ಹುಡುಗ ಎಲ್ಲ ಕಿಟಕಿಗಳನ್ನು ಮುಚ್ಚಿ ಬಾಗಿಲು ಹಾಕಿ ಒಮ್ಮೆ ನನ್ನ ಮುಖ ನೋಡಿ ಮೆಲ್ಲಗೆ, ಎರಡೂ ಮರಿಗಳು ಸತ್ತು ಹೋಗಿರುವುದನ್ನೂ ಗಂಡು ಬೆಕ್ಕು ಒಂದನ್ನು ಅರ್ಧ ತಿಂದಿರುವುದನ್ನೂ ಹೇಳಿದ. ನನಗೆ ಜಂಘಾಬಲ ಉಡುಗಿತು! ಮರಿಗಳಿಗಾಗಿ ಹೆಣ್ಣು ಉಗ್ರವಾಗಿ ಕಾದಾಡಿದ್ದು ಸ್ಪಷ್ಟವಾಗಿತ್ತು. ತನ್ನ ಮರಿಗಳಲ್ಲಿ ಯಾವುದೂ ಉಳಿದಿಲ್ಲವೆಂದು ಅದಕ್ಕೆ ತಿಳಿಸುವುದು ಹೇಗೆ?? ಇಷ್ಟು ದಿನ ನಮ್ಮನ್ನು ಕಂಡೊಡನೆ ಮಾರು ದೂರ ಓಡುತ್ತಿದ್ದ ತಾಯಿ ಈಗ ಮುಚ್ಚಿದ್ದ ಕಿಟಕಿಯನ್ನು ಹೊಗುವ ವಿಧಾನ ಹುಡುಕುತ್ತ, ತನ್ನ ಮರಿಗಳು ಅಲ್ಲಿವೆ ಎಂದೂ ನಾವು ಕಿಟಕಿ ತೆರೆದು ದಾರಿ ಕೊಡಬೇಕೆಂದೂ ದಯನೀಯ ಸ್ವರದಲ್ಲಿ ಅಂಗಲಾಚುತ್ತ ನಮ್ಮನ್ನೇ ದಿಟ್ಟಿಸತೊಡಗಿತ್ತು.
ಬೆಕ್ಕುಗಳ ಕುರಿತು ವೇದ ಭದ್ರಾವತಿ ಬರಹ ನಿಮ್ಮ ಓದಿಗೆ

ಪಟದಲ್ಲಿದೆಯಲ್ಲ ಬೆಕ್ಕು ಅದು ಮರಿಯಾಗಿದ್ದ ಕಾಲದಿಂದಲೂ ಇಲ್ಲೇ ಇದೆ. ನೋಡಲು ತೆಳ್ಳಗೆ ಹೊಟ್ಟೆಗೆ ಸರಿಯಾಗಿ ತಿನ್ನದೆ ಸೊರಗಿದಂತಿರುವ ಅದು ಆಡುವ ಆಟ; ಕೊಡುವ ಕಾಟ ಮಾತ್ರ ಮೈ ಉರಿಸುವಂಥದ್ದು.

