳಲ್ಲಿಯೇ ಅಪರೂಪದ ವಿದ್ಯಮಾನವೆಂದು ನನಗನಿಸುತ್ತದೆ.
ಕಮಲಾಕರ ಕಡವೆ ಬರೆಯುವ ಅಂಕಣ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವ ಪುಸ್ತಕಗಳೆಂದರೆ ನನಗೆ ಇಷ್ಟ. ಕತೆಗಿಂತ ಬೇರೆಯಾದ ಕತೆ, ನಾಟಕದ ಜೊತೆ ನಾಟಕವಾಡುವ ನಾಟಕ, ಕಥನೇತರದ ಸೋಗಿನಲ್ಲಿರುವ ಕಥಾನಕ, ಕವನದಂತೆ ತೋರದ ಕಾವ್ಯ, ಕಾದಂಬರಿಯಾಗಿ ಬರುವ ವಿಜ್ಞಾನ, ಪತ್ತೇದಾರಿಯಂತಿರುವ ಪರಿಸರವಾದಿ ಬರಹ, ಸ್ವಗತದಂತಿರುವ ಮೀಮಾಂಸೆ… ಬರವಣಿಗೆಯೇ ತಾನು ಇದು, ತಾನು ಅದು ಎಂದಾಗ ನಂಬದೇ, ನಾವು ಓದಿದ್ದು ಹೇಗೆ, ಅದು ಹೇಳಿದ್ದು ಏನು, ಹೀಗೆ ಏಕೆಏನುಗಳನ್ನು ಓದುತ್ತ ಓದುತ್ತ ನಾವೇ ಬರವಣಿಗೆಯ ಬಗೆಯನ್ನು ಬಗೆಹರಿಸಿಕೊಳ್ಳುವುದು ನಾನು ಇಷ್ಟಪಡುವ ಓದಿನ ವರಸೆ.
ಸ್ಯಾಮ್ಯುಯೆಲ್ ರಿಚರ್ಡ್ಸನ್ ಮಹಿಳೆಯರಿಗಾಗಿ ಬರೆದ ಪತ್ರ-ಲೇಖನದ ಕೈಪಿಡಿ ಇಂಗ್ಲೀಷಿನ ಮೊದಲ ಸಾಮಾಜಿಕ ಕಾದಂಬರಿಯಾಯಿತು ಎನ್ನುವುದನ್ನು ನೆನಪಿಸಿಕೊಂಡರೆ, ಬರವಣಿಗೆಯ ‘ಪ್ರಕಾರ’ ಎನ್ನುವ ಈ ವರ್ಗೀಕರಣ ಕೃತಕ ಮಾತ್ರವಲ್ಲ, ನಂಬಲನರ್ಹವೂ ಹೌದು ಅನ್ನಿಸತೊಡಗುತ್ತದೆ.
ಬರವಣಿಗೆಗಳ ಪ್ರಕಾರಗಳನ್ನು ಹಿಗ್ಗಾಮುಗ್ಗಾ ಜಗ್ಗಿಜರಿದು, ಬಗ್ಗಿಸಿ, ಕುಗ್ಗಿಸಿ, ಹಿಗ್ಗಿಸಿ, ಮುರಿದು ಮಾರ್ಪಡಿಸಿರುವ ಕೃತಿಗಳು ಎಲ್ಲ ಕಾಲದಲ್ಲಿಯೂ ನಮಗೆ ಕಾಣಬರುತ್ತವೆ. ಈ ಕಾಲಂನಲ್ಲಿ ಈಗಾಗಲೇ ಅಂತಹ ಎರಡು ಪ್ರಶಸ್ತ ಉದಾಹರಣೆಗಳನ್ನು – ಅಮಿತಾವ್ ಘೋಷ್ ಅವರ “ಇನ್ ಆನ್ ಆಂಟೀಕ್ ಲ್ಯಾಂಡ್” ಮತ್ತು ಲಾರೆನ್ಸ್ ಸ್ಟರ್ನನ “ಟ್ರಿಸ್ಟ್ರಂ ಶ್ಯಾಂಡಿ” – ವಿಶ್ಲೇಷಿಸಲಾಗಿದೆ. ವಿಶ್ವಸಾಹಿತ್ಯದಲ್ಲಿ ಬರವಣಿಗೆಗಳ ಈ ಬಗೆಯ ಕೌತುಕಮಯಿ ಮಿಶ್ರಣ ಕಾಣುವ ಅನೇಕ ಕೃತಿಗಳು ಓದುಗರ ಕಲ್ಪನಾಶಕ್ತಿಗೆ ಕಚಗುಳಿ ಇಟ್ಟಿರುವುದು ಮಾತ್ರವಲ್ಲ, ಬರಹಗಳ ಕುರಿತಾದ ನಮ್ಮ ಯೋಚನಾಕ್ರಮವನ್ನೇ ಪ್ರಶ್ನಿಸಿವೆ.
