Advertisement
ಬೀಳ್ಕೊಡುಗೆ…: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಬೀಳ್ಕೊಡುಗೆ…: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಬೆಂಗಳೂರಿನ ಧ್ಯಾನ ಹೆಚ್ಚುತ್ತಿದ್ದಂತೆ, ಹೊರಡುವ ದಿನ ಸಮೀಪಿಸುತ್ತಿದ್ದಂತೆ ಗೆಳೆಯರ ಜೊತೆ ನೆಂಟರಿಷ್ಟರ ಜೊತೆ ಕಲ್ಪನಾ ಸಂಭಾಷಣೆಗೆ ಪ್ರಾರಂಭವಾಯಿತು. ಒಂದು ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಪರಿಚಿತ ಕಟ್ಟಡ ಸಂಕೀರ್ಣವೊಂದರ ಮುಂದೆ ನಿಂತಿದ್ದೆ. ಒಬ್ಬರು ಕೈ ಗಾಡಿಯಲ್ಲಿ ತಂದು ಟೀ, ಕೇಕ್, ಚಿಪ್ಸ್, ಸಿಗರೇಟ್ ಮಾರುತ್ತಿದ್ದರು. ಥೇಟ್ ನಮ್ಮ ಪೆಟ್ಟಿ ಅಂಗಡಿಯ ರೀತಿ, ದರ್ಶಿನಿ ಕೆಫೆಗಳ ರೀತಿ. ಇಂತಹದೊಂದು ದೃಶ್ಯವನ್ನೇ ನಾನು ಇಷ್ಟು ದಿನ ನೋಡಿರಲಿಲ್ಲ. ಇದು ಟಿಪಿಕಲ್ ಬೆಂಗಳೂರು ದೃಶ್ಯ. ಈ ದೃಶ್ಯವನ್ನು ನೋಡುತ್ತಾ ಸಂತೋಷ ಪಡುತ್ತಲೇ ನಾನು ನೆದರ್‌ಲ್ಯಾಂಡ್ಸ್‌ನಿಂದ ಬೀಳ್ಕೊಡುಗೆ ಪಡೆದು ಹೊರಡಬೇಕೆನ್ನಿಸಿತು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹದಿಮೂರನೆಯ ಬರಹ

ವೀಸಾ ಸೂಚಿಸುವ ಕಾಲಮಿತಿ ಮುಗಿಯುತ್ತಿದ್ದಂತೆ ಹೊರಡಬೇಕು ಎಂದು ಗೊತ್ತಿರುತ್ತದೆ, ಹೊರಡುವ ದಿನವೂ ಗೊತ್ತಿರುತ್ತದೆ, ಮತ್ತೆ ವಾಪಸ್ ಬರಬಹುದು ಎಂಬುದೂ ಕೂಡ ಗೊತ್ತಿರುತ್ತದೆ. ಆದರೂ ಪ್ರತಿಸಲ ಹೊರಡುವಾಗಲೂ ಆತಂಕ, ತಳಮಳ. ಭಾರತದಿಂದ ಹೊರಡುವಾಗಲೂ ಹೀಗೇ ಆಗುತ್ತದೆ.

ಮತ್ತೆ ನಮ್ಮ ಮನೆಗೇ ವಾಪಸ್ ಆಗುತ್ತಿರುವುದಕ್ಕೆ ಸಂತೋಷವೂ ಆಗುತ್ತದೆ. ಆದರೆ ಮಕ್ಕಳು, ಮೊಮ್ಮಕ್ಕಳ ವ್ಯಾಮೋಹದಿಂದ ಬಿಡಿಸಿಕೊಂಡು ಹೊರಡುವುದು ತುಂಬಾ ಕಷ್ಟ. ಭಾವುಕವಾಗಬಾರದು, ಭಾವೋದ್ವೇಗಕ್ಕೆ ಒಳಗಾಗಬಾರದು ಎಂದು ನಮಗೆ ನಾವೇ ಹೇಳಿಕೊಳ್ಳುತ್ತೇವೆ. ಪರಸ್ಪರ ಬುದ್ಧಿಮಾತು ಕೂಡ ನಡೆದಿರುತ್ತದೆ. ಆದರೂ ಆ ಕ್ಷಣ ಬಂದಾಗ ಗಂಟಲ ಸೆರೆ ಕಟ್ಟುತ್ತದೆ, ಎದೆಯೆಲ್ಲ ಕಲಸಿದಂತಾಗುತ್ತದೆ. ನಾನು ಭಾವುಕನಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನ ಕೂಡ ನಮ್ಮನ್ನು ಹಿಂಸಿಸುತ್ತದೆ.

