ಈ ಕಥಾನಕದಲ್ಲಿ ಸರಣಿ ಅವಘಡಗಳು ನಡೆದರೂ ಕೊನೆವರೆಗೂ ಅದರ ಹಿಂದಿನ ಮರ್ಮವ ತಿಳಿಸದೆ ಮಳೆಗೆ ಕಾಯುವ ರೈತನಂತೆ ನೋಡುಗನ ಬಂಧಿಸಿಡುತ್ತದೆ. ತನ್ನ ತಪ್ಪಿಲ್ಲದೇ ತನ್ನ ಒಲವನ್ನು ಕಳೆದುಕೊಳ್ಳುವ ವಿಜಯ್, ಬದುಕನ್ನು ಪ್ರೀತಿಸುವುದೊಂದನ್ನು ಬಿಟ್ಟು ಇನ್ನೇನು ತಿಳಿಯದ ಭಟ್ಟರ ಜೀವನ ಒಲೆಯಲ್ಲಿ ನರ್ತಿಸುವ ಬೆಂಕಿಯ ಶಾಖಕ್ಕೆ ಸಿಲುಕಿ ನಲುಗುವುದು ಇವೆಲ್ಲವೂ ಭಾವ ಪ್ರಚೋದಕ. ಯಕ್ಷಗಾನದ ಪುಂಡು ವೇಷದಂತೆ ಓಡುವ ಕಥಾನಕದಲ್ಲಿ ಮಾತುಗಳು ಮನದಲ್ಲುಳಿಯುವಂತಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಸಂದೀಪ್‌ ಸುಂಕದ್‌ ನಿರ್ದೇಶನದ ‘ಶಾಖಾಹಾರಿ’ ಸಿನಿಮಾದ ವಿಶ್ಲೇಷಣೆ

ಬೇರೆ ಯಾರೋ ಬರೆದಂತಿದೆ ಸಾಲನು
ಬೀಸೋ ಗಾಳಿ ಮರೆತಂತಿದೆ ಮಾತನು
-ಜಯಂತ ಕಾಯ್ಕಿಣಿ

ಕಲ್ಲು ಒಡೆದರೆ ಮಣ್ಣಾಗುತ್ತದೆ, ಅದೇ ಮನಸ್ಸು ಒಡೆದರೆ ಕಲ್ಲಾಗುತ್ತದೆ. ಬದುಕಿನ ಪಯಣವೆಂಬುದು ಆಕಸ್ಮಿಕ, ಅನಿರೀಕ್ಷಿತಗಳೆಂಬ ಅಚ್ಚರಿಯ ತಿರುವುಗಳಿಗೆ ಜನ್ಮ ನೀಡುತ್ತಲೇ ಇರುತ್ತದೆ. ಇಲ್ಲಿ ನಾಳೆಯೆಂಬುದು ಪೂರ್ವ ನಿರ್ಧರಿತವಲ್ಲ. ಮಳೆ ಬರುತ್ತದೆ ಎಂದು ಉಸುರುವ ಹವಾಮಾನ ವರದಿಯಂತೆ ಭವಿಷ್ಯ. ಆ ದಿನ ಬಿಸಿಲು ತಡೆಯಿಲ್ಲದೆ ನಗಬಹುದು ಹನಿಗಳ ಇಳಿಯುವಿಕೆಗೆ ಅವಕಾಶವೇ ಇಲ್ಲದಂತೆ. ಹೀಗೆ ತಿರುಗುವ ಭೂಮಿಗೆ ಅರಿವಾಗದಷ್ಟು, ಸದ್ದಿಲ್ಲದೇ ಬದುಕುವ, ಮಾತು ದುಬಾರಿಯೆಂದು ಮೌನದಲ್ಲೇ ಸಿಲುಕಿರುವ ಜೀವ ಹಾಗೂ ಪರಿಸ್ಥಿತಿಯ ಚಕ್ರವ್ಯೂಹದ ಒಳಗೆ ಬಂಧಿಯಾಗಿ, ಹೊರ ಬರಲಾಗದೆ ತೊಳಲಾಡುವ ಬದುಕಿನ ಜೊತೆ, ವಿಧಿಯೆಂಬುದು ಕಣ್ಣ ಮುಚ್ಚಾಲೆ ಆಡಿದಾಗ ಅದು ನೀಡುವ ಆಘಾತ, ಪುಟಗಳು ಮುಚ್ಚಿದಂತೆ ಬಾಗಿಲು ಎಳೆದುಕೊಳ್ಳುವ ಬದುಕು, ಆಕಸ್ಮಿಕ ತಲ್ಲಣಗಳು ಇವೆಲ್ಲದರ ಸಂಗಮವೇ ಸಂದೀಪ್ ಸುಂಕದ್ ನಿರ್ದೇಶನದ ‘ಶಾಖಾಹಾರಿ’.

