ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್‌ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಊಹಿಸದೇ ಒಂದು ಸದವಕಾಶ ಒದಗಿಬಂತು. ನಾನು ಬೆಂಗಳೂರಿನ ಹೃದಯಭಾಗದಲ್ಲಿರುವ Century Club ನಲ್ಲಿ ಕಾಲಿಡುತ್ತೀನಿ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ದಕ್ಷಿಣ ಭಾರತದ ಸುಪ್ರಸಿದ್ಧ Century Club ಒಳಗೆ ಹೋಗಲು ಸದಸ್ಯರಾಗಿರಬೇಕು, ಇಲ್ಲವೆ ಸದಸ್ಯರ ಆಹ್ವಾನಿತ ಅತಿಥಿಗಳಾಗಿರಬೇಕು. ಅರ್ಜಿ ಹಾಕಿಕೊಂಡು ಅನೇಕ ವರ್ಷಗಳಾದ ಮೇಲೆ ಅಕ್ಕ-ಭಾವರಿಗೆ ಸದಸ್ಯತ್ವ ಬಂತು, ಅವರ ಮೊದಲ ಅತಿಥಿಗಳಾಗಿ ನಾವು ಹೋಗುವ ಅವಕಾಶ ಬಂತು. ಅವರ ಹರ್ಷವನ್ನು ನಾವೂ ಹಂಚಿಕೊಂಡು ಸಂಭ್ರಮಿಸಿದೆವು.
ನಾನು ಬೆಂಗಳೂರಿನಲ್ಲಿದ್ದಾಗ Century Club ಹೆಸರು ಗೊತ್ತಿತ್ತು. ಸುವ್ಯವಸ್ಥಿತ ಮತ್ತು ಸುಂದರ ಪರಿಸರವಿರುವ ಈ ಕ್ಲಬ್ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡಿದ್ದು ಎಂದು ತಿಳಿದಿತ್ತೇ ವಿನಃ ಅದರ ವಿವರಗಳನ್ನು ತಿಳಿದುಕೊಳ್ಳುವ ಆಸಕ್ತಿ ಇರಲಿಲ್ಲ. ಅನೇಕಬಾರಿ ಕಸ್ತೂರಬಾ ರಸ್ತೆಯಿಂದ ವಿಧಾನಸೌಧದ ಮುಂದೆ ಬರಲು ಮಧ್ಯದಲ್ಲಿರುವ ಕಬ್ಬನ್ ಪಾರ್ಕ್ ಒಳಗಿನಿಂದ ನಡೆದು ಬರುವಾಗ ಸೆಂಚುರಿ ಕ್ಲಬ್ ಬೋರ್ಡ್ ಕಾಣಿಸುತ್ತಿತ್ತು. ಅದು ಭಾರತೀಯರಿಗೆ ಅವಮಾನ ಮಾಡುವಂತೆ ಬ್ರಿಟಿಷರ ವಸಾಹತುಶಾಹಿತನದ ಮತ್ತೊಂದು ಗುರುತು ಎಂದು ಕೋಪವಿತ್ತು. ಶ್ರೀಮಂತರಿಗಾಗಿ ಇದೆ ಅನ್ನೋದು ಮತ್ತೊಂದು ಭಾವನೆ. ಈ ಹಿನ್ನೆಲೆಯಲ್ಲಿ ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸಾಹ, ಕುತೂಹಲ ಇರಲಿಲ್ಲ. ಒಂದು ಕಾಲದಲ್ಲಿ ಅದರ ಮುಂದೆಯೇ ಇರುವ ವಿಧಾನಸೌಧದ ಸೌಂದರ್ಯವನ್ನು ನೋಡುತ್ತಾ ಘಳಿಗೆಗಳನ್ನು ಕಳೆದಿದ್ದು, ಹಿಂದೆ ಮತ್ತು ಪಕ್ಕಕ್ಕೆ ಅಂಟಿಕೊಂಡಿರುವ ಕಬ್ಬನ್ ಪಾರ್ಕ್‌ನಲ್ಲಿನ ಓಟದ ನಡಿಗೆಗಳನ್ನು ಮೊನ್ನೆ ಜ್ಞಾಪಿಸಿಕೊಂಡೆ. ಕೆಲ ಹಳೆ ನೆನಪುಗಳು ಅದೆಷ್ಟು ಮಧುರ! ಅವಕ್ಕೆ ಈ ಹೊಸ ಅನುಭವಗಳು ಸೇರಿಕೊಂಡು ನೆನಪುಗಳ ಹೂಮಾಲೆ ಮತ್ತಷ್ಟು ಘಮಘಮಿಸಿದಾಗ ಅದು ನನ್ನ ಜೀವನಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿತು.