ನನ್ನ ಮನಸ್ಸಿನಲ್ಲಿ ಸುಮಾರು 50-55 ವರ್ಷಗಳ ಕಾಲ ಅಚ್ಚೊತ್ತಿರುವುದು ನಮ್ಮಜ್ಜಿ ನಮ್ಮೆಲರನ್ನೂ ಬೀಳ್ಕೊಡುತ್ತಿದ್ದ ರೀತಿ. ಸುಮಾರು 50-60 ವರ್ಷಗಳ ಕಾಲ ವಿಧವೆಯಾಗಿದ್ದವರು ಅವರು. ಗಂಡ ಮಾಡಿದ್ದ ಸಾಲ ತೀರಿಸಲು, ಇಬ್ಬರು ಮಕ್ಕಳನ್ನು ಬೆಳೆಸಲು, ಬಂಧುಗಳ ಎದುರಿಗೆ ಸ್ವಾಭಿಮಾನ ಕಳೆದುಕೊಳ್ಳದಿರಲು ತುಂಬಾ ಹೆಣಗಾಡಿದವರು, ಗೆದ್ದವರು. ಕೊಪ್ಪ ಗ್ರಾಮದಲ್ಲಿ ಯಾವಾಗಲೂ ಒಂಟಿಯಾಗಿರುತ್ತಿದ್ದರು. ಕೈ ಕಾಲು ಗಟ್ಟಿಯಿರುವಾಗ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಬಾರದೆಂಬ ವ್ರತ. ವ್ರತವನ್ನು ನಿರಂತರವಾಗಿ ಪಾಲಿಸಿಕೊಂಡು ಬಂದವರು. ಗೌರಿ-ಗಣೇಶನ ಹಬ್ಬಕ್ಕೆ ನಾವು ನಾಲ್ಕು ಜನ ಮಕ್ಕಳು, ನಮ್ಮ ತಂದೆ-ತಾಯಿ, ನಮ್ಮ ತಂದೆಯ ಅಣ್ಣನ ಇದೇ ಸ್ವರೂಪದ ಕುಟುಂಬ ಒಟ್ಟಾಗಿ ಸೇರಬೇಕು, ಸರೀಕರೆದುರಿಗೆ ಹಬ್ಬ ಆಚರಿಸಬೇಕು ಎಂಬ ಆಸೆ. ಕೆಲ ವರ್ಷ ಹಾಗೇ ನಡೆಯಿತು. ಹಬ್ಬ, ಸಂಭ್ರಮ ಎಲ್ಲ ಮುಗಿದ ಮೇಲೆ, ಎಲ್ಲರೂ ಒಂದೇ ದಿನ ಹೊರಟು ನಿಲ್ಲುತ್ತಿದ್ದೆವು. ಮನೆಯ ಮುಂದೇ ಬಸ್ ನಿಲ್ದಾಣ. ನಮ್ಮೆಲ್ಲರನ್ನೂ ಬಸ್ ಹತ್ತಿಸಿ ಅಜ್ಜಿ ಒಬ್ಬರೇ ಮನೆಗೆ ಕಾಲೆಳೆದುಕೊಂಡು ಹೊರಡುತ್ತಿದ್ದರು. ಒಂದೆರಡು ಸಲ ಕತ್ತು ಹಿಂತಿರುಗಿಸಿ ಬಸ್‌ನಲ್ಲಿ ಕುಳಿತ ನಮ್ಮೆಲ್ಲರನ್ನೂ ನೋಡುತ್ತಿದ್ದರು. ಮತ್ತೆ ಮುಂದುವರೆಯುತ್ತಿದ್ದರು. ಯಾವ ಮಾತು, ಭಾವನೆಗಳನ್ನೂ ಹೇಳಿಕೊಳ್ಳುತ್ತಿರಲಿಲ್ಲ. ಅವರ ಭಾವನೆಗಳು, ಮನಸ್ಸಿನ ತಾಕಲಾಟ ಏನಿರಬಹುದು ಎಂದು ನಾನು ತುಂಬಾ ದಿನ ಯೋಚಿಸುತ್ತಿದ್ದೆ.

