ನನ್ನ ಬಾಲ್ಯಕಾಲದಲ್ಲಿ ಎಲ್ಲ ಸಮುದಾಯಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು. ಜನಸಮೂಹ ಅವರ ಮಾತಿಗೆ ಬೆಲೆ ಕೊಡುತ್ತಿತ್ತು.  ಸಾಮಾಜಿಕ ಅಡೆತಡೆಗಳನ್ನು ಬಗೆಹರಿಸುವುದರಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗುತ್ತಿದ್ದರು ಇಲ್ಲವೆ ಇಂಥ ಪ್ರಯತ್ನಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದರು.  ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹತ್ತೊಂಭತ್ತನೆಯ ಕಂತು

 

ವಿಜಾಪುರದ ಬಸ್‌ಸ್ಟ್ಯಾಂಡ್ ಸಮೀಪದಲ್ಲೇ ದರ್ಬಾರಗಲ್ಲಿಯ ಮುಂದಿನ ಮುಖ್ಯರಸ್ತೆಯ ಮೇಲೆ 17ನೇ ಶತಮಾನದ ಸೂಫಿಸಂತ ಹಜರತ್ ಲಂಗೇ ಶಾ ವಲಿಯ ದರ್ಗಾ ಇದೆ. ಬೆತ್ತಲಾಗಿ ತಿರುಗುತ್ತಿದ್ದ ಕಾರಣ ಜನರು ಅವರಿಗೆ ‘ಲಂಗೇ ಶಾ ವಲಿ’ ಎಂದು ಕರೆಯುತ್ತಿದ್ದರು.

ಆ ಸೂಫಿ ಸಂತ ಒಮ್ಮೆ ವಿಜಾಪುರ ನಗರದಲ್ಲಿ ಹೋಗುತ್ತಿದ್ದರು. ಆಗ ಎದುರಿಗೆ ಬಂದ ಹಿರಿಯರೊಬ್ಬರು ಸಲಾಂ ಹೇಳಿ, ‘ಮಹಾನುಭಾವರೆ ನೀವು ದೊಡ್ಡವರು, ಹೀಗೆ ಬೆತ್ತಲಾಗಿ ತಿರುಗಾಡಬಾರದು’ ಎಂದು ಮನವಿ ಮಾಡಿದರು. ಆಗ ಅವರು ತಮ್ಮ ಕೈಯನ್ನು ಎತ್ತಿದರು. ತಮ್ಮ ಬಗಲಿನಿಂದ ನಗರವನ್ನು ನೋಡಲು ತಿಳಿಸಿದರು. ಅವರು ಹಾಗೆ ನೋಡಿ ಸ್ತಂಭೀಭೂತರಾಗಿ ನಿಂತರು. ‘ಎಷ್ಟು ಜನ ಕಂಡರು’ ಎಂದು ಕೇಳಿದರು. ಆಗ ಆ ಹಿರಿಯರು, ‘ಇಲ್ಲಿಯವರೆಗೆ ಕಾಣುತ್ತಿದ್ದರು. ಹೀಗೆ ನೋಡುವಾಗ ಒಬ್ಬರೂ ಕಾಣುತ್ತಿಲ್ಲ’ ಎಂದು ಗಾಬರಿಯಿಂದ ಹೇಳಿದರು. ‘ಮತ್ತೇನು ನೋಡುತ್ತಿದ್ದೀರಿ’ ಎಂದು ಕೇಳಿದಾಗ, ‘ಮನುಷ್ಯರ ಜಾಗದಲ್ಲಿ ನಾಯಿ, ನರಿ, ತೋಳ, ಮಂಗ, ಕತ್ತೆ, ಕುದುರೆ, ಹಂದಿ, ಬೆಕ್ಕು, ಕುರಿ ಮುಂತಾದ ಪ್ರಾಣಿಗಳು ಕಾಣುತ್ತಿವೆ’ ಎಂದರು. ‘ಇಂಥ ಪ್ರಾಣಿಗಳ ಮುಂದೆ ಬಟ್ಟೆ ತೊಟ್ಟರೇನು ಬಿಟ್ಟರೇನು’ ಎಂದು ಆ ಸೂಫಿಸಂತ ಮುನ್ನಡೆದರು.

(ಮಹಿಪತಿರಾಯರು)

ಈ ದಂತಕಥೆ ಬಹಳಷ್ಟು ಹೇಳುತ್ತ ಹೋಗುತ್ತದೆ. ಆದರೆ ಎಂಥ ಅಸಹ್ಯ ಮತ್ತು ಕ್ರೂರ ಪರಿಸ್ಥಿತಿಯಲ್ಲೂ ಸಮಾಜ ಮತ್ತೆ ಮತ್ತೆ ಒಳ್ಳೆಯದನ್ನು ಸೃಷ್ಟಿಸುತ್ತಲೇ ಇರುತ್ತದೆ. ಇದಕ್ಕೆ ಸೂಫಿ ಶಾ ವಲಿ ಮತ್ತು ಮಹಿಪತಿ ದಾಸರೇ ಸಾಕ್ಷಿ. ಹದಗೆಟ್ಟ ಸಮಾಜದ ದುರವಸ್ಥೆ ಕುರಿತು ಸೂಫಿಯ ತೀವ್ರಸ್ವರೂಪದ ಮಾನಸಿಕ ತಳಮಳ ಮತ್ತು ದಾಸನ ವೈರಾಗ್ಯ ಮತ್ತೆ ನಮ್ಮಲ್ಲಿ ಈ ಸಮಾಜದ ಬಗ್ಗೆ ಭರವಸೆ ಮೂಡಿಸುವಂಥದ್ದು.

ಸೂಫಿ ಲಂಗೇ ಶಾ ವಲಿ ಅವರ ಪ್ರಭಾವಕ್ಕೆ ಒಳಗಾದ ಮಹಿಪತಿರಾಯರು ಆದಿಲಶಾಹಿ ಆಸ್ಥಾನದ ಭಂಡಾರಿ ಹುದ್ದೆಯನ್ನು ತ್ಯಜಿಸಿದರು. ತಮ್ಮ ಸಂಪತ್ತನ್ನೆಲ್ಲ ದಾನ ಮಾಡಿದರು. ನಂತರ ಸಾರವಾಡದ ಭಾಸ್ಕರ ಸ್ವಾಮಿಗಳನ್ನು ಗುರುವಾಗಿ ಸ್ವೀಕರಿಸಿ ಬ್ರಹ್ಮಜ್ಞಾನ ಪಡೆದರು. ಕಾಖಂಡಕಿಗೆ ಹೋಗಿ ದಾಸ ಸಾಹಿತ್ಯ ರಚನೆ ಮಾಡಿ ‘ಕಾಖಂಡಕಿಯ ಮಹಿಪತಿ ದಾಸರು’ ಎಂದು ಅಮರರಾದರು!

ನಮ್ಮ ಬದುಕಿನ ಸಮಾಜಮುಖಿ ನೆನಪುಗಳೇ ನಮ್ಮನ್ನು ಕ್ರಿಯಾಶೀಲವಾಗಿಸುತ್ತವೆ. ನಮ್ಮಲ್ಲಿ ಭರವಸೆಯ ಕನಸುಗಳನ್ನು ಸೃಷ್ಟಿಸುತ್ತವೆ. ಸಮಾಜ ಇಲ್ಲಿಯವರೆಗೆ ಬದುಕಿದೆ ಎಂದರೆ, ಲಂಗೇ ಶಾ ವಲಿ ಮತ್ತು ಮಹಿಪತಿರಾಯರು ಈ ಸಮಾಜದಲ್ಲಿ ಯಾರ್ಯಾರದೋ ರೂಪದಲ್ಲಿ ಜೀವಂತವಾಗಿದ್ದಾರೆ ಎಂದೇ ಅರ್ಥ.

