ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಆಗಿದ್ದ ಶ್ರೀ ಗೋಕಾಕ್ ಅವರು ಬಾಬಾ ಶಿಷ್ಯರಾಗಿದ್ದರು. ಅದೇರೀತಿ ರಾಜ್ಯಪಾಲರು, ಕೇಂದ್ರ ರಾಜ್ಯ ಸಚಿವರು, ಖ್ಯಾತ ವೈದ್ಯರು, ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನದಲ್ಲಿರುವವರು ಬಾಬಾ ಅವರ ಶಿಷ್ಯಗಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಸುಮಾರು ಭಕ್ತರು ತಮ್ಮ ಮಕ್ಕಳಿಗೆ ಸಾಯಿಬಾಬಾ ಹೆಸರನ್ನು ವಿವಿಧ ರೀತಿಯಲ್ಲಿ ಇಟ್ಟಿದ್ದರು. ವೈಟ್ ಫೀಲ್ಡ್‌ನಲ್ಲಿ ಬಾಬಾ ಅವರು ಆಶ್ರಮ ಸ್ಥಾಪಿಸಿದ್ದರು ಮತ್ತು ಅಲ್ಲಿ ನಡೆಯುತ್ತಿದ್ದ ಸಭೆ, ಪೂಜೆ, ಭಜನೆ ಮುಂತಾದ ಕಾರ್ಯಕ್ರಮಗಳಿಗೆ ದೇಶದ ಎಲ್ಲಾ ಭಾಗಗಳಿಂದ ಭಕ್ತರ ಸಮೂಹ ಬರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ಅರವತ್ತರ ದಶಕದ ಆರಂಭದವರೆಗೂ ಬೆಂಗಳೂರಿನಲ್ಲಿ ವಿಚಾರವಾದ ಎನ್ನುವ ಹೆಸರು ಅಷ್ಟು ಪ್ರಚಲಿತ ಇರಲಿಲ್ಲ. ಸಿಂಹಳದ ಅಬ್ರಹಾಂ ಕೊವುರ್ ಅವರ ಹೆಸರು ಮತ್ತು ಪವಾಡಗಳು ಟೊಳ್ಳು ಎನ್ನುವ ಸುದ್ದಿ, ಸುದ್ದಿ ಮಾಡಿದ್ದು ಅರವತ್ತರ ದಶಕದ ಉತ್ತರಾರ್ಧದಲ್ಲಿ. ಅವರು ಅವರು ಸೂಚಿಸುವ ಪಾರದರ್ಶಕ ರೀತಿಯಲ್ಲಿ ಶೂನ್ಯದಿಂದ ಬೂದಿ, ಒಡವೆಗಳನ್ನು ಫೂಲ್ ಪ್ರೂಫ್ ಹಿನ್ನೆಲೆಯಲ್ಲಿ ಸೃಷ್ಟಿಸಿಕೊಡುವ ಯಾರಿಗೇ ಆಗಲಿ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದರು. ಇದರ ನಂತರ ಮಂಗಳೂರಿನ ಒಬ್ಬರು ಇದೇ ರೀತಿಯ ಬಹುಮಾನ ಒಂದನ್ನು ಕೆಲವು ಷರತ್ತುಗಳ ಹೇಳಿಕೆ ಸಂಗಡ ಘೋಷಣೆ ಮಾಡಿದ್ದರು.

(ಪುಟ್ಟಪರ್ತಿ ಸಾಯಿಬಾಬಾ)

ಈ ಘೋಷಣೆಗಳಿಗೆ ಮೂಲ ಕಾರಣ ಎಂದರೆ ಪುಟ್ಟಪರ್ತಿ ಸಾಯಿಬಾಬಾ ಅವರ ಪವಾಡಗಳು. ಶೂನ್ಯದಿಂದ ಬಾಬಾ ಅವರು ಕೈ ಬೀಸಿ ಸೃಷ್ಟಿ ಮಾಡುತ್ತಿದ್ದ ಹಲವಾರು ವಸ್ತುಗಳು ಇದ್ದವು. ಅವರು ಭಕ್ತರಿಗೆ ಬರಿಕೈಯಿಂದ ವಿಭೂತಿ ಸೃಷ್ಟಿಸಿ ಕೊಡುವ, ಸ್ವಿಸ್ ಕೈಗಡಿಯಾರ ಅಲ್ಲೇ ಸೃಷ್ಟಿಸಿಕೊಡುವ, ದೇವರ ಬಂಗಾರದ ಪುಟ್ಟ ಮೂರ್ತಿಗಳು ಬಾಯಿಯಿಂದ ಭಕ್ತರಿಗೆ ಸಿಗುವ ಹಾಗೂ ಇದೇ ರೀತಿಯ ಸುಮಾರು ಪವಾಡಗಳು ಜನ ಜನಿತವಾಗಿತ್ತು. ಅಸಂಖ್ಯಾತ ಜನರು ಸಾಯಿಬಾಬಾ ಅವರ ಭಕ್ತರು ಆಗಿದ್ದರು. ಪ್ರತಿವಾರ ಮನೆಗಳಲ್ಲಿ ಸಾಯಿ ಭಜನೆ ನಡೆಯುತ್ತಿತ್ತು. ಇಂತಹ ಭಕ್ತರ ಮನೆಯಲ್ಲಿನ ಸಾಯಿಬಾಬಾ ಫೋಟೋದಿಂದ ವಿಭೂತಿ ಉದುರುವ ಸಂಗತಿಗಳು ಪ್ರತಿದಿವಸ ಸುದ್ದಿಯಾಗಿತ್ತು. ಜನ ಸಾಮಾನ್ಯರು ಈ ಪವಾಡಗಳನ್ನು ನಂಬಿದ್ದರು. ಮೈಸೂರಿನ ಹತ್ತಿರ ಒಂದು ಸಾಯಿಬಾಬಾ ಮಂದಿರದಲ್ಲಿ ಫೋಟೋ ಮೂಲಕ ವಿಭೂತಿ ಬೀಳುವುದನ್ನು ಅಲ್ಲಿನ ಮಂದಿರ ತೋರಿಸಿ ನನ್ನ ಗೆಳೆಯರು ವಿವರಿಸಿದ್ದರು. ಸಾಯಿಬಾಬಾ ಅವರಿಗೆ ಶಿಷ್ಯ ವೃಂದ ದಿನೇ ದಿನೇ ಹೆಚ್ಚುತ್ತಾ ಇತ್ತು.

ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಆಗಿದ್ದ ಶ್ರೀ ಗೋಕಾಕ್ ಅವರು ಬಾಬಾ ಶಿಷ್ಯರಾಗಿದ್ದರು. ಅದೇರೀತಿ ರಾಜ್ಯಪಾಲರು, ಕೇಂದ್ರ ರಾಜ್ಯ ಸಚಿವರು, ಖ್ಯಾತ ವೈದ್ಯರು, ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನದಲ್ಲಿರುವವರು ಬಾಬಾ ಅವರ ಶಿಷ್ಯಗಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಸುಮಾರು ಭಕ್ತರು ತಮ್ಮ ಮಕ್ಕಳಿಗೆ ಸಾಯಿಬಾಬಾ ಹೆಸರನ್ನು ವಿವಿಧ ರೀತಿಯಲ್ಲಿ ಇಟ್ಟಿದ್ದರು. ವೈಟ್ ಫೀಲ್ಡ್‌ನಲ್ಲಿ ಬಾಬಾ ಅವರು ಆಶ್ರಮ ಸ್ಥಾಪಿಸಿದ್ದರು ಮತ್ತು ಅಲ್ಲಿ ನಡೆಯುತ್ತಿದ್ದ ಸಭೆ, ಪೂಜೆ, ಭಜನೆ ಮುಂತಾದ ಕಾರ್ಯಕ್ರಮಗಳಿಗೆ ದೇಶದ ಎಲ್ಲಾ ಭಾಗಗಳಿಂದ ಭಕ್ತರ ಸಮೂಹ ಬರುತ್ತಿತ್ತು. ವೈಟ್ ಫೀಲ್ಡ್‌ಗೆ ಸಾರಿಗೆ ಸಂಪರ್ಕವನ್ನು ಚೆನ್ನಾಗಿಯೇ ಸರ್ಕಾರ ಕಲ್ಪಿಸಿತ್ತು. ಸಾಯಿಬಾಬಾ ಅವರ ಆಶ್ರಮಕ್ಕೆ ಹೋಗಿದ್ದೆ, ಅವರನ್ನು ಕೈಗೆ ಎಟುಕುವಷ್ಟು ಹತ್ತಿರದಿಂದ ನೋಡಿದೆ, ಕಾಲಿಗೆ ನಮಸ್ಕಾರ ಮಾಡಿದೆ… ಮೊದಲಾದ ಸಾಧನೆಗಳನ್ನು ಭಕ್ತರು ಅವರವರ ಗುಂಪಿನಲ್ಲಿ ಹೆಮ್ಮೆಯಿಂದ ಸಾರುತ್ತಿದ್ದರು. ಮತ್ತೂ ಕೆಲವರು ಬಾಬಾ ಅವರು ಆಕಾಶದಲ್ಲಿ ಕೈ ಬೀಸಿ ನೀಡಿದ ದೇವರ ಪುಟ್ಟ ಪ್ರತಿಮೆಗಳನ್ನು, ಉಂಗುರಗಳನ್ನು, ವಿಭೂತಿಯನ್ನು ಪ್ರದರ್ಶಿಸುತ್ತಿದ್ದರು. ಸಾಯಿಬಾಬಾ ಅವರ ಜನ ಪ್ರಿಯತೆ ದಿನೇ ದಿನೇ ಹೆಚ್ಚಿತ್ತು ಮತ್ತು ವೈಟ್ ಫೀಲ್ಡ್ ಹಾಗೂ ಪುಟ್ಟ ಪರ್ತಿ (ಇದೂ ಸಹ ಸಾಯಿಬಾಬಾ ಅವರ ನೆಲೆ) ಯಾವಾಗಲೂ ಭಕ್ತರಿಂದ ತುಂಬಿರುತ್ತಿತ್ತು. ಬೆಂಗಳೂರಿನ ಹಲವೆಡೆ ಸಾಯಿಬಾಬಾ ಭಜನಾ ಮಂದಿರಗಳು ಶುರುವಾಗಿದ್ದು, ಅಲ್ಲಿ ಭಜನೆ, ಬಾಬಾ ಪೂಜೆ ನಡೆಯುತ್ತಿತ್ತು. ಕೆಲವು ಕಡೆ ಶಿರಡಿ ಸಾಯಿಬಾಬಾ ಜತೆ ಪುಟ್ಟ ಪರ್ತಿ ಸಾಯಿಬಾಬಾ ಅವರ ಚಿತ್ರ ಸಹ ಇರುತ್ತಿತ್ತು.

ಬಾಬಾ ಮಾಡುವ ಪವಾಡಗಳು ಕೃತ್ರಿಮ ಮತ್ತು ಅವೂ manipulated ಕೃತ್ಯ ಎಂದು ಒಂದು ಸಣ್ಣ ಗುಂಪುದೊಡ್ಡ ದನಿಯಲ್ಲಿ ಕಿಡಿ ಕಾರುತ್ತಿತ್ತು. ಈ ಗುಂಪಿನಲ್ಲಿ ಹಲವು ಹೆಸರು ಮಾಡಿದ್ದವರು ಇದ್ದರು. ಡಾ. ಎಚ್ಚೆನ್ ಅವರು ಸಾಯಿಬಾಬಾ ಅವರಿಗೆ ಒಂದು ಓಪನ್ ಚಾಲೆಂಜ್ ಮಾಡಿದ್ದರು. ಶೂನ್ಯದಿಂದ ಒಂದು ಕುಂಬಳಕಾಯಿ ಸೃಷ್ಟಿಸಿಕೊಡಿ… ಇದು ಆ ಓಪನ್ ಚಾಲೆಂಜ್. ಬಾಬಾ ಇದಕ್ಕೆಲ್ಲಾ ಕೇರ್ ಮಾಡದೇ ಅವರ ಪವಾಡದಲ್ಲಿ ಮುಳುಗಿದ್ದರು. ಈ ಪವಾಡಗಳು ಮೋಸದ ಕೃತ್ಯ ಎಂದು ಕೋವೂರ್ ಭಾಷಣ ಮಾಡುತ್ತಿದ್ದರು ಮತ್ತು ಒಂದು ಪುಸ್ತಕ ಸಹ ಬರೆದಿದ್ದರು. Gods, Demons ಎಂದೇನೋ ಅದರ ಹೆಸರು. ಅದರಲ್ಲಿ ಪವಾಡಗಳು ಮಾನವ ಸೃಷ್ಟಿ, ಅದು ಮೋಸದ ಒಂದು ಅವತಾರ ಎಂದು ವಿವರಿಸಿದ್ದರು.

ಅವರೂ ಸಹ ನೆರೆದವರಿಗೆ ಆಕಾಶದಲ್ಲಿ ಕೈ ಆಡಿಸಿ ಪರಿಮಳಯುಕ್ತ ವಿಭೂತಿ ಹಂಚುತ್ತಿದ್ದರು. ನಂತರ ಈ ವಿಭೂತಿ ಸೃಷ್ಟಿ ಮಾಡಿದ್ದು ಹೇಗೆ ಎಂದು ವಿವರಿಸುತ್ತಿದ್ದರು. ಭುಜದ ಬಳಿಯ ಬ್ಯಾಗಿನಿಂದ ಒಂದು ರಬ್ಬರ್ ಕೊಳವೆ ಮುಂಗೈಗೆ ಬರುವ ಹಾಗೆ ಕಟ್ಟಿರುತ್ತಿದ್ದರು. ಒಮ್ಮೆ ಕೈ ಮೇಲೆತ್ತಿ ಕೈ ಆಡಿಸಿದರೆ ಕೊಳವೆ ಮೂಲಕ ಅಂಗೈಗೆ ಒಂದು ಹತ್ತು ಜನಕ್ಕೆ ಹಂಚುವಶ್ಟು ವಿಭೂತಿ ಬರುತ್ತಿತ್ತು..! ಸಾಯಿಬಾಬ ಅವರ ಪವಾಡಗಳು ಕೃತ್ರಿಮ ಎಂದು ಇವರು ಸಾಧಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಒಂದು ವಿಚಾರವಾದಿಗಳ ಸಂಘಟನೆ ಜನ್ಮ ತಳೆಯಿತು. ಇದು 1972/73 ರಲ್ಲಿ. ಇದರ ಉದ್ಘಾಟನಾ ಸಭೆ ನಮ್ಮ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ನಡೆಯಿತು. ಟಿಕೆಟ್ ಮೂಲಕ ಪ್ರವೇಶ ಮತ್ತು ಪ್ರೊ ಎಂ ಡಿ ನಂಜುಂಡಸ್ವಾಮಿ ಇದರ ನಾಯಕತ್ವ ವಹಿಸಿದ್ದರು. ಅವರ ಸಂಗಡ ಆಗಿನ ಸುಮಾರು ಯುವ ಲೇಖಕರು ಮುಖ್ಯವಾಗಿ ದಲಿತ ಲೇಖಕರು ಮತ್ತು ಮುಂಚೂಣಿಯಲ್ಲಿ ಹೆಚ್ಚು ಶಬ್ದ ಮಾಡುತ್ತಿದ್ದ ಸಾಹಿತಿಗಳು ಸಹ ಗುಂಪಿನಲ್ಲಿದ್ದರು. ಈ ವೇಳೆಗೆ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಪರಿಚಿತರಾಗಿದ್ದರು ಮತ್ತು ಸುಮಾರು ಯುವಕರನ್ನು ಹೊಸ ರೀತಿಯ ಯೋಚನೆಗಳಿಗೆ ಒಗ್ಗಿಸಿ ಕ್ರಾಂತಿಕಾರರನ್ನಾಗಿಸುವ ಯೋಜನೆ ಫಲ ಕೊಡುವಲ್ಲಿ ಸಿದ್ಧತೆ ನಡೆದಿತ್ತು.