ಕಥನವೋ, ತಾರ್ಕಿಕವೋ, ಬರಹವೆನ್ನುವುದೊಂದು ಸುಸಂಬದ್ಧ ಲೇಖನಕ್ರಮ ಮತ್ತು ಅದರಲ್ಲಿ ವಿಷಯಪ್ರಸ್ತುತಿ ತೈಲಧಾರೆಯಂತೆ ಏಕಮುಖಿಯಾದ ಚಲನೆಯಾಗಿರಬೇಕು ಎನ್ನುವ ಅಪೇಕ್ಷೆ ಅತ್ಯಂತ ಸಾಮಾನ್ಯವೂ, ಸಾರ್ವತ್ರಿಕವೂ ಹೌದು. ಅಂತೆಯೇ, ಪ್ರತಿ ಬರಹವೂ ತನ್ನ ಕ್ಷೇತ್ರಕ್ಕೆ ಸೂಕ್ತ ಶೈಲಿಯಲ್ಲಿರಬೇಕು: ತಾರ್ಕಿಕ ಬರಹದಲ್ಲಿ ಕಾವ್ಯಕ್ಕೆ ಸ್ಥಳವಿಲ್ಲ; ತಾತ್ವಿಕ ಬರಹದಲ್ಲಿ ಹಾಸ್ಯಕ್ಕೆ ಜಾಗವಿಲ್ಲ; ಕಥನದಲ್ಲಿ ತಾಂತ್ರಿಕ ವ್ಯಾಖ್ಯಾನಗಳಿಗೆ ಕೆಲಸವಿಲ್ಲ; ಯಾವುದೇ ಬರಹವೂ ತನ್ನ “ಪ್ರಕಾರ”ಕ್ಕೆ ಅನುಗುಣವಾದ ಶೈಲಿಯಲ್ಲಿಯೇ ಇರಬೇಕು ಅನ್ನುವ ಅಪೇಕ್ಷೆ ಕೂಡ ಸರ್ವೇಸಾಮಾನ್ಯವಾಗಿದೆ. ಈ ಅಪೇಕ್ಷೆಗಳನ್ನು ಕಟ್ಟುನಿಟ್ಟಾದ ನಿಯಮಗಳನ್ನಾಗಿ ಪ್ರಚುರಪಡಿಸಲಾಗಿದೆ, ಹೇರಲಾಗಿದೆ, ಎಂದು ನಾನು ಹೇಳುತ್ತಿಲ್ಲ. ಅಂಥಹ ನಿಯಮದ ಕುರಿತು ಬರಹಕ್ಕೆ ತೊಡಗುವ ಮೊದಲೇ ನಮ್ಮಲ್ಲಿ ನಿಷ್ಠೆ ಜಾಗೃತವಾಗಿರುತ್ತದೆ. ಅಂತೂ, ವಿಭಿನ್ನ ಬರಹಗಳು ಹೀಗೆ ವಿಭಿನ್ನ ಗುಣ ಪ್ರದರ್ಶಿಸಬೇಕು ಎನ್ನುವ ಅಲಿಖಿತ ನಿಯಮಕ್ಕೆ ಬದ್ಧತೆಯಿಂದಲೇ ಬಹುಪಾಲು ಬರವಣಿಗೆ ನಡೆಯುತ್ತದೆ. ಹಾಗಾಗಿಯೇ, ಬರಹಸಂಕರ ತುಂಬಾ ಅಪರೂಪಕ್ಕೆ ಕಾಣಬರುವ ಪ್ರಯೋಗ.
