ದುಃಖದ ಮಹಾಕಾವ್ಯ
ನಿನ್ನ ಪ್ರೀತಿ ನನಗೆ
ಕೊರಗಿನ ಪಾಠ ಹೇಳಿಕೊಟ್ಟಿದೆ,
ನೂರು ವಸಂತಗಳಾಯ್ತು
ಒಬ್ಬ ಮಹಾಪುರುಷನಿಗಾಗಿ
ಕೊರಗಬೇಕೆಂಬ ಹಸಿವೆಯಾಗಿ
ಗುಬ್ಬಿಯಂತೆ ಅವನ ಭುಜಕ್ಕೊರಗಿ
ಕಣ್ಣೀರಿಡಲು
ತುಕಡಿಗೊಂಡ ನನ್ನನ್ನು
ಒಡೆದ ಹರಳಿನ ಚೂರುಗಳ
ಜೋಡಿಸಿದಂತೆ ಜೋಡಿಸುವ
ಒಬ್ಬ ಗೆಳೆಯನ ಹುಡುಕುತ್ತಿದ್ದೆ
ಗೆಳೆಯನೆ,
ನಿನ್ನ ಪ್ರೀತಿ ನನ್ನನ್ನು
ದುಷ್ಚಟಗಳ ದಾಸಿಯನ್ನಾಗಿಸಿದೆ,
ನಾನೇ ಹೀರಿದ ಕಾಫಿ ಲೋಟವನ್ನು
ಒಂಟಿ ಇರುಳಿನಲ್ಲಿ
ಸಾವಿರ ಬಾರಿ ಓದುವುದ ಕಲಿಸಿದೆ,
ರಸವಿದ್ಯೆಯ ಶೋಧಿಸಿ
ಜೋತಿಷ್ಯಿಯನ್ನು ಭೇಟಿಯಾಗಲು………
ನಿನ್ನ ಪ್ರೀತಿ
ಕಾಲುದಾರಿಗಳ ಬಾಚಲೆಂದು
ಮನೆಯ ತೊರೆಯುವುದ ಕಲಿಸಿದೆ
ಮತ್ತೆ
ಕಾರಿನ ದೀಪಗಳ ಮೇಲೆ
ಮಳೆಹನಿಗಳ ಮೈಯ್ಯ ಮೇಲೆ
ನಿನ್ನ ಮುಖವ ಹುಡುಕಲು
ಅಪರಿಚಿತನ ಬಟ್ಟೆಯಲ್ಲಿ
ನಿನ್ನ ತೊಡುಗೆಗಳನ್ನು
ಓದಲು ಕಲಿಸಿದೆ,
ಅದಾಗ್ಯೂ…ಸಹ…
ನಿನ್ನ ಚಿತ್ರಗಳಿಗಾಗಿ
ಜಾಹೀರಾತಿನ ಭಿತ್ತಿಪತ್ರಗಳಲ್ಲಿ
ತಡಕಾಡುತ್ತೇನೆ,
ಗೆಳೆಯಾ,
ನಿನ್ನ ಪ್ರೀತಿ
ಜೀಪಿನ ಕಿಟಕಿಯ
ಕೂದಲಿನ ಹುಡುಕಾಟದಲ್ಲಿ
ಸುತ್ತಲೂ ತಿರುಗಾಡುವ
ಪಾಠ ಹೇಳಿಕೊಟ್ಟಿದೆ,
ಒಂದು ಮೋರೆಯ, ಒಂದು ಇನಿದನಿಯ ಹುಡುಕಾಟದಲ್ಲಿರುವ
ಎಲ್ಲ ಜೀಪುಧಾರಿ ಪುರುಷರೂ
ಅಸೂಯೆಪಡುತ್ತಾರೆ,
ಅದೇ ಸಕಲರ ಮೋರೆ ಮತ್ತು
ಇನಿದನಿಯಾಗಿದೆ,
ನಿನ್ನ ಪ್ರೀತಿ
ನನ್ನನ್ನು ದುಃಖದ ಮಹಾನಗರಿಗಳಲ್ಲೆಲ್ಲ
