ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಕ್ಯಾಥೆಡ್ರಲ್ ಮೇಲೆ 14 ವೈಮಾನಿಕ ದಾಳಿಗಳನ್ನು ಅಂದರೆ 14 ಬಾಂಬ್‌ಗಳನ್ನು ಎಸೆಯಲಾಯಿತು ಎನ್ನಲಾಗಿದೆ. ಇಡೀ ನಗರ ಧ್ವಂಸವಾದರೂ ಕ್ಯಾಥೆಡ್ರಲ್ ಒಂದಷ್ಟು ಹಾನಿಗೆ ಒಳಗಾದರೂ ಅದರ ಸಂಪೂರ್ಣ ರಚನೆ ಮತ್ತು ಎರಡು ಸ್ಪೈರ್ಡ್ ಈಗಲೂ ಹಾಗೆಯೇ ಉಳಿದುಕೊಂಡಿವೆ ಎಂದು ನಮ್ಮ ಗೈಡ್ ಹೇಳಿದ. ಅದರ ಬಗ್ಗೆ ವಿವರಗಳನ್ನು ಅಂತರಜಾಲದಲ್ಲಿ ನೋಡಿದಾಗಲೂ ಅದೇ ರೀತಿ ಬರೆಯಲಾಗಿತ್ತು. ಯಾವುದೇ ಒಂದು ಕಟ್ಟಡದ ಮೇಲೆ 14 ಬಾಂಬ್‌ಗಳು ಬಿದ್ದಮೇಲೂ ಉಳಿದುಕೊಂಡಿತೆ ಎನ್ನುವ ಅನುಮಾನ ಮಾತ್ರ ನನ್ನನ್ನ ಕಾಡುತ್ತಲೇ ಇತ್ತು.
ಬ್ರಸೆಲ್ಸ್‌ನಲ್ಲಿ ಓಡಾಡಿದ ಮತ್ತಷ್ಟು ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ
ಯುರೋಪ್ ನಗರಗಳ ಒಂದು ವಿಶೇಷ ಎಂದರೆ ಜನರು ಓಡಾಡುವ, ಮಾರ್ಕೆಟ್ ರಸ್ತೆಗಳೆ ಬೇರೆ, ವಾಹನಗಳು ಓಡಾಡುವ ರಸ್ತೆಗಳೇ ಬೇರೆ. ಜನರು ಓಡಾಡುವ ರಸ್ತೆಗಳು ಹೆಚ್ಚಾಗಿ ಎರಡು ಅಥವಾ ನಾಲ್ಕು ಇಂಚುಗಳ ಚಚ್ಚೌಕಾರದ ಕಲ್ಲುಗಳನ್ನು ಪೋಣಿಸಿರುವ ರಸ್ತೆಗಳು. ಚರಂಡಿ ಎನ್ನುವುದು ಇದೆಯೊ ಇಲ್ಲವೊ ಗೊತ್ತಾಗುವುದಿಲ್ಲ. ಅಲ್ಲಿಂದ ಜಿಟಜಿಟ ಮಳೆಯಲ್ಲೆ ಜನರ ಮಧ್ಯೆ ನಡೆದುಕೊಂಡು ಒಂದು ವಿಶಾಲ ಚಚ್ಚೌಕ ತಲುಪಿದೆವು. ಚಚ್ಚೌಕದ ನಾಲ್ಕೂ ಕಡೆ ಅರಮನೆಗಳು ಬಂಗಾರ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿದ್ದವು. ಅದು ಬ್ರಸೆಲ್ಸ್‌ನ `ಲಾ ಗ್ರ್ಯಾಂಡ್ ಪ್ಲೇಸ್’ ಆಗಿದ್ದು ಅತ್ಯಂತ ಪ್ರಸಿದ್ದ ಮತ್ತು ಯಾತ್ರಿಕರು ಹೆಚ್ಚು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವ ಸ್ಥಳವಾಗಿದೆ. ಇದು ಯುರೋಪ್‌ನ ಅತ್ಯಂತ ಸುಂದರವಾದ ಚೌಕಗಳಲ್ಲಿ ಒಂದಾಗಿದೆ. ಒಂದು ಕಡೆ ಯುವ ಮೇಳ ನಡೆಯುತ್ತಿದ್ದು ವೇದಿಕೆ ಮೇಲೆ ಸಂಗೀತ ಗೋಷ್ಠಿ ನಡೆಯುತ್ತಿತ್ತು. ಚೌಕದ ನಾಲ್ಕೂ ಕಡೆಗೆ ನಡೆದುಹೋಗಿ ನಿಂತುಕೊಂಡು ನೋಡಿ ಫೋಟೋಗಳನ್ನು ತೆಗೆದುಕೊಂಡೆ. ವೀಕ್ ಎಂಡ್ ಆಗಿದ್ದರಿಂದ ಪ್ರಾಗ್‌ನಲ್ಲಿದ್ದ ನಮ್ಮ ಮಗ ಕ್ರಾಂತಿ ಬ್ರಸೆಲ್ಸ್‌ನಲ್ಲಿ ನಮ್ಮನ್ನು ಸೇರಿಕೊಳ್ಳುವುದಾಗಿ ತಿಳಿಸಿ ಬೆಳಿಗ್ಗೆಯೇ ಬ್ರಸೆಲ್ಸ್‌ಗೆ ಬಂದು ಹೋಟಲ್‌ನಲ್ಲಿ ಇಳಿದುಕೊಂಡು ನಮ್ಮನ್ನ ಅದೇ ಚೌಕದಲ್ಲಿ ಸಂಧಿಸಲು ಯೋಜನೆ ಮಾಡಿಕೊಂಡಿದ್ದನು.