ವಯಸ್ಸಿಗೆ ಬಂದಾಗ, ಉನ್ನತ ವಿದ್ಯಾಭ್ಯಾಸಕ್ಕೆ ಮನೆ ಬಿಟ್ಟು ಹೊರಡುವ ಸಂಭ್ರಮದಲ್ಲಿ ನಮ್ಮ ತಂದೆ-ತಾಯಿಗಳ ಭಾವನೆಗಳು ಹೇಗಿರುತ್ತವೆ, ಏನಿರುತ್ತವೆ ಎಂದು ನಾವು ಯೋಚಿಸಿರುವುದಿಲ್ಲ. ಆದರೆ ನಮ್ಮ ಮಕ್ಕಳೇ ಹೀಗೆ ಗೂಡಿನಿಂದ ಹಾರಿ ಹೋಗುವಾಗ, ನಮ್ಮ ಮನಸ್ಸು ಇನ್ನಿಲ್ಲದ ತಳಮಳವನ್ನು ಅನುಭವಿಸುತ್ತದೆ. ನಮ್ಮ ಮಕ್ಕಳಿಗೂ ಕೂಡ ನಮ್ಮ ಬಗ್ಗೆ ಯೋಚಿಸುವಷ್ಟು ವ್ಯವಧಾನವಿಲ್ಲದೇ ಇರಬಹುದು. ಈ ಚಕ್ರ ಎಲ್ಲ ಮನೆಗಳಲ್ಲೂ, ಎಲ್ಲ ತಲೆಮಾರುಗಳಲ್ಲೂ ಮುಂದುವರೆಯುತ್ತಿರುತ್ತದೆ.

*****

ವಿದೇಶ ಪ್ರವಾಸ-ಪ್ರಯಾಣವಾದರೂ ಇಷ್ಟೇ. ನ್ಯೂಜೆರ್ಸಿಯಿಂದ ನಾವು ರಾತ್ರಿ ಹೊರಡಬೇಕಿತ್ತು. ಮೂರು ನಾಲ್ಕು ಘಂಟೆ ಮುಂಚೆ ಮಗ ಕಾರಿನಲ್ಲಿ ವರ್ಜೀನಿಯಾಕ್ಕೆ ಹೊರಟ. ನಾವು ಭಾವುಕರಾದೆವು. ನಂತರ ಮೂರು ನಾಲ್ಕು ಘಂಟೆಗಳಲ್ಲಿ ನಾವು ಹೊರಟೆವು. ಆವಾಗ ಮಗಳು-ಅಳಿಯ ನಾವು ಎಲ್ಲರೂ ಭಾವೋದ್ವೇಗಕ್ಕೆ ಒಳಗಾದೆವು. ಒಂದು ನಾಲ್ಕು ದಿನ ಆದಮೇಲೆ, ಇದೆಲ್ಲ ಮರೆತು ಹೋಗುತ್ತದೆ. ಪ್ರತಿಯೊಬ್ಬರೂ ಅವರವರ ವೈಯಕ್ತಿಕ ಬದುಕಿನಲ್ಲಿ ಮುಳುಗಿಹೋಗುತ್ತೇವೆ ಎಂಬುದು ಕೊನೆಯ ಸತ್ಯವಾದರೂ, ಬೀಳ್ಕೊಡುಗೆ ಎಂಬುದು, ಬೀಳ್ಕೊಡುಗೆಯ ಆ ಕ್ಷಣದ ಸತ್ಯವನ್ನು ಎದುರಿಸಲೇಬೇಕಲ್ಲ.

