ಊಟ ಉಪಚಾರವಾದ ಮೇಲೆ ನಾನು ಶ್ರೀದೇವಿ ಜೊತೆ ಅಡುಗೆ ಮನೆ ಸೇರಿದೆ. ನೋಡ್ತೀನಿ ಬಿಸೋಕಲ್ಲು ಒಂದು ಸಿದ್ಧವಾಗಿದೆ! ಒಮ್ಮೆಗೇ ನಾವಿಬ್ಬರು ಮಿಂಚಿನ ಸಂಚಾರವಾದಂತೆ ಕಾರ್ಯಪ್ರವೃತ್ತರಾದೆವು. ಇಬ್ಬರಿಗೂ ಒಂದೇಸಲ ಒಟ್ಟಿಗೇ ಪರಿಸ್ಥಿತಿಯ ಬಗ್ಗೆ ಜ್ಞಾನೋದಯವಾಯಿತು. ತೇಜಸ್ವಿಗೆ ಕಲ್ಲು ಗೋಚರಿಸದಂತೆ ಗೊತ್ತಾಗದಂತೆ ನಮ್ಮ ಮನೆಗೆ ಸಾಗಿಸುವುದಾದರೂ ಹೇಗೆ. ಕೊನೆಗೊಂದು ಉಪಾಯ ಮಾಡಿದೆವು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ.
ತೇಜಸ್ವಿ ಮತ್ತು ಶಾಮಣ್ಣ ಆಪ್ತ ಗೆಳೆಯರು. ಇಬ್ಬರದೂ ವಿಶಿಷ್ಟವಾದ ವ್ಯಕ್ತಿತ್ವ. ವಿರುದ್ಧವಾದದ್ದು. ಮಾತ್ರ ನಗಿಸುವಲ್ಲಿ ಒಂದೇ. ಆದರೂ ಭಿನ್ನ. ಒಬ್ಬರ ಹೆಸರು ಹೇಳಿದ್ರೆ ಇನ್ನೊಬ್ರೂ ಅಲ್ಲಿರುತ್ತಾರೆ, ಅಲ್ಲಿಗೇ ಬರುತ್ತಾರೆ.
ಕಡಿದಾಳು ಶಾಮಣ್ಣ ನಾನು ಮಹಾರಾಜ ಕಾಲೇಜಿನಲ್ಲಿ III ಆನರ್ಸ್ ಓದುತ್ತಿದ್ದಾಗ ನನಗೆ ಪರಿಚಯ. ಆಗ ಶಾಮಣ್ಣ ಬಿ.ಎ.ನಲ್ಲಿ ಓದುತ್ತಿದ್ದರು. ಇವರ ತರಗತಿಯಲ್ಲಿ ಒಬ್ಬಳು ಹುಡುಗಿ ಸುಮನ್ ದೇಶಪಾಂಡೆ ಅಂತ ಇದ್ದಳು. ಇವಳು ಬೆಳ್ಳಗೆ, ತೆಳ್ಳಗೆ, ಕುಳ್ಳಗೆ, ನಗುತ್ತ ಇರುತ್ತಿದ್ದಳು. ಎರಡು ಜಡೆಯವಳು. ಯಾವಾಗ್ಲೂ ಬಿಳಿ ಸೀರೆ ಉಡುತ್ತಿದ್ದಳು. ಈ ಸೀರೆ ಅಷ್ಟೊಂದು ಬೆಳ್ಳಕ್ಕೆ ಇರುತ್ತಿರಲಿಲ್ಲ. ಅದಕ್ಕೆ ಶಾಮಣ್ಣ ಹೇಳ್ತಿದ್ದರಂತೆ, ಅಂತ ತೇಜಸ್ವಿ ಹೇಳೋರು, `ಇವಳು ಸೀರೆಗೆ ಟಿನೋಪಾಲು ಹಾಕುವ ಬದಲು ಅವಳೇ ನೆಕ್ಕಿಕೊಳ್ಳುವಳೋ ಏನೋ. ಅದಕ್ಕೇ ಅವಳು ಬಿಳ್ಚಿ, ಸೀರೆ ಮಬ್ಬು` ಎಂದು. ಹೀಗೆ ಶಾಮಣ್ಣನವರ ನಗೆ ಚಟಾಕಿ ಇರುತ್ತಿತ್ತು.
ತೇಜಸ್ವಿ ಯಾವಾಗ್ಲೂ ಶಾಮಣ್ಣನ ಜೋಕು ಹೇಳಿ ನಗುತ್ತಿದ್ರು. ನಮಗೂ ನಗಿಸೋವ್ರು. ಮಾತ್ರ ಶಾಮಣ್ಣನ ನೆಚ್ಚಿಕೊಂಡ್ರೆ ಆಗೊಲ್ಲ ಅನ್ನೋವ್ರು. ಶಾಮಣ್ಣಂಗೂ ಮದ್ವೆ ಆಯ್ತು. ಅವರ ಹೆಂಡ್ತಿ ಶ್ರೀದೇವಿ, ಇವ್ರೂ ಪರಸ್ಪರ ಪ್ರೀತಿಸಿ ಮಂತ್ರಮಾಂಗಲ್ಯ ರೀತಿಯಲ್ಲೇ ಮದುವೆ ಆದ್ರು. ಶ್ರೀದೇವಿ ನನ್ನ ಆಪ್ತ ಗೆಳತಿಯಾದರು. ಇವರೂ ಜಮೀನು ಮಾಡಿದರು. ನಾವು ಹೊಸ ಸಂಸಾರ ಹೂಡಿದಾಗ ಕಷ್ಟಪಟ್ಟಂತೆ, ಇವರಿಗೂ ಕಷ್ಟ ಇತ್ತು. ಇವರದ್ದು ಒಂದು ಗುಡಿಸಲು ಮನೆಯಾಗಿತ್ತು. ಸೊಳ್ಳೆಕಾಟ ವಿಪರೀತ. ಸೊಳ್ಳೆಪರದೆ ಇಲ್ಲದೆ ಮಲಗುವಂತೆಯೇ ಇಲ್ಲ. ಒಂದು ದಿವಸ ಪರದೆ ಮೇಲೆ ಏನೋ ಬಿದ್ದಂತೆ. ನೋಡಿದ್ರೆ ಹಾವು. ಹೀಗೆ ಏನೇನೋ ಸಮಸ್ಯೆ. ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿದವರು ಶಾಮಣ್ಣ ಮತ್ತು ಶ್ರೀದೇವಿ. ನಾವು ಅವರ ಮನೆಗೆ ಹೋಗೋದು, ಅವರು ನಮ್ಮ ಮನೆಗೆ ಬರೋದು. ನಮ್ಮ ನಮ್ಮ ಕಷ್ಟಸುಖ ಹಂಚಿಕೊಳ್ಳೋದು. ಬಾಳ ಸಂತೋಷದ ದಿನಗಳು ಅವು.
