ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು. ಆದರೆ ಅದರಲ್ಲಿ ಯಾವುದೇ ಸ್ವಾರಸ್ಯಕರ ವಿಷಯ ಇರಲಿಲ್ಲ. ಮುಂದಕ್ಕೆ ಸಾಗಿದೆವು.
ಯೂರೋಪ್ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಬ್ರಸೆಲ್ಸ್‌ನ ಆಟೋಮಿಯಂ, ಬೆಲ್ಜಿಯಂ
ಯುರೋಪ್‌ನ ಎಲ್ಲಾ ದೇಶಗಳಲ್ಲೂ ಯಾವುದೋ ಒಂದು ಸ್ಮಾರಕವನ್ನು ಕಟ್ಟಿನಿಲ್ಲಿಸಿ ಚೆನ್ನಾಗಿ ನಿರ್ವಹಿಸುತ್ತಾ ಪ್ರಚಾರ ಮಾಡುತ್ತಿರುವುದನ್ನು ನೋಡಬಹುದು. ಕಾಡಿನ ಅಂಕುಡೊಂಕು ರಸ್ತೆಗಳಲ್ಲಿ ಚಲಿಸಿದ ಬಸ್ಸನ್ನು ರಸ್ತೆಯ ಒಂದು ತಿರುವಿನಲ್ಲಿ ನಿಲ್ಲಿಸಿ ನಾವೆಲ್ಲ ಚಳಿಯಲ್ಲಿ ಬೆಚ್ಚನೆಯ ಉಡುಪು, ತಲೆಗೆ ಟೋಪಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು ಸುಮಾರು ಒಂದು ಕಿ.ಮೀ. ದೂರ ಮರಗಿಡಗಳ ನಡುವೆ ನಡೆದುಹೋದೆವು. ದೂರದಲ್ಲಿ ಅತಿ ಎತ್ತರದ ದೊಡ್ಡದಾದ ಸ್ಟೇನ್ಲೆಸ್ ಸ್ಟೀಲ್‌ನ ಹೊಳೆಯುವ ಆಣ್ವಿಕ ಜೀವಕೋಶಗಳ (ಮಾಲಿಕ್ಯೂಲಾರ್ ಸೆಲ್ಸ್) ಮಾದರಿಯ ಒಂದು ದೈತ್ಯ ಸ್ಮಾರಕ ಕಾಣಿಸಿಕೊಂಡಿತು. ಇದೇನು? ಯಾವುದಾದರೂ ಪರಮಾಣು ಕಾರ್ಖಾನೆಯ ಸಂಕೇತವೆ? ಇಲ್ಲ ಪರಮಾಣು ಬಾಂಬ್ ಬೀಳಿಸಿದ ನೆಲವೆ? ಅರ್ಥವಾಗಲಿಲ್ಲ. ಮೊದಲ ನೋಟಕ್ಕೆ ಇದೊಂದು ಆಶ್ಚರ್ಯಕರವಾದ ವೈಜ್ಞಾನಿಕ ದೈತ್ಯಾಕಾರದ ಸ್ಮಾರಕ ಇಲ್ಲ ಪರಮಾಣುಗಳನ್ನು ಸಂಕೇತಿಸುವ ಸ್ಮಾರಕದಂತೆ ಕಾಣಿಸತೊಡಗಿತು.