ನಮ್ಮ ಗೈಡ್ ವಿಶಾಲ್‌ಗೆ ಮೊಬೈಲ್ ಕೊಟ್ಟು ನಾವು ತಲುಪುವ ಸ್ಥಳ, ಸಮಯ ಎಲ್ಲವನ್ನು ಮೊದಲೇ ಕ್ರಾಂತಿಗೆ ತಿಳಿಸಿದ್ದೆವು. ಈಗ ಕ್ರಾಂತಿ ವಿಶಾಲ್‌ಗೆ ಫೋನ್ ಮಾಡಿ ಸುಶೀಲ ಫೋನ್ ತೆಗೆದುಕೊಂಡು ನಾವು ನಿಂತುಕೊಂಡಿರುವ ಸ್ಥಳವನ್ನು ವಿವರಿಸಿದಳು. ಚೌಕದಲ್ಲಿ ಜನರ ಓಡಾಟ ಮತ್ತು ಸಂಗೀತದ ಗದ್ದಲ ತುಂಬಿಕೊಂಡಿತ್ತು. ಚಚ್ಚೌಕದ ಸುತ್ತಲಿನ ಅರಮನೆಗಳು ಒಂದೇ ರೀತಿಯಾಗಿದ್ದು ಸುಮಾರು ಹೊತ್ತು ನಾವು ನಿಂತಿರುವ ಸ್ಥಳವನ್ನು ನಿಖರವಾಗಿ ತಿಳಿಸಿದ ಮೇಲೆ ಕ್ರಾಂತಿ ಜನರ ಮಧ್ಯೆ ಕಾಣಿಸಿಕೊಂಡ. ಕ್ರಾಂತಿಯ ಜೊತೆಗೆ ಗೆಳತಿ ದಾರಿಯ ಕೂಡ ನಾಯಿ ಮರಿಯೊಂದಿಗೆ ಕಾಣಿಸಿಕೊಂಡಳು. ನಾಯಿಮರಿ ಸಣ್ಣ ಹಗ್ಗದೊಂದಿಗೆ ಜನರ ಮಧ್ಯೆ ನುಗ್ಗುತ್ತಿತ್ತು. ನಮ್ಮ ಜೊತೆಗಿದ್ದ ಬೆಂಗಳೂರಿನ ಮಹಿಳೆಯರು ಕ್ರಾಂತಿಯನ್ನು ನೋಡಿ `ಅರೇ ಆಗ್ಲೇನೆ ಇವರು ನಾಯಿ ಮರಿಯೊಂದಿಗೆ ನಮ್ಮ ಮುಂದೆನೇ ಹೋದರು’ ಎಂದರು. ಕ್ರಾಂತಿ ನಮ್ಮನ್ನ ನೋಡಿದ್ದೆ ಸುಶೀಲ ಮತ್ತು ನನ್ನನ್ನ ತಬ್ಬಿಕೊಂಡ. ಈ ನಮ್ಮ ಒಬ್ಬನೇ ಮಗ ಎಲ್ಲಿಂದ ಎಲ್ಲಿಗೆ ಬಂದು ಸುತ್ತಾಡುತ್ತಿದ್ದಾನೆ? ಎಂಬ ಆಲೋಚನೆ ಬಂದು ಮನಸ್ಸಿಗೆ ತುಸು ನೋವಾಯಿತು. ಸುಶೀಲ ಕ್ರಾಂತಿಯನ್ನು ನಮ್ಮ ಜೊತೆಗಿದ್ದವರಿಗೆ ಪರಿಚಯಿಸಿದಳು. ಸ್ಮಿತಾ ಮತ್ತು ಅವರ ಪತಿ ಸುರೇಶ್ ರೆಡ್ಡಿ ಕ್ರಾಂತಿಯನ್ನು ಮಾತನಾಡಿಸಿದರು. ಚಳಿಗೆ ಜೀನ್ಸ್ ಉಡುಪಿನಲ್ಲಿದ್ದ ಕ್ರಾಂತಿ ತಲೆಗೆ ಕ್ಯಾಪ್ ಹಾಕಿಕೊಂಡಿದ್ದು ಶೇವ್ ಮಾಡಿಕೊಂಡಿರಲಿಲ್ಲ. ನಾನು, `ಗಡ್ಡ ಕೆರೆಯಬಾರದೆ?’ ಎಂದೆ. ಕ್ರಾಂತಿ, `ಚಳಿಗೆ ಗಡ್ಡ ಇದ್ದರೆ ಒಳಿತು’ ಎಂದು ನಕ್ಕ. ಕ್ರಾಂತಿ ಗೆಳತಿ ದಾರಿಯಳನ್ನು ಪರಿಚಯ ಮಾಡಿಸಿದ.