(ತಾಜಬಾವಡಿ)

ವಿಜಾಪುರದಲ್ಲಿ ಮೊಹರಂ (ಅಲಾಬ್) ಬಹಳ ಪ್ರಸಿದ್ಧವಾದುದು. ಮೊಹರಂ ಕೊನೆಯದಿನ, ವಿಜಾಪುರ ನಗರದ ವಿವಿಧ ಗಲ್ಲಿಗಳಲ್ಲಿನ ಡೋಲಿ(ತಾಬೂತ್-ತಾಜಿಯಾ)ಗಳು ತಾಜಬಾವಡಿ ಹತ್ತಿರ ಬಂದು ಸೇರುತ್ತವೆ. ಅಲ್ಲಿಂದ ಚಂದಾಬಾವಡಿ ಹತ್ತಿರದ ಮುಳ್ಳಗಸಿಯವರೆಗೆ ಡೋಲಿಗಳ ಭಾರಿ ಮೆರವಣಿಗೆ ನಡೆಯುತ್ತದೆ. ನಗರವಷ್ಟೇ ಅಲ್ಲದೆ ವಿವಿಧ ಕಡೆಗಳಿಂದ ಬಂದವರೂ ಸೇರಿದಂತೆ ಲಕ್ಷಾಂತರ ಜನ ಈ ಡೋಲಿಗಳ ಮನಮೋಹಕ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಕೋಟೆಗೋಡೆಯ ದಂಡೆಗುಂಟ ಇರುವ ರಸ್ತೆಯಲ್ಲಿ ಬರುವ ಈ ಮೆರವಣಿಗೆ ನೋಡಲು ಜನ ಕೋಟೆಗೋಡೆ ಹತ್ತಿ ಕುಳಿತಿರುತ್ತಾರೆ. ಅವರು ಈ ತಾಬೂತಗಳ ಮೇಲೆ ಭಕ್ತಿಯಿಂದ ಉತ್ತತ್ತಿ (ಒಣ ಖರ್ಜೂರ) ಎಸೆಯುತ್ತಾರೆ.

ಮೆರವಣಿಗೆಯ ಸರದಿಯಲ್ಲಿ ಈ ಡೋಲಿಗಳಿಗೆಲ್ಲ ಅವುಗಳದೇ ಆದ ನಂಬರ್ ಇರುತ್ತದೆ. ಶತಮಾನಗಳಿಂದ ನಡೆಯುತ್ತಿರುವ ಮೊಹರಂನಲ್ಲಿ ಮೊದಲಿಗೆ ಡೋಲಿ ಮೆರವಣಿಗೆ ಪ್ರಾರಂಭಿಸಿದವರು ಮೊದಲು ಇರುತ್ತಾರೆ. ನಂತರ ಪ್ರಾರಂಭಿಸಿದವರು ಹಿಂದೆ ಇರುತ್ತಾರೆ.

ಮುಳ್ಳಗಸಿ, ಚಂದಾಬಾವಡಿ ಪ್ರದೇಶದ ಡೋಲಿಗಳು ಹಾಗೂ ನಮ್ಮ ನಾವಿಗಲ್ಲಿಯ ಹರಿ ತಾಬೂತ್ (ಹಸಿರು ಡೋಲಿ) ಯಾವುದೋ ಶತಮಾನದಲ್ಲಿ ಒಂದೇ ಸಲ ಆರಂಭವಾದವು ಎಂದು ಕಾಣುತ್ತದೆ. ಹೀಗಾಗಿ ಅವು ‘ನಾ ಮುಂದು ತಾ ಮುಂದು’ ಎಂದು ಸ್ಪರ್ಧೆಗೆ ಇಳಿಯುತ್ತಿದ್ದವು. ಆಗ ಮೆರವಣಿಗೆಯಲ್ಲಿ ಭಾಗವಹಿಸಿದವರು ಕೂಡ ಗಾಯಗೊಳ್ಳುವ ಪ್ರಸಂಗಗಳು ನಡೆಯುತ್ತಿದ್ದವು. ಈ ಅವ್ಯವಸ್ಥೆಯನ್ನು ತಡೆಯಲು ಮೂರೂ ಗಲ್ಲಿಯ ಹಿಂದೂ ಮುಸ್ಲಿಂ ಹಿರಿಯರು ಮತ್ತು ಇತರ ಕಡೆಗಳಲ್ಲಿನ ಹಿರಿಯರು ಸೇರಿ ಚರ್ಚೆ ಮಾಡಿದರು. ಅವರೆಲ್ಲ ಸೇರಿ ಒಮ್ಮತಕ್ಕೆ ಬಂದರು. ‘ಮೂರೂ ಡೋಲಿಗಳು ಕೂಡಿಯೆ ಸಾಗಬೇಕು’ ಎಂಬ ಅವರ ನಿರ್ಣಯವನ್ನು ಎಲ್ಲರೂ ಒಪ್ಪಿದರು.

ಈ ಒಪ್ಪಂದ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಮೂರೂ ಗಲ್ಲಿಯ ಜನ ಮತ್ತಿತರ ಶ್ರೀಮಂತ ಉದಾರವಾದಿಗಳು ಸೇರಿ, ಹಣ ಸಂಗ್ರಹಿಸಿ ಇಡೀ ಊರಿಗೆ ಊಟ ಹಾಕಿಸಿದರು. ಅಷ್ಟೊಂದು ಜನರಿಗೆ ಸಾಕಾಗುವಷ್ಟು ಜಾಗ ಬೇಕೆಂಬ ಕಾರಣದಿಂದ ಭೂತನಾಳ ಕೆರೆಯ ದಂಡೆಯನ್ನು ಸಾಮೂಹಿಕ ಭೋಜನಕ್ಕಾಗಿ ಆಯ್ಕೆ ಮಾಡಿಕೊಂಡರು. ಆ ಶುಭಸಂದರ್ಭಕ್ಕೆ ಸಾಕ್ಷಿಯಾದವರಲ್ಲಿ ನಾನೂ ಒಬ್ಬ. ಹೀಗೆ ಸಾಮಾಜಿಕ ಅಡೆತಡೆಗಳನ್ನು ಬಗೆಹರಿಸುವುದರಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗುತ್ತಿದ್ದರು ಇಲ್ಲವೆ ಇಂಥ ಪ್ರಯತ್ನಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದರು. ದೇಶ ಇಬ್ಭಾಗವಾಗಿ ಸ್ವಾತಂತ್ರ್ಯ ಬಂದು ಕೇವಲ ಹತ್ತು ಹನ್ನೆರಡು ವರ್ಷಗಳಾಗಿದ್ದರೂ ಧರ್ಮಗಳ ಹೆಸರಲ್ಲಿ ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸುವ ಒಂದಿಷ್ಟು ಜನರಿದ್ದರೂ ಅವರ ಪಿತೂರಿಗಳಿಗೆ ಜನಬೆಂಬಲ ಇದ್ದಿದ್ದಿಲ್ಲ.

ನನ್ನ ಬಾಲ್ಯಕಾಲದಲ್ಲಿ ಎಲ್ಲ ಜನಾಂಗಗಳಲ್ಲಿ ಇಂಥ ಸಂವೇದನಾಶೀಲ ಮತ್ತು ನ್ಯಾಯನೀತಿಯ ಹಿರಿಯರು ಇದ್ದರು. ತಪ್ಪುಗಳು ಘಟಿಸಬಾರದು ಎಂಬುದಕ್ಕೆ ‘ನಾಲ್ಕು ಜನ ಏನಂದಾರು?’ ಎಂದು ತಪ್ಪು ದಾರಿ ಹಿಡಿಯುವ ಲಕ್ಷಣವುಳ್ಳವರಿಗೆ ಅವರು ಪ್ರಶ್ನಿಸುತ್ತಿದ್ದರು. ಅಂದಿನ ಕಾಲದಲ್ಲಿ ಸಮಾಜವೇ ದೈವವಾಗಿತ್ತು. ಹಿರಿಯರೇ ನ್ಯಾಯಾಧೀಶರಾಗಿದ್ದರು. ಇತರ ಅನುಭವಿಗಳೇ ವಕೀಲರಾಗಿದ್ದರು. ಜನಸಮೂಹ ಅವರ ಮಾತಿಗೆ ಬೆಲೆ ಕೊಡುತ್ತಿತ್ತು. ‘ಮೂರೂ ಡೋಲಿಗಳು ಕೂಡಿ ಸಾಗಬೇಕು’ ಎಂಬ ನಿರ್ಣಯವನ್ನು ಸರ್ವ ಜಾತಿ ಮತ್ತು ಧರ್ಮಗಳ ಸಮಾಜ ಒಪ್ಪಿತು. 60 ವರ್ಷಗಳ ಹಿಂದೆ ಈ ಎಲ್ಲ ಜಾತಿ ಧರ್ಮಗಳ ಜನರು ಮೊಹರಂ ಭಾಗಿಗಳಾಗಿದ್ದರು. ಆ ದಿನಗಳು, ಎಲ್ಲರೂ ಸೇರಿ ಮೊಹರಂ, ಉರುಸ್, ನಾಡಹಬ್ಬ, ದೀಪಾವಳಿ, ಸಾರ್ವಜನಿಕ ಗಣಪತಿ ಉತ್ಸವ ಮುಂತಾದವುಗಳನ್ನು ಆಚರಿಸುವ ದಿನಗಳಾಗಿದ್ದವು.