ಇಲ್ಲಿ ಮನೆಯೆದುರು ಪುಟ್ಟ ಉದ್ಯಾನವಿದೆ. ಅದರಾಚೆಗೆ ಕೆರೆ. ಆದ್ದರಿಂದಲೇ ನಗರದ ಒಂದು ಭಾಗವಾಗಿದ್ದರೂ ಒಂದಿಷ್ಟು ಖಗ ಮೃಗಗಳು ಅಡ್ಡಾಡುತ್ತ ಕಣ್ಣಿಗೆ ಬೀಳುತ್ತಿರುತ್ತವೆ. ಜೊತೆಗೆ ಮನೆಯ ಒಳ ಹೊರಗೆ ಹಕ್ಕಿಗಳು ಆಗಾಗ್ಗೆ ಮರಿ ಮಾಡಿ ಹಾರಿಹೋಗುತ್ತವೆ. ಅಂತೆಯೇ ‘ಟಿಕ್ಕೆಲ್ಸ್ ಬ್ಲೂ’ ಅನ್ನುವ ಮುದ್ದು ಪುಟಾಣಿ ಹಕ್ಕಿ ತನಗಿಂತಲೂ ಪುಟ್ಟದಾದ ಎರಡು ಮರಿಗಳಿಗೆ ತಾಯಾಗಿ ನಲಿಯುತ್ತ ಎರಡೇ ದಿನ ಕಳೆದಿತ್ತು. ಅಷ್ಟೇ, ಈ ಬೆಕ್ಕು ಅದೆಲ್ಲಿತ್ತೋ ಅವತ್ತು ಅಚಾನಕ್ಕಾಗಿ ಗೂಡಿಗೆ ಎಗರಿ, ನೋಡ ನೋಡುತ್ತಿದ್ದಂತೆ ಎರಡೂ ಮರಿಗಳನ್ನು ಕಬಳಿಸಿ ಗುಳುಂ ಮಾಡಿತು! ನಾನು ಕಿಟಕಿಯಿಂದ ಹಕ್ಕಿಗಳ ಹಾರಾಟ ಗಮನಿಸುತ್ತಿದ್ದವಳು ದಡ ದಡ ಕೆಳಗಿಳಿದು ಓಡುವಷ್ಟರಲ್ಲಿ ಎಲ್ಲ ಮುಗಿದು ಕಡೆಗೆ ಉಳಿದಿದ್ದು ಹಕ್ಕಿಗಳ ಅಸಹಾಯಕ ಚೀರಾಟ ಮತ್ತು ನನ್ನ ಏರಿಳಿವ ಉಸಿರಾಟ ಎರಡೇ.

ಏನು ಮಾಡಲಿ? ಬೆಕ್ಕೆಂದರೆ ಮೊದಲೇ ದುಃಸ್ವಪ್ನ! ದೊಡ್ಡದೊಂದು ದೊಣ್ಣೆ ಹಿಡಿದು, ಅಟ್ಟಾಡಿಸಿದೆ. ಅದಾಗಲೇ ತುರ್ತು ಸಮಯಕ್ಕೆ ಬೇಕಾಗುವ ಅಡಗುದಾಣಗಳನ್ನೆಲ್ಲ ಗುರುತಿಟ್ಟುಕೊಂಡಿದ್ದ ಅದು “ಕ್ಯಾರೇ” ಅನ್ನದೆ ಅಂಡು ತಿರುಗಿಸಿ, ತಾತ್ಕಾಲಿಕವಾಗಿ ಮಾಯವಾಯ್ತು.

ನಿಜವಾಗಿ ನೋಡಿದರೆ ಬೆಕ್ಕು ತನ್ನ ಆಹಾರವನ್ನು ತಿಂದಿತ್ತು ಅಷ್ಟೇ. ಹಸಿವು ಎಲ್ಲ ಜೀವಿಗಳಿಗೂ ಒಂದೇ. ಭಾವುಕತೆ ಇಲ್ಲಿ ಸಲ್ಲುವುದಿಲ್ಲ! ಅದೇನೋ ಸರಿ. ಆದರೂ ಇಂಥವೆಲ್ಲ ಪ್ರಬಲರು ದುರ್ಬಲರ ಮೇಲೆ ಮಾಡುತ್ತಿರುವ ಆಕ್ರಮಣಗಳಂತೆನಿಸಿ, ನಮಗೇ ಗೊತ್ತಿಲ್ಲದೆ ದುರ್ಬಲರ ಪರ ಪಕ್ಷಪಾತಿಗಳಾಗುತ್ತೇವೆ! ಸಿಂಹ-ಜಿಂಕೆಯ ಮಧ್ಯೆ ಎಂದಾದರೂ ಸಿಂಹವನ್ನು ಆಯ್ಕೆ ಮಾಡಿದ ಉದಾಹರಣೆ ಇದೆಯೇ? ಮತ್ತೆ ಅದು ಹೇಗೆ ನಾನು ಬೆಕ್ಕಿನ ಪರ ಇರಲು ಸಾಧ್ಯ?? ಇಷ್ಟಾಗಿ ಪರ ವಿರೋಧಗಳೆಲ್ಲ ಮನಸುಗಳ ಹಗ್ಗ ಜಗ್ಗಾಟ. ಪ್ರಕೃತಿ ಅದನ್ನು ಲೆಕ್ಕಿಸಲಾರದು.