ಇದ್ದಕ್ಕಿದ್ದಂತೆ ನಾನು ಒಬ್ಬ ಅಪರಿಚಿತ ಪ್ರವಾಸಿ ಎಂಬ ಭಾವನೆ ಬಂತು. ಇಂತಹ ಒಂದು colonial times ಸ್ಥಳಕ್ಕೆ ಹೋದಾಗ ಅದರ ಸ್ಥಳ-ಪುರಾಣವನ್ನು ತಿಳಿದುಕೊಳ್ಳಬೇಕು, ಅಲ್ಲವೇ. ನಾನು ಸೆಂಚುರಿ ಕ್ಲಬ್ ಹೊಕ್ಕಾಗ ಅಲ್ಲಿ ಆರಂಭದಲ್ಲೇ ಅಲ್ಲಲ್ಲಿ ಬಲಗಡೆ ಗೋಡೆ, ಕಂಬಗಳ ಮೇಲೆ ತೂಗುಚಿತ್ರಗಳನ್ನು ಹಾಕಿ ಅದರಲ್ಲಿ ಕ್ಲಬ್ ಇತಿಹಾಸವನ್ನು ವಿವರಿಸಿದ್ದಾರೆ. ಅದಕ್ಕೂ ಮೊದಲು ನನ್ನ ಗಮನ ಸೆಳೆದಿದ್ದು ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮತ್ತು ಆಗಿನ ಮೈಸೂರು ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಗಳು. ಸರ್ ಎಂವಿ ಸೆಂಚುರಿ ಕ್ಲಬ್ ಸ್ಥಾಪಕರು. ಮಹಾರಾಜರು ಕ್ಲಬ್ patron. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ ೧೯೧೭ ರಲ್ಲಿ ಈ ಕ್ಲಬ್ ಸ್ಥಾಪಿಸಿ ಅದರ ಮೊದಲ ಅಧ್ಯಕ್ಷರೂ ಆಗಿದ್ದರು.
ಸ್ಥಾಪನೆಯ ಹಿಂದೆ ಒಂದು ಕತೆಯಿದೆ. ವಿಶ್ವೇಶ್ವರಯ್ಯನವರು ಒಮ್ಮೆ Bangalore Club ಗೆ ಹೋದರಂತೆ. ಆಗ ಅದರ ಹೆಸರು Bangalore United Services Club ಅಂತಿತ್ತು. ಆಗಿನ ಕಾಲದಲ್ಲಿ ಬೆಂಗಳೂರಿನ ಕಂಟೋನ್ಮೆಂಟ್ ಏರಿಯಾದಲ್ಲಿ ಭಾರತೀಯರಿಗೆ ಪ್ರವೇಶವಿರಲಿಲ್ಲ, ಬರೀ ಬ್ರಿಟಿಷರಿಗೆ ಮೀಸಲಿತ್ತು. ಒಳಗೆ ಹೋಗಬೇಕೆಂದರೆ ಸಂಸ್ಥಾನದ ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಗೆ ಅವರ ಮೈಸೂರು ಪೇಟ ತೆಗೆದಿಟ್ಟು ತಲೆಗೆ ಕ್ಯಾಪ್ ಹಾಕಿಕೊಳ್ಳುವಂತೆ ಆದೇಶ ಬಂತು. ಅದನ್ನು ಅವರು ಒಪ್ಪಲಿಲ್ಲ. ನಮ್ಮ ಭಾರತೀಯರಿಗಾಗೇ ಒಂದು ಉತ್ಕೃಷ್ಟ ಗುಣಮಟ್ಟದ ಕ್ಲಬ್ ಶುರು ಮಾಡುವ ಯೋಚನೆ ಬಂದು, ಮಹಾರಾಜರ ಅನುಮತಿ ಕೇಳಿದರು. ಮಹಾರಾಜರು ಕಬ್ಬನ್ ಪಾರ್ಕ್ ಪಕ್ಕದ ಶೇಷಾದ್ರಿ ರಸ್ತೆಯಲ್ಲಿ ಏಳು ಎಕರೆ ಭೂಮಿ ಮಂಜೂರು ಮಾಡಿ ಹೊಸ ಕ್ಲಬ್ ಪೇಟ್ರನ್ ಆದರು. ಆಗ ವಿಶ್ವೇಶ್ವರಯ್ಯನವರು ನೂರು ಜನ ಭಾರತೀಯರಿಗೆ ಮಾತ್ರ ಈ ಕ್ಲಬ್ ಸದಸ್ಯತ್ವವನ್ನು ಕೊಡಬೇಕೆಂದು ಆಲೋಚಿಸಿ ಕ್ಲಬ್ ಹೆಸರನ್ನು ಸೆಂಚುರಿ ಕ್ಲಬ್ ಎಂದು ಇಟ್ಟರಂತೆ. ಈಗ ಆರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಸೆಂಚುರಿ ಕ್ಲಬ್‌ಗೆ ಹೋಗಲು ಡ್ರೆಸ್ ಕೋಡ್ ಇದೆ, ನಿನ್ನ ಗಂಡ shorts, ಟೀ ಶರ್ಟ್ ಹಾಕ್ಕೊಂಡು ಬರುವಂತಿಲ್ಲ, ನೀಟಾಗಿ ಪ್ಯಾಂಟ್-ಶರ್ಟ್ ಹಾಕ್ಕೋಬೇಕು ಎಂದಾಗ ಫಜೀತಿಯಾಯ್ತು. ಗಡಬಡನೆ ಓಡಾಡಿ ನನ್ನ ಗಂಡನಿಗೆ ಬೆಲೆಬಾಳುವ ಪ್ಯಾಂಟ್-ಶರ್ಟ್ ಕೊಡಿಸಿ, ಚೆಂದನೆ ಕಾಣುವಂತೆ ಮಾಡಿ ಹೋದೆವು.
ಕ್ಲಬ್ ಒಳಗೆ ಲಾನ್ ಏರಿಯಾ, ಭರ್ಜರಿ ಗಾತ್ರದ ಈಜುಕೊಳ, ಹೊರಾಂಗಣದಲ್ಲಿ ಕೂತು ಹರಟೆ ಹೊಡೆಯಲು, ಮೀಟಿಂಗ್ ಮಾಡಲು ಆಸನ ವ್ಯವಸ್ಥೆ, ಊಟ-ತಿಂಡಿ-ಪಾನೀಯಗಳ ವ್ಯವಸ್ಥೆ, ಚಟುವಟಿಕೆಗಳಿಗಾಗಿ ಹಲವಾರು ಪ್ರತ್ಯೇಕ ಕೊಠಡಿಗಳು, presidential suite, ಟೆನಿಸ್ ಮುಂತಾದ ಕ್ರೀಡೆಗಳಿಗೆ ಜಾಗ ಹೀಗೆಲ್ಲಾ ಇದೆ. ಆಗಿನ ಕಾಲದಲ್ಲಿ ವಿಶೇಷವೆನಿಸಿದ್ದ ಬ್ರಿಟಿಷ್-ಪ್ರಭಾವಿತ ವಾಸ್ತುಶಿಲ್ಪ ಕಲೆ, ವಿನ್ಯಾಸವಿದೆ. ತಿಂಡಿ-ಊಟಗಳಂತೂ ಬಾಯಿ ಚಪ್ಪರಿಸುವಂತಿತ್ತು. ಈಜುಕೊಳ ನೋಡಿದಾಗಲಂತೂ ಸ್ವಲ್ಪ ರಿಲಾಕ್ಸ್ ಮಾಡಿಕೊಳ್ಳಲು ನೀರಿಗೆ ಇಳಿದೇಬಿಡೋಣ ಅನ್ನಿಸಿತ್ತು. ಕರ್ನಾಟಕದ ದೊಡ್ಡಬಳ್ಳಾಪುರ ಪ್ರದೇಶದ vineyard ನಲ್ಲಿ ದ್ರಾಕ್ಷಿ ಬೆಳೆದು ತಯಾರಿಸಿದ ಸ್ಥಳೀಯ ವೈನ್ ಹಿತವಾಗಿದ್ದು ರುಚಿಯಾಗಿತ್ತು. ಕ್ಲಬ್ ಸಿಬ್ಬಂದಿ ತುಂಬಾ ಚುರುಕು, ಸ್ನೇಹಪರರು.