(ಪ್ರೊ ಎಂ ಡಿ ನಂಜುಂಡಸ್ವಾಮಿ)

ಜರ್ಮನಿಯಲ್ಲಿ ಕಾನೂನು ವ್ಯಾಸಂಗ ಮಾಡಿ ಬಂದಿದ್ದ ಅವರು ಯುವಕರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತಿದ್ದರು. ಟೌನ್ ಹಾಲ್ ಹಿಂಭಾಗದ ಮಿಷನ್ ರಸ್ತೆಯಲ್ಲಿನ ಹಾವನೂರು ಕಾಲೇಜಿನಲ್ಲಿ ಇವರು ಕಾನೂನು ಪಾಠ ಮಾಡುತ್ತಿದ್ದರು. ಅಂತಾರಾಷ್ಟ್ರೀಯ ಕಾನೂನು ಇವರ ವಿಶೇಷತೆ. ಕಾಲೇಜು ಬಿಟ್ಟು ಮಿಕ್ಕ ಸಮಯದಲ್ಲಿ ಸುಬೇದಾರ್ ರಸ್ತೆಯಲ್ಲಿನ ರಾಮಕೃಷ್ಣ ಲಾಡ್ಜ್‌ನಲ್ಲಿ ಇವರು ಕೂಡುತ್ತಿದ್ದರು. ಆಗ ಈ ಲಾಡ್ಜ್‌ನ ಮುಂದಿನ ಪ್ರವೇಶದಲ್ಲಿ ದೊಡ್ಡ ಖಾಲಿ ಜಾಗ ಇದ್ದು ಒಂದು ಅಸ್ಬೆಸ್ಟಾಸ್ ಛಾವಣಿ ಹೊದಿಸಿದ್ದರು. ಅದರ ಕೆಳಗೆ ಬೆತ್ತದ ಕುರ್ಚಿಗಳು. ಇಲ್ಲಿ ಸುಮಾರಾಗಿ ಉತ್ತರ ಕರ್ನಾಟಕದ ಆಗಿನ ಎಂ ಎಲ್ ಎ ಗಳು ಭೇಟಿ ನೀಡುತ್ತಿದ್ದರು. ನಂಜುಂಡಸ್ವಾಮಿ ಅಲ್ಲಿ ಕೂತು ತಮ್ಮ ಶಿಷ್ಯರು, ರೈತ ಸಂಘದವರು ಹಾಗೂ ಯುವಕರನ್ನು ಭೇಟಿ ಮಾಡುತ್ತಿದ್ದರು. ಅವರ ಆಕರ್ಷಣೆಯ ಹಲವು ಆಯಾಮದಲ್ಲಿ ನನಗೆ ಮುಖ್ಯವಾಗಿ ಕಾಣಿಸುತ್ತಾ ಇದ್ದದ್ದು ಅವರ ಕೋಪ ರಹಿತ ಮಾತು ಮತ್ತು ಅಚ್ಚ ಕನ್ನಡದಲ್ಲಿ ಅವರು ತಮ್ಮ ಮನಸು ಬಿಚ್ಚಿಡುತ್ತಿದ್ದ ರೀತಿ. ಜತೆಗೆ ಅವರ ವಿಚಿತ್ರವಾದ ಗಡ್ಡ. ಅದು ಹೇಗೆ ಹೇಗೋ ವಿಚಿತ್ರವಾಗಿ ಶೇವ್ ಮಾಡಿರುತ್ತ ಇದ್ದ ಅವರ ಗಡ್ಡ ನೋಡುತ್ತಾ ಎಷ್ಟೋ ಸಲ ಅದು ಹೇಗೆ ಬ್ಲೇಡ್ ಅಲ್ಲೆಲ್ಲಾ ಸಂಚರಿಸುತ್ತದೆ ಮತ್ತು ಗಡ್ಡ ಹೀಗೆ ಶೇಪ್ ತರುವಲ್ಲಿ ಎಷ್ಟು ಸಮಯ ಹಿಡಿಯಬಹುದು, ಅದು ಹೇಗೆ ಬರೀ ಒಂದು ಗಡ್ಡ ಶೇಪ್ ತರಲು ಇಷ್ಟೊಂದು ಸಮಯ ಹೊಂದಿಸುತ್ತಾರೆ… ಮುಂತಾದ ಯೋಚನೆಗಳು ತಲೆ ತುಂಬಿ ಹೋಗುತ್ತಿತ್ತು. ನನ್ನ ಸಂಗಡ ನನ್ನ ಗೆಳೆಯ ನಟರಾಜ ಸಹ ಇರುತ್ತಿದ್ದ.

ನಟರಾಜನ ಮೂಲಕವೇ ನಂಜುಂಡಸ್ವಾಮಿ ನನಗೆ ಗೊತ್ತಾಗಿದ್ದು. ಆಗಿನ ಪ್ರಧಾನಿ ಇಂದಿರಾಗಾಂಧಿ ನಂತರ ಯಾರು ಎಂದು ಚಿಂತನ ಮಂಥನ ನಡೆಸುವ ಒಂದು ಸಮಾಜವಾದಿಗಳ ಗುಂಪು ಏರ್ಪಡಿಸಿದ ಒಂದು ಸೆಮಿನಾರ್‌ಗೆ ನಟರಾಜ ಹೋಗಿದ್ದ. ಅಲ್ಲಿ ನಂಜುಂಡಸ್ವಾಮಿ ಒಂದು ಕ್ಲಾಸ್ ತೆಗೆದುಕೊಂಡಿದ್ದರು ಮತ್ತು ಪರಿಚಯ ಆಗಿದ್ದರು. ಅವನ ಜತೆ ಕಾಫಿ ಕುಡಿಯಲು ರಾಮಕೃಷ್ಣ ಲಾಡ್ಜ್‌ಗೆ ಹೋಗಿದ್ದಾಗ ನಂಜುಂಡಸ್ವಾಮಿ ಅವರ ಪರಿಚಯ ಆಗಿತ್ತು. ಸುಮಾರು ಎರಡು ವರ್ಷ ಅವರ ಸಂಗಡ ಬೈ ಟೂ ಕಾಫಿ ಹೀರಿದ ನೆನಪು ನನ್ನದು. ಆಗಿನ ವೆರಿ ಸ್ಟ್ರಾಂಗ್ ಸಿಗರೇಟು ಅನಿಸಿದ್ದ ಚಾರ್ಮಿನಾರ್ ಸೇದುತ್ತ ಸೇದುತ್ತಾ ನಂಜುಂಡ ಸ್ವಾಮಿ ತಮ್ಮ ವಿಚಾರಧಾರೆ ಹರಿಸುತ್ತಿದ್ದರು. ಅವರನ್ನು ಭೇಟಿ ಮಾಡಲು ಹಲವು ಆಗಿನ ಬಡ್ಡಿಂಗ್ ಸಾಹಿತಿಗಳು ಸಹ ಬರುತ್ತಿದ್ದರು. ಲಂಕೇಶ್ ಮತ್ತು ತೇಜಸ್ವಿ, ಮುಂದೆ ರೈತ ಸಂಘದ ಚುಕ್ಕಾಣಿ ಹಿಡಿದ ಹಲವು ಪ್ರಮುಖರನ್ನು ಅವರ ಸಂಗಡ ನೋಡಿದ್ದೆ. ತೇಜಸ್ವಿ ಆಗತಾನೇ ಅವರ ಒಂದು ಕಥಾ ಸಂಕಲನ ತಂದ ನೆನಪು. ತೇಜಸ್ವಿ ಅವರ ಗಡ್ಡ ಆಗ ಹೇಗಿತ್ತು ಅಂದರೆ ಗಲ್ಲದ ಗುಳಿ ಬೀಳುವ ಜಾಗದಲ್ಲಿ ಪುಟ್ಟ ಕೂದಲ ಗುಂಪು, ಅಷ್ಟೇ. ನಂಜುಂಡ ಸ್ವಾಮಿ ಚಾರ್ಮಿನಾರ್ ಹತ್ತಿಸಿ ಮೂಗಿನಲ್ಲಿ ಹೊಗೆ ಬಿಡುತ್ತಾ ಇದ್ದರೆ ಮಿಕ್ಕವರು ಅವರವರ ಬ್ರಾಂಡ್ ಹತ್ತಿಸುತ್ತಿದ್ದರು. ಡಾ. ಅನಂತಮೂರ್ತಿ ಅವರ ಭಾರತೀಪುರ ಕಾದಂಬರಿಯಲ್ಲಿ ಒಂದು ಕ್ರಾಂತಿಕಾರಿ ಪಾತ್ರದ ಚಿತ್ರಣ ಇದೆ. ಅದರಲ್ಲಿ ಅವನು ದಲಿತರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಪ್ರೇರೇಪಿಸುತ್ತಾನೆ. ಇವನ ಮಾತು ಕತೆ ಸಿದ್ಧಾಂತ ಇವೆಲ್ಲ ನಂಜುಂಡ ಸ್ವಾಮಿ ಅವರದ್ದು ಎಂದು ಗೆಳೆಯರು ಹೇಳುತ್ತಿದ್ದರು. ಈಗಲೂ ಭಾರತೀಪುರ ಹಿಡಿದು ಕೂತರೆ ನಂಜುಂಡ ಸ್ವಾಮಿ ಚಿತ್ರ ಕಣ್ಣೆದುರು ಬರುತ್ತೆ.