ಅದೇನೇ ಇರಲಿ. ಈ ಬೆಕ್ಕಿನ ಉಪದ್ರ ಮಾತ್ರ ತಪ್ಪಲೇ ಇಲ್ಲ. ಕಿಟಕಿ ಸರಳುಗಳು ದೊಡ್ಡದಿದ್ದು ಅದು ಆರಾಮವಾಗಿ ಒಳನುಗ್ಗಲು, ಹಾಗೇ ಹೊರಹೋಗಲು ದಾರಿಯಾಗಿತ್ತು. ಅದೆಷ್ಟೋ ಸಾರಿ ಸಲೀಸಾಗಿ ಬಂದು ಮ್ಯಾವ್ .. ಮ್ಯಾ…. ಅಂತ ರಾಜಾರೋಷವಾಗಿ ಅರಚುತ್ತ, ಕೈಗೆ ಸಿಕ್ಕಿದ ವಸ್ತು ಎಸೆದ ಮೇಲೆ ಓಟ ಕಿತ್ತರೂ ಹೊಂಚು ಹಾಕುತ್ತ ಅಲ್ಲಲ್ಲೇ ಸುಳಿಯುವುದು ನಿಲ್ಲಲೇ ಇಲ್ಲ.

ಬೆಕ್ಕೆಂದರೆ ನನಗೆ ಹಿಡಿಸದು. ಮುದ್ದಿನ ಪ್ರಾಣಿ ಅಂತ ಮೊದಲ ಮಣೆ ಹಾಕಿಸಿಕೊಳ್ಳುವುದು… ಎಷ್ಟೋ ಸಂಸ್ಕೃತಿಗಳಲ್ಲಿ ಶುಭ ತರುವ ದೇವತೆಯಾಗಿರುವುದು… ಕಥೆ, ಕವಿತೆ, ಸಿನೆಮಾಗಳಿಗೆ (Cat Woman) ಸ್ಫೂರ್ತಿಯಾಗಿರುವುದು… ಅದರ ಪಾದರಸದ ಚುರುಕುತನ ಅಥವಾ ನಾನು ಟಾಮ್ ಅಂಡ್ ಜೆರ್ರಿ ಎಂಜಾಯ್ ಮಾಡುವುದು ಇದ್ಯಾವುದೂ ಬೆಕ್ಕಿನ ಬಗ್ಗೆ ನನ್ನ ನಿಲುವನ್ನು ಮಾರ್ಪಡಿಸುವುದಿಲ್ಲ. ನಾಯಿಯನ್ನು ಬೇಕಾದರೆ ಮುದ್ದು ಮಾಡಬಹುದು – ಬೆಕ್ಕು ಸಲ್ಲ ಅಂತ ನನ್ನ ವಾದ. ಬೆಕ್ಕುಗಳು ಅನುಕೂಲ ಸಿಂಧುಗಳು.. ಬುದ್ಧಿವಂತಿಕೆಯಿಂದ .. ಬರೀ ತಮ್ಮ ಸೌಕರ್ಯವನ್ನು ನೋಡಿಕೊಳ್ಳುವ ಸ್ವಾರ್ಥಿಗಳು! ನಾಯಿಯ ಕೃತಜ್ಞತಾ ಗುಣಕ್ಕೆ ವ್ಯತಿರಿಕ್ತವಾದುವು….. ಇತ್ಯಾದಿ ಇವೆಲ್ಲ ಬೆಕ್ಕಿನ ಮೇಲಿನ ಅಸಹನೆಗೆ ನಾನು ಕೊಡುವ ಕಾರಣಗಳು!!

ನನ್ನ ಕಾರಣಗಳು ಬೆಕ್ಕಿಗೆ ಅರ್ಥವಾಗುವುದೇ? ಅದು ಈ ಲೆಕ್ಕಾಚಾರಗಳನ್ನೆಲ್ಲ ಬದಿಗೊತ್ತಿ, ಈಗೀಗ ಹೆಚ್ಚೆಚ್ಚು ಧೈರ್ಯದಿಂದ ಅಲೆದಾಡತೊಡಗಿತು. ನಾನೂ ಹೇಳುವುದಷ್ಟೇ ಬೆಕ್ಕು ಇಷ್ಟವಿಲ್ಲ ಅಂತ. ಅದಕ್ಕೆಂದೂ ತೊಂದರೆ ಮಾಡದೆ ಕಾಟಾಚಾರಕ್ಕೆಂಬಂತೆ ಆಗಾಗ್ಗೆ ಗದರುವುದು ನಡೆಸಿದ್ದೆ.