ಮುಳ್ಳಗಸಿಗೆ ಹೊಂದಿಕೊಂಡಂತೆ ಸಮಗಾರ ಓಣಿ ಇತ್ತು. ಅಲ್ಲಿಂದ ಒಳದಾರಿ ಮೂಲಕ 10 ನಿಮಿಷ ಮುಂದೆ ಬಂದರೆ ನಾವಿಗಲ್ಲಿ ಪ್ರಾರಂಭವಾಗುತ್ತಿತ್ತು. ಇವೆರಡರ ಮಧ್ಯೆ ಇದ್ದ ಮಸೀದಿಯಲ್ಲಿ ಹರಿತಾಬೂತ್ ಕೂಡಿಸುತ್ತಾರೆ. ಇದೊಂದು ಅನನ್ಯವಾದ ಹಸಿರುಡೋಲಿ. ಈ ಡೋಲಿಗೆ ಹೊಸ ಚಾಪೆಯನ್ನು ಕಲಾತ್ಮಕವಾಗಿ ಸುತ್ತುತ್ತಾರೆ. ನಂತರ ಅದರ ಮೇಲೆ ಕೆಂಪುಮಣ್ಣು ಮೆತ್ತುತ್ತಾರೆ. ಆ ಹಸಿ ಮಣ್ಣಿನ ಮೇಲೆ ಆಳವಿ ಹಾಕಿ ಪಿಚಕಾರಿಯಿಂದ ನೀರು ಸಿಂಪಡಿಸುತ್ತಾರೆ. ಎಂಟ್ಹತ್ತು ದಿನಗಳವರೆಗೆ ಈ ಕಾರ್ಯ ನಡೆದಿರುತ್ತದೆ. ಆಳವಿ ಕುಡಿಯೊಡೆದು ಸಸಿಯಾದನಂತರ ಇಡೀ ಡೋಲಿ ಹಸಿರಿನಿಂದ ಸಮೃದ್ಧವಾಗಿ ಕಾಣತೊಡಗುತ್ತದೆ. ನಾನೂ ಪಿಚಕಾರಿ ಹೊಡೆದಿದ್ದೇನೆ. ಆಗ ಮೂಗಿಗೆ ಬಡಿಯುವ ಘಾಟು ವಾಸನೆ ಇನ್ನೂ ನೆನಪಿದೆ. ಇದಕ್ಕೆ ‘ಆಳವಿ ಡೋಲಿ’ ಎಂದೂ ಮಸೀದಿಗೆ ‘ಆಳವಿ ಮಸೀದಿ’ ಎಂದೂ ಕರೆಯುತ್ತಾರೆ. ಈ ಕಾರಣದಿಂದಾಗಿ ಎಲ್ಲ ಡೋಲಿಗಳಲ್ಲಿ ಇದು ಅತಿಭಾರದ ಡೋಲಿಯಾಗಿದೆ. ಇದು ನಮ್ಮ ನಾವಿಗಲ್ಲಿಯ ಹೆಮ್ಮೆ. (ಈ ಪ್ರದೇಶಕ್ಕೂ ಪಕ್ಕದ ‘ಮಠಪತಿಗಲ್ಲಿ’ ಎಂದು ಕರೆಯಲು ನನ್ನ ಮನಸ್ಸು ಎಂದೂ ಒಪ್ಪಲಿಲ್ಲ.)

ಸಮಗಾರ ಓಣಿಯಲ್ಲಿ ಒಂದೇ ಒಂದು ಮುಸ್ಲಿಮರ ಮನೆ ಇದೆ. ಆ ಮನೆಯೊಡೆಯನ ಹೆಸರು ಮನ್ನುಸಾಬ ಕಲ್ಯಾಣಿ. ಅವರು ವೃತ್ತಿಯಲ್ಲಿ ಗಾಣಿಗರಾಗಿದ್ದರು. ಸಾಂಪ್ರದಾಯಿಕ ಗಾಣದಲ್ಲಿ ಒಂದಿಷ್ಟು ದೊಡ್ಡ ಪ್ರಮಾಣದಲ್ಲಿ ಕುಸುಬಿ ಎಣ್ಣೆ ಉತ್ಪಾದಿಸುತ್ತಿದ್ದರು. ಸಮಗಾರ ಸಮಾಜದ ಪ್ರತಿಯೊಬ್ಬರಿಗೆ ಅವರು ಅಚ್ಚುಮೆಚ್ಚಿನವರಾಗಿದ್ದರು. ಅವರ ಮುಗ್ಧಸ್ವಭಾವ ಮತ್ತು ಕ್ರಿಯಾಶೀಲ ಸಾಮಾಜಿಕ ವ್ಯಕ್ತಿತ್ವ ನನ್ನ ಬಾಲ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಮೂಡಿಸಿತು. ಸಮಗಾರ ಸಮಾಜದವರ ಎಲ್ಲ ಕಷ್ಟನಷ್ಟಗಳಲ್ಲಿ ಅವರು ಭಾಗಿಯಾಗುತ್ತಿದ್ದರು. ಆ ಪ್ರದೇಶದಲ್ಲಿ ಅವರ ಮನೆಯಲ್ಲೇ ಮೊದಲ ರೇಡಿಯೋ ಬಂದದ್ದು. ರೇಡಿಯೋ ಮತ್ತು ಲ್ಯಾಂಡ್ ಫೋನ್ ಇದ್ದರೆ ಅದು ಶ್ರೀಮಂತರ ಮನೆ. (ಕೈಯಲ್ಲಿ ವಾಚ್ ಇದ್ದರೆ ಮಧ್ಯಮವರ್ಗದವ ಎಂಬುದು ಗ್ಯಾರಂಟಿ. ಆ ಕಾಲದಲ್ಲಿ ವಾಚ್ ಕಟ್ಟಿಕೊಂಡವರು ಪದೆ ಪದೆ ನೋಡುತ್ತಿದ್ದರು. ಅವರು ಟೈಂ ನೋಡುತ್ತಿದ್ದಿಲ್ಲ, ವಾಚ್ ನೋಡುತ್ತಿದ್ದರು.)

ತಮ್ಮ ಓಣಿಯಲ್ಲಿನ ಸಮಗಾರರು ಅಥವಾ ಇನ್ನಾವುದೇ ಜಾತಿಯವರು ಸತ್ತರೂ ಅಲ್ಲಿ ಮನ್ನುಸಾಬ್ ಕ್ರಿಯಾಶೀಲವಾಗಿ ಹಾಜರಿರುತ್ತಿದ್ದರು. ಬಡವರಿದ್ದರೆ ಧನಸಹಾಯವನ್ನೂ ಮಾಡುತ್ತಿದ್ದರು. ಅವರದು ತನುಮನಧನದ ಸೇವೆಯಾಗಿತ್ತು. ಅವರ ಪೈಜಾಮಾ ಶರ್ಟುಗಳು ಜನಸಾಮಾನ್ಯರು ಉಡುವಂಥವು ಆಗಿದ್ದವು. ಅವರು ನಮ್ಮಂಥ ಬಾಲಕರನ್ನೂ ಗೌರವದಿಂದ ಕಾಣುತ್ತಿದ್ದರು. ‘ಮನ್ನುಸಾಬ್ ಮತ್ತು ನಾವೆಲ್ಲ ಒಂದೇ’ ಎಂದು ಸಮಗಾರ ಓಣಿಯವರು ಹೇಳುತ್ತಿದ್ದರು. ಅವರ ಜಗಳಗಳನ್ನು ಬಗೆಹರಿಸಲು ಕೂಡ ಮನ್ನುಸಾಬ್ ಅವರೇ ಬೇಕಾಗಿತ್ತು.

