ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು ಅನಾದರಿಸದೇ ನವೋನ್ಮೇಷವೆಂದು ಕೊಂಡಾಡುವ ನಾಟಕೀಯತೆ, ಸೋಗುಗಳನ್ನು ತೋರದೇ ಸಹಜವಾಗಿ ಸಂವಾದಿಸುವ ಕವಿತೆಗಳನ್ನು ಕೊಡುವುದು ಇವರ ಕಾವ್ಯ ಕೃಷಿ.
ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅವರ “ನವೋನ್ಮೇಷ” ಕವನ ಸಂಕಲನ ಕುರಿತು ನಾಗರೇಖಾ ಗಾಂವಕರ ಬರೆದ ಲೇಖನ
ಸಾಹಿತ್ಯವೆಂದರೆ ಬದುಕಿನ ಅನುಭವಗಳ ಗಂಭೀರ ಗ್ರಹಿಕೆಯನ್ನು ಸೃಜನಶೀಲತೆಯ ನೆಲೆಯಲ್ಲಿ ರಸಾತ್ಮಕವಾಗಿ ಕಟ್ಟಿಕೊಡುವುದು. ಅದರಲ್ಲೂ ಕಾವ್ಯದ ಹಿನ್ನೆಲೆಯಲ್ಲಿ ನೋಡುವುದಾರೆ ಕವಿ ಹೇಳಬೇಕಾದದದ್ದನ್ನು ಹೃದ್ಯವಾಗುವಂತೆ, ಕಲಾತ್ಮಕವಾಗುವಂತೆ ತನ್ನದೇ ಕಾವ್ಯಬಂಧವನ್ನು ವಿಶಿಷ್ಟವಾದ ಭಾಷೆಯಲ್ಲಿ ದುಡಿಸಿಕೊಂಡಾಗಲೇ ಅದು ಅನುಭವದ ರಸಪಾಕವಾಗಿ ಮೂರ್ತಗೊಳ್ಳುತ್ತದೆ. ಇಂತಹ ಕವಿತೆಗಳನ್ನು ಸಹಜವಾಗಿ ಎಂಬಂತೆ ಬರೆದವರು ಬಿ. ಆರ್ ಲಕ್ಷ್ಮಣರಾವ್. ಕನ್ನಡದ ಮಟ್ಟಿಗೆ ಇತ್ತೀಚಿನ ಹಿರಿಯ ಕವಿಗಳ ಸಾಲಲ್ಲಿ ಬಿಆರ್‍ಎಲ್ ತಮ್ಮದೇ ಆದ ಕಾವ್ಯಬಂಧ, ಲಯ ಹಾಗೂ ರೊಮ್ಯಾಂಟಿಕ್ ಕಲ್ಪನೆಗಳ ಮೂಲಕ ಗುರುತಿಸಿಕೊಳ್ಳುತ್ತಾರೆ.
“ಗೋಪಿ ಮತ್ತು ಗಾಂಡಲೀನ” ಸಂಕಲನದ ನಂತರ ಒಟ್ಟಾರೆ ಎಂಟು ಸಂಕಲನಗಳನ್ನು ಹೊರತಂದಿರುವ ಇವರು ಭಾವಗೀತೆಯ ಕವಿಯಾಗಿಯೂ ಬಹುಪ್ರಸಿದ್ಧರಾದವರು. ಅವರ ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಹೆತ್ತ ತಾಯಿ ಮತ್ತು ಹೊತ್ತ ತಾಯಿಯ ಬಗೆಗಿನ ಅಪರೂಪದ ಕವಿತೆಯಾಗಿದ್ದು, ಎಲ್ಲ ತಾಯಂದಿರು ತಮ್ಮ ಮಕ್ಕಳ ಮೇಲೆ ತಮ್ಮ ತಾಯ್ತನದ ಅನುಭೂತಿಯನ್ನು ನೆನೆಪಿಸಿಕೊಳ್ಳುತ್ತಲೇ ತಮ್ಮ ಹೆತ್ತಮ್ಮನ ತ್ಯಾಗವನ್ನು ನೆನೆಸಿಕೊಂಡು ಒಂದರೆಗಳಿಗೆ ಉದ್ವಿಗ್ನರಾಗುತ್ತಾರೆ. ಇದೊಂದು ಪ್ರಕೃತಿಯನ್ನು ಮಾತೆಯ ಸ್ವರೂಪದಲ್ಲಿ ಕಾಣುತ್ತಾ ಹೆತ್ತ ತಾಯ ಮಡಿಲಲ್ಲಿ ಕಾಣುವ ಅನುಭೂತಿಯನ್ನು ಅನನ್ಯತೆಯನ್ನು ಮನಗಾಣಿಸುವ ಕವಿತೆ. ಈ ಕವಿತೆ ಕೇಳಿದ ಹಾಡಿದ ಓದಿದ ಎಲ್ಲ ಸಹೃದಯಿಗರ ಮನಸ್ಸಿನಲ್ಲಿ ನೆನಪಾಗಿ ಉಳಿದುಬಿಡುವಂತಹ ಕವನ.