ಒಂದು ಸಲ ಹೀಗೆ ಹೋಗಿದ್ದೀವಿ ಶ್ರೀದೇವಿ ಮನೆಗೆ. ಇವರ ಮನೆಗೆ ಯಾವಾಗಲೂ ಜನ ಬರುವವರೇ. ಊರಿನವರು, ಪರ ಊರಿನವರು, ದೂರದೂರಿನವರು, ರೈತರು, ಮದುವೆ ಮಾಡಿಸಿ ಅಂತ ಕೇಳಿಕೊಂಡು ಬರುವವರು. ಹೀಗೇ. ಕಷ್ಟಸುಖ ಹಂಚಿಕೊಳ್ಳಕ್ಕೆ, ಕೊಡಕ್ಕೆ ಬರುವವರೇ ಹೆಚ್ಚು. ನಾವು ಅಲ್ಲಿಗೆ ಹೋದಾಗ ನಾಲ್ಕು ಜನ ವರಾಂಡದಲ್ಲಿ ಕೂತು ಮಾತಾಡ್ತಾ ಇದ್ರು. ಅವರ ಮುದ್ದಿನ ನಾಯಿಯೂ ಅಲ್ಲೆ ಸುತ್ತು ಹೊಡ್ಕಂಡು ಪವಡಿಸಿತ್ತು. ಆಗ ಒಂದೆರಡು ಸಲ ಯಾರೋ, `ನಾಯಿಗೆ ಹೊಟ್ಟೆಕೆಟ್ಟದೇನೊ, ಕೆಟ್ಟನಾಥ` ಎಂದರು. ಎಲ್ಲರೂ ನಾಯಿ ಮೇಲೆ ಹಾಕುವವರೇ. ನಾನು ಒಳಗಡೆನೆ ಇದ್ದೆ, ಕೇಳಿಸುತ್ತಿತ್ತು. ಇನ್ನೊಂದು ಸ್ವಲ್ಪ ಹೊತ್ತಾದ ಮೇಲೆ ನಾಯಿ ಎದ್ದು ಹೋಯಿತು. ಶಾಮಣ್ಣ ಹೇಳಿದ್ರು, `ಈಗ ಗೊತ್ತಾಗುತ್ತೆ ಯಾರ ಹೊಟ್ಟೆ ಕೆಟ್ಟಿದೆಂತ`. ಹೀಗೆ ಶಾಮಣ್ಣವ್ರು.
ಇಂತಹ ಸಮಯಗಳಲ್ಲೇ ಈ ಗೆಳೆಯ ವೃಂದ ಒಟ್ಟಿಗೆ ಸೇರಿದಾಗ ಪ್ರಚಲಿತ ರಾಜಕೀಯ ವಿದ್ಯಮಾನ, ಸಾಹಿತ್ಯದ ಗತಿ ಸ್ಥಿತಿ, ಸಾಮಾಜಿಕ ಆಗುಹೋಗು ಇತ್ಯಾದಿ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಮತ್ತು ಹೇಗೆ ಬದಲಾವಣೆ ತರಬೇಕೆಂಬುದರ ಬಗ್ಗೆಯೂ ಮಾತು ನಡೆಯುತ್ತಿತ್ತು. ದಕ್ಷಿಣ ಭಾರತದ ಬೆಳೆಗಾರರ ಒಕ್ಕೂಟವನ್ನು ಮೂಡಿಗೆರೆಯಲ್ಲಿ ಹುಟ್ಟು ಹಾಕಿದವರು ಈ ಬಳಗವೇ.
ತೇಜಸ್ವಿಗೆ ಕೆಲಸ ಮಾಡಿ ಬೇಜಾರಾದ್ರೆ ಶಾಮಣ್ಣನವರ ಜಮೀನಿಗೆ ಹೋಗಿ ಬರೋಣ ನಡಿ ಅನ್ನೋರು. ಅವರ ಜಮೀನು ಇರೋದು ಭದ್ರಾವತಿ ಆಚೆ ಹೊಳೆಹೊನ್ನೂರು ಅಂತ. ಭತ್ತದ ಗದ್ದೆ, ಅಡಿಕೆ, ಕಬ್ಬು ಇತ್ಯಾದಿ ಇವರ ಬೆಳೆ. ಅಲ್ಲಿಗೆ ಹೋಗೋದು ಅಂದ್ರೆ ನಮಗೆ ಎಲ್ಲಿಲ್ಲದ ಸಂಭ್ರಮ. ಶಾಮಣ್ಣ ಶ್ರೀದೇವಿಗೂ ಅಷ್ಟೆ. ಹೋದವರು ಒಂದಿನ ಉಳಿದೇ ಬರುತ್ತಿದ್ದೆವು. ಅವರ ಮನೆಗೆ ಹೋದವರು ಎಲ್ಲರೂ ಹಾಗೇನೇ. ಅಷ್ಟೊಂದು ಅತಿಥಿ ಸತ್ಕಾರ, ಉಪಚಾರ.
ಒಂದು ಸಲ ನಾವು ಹೋದ ಕೂಡ್ಲೆ ಶ್ರೀದೇವಿ ಅಕ್ಕಿ ನೆನೆಸಿಟ್ಟಾಯ್ತು. (ಮನೆಗೆ ಯಾರು ಹೋದರೂ ಶ್ರೀದೇವಿ ಪಡುವ ಸಂಭ್ರಮ ನಾವು ನೋಡಿ ಕಲೀಬೇಕು.) ಮಾತಾಡ್ತಾ ಸಂಜೆ ಆಗೇ ಹೋಯ್ತು. ನೋಡ್ತಿದ್ದಂತೆ ಶ್ರೀದೇವಿ ಅಕ್ಕಿ ಬೀಸೂ ಆಯ್ತು. ಸ್ಯಾವಿಗೆಗೆ ಹಿಟ್ಟು ತೊಳೆಸಲು ನೀರಿಟ್ಟೂ ಆಯ್ತು. ಎಲ್ಲಾ ಆ ಸಣ್ಣ ಅಂಗೈ ಅಗಲ ಬೀಸೋ ಕಲ್ಲಿನ ಮಹಿಮೆ ಎಂದೆಣಿಸಿದೆ ನಾನು. ಆ ಬೀಸೋ ಕಲ್ಲಿನ ಬಗ್ಗೆ ವಿವರಣೆ ಕೇಳಿದೆ. ಯಾವ ಊರಿನದು, ಎಷ್ಟು ಹಣ, ನನಗೂ ತರಿಸಿಕೊಡಲು ಸಾಧ್ಯವಾ, ನನಗೊಂದು ಅಂತಹುದು ಬೇಕೇಬೇಕೆಂದೆ. ಹೊಸ ಉತ್ಸಾಹ ಸಂತೋಷ ಒಂದು ಬಂತು ನನಗೆ. ಸ್ಯಾವಿಗೆ ಅಡಿಗೆ ತಿಂದುಂಡು ಸಂಭ್ರಮಿಸಿದೆವು. ಮಾರನೆ ದಿನ ತೋಟಕ್ಕೆ ಹಿಂದಿರುಗಿದೆವು.