ಬ್ರಸೆಲ್ಸ್ ನಗರದ ಉತ್ತರ ಅಂಚಿನಲ್ಲಿ ಇದನ್ನು ಮೂಲತಃ `ಎಕ್ಸ್ಪೋ 1958’ರ ವಿಶ್ವಶಾಂತಿಯ ಜ್ಞಾಪಕಾರ್ಥ ಕೇಂದ್ರವಾಗಿ ನಿರ್ಮಿಸಲಾಗಿದೆ ಎಂದು ನಂತರ ತಿಳಿಯಿತು. ಈ ಆಟೋಮಿಯಂ ಬ್ರಸೆಲ್ಸ್ ನಗರದ ಅಂಚಿನಲ್ಲಿ ಲೇಕೆನ್ ಹೈಜೆಲ್ ಪ್ರಸ್ಥಭೂಮಿಯಲ್ಲಿ ನಿರ್ಮಿಸಲಾಗಿದೆ. ಎಂಜಿನಿಯರ್ ಆಂಡ್ರೆ ವಾಟರ್‌ಕೀನ್ ಮತ್ತು ವಾಸ್ತುಶಿಲ್ಪಿ ಆಂಡ್ರೆ ಮತ್ತು ಜೀನ್ ಪೊಲಾಕ್ ವೈಜ್ಞಾನಿಕ ಪ್ರಗತಿಗೆ ಗೌರವಾರ್ಥವಾಗಿ ಇದನ್ನು ವಿನ್ಯಾಸಗೊಳಿಸಿದರು. ಜೊತೆಗೆ ಇದೇ ವೇಳೆ ಬೆಲ್ಜಿಯಮ್ ಎಂಜಿನಿಯರಿಂಗ್ ಕೌಶಲ್ಯವನ್ನು ಸಂಕೇತಿಸುವ ಸ್ಮಾರಕವೂ ಇದಾಗಿದೆ. ಪ್ರಸ್ತುತ ಇದು ನಗರದ ಜನಪ್ರಿಯ ಪ್ರವಾಸಿ ತಾಣ, ವಸ್ತುಸಂಗ್ರಹಾಲಯ, ಕಲಾ ಕೇಂದ್ರ ಮತ್ತು ಸಾಂಸ್ಕೃತಿಕ ತಾಣವಾಗಿ ಕಾರ್ಯ ನಿರ್ವಹಿಸುತ್ತದೆ. 1958ರಲ್ಲಿ ನಡೆದು ಎಕ್ಸ್ಪೋನಲ್ಲಿ ಸುಮಾರು 42 ದಶಲಕ್ಷ ಜನರು ಈ ಅದ್ಭುತ ಆಟೋಮಿಯಂಅನ್ನು ನೋಡಲು ಆಗಮಿಸಿದ್ದರು.
1950ರ ದಶಕದಲ್ಲಿ ವೈಜ್ಞಾನಿಕ ಪ್ರಗತಿ ಅತಿ ಉತ್ತಮವಾಗಿತ್ತು ಮತ್ತು ಪರಮಾಣು ಭೌತಶಾಸ್ತ್ರ ಸೇರಿದಂತೆ ವಿಜ್ಞಾನದಲ್ಲಿ ಮಾನವ ಕುಲದ ಪ್ರಗತಿಯನ್ನು ಎತ್ತಿತೋರಿಸಲು ಪರಮಾಣುಗಳನ್ನು ಚಿತ್ರಿಸುವ ರಚನೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಾಂಗೋದ ಯುರೇನಿಯಂ ಖನಿಜವನ್ನು ಪರಮಾಣು ವಿದಳನಕ್ಕೆ ಬಳಸುವ ವಸ್ತುವಿನ ಪ್ರಬಲ ಮೂಲವಾದಾಗಿನಿಂದ ಬೆಲ್ಜಿಯಂ ಅತ್ಯಾಸಕ್ತಿಯ ಅಭ್ಯಾಸಕರಾಗಿದ್ದರು ಮತ್ತು ಇದನ್ನು ವಿಶ್ವದ ಮೊದಲ ಪರಮಾಣು ಶಸ್ತ್ರಾಸ್ತ್ರಗಳಿಗೆ ಬಳಸಲಾಯಿತು. ವಿಪರ್ಯಾಸವೆಂದರೆ ಪರಮಾಣು ವಿದಳನ ತಂತ್ರಜ್ಞಾನವನ್ನು ವಿಶ್ವದ ಮೊದಲ ಪರಮಾಣು ಅಸ್ತ್ರಗಳಿಗೆ ಬಳಸಿ ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅಂಗವಿಕಲರಾಗಿ ಮಾಡಲಾಯಿತು. ಇದನ್ನು ಗಮನಿಸಿದ ಬೆಲ್ಜಿಯಂ, ಆಟೋಮಿಯಂ ಸ್ಮಾರಕವನ್ನು ರಚಿಸುವುದರೊಂದಿಗೆ ಸಮಾಜವನ್ನು ಸುಧಾರಿಸಲು ಮತ್ತು ಮಾನವ ಕುಲದ ಉತ್ತಮ ಸೇವೆಗಾಗಿ ಪರಮಾಣು ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿನ ಇತರ ಪ್ರಗತಿಗಳನ್ನು ಶಾಂತಿಯುತವಾಗಿ ಬಳಸಲು ಬೆಲ್ಜಿಯಂ ಬಯಸಿತು. ಪರಿಣಾಮ, ಆಟೋಮಿಯಮ್‌ಅನ್ನು ಸ್ಥಾಪಿಸಿತು. ಇದರಿಂದ ಜಗತ್ತಿನ ವಾರ್‌ಮಾಂಗರ್ಸ್ ಮೇಲೆ ಏನಾದರೂ ಪರಿಣಾಮ ಬೀರಿತೆ! ಎನ್ನುವ ಪ್ರಶ್ನೆ ಏಳುತ್ತದೆ.