ಕರ್ನಾಟಕ ವಿಚಾರವಾದಿಗಳ ಸಂಘ ಎನ್ನುವ ಹೆಸರಲ್ಲಿ ಉದ್ಘಾಟನಾ ಸಭೆ ನಡೆದದ್ದು ಮತ್ತು ಟಿಕೆಟ್ ಸಹ ಈ ಸಂಘಟನೆಯ ಹೆಸರಿನಲ್ಲಿ ಮಾರಾಟ ಆಯಿತು. ನಾನೂ ಸಹ ಆ ಸಭೆಯಲ್ಲಿ ಭಾಗವಹಿಸಿದ್ದೆ. ಅಂದಿನ ನೆನಪು ಈಗಲೂ ನನಗೆ ಹಸಿರು ಹಸಿರು. ತಮಿಳುನಾಡಿನ ದ್ರಾವಿಡ ಕಳಗಂ ನಾಯಕ ವೀರಮಣಿ ಹಾಗೂ ತಮಿಳು ನಾಡಿನ ಸುಮಾರು ಕಳಗಂ ನಾಯಕರು ಈ ಸಭೆಯಲ್ಲಿ ಭಾಗಿಗಳು. ಕೆಲವು ಕನ್ನಡ ಸಾಹಿತಿಗಳೂ ಸಹ ಸಭೆಯಲ್ಲಿ ಭಾಗವಹಿಸಿದ್ದರು. ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಎನ್ನುವ ಅತ್ಯುಗ್ರ ವಿಚಾರವಾದಿ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು. ಪೆರಿಯಾರ್ ಸ್ವಾಮಿ ತಮಿಳುನಾಡಿನ ವಿಚಾರವಾದಿ ಮತ್ತು ಹಿಂದೂ ಧರ್ಮದಲ್ಲಿನ ಹಲವು ಸಾವಿರ ಸಂಗತಿಗಳು ಅವರ ಭಾಷಣದ ವಸ್ತು. ಮಾತಿಗೆ ನಿಂತರೆ ಓತಪ್ರೋತವಾಗಿ ದೇವರ, ಭಕ್ತರ ಮೇಲೆ ಭೀಕರ ಭಾಷಣ! ಬಹುಶಃ ಈ ಕಾರಣದಿಂದಲೇ ಅವರಿಗೆ ಹಿಂಬಾಲಕರ ತಂಡ ಇತ್ತು.

ತಮಿಳುನಾಡಿನಲ್ಲಿ ಇವರ ಭಾಷಣಗಳಿಂದ ಬಹಳ ಹೆಸರುವಾಸಿ ಆಗಿದ್ದರು. ಟೌನ್ ಹಾಲಿನ ಸಭೆಯಲ್ಲಿ ಭಾಗವಹಿಸಿದಾಗ ಅವರಿಗೆ ಆಗಲೇ ತುಂಬಾ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯ ಮತ್ತು ಇನ್ಯಾವುದೋ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ವೇದಿಕೆಯ ಮೇಲೆ ಅವರನ್ನು ಅಡ್ಡ ಅಡ್ಡವಾಗಿ ಮಂಚದ ಮೇಲೆ ಮಲಗಿಸಿದ್ದರು. ಅವರ ಮಂಚದಿಂದ ಕೆಲವು ಪ್ಲಾಸ್ಟಿಕ್ ಕೊಳವೆಗಳು ಆಚೆ ಹೊರಚಾಚಿದ್ದು ಅಲ್ಲಿಂದ ಹೊರಬರುವ ದ್ರವ ಶೇಖರಣೆ ಆಗಲು ಒಂದು ಪಾರದರ್ಶಕ ಚೀಲ ಸಭಿಕರಿಗೆ ಕಾಣುವ ಹಾಗೆ ಇತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡಿದ ಯಾರಿಗೇ ಆಗಲಿ ಈ ವಯಸ್ಸಿನಲ್ಲೂ ಸಹ ತಾನು ನಂಬಿದ ಸಿದ್ಧಾಂತಗಳಿಗೆ ಹೋರಾಟ ಮಾಡುತ್ತಿರುವ ವ್ಯಕ್ತಿ ಅನಿಸಿ ಅನುಕಂಪ ಉಕ್ಕಿ ಹರಿಯಬೇಕು ಅಂತಹ ವ್ಯವಸ್ಥೆ ಅದು. ಸಭೆ ಆರಂಭಕ್ಕೆ ಇನ್ನೂ ಕೊಂಚ ಸಮಯ ಇರಬೇಕಾದರೆ ಒಂದು ಹತ್ತು ಹದಿನೈದು ಯುವಕರ ಗುಂಪು ಟೌನ್ ಹಾಲ್ ಹೊರಗೆ ಅದೇನೋ ಗದ್ದಲ ಮಾಡಿದರು. ಕೂಗಾಟ ಯಾಕೆ ಎಂದು ತಿಳಿಯುವಷ್ಟರಲ್ಲಿ ಒಳಗಡೆ ಇದ್ದ ಒಂದು ಗುಂಪು ಬ್ರಾಹ್ಮಣರಿಗೆ ಧಿಕ್ಕಾರ ಬ್ರಾಹ್ಮಣರಿಗೆ ಧಿಕ್ಕಾರ ಬ್ರಾಹ್ಮಣರಿಗೆ ಧಿಕ್ಕಾರ ಎಂದು ಕೂಗಲು ಆರಂಭಿಸಿತು. ಯಾವ ಕೂಗಿಗೆ ಈ ಧಿಕ್ಕಾರ ಎನ್ನುವುದು ಅರ್ಥ ಆಗಲಿಲ್ಲ. ಈ ಬ್ರಾಹ್ಮಣರಿಗೆ ಧಿಕ್ಕಾರ ಧಿಕ್ಕಾರ ಕೂಗುತ್ತಿದ್ದ ಗುಂಪಿನ ಮುಂದೆ ನನ್ನ ಸಹೋದ್ಯೋಗಿ ಭಾರತೀಯ ನಿಂತಿದ್ದ. ಇವನು ಅಲಸೂರಿನ ಕಡೆಯ ನಿವಾಸಿ ಮತ್ತು ಅಲ್ಲಿನ ತಮಿಳು ಸಂಘದ ಆಕ್ಟೀವ್ ಸದಸ್ಯ ಎಂದು ಗೊತ್ತಿತ್ತು. ಅವನ ಜತೆ ಬ್ರಾಹ್ಮಣರಿಗೆ ಧಿಕ್ಕಾರ ಎಂದು ಕೂಗುತ್ತಿದ್ದ ಗುಂಪು ಸಹ ತಮಿಳರ ಗುಂಪು ಎಂದು ಅವರ ವೇಷ ಭೂಷಣಗಳನ್ನು ನೋಡಿ ಹೇಳಬಹುದಾಗಿತ್ತು.