ವಿಜಾಪುರದ ಭಜಂತ್ರಿಗಲ್ಲಿಗೆ ಹತ್ತಿಕೊಂಡ ಮದ್ದಿನಖಣಿ ಓಣಿಯಿಂದ ನಾವಿಗಲ್ಲಿಗೆ ಬಂದ ಮರುವರ್ಷ ಅಂದರೆ 1959 ರಲ್ಲಿ ಕಾಕಾ ಕಾರಖಾನೀಸರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿತ್ತು ಎಂಬುದು ನನಗೆ ನಂತರ ದೊಡ್ಡವನಾದ ಮೇಲೆ ತಿಳಿಯಿತು.

(ನಾವಿಗಲ್ಲಿಯಲ್ಲಿ ನಿಮ್ನ ವರ್ಗದ ವಿದ್ಯಾರ್ಥಿಗಳಿಗಾಗಿ ಕಾಕಾ ಕಾರಖಾನೀಸರು ಸ್ಥಾಪಿಸಿದ ವಸತಿ ನಿಲಯ 1972ರವರೆಗೆ ಇದೇ ಜಾಗದಲ್ಲಿತ್ತು)

ಸಜ್ಜನ್ ಸರ್ ಮನೆ ಎದುರಿಗೆ ದಲಿತ ಸಮುದಾಯದ ಬೋರ್ಡಿಂಗ್ ಇತ್ತು. ನಮ್ಮ ಬಾಡಿಗೆ ಮನೆ ಅವರ ಮನೆ ಪಕ್ಕದಲ್ಲಿನ ಖಾಲಿ ಜಾಗಕ್ಕೆ ಹತ್ತಿಕೊಂಡು ಇತ್ತು. ಕಾಕಾ ಕಾರಖಾನೀಸರು ಪ್ರಾರಂಭಿಸಿದ ಈ ಬೋರ್ಡಿಂಗ್ ಸಂಪರ್ಕದಿಂದಾಗಿ ನನ್ನ ಬದುಕಿನಲ್ಲಿ ಹೊಸ ಅಧ್ಯಾಯವೇ ಪ್ರಾರಂಭವಾಯಿತು. (ಕಾಕಾ ಕಾರಖಾನೀಸರ ಪೂರ್ತಿ ಹೆಸರು ಗಣೇಶ ಗೋವಿಂದರಾವ ಕಾರಖಾನೀಸ. ಅವರು 1890 ನೇ ಏಪ್ರಿಲ್ 20 ರಂದು ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಮಲಿಕಾಪೂರದಲ್ಲಿ ನಾಲ್ಕನೆಯವರಾಗಿ ಜನಿಸಿದರು. ತಾಯಿ ಪಾರ್ವತಿಬಾಯಿ. ಅಣ್ಣಂದಿರು ಡಾ|| ಬಾಳಕೃಷ್ಣ ಮತ್ತು ಶಂಕರರಾವ. ಅಕ್ಕ ಗೋದುತಾಯಿ ತಂಗಿ ಬಾಳೂತಾಯಿ. ಅವರದು ಮರಾಠಿ ಮಾತೃಭಾಷೆಯ ಕರಾಡ ಬ್ರಾಹ್ಮಣರ ಶಿವಭಕ್ತ ಕುಟುಂಬ.

ದೊಡ್ಡಣ್ಣ ಬಾಳಕೃಷ್ಣ ವೈದ್ಯರಾಗಿ ಜಮಖಂಡಿ ಸಂಸ್ಥಾನದಲ್ಲಿ ಮೆಡಿಕಲ್ ಆಫಿಸರ್ ಆದರು. ಆದರೆ ಮದುವೆಯಾದ ಹೊಸದರಲ್ಲೇ ವಿಧುರರಾದರು. ಮರು ಮದುವೆಯಾಗಲಿಲ್ಲ. ಎರಡನೇ ಅಣ್ಣ ಶಂಕರರಾವ ಮೆಕ್ಯಾನಿಕಲ್ ಎಂಜಿನಿಯರಾಗಿದ್ದರು.

(ಗಣೇಶ ಗೋವಿಂದರಾವ ಕಾರಖಾನೀಸ)

ಮಲಿಕಾಪೂರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೇಲೆ, ಕಾಕಾ ಕಾರಖಾನೀಸರು 1903 ರಲ್ಲಿ ದೊಡ್ಡಣ್ಣನ ಬಳಿ ಜಮಖಂಡಿಗೆ ಬಂದು ‘ಪರಶುರಾಮ ಭಾವು ಮಾಧ್ಯಮಿಕ ಶಾಲೆ’ಯಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದರು. ಪಕ್ಕದ ಮುಧೋಳ ಸಂಸ್ಥಾನದಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಕೌಜಲಗಿ ಹಣಮಂತರಾಯರ ಸ್ನೇಹ ಲಭಿಸಿ ಅವರ ಪ್ರಭಾವಕ್ಕೆ ಒಳಗಾದರು. ಆ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ಪ್ರಜ್ಞೆ ಮೂಡಿತು. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದಾಗ ಇನ್ನೂ 15 ವರ್ಷ ತುಂಬಿರಲಿಲ್ಲ. ಅದಕ್ಕಾಗಿ ಅನೇಕ ಸಲ ಜೈಲುವಾಸವನ್ನೂ ಅನುಭವಿಸಿದರು. 1908 ರಲ್ಲಿ ಬ್ರಿಟಿಷ್ ಸರ್ಕಾರ ಲೋಕಮಾನ್ಯ ಟಿಳಕರಿಗೆ ಶಿಕ್ಷೆ ವಿಧಿಸಿದಾಗ ಕ್ರಾಂತಿಕಾರಿಯಾಗಬಯಸಿದರು. 1909 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸಾದಮೇಲೆ, ಸ್ವಾತಂತ್ರ್ಯ ಹೋರಾಟದ ತೀವ್ರತೆಯಿಂದಾಗಿ ಶಿಕ್ಷಣ ಮುಂದುವರಿಸುವ ಇಚ್ಛೆ ಇರಲಿಲ್ಲ. ಆದರೆ ಗುರುದೇವ ರಾನಡೆ ಅವರ ಪ್ರಭಾವದಿಂದಾಗಿ 1911 ರಲ್ಲಿ ಪುಣೆ ಡೆಕ್ಕನ್ ಕಾಲೇಜ್ ಸೇರಿದರು. ಜೊತೆಗೆ ಒಳ್ಳೆಯ ಕುಸ್ತಿಪಟು ಆದರು. ಜ್ಞಾನೇಶ್ವರಿ, ದಾಸಬೋಧ ಮತ್ತು ತುಕಾರಾಮರ ಅಭಂಗಗಳು ಅವರ ಮೆಚ್ಚಿನ ಗ್ರಂಥಗಳಾಗಿದ್ದವು. 1917 ರಲ್ಲಿ ಬಿ.ಎ. ಪಾಸು ಮಾಡಿದರು.

ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದ ಅವರು, ಸಾಬರಮತಿ ಆಶ್ರಮಕ್ಕೆ ಹೋಗಿ ಎರಡು ವರ್ಷ ಖಾದಿ ಶಿಕ್ಷಣ ಪಡೆದರು. ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಕೌಜಲಗಿ ಹಣಮಂತರಾಯರ ಸಲಹೆಯ ಪ್ರಕಾರ 1933 ನೇ ಜೂನ್ 20 ರಂದು ವಿಜಾಪುರ ನಗರದಲ್ಲಿ ಗೋಡಬೋಲೆಮಳಾ ಸಮೀಪದ ಅಜರೇಕರ ಚಾಳದಲ್ಲಿ ದಲಿತ ಸಮುದಾಯದ ಬೋರ್ಡಿಂಗ್ ಪ್ರಾರಂಭಿಸಿದರು. “ಇಂದಿನಿಂದ ನಾನು ದಲಿತನಾದೆ” ಎಂದು ಕಾಕಾ ಘೋಷಣೆ ಮಾಡಿದರು. ತಮ್ಮನ್ನು ‘ದಲಿತರ ಸೇವಕ’ ಎಂದು ಭಾವಿಸಿ ಅನೇಕ ದಲಿತ ಮಕ್ಕಳ ಸೇವೆ ಮಾಡಿದರು.