ಪ್ರಸ್ತುತ ‘ನವೋನ್ಮೇಷ’ ಕವಿ ಬಿ ಆರ್ ಲಕ್ಷ್ಮಣರಾವ್ ರ ಒಂಬತ್ತನೆಯ ಕವನ ಸಂಕಲನ. ಬದುಕು ನಿತ್ಯ ಹೊಸತನವನ್ನು ಕಂಡುಕೊಂಡುವ ಕ್ರಿಯೆಯಲ್ಲಿ ಹೊಸ ಭಾವಗಳು ಸಹಜವಾಗಿವೆ. ತನ್ನ ನಿತ್ಯ ಹುಡುಕಾಟದಲ್ಲಿ ಕವಿಯ ಅನುಭವಗಳ ವಿಕಾಸಕ್ಕೆ ಸಾಕ್ಷಿಯಾಗುವಂತೆ ಇಲ್ಲಿಯ ಕವಿತೆಗಳು ಸಮಗ್ರವಾಗಿ ಬದುಕಿನ ಹಲವು ಆಯಾಮಗಳನ್ನು ವಿವೇಚಿಸುತ್ತವೆ. ಹರೆಯದ ಭಾವನೆಗಳಿಗೆ ಮದ್ದೆನಿಸುವ ಕವಿತೆಗಳು ಇವೆ, ಸಮಾಜದ ಕ್ರೂರತೆಯ ಮನಗಾಣಿಸುವ ಕವನಗಳಿವೆ. ಬದುಕಿನ ತುಂಬಾ ತುಂಬಿಕೊಂಡಿರುವ ನೋವು ನಿರಾಶೆಗಳನ್ನು ಹಾಸ್ಯದ ದನಿಯಲ್ಲಿಯೇ ಹೇಳಿಯೂ ನೋವಿನ ಎಳೆಯನ್ನು ಮೂಡಿಸಬಲ್ಲ ತೀವ್ರ ಸಂವೇದನೆಯ ಸಾಲುಗಳಿವೆ.
ನವೋನ್ಮೇಷ ಸಂಕಲನ ಓದುತ್ತಾ, ಅಲ್ಲಿಯ ಕವಿತೆಗಳು ಸರಳವಾದ ರಚನೆಯಲ್ಲಿ ಅತೀ ಜಟಿಲವಾದ ಸಂಗತಿಗಳನ್ನು, ಬದುಕಿನ ಹತ್ತಾರು ಮುಖಗಳನ್ನು, ತಟ್ಟುವ ಮಹತ್ವಪೂರ್ಣವಾದ ವಿಚಾರಗಳನ್ನು ಹಿತವಾಗುವಂತೆ, ಓದುತ್ತಾ ಒಳಗಿಳಿಯುವಂತೆ ಪ್ರಭಾವ ಬೀರುವುದಂತೂ ಖಂಡಿತ. ಅನುಭವದ ಸಾರಸಂಗ್ರಹದಂತೆ ಒಂದೊಂದು ಕವಿತೆಯೂ ಓದುಗನ ಸೆರೆಹಿಡಿಯುವಂತೆ ಹಿತವೆನಿಸುತ್ತವೆ. ಪ್ರೇಮ ಕವಿತೆಗಳಲ್ಲಿ ಕಾಣುವ ಚಂಚಲ ಭಾವಗಳು ಕೂಡಾ ಒಂದಕ್ಕಿಂತ ಇನ್ನೊಂದು ಭಿನ್ನ. ಮತ್ತನ್ನು ತರುವಂತಿವೆ. ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು ಅನಾದರಿಸದೇ ನವೋನ್ಮೇಷವೆಂದು ಕೊಂಡಾಡುವ ನಾಟಕೀಯತೆ, ಸೋಗುಗಳನ್ನು ತೋರದೇ ಸಹಜವಾಗಿ ಸಂವಾದಿಸುವ ಕವಿತೆಗಳನ್ನು ಕೊಡುವುದು ಇವರ ಕಾವ್ಯ ಕೃಷಿ.