ಎಷ್ಟೋ ಸಮಯ ಕಳೆಯಿತು. ನಾನು ಮನಸ್ಸಿನಲ್ಲಿಯೇ ಗುಣಾಕಾರ, ಭಾಗಕಾರ ಹಾಕ್ತಿದ್ದೆ. ಯಾವತ್ತು ಬೀಸೋ ಕಲ್ಲು ಬರುತ್ತೆ. ಯಾವುತ್ತು ನಾವು ಹೋಗಿ ತರುವುದು. ಹೀಗೆ…. ಒಂದು ದಿವಸ ಮಾಮೂಲಿ ಹೊರಟಂತೆ ಹೊರಟೆವು ಅವರ ಜಮೀನಿಗೆ. ಶಾಮಣ್ಣ, ಅವರ ಅಡಿಕೆ ಗಿಡಗಳ ಸಮಸ್ಯೆ ತೋಡಿಕೊಂಡರು. ಅಗ್ರಿಕಲ್ಚರ್ ಇಲಾಖೆಯವರು ಬಂದೂ ಬಂದೂ ಹೊಗೋದು, ಸಮಸ್ಯೆ ಪರಿಹಾರವಾಗದೆ ಇರೋದು. ಬೇರೆ ಬೇರೆ ಚರ್ಚೆನೂ ಮಾಡಿದರು ಶಾಮಣ್ಣ ಮತ್ತು ತೇಜಸ್ವಿ. ಆ ಸೀಜನ್‌ನಲ್ಲಿ ಮಾಡಿಸಿದ ಮಂತ್ರಮಾಂಗಲ್ಯದ ಬಗ್ಗೆಗೂ ಮಾತು ಹೋಯಿತು. ಆ ಮದುವೆ ದಿಬ್ಬಣದಲ್ಲಿ ನಡೆದ ಜಗಳ, ತಾಳಿಕಟ್ಟಕ್ಕೆ ಬಿಡೋಲ್ಲ ಅಂದಿದ್ದು, ಕುಕ್ಕೆ ಸಾಮಾನು ಬರ್ಲಿ ಅಂದಿದ್ದು, ಏನೇನೋ ಹೇಳ್ಕೊಂಡು ಅವರಿಬ್ಬರು ನಗೋವ್ರು. ಇದೆಲ್ಲದರ ಪಾತ್ರದಾರಿಯಾಗದೆ ದೂರದಲ್ಲಿ ನಿಂತು ನೋಡಿದಾಗ ಇದೇನು ಅಪಹಾಸ್ಯವೋ ಏನೋ. ಅನ್ನಿಸುತ್ತೆ.
ಊಟ ಉಪಚಾರವಾದ ಮೇಲೆ ನಾನು ಶ್ರೀದೇವಿ ಜೊತೆ ಅಡುಗೆ ಮನೆ ಸೇರಿದೆ. ನೋಡ್ತೀನಿ ಬಿಸೋಕಲ್ಲು ಒಂದು ಸಿದ್ಧವಾಗಿದೆ! ಒಮ್ಮೆಗೇ ನಾವಿಬ್ಬರು ಮಿಂಚಿನ ಸಂಚಾರವಾದಂತೆ ಕಾರ್ಯಪ್ರವೃತ್ತರಾದೆವು. ಇಬ್ಬರಿಗೂ ಒಂದೇಸಲ ಒಟ್ಟಿಗೇ ಪರಿಸ್ಥಿತಿಯ ಬಗ್ಗೆ ಜ್ಞಾನೋದಯವಾಯಿತು. ತೇಜಸ್ವಿಗೆ ಕಲ್ಲು ಗೋಚರಿಸದಂತೆ ಗೊತ್ತಾಗದಂತೆ ನಮ್ಮ ಮನೆಗೆ ಸಾಗಿಸುವುದಾದರೂ ಹೇಗೆ. ಇವರಿಗೆ ನಾನು ಕಂಡಕಂಡ ಸಾಮಾನು ತಗೊಂಡು ಮನೆಯಲ್ಲಿ ಅಡಕಿಕೊಳ್ಳುವುದು ಕಂಡರೇ ಆಗುತ್ತಿರಲಿಲ್ಲ.
ಶ್ರೀದೇವಿ ಒಂದು ಉಪಾಯ ಮಾಡಿದರು. ಹದಿನೈದು ಕೆ.ಜಿ. ಅಕ್ಕಿ ಅವರು ಬೆಳೆದಿದ್ದು. ಒಂದು ಗೋಣಿ ಚೀಲಕ್ಕೆ ಹಾಕಿ ಅದರೊಟ್ಟಿಗೆ ಬೀಸೋ ಕಲ್ಲು ಹಾಕಿದರಾಯಿತೆಂದರು. ನಮ್ಮ ಉಪಾಯಕ್ಕೆ ನಾವೇ ಮೆಚ್ಚಿಕೊಂಡೆವು. ಮಾತ್ರ ಕೆಲಸದ ಆಳಿನ ಕೈಯಲ್ಲೇ ಇಳಿಸಿಕೊಳ್ಳಬೇಕೆಂದು ಕಟ್ಟೆಚ್ಚರ ಕೊಟ್ಟರು ಶ್ರೀದೇವಿ. ಆಯ್ತೆಂದೆ.
ನಮ್ಮ ತೋಟ ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಒಂದು ಕ್ಷಣ ಕಳೆದರೆ ಕತ್ತಲೆ ಇಳಿಯುತ್ತೆ. ಕೆಲಸದಾಳನ್ನು ಕರೆಯುವೆನೆಂದು ಎಷ್ಟು ಹೇಳಿದರೂ ಇವರು ಕೇಳಬೇಕಲ್ಲ. ಶ್ರೀದೇವಿ ಕೊಟ್ಟ ಎಚ್ಚರಿಕೆ ಮಾತು ಗಾಳಿಗೆ ಹೋಯಿತು. `ಏನು ಮಹಾ ಹದಿನೈದು ಕೆ.ಜಿ. ಅಕ್ಕಿ ಹೊರಕ್ಕೆ ನನ್ನ ಕೈಲಾಗುವುದಿಲ್ಲವ` ಎಂದು ಹಠಕ್ಕೆ ಬಿದ್ದಂತೆ ಹೆಗಲ ಮೇಲೆ ಹೊತ್ತೇಬಿಟ್ಟರು. ನಮ್ಮ ಕಾರು ಶೆಡ್ಡಿನಿಂದ ಅಡಿಗೆ ಸ್ಟೋರ್ ರೂಂಗೆ ತುಸುದೂರನೇ. ಮೆಟ್ಟಿಲು ಬೇರೆ ಇಳಿಬೇಕು. ನನಗೋ ಹೆದರಿಕೆ. `ಅಕ್ಕಿ ಮೂಟೆ ಅಂತಿಯಾ ಮಣಬಾರ ಇದೆ` ಎನ್ನುತ್ತಾ ಮೂಟೆ ಇಳಿಸಿದರು ತೇಜಸ್ವಿ. ಬೈಸಿಕೊಳ್ಳಬೇಕೆಂದು ಹೆದರಿ ಏನೂ ಮಾತಾಡಲಿಲ್ಲ ನಾನು. ಆದರೂ ಅವರು ಬೆಳೆದ ಅಕ್ಕಿ ಎಂದೆ. ಬೇರೆ ಕಡೆ ಗಮನ ಸೆಳೆಯಲು. ಆದರೆ ಪಾಪ ಅನ್ನಿಸಿತು. ಮನ ಕರಗಿತು. ಅಯ್ಯೊ ಅಂದುಕೊಂಡೆ. ಸದ್ಯ ಇವರ ಕೈಮೈ ಉಳುಕಲಿಲ್ಲ.