ಈ ಒಪ್ಪಂದ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಮೂರೂ ಗಲ್ಲಿಯ ಜನ ಮತ್ತಿತರ ಶ್ರೀಮಂತ ಉದಾರವಾದಿಗಳು ಸೇರಿ, ಹಣ ಸಂಗ್ರಹಿಸಿ ಇಡೀ ಊರಿಗೆ ಊಟ ಹಾಕಿಸಿದರು. ಅಷ್ಟೊಂದು ಜನರಿಗೆ ಸಾಕಾಗುವಷ್ಟು ಜಾಗ ಬೇಕೆಂಬ ಕಾರಣದಿಂದ ಭೂತನಾಳ ಕೆರೆಯ ದಂಡೆಯನ್ನು ಸಾಮೂಹಿಕ ಭೋಜನಕ್ಕಾಗಿ ಆಯ್ಕೆ ಮಾಡಿಕೊಂಡರು.

1935 ರಲ್ಲಿ ನಡೆದ ಸಾಮೂಹಿಕ ಮುಲ್ಕೀ ಪರೀಕ್ಷೆಯಲ್ಲಿ ಎಚ್.ಎಸ್. ಕಂಕಣವಾಡಿ ಎಂಬ ಬೋರ್ಡಿಂಗ್ ವಿದ್ಯಾರ್ಥಿ ಇಡೀ ವಿಜಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ! ಬೋರ್ಡಿಂಗ್ ವಿದ್ಯಾರ್ಥಿ ನಾರಾಯಣ ಕದಮ ಜಿಲ್ಲೆಯಲ್ಲಿ ಮ್ಯಾಟ್ರಿಕ್ ಪಾಸಾದ ಪ್ರಥಮ ದಲಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.

ಈ ಸಾಧನೆಗಾಗಿ ಕಾಕಾ ಕಾರಖಾನೀಸರು ತೆತ್ತ ಬೆಲೆ ಅಪಾರವಾಗಿದೆ. ಬ್ರಾಹ್ಮಣ ಸಮಾಜ ಅವರನ್ನು ಬಹಿಷ್ಕರಿಸಿತು. ಅವರ ಮನೆಯಿಂದಲೇ ಬಹಿಷ್ಕಾರ ಪ್ರಾರಂಭವಾಯಿತು. ಆಗ ಕಾಕಾ ಅವರು ಅದೇ ಬೋರ್ಡಿಂಗ್‌ನಲ್ಲಿ ಬಂದು ಉಳಿದರು.

1938 ನೇ ಸೆಪ್ಟೆಂಬರ್ 8 ರಂದು ಕಾಕಾ ಕನ್ಯಾಮಂದಿರ ಆರಂಭಿಸಿದರು. ತುಳಸಾ ಲಮಾಣಿ ಮುಲ್ಕಿ ಪರೀಕ್ಷೆಯಲ್ಲಿ ಪಾಸಾದ ಮೊದಲ ವಿದ್ಯಾರ್ಥಿನಿ. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಪಾಸಾದ ಮೊದಲ ವಿದ್ಯಾರ್ಥಿನಿ ಯಮುನಾ ಇಂಗಳಗಿ.

(ಕನ್ಯಾಮಂದಿರ)

ದೊಡ್ಡ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಕೌಜಲಗಿ ಹಣಮಂತರಾಯರು ತಮಗೆ ಬರುತ್ತಿದ್ದ 75 ರೂಪಾಯಿ ಪಗಾರದಲ್ಲಿ 30 ರೂಪಾಯಿಗಳನ್ನು ಕಾಕಾ ಕಾರಖಾನೀಸ ಅವರಿಗೆ ಕಳುಹಿಸುತ್ತಿದ್ದರು! ಹೀಗೆ ಅವರು ಕಷ್ಟಪಟ್ಟು ಹಣ ಸಂಗ್ರಹಿಸುತ್ತ ಬಾಲಕರ ಮತ್ತು ಬಾಲಕಿಯರ ಬೋರ್ಡಿಂಗ್‌ಗಳನ್ನು ನಡೆಸಿದರು.

‘ಏನು ಕಾಕಾ, ನೀ ಏನೋ ದಲಿತರಿಗಾಗಿ ಇಷ್ಟು ಮಾಡುತ್ತೀ, ಆದರೆ ಅವರು ನಿನಗೆ ತಿರುಗಿ ಬೀಳುತ್ತಾರೆ ನೋಡಿಕೋ’ ಎಂದು ಕೆಲ ಸವರ್ಣೀಯರು ಅವರನ್ನು ಹೆದರಿಸುತ್ತಿದ್ದರು. ಅದಕ್ಕೆ ಕಾಕಾನ ಉತ್ತರ ಸಿದ್ಧವಾಗಿರುತ್ತಿತ್ತು. ‘ಅದೇ ನನಗೆ ಬೇಕಾಗಿದೆ. ಅವರು ನನಗೆ ತಿರುಗಿ ಬೀಳುವಷ್ಟು ಗಟ್ಟಿಯಾದರೆ ನನಗೆ ಸಂತೋಷವಾಗುತ್ತದೆ. ಅಷ್ಟೇ ಯಾಕೆ ಅವರು ನನಗೆ ಚಪ್ಪಲಿಯಿಂದ ಹೊಡೆವಷ್ಟು ಧೈರ್ಯ ಬಂದರೆ ಸಾಕು, ನನ್ನ ಶ್ರಮ ಸಾರ್ಥಕವಾದಂತೆ. ಅನಂತರ ದಲಿತ ಸುಧಾರಣೆಯಲ್ಲಿ ನನ್ನ ಕೆಲಸ ಏನೂ ಉಳಿಯುವುದಿಲ್ಲ’ ಎಂದು ಹೇಳುತ್ತಿದ್ದರು.

ಅಂತ್ಯಕಾಲದಲ್ಲಿ ಅವರೊಂದಿಗೆ ಇದ್ದ ಕೆ.ಆರ್. ಸಂಕದ ಅವರು, ಕಾಕಾ ಕಾರ್ಖಾನೀಸರ ಕೊನೆಯ ದಿನದ ಚಿತ್ರವನ್ನು ಹೀಗೆ ನೀಡಿದ್ದಾರೆ. “ನೂರು ವರ್ಷ ಪೂರ್ತಿಯಾಗಲು ನಾಲ್ಕು ತಿಂಗಳುಗಳಿದ್ದವು. ದೇಹ ಹಣ್ಣಾಗಿತ್ತು. ಅವರ ಆರೈಕೆಯನ್ನು ಮನಮುಟ್ಟಿ ಮಾಡುವ ನನ್ನನ್ನು ಅವರ ಕಣ್ಣುಗಳು ಕರುಣೆಯಿಂದ ನೋಡುತ್ತಿದ್ದವು. … 20.12.1989 ರಂದು ಚಿರನಿದ್ರೆ. ಆ ಅಪೂರ್ವ ಹಿರಿಯ ಜೀವ ಚಿರನಿದ್ರೆ ಬಯಸಿತು. ಸವರ್ಣೀಯರು ‘ಅಸ್ಪೃಶ್ಯ’ ಎಂದು ದೂರುವ ನನ್ನ ತೆಕ್ಕೆಯಲ್ಲಿ ಆ ಮಹಿಮಾ ಪುರುಷನ ಭೌತಿಕ ಶರೀರವು ನಿಷ್ಕ್ರಿಯವಾಯಿತು. ನಮ್ಮ ಏಳ್ಗೆಗಾಗಿ ಬೆಳಗುತ್ತಿದ್ದ ಆಶಾ ದೀಪವು ನಂದಿತು.” – ಆಧಾರ: ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರ ‘ಪದ್ಮಶ್ರೀ ಕಾಕಾ ಕಾರಖಾನೀಸರು’)

ಕಾಕಾ ಕಾರಖಾನೀಸರು ಸ್ಥಾಪಿಸಿದ ‘ಕನ್ಯಾಮಂದಿರ’ ವಿಜಾಪುರದ ಮುಖ್ಯರಸ್ತೆಯಾದ ಸ್ಟೇಷನ್ ರೋಡ್ ಪಕ್ಕದಲ್ಲಿದ್ದು ಇಂದು ಕೋಟ್ಯಂತರ ರೂಪಾಯಿ ಬೆಲೆಬಾಳುವಂಥದ್ದು. ಇಡೀ ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ ಹೆಣ್ಣುಮಕ್ಕಳಿಗೂ ಆಶ್ರಯ ಕೊಟ್ಟು ವಿದ್ಯಾವಂತರನ್ನಾಗಿ ಮಾಡಿದ ಸ್ಥಳವಿದು. 83 ವರ್ಷಗಳಷ್ಟು ಹಿಂದೆ ಕಾಕಾ ಕಾರ್ಖಾನೀಸರು ಈ ಸಾಹಸವನ್ನು ಮಾಡಿದ ಮೊದಲಿಗರು. ಅವರು ಉಪವಾಸ ವನವಾಸದಂಥ ವಾತಾವರಣ ಸೃಷ್ಟಿಸಿಕೊಂಡು ಈ ಮಹಾಕಾರ್ಯ ಮಾಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದಾಗಿದೆ.