ಮೂರು ಸಲದ ನೆದರ್‌ಲ್ಯಾಂಡ್ಸ್ ಪ್ರವಾಸದಲ್ಲಿ ಎರಡು ಬೀಳ್ಕೊಡುಗೆಗಳು ನೆನಪಿನಲ್ಲಿವೆ. ಕೋವಿಡ್ ಪರ್ವದ ನಂತರ 2021ರ ಜನವರಿ ಕೊನೆಯಲ್ಲಿ ಹೊರಟಾಗ ನಮ್ಮ ಭಾವನೆಗಳೆಲ್ಲ ಹಿಂದೆ ಸರಿದವು. ಸುಂಟರಗಾಳಿಯ ಮುನ್ಸೂಚನೆ ಸಿಕ್ಕಿತು. ಪ್ರಯಾಣ ಕೆಲವು ಘಂಟೆಗಳ ಕಾಲ ಮುಂದಕ್ಕೆ ಹೋಯಿತು. ಸುಂಟಗಾಳಿಯೆಂದರೇನೆಂದು ಅದುವರೆಗೆ ಓದಿದ್ದೆ. ಸಿನಿಮಾದಲ್ಲಿ ನೋಡಿದ್ದೆ. ಥಾರ್ ಮರುಭೂಮಿಯಲ್ಲಿ ಎದುರಿಸಿದ್ದ ಬಿಸಿಬಿಸಿ ಸುಂಟರಗಾಳಿ ನಿಜಕ್ಕೂ ಸುಂಟರಗಾಳಿಯಲ್ಲ ಎಂಬುದು ಅನುಭವಕ್ಕೆ ಬರಲೆಂದೇ ನಾನು ಹೇಗ್‌ನಲ್ಲಿ ಸುಂಟರಗಾಳಿಗೆ ಸಿಕ್ಕಿಹಾಕಿಕೊಂಡೆ. ಗಾಳಿಯ ವೇಗ, ಆವೇಗ, ಶಬ್ದ ಎಲ್ಲವೂ ಮನೆಯೊಳಗೇ ಇದ್ದರೂ ಅನುಭವಕ್ಕೆ ಬರುತ್ತಿತ್ತು. ಹೊರಗಡೆ ಹೋಗಿ ನೋಡಿದರೆ ಸರಿಯಾಗಿ ಗೊತ್ತಾಗುವುದು ಎಂದು ಮನೆಯಿಂದ ಹೊರಬಂದೆ. ಬೇಡ ಬೇಡ ಎಂದರೂ ನೋಡಿದರೆ ಸರಿಯಾಗಿ ಗೊತ್ತಾಗುವುದು ಎಂದು ಮನೆಯಿಂದ ಹೊರಬಂದೆ. ಬೇಡ ಬೇಡ ಎಂದರೂ, ಮಗಳು ಕಿರುಚಾಡುತ್ತಿದ್ದರೂ ಬೀದಿ ಕೊನೆಯಲ್ಲಿ ನಿಂತೆ.