ಈ ಆಟೋಮಿಯಂ ನಿರ್ಮಾಣವು ಒಂದು ತಾಂತ್ರಿಕ ಸವಾಲಾಗಿತ್ತು. 1955ರ ಜನವರಿಯಲ್ಲಿ ಮೆಟಲ್ ಫ್ಯಾಬ್ರಿಕೇಟಿಂಗ್ ಇಂಡಸ್ಟ್ರಿಯ ಕಂಪನಿಗಳ ಫೆಡರೇಶನ್ (ಈಗ ಅಗೋರಿಯಾ ಅಂತ ಕರೆಯಲಾಗುತ್ತದೆ) ಫ್ಯಾಬ್ರಿಮೆಟಲ್‌ನ ಆರ್ಥಿಕ ವಿಭಾಗದ ನಿರ್ದೇಶಕ ಎಂಜಿನಿಯರ್ ಆಂಡ್ರೆ ವಾಟರ್‌ಕೀನ್ ಅವರು ಮೊದಲಿಗೆ ಈ ಯೋಜನೆಯನ್ನು ಪ್ರಸ್ತುತಪಡಿಸಿದರು. ವಾಸ್ತುಶಿಲ್ಪಿಗಳಾದ ಆಂಡ್ರೆ ಮತ್ತು ಜೀನ್ ಪೊಲಾಕ್ ಅವರು ವಾಸ್ತುಶಿಲ್ಪದ ಹುಟ್ಟಿಗೆ ಕಾರಣರಾಗಿದ್ದರು ಮತ್ತು ಆಟೋಮಿಯಂ ರಚಿಸಲು ಹಲವಾರು ರೇಖಾಚಿತ್ರಗಳನ್ನು ಬಿಡಿಸಿದ್ದರು. ಕಂಪನಿಯ ಎಂಜಿನಿಯರುಗಳಾದ ಅರ್ಟೆಮಿ ಎಸ್. ಚೌಕಾಫ್ ಮತ್ತು ಆಂಡ್ರೆ ಬೆಕರ್ಸ್ರಿಂದ ನೆರವು ಪಡೆದುಕೊಂಡಿತು. ಮಾರ್ಚ್ 1956ರಲ್ಲಿ ವಿನ್ಯಾಸದ ಅಡಿಪಾಯ ಹಾಕಲಾಗಿ ಏಪ್ರಿಲ್ 1958ರಲ್ಲಿ ಆಟೋಮಿಯಂ ಪೂರ್ಣಗೊಂಡಿತು.