(ಭೂತನಾಳ ಟ್ಯಾಂಕ್)

60 ವರ್ಷಗಳ ಹಿಂದೆ, ನಾಲ್ಕನೆಯ ಇಯತ್ತೆಯ ವಿದ್ಯಾರ್ಥಿಯಾಗಿದ್ದ ನಾನು ಅದೇ ಬೋರ್ಡಿಂಗ್‌ನಲ್ಲಿ ನಿಂತಾಗ, ಕಾಕಾ ಕಾರ್ಖಾನೀಸರು ಗಣಪತಿ ಕೋಳೇಕರ್ ಜೊತೆಯಲ್ಲಿ ಬಂದರು. ಕಾಕಾರ ಸದೃಢ ಶರೀರ ಬಂಗಾರದ ಬಣ್ಣದ್ದಾಗಿತ್ತು. ಏರು ಕಚ್ಚೆಯ ಖಾದಿ ಬಿಳಿ ಧೋತರ, ಅಂಗಿ ಮತ್ತು ಟೋಪಿ ಅವರ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದವು. ಕಾಕಾಗಿಂತ ಕೋಳೇಕರ್ ಎತ್ತರವಾಗಿದ್ದರು ಎಂಬುದು ನೆನಪಿನಲ್ಲಿ ಉಳಿದಿದೆ. ಜೇಲ್ ಸೂಪರಿಂಟೆಂಡೆಂಟ್ ಆಗಿ ನಿವೃತ್ತರಾಗಿದ್ದ ಕೋಳೇಕರ್ ಮಿಲಿಟರಿ ಅಧಿಕಾರಿಯ ಹಾಗೆ ಕಾಣಿಸುತ್ತಿದ್ದರು. ಬೂಟು ಧರಿಸುತ್ತಿದ್ದ ಅವರು ಹಾಫ್ ಪ್ಯಾಂಟ್ ಹಾಕಿ ಇನ್‌ಷರ್ಟ್ ಮಾಡಿಕೊಂಡಿರುತ್ತಿದ್ದರು. ಅವರು  ಬೋರ್ಡಿಂಗ್ ಇನ್ಸ್‌ಪೆಕ್ಷನ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಹುಡುಗರು ಜಗಳಾಡಿದ್ದರೆ ಅಥವಾ ಯಾವುದಾದರೂ ಕುಂದುಕೊರತೆಗಳಿದ್ದರೆ ಬಂದು ಪರಿಶೀಲನೆ ಮಾಡುತ್ತಿದ್ದರು. ಬೋರ್ಡಿಂಗ್ ಹುಡುಗರು ಅವರಿಗೆ ಅಂಜುತ್ತಿದ್ದರು.

ಕಾಕಾ ಅವರ ಕಿವಿಗಳು ಮಂದವಾಗಿದ್ದವು. ಅವರ ಕೈಯಲ್ಲಿ ಬೆಳ್ಳಿಯ ಸೌಟಿನಂಥ ವಸ್ತು ಇತ್ತು. ಕಾಕಾ ಜೊತೆ ಕೋಳೇಕರ್ ಮಾತನಾಡಬೇಕೆಂದಾಗಲೆಲ್ಲ ಸೌಟಿನಲ್ಲಿ ಮಾತನಾಡುತ್ತಿದ್ದರು. ಆಗ ಅದರ ಇನ್ನೊಂದು ತುದಿ ಕಾಕಾರ ಕಿವಿಯಲ್ಲಿ ಇರುತ್ತಿತ್ತು.
ರಾಮರಾವ್ ದೀಕ್ಷಿತ್ ಎಂಬವರು ಬೋರ್ಡಿಂಗ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ವಿದ್ಯಾರ್ಥಿಗಳು ಅವರನ್ನು ‘ಅಣ್ಣಾ’ ಎಂದು ಕರೆಯುತ್ತಿದ್ದರು. ಅವರು ದಯಾಮಯಿಯಾಗಿದ್ದರು. ಕೆಲ ಹುಡುಗರ ಭಂಡಾಟವನ್ನು ಸಹಿಸಿಕೊಂಡು ಅವರನ್ನು ಸರಿದಾರಿಗೆ ತರುವ ಕಾರ್ಯದಲ್ಲಿ ಮಗ್ನರಾಗಿರುತ್ತಿದ್ದರು. ಅವರ ಒಂದು ಕಣ್ಣು ಕೃತ್ರಿಮವಾಗಿತ್ತು. ಅವರ ಪತ್ನಿಯ ಹೆಸರು ಸರೋಜಿನಿ ಎಂದು ಇದ್ದ ನೆನಪು. ಮಗ ರಮೇಶ, ಹೆಣ್ಣುಮಕ್ಕಳಾದ ಆಶಾ ಮತ್ತು ಅಂಜಲಿ ಬಹಳ ಸುಂದರವಾಗಿದ್ದರು. ಅವರೆಲ್ಲ ದಲಿತ ಹುಡುಗರನ್ನು ಆತ್ಮೀಯವಾಗಿ ಕಾಣುತ್ತಿದ್ದರು. ಇಡೀ ಕುಟುಂಬ ದಲಿತ ಮಕ್ಕಳ ಸೇವೆಯಲ್ಲಿ ತೊಡಗಿದಂತೆ ಇತ್ತು.

ಅಜರೇಕರ್ ಚಾಳ ನಂತರ ಈ ದಲಿತರ ಬೋರ್ಡಿಂಗ್ ದರಬಾರಗಲ್ಲಿಯ ಅಷ್ಟಪೈಲ್ ಬಂಗ್ಲೆಯ ಬಳಿ ಹೋಯಿತು. ನಂತರ ನಾವಿಗಲ್ಲಿಗೆ ಬಂದಿತು. ಇದು ಕೂಡ ಬಾಡಿಗೆ ಕಟ್ಟಡವಾಗಿತ್ತು. ಆದರೆ ಬೋರ್ಡಿಂಗ್‌ಗೆ ಹೇಳಿ ಮಾಡಿಸಿದಂತೆ ಇತ್ತು. ಸೇದುವ ಬಾವಿ, ಅಡುಗೆಮನೆ, ಮೇಲ್ವಿಚಾರಕರ ಮನೆ, ಪ್ರಾರ್ಥನಾ ಸಭಾಂಗಣ, (ಅಲ್ಲೇ ಸಾಮೂಹಿಕ ಭೋಜನ ವ್ಯವಸ್ಥೆ) ಸುತ್ತೆಲ್ಲ ಕೋಣೆಗಳು, ಮಧ್ಯೆ ಕಾರ್ಯಕ್ರಮ ನಡೆಸುವಷ್ಟು ಖಾಲಿ ಪ್ರದೇಶ, ಕಟ್ಟಡದ ಹಿಂದೆ ಆಟ ಆಡಲು ದೊಡ್ಡ ಬಯಲು ಮುಂತಾದ ಅನುಕೂಲತೆಗಳಿದ್ದವು. ಮನೆಯ ಮಾಲೀಕರು ಮಹಾರಾಷ್ಟ್ರದಲ್ಲಿದ್ದರು.