ಹೀಗಿರುತ್ತ ಮೊನ್ನೆ ರಾತ್ರಿ ಈ ಬೆಕ್ಕಿನ ಜೊತೆ ಇನ್ನೊಂದು ಬೆಕ್ಕು ಜಗಳ ಶುರು ಮಾಡಿತು. ಕಾದಾಟ ಎಷ್ಟು ತಾರಕ್ಕೇರಿತೆಂದರೆ ನಾನು ಅವುಗಳನ್ನು ಅಲಕ್ಷಿಸಿ, ಕೆಲಸ ಮುಂದುವರೆಸುವುದು ಅಸಾಧ್ಯವಾಯಿತು. ಕ್ಷಣ ಕ್ಷಣಕ್ಕೂ ‘ಗುರ್ ಗುರ್’ ಎಂದು ಸದ್ದು ಬರುತ್ತಿದ್ದ ದಿಕ್ಕಿಗೆ ‘ಹುಶ್’ ಅನ್ನುತ್ತ, ಕಿಟಕಿಯಿಂದ ಹಣಕಿ, ಎಲ್ಲಾದರೂ ಕಾಣುತ್ತವೆಯೋ ಅಂತ ಹುಡುಕಿದೆ. ಕತ್ತಲಿದ್ದುದರಿಂದ ಕಾಣಲಿಲ್ಲ. ಆದರೆ ಜಗಳ ಮಾತ್ರ ತಲೆ ಮೇಲೇ ನಡೆಯುತ್ತಿದೆ ಅನಿಸಿ, ಮಹಡಿಗೆ ಬಂದರೆ ಬಾಗಿಲು ಮುಚ್ಚಿದ ಕೋಣೆಯೊಳಗಿಂದ ಸದ್ದು ಜೋರಾಗಿ ಹೊಮ್ಮುತ್ತಿತ್ತು. ಒಮ್ಮೆ ಬಾಗಿಲು ಕುಟ್ಟಿದೆ. ಬೇರೆ ಸಂದರ್ಭದಲ್ಲಾಗಿದ್ದರೆ ತಕ್ಷಣ ಓಡಿಬಿಡುತ್ತಿದ್ದ ಬೆಕ್ಕುಗಳು ನನ್ನ ಇರವನ್ನೇ ಅಲಕ್ಷಿಸಿ, ತೀವ್ರವಾಗಿ ಕಾದುತ್ತಿದ್ದುವು! ಗಂಡಿನ ಘರ್ಜನೆಗಿಂತ ಹೆಣ್ಣಿನ ಆರ್ಭಟ ಜೋರಾದಂತಿತ್ತು!