1695ರಲ್ಲಿ ಬ್ರಸಲ್ಸ್ ಪಟ್ಟಣದ `ಲಾ ಗ್ರ್ಯಾಂಡ್ ಪ್ಲೇಸ್’ ಮೇಲೆ ಫ್ರೆಂಚ್ ಸೈನ್ಯ ದಾಳಿ ಮಾಡಿ ಸಾಕಷ್ಟು ಕಟ್ಟಡಗಳನ್ನು ಹಾನಿಗೊಳಿಸಿತ್ತು. ಬೆಲ್ಜಿಯಂ ಆಡಳಿತ ನಂತರ ಎಲ್ಲವನ್ನೂ ಪುನರ್ನಿರ್ಮಿಸಿತು. ಬ್ರಸೆಲ್ಸ್‌ನ ಚಚ್ಚೌಕದಲ್ಲಿರುವ ಟೌನ್ ಹಾಲ್ ಬ್ರಬಾಂಟೈನ್ ಗೋಥಿಕ್ ಶೈಲಿಯ ಮೇರುಕೃತಿಯಾಗಿದೆ. ಮುಖ್ಯ ಅರಮನೆಯ ಮೇಲ್ಭಾಗ ಪ್ರಧಾನ ದೇವದೂತ ಮೈಕೆಲ್‌ನ ಪ್ರತಿಮೆಯೊಂದಿಗೆ 96 ಮೀಟರುಗಳ ಎತ್ತರದ ಗೋಪುರವನ್ನು ಹೊಂದಿದೆ. ಇದೊಂದು ಅದ್ಭುತ ಚಚ್ಚೌಕವಾಗಿದ್ದು ಅಲ್ಲಿಂದ ಹೋಗಲು ನನಗೆ ಮನಸ್ಸೆ ಬರಲಿಲ್ಲ. ಆದರೂ ಮುಂದೆ ಹೋಗಲೇಬೇಕಾಗಿತ್ತು. ಕ್ರಾಂತಿ ಸಾಯಂಕಾಲ ನಾವು ಉಳಿದುಕೊಂಡಿದ್ದ `ಹೋಟೆಲ್ ಡಿ ವಿಲ್ಲೆ’ಗೆ ಬರುವುದಾಗಿ ಹೇಳಿ ಅಲ್ಲಿಂದ ಹೊರಟುಹೋದ. ಕ್ರಾಂತಿ ಹೋಗುವುದನ್ನೇ ನೋಡುತ್ತ ನಾವಿಬ್ಬರು ನೋಡಿಕೊಂಡಿದ್ದೆವು. ನಂತರ ಮಹಿಳೆಯರ ಹಲವಾರು ಪ್ರಶ್ನೆಗಳಿಗೆ ಸುಶೀಲ ಉತ್ತರಿಸುತ್ತಲೇ ನಮ್ಮ ಬಸ್ಸಿನ ಕಡೆಗೆ ನಡೆದೆವು.
ಹೋಟೆಲ್ ಡಿ ವಿಲ್ಲೆ ಬಹಳ ಐಷಾರಾಮಿ ಹೋಟಲಾಗಿದ್ದು ರಾತ್ರಿ ಒಂಬತ್ತು ಗಂಟೆಗೆ ಹೋಟೆಲ್ ಡೆಸ್ಕ್‌ನಲ್ಲಿ ಇಬ್ಬರು ಅತಿಥಿಗಳು ಬರುತ್ತಾರೆಂದು ತಿಳಿಸಿ ಕ್ರಾಂತಿ ಬರುವುದನ್ನು ಕಾಯುತ್ತಿದ್ದೆವು. ಕ್ರಾಂತಿ, ದಾರಿಯ ಮತ್ತು ನಾಯಿ ಮರಿಯ ಜೊತೆಗೆ ಕೋಣೆಗೆ ಹೋದೆವು. ಕೋಣೆಗೆ ಹೋಗಿದ್ದೆ ದಾರಿಯ ಬ್ಯಾಸ್ಕಟ್‌ನಲ್ಲಿದ್ದ ನಾಯಿ ಮರಿಯನ್ನು ಹೊರಕ್ಕೆ ಕರೆದಳು. ಅದು ಸ್ವಲ್ಪ ಹೊತ್ತು ಬರಲೋ ಬೇಡವೋ ಎಂದು ಯೋಚಿಸಿ ಕೊನೆಗೆ ಹೊರಕ್ಕೆ ಬಂದು ಜಿಗಿಯುತ್ತಾ ಓಡಾಡತೊಡಗಿತು. ಕೋಣೆ ನೋಡಿದ ಕ್ರಾಂತಿ ಪ್ಯಾಕೇಜ್ ಟೂರ್‌ನಲ್ಲಿ ಬರದೇ ಇದ್ದರೆ ಇಂತಹ ಹೋಟಲ್‌ನಲ್ಲಿ ಉಳಿದುಕೊಳ್ಳುವುದು ಕಷ್ಟ ಎಂದ. ದಾರಿಯಾಗೆ ಇಂಗ್ಲಿಷ್ ಬರುತ್ತಿದ್ದರಿಂದ ಮಾತನಾಡಲು ತೊಂದರೆಯಾಗಲಿಲ್ಲ. ಕ್ರಾಂತಿ ಮೇಜಿನ ಮೇಲಿದ್ದ ಕಾರ್ಡ್ ಓದಿಕೊಂಡು ಮಷಿನ್‌ನಲ್ಲಿ ಕಾಫಿ ಮಾಡಲು ಪ್ರಯತ್ನಿಸಿ ಮಷಿನ್‌ಅನ್ನು ತಪ್ಪಾಗಿ ಹ್ಯಾಂಡಲ್ ಮಾಡಿದ್ದಕ್ಕೆ ಅದು ಹೊಗೆ ಕಾರಿಕೊಂಡು ಬುಷ್..