ಬೋರ್ಡಿಂಗ್ ಹೆಬ್ಬಾಗಿಲಿನ ಒಳಗೆ, ಬಲಬದಿಗೆ ಅಣ್ಣಾ ದೀಕ್ಷಿತರ ಮನೆ ಇತ್ತು. ದೊಡ್ಡದಾದ ಕೋಣೆ ಇದ್ದು ಇನ್ನೂ ದೊಡ್ಡದಾದ ಹಾಲ್ ಇತ್ತು. ಸಂಕದ ಎಂಬ ಹಿರಿಯ ವಿದ್ಯಾರ್ಥಿ ಕಾಕಾ ಅವರ ಆಪ್ತ ಸಹಾಯಕನ ಹಾಗೆ ಇದ್ದರು. ಅವರ ಬಗ್ಗೆ ಕೆಲ ಗಲಾಟೆ ಮಾಡುವ ವಿದ್ಯಾರ್ಥಿಗಳಿಗೆ ಬೇಸರವಿತ್ತು. ಏಕೆಂದರೆ ಬೋರ್ಡಿಂಗ್‌ನಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅವರು ಕಾಕಾರಿಗೆ ವರದಿ ಒಪ್ಪಿಸುತ್ತಿದ್ದರು. ಅವರು ಹಾಸ್ಟೆಲ್‌ನಲ್ಲಿ ಇರುತ್ತಿರಲಿಲ್ಲ. ಗೋಡಬೋಲೆಮಳಾದಲ್ಲಿರುವ ಕಾಕಾರ ಮನೆಯಲ್ಲೇ ಇರುತ್ತಿದ್ದರು. ಎರಡು ಹೊತ್ತಿನ ಊಟಕ್ಕೆ ಮಾತ್ರ ಬೋರ್ಡಿಂಗ್‌ಗೆ ಬರುತ್ತಿದ್ದರು. ಪ್ರತಿದಿನ ನಡೆಯುವ ಘಟನೆಗಳನ್ನು ತಿಳಿದುಕೊಂಡು ಕಾಕಾ ಅವರಿಗೆ ವರದಿ ಒಪ್ಪಿಸುತ್ತಿದ್ದರು.

ಒಂದು ಸಲ ಕಾಕಾ ಅವರು ತಮ್ಮ ಎರಡನೇ ಅಣ್ಣ ಶಂಕರರಾವ ಅವರ ಹೆಣ್ಣು ಮಕ್ಕಳಾದ ಕುಸುಮಾ ಮತ್ತು ಸುಹಾಸಿನಿ ಅವರನ್ನು ಕರೆದುಕೊಂಡು ಬಂದ ನೆನಪು. ಅವರು ಸುಂದರ ಮಹಿಳೆಯರಾಗಿದ್ದರು. ಬ್ರಹ್ಮಚಾರಿ ಕಾಕಾ ಹಾಗೆ ಅವರು ಕೂಡ ಮದುವೆಯಾಗಲಿಲ್ಲ.
ಈ ಬೋರ್ಡಿಂಗ್‌ನಲ್ಲಿನ ಸೇದುವ ಬಾವಿಯಲ್ಲಿ ಒಂದು ಸಲ ಬೆಕ್ಕೊಂದು ಆಯತಪ್ಪಿ ಬಿದ್ದು ಸತ್ತಿತ್ತು. ಆ ಹುಡುಗರಿಗೆ ಅದೊಂದೇ ನೀರಿನ ಆಸರೆಯಾಗಿತ್ತು. ಇಂಥ ಪ್ರಸಂಗಗಳಲ್ಲಿ ಅವರು ನಮ್ಮ ಮನೆ ಬಿಟ್ಟರೆ ಬೇರೆಲ್ಲೂ ಹೋಗುವಹಾಗಿರಲಿಲ್ಲ.

ನಮ್ಮ ಮೂರಂಕಣದ ಮನೆಯಲ್ಲಿ ಓದುವ ಸಾಧ್ಯತೆ ಇರಲಿಲ್ಲ. ಮನೆತುಂಬ ಹೊಗೆ ಹಿಡಿಯುತ್ತಿತ್ತು. ಹೀಗಾಗಿ ಆಗಾಗ ಓದುವುದಕ್ಕಾಗಿ ಬೋರ್ಡಿಂಗ್‌ಗೆ ಹೋಗುತ್ತಿದ್ದೆ. ಬೋರ್ಡಿಂಗ್‌ನಲ್ಲಿನ ಹೈಸ್ಕೂಲು ವಿದ್ಯಾರ್ಥಿಗಳು ನನ್ನನ್ನು ಬಹಳ ಆತ್ಮೀಯತೆಯಿಂದ ಕಾಣುತ್ತಿದ್ದರು. ಹೀಗೆ ಮೂರನೇ ಇಯತ್ತೆಯಿಂದ ಏಳನೇ ಇಯತ್ತೆವರೆಗೆ ಹೆಚ್ಚು ಸಮಯವನ್ನು ಆ ಬೋರ್ಡಿಂಗ್‌ನಲ್ಲೇ ಕಳೆದೆ.

ಒಂದು ರೂಮಿನಲ್ಲಿ ಮೂರ್ನಾಲ್ಕು ಜನ ವಿದ್ಯಾರ್ಥಿಗಳು ಇರುತ್ತಿದ್ದರು. ಅವರು ಬೋರ್ಡಿಂಗ್‌ಗೆ ಬರುವಾಗ ಒಂದು ಟ್ರಂಕ್, ಲೋಟಾ, ಪ್ಲೇಟ್, ಜಮಖಾನೆ ಮತ್ತು ಚದ್ದರ್ ತರಬೇಕೆಂಬ ನಿಯಮವಿತ್ತು.

ನಾನು ಬೋರ್ಡಿಂಗ್‌ಗೆ ಹೋದಾಗ ಹುಡುಗರು ತಮ್ಮ ರೂಮಿನಲ್ಲಿ ಮಲಗಿಸಿಕೊಳ್ಳಲು ಜಗಳಾಡುತ್ತಿದ್ದರು. ನಾಲ್ಕನೆಯ ಇಯತ್ತೆಯ ನಾನು ಅವರ ಎಂಟನೆಯ ಇಯತ್ತೆಯ ಪಠ್ಯಪುಸ್ತಕಗಳನ್ನು ಓದುತ್ತಿದ್ದೆ. ಅವರು ಓದುವುದನ್ನು ಕೇಳಿಸಿಕೊಳ್ಳುತ್ತಿದ್ದರು. ಹೀಗೆ ನನಗೆ ಬಾಲ್ಯದಲ್ಲೇ ಎಂಟನೇ ಇಯತ್ತೆಯ ಪಠ್ಯಕ್ರಮದ ಅನೇಕ ಪಠ್ಯಗಳು ನೆನಪಿದ್ದವು.

ಕೆಲವೊಂದು ಸಲ ರಾತ್ರಿಯ ಊಟ ಆ ಬೋರ್ಡಿಂಗಲ್ಲೇ ಆಗುತ್ತಿತ್ತು. ಎಲ್ಲರೂ ತಮ್ಮ ತಮ್ಮ ತಾಟುಗಳನ್ನು ತೆಗೆದುಕೊಂಡು ಬಂದು ಸಾಲಾಗಿ ನೆಲದ ಮೇಲೆ ಕೂಡುತ್ತಿದ್ದರು. ಒಮ್ಮೊಮ್ಮೆ ಹೀಗೆ ಊಟಕ್ಕೆ ಕೂಡುವ ಪ್ರಸಂಗ ಬರುವುದೆಂದು ನನ್ನದೊಂದು ಅಲ್ಯೂಮಿನಿಯಂ ತಾಟು ಒಂದು ಕೋಣೆಯಲ್ಲಿ ಇರುತ್ತಿತ್ತು. ನಾವೆಲ್ಲ ತಾಟು ತೆಗೆದುಕೊಂಡು ಕುಳಿತ ನಂತರ ಪ್ರಾರ್ಥನೆ ಶುರು ಮಾಡುತ್ತಿದ್ದೆವು. ಅವುಗಳಲ್ಲಿನ ಒಂದು ಪ್ರಾರ್ಥನೆ ನನಗೆ ಬಹಳ ಹಿಡಿಸಿತ್ತು. ವಿದ್ಯಾರ್ಥಿಗರು ಆ ಪ್ರಾರ್ಥನೆಯನ್ನು ಬಹಳ ಆಕರ್ಷಕವಾಗಿ ಹಾಡುತ್ತಿದ್ದರು. ನಾನೂ ಧ್ವನಿಗೂಡಿಸುತ್ತಿದ್ದೆ. “ಓಂ ತತ್ ಶ್ರೀ ನಾರಾಯಣ ನೀ. ಸಿದ್ಧ ಬುದ್ಧ ನೀ ..” ಎಂದು ಆ ಹಾಡು ಸಾಗುತ್ತಿತ್ತು. “ಈಶ್ವರ ಅಲ್ಲಾ ತೇರೋ ನಾಮ” ಎನ್ನುವ ಹಾಗೆ ಅದೊಂದು ಸರ್ವಧರ್ಮದ ಸೌಹಾರ್ದ ಗೀತವಾಗಿತ್ತು. ಇದು ನನ್ನ ಬದುಕಿನಲ್ಲಿ ಹಾಡಿದ ಮೊದಲ ಸೌಹಾರ್ದ ಗೀತ.

