ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿ ಎಂಬಲ್ಲಿ ಹುಟ್ಟಿದ ಬಿ.ಎಚ್. ಶ್ರೀಧರ (1918) ಅವರ ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಅವರದು ಮೂಲತಃ ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶ. ಶ್ರೀಧರ ಅವರು ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್ಗೆ ಸೇರಿದ್ದು ಮೈಸೂರು. ಕಥೆ, ಕವನ, ಪ್ರಬಂಧಗಳನ್ನು ಬರೆದಿದ್ದಾರೆ. ಪ್ರಬಂಧಗಳೆಂದರೆ ಅವರಿಗೆ ಹೆಚ್ಚು ಇಷ್ಟವಾದಂತಿತ್ತು. ಯಕ್ಷಗಾನ, ವಿಡಂಬನೆ, ಆತ್ಮಕತೆ, ವಿಮರ್ಶೆ, ವೈಚಾರಿಕ ಬರಹಗಳನ್ನು ಬರೆದಿದ್ದಾರೆ. ಕಾವ್ಯ ಕ್ಷೇತ್ರದಲ್ಲಿಯೂ ಕೃಷಿ ಮಾಡಿದ ಅವರು, ಮೇಘನಾದ, ಕಿನ್ನರಗೀತ, ಅಮೃತಬಿಂದು, ಮಂಜುಗೀತ, ರಸಯಜ್ಞ, ಮುತ್ತು ರತ್ನ, ನೌಕಾಗೀತ, ಕದಂಬ ವೈಭವ, ಕಂಟಕಾರಿ ಮಹಾಕಾವ್ಯ ಮುಂತಾದ ಸಂಕಲನಗಳನ್ನು ಬರೆದಿದ್ದಾರೆ. ಅವರು ಬರೆದ ‘ಎಸ್. ಟಿ. ಬಸ್ ‘ ಎಂಬ ಕವನ ಇಂದಿನ ಕಾವ್ಯ ಕುಸುಮ.
ಎಸ್. ಟಿ. ಬಸ್
ಎಸ್. ಟಿ. ಬಸ್, ಎಸ್. ಟಿ. ಬಸ್,
ಗಲಗಲ ಸದ್ದಿನ ಸರ್ಕಸ್!
ಬ್ರಹ್ಮಾಂಡವ ಪ್ರತಿನಿಧಿಸುವ
ಪಿಂಡಾಡದ ಚಲನದ ರಷ್!
ನೂರ್ ಮೀರಿದ ವೃದ್ಧಾಪ್ಯದ ಗೂಡೊಳಗಿನ ಮೂಳೆಗಳೋ
ಕಡಲಾಳದ ಜಲಚರಗಳ ಹಿಡಿದೆಳೆದಿಹ ಜಾಲಗಳೋ
ತುಂಬಿರಬೇಕಿದರಲ್ಲೆನೆ ಕಿವಿಯಾಳವ ಸೀಳುತ್ತಿದೆ,
ಅಂತರಯಂತ್ರ ಧ್ವನಿ ಮಿದುಳಲೆಗಳನೊಡೆದಾಳುತ್ತಿದೆ!
ಜೀವಿಗಿಂತ ಜೋರೊದರುವ
ಜಡವಾಹನ ರಾವಣಾ;
ಜೀವಿಗಳನು ಗಡಗುಡಿಸುವ
ಜಂಪಿಂಗ್ ಹೃದ್ವಾರಣಾ!
ರಶಿಯ ಅಮೇರಿಕಗಳಲ್ಲಿ ಕಾಳೆಗ ಸುರುವಾಯಿತೋ,
ಜ್ಚಾಲಾಮುಖಿಧೆಬಧಬೆಗಳು ಕಲಹಿಕ್ಕಿದಿರಾದವೋ!
ನರಕದ ಆಸ್ಪತ್ರೆಯಲ್ಲಿ ಹೊಸ ಮಕ್ಕಳು ಹುಟ್ಟಿದವೋ
ವಿಶ್ವರಾಷ್ಟ್ರ ಸಂಮೇಳನ ಕಂಬಳಗಳ ನಡೆಸಿತೋ!
-ಏನಿದೇನಿದೆಂಬ ಹಾಗೆ
ಮೈತುಂಬಾ ನಾದವಾಗೆ-
ನರನಾಡಿಗಳಲ್ಲಿ ಹೊಕ್ಕು ಮಾಡುವವರ ದಾಳಿಯ
ದುರ್ನಿವಾರ್ಯ ಪಾಳಿಯ!
ಗಲಿಬಿಲಿ, ಗದ್ದಲ, ಗೊಂದಲ ಗಲಿಗಲಿಸಲು ಕಾಯುವ
ಮುರಿದೊಗೆವುದೊ ವಿನಲಲುಗಿಸಿ ಬಿಡುವುದು ತಳಪಾಯವ!
ನಿನ್ನಾರ್ಭಟ ನವ್ಯ ಧ್ವನಿ; ಮಹಾಯಂತ್ರ ಭೈರವ-
ನೀನೆ ಕಾಯಬೇಕು ಕಡ್ಡಿ ಪೈಲ್ವಾನ್ ಶರೀರವ!
ಹಳ್ಳಿಗಳಿಗೆ ನಾಗರಿಕತೆ ಹೊತ್ತುತಂದ ವೀರ,
ಧೂಲೀಧರ, ದುರ್ವಾದವ ಮುಳುಗಿಸುವ ಸಮೀರ
ನಿನ್ನೊಂದಿಗ| ಎಸ್.ಟಿ. ರಾಜ ನಿನಗೆ ನಮಸ್ಕಾರ-
ಕನ್ನಡ ಸೀಮೆಯನಳೆಯುವ ಹೊಸ ಕಲ್ಕ್ಯವತಾರ!
ರೋಡೆಂಜಿನ್ ಬೆಳೆದು ಬೆಳೆದು ನೀನಾಯಿತೋ ಹೇಗೆ?
ರಾಡಿಯಲ್ಲಿ ಓಡಾಡುವ ನಿನಗೆಲ್ಲಿದೆ ಬೇಗೆ?
ಕೋಡಿಲ್ಲದ ಶರಭ! ನಾಯಿ ಬೆಕ್ಕು ಕೋಳಿ ಎಲ್ಲಾ
ರೋಡಿನಲ್ಲೆ ಭೂಗತ ನಿನಗಿದಿರಾದರೆ ಮಲ್ಲ!
ಎಸ್. ಟಿ. ಬಸ್, ಎಸ್. ಟಿ. ಬಸ್,
ಪ್ರಜಾರಾಜ್ಯಕ್ಕೇ ಯಶಸ್
ತಂದು ಕೊಟ್ಟ ಮಹಾಕಾಯ, ಕಾಲದರ್ಪ ಭಂಜನಾ!
ಹಳ್ಳಿಯೂರ ಬಾಲಬಂಧು ಜಾಲ ಮನೋರಂಜನಾ!
ನಿನ್ನ ಧೂಳು ಕಣ್ಣಿದ್ದವರೆಲ್ಲರಿಗೂ ಅಂಜನ!
ನಿನ್ನದಾದ ಪ್ರಗತಿವಾದ ವಿಹಾರಿ ಹೃದ್ ವ್ಯಂಜನ!
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