ಈಗ ಮರೆಯುವ ಮುನ್ನ ಭಾರತೀಯನ ವಿಚಾರ ಹೇಳಿಬಿಡುತ್ತೇನೆ. ನನ್ನ ಸಹೋದ್ಯೋಗಿ ಈತ. ಇವನ ಮೊದಲಿನ ಹೆಸರು ಥಾಮಸ್ ಅಂತ. ಮಾರ್ಕ್ಸ್ ಪ್ರಭಾವದ ಮೇರೆಗೆ ದೇಶದ ಎಲ್ಲರೂ ಒಟ್ಟಿಗೆ ಮುನ್ನಡೆಯುವುದಕ್ಕೆ ನಮ್ಮಲ್ಲಿನ ಸಾವಿರಾರು ವರ್ಷಗಳ ಜಾತಿ ವ್ಯವಸ್ಥೆಯೇ ಮೂಲ ಕಾರಣ ಎಂದು ಬಲವಾಗಿ ನಂಬಿದ್ದವನು. ನನ್ನ ವಯಸ್ಸಿನ ಕೆಲವರದ್ದು ಸಹ ಇದೇ ಯೋಚನಾ ಧಾಟಿ ಇದ್ದದ್ದರಿಂದ ಅವನು ನಮಗೆ ಹತ್ತಿರ ಆಗಿದ್ದ. ದೇಶದ ಸಮಸ್ಯೆಗಳನ್ನು ಚರ್ಚಿಸಲು ಆಗಾಗ ನನ್ನ ಕೆಲಸದ ತಾಣಕ್ಕೆ ಭೇಟಿ ನೀಡಿ ವಿಚಾರ ವಿನಿಮಯ, ಬ್ರಾಮಿನ್ ಬಗ್ಗೆ ದ್ವೇಷ, ಕೋಪ ಇವುಗಳನ್ನು ಪ್ರದರ್ಶಿಸುತ್ತಿದ್ದ. ಆಗಿನ ಮತ್ತು ಈಗಿನ ಪೀಳಿಗೆಯವರಲ್ಲಿನ thoght process ಪ್ರಕಾರ ಜಗತ್ತಿನ ಪ್ರತಿಯೊಂದು ಪ್ರಾಬ್ಲಂಗಳಿಗೂ ಬ್ರಾಹ್ಮಣರೇ ಕಾರಣ ಎನ್ನುವ ನಂಬಿಕೆ ಆಳವಾಗಿ ಬೇರೂರಿತ್ತು, ನಮ್ಮ ಹಾಗೆಯೇ. ಅವನ ಇನ್ನೊಂದು thinking ಅಂದರೆ ನಮ್ಮ ಹೆಸರುಗಳಿಂದ ನಮ್ಮ ಜಾತಿ ಯಾವುದು ಅಂತ ತಿಳಿಯುವ ಹಾಗೆ ಬ್ರಾಹ್ಮಣ ವ್ಯವಸ್ಥಿತವಾಗಿ ಪಿತೂರಿ ಮಾಡಿದ್ದಾನೆ, ಅದರಿಂದ ಹೊರಗೆ ಬರಬೇಕು ಅನ್ನುವುದು! ನಿನ್ನ ಹೆಸರು ನೋಡು, ಹೆಸರು ಹೇಳಿದ ಕೂಡಲೇ ನೀನು ಹಿಂದೂ ಅಂತ ಗೊತ್ತಾಗುತ್ತೆ, ನಿನ್ನ ಜತೆ ಹತ್ತು ನಿಮಿಷ ಮಾತಾಡಿದ್ರೆ ನೀನು ತುಳಿತಕ್ಕೆ ಒಳಗಾದವನು ಅಲ್ಲ ಅಂತ ಗೊತ್ತಾಗುತ್ತೆ, ನಿನ್ನ ಜತೆ ಊಟಕ್ಕೆ ಕೂತರೆ ನೀನು ಪಕ್ಕಾ ಮೇಲು ಜಾತಿಯವನು ಹಾಗೂ ಬೂರ್ಜವಾ ಅಂತ ಗೊತ್ತಾಗುತ್ತೆ.. ಅಂತ ನಮ್ಮ ಬುಡಕ್ಕೆ ತರೋವನು. ಈ ಬಗ್ಗೆ ಚರ್ಚೆ ಆದಾಗಲೆಲ್ಲ ಅವನಿಗೆ ತಮಾಷೆ ಮಾಡುತ್ತಿದ್ದೆ. ನೀನು ಮೊದಲು ಮಿಕ್ಕವರಿಗೆ ಒಂದು ದಾರಿ ತೋರಿಸು. ಮೊದಲು ನಿನ್ನ ಹೆಸರು ಚೇಂಜ್ ಮಾಡ್ಕೋ, ನಿನ್ನ ಹೆಸರು ಕೇಳಿದ ಕೂಡಲೇ ನಿನ್ನ ಜಾತಿ ಪಂಗಡ, ನಿನ್ನ ಮೂಲ, ನೀನು ಹೋಗುವ ಚರ್ಚು (ಅವನು ಚರ್ಚಿಗೆ ಹೋಗುತ್ತಿದ್ದನೋ, ಇಲ್ಲವೋ ತಿಳಿಯದು) ಇವೆಲ್ಲಾ ತಿಳಿದು ಹೋಗುತ್ತೆ.. ಅಂತ… ಸುಮಾರು ಸಲ ಈ ಚರ್ಚೆ ಆಗಿತ್ತು ಮತ್ತು ಅವತ್ತೇ ಅಂತಹ ಚರ್ಚೆಯನ್ನು ಮರೆಯುತ್ತಲೂ ಇದ್ದೆವು. ಒಂದು ಎರಡು ಮೂರು ದಿವಸ ರಜೆ ನಂತರ ಕೆಲಸಕ್ಕೆ ಬಂದ. ಏನು ಥಾಮಸ್ ಇಷ್ಟು ದಿವಸ ಕಾಣಲಿಲ್ಲ… ಅಂದೆ.

ಆಗಿನ ಸುಮಾರು ಯುವ ಲೇಖಕರು ಮುಖ್ಯವಾಗಿ ದಲಿತ ಲೇಖಕರು ಮತ್ತು ಮುಂಚೂಣಿಯಲ್ಲಿ ಹೆಚ್ಚು ಶಬ್ದ ಮಾಡುತ್ತಿದ್ದ ಸಾಹಿತಿಗಳು ಸಹ ಗುಂಪಿನಲ್ಲಿದ್ದರು. ಈ ವೇಳೆಗೆ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಪರಿಚಿತರಾಗಿದ್ದರು ಮತ್ತು ಸುಮಾರು ಯುವಕರನ್ನು ಹೊಸ ರೀತಿಯ ಯೋಚನೆಗಳಿಗೆ ಒಗ್ಗಿಸಿ ಕ್ರಾಂತಿಕಾರರನ್ನಾಗಿಸುವ ಯೋಜನೆ ಫಲ ಕೊಡುವಲ್ಲಿ ಸಿದ್ಧತೆ ನಡೆದಿತ್ತು.

ನಾನು ಈಗ ಥಾಮಸ್ ಅಲ್ಲ ಅಂದ. ಕಕ್ಕಾಬಿಕ್ಕಿಯಾಗಿ ಅವನ ಮುಂದಿನ ಮಾತಿಗೆ ಕಾದೆ. ನನ್ನ ಹೆಸರು ಬದಲಾಯಿಸಿದೆ ಮೊನ್ನೆ ಅಂದ. ಏನಂತ ಬದಲಾಯಿಸಿದೆ…. ಅಂತ ಪ್ರಶ್ನೆ ಹಾಕಿದೆ.

ಇನ್ಮೇಲೆ ನಾನು ಭಾರತೀಯ. ಭಾರತೀಯ ಅನ್ನೋ ಹೆಸರು ಹಿಡಿದೇ ಕೂಗಬೇಕು ನನ್ನ…. ಅಂದ!

