ಒಂದು ಕಥಾ ರೂಪಕವಾಗಿ ನಮ್ಮ ಗಣರಾಜ್ಯದ ಮಹತ್ವವನ್ನು ವಿವರಿಸಲು ಬಯಸುತ್ತೇನೆ. ಕೆಲವು ತಿಂಗಳುಗಳ ಹಿಂದೆ ಡಾ. ಹಮೀದ್ ಅನ್ಸಾರಿಯವರು ಇನ್ನೂ ಉಪರಾಷ್ಟ್ರಪತಿಯಾಗುವ ಮೊದಲು ಬೆಂಗಳೂರಿಗೆ ಬಂದು ನನ್ನನ್ನು ನೋಡಲು ಬಯಸಿದ್ದರು. ಅವರೊಂದಿಗೆ ಪ್ರಸಿದ್ದ ಪತ್ರಕರ್ತ ದಿಲೀಪ್ ಪಡ್‌ಗಾಂವ್ಕರ್ ಇದ್ದರು. ನಾವು ಉಪಾಹಾರಕ್ಕೆಂದು ಒಂದು ಕಡೆ ಸೇರಿದೆವು. ಆಗ ಪಡ್‌ಗಾಂವ್ಕರ್ ಒಂದು ಕಥೆಯನ್ನು ಹೇಳಿದರು. ಆ ಕಥೆ ಹೀಗಿದೆ.
ಪಡ್‌ಗಾಂವ್ಕರ್, ಮಣಿಶಂಕರ್ ಐಯ್ಯರ್ ಮತ್ತು ನಮ್ಮ ಬಿಹಾರದ ಲಾಲೂ ಪ್ರಸಾದ್ ಯಾದವ್ ಒಮ್ಮೆ ಪಾಕಿಸ್ತಾನಕ್ಕೆ ಒಟ್ಟಿಗೆ ಹೋಗಿದ್ದರು. ಪಾಕಿಸ್ತಾನದಲ್ಲೂ ಅತ್ಯಂತ ಜನಪ್ರಿಯನಾದ ಮನುಷ್ಯನೆಂದರೆ ಲಾಲು ಪ್ರಸಾದ್ ಯಾದವ್. ಅವರು ಹೋದೆಡೆಯಲ್ಲಾ ಸಾವಿರಾರು ಜನ ಅವರ ಮಾತನ್ನು ಕೇಳಲು ಸೇರುತ್ತಿದ್ದರು. ಇದಾದ ನಂತರ ಜನರಲ್ ಮುಷರಫ್ ಚಹಾಕ್ಕೆ ಕರೆದು ತಮಾಷೆಯಾಗಿ ಲಾಲು ಪ್ರಸಾದ್‌ಗೆ ಹೇಳಿದ್ರಂತೆ. ‘ಲಾಲೂಜಿ ನೀವು ಇಲ್ಲಿ ಎಲ್ಲಿ ನಿಂತರೂ ಪಾಕಿಸ್ತಾನದಲ್ಲಿ ಎಲೆಕ್ಷನ್‌ನಲ್ಲಿ ಗೆದ್ದು ಬಿಡುತ್ತೀರಿ’. ಆಗ ಲಾಲೂ, ಅವರದೇ ಆದ ಧಾಟಿಯಲ್ಲಿ, ‘ಜನರಲ್ ಸಾಹೇಬ್ ಈ ಮಾತನ್ನು ನಾನು ನಿಮಗೆ ಹೇಳಲಾರೆ’ ಎಂದರಂತೆ. ಇದನ್ನು ಕೇಳಿ ಜನರಲ್ ಮುಷರಪ್ ಕೂಡ ನಕ್ಕರಂತೆ.
ನಾವು ಒಪ್ಪದೇ ಇರುವ, ನಾವೂ ಸದಾ ಟೀಕಿಸುವ, ಲಾಲೂ ಪ್ರಸಾದ್ ಯಾದವ್‌ನಂತವರೂ ಕೂಡ ಭಾರತದಲ್ಲಿ ಒಬ್ಬ ನಾಯಕನಾಗಿರುವುದು, ಯಾವ ಯಾವ ಮೂಲೆಯಿಂದಲೋ ಬಂದು, ಯಾವ ಯಾವ ಜಾತಿಯಂದಲೋ ಬಂದು ಎಲ್ಲೆಲ್ಲೂ ಜನನಾಯಕರು ಸೃಷ್ಠಿಯಾಗಿರುವುದಕ್ಕೆ ಕಾರಣ ನಮ್ಮ ಗಣರಾಜ್ಯ. ಹೀಗೆ ಜನನಾಯಕರು ಸೃಷ್ಠಿಯಾಗದೇ ಇರುವುದು ಪಾಕಿಸ್ತಾನದ ಸಮಸ್ಯೆ. ಇದನ್ನು ನಾವು ತಿಳಿದರೆ ನಮ್ಮ ರಾಜ್ಯಾಂಗ ನಮಗೆ ಏನೆಲ್ಲಾ ಮಾಡಿದೆ ಎನ್ನುವುದು ಅರ್ಥವಾಗುತ್ತದೆ.
ಭಾರತದಲ್ಲಿ ಕಳೆದ 58 ವರ್ಷಗಳಲ್ಲಿ ಸಾಕಷ್ಟು ಜನನಾಯಕರು ಬಂದು ಹೋಗಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಇದು ಸಾಧ್ಯವಾಗಿಲ್ಲ. ಇದೇ ಭಾರತ ಗಣತಂತ್ರದ ವಿಶೇಷ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