ಬೆಳಿಗ್ಗೆ ಮುಂಚೆ ಎದ್ದು ಅಕ್ಕಿ ನೆನೆಸಿಟ್ಟೆ. ಹೊಸ ಉಮೇದು ಬಂದಿತ್ತು. ಅಕ್ಕಿ ಬೀಸಿದೆ. ಶ್ಯಾವಿಗೆ ಮಾಡುವ ಆಸೆ. ರಟ್ಟೆಯೆಲ್ಲ ನೋವು ಬಂತು. ಜ್ವರ ಬಂದಂತಾಯಿತು. ಅಭ್ಯಾಸ ಮತ್ತು ಕೈಚಳಕ ಇಲ್ಲದಿದ್ದರೆ ಇದಾಗದ ಕೆಲಸವೆಂಬುದು ತಿಳೀತು. ಮತ್ತೆಂದಿಗೂ ಬೀಸಲೇ ಇಲ್ಲ.
ಅಟ್ಟ ಸೇರಿತು ಬೀಸೋ ಕಲ್ಲು. ಎಷ್ಟೋ ವರ್ಷ ಕಳೆದ ಮೇಲೆ ಸೂರಿನಿಂದ ಮಳೆನೀರು ಸುರಿವ ಜಾಗದಲ್ಲಿ ಇಟ್ಟಾಗ ಇವರು ಇದೆಲ್ಲಿತ್ತೆಂದು ಕೇಳಿದರು. ಎಲ್ಲವನ್ನೂ ಹೇಳಿ ನಕ್ಕಿದ್ದೆ. `ನೋಡು, ನೀವು ಹೆಂಗಸರ ಬುದ್ಧಿಯೆಂತದು` ಎಂದು ಅವರೂ ನಕ್ಕರು. ಮುಂದೆ ಶ್ರೀದೇವಿ ಸಿಕ್ಕಾಗ ಇದನ್ನೆಲ್ಲ ಹೇಳಿದೆ. `ಪಾಪ` ಎಂದರು ಅವರೂ. ಇಬ್ಬರೂ ನಕ್ಕೆವು. ಇದನ್ನು ಮರೆತೆನೆಂದರೆ ಹ್ಯಾಂಗ ಮರೆಯಲಿ.
ಯಂತ್ರವೂ, ರಿಪೇರಿ ಡ್ರೆಸ್ಸೂ
ಯಾರೋ ಇಬ್ಬರು ನಮ್ಮ ಕಾರ್‌ಶೆಡ್ಡಿನಲ್ಲಿ ಏನನ್ನೋ ನೋಡ ಬಯಸುವಂತೆ ಹುಡುಕಾಡುತ್ತಿದ್ದರು. ಯಾರಿವರು? ನನ್ನ ಅನುಮತಿ ಇಲ್ಲದೆ ಹೀಗೆ ತಿರುಗಾಡುತ್ತಿರುವರು ಎಂದುಕೊಂಡೆ. ಅಷ್ಟರಲ್ಲಿ ಆ ಮಹಿಳೆ ಬಂದರು ಮನೆಗೆ.
ಇವರಿಬ್ಬರು ಮೊಟ್ಟಮೊದಲಿಗೆ ತೇಜಸ್ವಿಯನ್ನು ಓದಿಕೊಂಡಿದ್ದೇ ಅಣ್ಣನ ನೆನಪಿನಲ್ಲಂತೆ. ಆನಂತರ ಇವರ ಎಲ್ಲ ಪುಸ್ತಕ ಓದಿದವರು.ಇವರಿಬ್ಬರೂ ನನಗೆ ಥ್ಯಾಂಕ್ಸ್ ಹೇಳಿದರು. ಶಿವಮೊಗ್ಗೆಯಲ್ಲಿ ಆಕೆಯ ಮಾವ ಸ್ಕೂಟರ್ ಇಟ್ಟುಕೊಂಡಿದ್ದಾರಂತೆ. ಅದರ ಬಗ್ಗೆ ತುಂಬ ಪ್ರೀತಿ ಅವರಿಗೆ. ಅಗೌರವ ಇವರಿಗೆ. ಮನೆ ಪಕ್ಕ ಕರಿ ಎಣ್ಣೆ ಬಿದ್ದು ಗಲೀಜು ಎಬ್ಬಿಸುತ್ತದೆಂದು. ಆದರೆ ಅಣ್ಣನ ನೆನಪು ಓದಿದ ನಂತರ ಸರಿಯಾದ ಸ್ಥಾನಮಾನ ಕೊಟ್ಟಿರುವರಂತೆ. ಈಗ ಸ್ಕೂಟರಿನ ಬಗ್ಗೆ ಹೆಮ್ಮೆ. ಮಾವನಿಗೆ ಸಮಾಧಾನ.
ನಾನು ಚಿಕ್ಕಂದಿನಲ್ಲಿ ನನ್ನ ಅಣ್ಣ ಯಂತ್ರಗಳನ್ನು ಮಿಲಿ ಮಿಲಿ ಮಾಡೋದನ್ನು ನೋಡಿದ್ದೆ. ಅದರ ಬಗ್ಗೆ ನನ್ನ ಗಮನ ಅಷ್ಟಕಷ್ಟೆ. ಗಂಡಸರು ಹಾಗೆ, ಹೆಂಗಸರು ಹೀಗೆ ಎಂದು ಕೊಳ್ಳುತ್ತಿದ್ದೆ. ತೇಜಸ್ವಿಗೆ ಯಂತ್ರಗಳ ಬಗ್ಗೆ ಇಷ್ಟೊಂದು ಆಸಕ್ತಿಯಿರುವುದನ್ನು ನೋಡಿ ನನಗೆ ಆಶ್ಚರ್ಯ! ಸಾಹಿತಿಗಳು, ಸಂಗೀತಾಸಕ್ತರು, ದೊಡ್ಡಮನುಷ್ಯರು ಇವರು ಇಷ್ಟೊಂದು ವಿಶಿಷ್ಟ ಇದು ಹೇಗೆ?
೧೯೬೫ರಲ್ಲಿ ಇವರು ಕಾಡು ಕೊಂಡು ಚಿತ್ರಕೂಟ ತೋಟ ಮಾಡಿದಾಗ ಮನೆಗೆ ನೀರಿನ ವ್ಯವಸ್ಥೆ ಮಾಡಬೇಕಿತ್ತು. ನೀರಿನ ಆಸರೆ ಇದ್ದದ್ದು ಸುಮಾರು ಸಾವಿರ ಅಡಿಗೂ ಮಿಗಿಲಾದ ದೂರದಲ್ಲಿ. ಹೊಂಡದಲ್ಲಿ ಹರಿಯುತ್ತಿದ್ದ ಒಂದು ಝರಿ ಮಾತ್ರ. ಮನೆಗೆ ನೀರನ್ನು ಮುಟ್ಟಿಸಲು ವಿದ್ಯುಚ್ಚಕ್ತಿಯಾಗಲಿ, ಎಂಜಿನ್ ಪಂಪಿನಿಂದಾಗಲಿ ನೀರು ಹರಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ಹೈಡ್ರಾಂ ಟೆಕ್ನಾಲಜಿಯನ್ನು ಉಪಯೋಗಿಸಿಕೊಂಡರು. ಹೈಡ್ರಾಲಿಕ್ ರಾಮ್ ಅಥವಾ ಹೈಡ್ರಾಂ ಎನ್ನುವುದು ಎಲೆಕ್ಟ್ರಿಕ್ ಅಥವಾ ಎಂಜಿನ್ ಶಕ್ತಿ ಬಳಸದೆ (ಹೊರಗಡೆಯೇ ತಿರುಗುಶಕ್ತಿ ಇಲ್ಲದೆ) ನೀರು ಎತ್ತಿಕೊಡುವ ಸಾಧನ. ರಾಮ್ ಅಂದರೆ ಒತ್ತಡದಲ್ಲಿ ಹೊಡೆಯುವುದು ಎಂದು ಅರ್ಥೈಸಬಹುದು. ಈ ಸಾಧನವು ಯಾವ ನಿರ್ವಹಣಾ ಚಾರ್ಜೂ ಕೇಳದೆ (ಅಂದರೆ ವಿದ್ಯುಚ್ಚಕ್ತಿ, ಪೆಟ್ರೋಲ್, ಡೀಸಲ್ ಚಾರ್ಜು) ಕೇಳದೆ ನಿರಂತರವಾಗಿ ಗುಲಾಮನಂತೆ ಮಾತಾಡದೆ ಕೆಲಸಮಾಡುತ್ತದೆ.
೧೯೬೬ರಲ್ಲಿ ನಮ್ಮ ಮದುವೆಯ ಸಮಯದಲ್ಲಿ ದಿನ ಬಳಕೆಗೆ ನೀರಿನ ಅಗತ್ಯ ಹೆಚ್ಚಾಗಿದ್ದುದರಿಂದ ಹೈಡ್ರಾಂ ಹತ್ತಿರದ ಅಣೆಕಟ್ಟೆಯ ಹತ್ತಿರ ಇವರ ಸ್ಕೂಟರ್ ನಿಲ್ಲಿಸಿ ಅದರ ಹಿಂದಿನ ಚಕ್ರಕ್ಕೇ ಬೆಲ್ಟ್ ಅಳವಡಿಸಿದ ಒಂದು ಸಣ್ಣ ಪಂಪ್ ಮುಖಾಂತರವೇ, ಅಳವಡಿಸಿದ ೧೨೦೦ಅಡಿ ಜಿ.ಐ. ಪೈಪ್ ಮುಖಾಂತರ ಮನೆ ನೀರಿನ ದೊಡ್ಡ ಟ್ಯಾಂಕ್‌ಗೆ ನೀರು ತುಂಬಿಸಿದ್ದರು. ಅಣ್ಣ(ಕುವೆಂಪು)ರಿಗೆ ಇದೆಲ್ಲ ಅಚ್ಚರಿ! ಸ್ಥಳಾವಕಾಶವಿಲ್ಲದಿರುವುದರಿಂದ ಹಾಗೂ ತುಂಬಾ ಟೆಕ್ನಿಕಲ್ ಆಗಿರುವುದರಿಂದ ಓದುಗನ ಆಸಕ್ತಿ ಬಗ್ಗೆ ಹೇಗೋ ಎನ್ನಿಸಿ, ಇಲ್ಲಿ ಹೈಡ್ರಾಂ ಬಗ್ಗೆ ವಿವರವಾಗಿ ಬರೆಯುತ್ತಿಲ್ಲ.
ಇವರ ಗೆಳೆಯ ಎನ್.ಡಿ.ಸುಂದರೇಶ್‌ರ ಮದುವೆ ಮಾತುಕತೆಯಾಗಬೇಕಿತ್ತು. ಅವರು ಶೋಭಾ ರವರನ್ನು ಪ್ರೀತಿಸಿದ್ದರು. ಇವರಿಬ್ಬರೂ ಡಿಗ್ರಿ ಪೂರೈಸಿದ ನಂತರ ಮನೆಯವರು ಇವರ ಮದುವೆಗೆ ತುಸು ಸಮಸ್ಯೆ ಒಡ್ಡಿದರು. ಟಸ್‌ಪುಸ್ ಮಾತು. ಬೇರೆ ವಿರೋಧವೇನಿಲ್ಲ. ಆ ಸಮಯದಲ್ಲಿ ಶಾಮಣ್ಣ ಶ್ರೀದೇವಿ ನಮ್ಮ ತೋಟಕ್ಕೆ ಬಂದಿದ್ದರು. ಎರಡನೇ ವರ್ಲ್ಡ್ ವಾರ್‌ನಲ್ಲಿ ಉಪಯೋಗಿಸಿದ ಹಳೇ ಜೀಪು ಆಗ ನಮ್ಮ ವಾಹನ. ಅದರಲ್ಲಿ ನಾವು ನಾಲ್ಕು ಮಂದಿ ಹೊರಟೆವು. ಶಿವಮೊಗ್ಗೆಗೆ(ಈ ಸುಂದರೇಶ್ ಜಮೀನು ಕೊಂಡು ಅಶೋಕನಗರ, ಭದ್ರಾವತಿಯಲ್ಲಿ ಸೆಟ್ಲ್ ಆದರು. ಮುಂದೆ ಇವರೇ ರೈತ ಮುಖಂಡರಾದವರು.)
ನಲವತ್ತು ಮೈಲಿ ಹೋಗಿ ಚಿಕ್ಕಮಗಳೂರು ತಲುಪುವಷ್ಟರಲ್ಲಿ ಜೀಪು ಕೆಟ್ಟಿತು. ಜೀಪು ಕೊಂಡ ಹೊಸತು. ಇನ್ನೂ ರಿಪೇರಿ ಮಾಡಲು ಇವರು ಕೈ ಹಾಕಿರಲಿಲ್ಲ. ಗ್ಯಾರೇಜಿಗೆ ಬಿಟ್ಟರು. ಅರ್ಜೆಂಟ್ ರಿಪೇರಿ ಆಗಬೇಕಿರುವುದನ್ನೂ ಹೇಳಿಕೊಂಡರು. ಗ್ಯಾರೇಜಿನವ ಬಾನೆಟ್ ಎತ್ತಿ ನೋಡಿದ. ಏನೇನೋ ತಿಣುಕಿದರೂ ಸ್ಟಾರ್ಟ್ ಆಗುತ್ತಿಲ್ಲ. ಇವರೂ ಕೈ ಹಾಕಿದರು. ಗಡಿಬಿಡಿ, ಶಾಮಣ್ಣ ಅತ್ಲಾಗೆ ನೋಡ್ತಾರೆ, ಇತ್ಲಾಗೆ ನೋಡ್ತಾರೆ. ಇವರಿಬ್ಬರಿಲ್ಲದೆ ಮದುವೆ ಬಗ್ಗೆ ಏನು ನಿರ್ಧಾರವಾಗುತ್ತೋ ಎಂಬ ಒತ್ತಡ ಬೇರೆ. ನಾನು ಶ್ರೀದೇವಿ ಕಣ್‌ಕಣ್ ಬಿಡೋದು. ಇಡೀ ದಿನ ಹೀಗೇ ಕಳೆಯಿತು. ಅಲ್ಲೇ ಗ್ಯಾರೇಜಿನ ಹತ್ತಿರದಲ್ಲೇ ಹೊಟೇಲೊಂದರಲ್ಲಿ ರೂಮು ಹಿಡಿದೆವು. ಸಿಕ್ಕಿದ್ದು ಒಂದೇ ಸಣ್ಣ ರೂಮು. ಅದರಲ್ಲೇ ನಾಲ್ವರೂ ಅಡಕಿಕೊಂಡು ಮಲಗಿದೆವು. ಬೆಳಿಗ್ಗೆ ಹೇಗೋ ಜೀಪು ಸ್ಟಾರ್ಟ್ ಮಾಡಿದ ಗ್ಯಾರೇಜಿನವ. ಅಲ್ಲಿಂದ ತರೀಕೆರೆ ತಲುಪುವ ಹೊತ್ತಿಗೆ ಜೀಪು ಮತ್ತೆ ನಿಂತೇ ಹೊಯ್ತು. ನಾವು ಶಿವಮೊಗ್ಗ ಬಸ್ಸು ಹಿಡಿದೆವು. ಇವರು ಮಾತ್ರ ಜೀಪಿನಲ್ಲೇ. ಶಿವಮೊಗ್ಗೆಯಿಂದ ಮೆಕ್ಯಾನಿಕ್ ಹೋದ. ರಿಪೇರಿ ಮಾಡಿಕೊಂಡು ಜೀಪು ತಂದರು. ಕಳ್ಳ ಬಡ್ಡೀ ಮಗ ಚಿಕ್ಕಮಗಳೂರಿನವನಿಗೆ ಏನೂ ಗೊತ್ತಿಲ್ಲದೆ ಸತಾಯಿಸಿದನೆಂದು ಬೈದುಕೊಂಡರು ತೇಜಸ್ವಿ. ಇಗ್ನಿಶನ್ ಟೈಮಿಂಗ್ ತೊಂದರೆಯಿಂದ ಇದೆಲ್ಲ ಪಜೀತಿ ಆಯ್ತಂತೆ.