ಆಟೋಮಿಯಂ ಕಟ್ಟಡ 335 ಅಡಿಗಳ ಎತ್ತರವಿದ್ದು ಇದು ಬೆಲ್ಜಿಯಂನ ಅತ್ಯಂತ ಎತ್ತರದ ರಚನೆಗಳಲ್ಲಿ ಒಂದಾಗಿದೆ. ಅದರ 59 ಅಡಿಗಳ ವ್ಯಾಸದ ಸ್ಟೇನ್ಲೆಸ್ ಸ್ಟೀಲ್ ಹೊದಿಕೆಯ ಗೋಳಗಳು ಅಕ್ಕಪಕ್ಕದ ಘಟಕ ಕೋಶಗಳ ಸಂಪರ್ಕ ಹೊಂದಿವೆ. ಈ ಕಬ್ಬಿಣದ ಕೋಶ/ಸ್ಫಟಿಕಗಳನ್ನು ಕೋಶಗಳ ನಿಜವಾದ ಆಕಾರಕ್ಕಿಂತ 165 ಶತಕೋಟಿ ಬಾರಿ ಹೆಚ್ಚಾಗಿ ರೂಪಿಸಲಾಗಿದೆ. ಗೋಳಗಳನ್ನು ಜೋಡಿಸಿರುವ ಸ್ಟೀಲ್ ಟ್ಯೂಬ್‌ಗಳ ಒಳಗೆ ಮೆಟ್ಟಿಲುಗಳು, ಎಸ್ಕಲೇಟರುಗಳು ಮತ್ತು ಎಲಿವೇಟರ್‌ಗಳಿಂದ ಗೋಳಗಳಿಗೆ ಪ್ರವೇಶಿಸಬಹುದಾಗಿದೆ. ಈ ಗೋಳಗಳು ಒಳಗೆ ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಒಳಗೊಂಡಿವೆ. ಎತ್ತರದಲ್ಲಿರುವ ದೊಡ್ಡ ಗೋಳದ ರೆಸ್ಟೋರೆಂಟ್‌ನಿಂದ ಬ್ರಸೆಲ್ಸ್‌ನ ವಿಹಂಗಮ ನೋಟ ಕಾಣಿಸುತ್ತದೆ. ಒಂದು ಹಂತದಲ್ಲಿ ಮುಚ್ಚಲಾಗಿದ್ದ ಆಟೋಮಿಯಂ ಅನ್ನು 2004-2006ರಲ್ಲಿ ಜಾಕ್ವೆಸ್ ಡೆಲೆನ್ಸ್ ಮತ್ತು ಬೆಸಿಕ್ಸ್ ಕಂಪನಿಗಳು ಸಂಪೂರ್ಣವಾಗಿ ನವೀಕರಿಸಿದವು.
ಒಟ್ಟು ಒಂಬತ್ತು ಗೋಳಗಳಿದ್ದು, ಆರು ಗೋಳಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಮೂರು ಕೇಂದ್ರ ಅಕ್ಷ ಮತ್ತು ಮೂರು ಕೆಳಗಿನ ಹೊರಭಾಗಗಳ ಪ್ರತಿಯೊಂದರಲ್ಲೂ ಎರಡು ಮುಖ್ಯ ಮಹಡಿಗಳು ಮತ್ತು ಕೆಳಗಿನ ಮಹಡಿಯನ್ನು ಸೇವೆಗಾಗಿ ಕಾಯ್ದಿರಿಸಲಾಗಿದೆ. ಹತ್ತು ಅಡಿಗಳ ವ್ಯಾಸದ ಕೊಳವೆಗಳು ಎಲ್ಲಾ ಗೋಳಗಳು ಮತ್ತು ಎಲ್ಲಾ ಶೃಂಗಗಳ ಮಧ್ಯ ಸಂಪರ್ಕವನ್ನು ಹೊಂದಿವೆ. ಮಧ್ಯದಲ್ಲಿ ಟ್ಯೂಬ್ ಅತಿವೇಗದ ಎಲಿವೇಟರನ್ನು ಹೊಂದಿದ್ದು ಇದು 22 ಜನರನ್ನು 23 ಸೆಕೆಂಡುಗಳಲ್ಲಿ ಅತಿ ಎತ್ತರದಲ್ಲಿರುವ ಗೋಳದ ಶಿಖರವನ್ನು ತಲುಪಿಸುತ್ತದೆ. ದೊಡ್ಡ ಎಲಿವೇಟರ್ 100 ಅಡಿಗಳ ಉದ್ದವಾಗಿದೆ. ಆರು ತಿಂಗಳ ಅವಧಿಯ 1958ರ ಎಕ್ಸ್ಪೋಗೆ ಮಾತ್ರ ವಿನ್ಯಾಸಗೊಳಿಸಿದ್ದ ಆಟೋಮಿಯಂಅನ್ನು ಈಗಲೂ ದೇಶದಲ್ಲಿ ನಡೆಯುವ ಯಾವುದೇ ಪ್ರಮುಖ ಘಟನೆಗಳು ಮತ್ತು ಸ್ಪರ್ಧೆಗಳಿಗೆ ಹಿನ್ನೆಲೆಯಾಗಿ ಬಳಸಿಕೊಳ್ಳುವುದನ್ನು ಮುಂದುವರಿಸಲಾಗಿದೆ. 2006ರಲ್ಲಿ ಇದರ ರಿಪೇರಿಗಾಗಿ 26 ದಶಲಕ್ಷ ಯುರೋಗಳನ್ನು ವೆಚ್ಚ ಮಾಡಲಾಯಿತು. ಮೂಲವಾಗಿ ಕಬ್ಬಿಣ-ಅಲ್ಯೂಮಿನಿಯಂನಿಂದ ರಚಿಸಲಾಗಿದ್ದ ಆಟೋಮಿಯಂಅನ್ನು ಸ್ಟೇನ್ಲೆಸ್ ಸ್ಟೀಲ್‌ಗೆ ಮಾರ್ಪಡಿಸಲಾಯಿತು. ಇದನ್ನು ನೋಡಬೇಕಾದರೆ ಪ್ರತಿಯೊಬ್ಬರು 14 ಯುರೋಗಳ ಟಿಕೆಟ್ ಕೊಂಡುಕೊಳ್ಳಬೇಕಾಗುತ್ತದೆ.
ಮಿನಿ-ಯುರೋಪ್ ಮಿನಿಯೇಚರ್
ನಮ್ಮ ಗುಂಪು ಆಟೋಮಿಯಂ ನೋಡಿಕೊಂಡು ಹೊರಕ್ಕೆ ಬರುತ್ತಿದ್ದಂತೆ ಅಲ್ಲಿ ಒಂಟಿ ಮಹಿಳೆಯೊಬ್ಬರು ದಿಕ್ಕುತೋಚದೆ ನಿಂತುಕೊಂಡಿದ್ದರು. ಅವರು ಅರೆಬರೆ ಹಿಂದಿಯಲ್ಲಿ `ನಮ್ಮವರು (ಪ್ಯಾಕೇಜ್ ಟೂರ್) ನನ್ನನ್ನ ಬಿಟ್ಟುಹೋಗಿದ್ದಾರೆ’ ಎಂದರು. ನಾವು ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಅವರೂ ಕನ್ನಡದಲ್ಲಿ ಮಾತನಾಡುತ್ತ ಬೆಂಗಳೂರಿನಿಂದ ಥಾಮಸ್ ಕುಕ್ ಕಂಪನಿಯಿಂದ ಬಂದಿರುವುದಾಗಿ ಹೇಳಿದರು. ಅವರ ಬಳಿ ಫೋನ್ ಇರಲಿಲ್ಲ. ನಮ್ಮ ಗೈಡ್‌ಗೆ ವಿಷಯ ತಿಳಿಸಿ ಆತ, `ನಿಮ್ಮ ಬಸ್ ಇನ್ನೂ ಹೋಗಿಲ್ಲ, ನಿಮ್ಮ ಗೈಡ್ ನನ್ನ ಜೊತೆಗೆ ಈಗತಾನೇ ಮಾತನಾಡಿದ. ಇರಿ, ನಾನು ಫೋನ್ ಮಾಡ್ತೀನಿ ಎಂದು ಫೋನ್ ಮಾಡಿ ವಿಷಯ ತಿಳಿಸಿದ. ಅವರ ಗೈಡ್ `ಅಲ್ಲೆ ಇರಿ, ನಾನು ಬರುತ್ತೇನೆ’ ಎಂದು ಹೇಳಿದ. ನಮ್ಮ ಗೈಡ್ ಅವರನ್ನು ಪಕ್ಕದಲ್ಲೇ ಇದ್ದ ಮಿನಿ-ಯುರೋಪ್ ಬಾಗಿಲು ಮುಂದೆ ನಿಂತುಕೊಳ್ಳುವಂತೆ ತಿಳಿಸಿದ. ಅಷ್ಟರಲ್ಲಿ ಗೈಡ್ ಅಲ್ಲಿಗೆ ತಲುಪಿ ಮಹಿಳೆಯನ್ನು ಕರೆದುಕೊಂಡುಹೋದ.