ಕನ್ನಡ ಜಿಲ್ಲೆಗಳಲ್ಲಿ ಒಂದು ಶಬ್ದದ ಪ್ರಯೋಗ ಬಹಳ ಸಾಮಾನ್ಯ: ಅಧಿಕಪ್ರಸಂಗತನ. ಅಂದರೆ, ಮಾಡಬೇಕಿದ್ದುದಕ್ಕಿಂತ ಹೆಚ್ಚಿಗೆ ಮಾಡಹೊರಟಾಗ ಉಪಯೋಗಿಸುವ ಶಬ್ದವಿದು. ಯಾಕೋ ನನಗೆ ಈ ಶಬ್ದ ಬಹಳ ಇಷ್ಟ. ಮತ್ತು ನನ್ನ ಮೆಚ್ಚಿನ ಹಲವು ಕೃತಿಗಳು ಇಂತಹ ಅಧಿಕಪ್ರಸಂಗದ (ಅಧಿಕಪ್ರಸಂಗಿಗಳು ಬರೆದ) ಬರಹಗಳು. ಅವುಗಳನ್ನು ಇದು ಇಂತದ್ದೇ ಎಂದು ಹೇಳಲು ಕಷ್ಟ – ಕತೆಯೂ, ಕಾಯಿದೆಯೂ, ತತ್ವವೂ, ತರ್ಕವೂ, ವ್ಯಾಖ್ಯೆಯೂ, ಉಪದೇಶವೂ… ಹೀಗೆ ಎಲ್ಲವೂ ಇರುವ, ಎಲ್ಲರಿಗೂ ಓದಲು ರುಚಿಸುವ ಪುಸ್ತಕಗಳು ಅವು. ಸಾಹಿತ್ಯಕ್ಷೇತ್ರದಲ್ಲಿ ಇಂತಹ ಸಂಕರಕೃತಿಗಳು ಅಪರೂಪವೇ ಮತ್ತು ಸಾಹಿತ್ಯಸರದಾರರಂತೂ ಇಂತಹ ಕೃತಿಗಳ ಕುರಿತು ಯಾವಾಗಲೂ ಗೊಣಗುತ್ತಲೇ ಇರುತ್ತಾರೆ. ಸಾಹಿತ್ಯ ಕೃತಿಯೊಂದು ಸಾಹಿತ್ಯೇತರ ಅರ್ಥ ಸ್ಫುರಿಸುವ ಕುರಿತಾಗಿ ಪೂರ್ಣಚಂದ್ರ ತೇಜಸ್ವಿಯವರ “ಜುಗಾರಿಕ್ರಾಸ್” ಕಾದಂಬರಿಯಲ್ಲಿ ಬರುವ ಉಲ್ಲೇಖ ಎಷ್ಟು ಸೋಜಿಗಪಡುವಂತದ್ದು, ಅಲ್ಲವೇ?
ಆದರೂ ಕೂಡ ಕಾದಂಬರಿಯೊಂದು ಮ್ಯಾನೇಜಮೆಂಟ್ ತತ್ವಗಳನ್ನು ಕಲಿಸುತ್ತದೆ ಎಂದರೆ ಸೋಜಿಗ ಬೆರಗಿನಲ್ಲಿ ಬದಲಾಗುವುದಿಲ್ಲವೇ? ವಿಶ್ವದ ಅತ್ಯಂತ ಜನಪ್ರಿಯ ಮ್ಯಾನೇಜ್ಮೆಂಟ್ / ಬಿಸಿನೆಸ್ ಪುಸ್ತಕವು ವಾಸ್ತವದಲ್ಲಿ ಒಂದು ಕಾದಂಬರಿ ಎಂದರೆ ಅಚ್ಚರಿಯಾಗದೇ? ಬಿಸಿನೆಸ್ಸನ್ನು ಸುಸೂತ್ರ ನಡೆಸುವ ಕಾರ್ಯಪದ್ಧತಿಯನ್ನು ವಿವರಿಸಲು “ಕೇಸ್ ಸ್ಟಡಿ”ಯಾಗಿ ಕಾದಂಬರಿಯನ್ನು ಬಳಸುವುದು ಮತ್ತು ತತ್ಸಂಬಂಧಿ ಸಿದ್ಧಾಂತವನ್ನು ತನ್ಮೂಲಕ ಪ್ರಸ್ತುತಪಡಿಸುವುದು ಬರಹಸಂಕರ ಪ್ರಯೋಗಗಳಲ್ಲಿಯೇ ಅಪರೂಪದ ವಿದ್ಯಮಾನವೆಂದು ನನಗನಿಸುತ್ತದೆ. ಅಂತಹ ಸಂಕರಕೃತಿಯ ಕುರಿತು ಪುಟ್ಟ ಪರಿಚಯಾತ್ಮಕ ಬರಹ ನನ್ನ ಪ್ರಸ್ತುತ ಉದ್ದೇಶ.