ಇಲ್ಲಿಂದ ಮುಂದೇ ಇವರೇ ಇಡೀ ಇಂಜಿನ್ ಡೌನ್ ಮಾಡುತ್ತಿದ್ದರು. ಜೀಪಿನ ಕೆಳಗೆ ಅಡ್ಡಡ್ಡ ಮಲಗಿಕೊಂಡು ರಿಪೇರಿ ಮಾಡುತ್ತಿದ್ದರು. ಕೈಮೈಯೆಲ್ಲಾ ಮಸಿಮಯವಾಗುತ್ತಿತ್ತು. ಆಗಿನ ಇವರ ಡ್ರೆಸ್ ಬಗ್ಗೆ ಓದಿಕೊಂಡರೆ ಚೆನ್ನ. ನಮ್ಮ ಮನೆಯಲ್ಲಿ ನನಗೊಬ್ಬಳು ಸಹಾಯಕಿ ಅನೇಕ ವರ್ಷಗಳಿಂದ ಇರುವಳು. ದೇವಕಿಯೆಂದು. ಬಹಳ ಶುಭ್ರವಾಗಿ ಬಟ್ಟೆ ಒಗೆಯುವಳು. ಎಷ್ಟು ಶುಭ್ರವೆಂದರೆ ನಮ್ಮ ಮಕ್ಕಳ ಚೂಡಿದಾರದಲ್ಲಿನ ಹೂಗಳು ಮಾಯ. ಇವರ ಅಂಗಿಗಳ ಗುಂಡಿಗಳೇ ಮಾಯ. ಹಾಗೆ ಜಪ್ಪುತ್ತಾಳೆ. ಇದೆಲ್ಲ ಇವರಿಗೆ ರೇಜಿಗೆ.
ಜೀಪ್ ರಿಪೇರಿ ಮಾಡುವಾಗಂತ ನಿಕ್ಕರ್ ಅನ್ನು ಇವರೇ ಸಿದ್ಧಪಡಿಸಿಕೊಂಡಿದ್ದರು. ಇವರು ಜೀನ್ಸ್ ಟ್ರೌಸರ್ಗೆ ಮೋಹಿತರಾಗುವ ಮುಂಚೆ ವೆಲ್‌ವೆಟ್ ಕಾಡ್ರಾ ಟ್ರೌಸರ್ ಹಾಕುತ್ತಿದ್ದರು. ಈ ಟ್ರೌಸರ್‌ಗಳನ್ನು ಸಯ್ಯಾಜಿ ರಾವ್ ಸರ್ಕಲ್, ಮೈಸೂರಿನ ಹತ್ತಿರದ ದರ್ಜಿ ಕೈಲಿ ಹೊಲೆಸಿಕೊಳ್ಳುತ್ತಿದ್ದರು. ದರ್ಜಿಗಳ ಸಹವಾಸವೆಂದರೆ ರೇಜಿಗೆ. ಅವರುಗಳು ಹೊಲೆದು ಕೊಡುವುದು ಒಪ್ಪಿಗೆಯಾಗುತ್ತಲೇ ಇರಲಿಲ್ಲ. ಎಲ್ಲೋ ಬಿಗಿ, ಎಲ್ಲೋ ಸಡಿಲ. ಅದಕ್ಕೆ ತಕ್ಕ ಹಾಗೆ ಮೈ ಆಡಿಸುವುದು, ಭುಜ ಕುಣಿಸುವುದು ಅಭ್ಯಾಸವಾಗುತ್ತೆನ್ನುವುದು ಇವರ ಮತ. ಇದು ಹೌದೂ ಸಹ. ಎರಡೆರಡು ಸಲ ಅಲ್‌ಟ್ರೇಷನ್ಗೆಂದು ದರ್ಜಿ ಅಂಗಡಿಗೆ ತಿರುಗುವುದು ಇನ್ನೂ ಬೇಸರ. ಒಮ್ಮೆ ದರ್ಜಿಗೆ ನೀನು ಮೆಟ್ಟು ಹೊಲಿಯಲಿಕ್ಕೇ ಲಾಯಕ್ಕೆಂದು ಬೈದು ಬಟ್ಟೆ ಹಿಂತೆಗೆದುಕೊಳ್ಳದೆ ಬಂದಿದ್ದರು. (ಇವರದ್ದು ದೊಡ್ಡ ಸೈಜು ಬೇರೆ) ಮುಂದೆ ಸರಿ ಅಳತೆಯ ರೆಡಿಮೇಡ್ ಜೀನ್ಸ್ ಸಿಕ್ಕಿತು. ಒಳ್ಳೆ ಅಂಗಿಗಳೂ ದೊರೆತವು. ಎಲ್ಲೋ ಇರುವ ಈ ದರ್ಜಿ ಹೇಗೆ ಇಷ್ಟು ಪರ್ಫಕ್ಟ್ ಆಗಿ ಹೊಲೆಯುವನೆಂದು ಸೋಜಿಗಪಡುತ್ತಿದ್ದರು. ವೆಲ್‌ವೆಟ್ ಕಾಡ್ರಾ ಟ್ರೌಸರ್‌ಗಳು ನವೆದಂತೆನಿಸಿದಾಗ ನಿಕ್ಕರ್ ಅಳತೆಗೆ ಕತ್ತರಿಸುತ್ತಿದ್ದರು. ನನ್ನ ಸಹಾಯಕಿಯ ಒಗೆತದಿಂದ ಗುಂಡಿ, ಹೊಲಿಗೆ ಮಾಯವಾಗುತ್ತಿತ್ತು. ನಾನು ಸರಿ ಮಾಡಿಡುತ್ತಿದ್ದೆ. ಮತ್ತೂ ಹೋಗುತ್ತಿದ್ದವು. ಇದಕ್ಕೆ ಇವರು ಒಂದುಪಾಯ ಮಾಡಿದರು. ಮೀನಿನ ಗಾಳಕ್ಕೆ ಬಳಸುತ್ತಿದ್ದ ತೆಳ್ಳನೆ ನೈಲಾನ್ ದಾರದಲ್ಲಿ ಗುಂಡಿಗಳನ್ನು ಹೊಲೆದು, ಕತ್ತರಿಸಿದ ಭಾಗವನ್ನು ಅದೇ ದಾರದಲ್ಲಿ ಹೆಮ್ಮಿಂಗ್ ಮಾಡುತ್ತಿದ್ದರು. ಹೊಲಿಗೆ ಸ್ವಲ್ಪ ಒರಟೊರಟಾಗಿರುತ್ತಿತ್ತು. ಇನ್ನೂ ಒಂಚೂರು ಮುಂದೆ ಹೋಗಿ ಹೇಗೂ ರಿಪೇರಿಗೆ ತಾನೆ ನಿಕ್ಕರ್ ಒಗೆಯಲಿಕ್ಕೇ ಹಾಕುತ್ತಿರಲಿಲ್ಲ. ಪ್ರೊಫೆಷನಲ್ ಮೆಕ್ಯಾನಿಕ್ಸ್‌ಗಳಂತೆ ನಿಕ್ಕರ್ ಎಣ್ಣೆ ಹಿಡಿದಂತೆನ್ನಿಸಿದಾಗ ಬಚ್ಚಲ ಒಲೆಗೆ ಹಾಕುತ್ತಿದ್ದರು.