ನಾವು ಟಿಕೆಟ್‌ಗಳನ್ನು ಸ್ಕ್ಯಾನ್ ಮಾಡಿ ಒಬ್ಬೊಬ್ಬರಾಗಿ ಮಿನಿ-ಯುರೋಪ್ ತೋಟದೊಳಕ್ಕೆ ಹೋದೆವು. ಬಾಗಿಲಹತ್ತಿರ ಇಟ್ಟಿದ್ದ ಬಣ್ಣಬಣ್ಣದ ಬ್ರೋಚರ್‌ಗಳನ್ನು ನೋಡಿದರೆ ಎಲ್ಲವೂ ಬೆಲ್ಜಿಯಂ ಭಾಷೆಯಲ್ಲಿದ್ದು ಇಂಗ್ಲಿಷ್ ಭಾಷೆಯಲ್ಲಿ ಒಂದೂ ಇರಲಿಲ್ಲ. `ಬ್ರೂಪಾರ್ಕ್ ಮನರಂಜನಾ ಉದ್ಯಾನವನ’ದ ಹೆಸರಿನಲ್ಲಿ ಮಾಡಿರುವ ಈ ಮಿನಿ-ಯುರೋಪ್ ಮಿನಿಯೇಚರ್ ಉದ್ಯಾನದಲ್ಲಿ ಯುರೋಪಿಯನ್ ಯೂನಿಯನ್ ಮತ್ತು ಯುರೋಪ್ ಖಂಡದ ಇತರ ದೇಶಗಳಲ್ಲಿ ಇರುವ ಅತಿಮುಖ್ಯವಾದ ಸ್ಮಾರಕಗಳ ಮಿನಿ ರಚನೆಗಳನ್ನು ರೂಪಿಸಲಾಗಿದೆ. ಯುರೋಪ್‌ನ ಒಟ್ಟು 80 ನಗರಗಳ 350 ಕಟ್ಟಡಗಳು/ಸ್ಮಾರಕಗಳ ಚಿಕಣಿಗಳನ್ನು ಇಲ್ಲಿ ರೂಪಿಸಲಾಗಿದೆ. ಈ ಮಿನಿ-ಯುರೋಪ್ ಉದ್ಯಾನವನಕ್ಕೆ ವರ್ಷಕ್ಕೆ 3.5 ಲಕ್ಷ ಸಂದರ್ಶಕರು ಭೇಟಿ ನೀಡುತ್ತಿದ್ದು 4 ದಶಲಕ್ಷ ಯೂರೋಗಳನ್ನು ಗಳಿಸುತ್ತಿದೆ.
ಇದೇ ರೀತಿಯ ಚಿಕಣಿ ಉದ್ಯಾನವನಗಳು ಆಸ್ಟ್ರಿಯಾ ಮತ್ತು ಸ್ಪೇನ್‌ನಲ್ಲೂ ಇದ್ದು ಇದು ಜೋಹನ್ಸ್ ಎ ಲೊರೆಜ್‌ನ ಎಂಬವರ ಆಲೋಚನೆಯ ಕೂಸಾಗಿದೆ. ಸ್ಮಾರಕಗಳು/ಕಟ್ಟಡಗಳ ಜೊತೆಗೆ ರೈಲುಗಳು, ಗಿರಣಿಗಳು, ಸ್ಫೋಟಗೊಳ್ಳುವ ಮೌಂಟ್ ವೆಸುವಿಯಸ್ ಜ್ವಾಲಾಮುಖಿಗಳು ಮತ್ತು ಕೇಬಲ್ ಕಾರುಗಳಂತಹ ಲೈವ್ ಆಕ್ಷನ್ ಮಾದರಿಗಳನ್ನು ಒಳಗೊಂಡಿದೆ. ಇದನ್ನು 300,000 ಚದರ ಅಡಿಗಳ ವಿಸ್ತಾರದಲ್ಲಿ ರೂಪಿಸಲಾಗಿದೆ. ಇದನ್ನು ನೋಡಬೇಕಾದರೆ ಪ್ರತಿಯೊಬ್ಬರು 15 ಯುರೋಗಳನ್ನು ತೆರಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ರಿಯಾಯಿತಿ ಇದೆ. ಒಟ್ಟಿನಲ್ಲಿ ಯುರೋಪ್ ದೇಶಗಳು ಯಾವುದೋ ಒಂದು ಸ್ಮಾರಕವನ್ನು ಸೃಷ್ಟಿಸಿ ಹಣ ಮಾಡುತ್ತಿದ್ದರೆ ನಮ್ಮಲ್ಲಿರುವ ಅನೇಕ ಸ್ಮಾರಕಗಳನ್ನು ಹಾಳು ಮಾಡಿ ನಮ್ಮ ಜನರು ವಿದೇಶಗಳನ್ನು ಸುತ್ತಿ ಹಣ ಖರ್ಚು ಮಾಡಿಕೊಂಡು ಬರುತ್ತಿದ್ದಾರೆ.