ಗಾಳಿಯ ಜೊತೆಗೆ ಕತ್ತಲು. ಕತ್ತು ಮೇಲೆತ್ತಿ ನೋಡಿದರೆ ಆಕಾಶವೆಲ್ಲ ಸ್ತಬ್ಧವಾಗಿದೆ. ಒಂದೇ ಒಂದು ಮೋಡದ ತುಂಡು ಕೂಡ ಇಲ್ಲ. ಗಟ್ಟಿಯಾದ ಧ್ವನಿಯಲ್ಲಿ ಯಾರೋ ಉತ್ಕಟವಾಗಿ ಧ್ವನಿವರ್ಧಕದಲ್ಲಿ ಚೀರಾಡುತ್ತಿದ್ದಾರೆ, ಊಳಿಡುತ್ತಿದ್ದಾರೆ ಅನ್ನುವ ರೀತಿಯ ಶಬ್ದ. ಗಾಳಿ ಬೀಸುತ್ತಿಲ್ಲ, ಬೀಸಿಕೊಂಡು ಹೋಗುತ್ತಿದೆ. ಎತ್ತರದ ಮರಗಳ ತುದಿ ಭೂಮಿಗೆ ಸೋಕುತ್ತಿದೆ. ಮನೆ ಮುಂದೆ ನಿಂತಿರುವ ವಾಹನಗಳನ್ನು ಎತ್ತಿ ಬೇರೆ ಕಡೆಗೆ ಇಡುತ್ತಿದೆ. ಇಲ್ಲ ಬಿಸಾಡುತ್ತಿದೆ. ನನ್ನಂಥ ಮೂರ್ಖನೊಬ್ಬನನ್ನು ಬಿಟ್ಟರೆ ರಸ್ತೆಯಲ್ಲಿ ಯಾರೂ ಕಾಣುತ್ತಿಲ್ಲ. ನನ್ನನ್ನು ಕೂಡ ಎರಡು ಮೂರು ಸಲ ಗಾಳಿ ಎತ್ತಿ ಮೂರು ನಾಲ್ಕು ಅಡಿ ಆ ಕಡೆ ಈ ಕಡೆ ಕುಕ್ಕರಿಸಿತು. ನನ್ನ ಉಸಿರಾಟ ಕೂಡ ವೇಗವಾಗುತ್ತಿರುವುದು, ದೇಹವೆಲ್ಲ ನಡುಗುತ್ತಿರುವುದು ನನಗೆ ಗೊತ್ತಾಗುತ್ತಿತ್ತು. ಕಾಲನ್ನು ಗಟ್ಟಿಯಾಗಿ ಊರಿ, ತುಟಿ ಕಚ್ಚಿ, ಮುಷ್ಠಿ ಹಿಡಿದು ನಿಂತುಕೊಂಡೆ. ಇದೆಲ್ಲ ಯಾವ ರೀತಿಯಲ್ಲೂ ನೆರವಿಗೆ ಬರುವುದಿಲ್ಲ ಎಂದು ಗೊತ್ತಿದ್ದರೂ, ಗಾಳಿಯ ಆವೇಗ, ಊಳಿಡುವುದರಲ್ಲಿ ಯಾವ ರೀತಿಯ ಬದಲಾವಣೆಯೂ ಇಲ್ಲ. ಇಲ್ಲಿ ಹವಾಮಾನ ಮುನ್ಸೂಚನೆ ನಿರ್ದಿಷ್ಟವಾಗಿರುತ್ತದೆ, ವೈಜ್ಞಾನಿಕವಾಗಿರುತ್ತದೆ. ಸುಂಟರಗಾಳಿ ಯಾವಾಗ ಕಡಿಮೆ ಆಗುತ್ತದೆ, ಪೂರ್ತಿ ನಿಂತು ಹೋಗುತ್ತದೆ ಎಂಬ ಸೂಚನೆಗನುಗುಣವಾಗಿ ಸುಂಟರಗಾಳಿ ನಿಂತುಹೋಗುತ್ತದೆ. ಅಲ್ಲಿಯ ತನಕ ಮನೆಯಲ್ಲಿರಬೇಕು ಎಂದು ಮಗಳು ಹೇಳುತ್ತಿದ್ದುದು ನೆನಪಿಗೆ ಬಂತು. ಹಾಗೆಯೇ ಆಯಿತು ಕೂಡ. ಆದರೆ ಮುಂದಿನ ಪ್ರಯಾಣವೆಲ್ಲ ತುಂಬಾ ಅಸ್ತವ್ಯಸ್ತವಾಯಿತು. ದುಬೈ ತಲುಪಿದಾಗ ಬೆಂಗಳೂರಿಗೆ ಹೋಗಬೇಕಾದ ವಿಮಾನ ಹೊರಟು ಹೋಗಿತ್ತು. ಒಂದು ದಿನದ ವೀಸಾ ಪಡೆದು ಹೋಟೆಲಲ್ಲಿ ತಂಗಿ ಮಾರನೆ ದಿನ ಹೊರಡಬೇಕಾಯಿತು. ಈ ಎಲ್ಲ ಭಯ, ಅನಿಶ್ಚಯತೆ, ಗಡಿಬಿಡಿಯಲ್ಲಿ ಬೀಳ್ಕೊಡುಗೆಯ ಸಂದರ್ಭದಲ್ಲಿ ಅನುಭವಿಸುವ ಭಾವನೆಗಳು ಹಿನ್ನೆಲೆಗೆ ಸರಿದವು. ನಮ್ಮ ಪ್ರಯಾಣ, ಆರೋಗ್ಯ, ಜೀವಕ್ಕೆ ಕುತ್ತು ಆತಂಕ ಬಂದಾಗ, ನಯ ನಾಜೂಕಿನ ಭಾವನೆಗಳಿಗೆ ಯಾವ ರೀತಿಯ ಆಸ್ಪದವೂ ಇರುವುದಿಲ್ಲವೆಂದು ಕಾಣುತ್ತದೆ.