ಒಂದು ಸಲ ಕವಿತಾ ಲಂಕೇಶ್ ಮತ್ತು ಗೌರಿ ಲಂಕೇಶ್ ಮನೆಗೆ ಬರುತ್ತೇವೆಂದು ತಿಳಿಸಿದರು. ಕಿರಗೂರಿನ ಗಯ್ಯಾಳಿಗಳು ಸಿನೆಮಾ ಮಾಡುವುದರ ಬಗ್ಗೆ ಮಾತಾಡಬೇಕೆಂದು. ಅವತ್ತು ನನ್ನ ಮಹಾರಾಜ ಮಿಕ್ಸಿ, ಕೆಲಸ ಮಾಡುತ್ತಿದ್ದಾಗ ಕರ್ಕಶ ಸದ್ದಿನೊಂದಿಗೆ ಗಕ್ಕನೆ ನಿಂತು ಹೋಯಿತು. ಮಹಡಿ ಮೇಲೆ ಕಂಪ್ಯೂಟರಿನ ಮುಂದೆ ಕೂತು ಕೆಲಸ ಮಾಡುತ್ತಿದ್ದ ಇವರಿಗೆ ಆ ಕರ್ಕಶ ಸದ್ದಿನಿಂದಲೇ ಗೊತ್ತಾಗಿತ್ತು ಎಲ್ಲ. ಮಲಗಲು ಇವರು ಕೆಳಗೆ ಬಂದಾಗ ಸರಿರಾತ್ರಿ ಹನ್ನೆರಡೂವರೆ ಗಂಟೆ. ಆಗ ಮಿಕ್ಸಿಯನ್ನು ಬಿಚ್ಚಿ ನೋಡಿದ್ದಾರೆ. ಮೋಟಾರಿನಲ್ಲಿ ತೊಂದರೆ ಇರಬಹುದೆಂದು. ಕಾರ್ಬನ್ ಬ್ರಷ್‌ನಲ್ಲಿ ದೂಳು ಕೂತಿತ್ತಂತೆ. ಎಮರಿ ಪೇಪರ್(ಉಪ್ಪು ಕಾಗದ)ದಲ್ಲಿ ತಿಕ್ಕಿ ಕ್ಲೀನ್ ಮಾಡಿ ಹಾಕಿದ್ರು. ಕಾಂಟಾಕ್ಟ್ ಸರಿಯಾಗುವಂತೆ ಮಾಡಬೇಕಿತ್ತು. ಜೋಡಿಸಲು ನನ್ನ ಸಹಾಯ ತಗೊಂಡರು. ನನಗೆ ನಾಳೆಯ ವಿಶೇಷ ಅಡುಗೆಗೆ ತೊಂದರೆಯಾಗಬಾರದೆಂದು ಈ ಪರಿ ಕೆಲಸ ಇವರದು. (ಪ್ರಿಯ ಓದುಗ ಮಹಾಶಯರೆ, ಇವರಿಗೆ ಹೆಂಡತಿ ಮೇಲೆ ಪ್ರೀತಿ ಕಾಳಜಿ ಹೀಗೆ ವ್ಯಕ್ತವೇ ಎಂದು ಪ್ರತಿಕ್ರಿಯಿಸಬೇಡಿ. ಇಲ್ಲಿ ಇವರು ಯಂತ್ರಕ್ಕೆ ಪ್ರತಿಕ್ರಯಿಸುತ್ತಿದುದ್ದನ್ನು ಗಮನಿಸಿ)
ಕಾರಿನಲ್ಲಿ ಕೇರಳದ ಕಣ್ಣೂರಿಗೆ ಮಕ್ಕಳೊಟ್ಟಿಗೆ ಹೊರಟೆವು. ಅಪರೂಪದ ಗಿಡಗಳ, ಬೀಜಗಳ ಕಲೆಕ್ಷನ್‌ಗಾಗಿ. ಅಲ್ಲಿನ ವಿಶ್ವವಿದ್ಯಾಲಯದ ತೋಟಗಾರಿಕೆ ನೊಡೋಣೆಂದು, ಜೊತೆಯಲ್ಲಿ ಪ್ಲ್ಯಾಂಟ್ ಪೆಥಾಲಜಿಸ್ಟ್‌ರಾದ ಡಾ.ಚಂದ್ರಶೇಖರ್ ಮತ್ತು ಗೆಳೆಯ ರೀತು ಸ್ಕೂಟರಿನಲ್ಲಿ ಬಂದಿದ್ದರು. ಅವರ ಸಂಸಾರ ಕಾರಿನಲ್ಲಿ ನಮ್ಮೊಟ್ಟಿಗೆ. ಒಂದು ದೊಡ್ಡ ಎತ್ತರದ ಮರದ ಬೀಜ ಥೇಟ್ ಬೆಕ್ಕಿನ ಬಾಲದಂತೆಯೇ ನನ್ನ ಅದೃಷ್ಟಕ್ಕೆ ಸಿಕ್ಕಿ ವಿಸ್ಮಯವಾಯಿತು. ವಾಪಾಸು ಬರುವಾಗ ಮಟಮಟ ಮಧ್ಯಾಹ್ನ. ರಣರಣ ಬಿಸಿಲು, ಊರಾಚೆ, ದಾರಿ ಮಧ್ಯೆ ಕಾರು ನಿಂತಿತು. ನಾನು ನಿರ್ಯೋಚನೆಯಿಂದಿದ್ದೆ. ಇವರು ರಿಪೇರಿ ಮಾಡುವರೆಂಬ ಧೈರ್ಯ. ಉಳಿದವರಿಗೆ ಕಳವಳ. ಇವರು ಕಾರಿನಿಂದಿಳಿದು ಬಾನೆಟ್ಟು ತೆಗೆದರು. ಒಂದು ಕಡೆಯಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದರು. ಪೆಟ್ರೋಲ್ ಕಸ ಬಂದಿರಬಹುದೆಂಬ ಅನುಮಾನ ಇತ್ತು. ಅದು ಸರಿಯಾಗೇ ಫ್ಲೋ ಆಗುತ್ತಿತ್ತು. ಪಾಯಿಂಟ್ ಸೆಟ್ ಬಿಚ್ಚಿಕೊಂಡರು. ಅದನ್ನು ಉಜ್ಜಿ ಕ್ಲೀನ್ ಮಾಡಿ ಗ್ಯಾಪ್ ಅಡ್ಜಸ್ಟಮೆಂಟ್ ಮಾಡಿ ಹಾಕಿದರು. ಕೂಡಲೆ ಸ್ಟಾರ್ಟ್ ಆಯ್ತು. ಇವರು ಯಂತ್ರದ ಕಾರ್ಯ ವಿಧಾನದ ಮೂಲ ತತ್ವಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಯಂತ್ರ ರಿಪೇರಿ ಮಾಡಬೇಕಾದರೆ ಯಂತ್ರ ವೈದ್ಯರಾಗಬೇಕೆನ್ನುತ್ತಿದ್ದರು.