ಬುಷ್.. ಎಂದು ಕೂಗಾಡಿತ್ತು. ಆಗಲೇ ಎಲ್ಲರೂ ಡಿನ್ನರ್ ಮಾಡಿದ್ದರಿಂದ ಚಳಿಗೆ ಎರಡು ಸಲ ಕಾಫಿ ಮಾಡಿ ಕುಡಿದೆವು. ಜೊತೆಗೆ ಒಂದಷ್ಟು ಬಿಸ್ಕಟ್/ಬನ್ ತಿಂದುಕೊಂಡು ರಾತ್ರಿ ಎರಡು ಗಂಟೆಯವರೆಗೂ ಮಾತನಾಡುತ್ತ ಕುಳಿತಿದ್ದೆವು. ಬೆಳಿಗ್ಗೆ ಮತ್ತೆ ಆರು ಗಂಟೆಗೆ ಏಳಬೇಕಾಗಿದ್ದರಿಂದ ಎಲ್ಲರೂ ಹೊರಕ್ಕೆ ಬಂದು ಅತಿಥಿಗಳು ಕೂರುವ ಸ್ಥಳದಲ್ಲಿ ಇನ್ನಷ್ಟು ಸಮಯ ಕುಳಿತುಕೊಂಡು ಒಂದೆರಡು ಫೋಟೋಗಳನ್ನು ಹಿಡಿದುಕೊಂಡೆವು. ಕೊನೆಗೆ ಕ್ರಾಂತಿ ಕಾರ್ ಬುಕ್ ಮಾಡಿ ಅದು ಬಂದು ಹೋಟಲ್ ಮುಂದೆ ನಿಂತುಕೊಂಡಿತು. ಬೆಳಗಿನ ಜಾವದಲ್ಲಿ ಕ್ರಾಂತಿ ಬ್ರಸೆಲ್ಸ್‌ನಲ್ಲಿ ನಮ್ಮನ್ನ ಬಿಟ್ಟು ಕಾರಿನಲ್ಲಿ ಕುಳಿತುಕೊಂಡು ಹೊರಟುಹೋದ. ಸುಶೀಲಳ ಕಣ್ಣುಗಳು ತೇವಗೊಂಡಿದ್ದವು. ನನ್ನ ಹೃದಯ ಒಂದೆರೆಡು ಕ್ಷಣ ತಳಮಳಗೊಂಡಿತ್ತು. ಚಳಿಯಲ್ಲಿ ನಾವಿಬ್ಬರು ನಮ್ಮ ಕೋಣೆಯ ಕಡೆಗೆ ಹೆಜ್ಜೆಹಾಕಿದೆವು.
ಕಲೋನ್ ಕ್ಯಾಥೆಡ್ರಲ್-ಚರ್ಚ್ ಆಫ್ ಸೇಂಟ್ ಪೀಟರ್
ಜರ್ಮನಿ ಎಂದರೆ ಜಗತ್ತಿನ ಜನರಿಗೆಲ್ಲ ಜ್ಞಾಪಕಕ್ಕೆ ಬರುವುದು ಜರ್ಮನಿಯ ಅಡಾಲ್ಫ್ ಹಿಟ್ಲರ್ ಮತ್ತು ಆತನ ಸಾವಿನ ಸೆರೆಮನೆಗಳು/ಕೂಪಗಳು. ಆತನ ಹೆಸರು ಹೇಳಿದರೆ ಸಾಕು ಇಂದಿಗೂ ಜಗತ್ತಿನಾದ್ಯಂತ ಜನರು ಅಸಹ್ಯಪಟ್ಟುಕೊಳ್ಳುತ್ತಾರೆ. ಆದರೆ ಅವನ ಅನುಯಾಯಿಗಳಿಗೆ ಅವನು ಈಗಲೂ ಹೀರೋ ಆಗಿರುವುದು ಜಗತ್ತಿನ ತೊಡಕುಗಳಲ್ಲಿ ಒಂದಾಗಿದೆ. ನಾನು ಜರ್ಮನಿಯಲ್ಲಿ ಓಡಾಡುತ್ತಿದ್ದಾಗ ಯಾವುದೇ ಪ್ರದೇಶ, ಯಾವುದೇ ನಗರವನ್ನು ನೋಡುತ್ತಿದ್ದಾಗಲೂ ಹಿಟ್ಲರ್‌ನ ಜ್ಞಾಪಕದಿಂದ ಹೊರಬರಲು ಸಾಧ್ಯವಾಗಲಿಲ್ಲ. ಅಲ್ಲಿನ ಪ್ರದೇಶಗಳು, ನಗರಗಳು, ರಸ್ತೆಗಳು ನರಳಿನರಳಿ ಸತ್ತ ಜನರ ಮೇಲೆ ಕಟ್ಟಿದಂತೆ ಕಾಣಿಸುತ್ತಿದ್ದವು. ಜರ್ಮನಿಯಂತಹ ದುರಂತ ಇತಿಹಾಸ ಹೊಂದಿದ ಇನ್ನೊಂದು ದೇಶ ಇಲ್ಲವೇನೋ. ಇಷ್ಟಕ್ಕೂ ಹಿಟ್ಲರ್ ಹುಟ್ಟಿದ್ದು ಜರ್ಮನಿಯ ಪಕ್ಕದ ಆಸ್ಟ್ರಿಯಾ ಆದರೂ ಅವನು ನೆಲೆಯೂರಿದ್ದು ಮಾತ್ರ ಜರ್ಮನಿಯಲ್ಲಿ.