ಅವನ ಉತ್ಕಟವಾದ ಬದ್ಧತೆ ಬಗ್ಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೆಚ್ಚುಗೆ ಹುಟ್ಟಿತು. ಆದರೂ ಮನಸಿನ ಮತ್ತೊಂದು ಮೂಲೆಯಲ್ಲಿದ್ದ ವಾನರ ಕೂಡಲೇ ಉತ್ತರ ಕೊಡ್ತು. ಭಾರತೀಯ ಅಂದರೆ ನೀನು ಇಂಡಿಯನ್ ಅಂತ ಆಗ್ತಿಯಾ. ಜಾತಿ ಮತ ಭಾಷೆ ಲಿಂಗ ರಾಷ್ಟ್ರೀಯತೆ ಇವೆಲ್ಲಾ ಈ ಒಂದು ಹೆಸರಲ್ಲೇ ಅಡಗಿ ಬಿಟ್ಟಿದೆ ಅಂದಿತು ವಾನರ. ಈಗ ನೀನು ಇನ್ನೂ ಜಾಸ್ತಿ ನಿನ್ನ ಕೋಶದ ಒಳಗೆ ಹುದುಗಿದೆ ಅಂತ ವಾನರ ಷರಾ ಹಾಕಿತು. ಅದು ಹೇಗೆ ಅಂದ. ಭಾರತೀಯ ಅಂದರೆ ಮುಗೀತು, ನಿನ್ನ ಹುಟ್ಟು, ನಿನ್ನ ಬೆಳವಣಿಗೆ, ನಿನ್ನ ಹಿನ್ನೆಲೆ, ನಿನ್ನ ಸಮಾಜ, ನಿನ್ನ ಆರ್ಥಿಕ ಸ್ಥಿತಿ ಇವೆಲ್ಲಾ ಬಟಾ ಬಯಲು ಆಗಿಬಿಡ್ತು ಅಂತ ಅವನ ತಲೆ ಕೆಡಿಸಿ ನೀನು ವಿಶ್ವೀಯ ಅಂತ ಇಟ್ಕೊಬೇಕಿತ್ತು ನಿನ್ನ ಹೆಸರನ್ನ… ಅಂತ ತನ್ನ ಒಪಿನಿಯನ್ ಕೊಟ್ಟು ವಾನರ ಮೂಲೆ ಸೇರಿತು. ನಾನು ರಿಟೈರ್ ಆಗುವ ಸ್ವಲ್ಪ ಮೊದಲು ಇವನೂ ರಿಟೈರ್ ಆದ. ಒಂದು ಟ್ರೇಡ್ ಯೂನಿಯನ್‌ನ ಪುಟ್ಟ ಲೀಡರ್ ಸಹ ಆಗಿ ಮಾರ್ಕ್ಸ್ ಚಿಂತನೆ ಹಬ್ಬಿಸುತ್ತಿದ್ದ..

ಬ್ರಾಹ್ಮಣರಿಗೆ ಧಿಕ್ಕಾರದ ಘೋಷಣೆ ಬಗ್ಗೆ ನನಗೆ ಅನಿಸಿದ್ದು. ಅದು ಒಂದು ಸ್ಟೇಜ್ ಮ್ಯಾನೇಜ್ ಮಾಡಿದ್ದ ಸಂಗತಿ ಎಂದು. ಮುಂದೆ ನಾವೇ ಸಭೆ ನಡೆಸಬೇಕಾದರೆ ಈ ರೀತಿಯ ಶೋ ನಡೆಯುತ್ತಿತ್ತು, ಜನಾಕರ್ಷಣೆ ಮತ್ತು ಪ್ರಚಾರಕ್ಕಾಗಿ. ಇದಕ್ಕೆ ಕೊಂಚ ಪ್ರಿ ಪ್ಲಾನ್ ಬೇಕಾಗುತ್ತೆ ಅಷ್ಟೇ!

(ಪೆರಿಯಾರ್)

ಪೆರಿಯಾರ್ ಬಗ್ಗೆ ಹೇಳುತ್ತಿದ್ದೆ; ಪೆರಿಯಾರ್ ಅವರನ್ನ ಸ್ಟೇಜ್ ಮೇಲೆ ಅಡ್ಡಡ್ಡ ಮಲಗಿಸಿದ್ದರು. ಅವರ ಭಾಷಣದ ಸರದಿ ಬಂದಾಗ ಅವರನ್ನ ನಿಲ್ಲಿಸಿ ಅವರ ಹಿಂದೆ ಒಂದು ಕುರ್ಚಿ ಇಟ್ಟು ಅವರನ್ನ ಕೂಡಿಸಿದರು. ಅವರ ಮುಂದೆ ಮೈಕ್ ಇಟ್ಟರು. ಮಾಸಲು ಬಿಳೀ ಬಣ್ಣದ ದಟ್ಟೀ ಪಂಚೆ ಮತ್ತು ಅರೆ ತೋಳಿನ ದೊಗಲೆ ಬಿಳೀ ಶರ್ಟು ಅವರ ಡ್ರೆಸ್. ಎದೆ ತನಕ ಇಳಿ ಬಿದ್ದಿದ್ದ ಬಿಳಿಯ ಗಡ್ಡ. ಹುದುಗಿದ್ದ ಕಣ್ಣು ಅದಕ್ಕೆ ದಪ್ಪನೆ ಕನ್ನಡಕ. ಕನ್ನಡಕಕ್ಕೆ ಇದ್ದ ಕರೀ ಕಟ್ಟು ಮುಖಕ್ಕೆ ಅದೇನೋ ಕಳೆ ಕೊಟ್ಟಿತ್ತು. ಅವರ ಆರೈಕೆಗೆ ಒಬ್ಬರು ಮಹಿಳೆ ಸಹ ಇದ್ದರು. ಅವರು ಯಾರು ಅಂತ ನನಗೆ ತಿಳಿಯದು. ಪೆರಿಯಾರ್ ತನ್ನ ಮಗಳನ್ನೇ ಮದುವೆ ಆಗಿದ್ದಾನೆ ಎಂದು ವಿರೋಧಿ ಗುಂಪು ಹೇಳಿದ್ದು ಕೇಳಿದ್ದೆ (ಪೆರಿಯಾರ್ ಹೆಣ್ಣುಕೂಸನ್ನು ದತ್ತು ತೆಗೆದುಕೊಂಡು ಬೆಳೆಸಿದರು ಮತ್ತು ಅದೇ ಹುಡುಗಿಯನ್ನು ಮದುವೆ ಆದರು ಎಂದು ವಿಕಿಪೀಡಿಯ ಹೇಳುತ್ತೆ). ಪೆರಿಯಾರ್ ಕೂತೇ ಭಾಷಣ ಆರಂಭಿಸಿದರು. ಭಾಷಣ ತಮಿಳು ಭಾಷೆಯಲ್ಲಿ. ನನಗೆ ಆಗಲೂ ಮತ್ತು ಈಗಲೂ ತಮಿಳು ಮಾತಾಡಲು ಬರದು. ತಮಿಳು ಸಿನೆಮಾ ನೋಡಿ ನೋಡಿ ಅರ್ಥ ಮಾಡಿಕೊಳ್ಳುವಷ್ಟು ತಮಿಳು ಗೊತ್ತಿತ್ತು. ಅವರ ಭಾಷಣದ ಜಿಸ್ಟ್ ಇದು..
ತಮಿಳರು ನವಿರು ಅಲ್ಲ, ಕಾಟ್ಟು ಮಿರಾಂಡಗಳು(ಅಂದರ ಕಾಡು ಮೃಗಗಳು).. ಹೀಗೆ ಮಾತು ಶುರು ಆಗಿದ್ದು…
ನಾನು ಮೈಸೂರಿನೋನೆ. ನಮ್ಮದು ಈರೋಡು. ಅಲ್ಲಿ ಹೋಗಿ ಸೇರಿದೆ..