ನವೋನ್ಮೇಷ ಕವಿತೆಯಲ್ಲಿ ಕವಿ ತನಗೆ ಹೊಸ ಹರೆಯ ತಂದ ಗಿಣಿಯನ್ನು ಮಾತಾಡಿಸುವ ಪರಿಯೇ ಸೊಗಸು. ವಯಸ್ಸಾದ ಕವಿಗೆ ಎಳೆಯ ಗಿಣಿಯೊಂದು ಪ್ರೇಮ ನಿವೇದಿಸಿದೆ. ಕವಿಗೂ ಗಿಳಿಯ ಸಂಗ ತಂದ ಹೊಸ ಹರೆಯವನ್ನ ಒಮ್ಮೆ ಮುಟ್ಟಿ ಮಾತಾಡಿಸುವ ಬಯಕೆ. ಅದಕ್ಕೆ
“ಕೊಟ್ಟುಬಿಡಲೇ ಪ್ರೀತಿಯನ್ನು
ಮುಟ್ಟಿಬಿಡಲೇ ಗಿಳಿಯ
ನಂಬು ನನ್ನ, ಮುಂದುವರಿ
ಅನ್ನುತ್ತಿದೆ ಹೃದಯ”
ಬದುಕಿಗೆ ಬೇಕಾದ ಮರುಪೂರಣದ ಅಗತ್ಯವನ್ನು ಮನಗಾಣಿಸುತ್ತದೆ. ಪ್ರೇಮ ಜೀವನದ ಅಮೂಲ್ಯ ಸಂಗತಿ. ಜಗತ್ತನ್ನು ನಡೆಸುತ್ತಿರುವುದು ಅದೇ ಎನ್ನುವ ಭಾವ. ಕವಿ ಇಲ್ಲಿ ಯಾವ ಮುಖವಾಡ ತೊಡುವುದಿಲ್ಲ. ಹೃದಯದ ಮಾತು ಕೇಳುತ್ತಾರೆ.
ಇದೇ ಕವಿ ಪ್ರೀತಿಯ ಇನ್ನೊಂದು ಮುಖವನ್ನು ಮಾತಾಡಿಸುತ್ತಾರೆ. “ನಿಜ” ಎಂಬ ಕವಿತೆಯಲ್ಲಿ,
“ನಿಜಾ ಹೇಳಿ ಪ್ರೇಯಸಿಗೆ
ಪ್ರೇಮಾನೇ ಡಿಲೀಟು
ಆದ್ದರಿಂದಲೇ ಪ್ರೇಮದ ಮಾತು
ಯಾವಾಗಲೂ ಗಿಲೀಟು.” ಶೇಕ್ಸಪಿಯರ್‍ನ ಸಾನೆಟ್ ನೆನೆಪಾಗುತ್ತದೆ.
“When my love swears that she is made of truth
I do believe her, though I know she lies,
Therefore I lie with her, and she with me
And in our faults by lies we flattered be” ಪ್ರೇಯಸಿಯೊಂದಿಗಿನ ಪ್ರೇಮ ವಿಚಿತ್ರವಾದದ್ದು. ಆದರೂ ಹಿತಕರವಾದದ್ದು.
“ಪುಣ್ಯಕೋಟಿ” ಎಂಬ ಕವಿತೆ ಕಟ್ಟಿಕೊಟ್ಟ ಚಿತ್ರಣ ಸಾಮಾಜಿಕತೆ ಸೃಷ್ಟಿಸಿದ ಶೋಷಣೆಯ ದನಿಯಾಗಿ ಹೃದಯ ತಟ್ಟುತ್ತದೆ. ಪುರುಷಾಧಿಕಾರದ ಹೆಗ್ಗಳಿಕೆಯಲ್ಲಿ ಹೆಣ್ಣು ಕೂಡಾ ಪ್ರಾಣಿಯಂತೆ ಪರಿಗಣಿಸ್ಪಡುವ ವಿಪರ್ಯಾಸ, ಸ್ತ್ರೀ ಮತ್ತು ಆಕಳು ಇವೆರಡೂ ಎಷ್ಟೊಂದು ಸಾಮ್ಯತೆಗಳನ್ನು ಹೊಂದಿವೆ.