ನಾನು ಕಾರ್ ಡ್ರೈವ್ ಮಾಡುವುದು ಕಲಿತ ಹೊಸತರಲ್ಲಿ ನನ್ನ ತಪ್ಪುಗಳನ್ನು ತಿದ್ದುವಾಗ(ಸ್ವಲ್ಪ ಬೈಗಳದ ಜೊತೆಗೆ) ಆಯಾ ಭಾಗಗಳು ನನ್ನ ತಪ್ಪಿನಿಂದ ವೇರ್ ಔಟ್ ಆಗುವುದನ್ನೂ ತಿಳಿಸಿಕೊಡುತ್ತಿದ್ದರು. ಅಷ್ಟು ಪರಿಪೂರ್ಣತೆ ಅವರಲ್ಲಿತ್ತು. ಇವರು ಒಳ್ಳೆಯ ಚಾಲಕರೂ ಕೂಡ. ಒಂದೇ ಒಂದು ಆಕ್ಸಿಡೆಂಟ್ ಮಾಡಿರಲಿಲ್ಲ. ಅಷ್ಟೇ ಅಲ್ಲ, ಡ್ರೈವ್ ಮಾಡ್ತ ಮಾಡ್ತಾನೆ ಪುಟ್ಟ ಪುಟ್ಟ ಬಟೇರ ಮರಿಗಳು ಸಣ್ಣ ಪೊದರಿನಲ್ಲಿ ಮರೆಯಾಗಿ ಕಣ್ತಪ್ಪಿಸುವುದು ಇವರ ಕಣ್ಣಿಗೆ ಬೀಳುತ್ತಿತ್ತು. ಕೂಡಲೆ ರಿವರ್ಸ್ ಗೇರಿಗೆ ಹಾಕುತ್ತಿದ್ದರು. ಆ ಬಟೇರಗಳನ್ನು ನೋಡಿದ ಬಳಿಕವೇ ಮುಂದೆ ಸಾಗುತ್ತಿದ್ದುದು. ಇನ್ನೊಂದು ಸಲ, ನಾವು ಮಕ್ಕಳೊಟ್ಟಿಗೆ ದಾಂಡೇಲಿಗೆ ಹೋಗಿದ್ದೆವು. ಡ್ರೈವ್ ಮಾಡ್ತಾನೆ ದೊಡ್ಡಮರದ ತುಟ್ಟ ತುದಿಯಲ್ಲಿದ್ದ ಬಣ್ಣಬಣ್ಣದ ಹಾರ್ನ್‌ಬಿಲ್(ದೊಡ್ಡ ಮಂಗಾಟೆ ಹಕ್ಕಿ) ಗುರುತಿಸಿದರು. ಕಾರು ನಿಲ್ಲಿಸಿ ನಮಗೆಲ್ಲ ತೋರಿಸಿದರು. ಅಂತಹ ಚುರುಕು ಕಣ್ಣು! ಅಂತಹ ಜೀವನಾಸಕ್ತಿ! ಇಂತಹ ಲೆಕ್ಕವಿಲ್ಲದಷ್ಟು ಇವರಲ್ಲಿ.
ದಿ ಒಡೆಸ್ಸಾ ಫೈಲ್ ಬೈ ಫೆಡ್ರಿಕ್ ಫೊರ್ಸಿತ್ ಪುಸ್ತಕವನ್ನು ಇವರು ಓದಿದ್ದರು. ಸಿನೆಮಾವನ್ನೂ ನೋಡಿದ್ದರು. ಇದರಲ್ಲಿ ಒಬ್ಬ ಹುಡುಗನನ್ನು ಕೊಲ್ಲಲು ನಾಜಿ ಕಡೆಯವರು ಆದೇಶ ಕೊಟ್ಟಿರುತ್ತಾರೆ. ಅದಕ್ಕಾಗಿ ಅವನ ಕಾರಿನಲ್ಲಿ ಬಾಂಬ್ ಇಟ್ಟು, ಸರ್ಕ್ಯೂಟ್ ಪೂರ್ಣಗೊಂಡು ಅದು ಸಿಡಿಯಲು ಎರಡು ಕಾಂಟ್ಯಾಕ್ಟ್‌ಗಳನ್ನು ಕಾರಿನ ಶಾಕ್‌ಅಬ್‌ಸಾರ್ಬರ್ ಕಾಯಿಲ್ ಸ್ಪ್ರಿಂಗ್‌ಗಳ ಮಧ್ಯೆ ಇಟ್ಟಿರುತ್ತಾರೆ. ಕಾಂಟ್ಯಾಕ್ಟ್ ಬರದೆ ಬಾಂಬು ಸಿಡಿಯುವುದಿಲ್ಲ. ಅದು ಇಂಗ್ಲಿಷ್ ಕಾರು ಆಗಿತ್ತು. ಅದಕ್ಕೆ ಸಾಫ್ಟ್ ಸ್ಪ್ರಿಂಗ್ ಹಾಕಿರುತ್ತಾರೆ. ಆದರೂ ದಾರಿ ಮಧ್ಯೆ ಅಡ್ಡ ಬಿದ್ದ ಮರವನ್ನು ದಾಟಿಸುವಾಗ ಜಂಪ್ ಆಗಿ ಬಾಂಬ್ ಸಿಡಿಯುತ್ತೆ. ತೇಜಸ್ವಿ ಇದನ್ನೆಲ್ಲ ಕೂಲಂಕುಷವಾಗಿ ಗಮನಿಸುತ್ತಿದ್ದರು. ಇವರು ಹೇಳುತ್ತಿದ್ದುದು, ಕನ್ನಡದ ಬರಹಗಾರರು ಈ ರೀತಿಯಾಗಿ ವಿವರವಾಗಿ ತಿಳಿದು ಬರೆದರೆ ಒಳ್ಳೆಯದೆನ್ನುತ್ತಿದ್ದರು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