1984ರಲ್ಲಿ ಪ್ರಕಟವಾದ ಎಲಿಯಾಹು ಗೋಲ್ಡರಟ್ ಅವರ “ದ ಗೋಲ್” ಎನ್ನುವ ಕೃತಿ ವಿಶ್ವದ ಪ್ರಥಮ “ಬಿಸಿನೆಸ್ ಕಾದಂಬರಿ”. ಎಲಿಯಾಹು ಗೋಲ್ಡರಟ್ ಬಿಸಿನೆಸ್ ಕ್ಷೇತ್ರದಲ್ಲಿ ತಮ್ಮ“ನಿರ್ಭಂಧನೆಗಳ ಸಿದ್ಧಾಂತ”ಕ್ಕಾಗಿ (“ಥಿಯರಿ ಆಫ್ ಕನ್ಸಟ್ರೇಂಟ್”) ಪ್ರಸಿದ್ಧರು. ಆದರೆ ಗೋಲ್ಡರಟ್ ತಮ್ಮ ಈ ಸಿದ್ಧಾಂತವನ್ನು ಜನರ ಮುಂದಿಟ್ಟಿದ್ದು ಮಾತ್ರ ಕಾದಂಬರಿ ರೂಪದಲ್ಲಿ!
ಎಲಿಯಾಹು ಗೋಲ್ಡರಟ್ ಅವರ ಪ್ರಕಾರ ಇದರ ಪ್ರಕಾಶನದ ಹಿಂದಿನ ಕತೆಯೂ ಕೂಡ ಸಂಕರಕೃತಿಗಳ ಕುರಿತು ಜನರಿಗಿರುವ ಪೂರ್ವಾಗ್ರಹವನ್ನು ತೋರಿಸುತ್ತದೆ. ಎಲಿಯಾಹು ತಮ್ಮ “ಬಿಸಿನೆಸ್ ಕಾದಂಬರಿ”ಯನ್ನು ಒಂದಲ್ಲ, ಎರಡಲ್ಲ ಮೂವತ್ತು ಪ್ರಕಾಶಕರಿಗೆ ತೋರಿಸಿದರಂತೆ. ಯಾರಿಗೂ ಕೂಡ ಬಿಸಿನೆಸ್ ಕುರಿತಾದ ‘ಕೌಟುಂಬಿಕ ಕತೆ’ ಪ್ರಕಟಿಸಿ ತಮ್ಮ ಬಿಸಿನೆಸ್ ಹಾಳುಮಾಡಿಕೊಳ್ಳುವ ಉತ್ಸಾಹವಿರಲಿಲ್ಲ. ಬಿಸಿನೆಸ್ ಕಲಿಸೋದಕ್ಕೆ ಕತೆ? ಇಡ್ಲಿ ಜೊತೆ ಚೀಸ್? ಅಷ್ಟೇ ಏಕೆ, ಈ ಕಾದಂಬರಿಯ ಸಹ-ಲೇಖಕ ಜೆಫ಼್ ಕಾಕ್ಸ್ ಕೂಡ ಈ ಕೃತಿ ಮಾರುಕಟ್ಟೆಯಲ್ಲಿ ತೋಪಾಗುವುದೆಂದು ಅದೆಷ್ಟು ಖಾತ್ರಿಯಿಂದ ನಂಬಿದ್ದನೆಂದರೆ, ಮಾರಾಟದ ಲಾಭಾಂಶದ ಬದಲು ಆತ ಸಗಟು ಮೊತ್ತ ಮುಂಗಡವಾಗಿ ತೆಗೆದುಕೊಂಡಿದ್ದ. ನಾರ್ಥ್ ರಿವರ್ ಪ್ರೆಸ್ ಈ ಪುಸ್ತಕವನ್ನು ಅಂತಿಮವಾಗಿ ಪ್ರಕಟಿಸಲು ಒಪ್ಪಿದ ಪ್ರಕಾಶನ ಸಂಸ್ಥೆ.