(ಸಂದೀಪ್ ಸುಂಕದ್)

ಅದು ಮಲೆನಾಡಿನ ಒಂದು ಪುಟ್ಟ ಹಳ್ಳಿ. ಮೇಳಿಗೆಯೆಂದು ನಾಮಧೇಯ. ಅಲ್ಲಿನ ಏಕೈಕ ಶುದ್ಧ ಶಾಕಾಹಾರಿ ಉಪಹಾರ ಕೇಂದ್ರ ‘ಹೋಟೆಲ್ ದುರ್ಗಾ ಪ್ರಸಾದ್’. ಅದರ ಮಾಲೀಕ, ಅಡುಗೆ ತಯಾರಕ, ವೇಟರ್ ಎಲ್ಲವೂ ಸುಬ್ಬಣ್ಣ ಭಟ್ಟರೇ. ಬಿಸಿಗೆ ಬೆವರಿ, ಸಣ್ಣ ಮಕ್ಕಳಂತೆ ನರ್ತಿಸುತ್ತಾ, ಘಾಟಿ ಇಳಿಯುವ ಗಜಗಾತ್ರದ ಟ್ರಕ್ಕಿನ ಆಕಳಿಕೆಯಂತೆ ಸದ್ದು ಮಾಡುತ್ತಾ ಉರುಳು ಸೇವೆ ಮಾಡುವ ದೋಸೆ, ಹೋಳಿಯಂದು ಮೈಯೆಲ್ಲಾ ಹಳದಿ ರಂಗು ಬಳಿದುಕೊಂಡವರಂತೆ ಕಾಣುವ ಚಿತ್ರಾನ್ನ, ಹಬೆಯಾಡುವ ಇಡ್ಲಿ, ಫ್ಲಾಸ್ಕಿನಿಂದ ಲೋಟಕ್ಕೆ ವರ್ಗಾವಣೆಯಾಗುವ ಚಹಾ ಹೀಗೆ ಚಿಕ್ಕದಾದ, ಚೊಕ್ಕದಾದ ಉಪಹಾರ ಗೃಹವದು. ಭಟ್ಟರದ್ದು ಮಾತು ಬೆಳ್ಳಿ, ಮೌನ ಬಂಗಾರ ಎಂಬಂತಹ ವ್ಯಕ್ತಿತ್ವ. ಒಗ್ಗರಣೆಗೆ ಹಾಕುವ ಬೇವು ಸೊಪ್ಪಿನಷ್ಟೇ ಮಹತ್ವ ಮಾತಿಗೆ. ಆದರೆ ಬಾನುಲಿಯು ಪ್ರದೇಶ ಸಮಾಚಾರ ಎಂದು ಉಸುರಿದಾಗಲೆಲ್ಲ ಅವರು ಹಿತ್ತಲಿಗೆ ದಾಪುಗಾಲಿಡುತ್ತಿದ್ದರು. ಅಲ್ಲೊಂದು ಬಸ್ಸು ಬೊಬ್ಬೆ ಹಾಕುತ್ತ ಬರುತಿತ್ತು. ಆ ಬಸ್ಸಿನಲ್ಲಿ ಚೂರು ಹಿಂಬದಿಯ ಕಡೆ ಕಿಟಕಿಯ ಸನಿಹ ಮುದ್ದಾದ ನಗುವೊಂದು ಕುಳಿತಿರುತಿತ್ತು. ಸುಭದ್ರೆ -ಆ ನಗುವಿನ ವಾರೀಸುದಾರೆಯ ಹೆಸರು. ಭಟ್ಟರ ಭೂತಕಾಲದ ಪ್ರಿಯತಮೆ. ಆ ತುಂಬಿದ ಗಲ್ಲದ ಮಧ್ಯೆ ಅರಳುತ್ತಿದ್ದ ಕಿರು ನಗೆಯನ್ನು ತುಂಬಿಕೊಂಡು ಬಸ್ಸು ಹೊರಟ ನಂತರ ಮತ್ತೆ ಭೂರಮೆಗೆ ಮರಳುತ್ತಿದ್ದರು ಸುಬ್ಬಣ್ಣ ಭಟ್ಟರು. ಆತ ಮಲ್ಲಿಕಾರ್ಜುನ. ಮೃಗವಧೆ ಪೋಲಿಸು ಠಾಣೆಯ ಅಧೀಕ್ಷಕ. ಉತ್ತರಕರ್ನಾಟಕದ ವ್ಯಕ್ತಿ. ಸಂಸಾರದ ಸುಳಿಯಲ್ಲಿ ಸಿಲುಕಿ ನಲುಗಿ ಹೋಗಿ, ತನ್ನ ಮೊದಲ ಛಾತಿಯನ್ನು ಕಳೆದುಕೊಂಡಿದ್ದಾರೆ. ವಿಜಯ್ ಎಂಬ ಕೊಲೆಗಾರನ ಕೇಸು ಸಾಬೀತಾಗುತ್ತಿದ್ದಂತೆಯೇ ವರ್ಗವಾಗಿ ಹೋಗಲು ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಅದೇ ಹೊತ್ತಿನಲ್ಲಿ ವಿಜಯ್ ಸ್ಟೇಷನ್‌ನಿಂದ ತಪ್ಪಿಸಿಕೊಳ್ಳುತ್ತಾನೆ. ಬೆನ್ನಟ್ಟುವ ಭರದಲ್ಲಿ ಇನ್ಸ್ಪೆಕ್ಟರ್ ಬಂದೂಕಿನಿಂದ ಹೊರಗೋಡಿದ ಕಾಡತೂಸು ವಿಜಯ್ ಕಾಲಿಗೆ ತಗುಲುತ್ತದೆ. ಆದರೆ ಆತ ಶರಣಾಗುವುದಿಲ್ಲ. ಬದಲಾಗಿ ಭಟ್ಟರ ಹೋಟೆಲಿಗೆ ಬಂದು ಆಶ್ರಯವ ಬೇಡುತ್ತಾನೆ. ಅಲ್ಲಿಂದ ಅಸಲಿ ಕಥೆ ಆರಂಭವಾಗುತ್ತದೆ. ವಿಧಿ ತನ್ನ ಲೀಲೆಯನ್ನು ಪ್ರದರ್ಶಿಸಲು ಶುರುವಿಟ್ಟುಕೊಳ್ಳುತ್ತದೆ.