ಕಲೋನ್ ಕ್ಯಾಥೆಡ್ರಲ್ (Cologne Cathedral) ಅಥವಾ ಚರ್ಚ್ ಆಫ್ ಸೇಂಟ್ ಪೀಟರ್ ಉತ್ತರ ರೈನ್-ವೆಸ್ಟ್ಫಾಲಿಯಾ ರಾಜ್ಯದ ಕಲೋನ್ ಪಟ್ಟಣದಲ್ಲಿದೆ. ಕಲೋನ್ ಕ್ಯಾಥೆಡ್ರಲ್, ಜರ್ಮನ್ ಕ್ಯಾಥೊಲಿಕ್ ಮತ್ತು ಗೋಥಿಕ್ ವಾಸ್ತುಶಿಲ್ಪದ ಪ್ರಸಿದ್ಧ ಸ್ಮಾರಕವಾಗಿದೆ ಮತ್ತು ಇದನ್ನು 1996ರಲ್ಲಿ ವಿಶ್ವಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಈ ಚರ್ಚ್ ಜರ್ಮನಿಯಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ ಸ್ಥಳವಾಗಿದ್ದು ವರ್ಷಕ್ಕೆ ಸರಾಸರಿ 6 ದಶಲಕ್ಷ ಜನರು ಇಲ್ಲಿಗೆ ಬಂದುಹೋಗುತ್ತಾರೆ. ಒಟ್ಟು 515 ಅಡಿಗಳ ಎತ್ತರ ಇರುವ ಚರ್ಚ್ ಜಗತ್ತಿನಲ್ಲಿ ಅತಿ ಎತ್ತರದ ಅವಳಿ-ಸ್ಪೈರ್ಡ್ ಚರ್ಚ್ ಆಗಿದೆ. ಉಲ್ಮ್ ಪಟ್ಟಣದಲ್ಲಿರುವ ಉಲ್ಮ್ ಮಿನಿಸ್ಟರ್ ಎಂಬ ಚರ್ಚ್‌ನ ನಂತರ ಜರ್ಮನಿಯಲ್ಲಿ ಎರಡನೇ ಎತ್ತರದ ಚರ್ಚ್ ಇದಾಗಿದ್ದು, ಜಗತ್ತಿನಲ್ಲಿ ಯಾವುದೇ ರೀತಿಯ ಮೂರನೇ ಅತಿ ಎತ್ತರದ ಚರ್ಚ್ ಆಗಿದೆ. ಅದರ ಎರಡು ಬೃಹತ್ ಅವಳಿ-ಸ್ಪೈರ್ಡ್ ಗೋಪುರಗಳ ಮುಂಭಾಗಗಳು ಜಗತ್ತಿನ ಯಾವುದೇ ಚರ್ಚ್‌ಗಿಂತ ದೊಡ್ಡದಾದವು.
ಮಧ್ಯಕಾಲೀನ ಚಿನ್ನದ ಕುಸುರಿಯ ಮೇರುಕೃತಿಯಾದ ಈ ಚರ್ಚ್ಅನ್ನು ಮೂಲವಾಗಿ 1182ರಲ್ಲಿ ವರ್ಡನ್‌ನ ಪ್ರಸಿದ್ಧ ಆಚಾರಿ ನಿಕೋಲಸ್ ಪ್ರಾರಂಭಿಸಿ ಅದು ಮೊದಲಿಗೆ 1220ರಲ್ಲಿ ಪೂರ್ಣಗೊಂಡಿತು. ಅನಂತರ ಕ್ರಿ.ಶ.1248ರಲ್ಲಿ ಇದರ ಮರುನಿರ್ಮಾಣ ಪ್ರಾರಂಭಗೊಂಡು 1560ರ ಸುಮಾರಿಗೆ ಸ್ಥಗಿತಗೊಂಡಿತು. ಮತ್ತೆ 1814ರ ಹೊತ್ತಿಗೆ ಮರುನಿರ್ಮಾಣ ಪ್ರಾರಂಭಗೊಂಡಿತು, ಆದರೆ ನಿರ್ಮಾಣಕ್ಕೆ ತಗಲುವ ವೆಚ್ಚದ ಹಣ 1840 ರವರೆಗೂ ಬಿಡುಗಡೆಯಾಗಲಿಲ್ಲ. 1880ರಲ್ಲಿ ಅದರ ಮೂಲ ಮಧ್ಯಕಾಲೀನ ಯೋಜನೆಯಂತೆ ಕಟ್ಟಡವನ್ನು ಪೂರ್ಣಗೊಳಿಸಲಾಯಿತು. ಕಲೋನ್‌ನ ಮಧ್ಯಕಾಲೀನ ಕಂಟ್ರ್ಯಾಕ್ಟರುಗಳು, ಮೂವರು ರಾಜರ ಸ್ಮಾರಕಗಳನ್ನು ಇದರ ಒಳಗೆ ಸ್ಥಾಪಿಸಲು ಮತ್ತು ಪವಿತ್ರ ರೋಮನ್ ಚಕ್ರವರ್ತಿಯ ಪೂಜಾ ಕೇಂದ್ರವಾಗಿ ರಚಿಸಲು ಯೋಜಿಸಿದ್ದರು. ಮಧ್ಯಕಾಲೀನ ಅವಧಿಯಲ್ಲಿ ಅಪೂರ್ಣವಾಗಿದ್ದರೂ ಕಲೋನ್ ಕ್ಯಾಥೆಡ್ರಲ್ ಅಂತಿಮವಾಗಿ `ಅಸಾಧಾರಣವಾದ ಆಂತರಿಕ ಮೌಲ್ಯದ ಮೇರುಕೃತಿ ಮತ್ತು ಮಧ್ಯಕಾಲೀನ ಮತ್ತು ಆಧುನಿಕ ಯುರೋಪ್‌ನಲ್ಲಿ ಕ್ರಿಶ್ಚಿಯನ್ ನಂಬಿಕೆಯ ಶಕ್ತಿ ಮತ್ತು ನಿರಂತರತೆಗೆ ಪ್ರಬಲ ಸಾಕ್ಷಿಯಾಗಿದೆ’ ಎಂದು ಹೇಳಲಾಗುತ್ತದೆ.