ಎಲಿಯಾಹು ಗೋಲ್ಡರಟ್ ಅವರ “ದ ಗೋಲ್” ವಿಶ್ವದ ಮೊಟ್ಟ ಮೊದಲ ಬಿಸಿನೆಸ್ ಕಾದಂಬರಿ ಮತ್ತು ಅತಿ ಹೆಚ್ಚು ಮಾರಾಟವಾಗಿರುವ ಬಿಸಿನೆಸ್ ಗ್ರಂಥ. ಜಗತ್ತಿನ 32 ಭಾಷೆಗಳಿಗೆ ಅನುವಾದವಾಗಿರುವ ಈ ಕೃತಿ Time Magazine ಪ್ರಕಾರ ಬಿಸಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿನ 25 ಅತ್ಯಂತ ಪ್ರಭಾವಿ ಪುಸ್ತಕಗಳಲ್ಲಿ ಒಂದು. 2014ರಲ್ಲಿ ಈ ಕಾದಂಬರಿಯ 30ನೇ ವಾರ್ಷಿಕ ಆವೃತ್ತಿಯನ್ನು ಪ್ರಕಟಿಸಲಾಯಿತು. ವಿಶ್ವದ ಅನೇಕ ಉತ್ಪಾದನಾ ಸಂಸ್ಥೆಗಳು ತಮ್ಮ ಅಧಿಕಾರಿಗಳಿಗೆ ಈ ಕೃತಿಯನ್ನು ಕಡ್ಡಾಯವಾಗಿ ಓದಲು ಪ್ರೇರೇಪಿಸುತ್ತಾರಂತೆ! ಜಗತ್ತಿನಾದ್ಯಂತ ಬಿಸಿನೆಸ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ ಈ “ಕಾದಂಬರಿ”ಯನ್ನು ಕಲಿಸಲಾಗುತ್ತದೆ!!
ಕಥನವೋ, ತಾರ್ಕಿಕವೋ, ಬರಹವೆನ್ನುವುದೊಂದು ಸುಸಂಬದ್ಧ ಲೇಖನಕ್ರಮ ಮತ್ತು ಅದರಲ್ಲಿ ವಿಷಯಪ್ರಸ್ತುತಿ ತೈಲಧಾರೆಯಂತೆ ಏಕಮುಖಿಯಾದ ಚಲನೆಯಾಗಿರಬೇಕು ಎನ್ನುವ ಅಪೇಕ್ಷೆ ಅತ್ಯಂತ ಸಾಮಾನ್ಯವೂ, ಸಾರ್ವತ್ರಿಕವೂ ಹೌದು.
ಈ ಕಾದಂಬರಿಯ ನಾಯಕ ಅಲೆಕ್ಸ್ ರೋಗೋ. ಕಾರ್ಖಾನೆಯೊಂದರಲ್ಲಿ ಪ್ಲಾಂಟ್ ಮ್ಯಾನೇಜರ್ ಆಗಿರುವ ರೋಗೋ ಸಂಕಟದಲ್ಲಿದ್ದಾನೆ. ಅವನ ಕಾರ್ಖಾನೆ ಲಾಭ ಹುಟ್ಟಿಸುತ್ತಿಲ್ಲ. ಹಾಗಾಗಿ, ಕಂಪನಿ ರೋಗೋನಿಗೆ 90 ದಿನಗಳ ಗಡುವು ನೀಡಿದೆ – ಕಾರ್ಖಾನೆಯ ಲಾಭದ ಚಿತ್ರಣ ಬದಲಿಸಲು ಅಥವಾ ಕಾರ್ಖಾನೆಯನ್ನು ಮುಚ್ಚಲು. ದಿನವಿಡೀ ದುಡಿದರೂ ಅಪೂರ್ಣ ಕೆಲಸಗಳ ಪಟ್ಟಿ ಉದ್ದವಾಗುತ್ತಲೇ ಸಾಗಿದೆ. ಇದರ ಕರಾಳ ಪರಿಣಾಮ ಅವನ ಕುಟುಂಬದ ಮೇಲಾಗುತ್ತಿದೆ. ಮಡದಿ-ಮಕ್ಕಳಿಗೆ ಕೊಟ್ಟ ಆಶ್ವಾಸನೆಗಳನ್ನು ಪೂರೈಸಲು ಅವನಿಗೆ ಸಮಯ ಸಿಗುತ್ತಿಲ್ಲ. ಸದಾಕಾಲ ತನ್ನ ಕಾರ್ಖಾನೆಯನ್ನು ಉಳಿಸುವುದು ಹೇಗೆಂಬ ಚಿಂತೆಯಲ್ಲಿ ಕುಟುಂಬದಲ್ಲಿಯೂ ವಿರಸ. ಕಾರ್ಖಾನೆ ಮುಚ್ಚಿ ಹೋದರೆ, ನೂರಾರು ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ. ತನ್ನ ಹುಟ್ಟೂರಿನ ಈ ಏಕೈಕ ಕಾರ್ಖಾನೆ ಮುಚ್ಚಿ ಹೋಗುವುದು ರೋಗೋನಿಗೆ ಹಲವಾರು ಸ್ತರದಲ್ಲಿ ವೈಯಕ್ತಿಕ ಸವಾಲಾಗಿ ಗೋಚರಿಸುತ್ತದೆ.