ವಿಜಯ್ ತಾನು ನಿರಪರಾಧಿಯೆಂದು ಸಮರ್ಥಿಸುವ ಹಿನ್ನೆಲೆಗೆಂದು ತನ್ನ ಕಥೆಯನ್ನು ಹೇಳಿಕೊಳ್ಳುತ್ತಾನೆ. ಸ್ನೇಹಿತನ ಒತ್ತಡಕ್ಕೆ ಮಣಿದು, ಒಲವಿನ ಧಾರೆಯೆರೆದು ಅರ್ಧಾಂಗಿಯಾಗಿ ಸ್ವೀಕರಿಸಿದ ಸರಳ ಸುಂದರಿ ಸೌಗಂಧಿಕ. ಮದುವೆಯಾಗುತ್ತಲೇ BSF ನ ತನ್ನ ತರಬೇತಿಗೆ ಹೊರಡುವ ವಿಜಯ್‌ಗೆ, ಕಾಲ ಓಡುತ್ತಿದ್ದಂತೆಯೇ ಸೌಗಂಧಿಕ ಇನ್ನೊಬ್ಬನ ತೆಕ್ಕೆಗೆ ಜಾರಿರುವ ವಿಚಾರ ಅರಿವಿಗೆ ಬರುತ್ತದೆ. ಅದೇ ಚಿಂತೆಯ ಚಿತೆಯಲ್ಲಿ ಬೆಂದು, ವಿನಯ್ ಸುರಪಾನದ ಮತ್ತಲ್ಲಿ ಮನೆಗೆ ಬಂದಾಗ ಮಬ್ಬುಗತ್ತಲೆಯಲ್ಲಿ ಪತ್ನಿಯ ಕೊಲೆಯಾಗಿರುವುದು ಗಮನಕ್ಕೆ ಬರುತ್ತದೆ. ಪೊಲೀಸರು ಆಕ್ಷಣಕ್ಕೆ ವಿಜಯ್‌ನನ್ನೇ ಅಪರಾಧಿಯನ್ನಾಗಿ ಮಾಡುತ್ತಾರೆ. ಹೀಗೆ ಆತನ ಕಥೆಯ ಕೇಳಿ ಭಟ್ಟರ ಮನ ಕರಗಿ ಅಲ್ಲೇ ಕೆಲ ದಿನಗಳ ಕಾಲ ಉಳಿದು ಹೋಗುವಂತೆ ತಿಳಿಸಿ ಆರೈಕೆ ಮಾಡುತ್ತಾರೆ. ಅತ್ತ ಮಲ್ಲಿಕಾರ್ಜುನ ಮತ್ತು ತಂಡ ದಿಕ್ಕು ದೆಸೆಯ ಕಳೆದುಕೊಂಡವರಂತೆ ಧೃತಿಗೆಟ್ಟರೂ, ಹುಡುಕಾಟ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಮುಂದೆ ಭಟ್ಟರ ತಮ್ಮ, ಗೂರ್ಖ ಹೀಗೆ ಒಂದೊಂದು ವ್ಯಕ್ತಿತ್ವಗಳ ಅನಾವರಣವಾಗುತ್ತದೆ. ಇತ್ತ ಚೇತರಿಸಿಕೊಂಡ ವಿಜಯ್ ಇನ್ನೇನು ನಸುಕು ಜಾರುತ್ತಲೇ ಶಹರಕ್ಕೆ ವರ್ಗವಾಗಬೇಕು ಅಂದುಕೊಂಡವನು, ಮುಂಜಾನೆ ಏಳುವುದೇ ಇಲ್ಲ. ಅಲ್ಲಿಂದ ಅನಿರೀಕ್ಷಿತ, ನಡೆಯಬಾರದ ಸರಣಿಗಳು ಆರಂಭವಾಗುತ್ತದೆ. ಜೀವಗಳು ಆಕಸ್ಮಿಕ ಕೊಲೆಯ ರೂಪದಲ್ಲಿ ಅಂತ್ಯಗೊಳ್ಳುತ್ತವೆ. ಹೋಟೆಲಿನ ಒಲೆಯಲ್ಲಿ ಉರಿಯುತ್ತಿದ್ದ ಬೆಂಕಿಯು ಈ ಎಲ್ಲಾ ಪಾಪಗಳನ್ನು ಯಾವುದೇ ನಿರಾಕರಣೆಯಿಲ್ಲದೆ ಆಪೋಶನ ತೆಗೆದುಕೊಳ್ಳುತ್ತದೆ. ಇನ್ನಷ್ಟು ಬೇಕೆನ್ನ ಹೊಟ್ಟೆಗೆ ಎನ್ನುವಂತೆ ಬೆಂಕಿಯ ಶಾಖ ಸಂಕಲನಗೊಳ್ಳುತ್ತಲೇ ಸಾಗುತ್ತದೆ ಹೊಸ ಹೊಸ ನರ ಬಲಿಗಳ ಅರಸಿ. ಹೀಗೆ ನಡೆಯುವ ಆಕಸ್ಮಿಕ ಸಂಗತಿಗಳು ಕೊನೆಗೆ ಭಟ್ಟರು ಮತ್ತು ಇನ್ಸ್ಪೆಕ್ಟರರು ಮುಖಾಮುಖಿಯಾಗುವಂತೆ ಮಾಡುತ್ತದೆ. ಯಾಕೆ ಆ ಮುಖಾಮುಖಿ? ಈ ಸರಣಿ ಅವಘಡದಲ್ಲಿ ಭಟ್ಟರ ಪಾತ್ರವೇನು?ಅಂತ್ಯದ ಹೊತ್ತಿಗೆ ಹೋಟೆಲಿಗೆ ಬರುವ ಸುಭದ್ರಾಳಿಗೆ ಸಿಗುವ ಉರಿದ ಚೂರು ಹೊಂದಿದ್ದ ‘ಇಂತಿ ನಿನ್ನ ಪ್ರೀತಿಯ ಸುಬ್ರಮಣ್ಯ’ ಅದರ ಪೂರ್ಣ ಪಾಠ ಏನು? ಇಂತಹ ಕಠಿಣ ಪ್ರಶ್ನೆಗಳಿಗೆ ಎಳೆ ಎಳೆಯಾಗಿ ಉತ್ತರಿಸುವ/ಉತ್ತರಿಸದ ಕಥಾನಕವೇ ‘ಶಾಖಾಹಾರಿ’.