*****

2023ರ ಹೊರಡುವ ಸಂದರ್ಭದಲ್ಲಿ ಎಂದಿನ ಭಾವನೆಗಳಲ್ಲದೆ, ಬೇರೆ ಏನಾದರೂ ಸೂಚನೆಗಳಿರಬಹುದೆ ಎಂದು ಮನಸ್ಸು ಹುಡುಕುತ್ತಿತ್ತು. ನಮ್ಮ ಮೂರು ತಿಂಗಳ ವಾಸದಲ್ಲಿ ಮಾಡಬೇಕೆಂದುಕೊಂಡಿದ್ದ ಎಲ್ಲ ಕೆಲಸಗಳು ಮುಗಿದು ಹೋಯಿತು. ಇಲ್ಲಿ ನಮಗೆ ಇನ್ನೇನೂ ಕೆಲಸವಿಲ್ಲ, ನಾವು ಇಲ್ಲಿ ನಿಷ್ಪ್ರಯೋಜಕರು ಎಂಬ ಭಾವನೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ನನಗೆ ನಗು ಬಂತು. ಬೆಂಗಳೂರಿನಲ್ಲಿ ಕೂಡ ನಾವು ಅನಿವಾರ್ಯವೇನಲ್ಲ. ಹೋಗಿ ಕಟ್ಟೆ ಕಡೆಯುವಂಥದ್ದು ಏನೂ ಇರುವುದಿಲ್ಲ. ಆದರೂ ಹೋಗಬೇಕೆಂಬ ತವಕ. ಬೆಂಗಳೂರಿನ ಮನೆಯ ಒಳಾಂಗಣ, ಮನೆಯ ಮುಂದಿನ ಅಂಗಳ, ಬೀದಿಗಳೆಲ್ಲ ಕಣ್ಣು ಮುಂದೆ ಬರುತ್ತಿದ್ದವು.

ನಾವು ಹೊರಡುವ ಮೂರು ನಾಲ್ಕು ದಿನ ಮುಂಚೆ ಇಬ್ಬರು ಮೊಮ್ಮಕ್ಕಳಿಗೂ ಶೀತ, ಕೆಮ್ಮು, ನೆಗಡಿ, ಬೇಧಿ, ವಾಂತಿ. ಮನೆಯಲ್ಲೇ ಇರುವ ಅರಿಶಿನ, ಜೀರಿಗೆ, ಮೆಣಸು, ಮೆಂತ್ಯ, ಮೊಸರು ಇವುಗಳಿಂದಲೇ ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದೆಂಬುದೇ ನಿರಂತರವಾಗಿ ಚರ್ಚೆ ಆಗುತ್ತಿದ್ದ ವಿಷಯ. ಇದನ್ನು ಚರ್ಚಿಸಲು, ಮೊಮ್ಮಕ್ಕಳ ಮೇಲೆ ಪ್ರಯೋಗ ಮಾಡಲೆಂದೇ ಈ ಸಲ ನಾವು ಇಲ್ಲಿಗೆ ಬಂದೆವೇ ಎಂದು ನಮಗೇ ಆಶ್ಚರ್ಯ. ಇನ್ನೇನು ನಾವು ಹೊರಡುವ ದಿನ ಕ್ಷಣ ಬಂದಾಗಲೇ ಹೀಗೆಲ್ಲ ಆಗಬೇಕೆ? ಆಯ್ತು, ಸದ್ಯ ನಾವಿರುವಾಗಲೇ ಹೀಗೆಲ್ಲ ಆದದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಅಲ್ಲವೇ ಅಂದುಕೊಂಡು ನೆದರ್‌ಲ್ಯಾಂಡ್ಸ್‌ನಲ್ಲಿ, ಅಕ್ಕಪಕ್ಕದ ಯುರೋಪ್ ದೇಶಗಳಲ್ಲಿ ಎಲ್ಲೆಲ್ಲಿ ಆಯುರ್ವೇಧದ ಔಷಧಿ ಮಾತ್ರೆಗಳು ಸಿಗುತ್ತವೆ ಎಂದು ಹುಡುಕಿದೆವು. ನೆದರ್‌ಲ್ಯಾಂಡ್ಸ್‌ನಲ್ಲಿ ಇಬ್ಬರು ವಿತರಕರಿದ್ದರು. ಪತ್ತೆ ಹಚ್ಚಿದ್ದಾಯಿತು. ನಾವು ವಾಯುವಿಹಾರಕ್ಕೆ ಹೋಗುತ್ತಿದ್ದ ರಸ್ತೆಯ ಒಂದು ಭಾಗದಲ್ಲಿ ತುಳಸಿಗಿಡ ಇದೆ, ಅಲ್ಲಿಂದ ತುಳಸಿ ಎಲೆಗಳನ್ನು ಸಂಗ್ರಹಿಸಬಹುದಲ್ಲವೇ ಎಂಬುದನ್ನು ತುಂಬಾ ಆಸೆಯಿಂದ ಚರ್ಚಿಸಿದರೂ, ಆ ತುಳಸಿ ಗಿಡ ನೈಸರ್ಗಿಕವಾದುದಲ್ಲ ಎಂಬ ಅನುಮಾನ ಬಂದು ಸುಮ್ಮನಾದೆವು.