“ಎಷ್ಟೊಂದು ಸಾಮ್ಯ ಹಳ್ಳಿಮನೆಯ
ಆ ಆಕಳು ಕೆಂಚಿಗೆ,
ಈ ಇವಳಿಗೆ” ಎಂದು ಶುರುವಾಗುವ ಕವಿತೆ ಹೆಣ್ಣು ಮತ್ತು ಆಕಳು ಇವರಲ್ಲಿಯ ಸಾಮ್ಯ ಗುಣಗಳನ್ನು ತೂಗುತ್ತಾ, ಇಬ್ಬರೂ ಪ್ರೀತಿ ಮತ್ತು ತ್ಯಾಗಕ್ಕೆ ಅರ್ಪಿತವಾದರೂ ಹೇಗೆ ತಿರಸ್ಕಾರಕ್ಕೆ, ಅವಗಣನೆಗೆ ತುತ್ತಾಗುತ್ತಾರೆ ಎಂಬ ಸಾಮಾಜಿಕ ವಿರೂಪದ ಕುರಿತು ಮಾತನಾಡುತ್ತದೆ. ಕೊನೆಯಲ್ಲಿ ಬರುವ ಸಾಲುಗಳು,
“ಇನ್ನು, ತಿಳಿದೆ ಇದೆ ಅಂತ್ಯ
ಮುದಿಗೊಡ್ಡು ಕೆಂಚಿಗೆ
ಕಸಾಯಿಖಾನೆ
ಮುದಿಯರ ಮನೆಗೆ
ಇವಳ ರವಾನೆ” ನೋವಿನ, ವಿಷಾದದ ಎಳೆಯನ್ನು ಎದೆಯೊಳಗೆ ಹೆಪ್ಪುಗಟ್ಟುವಂತೆ ಮಾಡುತ್ತದೆ.
“ಸಿಕ್ಕರೆ”ಕವಿತೆಯಂತೂ ಎಲ್ಲ ಹೆಣ್ಣುಗಳು ಇಷ್ಟಪಡುವಂತದ್ದೇ. ಇಂದಿನ ಕಲಿತ ಹೆಣ್ಣುಗಳು ಬಯಸುವಂತಹ ಗಂಡ ಹೇಗಿರಬಹುದೆಂಬ ಸತ್ಯದ ನುಡಿಗಳು ಇಲ್ಲಿ ಹಾಸ್ಯದ ದಾಟಿಯಲ್ಲಿ ಕಾಣುತ್ತವೆಯಾದರೂ ಇಂದಿನ ಸತ್ಯಕ್ಕೆ ಸಮೀಪವಾಗಿವೆ.
“ಗಂಡು ತಾನೆಂಬ ಹಮ್ಮಿರದವನು
ಹೆಣ್ಣು ಬೀಳೆಂಬ ಬಿಮ್ಮಿರದವನು
ಒರಗಲು ನನಗೆ ಹೆಗಲಾದವನು
ಅಪ್ಪನಿಗಿಂತಲು ಮಿಗಿಲಾದವನು”
ಬದುಕನ್ನ ಬಂದ ಹಾಗೇ ಅನುಭವಿಸುವ ಪರಿ ಜಗತ್ತನ್ನು ಸಹ್ಯವಾಗಿಸುತ್ತದೆ ಎಂಬ ಸಂಪೂರ್ಣ ಅನುಭವದ ಅರಿವು ಕವಿಗಿದೆ. ಹಾಗಾಗೇ ಕವಿ ಎಲ್ಲಿಯೂ ತನ್ನ ಸೀಮಿತವಾಗಿಸಿಕೊಳ್ಳದೇ ತನ್ನ ಅನುಭವದ ನೆಲೆಯಲ್ಲಿ ದಕ್ಕಿದ ಅರಿವನ್ನು ಕವಿತೆಯಲ್ಲಿ ಹೆಣೆಯುತ್ತಾರೆ ಹೊರತು ಕವಿತೆ ಕಟ್ಟುವುದಿಲ್ಲ. ಇದೇ ಈ ಕವಿಯ ಕಾವ್ಯದೃಷ್ಟಿ.
ಬಹು ಆಯಾಮದಲ್ಲಿ ದಕ್ಕಬಹುದಾದ “ಹುಳ” ಎಂಬ ಕವಿತೆ. ಮನಸ್ಸಿನ ಭಾವವನ್ನು ಅದರ ಬಹುಭಂಗಿಯನ್ನು ಹುಳ ಎಂಬ ರೂಪಕದಲ್ಲಿ ಬಹಳಷ್ಟು ದುಡಿಸಿಕೊಂಡಿದ್ದಾರೆ.