ನಂತರ ವಾಚಾಮಗೋಚರವಾಗಿ ದೇವರು ಧರ್ಮ ಋಷಿಗಳು ದೇವತೆಗಳು ಪುರಾಣಗಳು….. ಇವುಗಳ ಬಗ್ಗೆ ವಾಕ್ ಪ್ರವಾಹ. ಅವರ ಮಾತನ್ನು ಒಪ್ಪಿಬಿಡಿ ಆದರೆ ಅವರು ತಮ್ಮ ವಾದಕ್ಕೆ ಪೂರಕವಾಗಿ ಹೇಳುತ್ತಿದ್ದ ಸಂಗತಿ ಆಕರ್ಷಕ ಆಗಿರುವುದು ಅವರ ಜನಪ್ರಿಯತೆ ಗುಟ್ಟು ಇರಬೇಕು ಅನಿಸಿತು. ಈಗಿನ ನ್ಯೂಸ್ ಚಾನಲ್‌ಗಳು ವಿವರಿಸುವ ಹಾಗೆ ಪೆರಿಯಾರ್ ಅವರು ಅಂದು ಟಾಂಗ್ ಕೊಟ್ಟರು, ಘರ್ಜಿಸಿದರು ಮತ್ತು ಉಲ್ಟಾ ಬಾರಿಸಿದರು. ಯಾರಮೇಲೆ ಅಂದರೆ ದೇವರು ಪೂಜಾರಿಗಳು ಮತ್ತು ಭಕ್ತರ ಮೇಲೆ! ಅರ್ಧ ಮುಕ್ಕಾಲು ಘಂಟೆ ಮಾತಾಡಿದರು ಅಂತ ಕಾಣುತ್ತೆ. ಈ ಇಳಿ ಇಳಿ ಇಳಿ ವಯಸ್ಸಿನಲ್ಲಿಯೆ ಹೀಗೆ ರೋಶಾವೇಶದಿಂದ ಹೀಗೆ ಮಾತನಾಡುವ ಮನುಷ್ಯ ವಯಸ್ಸಿನಲ್ಲಿ ಎಂತಹ ಉಗ್ರ ವಿಚಾರವಾದಿ ಆಗಿರಬೇಕು ಅನಿಸಿತು. ಅವರ ಉಗ್ರತೆಯೆ ಅವರಿಗೆ ದೇವರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಸ್ಥೈರ್ಯ ಕೊಟ್ಟಿರಬಹುದು ಮತ್ತು ಈ ಮಟ್ಟದ ಪ್ರತಿಭಟನೆಗೆ ಹಾಗೂ ಪ್ರದರ್ಶನಕ್ಕೆ ಆಳುವವರ ಬೆಂಬಲ ಇಲ್ಲದೇ ಅಸಾಧ್ಯ ಅಂತಲೂ ಎನಿಸಿತು. ಅದರ ನಂತರ ಅಬ್ರಹಾಂ ಕೊವೂರ್ ಅವರ ಭಾಷಣ. ಪವಾಡಗಳು ಅದರಲ್ಲೂ ಸಾಯಿಬಾಬಾ ಪವಾಡಗಳು ಪವಾಡ ಅಲ್ಲ ಅವು ಒಂದು ರೀತಿ ಟ್ರಿಕ್ಸ್, ಬರೀ ಸುಳ್ಳು ಎಂದು ಭಾಷಣ. ಭಾಷಣ ಆದಮೇಲೆ ಅವರು ಅಂತರಿಕ್ಷದಲ್ಲಿ ಕೈ ಆಡಿಸಿ ಬೂದಿ ಬರಸಿದರು. ಅದನ್ನ ನಿಬ್ಬೆರಾಗಿ ನೋಡುತ್ತಿದ್ದ ಸಭಿಕರಿಗೆ ಹತ್ತಿರ ಹತ್ತಿರ ಬಂದು ಹಂಚಿದರು. ಸಭಿಕರು ಅದನ್ನು ಅಂದರೆ ವಿಭೂತಿಯನ್ನು ಭಕ್ತಿಯಿಂದ ಎರಡೂ ಕೈಯಲ್ಲಿ ಸ್ವೀಕರಿಸಿದರು. ಕೆಲವರು ಅವರ ಕಾಲಿಗೂ ಬಿದ್ದರು! ಕೆಲವರು ವಿಭೂತಿಗೆ ನಮಸ್ಕರಿಸಿ ಹಣೆಯ ಮೇಲೆ ಹಚ್ಚಿಕೊಂಡರು, ಕೆಲವರು ಪೊಟ್ಟಣ ಕಟ್ಟಿ ಜೇಬಿನಲ್ಲಿ ಇಟ್ಟುಕೊಂಡರು. ಮನೆಯಲ್ಲಿ ಅಪ್ಪ ಅಮ್ಮ ಅಜ್ಜಿ ಅಜ್ಜ ಹೆಂಡತಿ ಇವರಿಗೆ ಕೊಡಲು ಅಂತ ಕಾಣುತ್ತೆ.

ಮಾರನೇ ದಿವಸ ವೃತ್ತ ಪತ್ರಿಕೆಗಳಲ್ಲಿ ಈ ಸಭೆಯ ಸಂಪೂರ್ಣ ವಿವರಗಳು ಮುಖಪುಟದಲ್ಲಿ ಬಂದವು. ನಂತರದ ಒಂದೆರೆಡು ದಿವಸದಲ್ಲಿ ವಾಚಕರ ವಾಣಿಯಲ್ಲಿ ಪರ ವಿರೋಧ ಪತ್ರಗಳು ಬಂದವು. ಕ್ರಿಶ್ಚಿಯನ್ ಬಂದು ಹಿಂದೂ ಧರ್ಮ ಅವಹೇಳನ ಮಾಡುತ್ತಾನೆ, ದಂ ಇದ್ದರೆ ಕ್ರಿಶ್ಚಿಯನ್ ಧರ್ಮದಲ್ಲೂ ಬೇಕಾದಷ್ಟು ಪವಾಡಗಳು ಇವೆ ಅದರ ಬಗ್ಗೆ ಇವನು ಮಾತಾಡಲಿ ಎನ್ನುವ ಅರ್ಥದ ಪತ್ರಗಳು. ಇವಕ್ಕೆ ವಿರೋಧವಾಗಿ ಜಾತಿ ಪದ್ಧತಿ, ಮನು ಸ್ಮೃತಿ, ಪಂಕ್ತಿ ಭೇದ…. ಮೊದಲಾದ ಅಂಶಗಳು ಹಾರಾಡಿದವು!

ಬಹುಶಃ ಇದೇ ಸಮಯದಲ್ಲಿ ಅಂತ ಕಾಣುತ್ತೆ. ಆಗತಾನೇ ವಿದ್ಯಾಭ್ಯಾಸ ಮುಗಿಸಿದ್ದ ಒಬ್ಬ ಯುವಕ ಅಮಾವಾಸ್ಯೆ ದಿವಸ ಮದುವೆ ಆದರು ಮತ್ತು ಈ ಮದುವೆಯನ್ನು ಸರಳವಾಗಿ ಆಗಿನ ಮುಂಚೂಣಿ ನಾಯಕರು ಆಯೋಜಿಸಿದ್ದರು. ಇದೂ ಸಹ ವ್ಯಾಪಕ ಪ್ರಚಾರ ಪಡೆಯಿತು.

ಅದೇ ವರ್ಷ ಪೆರಿಯಾರ್ ನಿಧನರಾದರು. ಆಗ ಪ್ರಜಾವಾಣಿಯಲ್ಲಿ ಶ್ರೀ ರಾಮಮೂರ್ತಿ ಅವರ ಒಂದು ಕಾರ್ಟೂನ್ ಪ್ರಕಟ ಆಗಿತ್ತು. ಪೆರಿಯಾರ್ ಪರಲೋಕ ಸೇರಿದ್ದಾರೆ. ಅಲ್ಲಿ ಯಮಧರ್ಮರಾಯ ನಡುಗುತ್ತಾ ಅವರೆದುರು ನಿಂತಿದ್ದಾನೆ. ಅವನ ಗದೆ ಒಂದು ಕಡೆ ಬಿದ್ದಿದೆ, ಕಿರೀಟ ಅಸ್ತ್ಯವ್ಯಸ್ತ್ಯ ಆಗಿದೆ. ಪೆರಿಯಾರ್ ಇಲ್ಲಿ ಭೂಮಿ ಮೇಲೆ ಗುಡುಗಿದ ಹಾಗೆ ಅಲ್ಲೂ ಗುಡುಗುತ್ತಿರುವ ಹಾಗಿದೆ! ಸುಮಾರು ವರ್ಷ ಈ ಕಾರ್ಟೂನ್ ನೆನೆದು ನೆನೆದು ರಾಮಮೂರ್ತಿ ಅವರ ಸೆನ್ಸ್ ಆಫ್ ಹ್ಯೂಮರ್ ಬಗ್ಗೆ ಸಂತಸ ಪಟ್ಟಿದ್ದೇನೆ. ಮುಂದೆ ನನ್ನ ಬರಹಗಳು ಪ್ರಜಾವಾಣಿ ಸಮೂಹದಲ್ಲಿ ಪ್ರಕಟಗೊಳ್ಳಲು ಶುರು ಆದಾಗ ಶ್ರೀ ರಾಮಮೂರ್ತಿ ಅವರು ನನ್ನ ಸುಮಾರು ಲೇಖನಗಳಿಗೆ ಕಾರ್ಟೂನ್ ಬರೆಯುತ್ತಿದ್ದರು. ಲೇಖನಕ್ಕೆ ಒಂದು added value ಇದರಿಂದ ಸಿಗುತ್ತಿತ್ತು. ಲೇಖನಕ್ಕಿಂತಲೂ ನಿಮ್ಮ ಕಾರ್ಟೂನ್ ಚೆನ್ನಾಗಿದೆ ಎಂದು ರಾಮಮೂರ್ತಿ ಅವರಿಗೆ ಹೇಳಿದರೆ ಅವರದ್ದು ಒಂದು ಸ್ಮೈಲ್ ಅಷ್ಟೇ!