ಬೆಂಗಳೂರಿನ ಧ್ಯಾನ ಹೆಚ್ಚುತ್ತಿದ್ದಂತೆ, ಹೊರಡುವ ದಿನ ಸಮೀಪಿಸುತ್ತಿದ್ದಂತೆ ಗೆಳೆಯರ ಜೊತೆ ನೆಂಟರಿಷ್ಟರ ಜೊತೆ ಕಲ್ಪನಾ ಸಂಭಾಷಣೆಗೆ ಪ್ರಾರಂಭವಾಯಿತು. ಒಂದು ಬೆಳಿಗ್ಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ, ಪರಿಚಿತ ಕಟ್ಟಡ ಸಂಕೀರ್ಣವೊಂದರ ಮುಂದೆ ನಿಂತಿದ್ದೆ. ಒಬ್ಬರು ಕೈ ಗಾಡಿಯಲ್ಲಿ ತಂದು ಟೀ, ಕೇಕ್, ಚಿಪ್ಸ್, ಸಿಗರೇಟ್ ಮಾರುತ್ತಿದ್ದರು. ಥೇಟ್ ನಮ್ಮ ಪೆಟ್ಟಿ ಅಂಗಡಿಯ ರೀತಿ, ದರ್ಶಿನಿ ಕೆಫೆಗಳ ರೀತಿ. ಇಂತಹದೊಂದು ದೃಶ್ಯವನ್ನೇ ನಾನು ಇಷ್ಟು ದಿನ ನೋಡಿರಲಿಲ್ಲ. ಇದು ಟಿಪಿಕಲ್ ಬೆಂಗಳೂರು ದೃಶ್ಯ. ಈ ದೃಶ್ಯವನ್ನು ನೋಡುತ್ತಾ ಸಂತೋಷ ಪಡುತ್ತಲೇ ನಾನು ನೆದರ್‌ಲ್ಯಾಂಡ್ಸ್‌ನಿಂದ ಬೀಳ್ಕೊಡುಗೆ ಪಡೆದು ಹೊರಡಬೇಕೆನ್ನಿಸಿತು.

ನಂತರದ ವಿವರಗಳು ಇಲ್ಲಿ ಬೇಡ. ಏಕೆಂದರೆ, ಬೇರೆ ದೃಶ್ಯಗಳು, ಪರಿಕಲ್ಪನೆಗಳು ಬದಲಾದರೂ, ಭಾವನಾತ್ಮಕ ಅಂಶಗಳು ಎಂದಿಗೂ ಒಂದೇ ರೀತಿಯಲ್ಲಿರುತ್ತವೆ. ಎರಡು ವರ್ಷ ತುಂಬದ ನನ್ನ ಮೊಮ್ಮಗಳು ಕೂಡ ಎಷ್ಟೊಂದು ಭಾವಶ್ರೀಮಂತಿಕೆಯ ಮಗು, ನಮ್ಮನ್ನು ಬಿಡಲಾರದೆ, ಪಡಿಪಾಟಲು ಪಡುತ್ತದೆ. ಎರಡು ವರ್ಷದ ಹಿಂದೆ ಅವಳ ಅಣ್ಣ ಕೂಡ ಇದೇ ರೀತಿಯ ತಳಮಳ, ಖಿನ್ನತೆಯನ್ನು ಅನುಭವಿಸಿದ್ದ ಎಂಬುದು ನಾವು ಬೆಂಗಳೂರು ತಲುಪಿ ನೆಲೆಗೊಂಡ ಮೇಲೂ ತುಂಬಾ ದಿನ ನಮ್ಮನ್ನು ಬಾಧಿಸುತ್ತಿತ್ತು.

About The Author

ಕೆ. ಸತ್ಯನಾರಾಯಣ

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.

1 Comment

  1. ಎಸ್ ಪಿ.ಗದಗ.

    ಪ್ರವಾಸ ಕಥನ ಓದಿನ ಖುಷಿ ಕೊಟ್ಟಿದೆ. ಪ್ರೀತಿಯಿಂದ ಭಾವುಕ ಕ್ಷಣ ಅನುಭವಿಸುವಂತೆ ಮಾಡಿದೆ. ಧನ್ಯವಾದಗಳು ಸರ್.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