ಈ ಸಂಧರ್ಭದಲ್ಲಿ ರೋಗೋ ತನ್ನ ಕಾಲೇಜು ಪ್ರೊಫೆಸರ್ ಆಗಿದ್ದ ಜೋನಾನನ್ನು ಅಕಸ್ಮಾತ್ತಾಗಿ ಭೇಟಿ ಮಾಡುತ್ತಾನೆ. ಈ ಭೇಟಿಯು ರೋಗೋ ತನ್ನ ಕಾರ್ಖಾನೆಯ ಕಾರ್ಯಪದ್ಧತಿಯ ಕುರಿತಾಗಿ ಹೊಂದಿದ್ದ ಕಲ್ಪನೆಗಳನ್ನೇ ಬದಲಿಸುತ್ತದೆ. ಅವನ ಕಂಪನಿ ಅವನಿಗೆ ಕಲಿಸಿದ್ದ ಲಾಭದ ಕುರಿತಾದ ಸೂತ್ರಗಳನ್ನೆಲ್ಲ ಬದಿಗಿರಿಸಿ, ಕಾರ್ಖಾನೆಯ ಕಾರ್ಯಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಪ್ರೇರೇಪಿಸುತ್ತದೆ.
ಕ್ರಮೇಣ, ರೋಗೋ ಮತ್ತು ಅವನ ಸಹೋದ್ಯೋಗಿಗಳು ತಮ್ಮ ಕಾರ್ಖಾನೆಯಲ್ಲಿ ಆಗುತ್ತಿದ್ದ ನಷ್ಟ, ವಿಳಂಬ, ಗುಣಮಟ್ಟದ ಕೊರತೆಗಳೆಲ್ಲವುಗಳ ಹಿಂದಿರುವ ದೋಷ ಕಾರ್ಯಪದ್ಧತಿಗೆ ಸಂಬಂಧಿಸಿದ್ದು ಎಂದು ಅರಿತುಕೊಂಡು, ಕಾರ್ಖಾನೆಯ ಕಾರ್ಯಪದ್ಧತಿಯನ್ನು ಹೆಚ್ಚು ತಾರ್ಕಿಕಗೊಳಿಸುವ ಮೂಲಕ ಕಾರ್ಖಾನೆಯ ಲಾಭದ ಚಿತ್ರಣವನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಾಗುವ ಕತೆಯನ್ನು “ದ ಗೋಲ್” ಹೇಳುತ್ತದೆ.
ಕಾದಂಬರಿಯ ಬಹುತೇಕ ಘಟನೆಗಳು ಕಾರ್ಖಾನೆಯಲ್ಲಿಯೇ ನಡೆಯುತ್ತವೆ, ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವ ಯಾರಿಗೇ ಆಗಲಿ ಸುಲಭಗ್ರಾಹ್ಯವಾಗುವ ಸಂದರ್ಭಗಳು ಕಾದಂಬರಿಯಲ್ಲಿ ಬರುತ್ತವೆ. ಆದ್ದರಿಂದ, ಕಾದಂಬರಿಯ ಓದುಗರು, ಎಲಿಯಾಹು ಗೋಲ್ಡರಟ್ ಪ್ರತಿಪಾದಿಸುವ “ನಿರ್ಭಂಧನೆಗಳ ತತ್ವ”ವನ್ನು ಸ್ಪಷ್ಟವಾಗಿ ಗ್ರಹಿಸಲು ಸಾಧ್ಯವಾಗುತ್ತದೆ.