ಪತ್ತೇದಾರಿ ಉರುಫ್ ಮರ್ಡರ್ ಮಿಸ್ಟರಿ ಯಾನೆ ಕ್ರೈಮ್ ಥ್ರಿಲ್ಲರ್ ಕಥೆಗಳು ಹೊಸ ಅಡುಗೆಯoತೆ, ಸದಾ ಅಚ್ಚರಿ, ಕುತೂಹಲವನ್ನು ಕೊನೆಯವರೆಗೂ ಕಾಪಿಡುತ್ತದೆ. ಅದರೊಂದಿಗೆ ಒಂಚೂರು ಭಾವುಕತೆಯೆಂಬ ಪದಾರ್ಥವನ್ನು ಸೇರಿಸಿದರೆ ಅಡುಗೆ ಇನ್ನೊಂದು ಹಂತಕ್ಕೆ ತಲುಪಲು ನಾಂದಿಯಾಗುತ್ತದೆ. ಈ ಕಥಾನಕದಲ್ಲಿ ಸರಣಿ ಅವಘಡಗಳು ನಡೆದರೂ ಕೊನೆವರೆಗೂ ಅದರ ಹಿಂದಿನ ಮರ್ಮವ ತಿಳಿಸದೆ ಮಳೆಗೆ ಕಾಯುವ ರೈತನಂತೆ ನೋಡುಗನ ಬಂಧಿಸಿಡುತ್ತದೆ. ತನ್ನ ತಪ್ಪಿಲ್ಲದೇ ತನ್ನ ಒಲವನ್ನು ಕಳೆದುಕೊಳ್ಳುವ ವಿಜಯ್, ಬದುಕನ್ನು ಪ್ರೀತಿಸುವುದೊಂದನ್ನು ಬಿಟ್ಟು ಇನ್ನೇನು ತಿಳಿಯದ ಭಟ್ಟರ ಜೀವನ ಒಲೆಯಲ್ಲಿ ನರ್ತಿಸುವ ಬೆಂಕಿಯ ಶಾಖಕ್ಕೆ ಸಿಲುಕಿ ನಲುಗುವುದು ಇವೆಲ್ಲವೂ ಭಾವ ಪ್ರಚೋದಕ. ಯಕ್ಷಗಾನದ ಪುಂಡು ವೇಷದಂತೆ ಓಡುವ ಕಥಾನಕದಲ್ಲಿ ಮಾತುಗಳು ಮನದಲ್ಲುಳಿಯುವಂತಿದೆ. ‘ಸಂಬಂಧಗಳ ಸಾಂಗತ್ಯಗಳು ಪಾಯಸದಂತೆ. ಪಾಯಸವ ಹಾಗೆ ಇಟ್ಟಷ್ಟು ಕೆನೆ ಕಟ್ಟಿಕೊಂಡು ಹಾಳಾಗುವುದೇ ಹೆಚ್ಚು’, ‘ವಿಲನ್ ಹೇಳುವ ಕಥೆಗೆ ನಾಯಕ ಆತನೇ ಆಗಿರುತ್ತಾನೆ’ ಹೀಗೆ ಬರುವ ಹಲವು ಸಾಲುಗಳು ಅರ್ಥಗರ್ಭಿತ. ಕಥೆಯು ‘ಅಯ್ಯಪ್ಪನ್ ಕೋಶಿಯುಂ’ ನಂತೆ ಎರಡು ವ್ಯಕ್ತಿತ್ವಗಳ ನಡುವಿನ ಕದನವೆಂದು ಕಂಡರೂ, ಹಿನ್ನೆಲೆಯಲ್ಲಿ ಬರುವ ಎರಡು ಸುಂದರ ಪ್ರೇಮ, ಒಂದು ಅಪ್ಪಟ ಸ್ನೇಹ, ಜೀವನ ಪ್ರೀತಿ ಎಲ್ಲವೂ ಅದರ ಬೆಲೆಯನ್ನು ದ್ವಿಗುಣಗೊಳಿಸಿದೆ.