“ಹುಳ, ಅದರ ಉಪಟಳ ಬಹಳ, ಕುಳ ಭಾರಿಯಾದಷ್ಟು
ಹುಳದ ಪಾತ್ರ ಜಾಸ್ತಿ, ನೆಮ್ಮದಿ ನಾಸ್ತಿ” ಎನ್ನುತ್ತಾ ಎಲ್ಲಿಯೂ ಒಂದಕ್ಷರವೂ ಹೆಚ್ಚಾಗದಂತೆ ಸಮತೂಕದ ಪದ ವಿನ್ಯಾಸ ಹೆಣೆಯುವುದರಲ್ಲಿ ಕವಿಗೆ ಅಪರಿಮಿತ ಆಸಕ್ತಿ.
ಗಂಡಹೆಂಡಿರಿಗೆ/ಸ್ವಪ್ರತಿಷ್ಠೆಯ ಸ್ವಾರ್ಥದ ಹುಳ/ ದಾಂಪತ್ಯ ದ್ವಿದಳ ಇಷ್ಟೇ ಪದದಲ್ಲಿ ಸಂಸಾರದ ರಥ ಏರುಪೇರಾಗಲು ಕಾರಣವಾಗುವ ಸ್ವಪ್ರತಿಷ್ಟೆ ಎಂಬ ಹುಳ ಹೇಗೆ ಬಾಳನ್ನೆ ಕೊರೆದು ಹಾಕುತ್ತದೆ ಎಂಬುದು ವ್ಯಕ್ತ. ಇಂತಹ ಹಲವು ವಿಚಾರಗಳನ್ನು ಹುಳ ಎಂಬ ಒಂದೆ ರೂಪಕದಲ್ಲಿ ಹಿಡಿದಿಡುತ್ತಾರೆ.
“ಸಣ್ಣ ಸಂಗತಿ” ಕವಿತೆಯಲ್ಲಿ ಕೆಲಸಕ್ಕೆ ಬರುವ ತಮಿಳು ಹುಡುಗಿಯ ಕಥೆ ಕಥನ ಕಾವ್ಯದಂತಿದೆ. ಇಡೀ ಕವಿತೆ ವೃದ್ಧ ದಂಪತಿಗಳು ಮನೆ ಕೆಲಸಕ್ಕಾಗಿ ಅವಲಂಬಿಸಿದ ತಮಿಳು ಹುಡುಗಿ ಆಕೆಯ ಬಡಬದುಕು, ಆಕೆಯ ಹಣದ ಸಮಸ್ಯೆ, ಇತ್ಯಾದಿಗಳ ಹೇಳಿಯೂ ಕೊನೆಯಲ್ಲಿ ಈ ವೃದ್ಧ ದಂಪತಿಗಳು ಆಕೆಯ ಬಗ್ಗೆ ಹೊಂದಿದ ನಿಲುವಿಗೆ ಭಿನ್ನವಾಗಿ ಆಕೆಯ ಪ್ರಾಮಾಣಿಕತೆ ಮೆರೆದಾಗ ಸಂತಸ ಪಡುತ್ತಾರೆ. ಬಡತನ ಮತ್ತು ಸದ್ಗುಣಗಳ ನಡುವೆ ಓದುಗನ ಗಮನ ಸೆಳೆಯುತ್ತದೆ ಕವಿತೆ.
ಒಟ್ಟಾರೆಯಾಗಿ ಇಲ್ಲಿಯ ಕವಿತೆಗಳು ಬದುಕು, ವಿಷಾದ, ನೋವು, ಪ್ರೀತಿ ಪ್ರಣಯ ಹೀಗೆ ಹತ್ತಾರು ವಿಚಾರಗಳನ್ನು ಕುರಿತು ಮಾತನಾಡುತ್ತವೆ. ಕವಿ ಮನುಷ್ಯತ್ವವನ್ನು ಬದುಕನ್ನು ಬಹುವಾಗಿ ಪ್ರೀತಿಸುತ್ತಿರುವಂತೆ, ಯಾವ ಮುಖವಾಡವಿಲ್ಲದೇ ಸರಳವಾಗಿ ಸಂವಾದಿಸುವುದು ಅವರ ಕವಿತೆಗಳಲ್ಲಿಯ ವೈಶಿಷ್ಟ್ಯ.
ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)