ಕಾರ್ಖಾನೆಯೊಂದನ್ನು ಹೇಗೆ ನಡೆಸಬೇಕು ಎನ್ನುವುದನ್ನು ಕಲಿಸಲು ಎಲಿಯಾಹು ಗೋಲ್ಡರಟ್ ಆಯ್ದ ಪದ್ಧತಿಯೇ ಈ ಬಿಸಿನೆಸ್ ಸಲಹಾಗಾರನ ಕಾರ್ಯಸಾಧು ದೃಷ್ಟಿಕೋನವನ್ನು ಸೂಚಿಸುತ್ತದೆ. ಕಥನದ ಮೂಲಕ ಕಾರ್ಖಾನೆಯಲ್ಲಿ ಎಲ್ಲರೂ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸುವುದು. ಆ ಸಮಸ್ಯೆಗಳ ಪರಿಹಾರವನ್ನು ಕಾರ್ಖಾನೆಯ ಕಾರ್ಯಪದ್ಧತಿಯಲ್ಲಿ ತರುವ ಬದಲಾವಣೆಗಳ ಮೂಲಕ ಕಾಣಿಸುವುದು ಎಲಿಯಾಹು ಬಳಸುವ ಸರಳ ದಾರಿ. ಆದರೆ, ಈ ಕಾದಂಬರಿಯ ಹಿಂದಿರುವ ತರ್ಕ ಮಾತ್ರ ಯಾವುದೇ ಬಿಸಿನೆಸ್ ಮ್ಯಾನೇಜ್ಮೆಂಟ್ ಮಂತ್ರಗಳಿಗೆ ಕಮ್ಮಿಯಿಲ್ಲ. ಕತೆಯ ಬಳಕೆಯೇ ಈ ಕೃತಿಯ ವಿಶಿಷ್ಟತೆಯಾದರೂ, ಇದು ಒಂದು ಸ್ಪಷ್ಟ ಮತ್ತು ವೈಜ್ಞಾನಿಕ ಮ್ಯಾನೆಜ್ಮೆಂಟ್ ತತ್ವವನ್ನು ಪ್ರಸ್ತುತಪಡಿಸುವ ಕೃತಿಯಾಗಿದೆ. ಹಾಗೆಂದೇ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಈ ಗ್ರಂಥ ಕಡ್ಡಾಯ ಪಠ್ಯವಾಗಿ ಬಳಕೆಯಾಗುತ್ತಿದೆ!
ಕಾದಂಬರಿಯ ತಿರುಳು ಇರುವುದು ರೋಗೋ ಮತ್ತವನ ಸಹೋದ್ಯೋಗಿಗಳು ಹೇಗೆ ಮುಚ್ಚುವ ಹಂತಕ್ಕೆ ಬಂದ ತಮ್ಮ ಕಾರ್ಖಾನೆಯನ್ನು ಲಾಭದಾಯಕ ಸಂಸ್ಥೆಯಾಗಿ ಮಾರ್ಪಡಿಸುತ್ತಾರೆ ಎಂಬಲ್ಲಿ. ಹಾಗೆಯೇ, ಈ ಕಾದಂಬರಿಯ ಬಿಸಿನೆಸ್ಸಿಗೆ ಸಂಬಂಧಿಸಿದ ಪ್ರಾಮುಖ್ಯತೆ ಇರುವುದು ಕಾರ್ಖಾನೆಯೊಂದರ ಕಾರ್ಯಪದ್ಧತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನು ಅದು ಚಿತ್ರಿಸುವ ಪರಿಯಲ್ಲಿ. ಮುಖ್ಯವಾಗಿ, ಈ ಪುಸ್ತಕವು ಕಾರ್ಖಾನೆಯೊಂದರಲ್ಲಿ ನಿರ್ಭಂಧನೆಗಳು – “ಬಾಟಲ್ ನೆಕ್ಸ್” – ವಹಿಸುವ ಪಾತ್ರದ ಕುರಿತಾಗಿದೆ. ಅಂತೆಯೇ, ಬಾಟಲ್ ನೆಕ್ಸ್-ಗಳನ್ನು ಗುರುತಿಸುವ ಮೂಲಕ ಕಾರ್ಖಾನೆಯ ಉತ್ಪಾದನಾ ಶಕ್ತಿಯನ್ನು ಸುಧಾರಿಸುವ ಮತ್ತು ಕಾರ್ಖಾನೆಯಲ್ಲಿ ಕಚ್ಛಾವಸ್ತುಗಳು, ಕಾರ್ಮಿಕರು, ಹೂಡಿಕೆ, ಗುಣಮಟ್ಟ, ತಯಾರು ಸರಕುಗಳ ಒಟ್ಟಾರೆ ಚಲನೆಯನ್ನು ನಿಯಂತ್ರಿಸುವ ಪಾಠಗಳನ್ನು ನಿದರ್ಶನಗಳ ಮೂಲಕ ಈ ಕೃತಿ ತೋರಿಸಿಕೊಡುತ್ತದೆ. ಆದ್ದರಿಂದಲೇ ಇದು ಕಾದಂಬರಿ ರೂಪದ ಪಠ್ಯಪುಸ್ತಕ.