ಪಾತ್ರವರ್ಗದಲ್ಲಿ ಸುಬ್ಬಣ್ಣ ಭಟ್ಟರಾಗಿ ರಂಗಾಯಣ ರಘು, ಇನ್ಸ್ಪೆಕ್ಟರ್ ಆಗಿ ಗೋಪಾಲಕೃಷ್ಣ ದೇಶಪಾಂಡೆ ‘ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ’ ಎಂಬಂತೆ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಯಾವತ್ತೂ ಮಾತು, ಚೇಷ್ಟೆಗಳಿಗೆ ಸೀಮಿತವಾಗಿ ಬಿಡುತ್ತಿದ್ದ ರಂಗಾಯಣ ರಘು ಗಂಭೀರ ಪಾತ್ರವನ್ನು ಜೀವಿಸಿ, ‘ಅಭಿನಯಾಸುರ’ ಎಂಬ ಬಿರುದಿಗೆ ತಾನು ಅರ್ಹ ಎಂದು ಸಾಬೀತುಗೊಳಿಸಿದ್ದಾರೆ.

ಇನ್ನು ವಿಜಯ್ ಆಗಿ ವಿನಯ್ ಸುಂದರ ಅಭಿನಯ. ಕಿಟಕಿಯೊಳಗಿಂದ ನಗುವ ಚಂದಿರನಂತೆ ಸೆಳೆಯುವ ಸುಭದ್ರೆಯಾದ ಹರಿಣಿ ಶ್ರೀಕಾಂತ್, ಕಂಗಳಲ್ಲೇ ಮೋಡಿ ಮಾಡುವ, ಸೌಗಂಧಿಕಳಾಗಿ ಆವರಿಸಿಕೊಳ್ಳುವ ಸ್ನಿಗ್ಧ ಸುಂದರಿ ನಿಧಿ ಹೆಗಡೆ ಹಾಗೂ ಉಳಿದೆಲ್ಲಾ ಕಲಾವಿದರದು ಒಳ್ಳೆಯ ಪ್ರಸ್ತುತಿ. ಈ ಚಿತ್ರದ ಇನ್ನೊಂದು ಮುಖ್ಯಾಂಶವೇ ಮಯೂರ್ ಅಂಬೆಕಲ್ಲು ಸಂಗೀತ. ವಿಶೇಷತಃ ‘ಸೌಗoಧಿಕ’ ಹಾಡು ಶುಭಂ ನಂತರವೂ ಗುನುಗುವಿಕೆಗೆ ಕಾರಣವಾಗಿದೆ. ‘ಸುಭದ್ರೆ’ ಯ ಆಗಮನದ ಹಿನ್ನೆಲೆ ಸಂಗೀತವೂ ಸಿಹಿಗಾಳಿಯಂತೆ ಸಹಿ ಹಾಕುತ್ತದೆ. ವಿಶ್ವಜಿತ್ ರಾವ್ ಕಣ್ಣುಗಳಲ್ಲಿ ಬೆಂಕಿಯ ಕೆನ್ನಾಲಿಗೆ, ಮಲೆನಾಡಿನ ಹಾಡು ಸೊಗಸಾಗಿ ರೂಪಿತವಾಗಿದೆ. ಇವೆಲ್ಲವುದರ ಸಾರಥ್ಯ ವಹಿಸಿದ ಸೂತ್ರಧಾರ ‘ಸಂದೀಪ್ ಸುಂಕದ್’ ಅಭಿನಂದನಾರ್ಹ. ಏಕೆಂದರೆ, ಯಾವುದೇ ಕಟ್ಟುಪಾಡುಗಳಿಗೆ ತಲೆಬಾಗದೆ, ಪ್ರಯೋಗ ಮತ್ತು ಹೊಸತನದ ಕ್ರೀಯಾಶೀಲ ಯೋಚನೆ ಮತ್ತು ಯೋಜನೆಯ ಕಾರ್ಯಗತಗೊಳಿಸಿದಕ್ಕಾಗಿ. ಹಾಸ್ಯಕ್ಕೆ ಸೀಮಿತಗೊಂಡಿದ್ದ ರಂಗಾಯಣ ರಘು ಅವರ ನಟನೆಯ ಇನ್ನೊಂದು ಮಗ್ಗುಲನ್ನು ಪರಿಚಯಿಸುವ ಮೂಲಕ ತನ್ನ ಸಾರೋಟು ಸವಾರಿಯ ಶೈಲಿಯೇ ವಿಭಿನ್ನ ಎಂದು ಸಾಧಿಸಿದ್ದಾರೆ ಸಂದೀಪ್.

ಮುಗಿಸುವ ಮುನ್ನ :
ಇಲ್ಲಿ ಯಾವುದೂ ಶಾಶ್ವತವಲ್ಲ. ಬಯಸಿದಂತೆ ಬದುಕು ಸಾಗುವುದಿಲ್ಲ. ಪ್ರತಿ ಮುಂಜಾನೆ ಕಣ್ಣು ತೆರೆದೆವೆಂದರೆ ಅದೇ ಒಂದು ಅಚ್ಚರಿ ಮತ್ತು ಉಡುಗೊರೆ. ಸಾಗರದ ಯಾನದಂತಿರುವ ಬದುಕಿನಲ್ಲಿ ಅಲೆಗಳಿಗೆ ಹುಚ್ಚು ಹಿಡಿದು ಅಬ್ಬರದಿ ಬೊಬ್ಬಿರಿದು ಪಯಣಿಗನೇ ಮುಳುಗಬಹುದು. ನಾವಿರುವ ಬೋಗಿಯೇ ಹಳಿ ತಪ್ಪಬಹುದು, ಹೆಲ್ಮೆಟ್ ತೆಗೆದು ನಿಂತ ಮುಂದಿನ ಎಸೆತವೇ ಬೀಮರ್ ಆಗಿ ಬ್ಯಾಟ್ಸಮನ್‌ನ ತಲೆಯ ಒಡೆಯಬಹುದು. ಹೀಗೆ ಆಕಸ್ಮಿಕಗಳು, ಅನಿರೀಕ್ಷಿತಗಳು ಬದುಕಿನ ಅವಿಭಾಜ್ಯ ಅಂಗವಾದರೂ, ನಂಬಿಕೆಯೇ ಎಲ್ಲದಕ್ಕೂ ಮೂಲಧಾರವಾಗಿರಬೇಕು. ವಿಸ್ವಾಸವೇ ವಿಶ್ವ ಎಂಬ ಮಾತಿನಂತೆಯೇ. ಬಸವಣ್ಣರ ಸಾಲಿನಂತೆಯೇ ‘ಬಾರದು ಬಪ್ಪದು, ಬಪ್ಪದು ತಪ್ಪದು’. ಆದ್ದರಿಂದ ಕನಕದಾಸರ ‘ತಲ್ಲಣಿಸಿದರು ಕಂಡ್ಯ, ತಾಳು ಮನವೇ’ ಮಾತಿನoತೆಯೇ ಸಾಗಬೇಕು, ನಾಳೆಗಳು ನಮದೆನಿಸಿವೆ ಎನ್ನುವ ಭರವಸೆಯೊಂದಿಗೆ….