ಮುಂದೆ ನಮ್ಮ ಸಂಸ್ಥೆಯಲ್ಲಿ ಒಂದು ವಿಚಾರವಾದಿ ಸಂಘ ಹುಟ್ಟಿತು. ಒಂದು ಮಂತ್ಲಿ ಬುಲೆಟಿನ್ ಸಹಾ ತರುತ್ತಿದ್ದೆವು. ನಮ್ಮ ಮೂಢನಂಬಿಕೆಗಳು, ಹಬ್ಬ ಹರಿದಿನಗಳಲ್ಲಿ ಆಚರಿಸುವ ಅರ್ಥ ಇಲ್ಲದ ಹಲವು ಕ್ರಿಯೆಗಳು… ಮುಂತಾದವನ್ನು ಬುಲೆಟಿನ್‌ನಲ್ಲಿ ಬರೆಯುತ್ತಿದ್ದೆವು. ಇದರಿಂದ ಜನ ಎಚ್ಚೆತ್ತುಕೊಳ್ಳುತ್ತಾರೆ, ಹೆಚ್ಚು ವಿಚಾರವಂತರಾಗುತ್ತಾರೇ ಎನ್ನುವ ನಂಬಿಕೆ ನಮ್ಮದು. ವಿಚಿತ್ರ ಅಂದರೆ ನಮ್ಮನ್ನು ಹೇಟ್ ಮಾಡುವ ಜನ ಹೆಚ್ಚಾದರು ಅಷ್ಟೇ! ಇದರಲ್ಲಿ ಅಂದರೆ ಈ ವಿಚಾರವಾದಿ ಸಂಘದಲ್ಲಿ ಒಮ್ಮೆ ಸಮಾಜವಾದಿ ಎಂದು ಹೆಸರು ಮಾಡಿದ್ದ ಶ್ರೀ ಜೆ ಹೆಚ್ ಪಟೇಲ್ ಅವರ ಭಾಷಣ ಇತ್ತು. ಆಂಧ್ರ ರಾಜಕಾರಣ ಆಗ ಹೊರಳು ದಾರಿಯಲ್ಲಿತ್ತು. ಎನ್ ಟಿ ರಾಮರಾವ್ ಒಂದು ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದರು. ಪಟೇಲ್ ಅವರು ಆಗ ಮಂತ್ರಿಯಾಗಿದ್ದರು. ಪಟೇಲ್ ಅವರು ಭಾಷಣದಲ್ಲಿ ಎನ್ ಟಿ ರಾಮರಾವ್ ಅವರ ಬಗ್ಗೆ ಕೆಲವು ಆಗಿನ್ನೂ ಪ್ರಚಾರ ಆಗಿರದ ಸಂಗತಿ ಹೇಳಿದರು. ಅದರಲ್ಲಿ ಒಂದು ಅವರಿಗೆ ಇರುವ ಜ್ಯೋತಿಷ್ಯ, ಜಾತಕ ಹಾಗೂ ಶಾಸ್ತ್ರದಲ್ಲಿ ಇರುವ ಅಪಾರ ನಂಬಿಕೆ. ಎನ್ ಟಿ ರಾಮರಾವ್ ಅವರಿಗೆ ಯಾರೋ ಜ್ಯೋತಿಷಿ ಮುಂದಿನ ಆಂಧ್ರದ ಮುಖ್ಯ ಮಂತ್ರಿ ಸೀರೆ ಉಟ್ಟವರು ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ. ರಾತ್ರಿ ಹೊತ್ತು ಎನ್ ಟಿ ರಾಮರಾವ್ ಸೀರೆ ಉಟ್ಟು ಮಲಗುತ್ತಿದ್ದರು ಎಂದು ಪಟೇಲ್ ಹೇಳಿದರು. ಮುಂದೆ ಎನ್ ಟಿ ರಾಮರಾವ್ ಆಂಧ್ರದ ಮುಖ್ಯಮಂತ್ರಿ ಆದರು ಮತ್ತು ಅವರು ಸೀರೆ ಉಟ್ಟು ಮಲಗುವ ಸುದ್ದಿ ಪ್ರಚಾರ ಪಡೆಯಿತು!

ವಿಚಾರವಾದಿಗಳು ಅಂತ ಘೋಷಿಸಿಕೊಂಡ ಸುಮಾರು ಜನ ಒಂದು ವಯಸ್ಸಿನ ನಂತರ ಪಕ್ಕಾ ಆಸ್ತಿಕರಾಗಿ ಬದಲಾಗಿದ್ದಾರೆ. ಸಣ್ಣ ವಯಸ್ಸಿನ ಕ್ರಾಂತಿಕಾರಿ ಯೋಚನೆಗಳು ಕಾಲ ಮಾಗಿದ ಹಾಗೆ ಆವಿಯಾಗುತ್ತದೆ ಮತ್ತು ತಮ್ಮ ಹಿರಿಯರ ವಿಚಾರಧಾರೆಗಳಿಗೆ ಒಪ್ಪಿ ನಡೆಯುತ್ತಾರೆ. ಸುಮಾರು ಜನ ಅವರ ಯೌವನದಲ್ಲಿ ಕ್ರಾಂತಿಕಾರಕ ಯೋಚನೆ ಮಾಡುತ್ತಿದ್ದವರು ಐವತ್ತರ ಹತ್ತಿರ ಬರುತ್ತಿದ್ದ ಹಾಗೆ ಆಧ್ಯಾತ್ಮದತ್ತ ತಿರುಗುತ್ತಾರೆ, ಹೊಸದಾಗಿ ದೇವಸ್ಥಾನಗಳ ಸುತ್ತ ಸುತ್ತುತ್ತಾರೆ, ದೈವೀಕ ಕ್ಷೇತ್ರ ದರ್ಶನಕ್ಕೆ ಧಾವಿಸುತ್ತಾರೆ ಮತ್ತು ಜಾತಿ ಲಾಂಛನ ಮುಖದ ಮೇಲೆ ಹಚ್ಚಿಕೊಳ್ಳುತ್ತಾರೆ. ಕೆಲವರು ಇದೇ ವಯಸ್ಸಿನಲ್ಲಿ ಪೂಜೆ ಪುನಸ್ಕಾರ ಮಾಡುವುದು, ಹರಕೆ ಹೊರುವುದು, ಇಲ್ಲಿಯವರೆಗೆ ಇಲ್ಲದ ಕೆಲವು ಅಭ್ಯಾಸ ಬೆಳೆಸಿಕೊಳ್ಳುವುದು ಮಾಡುತ್ತಾರೆ. ಅಂದರೆ ಶಾಸ್ತ್ರ ಕೇಳುವುದು, ದೇವರಿಗೆ ಹರಸಿಕೊಳ್ಳುವುದು, ಮಾಟ ಮಂತ್ರ ಮಾಡಿಸುವುದು ಮುಂತಾದ ಈ ವರೆಗೆ ದೂರ ಇಟ್ಟಿದ್ದ ಕೆಲವು ಪದ್ಧತಿಗೆ ಶರಣಾಗುತ್ತಾರೆ. ಇಪ್ಪತ್ತಕ್ಕ ಮಾರ್ಕ್ಸ್ ಅರವತ್ತಕ್ಕ ರಾಘವೇಂದ್ರ ಸ್ವಾಮಿ ಎನ್ನುವ ಮಾತು ಇಂತಹವರಿಗೆ ಅತಿ ಹೆಚ್ಚು ಪ್ರಸ್ತುತ..!