ನಾವು ಹೋದ ದಿನ ಕಲೋನ್‌ನಲ್ಲಿ ಸಣ್ಣಗೆ ಮಳೆ ಹನಿಯುತ್ತಿದ್ದು ಚರ್ಚ್ ಒಳಗೆ ಹೊಕ್ಕಿದ್ದೆ ಅದರ ಸೌಂದರ್ಯಕ್ಕೆ ಬೆರಗಾಗಿಹೋದೆವು. ಎತ್ತರವಾದ ಗುಮ್ಮಟ/ಉಪ್ಪರಿಗೆ ಅಥವಾ ಭವ್ಯ ಸೌಧ ಬಣ್ಣಬಣ್ಣದ ಗಾಜುಗಳನ್ನು ಜೋಡಿಸಿರುವ ಕಲಾಕೌಶಲ್ಯ, ಅಪೂರ್ವ ಮತ್ತು ಅಮೂಲ್ಯವಾಗಿದ್ದು ಮುತ್ತು ರತ್ನಗಳನ್ನೇ ತುಂಬಿಕೊಂಡಂತೆ ಕಂಗೊಳಿಸುತ್ತಿತ್ತು. ಮಧ್ಯೆ ಬಲಿಪೀಠದ ಬಳಿ ಮೂವರು ರಾಜರ ಬೃಹತ್ ಚಿನ್ನದ ಹೊದಿಕೆಗಳಿಂದ ಕೂಡಿದ ದೇವಾಲಯಗಳಿದ್ದು ಶಿಶು ಜೀಸಸ್‌ನನ್ನು ನೋಡಲು ಬಂದ ಮಾಗಿಯ ಅವಶೇಷಗಳು ಎಂದು ಹೇಳಲಾಗುತ್ತದೆ. ಕಾಸ್ಪರ್, ಮೆಲ್ಚಿಯರ್ ಮತ್ತು ಬಾಲ್ತಸರ್ ಎಂಬ ಮೂವರು ಬುದ್ಧಿವಂತರು (ಅವರನ್ನು ಒಟ್ಟಾಗಿ ಮಾಗಿ ಎಂದು ಉಲ್ಲೇಖಿಸಲಾಗಿದೆ) ಬಹಳ ದೂರ ಪ್ರಯಾಣಿಸಿ ಕ್ರಿಸ್ತನಿಗೆ ಗೌರವ ಸಲ್ಲಿಸಲು ತಮ್ಮ ಜೊತೆಗೆ ಚಿನ್ನ, ಸುಗಂಧ ದ್ರವ್ಯ ಮತ್ತು ಮೈರ್ ಮತ್ತು ಉತ್ತಮ ಉಡುಗೊರೆಗಳನ್ನು ತಂದರು ಎಂದು ಹೇಳಲಾಗುತ್ತದೆ.