ಬ್ರಸೆಲ್ಸ್ನ ಲಾ ಗ್ರ್ಯಾಂಡ್ ಪ್ಲೇಸ್ ಚಚ್ಚೌಕ
ಪಟ್ಟಣದ ಒಂದು ರಸ್ತೆಯಲ್ಲಿ ಸಾಕಷ್ಟು ಜನರ ಗುಂಪೊಂದು ಪಟ್ಟಣದ ಅತ್ಯಂತ ಪ್ರೀತಿಯ ಪುಟ್ಟ ಬೆತ್ತಲೆ ಹುಡುಗ ಮನ್ನೆಕನ್ (ಸಣ್ಣ ಮೂರ್ತಿ) ಒಂದು ಕಡೆ ಗೋಡೆಯ ಮೇಲೆ ನಿಂತುಕೊಂಡು ವಿಸರ್ಜಿಸುವ ಉಚಿತ ಪೇಯವನ್ನು ನಾಮುಂದು ತಾಮುಂದು ಎಂದು ಗಾಜಿನ ಮಗ್‌ಗಳಲ್ಲಿ ಹಿಡಿದುಕೊಂಡು ಕುಡಿಯುತ್ತಿದ್ದರು. ಇದೇನು ಎಂದು ಕೇಳಿದಾಗ `ಇದು ಮನ್ನೆಕೆನ್ ಪಿಸ್-ಬಿಯರ್. ಇಂದು ಮನ್ನೆಕೆನ್ ಬೀಯರ್ ಹಬ್ಬ’ ಎಂದರು. ನಮ್ಮ ಜೊತೆಗಿದ್ದ ಬೆಂಗಳೂರಿನ ಕೆಲವರು ಬಿಯರ್ ಕುಡಿಯೋಣ ಎಂದುಕೊಂಡು ಗುಂಪಿನ ಸುತ್ತಲು ಒಂದೆರಡು ಚಕ್ಕರ್ ಹೊಡೆದರು. ಆದರೆ ಅವರಿಗೆ ಮಗ್‌ಗಳು ದೊರಕಲಿಲ್ಲ ಮತ್ತು ಸ್ಥಳೀಯರು ಜಾಗವೂ ಬಿಡಲಿಲ್ಲ. ಕೊನೆಗೆ ಚಳಿಯಲ್ಲಿ ಬಿಯರ್ ಬೇಡ ನಡಿಯಿರಪ್ಪ ಎಂದು ಅಲ್ಲಿಂದ ಮುಂದಕ್ಕೆ ಹೊರಟೆವು. ನಮ್ಮ ಗೈಡ್ ಆ ಬೆತ್ತಲೆ ಹುಡುಗ ಮನ್ನೆಕನ್ ಹಿನ್ನೆಲೆಯನ್ನು ಹೇಳಿದರು. ಆದರೆ ಅದರಲ್ಲಿ ಯಾವುದೇ ಸ್ವಾರಸ್ಯಕರ ವಿಷಯ ಇರಲಿಲ್ಲ. ಮುಂದಕ್ಕೆ ಸಾಗಿದೆವು.
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.