ಈ ಕೃತಿಯಲ್ಲಿ ಬರುವ ಗುರು ಜೋನಾ, ರೋಗೋನಿಗೆ ಕಾರ್ಖಾನೆಯ – ಮೂಲಭೂತವಾಗಿ ಯಾವುದೇ ವ್ಯವಹಾರದ – ಮೂಲಭೂತ ಕಾರ್ಯಪದ್ಧತಿಯ ಕುರಿತು ಕಲಿಸುವ ವಿಧಾನ ಸಾಕ್ರೇಟಿಸನ ತರಹದ ಸಂಭಾಷಣೆಯನ್ನು ಆಧರಿಸಿದ ವಿಧಾನ. ತಾನು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ರೊಗೋ ಜೋನಾನನ್ನು ಭೇಟಿ ಮಾಡಿದಾಗಲೆಲ್ಲ, ಅವರಿಬ್ಬರ ನಡುವೆ ಪ್ರಶ್ನೋತ್ತರದ ಸರಣಿಯೇ ಸಾಗುತ್ತದೆ. ತನ್ಮೂಲಕ ಜೋನಾ, ರೋಗೋನಿಗೆ, ತನ್ನ ಸಮಸ್ಯೆಗಳಿಗೆ ತಾನೇ ಉತ್ತರಗಳನ್ನು ಕಂಡುಕೊಳ್ಳುವ ತಂತ್ರವನ್ನು ಕಲಿಸುತ್ತಾನೆ. ರೋಗೋ ಕೂಡ ತನ್ನ ಸಹೋದ್ಯೋಗಿಗಳೊಂದಿಗೆ ಸಂಭಾಷಣೆಯ ಮೂಲಕವೇ – ಪ್ರಶ್ನೋತ್ತರದ ಮೂಲಕ – ಸಮಸ್ಯೆಗಳ ಪರಿಹಾರಗಳನ್ನು ಕಂಡುಕೊಳ್ಳುತ್ತಾನೆ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಈ ಬಾಟಲ್ ನೆಕ್ಸ್ ಮೇಲೆ ಆಧಾರಿತ ಪದ್ಧತಿಯು ರೋಗೋನ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲೂ ಉಪಯುಕ್ತವಾಗುವುದು ಈ ಕೃತಿ ಬಿಸಿನೆಸ್ ಸಿದ್ಧಾಂತ ಮತ್ತು ಕಥನಗಳೆರಡನ್ನೂ ಸಶಕ್ತವಾಗಿ ನಿರ್ವಹಿಸಿರುವುದರ ದ್ಯೋತಕ.
ಎಲಿಯಾಹು “ದ ಗೋಲ್” ಕೃತಿಯ ಎರಡನೇ ಭಾಗವನ್ನೂ ಬರೆದಿದ್ದಾನೆ “ಕ್ರಿಟಿಕಲ್ ಚೇನ್” ಎಂಬ ಹೆಸರಿನಲ್ಲಿ. ಆದರೆ, ಅವನಿಗೆ ಗರಿಷ್ಠ ಪ್ರಸಿದ್ಧಿ ಮತ್ತು ಯಶಸ್ಸನ್ನು ತಂದ ಕೃತಿ “ದ ಗೋಲ್”. ಬರಹಸಂಕರಕ್ಕೆ ವಿಪರೀತ ಪ್ರಯೋಗಗಳು ಇರಲೇ ಬೇಕು ಎಂದಿಲ್ಲವೆನ್ನುವುದನ್ನು ತೋರಿಸುವ “ದ ಗೋಲ್” ಕೃತಿಸಂಕರದ ನನ್ನ ನೆಚ್ಚಿನ ಉದಾಹರಣೆ.
#tellkamalakar@gmail.com
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