ಲೇಡಿ ಚಾಪೆಲ್‌ನಲ್ಲಿರುವ ಬಲಿಪೀಠವು `ದಿ ಅಡೋರೇಶನ್ ಆಫ್ ದಿ ಮಾಗಿ’ (1455) ಎಂಬ ಶೀರ್ಷಿಕೆಯ ಟ್ರಿಪ್ಟಿಚ್ (ಮೂರು ಭಾಗಗಳ ಕೆತ್ತನೆಯ ಜೋಡಣೆ) ಆಗಿದೆ. ಇದನ್ನು ಕಲೋನ್ ಕಲಾಶಾಲೆಯ ಅತ್ಯುತ್ತಮ ವರ್ಣಚಿತ್ರಕಾರರಲ್ಲಿ ಒಬ್ಬರಾದ ಸ್ಟೀಫನ್ ಲೊಚ್ನರ್ ರಚಿಸಿದ್ದಾನೆ. ಅತ್ಯಂತ ಹಳೆಯ ಬಣ್ಣದ ಗಾಜಿನ ಕಿಟಕಿಗಳನ್ನು 13ನೇ ಶತಮಾನದಲ್ಲಿ ರಚಿಸಲಾಗಿದೆ. ಇತ್ತೀಚಿನ ಆಧುನಿಕ ಶೈಲಿಯ ಕಲೋನ್ ಮೂಲದ ಕಲಾವಿದ ಗೆರ್ಹಾರ್ಡ್ ರಿಕ್ಟರ್ ಅವರು ರಚಿಸಿದ ಅಗಾಧವಾದ ಬಣ್ಣಗಳ ಗಾಜಿನ ಕಿಟಿಕಿಗಳಾಗಿದ್ದು ಇದನ್ನು 2007ರಲ್ಲಿ ಬದಲಾಯಿಸಲಾಗಿದೆ. ಇದಕ್ಕೆ ಮುಂಚೆ ಎರಡನೇ ವಿಶ್ವ ಮಹಾಯುದ್ಧದ ಕಾಲದ ದಾಳಿಯಲ್ಲಿ ಚರ್ಚ್ ಸಾಕಷ್ಟು ಜಖಂಗೊಂಡು ನಾಶವಾಗಿತ್ತು. ಗೆರ್ಹಾರ್ಡ್ ಕಿಟಿಕಿಗಳನ್ನು 72 ಘನ ಬಣ್ಣಗಳಲ್ಲಿ ರಚಿಸಿ 11,000ಕ್ಕೂ ಹೆಚ್ಚು ಚದರ ಗಾಜಿನ ಫಲಕಗಳನ್ನು ಕಬ್ಬಿಣ ಮತ್ತು ಮರದ ಸರಳುಗಳಿಗೆ ಜೋಡಿಸಿದ್ದಾನೆ. ಕೊನೆಯ ಅಥವಾ ಪ್ರಸ್ತುತ ಕಾಣಿಸುವ ಕಲೋನ್ ಕ್ಯಾಥೆಡ್ರಲ್‌ಅನ್ನು ಸುಮಾರು ಆರು ಶತಮಾನಗಳ ಕಾಲ ಕಟ್ಟಿದರು ಅಥವಾ ಕಟ್ಟುತ್ತಲೇ ಬಂದಿದ್ದರು ಎನ್ನುವುದಕ್ಕೆ ಚರ್ಚ್ ಒಳಗಿನ ಬೆರಗಿನ ಕಲಾಕೌಶಲ್ಯವೇ ಹೇಳುತ್ತದೆ.
ಇತಿಹಾಸ: 1248ರಲ್ಲಿ ಇಲ್ಲಿ ಅಡಿಪಾಯ ಕಲ್ಲು ಹಾಕುವುದರೊಂದಿಗೆ ಇದರ ನಿರ್ಮಾಣ ಪ್ರಾರಂಭಗೊಂಡಿತು. ಆದರೆ ಈ ಸ್ಥಳ ಆಗಲೇ ಹಲವಾರು ಹಿಂದಿನ ಕಟ್ಟಡಗಳಿಂದ ಆಕ್ರಮಿಸಿಕೊಂಡಿತ್ತು. ಮೊದಲಿಗೆ ಧಾನ್ಯ ಸಂಗ್ರಹಣೆಗಾರವಾಗಿ ಮತ್ತು ಪ್ರಾಯಶಃ ಮರ್ಕ್ಯುರಿಯಸ್ ಅಗಸ್ಟಸ್‌ನ ರೋಮನ್ ಮೂಲ ದೇವಾಲಯ ಆಗಿರಬಹುದು! 4ನೇ ಶತಮಾನದಿಂದಲೇ ಈ ಸ್ಥಳವನ್ನು ಕ್ರಿಶ್ಚಿಯನ್ ಕಟ್ಟಡಗಳು ಆಕ್ರಮಿಸಿಕೊಂಡಿದ್ದವು. 7ನೇ ಶತಮಾನದಲ್ಲಿ ಬ್ಯಾಪ್ಟಿಸ್ಟರಿಯ ಕಟ್ಟಡವನ್ನು ಇಂದಿನ ಚರ್ಚ್ಗೆ ಪೂರ್ವ ದಿಕ್ಕಿನ ತುದಿಯಲ್ಲಿ ನಿರ್ಮಿಸಲಾಗಿತ್ತು. ಇದನ್ನು 9ನೇ ಶತಮಾನದಲ್ಲಿ ಹಿಂದಿನ ಚರ್ಚ್ ಕಟ್ಟಲು ಕೆಡವಲಾಗಿತ್ತು. ಕಲೋನ್ ಕ್ಯಾಥೆಡ್ರಲ್ ಚರ್ಚ್ ಉತ್ಖನನ ಸಮಯದಲ್ಲಿ ಕಟ್ಟಡದ ಅತ್ಯಂತ ಹಳೆಯ ಸಮಾಧಿಗಳು ಕಂಡುಬಂದವು. ಸಮಾಧಿಯು ಸಮೃದ್ಧವಾದ ವಸ್ತುಗಳಿಂದ ಅಲಂಕರಿಸಲ್ಪಟ್ಟಿದ್ದ ಒಬ್ಬ ಹುಡುಗ (ಮಗ!) ಮತ್ತು ಒಂದು ಮಹಿಳೆ ವಿಸಿಗಾರ್ಡ್ (ಫ್ರಾಂಕಿಶ್ ರಾಣಿ ವಿಸಿಗಾರ್ಡ್ಳನ್ನು ಥ್ಯೂಡೆಬರ್ಟ್ ಮದುವೆಯಾಗಿದ್ದನು) ಕಳೆಬರಹ ಸಿಕ್ಕಿತ್ತು. ಈ ಸಮಾಧಿಗಳು 6ನೇ ಶತಮಾನಕ್ಕೆ ಸೇರಿದ್ದವು! ಓಲ್ಡ್ ಕ್ಯಾಥೆಡ್ರಲ್’ ಎಂದು ಕರೆಯುವ ಎರಡನೇ ಚರ್ಚ್ಅನ್ನು ಕ್ರಿ.ಶ.818ರಲ್ಲಿ ಪೂರ್ಣಗೊಳಿಸಲಾಗಿತ್ತು. ಕೊನೆಗೆ ನಿರ್ಮಾಣ ಪ್ರಾರಂಭಿಸಿದ 632 ವರ್ಷಗಳ ನಂತರ ಜರ್ಮನಿಯ ಈ ಅತಿದೊಡ್ಡ ಕಲೋನ್ ಕ್ಯಾಥೆಡ್ರಲ್ ಪೂರ್ಣವಾಗಿದ್ದರ ನೆನಪಿಗೆ 1880 ಅಕ್ಟೋಬರ್ 15ರಂದು ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಭೆಯಲ್ಲಿ ಚಕ್ರವರ್ತಿ ವಿಲ್ಹೆಲ್ಮ್-1 ಭಾಗವಹಿಸಿದ್ದರು.
ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಮತ್ತು ನಂತರದ ಕಾಲದಲ್ಲಿ ಕ್ಯಾಥೆಡ್ರಲ್ ಮೇಲೆ 14 ವೈಮಾನಿಕ ದಾಳಿಗಳನ್ನು ಅಂದರೆ 14 ಬಾಂಬ್‌ಗಳನ್ನು ಎಸೆಯಲಾಯಿತು ಎನ್ನಲಾಗಿದೆ. ಇಡೀ ನಗರ ಧ್ವಂಸವಾದರೂ ಕ್ಯಾಥೆಡ್ರಲ್ ಒಂದಷ್ಟು ಹಾನಿಗೆ ಒಳಗಾದರೂ ಅದರ ಸಂಪೂರ್ಣ ರಚನೆ ಮತ್ತು ಎರಡು ಸ್ಪೈರ್ಡ್ ಈಗಲೂ ಹಾಗೆಯೇ ಉಳಿದುಕೊಂಡಿವೆ ಎಂದು ನಮ್ಮ ಗೈಡ್ ಹೇಳಿದ. ಅದರ ಬಗ್ಗೆ ವಿವರಗಳನ್ನು ಅಂತರಜಾಲದಲ್ಲಿ ನೋಡಿದಾಗಲೂ ಅದೇ ರೀತಿ ಬರೆಯಲಾಗಿತ್ತು. ಯಾವುದೇ ಒಂದು ಕಟ್ಟಡದ ಮೇಲೆ 14 ಬಾಂಬ್‌ಗಳು ಬಿದ್ದಮೇಲೂ ಉಳಿದುಕೊಂಡಿತೆ ಎನ್ನುವ ಅನುಮಾನ ಮಾತ್ರ ನನ್ನನ್ನ ಕಾಡುತ್ತಲೇ ಇತ್ತು.
ಅಷ್ಟು ದೊಡ್ಡ ಚರ್ಚ್ ಮುಂದಿರುವ ಮೈದಾನ ಮಾತ್ರ ತೀರಾ ಸಣ್ಣದಾಗಿತ್ತು. ಬಹುಶಃ ನಂತರದ ಕಾಲದಲ್ಲಿ ಸುತ್ತಲೂ ಕಟ್ಟಡಗಳ ಒತ್ತುವರಿ ನಡೆದಿರಬೇಕು! ಯಾರು ಎಲ್ಲಿಹೋಗಿ ನಿಂತುಕೊಂಡು ಫೋಟೋ ಹಿಡಿದುಕೊಂಡರೂ ಎತ್ತರದ ಚರ್ಚ್ಅನ್ನು ಕ್ಯಾಮಾರಾದಲ್ಲಿ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಕೆಲವರು ಮೊಬೈಲ್ ಕ್ಯಾಮರಾವನ್ನು ಉಳ್ಟಾ ಮಾಡಿಕೊಂಡು ಹಿಡಿದರೂ ಚಚ್‌ಗೋಪುರಗಳು ಕ್ಯಾಮರಾ ಕಣ್ಣಿನ ಫ್ರೇಮ್‌ಗೆ ದೊರಕಲಿಲ್ಲ. ಸುಮಾರು ದೂರ ರಸ್ತೆಗೆ ನಡೆದುಹೋಗಿ ನಿಂತುಕೊಂಡರೂ ಆಗಲಿಲ್ಲ. ಒಟ್ಟಿನಲ್ಲಿ ಈ ಜರ್ಮನ್ ಕಲೋನ್ ಕ್ಯಾಥೆಡ್ರಲ್ ಚರ್ಚ್‌ನ ಒಳಗಿನ ವೈಭವವನ್ನು ಒಮ್ಮೆ ನೋಡಬೇಕಿದೆ.
(ಮೊದಲ ಭಾಗ: ಬ್ರಸೆಲ್ಸ್‌ನಲ್ಲಿ ಸುತ್ತಾಟ)
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.