ಮುತ್ತು-೧

ಒಂದು ಹನಿ ಮುತ್ತಿಗಾಗಿ ತಡಕಾಡಬೇಕು ನೀನು
ನಾನು ನೀನು ನೆನೆಯುವಷ್ಟು ಮಳೆ ಹನಿದರೆ ಸಾಕು
ಒಳಗೊಳಗೇ ಬೆಚ್ಚಗಾಗಲು

ನಿನ್ನ ಆಗಸದೊಳಗೆ ಚೆಲ್ಲಾಟವಾಡುವ ಬೆಳಕು ನಾನು ಸದಾ ಗುದ್ದಾಡುತ್ತಲೇ ಇದ್ದೇನೆ
ಒಮ್ಮೆ ಮುಟ್ಟಿ ಬರಬೇಕೆಂದು
ಕಾಮನ ಬಿಲ್ಲನ್ನು,
ರೆಕ್ಕೆನೀಡದ ದೇವರುಗಳ ಹಳಿಯುತ್ತ

ನೀನು ನನ್ನ ತುಂಬೆಲ್ಲಾ
ದೇವನದಿಯಂತೆ ಹರಿದಾಡುತ್ತಿ
ಮೈಯ್ಯ ಚರ್ಮದೊಳಗಿಂದ
ಜೀವಕೋಶವ ಬೇಧಿಸುತ್ತ
ಎದೆಯಾಳಕ್ಕೆ ಹೊಕ್ಕು
ಇಡೀ ಲೋಕವೇ ತಿರುಗಿ ನೋಡುತ್ತದೆ
ಪ್ರೇಮದ ಸುವಾಸನೆಗೆ
ನಮ್ಮಿಬ್ಬರ ಅಪ್ಪುಗೆಯನ್ನು ಹರಸುತ್ತ
ನಕ್ಷತ್ರಗಳೆಲ್ಲ ಕುಲು ಕುಲು ನಗುತ್ತವೆ
ಚಂದಿರನೊಬ್ಬನೆ ಮುನಿಸಿಕೊಳ್ಳುತ್ತಾನೆ
ಕತ್ತಲೆಯ ಬೇಲಿಯೊಳಗೆ ನಾವಿಬ್ಬರೂ ಲೀನವಾಗುತ್ತೇವೆ

***

ಮುತ್ತು-೨

ನೀನು ನನ್ನ ಬೆನ್ನಿಗೆ ಮುತ್ತಿಡುತ್ತಲೇ ಮೈಯೆಲ್ಲ ಬೆವರುತ್ತದೆ
ತುದಿಬೆರಳುಗಳಿಂದ ತಲೆ ನೇವರಿಸಿದರೆ ಇಡೀ ಲೋಕಕ್ಕೆ ಕತ್ತಲಾವರಿಸುತ್ತದೆ

ಬೇರುಗಳಲ್ಲಿರುವ ನನ್ನನ್ನು ಹೂವುಗಳ ಮಧ್ಯೆ ಹುಡುಕುತ್ತಿ
ನಿನ್ನ ಮೌನದಿಂದ ಕಲ್ಲಾದವಳಿಗೆ
ಮತ್ತೆ ಹೂವಾಗಲು ಮೌನವನ್ನುಳಿದು ಬೇರೆ ದಾರಿಯಿಲ್ಲ

ನಿನ್ನ ಧ್ವನಿಗಾಗಿಯೇ ಕಾತರಿಸುವ ನನ್ನ ತುಟಿಗಳಿಗೆ
ನಿನ್ನ ನೆನಪಿನ ಧೂಳು ಅಂಟಿಕೊಂಡಿದೆ
ಬೇಕೆಂದಾಗಲೆಲ್ಲ ಕಣ್ಣುಗಳ ಮುಂದೆ ಅರೋರ ಸಂಭವಿಸುತ್ತದೆ

ಮುಸ್ಸಂಜೆಯ ಮೋಡಗಳಾಟದಂತೆ
ಮನಸುಗಳಿಗೆ ಮಳೆಯಾಗದು,
ನನ್ನದೇ ಕಣ್ಣ ಸೂರ ಹನಿಗಳಿಗೆ ಎದೆಯೊಡ್ಡಿದಾಗಲೇ ನನ್ನ ಮೊಗ್ಗುಗಳು ಬಿರಿಯಲಾರಂಭಿಸುತ್ತವೆ

 

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