ಹೊಗಿಸಿಬಿಟ್ಟಿದೆ ಮಹಾನುಭಾವನೇ,
ನೀ ಬರುವ ಮುನ್ನ
ಈ ಅಪರಿಚಿತ ದುಃಖದ ನಗರಿಗಳಲ್ಲಿ
ನಾನೆಂದೂ ಸಂಚರಿಸಿರಲಿಲ್ಲ,
ಕಣ್ಣೀರೂ ದುಃಖರಹಿತ ವ್ಯಕ್ತಿಯೇ ಸರಿ
ವ್ಯಕ್ತಿಯ ನೆರಳು ಮಾತ್ರ,
ನಿನ್ನ ಪ್ರೀತಿ,
ನನ್ನನ್ನು ಪುಟ್ಟ ಬಾಲಕಿಯನ್ನಾಗಿಸಿದೆ,
ಬಳಪದಿಂದ ಗೋಡೆಯ ಮೇಲೆ
ಮೀನುಗಾರನ ಹಡಗಿನ ಹಾಯಿಯ ಮೇಲೆ
ಚರ್ಚಿನ ಗಂಟೆಗಳ ಮೇಲೆ
ಶಿಲುಬೆಗಳ ಮೇಲೆ
ನಿನ್ನ ಮುಖವನ್ನು
ಚಿತ್ರಿಸುವಂತೆ ಮಾಡಿದೆ
ನಿನ್ನ ಪ್ರೀತಿ
ಕಾಲದ ನಕಾಶೆಯನ್ನು
ಪ್ರೀತಿಯೆನ್ನುವುದು ಹೇಗೆ
ಬದಲಾಯಿಸಿಬಿಡುತ್ತದೆ
ಎನ್ನುವುದನ್ನೂ ಕಲಿಸಿಕೊಟ್ಟಿದೆ,
ನಿನ್ನ ಪ್ರೀತಿ,
ನಾನು ಪ್ರೀತಿಸಲು ಆರಂಭಿಸಿದ ಕ್ಷಣ
ಭೂಮಿಯು ಹೇಗೆ
ಭ್ರಮಣೆಯನ್ನೇ ಮರೆಯುವುದು
ಎನ್ನುವುದನ್ನೂ ಕಲಿಸಿಕೊಟ್ಟಿದೆ,
ನಿನ್ನ ಪ್ರೀತಿ
ಪರಿಗಣನೆಗೆ ತೆಗೆದುಕೊಳ್ಳಲಾಗದ
ಅಂಶಗಳನ್ನೂ ಕಲಿಸಿಕೊಟ್ಟಿದೆ,
ಅದಕ್ಕಾಗಿಯೇ ನಾನು
ಮಕ್ಕಳಿಗೆಂದೇ ಬರೆದ
ಕಟ್ಟುಕತೆಗಳನ್ನು ಓದುವುದು,
ಮತ್ತು
ಕೋಟೆಯೊಳಗೆ ಹೊಕ್ಕು
ರಾಜಕುಮಾರನೊಬ್ಬ
ನನ್ನನ್ನು ವರಿಸಿದಂತೆ
ಕನಸು ಕಾಣುವುದು
ಸರೋವರಕ್ಕಿಂತಲೂ ಶುಭ್ರವಾದ
ಆ ಕಣ್ಣುಗಳ ಹೊಳಪು…
ದಾಳಿಂಬೆ ಹೂಗಳಿಗಿಂತಲೂ
ಅಪೇಕ್ಷಿತವಾದ
ಆ ತುಟಿಗಳು…..
ಅದೇ ರಾತ್ರಿ
ಆತನನ್ನು ಅಪಹರಿಸಿ,
ರತ್ನಖಚಿತ ಕಿರೀಟವನ್ನು ಮುಡಿಸಿದಂತೆ
ಕನಸು ಕಾಣುತ್ತೇನೆ…
ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