ಈ ಅನುಭವಗಳ ಮಧ್ಯೆ ನನ್ನ ಮನಸ್ಸು ಬೆಂಗಳೂರಿನ ಈ ಸೆಂಚುರಿ ಕ್ಲಬ್ ಕಟ್ಟಡವನ್ನು ಆಸ್ಟ್ರೇಲಿಯಾದಲ್ಲಿ ನಾನಿರುವ Brisbane ನಗರದಲ್ಲಿರುವ ಟೌನ್ ಹಾಲ್ ಮತ್ತು treasury ಕಟ್ಟಡಗಳಿಗೆ ಹೋಲಿಸುತಿತ್ತು. ಅವೆರಡೂ ಕೂಡ ಹೀಗೇ ಕಲೋನಿಯಲ್ ಕಟ್ಟಡಗಳು, ಬಹಳ ಚೆನ್ನಾಗಿವೆ. ದೊಡ್ಡ ಕಂಬಗಳು, ವಿಶಾಲ ಪ್ರಾಂಗಣಗಳಿವೆ. ಇಂಗ್ಲೆಂಡ್‌ನಲ್ಲೂ ಕೂಡ ನಾನು ನೋಡಿರುವ ಮ್ಯಾಂಚೆಸ್ಟರ್ ನಗರ ಟೌನ್ ಹಾಲ್ ಕಟ್ಟಡವೂ ಹೀಗೇ ಇದೆ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲೂ ಕೂಡ ರಾಜ್ಯ ಲೈಬ್ರರಿ, museum, ಮುಂತಾದ ಮುಖ್ಯ ಕಟ್ಟಡಗಳ ಮುಖ-ಮೈ ಇದೆ ಹೋಲಿಕೆ. ಹಾಗಾಗಿ ನಾನು ಇವನ್ನು colonial ಟೈಮ್ಸ್ features ಅಂತ ಕರೀತೀನಿ.
ಪ್ರತಿಬಾರಿಯೂ ಇಂತಹ ಒಂದು ಕೊಲೊನಿಯಲ್ ಟೈಮ್ಸ್ ನೆನಪನ್ನು ನೇವರಿಸಿದಾಗ ಅದು ಬಿಚ್ಚಿಡುವ ಕಥೆಗಳು ಭಾರಿ ಆಸಕ್ತಿ ಕೆರಳಿಸುವಂತಿರುತ್ತದೆ. ಹಾಗೆಯೆ, ಸೆಂಚುರಿ ಕ್ಲಬ್‌ನಲ್ಲಿ ನಡೆದಾಡುತ್ತಿದ್ದಾಗ ನನ್ನ ಕಲ್ಪನಾಲೋಕದಲ್ಲಿ ಸರ್ ಎಂವಿ ಮತ್ತು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಇಲ್ಲೆಲ್ಲಾ ಓಡಾಡಿದ್ದಿರಬಹುದಾದ, ಅವರು ಏನು ಮಾತನಾಡುತ್ತಿದ್ದರು, ಮಹಾರಾಜರ ಕುಟುಂಬದ ಸ್ತ್ರೀಯರು ಏನನ್ನುತ್ತಿದ್ದರು, ಈಜುಕೊಳದಲ್ಲಿ ಯಾರ್ಯಾರು ಈಜಾಡುತ್ತಿದ್ದರು, ಮಕ್ಕಳು ಇಲ್ಲೆಲ್ಲಾ ಓಡುತ್ತಾ ನಲಿದಾಡಿದರಾ, ಸದಸ್ಯರೆಲ್ಲಾ ಭಾರತೀಯ ಉಡುಗೆ ತೊಟ್ಟು ಬರುತ್ತಿದ್ದರಾ ಇಲ್ಲಾ ಸೂಟು-ಬೂಟು ಹಾಕಿಕೊಂಡರಾ ಎಂದೆಲ್ಲಾ ಪ್ರಶ್ನೆಗಳು. ಸಮಯವಿದ್ದಿದ್ದರೆ ಕ್ಲಬ್ ಫೋಟೋ ಬುಕ್ ನೋಡಬಹುದಿತ್ತೇನೋ. ಆಗ ಕರ್ನಾಟಕ, ಬೆಂಗಳೂರು, ಮೈಸೂರು ಇತಿಹಾಸದಲ್ಲಿ ನೂರು ವರ್ಷಗಳ ಹಿಂದೆ ಹೋಗಿ ಈ ಕ್ಲಬ್ ಗೆ ಬರುತ್ತಿದ್ದ ಮಹನೀಯರನ್ನು ನೋಡಬಹುದಿತ್ತು.
ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್‌ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು. ನಾನು ಇಂಗ್ಲೆಂಡ್ ನಿವಾಸಿಯಾಗಿದ್ದಾಗ ಅಲ್ಲಿನವರು, ‘ಓಹ್ ಯೆಸ್. ವಿ ಲವ್ ಇಂಡಿಯಾ. ಬ್ಯಾಕ್ ಇನ್ ದಿ ಡೇಸ್, ಬ್ರಿಟನ್ ಮ್ಯಾರೀಡ್ ಇಂಡಿಯಾ’ ಎನ್ನುತ್ತಿದ್ದದ್ದು ಧುತ್ತನೆ ನೆನಪಾಗಿತ್ತು.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.