ಕಾಕಾ ಕಾರಖಾನೀಸರ ವ್ಯಕ್ತಿತ್ವ ನನ್ನ ಮೇಲೆ ಬಾಲ್ಯದಲ್ಲೇ ಅಗಾಧವಾದ ಪರಿಣಾಮ ಬೀರಿತು. ನನ್ನ ತಂದೆ ತಾಯಿಗಳ ಜೀವಕಾರುಣ್ಯ, ಕಾಕಾ ಕಾರ್ಖಾನೀಸರ ಅನುಪಮ ವ್ಯಕ್ತಿತ್ವ ಮತ್ತು ಬೋರ್ಡಿಂಗ್ ವಿದ್ಯಾರ್ಥಿಗಳ ಆತ್ಮೀಯತೆ ನನ್ನ ಬದುಕಿನ ಅಡಿಗಲ್ಲುಗಳಾದವು. ಮನುಷ್ಯ ಇಂಥ ಗುಂಗಿನಲ್ಲಿ ಬದುಕುವಾಗ ಜೀವನಪಥದಲ್ಲಿ ಮುಳ್ಳುಗಳು ಕೂಡ ಹೂಗಳಂತೆ ಅರಳಿ ನಿಲ್ಲುವವು.

ಬೋರ್ಡಿಂಗ್‌ನಲ್ಲಿ ಮೂವರು ಕೂಲಿ ಹೆಣ್ಣು ಮಕ್ಕಳು ನೂರಾರು ರೊಟ್ಟಿ ಬಡಿಯುತ್ತಿದ್ದರು. ಪಾಳಿ ಪ್ರಕಾರ ಹುಡುಗರೇ ಊಟ ಬಡಿಸುತ್ತಿದ್ದರು. ಪ್ರತಿಯೊಬ್ಬರಿಗೆ ಒಂದು ದಪ್ಪನೆಯ ರೊಟ್ಟಿ ಸಿಗುತ್ತಿತ್ತು. ಜೊತೆಗೆ ಅನ್ನ ಅಥವಾ ನುಚ್ಚು ಎಂದು ಕಾಣುತ್ತೆ. ನಾನು ಅರ್ಧ ರೊಟ್ಟಿ ಮಾತ್ರ ತಿನ್ನುತ್ತಿದ್ದೆ. ನಾನು ಊಟ ಹಾಕಿಸಿಕೊಳ್ಳುತ್ತಿರಲಿಲ್ಲವಾದ್ದರಿಂದ, ನನಗೆ ಊಟಕ್ಕೆ ಒತ್ತಾಯಿಸಿ ಅಕ್ಕಪಕ್ಕದಲ್ಲಿ ಕುಳಿತವರು ಗಿರ್ಧ ಗಿರ್ಧ ರೊಟ್ಟಿ ಕೊಡುತ್ತಿದ್ದರು. ನನಗೆ ಅಷ್ಟೇ ಹೆಚ್ಚಾಗುತ್ತಿತ್ತು.

ಬೋರ್ಡಿಂಗಲ್ಲಿ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಹಾಡು, ಕುಣಿತ, ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮಗಳು ಜರುಗುತ್ತಿದ್ದವು. ಒಂದು ನಾಟಕದಲ್ಲಿ “ಸಾರಿ ಸಾರಿ ರಾತ ತೇರಿ ಯಾದ ಸತಾಯೇ” ಎಂದು ನಾಟಕವೊಂದರಲ್ಲಿ ಒಬ್ಬ ಹುಡುಗ ಆಕರ್ಷಕವಾಗಿ ಹಾಡಿದ್ದು ನೆನಪಿದೆ. ನಿಮ್ನ ವರ್ಗದ ಮಕ್ಕಳಲ್ಲಿ ಕಂಠಸಿರಿ ಮತ್ತು ಕಲೆ ಸಹಜವಾಗಿರುತ್ತವೆ ಎಂಬುದು ನನಗೆ ಆವಾಗಲೇ ಅರಿವಿಗೆ ಬಂದಿತು.

(ಎಸ್.ಎಸ್. ಅರಕೇರಿ  ಅವರಿಗೆ ಸನ್ಮಾನ ನಡೆದ ಸಂದರ್ಭ)

ಬೋರ್ಡಿಂಗಲ್ಲಿ ಹೊಸದಾಗಿ ಸೇರಲು ಬರುವ ಹುಡುಗರಿಗೆ ಮೊದಲ ದಿನದ ಮೊದಲ ಊಟ ತಪ್ಪುತ್ತಿತ್ತು. ಕೆಲವರು ಬುತ್ತಿ ಕಟ್ಟಿಕೊಳ್ಳದೇ ಬರುವವರಿಗೆ ಹಳೆಯ ಹುಡುಗರು ನಮ್ಮ ಮನೆಗೆ ಕಳುಹಿಸುತ್ತಿದ್ದರು. ನಮ್ಮ ತಾಯಿ ಅವರಿಗೆ ಮಕ್ಕಳ ಹಾಗೆ ನೋಡಿಕೊಳ್ಳುತ್ತಿದ್ದಳು. ತೊಂದರೆಗೊಳಗಾದ ಬೋರ್ಡಿಂಗ್ ಮಕ್ಕಳಿಗೆ ನಮ್ಮ ಮನೆ ತವರುಮನೆಯಾಗಿತ್ತು.

ಈ ಬೋರ್ಡಿಂಗ್‌ನಲ್ಲಿ ಕಲಿತ ಎಸ್.ಎಸ್. ಅರಕೇರಿ ಮುಂದೆ ಕಾನೂನು ಕಲಿತು ವಿಜಾಪುರದಲ್ಲಿನ ಬಳ್ಳೊಳ್ಳಿ ಮೀಸಲು ಕ್ಷೇತ್ರದ ಶಾಸಕರಾದರು. ಕರ್ನಾಟಕ ಸರ್ಕಾರ 2015ನೇ ಏಪ್ರಿಲ್ 15ರಂದು ಅವರಿಗೆ ಡಾ. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿತು. ಐಸಿಎಸ್ ಅಧಿಕಾರಿ ಆರ್ ಭರಣಯ್ಯ ಅವರು ಅರಕೇರಿ ಅವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದರು. ಬಿಜ್ಜರಗಿಯ ಡಿ.ಎಸ್. ಆಕಾಶೆ ಎಸ್.ಎಸ್. ಹೈಸ್ಕೂಲಲ್ಲಿ ಫಸ್ಟ್ ರ್ಯಾಂಕ್ ಬಂದು ಕೊನೆಗೆ ಮಹಾರಾಷ್ಟ್ರದಲ್ಲಿ ಐಜಿಪಿಯಾಗಿ ನಿವೃತ್ತರಾದರು. ಶ್ಯಾಮ ರಕ್ಕಸಗಿ ಎಂಬವರು ಗುಲ್ಬರ್ಗಾದಲ್ಲಿ ಸ್ಪೆಷಲ್ ಡಿ.ಸಿ. ಆಗಿದ್ದರು. ಗೋವಿಂದ ಕಾರಜೋಳ ಅವರು ಸದ್ಯ ಕರ್ನಾಟಕದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ.

 (ಚಿತ್ರಗಳು: ಸುನೀಲಕುಮಾರ ಸುಧಾಕರ)