ಬೆಕ್ಕುಗಳು ಬೆಳಗ್ಗೆ ಮತ್ತು ಸಂಜೆ ಅತೀವ ಚಟುವಟಿಕೆಯಿಂದ ಇರುತ್ತವಾದರೂ ರಾತ್ರಿ ಅದಕ್ಕೆ ಹೊರತಲ್ಲ. ನನಗೆ ಅವುಗಳ ಕಾದಾಟ ಹೇಗೆ ನಿಲ್ಲಿಸುವುದೋ ಗೊತ್ತಾಗಲಿಲ್ಲ. ಕಡೆಗೆ ನೆಂಟರ ಹುಡುಗ ಬಂದು ಬಾಗಿಲು ತೆರೆದು ದೊಣ್ಣೆ ಝಳಪಿಸಿದಾಕ್ಷಣ ಗಂಡು ಕಿಟಕಿಯಿಂದ ಹೊರ ಹೋಯಿತು. ಹೆಣ್ಣು ಮಾತ್ರ ಕಿಟಕಿ ಬಳಿ ನಿಂತೇ ಇತ್ತು. ಅದನ್ನೂ ಓಡಿಸಿ, ಲೈಟ್ ಬೆಳಕಲ್ಲಿ ಗಮನಿಸಿದಾಗ ಒಂದು ಮರಿ – ಥೇಟು ಅವರಮ್ಮನ ತದ್ರೂಪಿ – ಮೂಲೆಯಲ್ಲಿ ಮಲಗಿತ್ತು. ನೆಂಟರ ಹುಡುಗ ಅಷ್ಟಕ್ಕೇ ನನ್ನನ್ನು ಒಳ ಬರಲು ಬಿಡದೆ ಬಾಗಿಲು ಹಾಕಿ, ವೇಸ್ಟ್ ಬ್ಯಾಗ್ನಲ್ಲಿ ಏನನ್ನೋ ತೆಗೆದುಕೊಂಡು ಹೊರಹೋದ. ಒಂದಿಷ್ಟು ಮರಳು ತಂದು ನೆಲಕ್ಕೆ ಸುರಿದ ಅವನ ಚಟುವಟಿಕೆಯಿಂದ ಬಹುಶಃ ಬೆಕ್ಕು ಗಲೀಜು ಮಾಡಿದೆಯೆಂದು ಅಂದಾಜಿಸಿದೆ. ತಾಯಿ ಬೆಕ್ಕು ಒಂದಷ್ಟು ದೂರ ನಿಂತು ನಮ್ಮನ್ನೇ ಗಮನಿಸುತ್ತ ಆಗಾಗ್ಗೆ ಮ್ಯಾವ್…. ಮ್ಯಾವ್…. ಅನ್ನುತ್ತಿತ್ತು. ನನಗೆ ಎಲ್ಲಿಲ್ಲದ ಕೋಪ ಬಂದರೂ ಮರಿ ಇದ್ದುದನ್ನು ನೋಡಿ ಸಮಾಧಾನಿಸಿಕೊಂಡೆ. ಆಮೇಲೆ ಹುಡುಗ ಎಲ್ಲ ಕಿಟಕಿಗಳನ್ನು ಮುಚ್ಚಿ ಬಾಗಿಲು ಹಾಕಿ ಒಮ್ಮೆ ನನ್ನ ಮುಖ ನೋಡಿ ಮೆಲ್ಲಗೆ, ಎರಡೂ ಮರಿಗಳು ಸತ್ತು ಹೋಗಿರುವುದನ್ನೂ ಗಂಡು ಬೆಕ್ಕು ಒಂದನ್ನು ಅರ್ಧ ತಿಂದಿರುವುದನ್ನೂ ಹೇಳಿದ. ನನಗೆ ಜಂಘಾಬಲ ಉಡುಗಿತು! ಮರಿಗಳಿಗಾಗಿ ಹೆಣ್ಣು ಉಗ್ರವಾಗಿ ಕಾದಾಡಿದ್ದು ಸ್ಪಷ್ಟವಾಗಿತ್ತು. ತನ್ನ ಮರಿಗಳಲ್ಲಿ ಯಾವುದೂ ಉಳಿದಿಲ್ಲವೆಂದು ಅದಕ್ಕೆ ತಿಳಿಸುವುದು ಹೇಗೆ?? ಇಷ್ಟು ದಿನ ನಮ್ಮನ್ನು ಕಂಡೊಡನೆ ಮಾರು ದೂರ ಓಡುತ್ತಿದ್ದ ತಾಯಿ ಈಗ ಮುಚ್ಚಿದ್ದ ಕಿಟಕಿಯನ್ನು ಹೊಗುವ ವಿಧಾನ ಹುಡುಕುತ್ತ, ತನ್ನ ಮರಿಗಳು ಅಲ್ಲಿವೆ ಎಂದೂ ನಾವು ಕಿಟಕಿ ತೆರೆದು ದಾರಿ ಕೊಡಬೇಕೆಂದೂ ದಯನೀಯ ಸ್ವರದಲ್ಲಿ ಅಂಗಲಾಚುತ್ತ ನಮ್ಮನ್ನೇ ದಿಟ್ಟಿಸತೊಡಗಿತ್ತು. ಅದಕ್ಕೀಗ ಕಿಂಚಿತ್ತೂ ಹೆದರಿಕೆ ಇರಲಿಲ್ಲ. ನಾನು ಈ ಬದಲಾವಣೆಗೆ ಬೆರಗಾದೆ. ಸಂತಾನದ ಸಂರಕ್ಷಣೆ ಹೇಗೆ ಜೀವಿಯ ಆದ್ಯತೆಯಾಗುತ್ತದೆ ಅನ್ನುವುದು ಕಣ್ಮುಂದೆ ಕಾಣುತ್ತಿತ್ತು.

ತನ್ನದಲ್ಲದ ಮರಿಗಳನ್ನು ಕೊಲ್ಲುವ ಕ್ರಿಯೆ ಬೆಕ್ಕುಗಳಲ್ಲಿ ಸ್ವಾಭಾವಿಕ. ಆದರೆ ತಾಯಿ ಮರಿಗಳನ್ನು ಕಾಪಾಡಿಕೊಳ್ಳಲು ಇನ್ನಿಲ್ಲದಂತೆ ಹೋರಾಡಿತ್ತು. ಆ ಹೋರಾಟ ಮರಿಗಳ ರಕ್ಷಣೆಗೆ ಸಾಕಾಗದ್ದನ್ನು ಅರಿಯದೆ ಅವಿನ್ನೂ ಉಳಿದಿರುವ ಭರವಸೆಯಲ್ಲಿ ಮರಿಗಳನ್ನು ಕರೆಯುತ್ತ, ಅವನ್ನು ಸೇರುವ ದಾರಿ ಹುಡುಕುತ್ತ ನಿರಂತರವಾಗಿ ಅಡ್ಡಾಡುತ್ತಿತ್ತು. ನಾನೂ ನಿದ್ರಿಸದೆ ಅದರ ಕೂಗಿನಲ್ಲಿದ್ದ ಆರ್ತತೆಯನ್ನು ಗಮನಿಸುತ್ತ ರಾತ್ರಿ ಕಳೆದೆ.

ಉತ್ತರ ಕಾಂಡ

ಬೆಳಿಗ್ಗೆ ಹೊರಬಂದಾಗ ಅದಿನ್ನೂ ಕಿಟಕಿ ಬಳಿ ಅಡ್ಡಾಡುತ್ತ ಹೇಗಾದರೂ ಒಳಹೋಗಬೇಕೆಂದು ಚಡಪಡಿಸುತ್ತಿತ್ತು. ನನ್ನನ್ನು ಕಂಡೊಡನೆ ದುಃಖ ತೋಡಿಕೊಳ್ಳುವಂತೆ ದ್ವನಿಯಡಗಿಸಿ ಮ್ಯಾವ್…. ಅಂದು ಕಣ್ಮುಚ್ಚಿತು. ಆ ಎರಡು ಪುಟ್ಟ ನಿಷ್ಕಲ್ಮಶ ಕಣ್ಣುಗಳಲ್ಲಿ ಹಕ್ಕಿಮರಿಗಳನ್ನು ಹಿಡಿದ ದುರುಳತನವಾಗಲೀ, ಸುಖ ಬೇಡುವ ಕಳ್ಳತನವಾಗಲೀ ಇಲ್ಲದೆ ತನ್ನ ಸಂತಾನಕ್ಕಾಗಿ ಪರಿತಪಿಸುವ ಅಪ್ಪಟ ತಾಯಿಯ ನೋವು ಹೆಪ್ಪುಗಟ್ಟಿತ್ತು. ನಿನ್ನೆ ಆ ರೂಮ್ ಕ್ಲೀನ್ ಮಾಡುವುದು, ಬೆಕ್ಕು ಪುನಃ ಬರದಂತೆ ತಡೆಯುವುದು ಹೇಗೆ ಅಂತೆಲ್ಲ ಯೋಚಿಸುತ್ತ ದೊಡ್ಡ ಯೋಜನೆಯೊಂದನ್ನು ತಯಾರಿಸಿಕೊಂಡಿದ್ದ ನನಗೆ ಅದರ ನೋವನ್ನು ಕಂಡು ಕಂಗಾಲಾಗುವಂತಾಯ್ತು. ಕಳೆದುಕೊಳ್ಳುವುದು ನಿಜಕ್ಕೂ ಯಾತನೆಯುಂಟು ಮಾಡುವಂಥದ್ದು! ಸರಿ… ಒಳಗೆ ಬಂದವಳೇ ಅದು ಸಮಾಧಾನವಾಗುವವರೆಗೆ ತಿರುಗಲಿ ಎಂದು ಹಿಂದಿನಂತೆ ಮತ್ತೆ ರೂಮಿನ ಕಿಟಕಿ ತೆರೆದೆ. ನನಗೆ ಅದರ ನೋವೀಗ ಅರಿವಾಗಿದೆ. ಆದರೆ ಸಂತೈಸುವುದು ಹೇಗೋ ತಿಳಿಯದಾಗಿದೆ! ಒಂದೇ ಹಾರೈಕೆಯೆಂದರೆ ಕಾಲ ಎಲ್ಲವನ್ನೂ ಮರೆಸಲಿ. ಮತ್ತೊಮ್ಮೆ ಅದು ತಾಯಿಯಾಗಲಿ! ಅಂತ ಅಷ್ಟೇ.