ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹದ ಮೊದಲನೆಯ ಭಾಗ ಇಲ್ಲಿದೆ
ಜಗತ್ತಿನಲ್ಲಿ ಮೊದಲ ಐದು ದೊಡ್ಡ ಪರ್ವತ ಶ್ರೇಣಿಗಳೆಂದರೆ ಹಿಮಾಲಯ, ಅಟ್ಲಾಸ್, ಆಂಡಿಸ್, ರಾಕಿ ಮತ್ತು ಆಲ್ಫೈನ್ ಪರ್ವತ ಶ್ರೇಣಿಗಳು. ಆಲ್ಫೈನ್ ಶ್ರೇಣಿಗಳು ಪಶ್ಚಿಮದಿಂದ ಪೂರ್ವಕ್ಕೆ 1200 ಕಿ.ಮೀ.ಗಳ ಉದ್ದ 750 ಕಿ.ಮೀ.ಗಳ ಅಗಲ ಹರಡಿಕೊಂಡಿದ್ದು ತನ್ನ ಹೆಗಲ ಮೇಲೆ ಮೊನಾಕೊ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಇಟಲಿ, ಲಿಚ್ಚೆನ್‌ಸ್ಟೈನ್, ಜರ್ಮನಿ, ಆಸ್ಟ್ರಿಯಾ ಮತ್ತು ಸ್ಲೊವೇನಿಯಾ ದೇಶಗಳನ್ನು ಹೊತ್ತುಕೊಂಡಿದ್ದು, ಇವುಗಳನ್ನು ಆಲ್ಫೈನ್ ದೇಶಗಳೆಂದೇ ಕರೆಯಲಾಗುತ್ತದೆ.
ಸ್ವಿಟ್ಜರ್ಲೆಂಡ್ ಪಶ್ಚಿಮ-ಮಧ್ಯ ಯುರೋಪ್ ನಡುವೆ ಹಾಸಿಕೊಂಡಿದ್ದು ದಕ್ಷಿಣಕ್ಕೆ ಇಟಲಿ, ಪಶ್ಚಿಮಕ್ಕೆ ಫ್ರಾನ್ಸ್, ಉತ್ತರಕ್ಕೆ ಜರ್ಮನಿ/ಆಸ್ಟ್ರಿಯಾ/ಲಿಷ್ಟೆನ್‌ಸ್ಟೈನ್ ದೇಶಗಳ ನಡುವೆ ಬೆಟ್ಟ-ಗುಡ್ಡ ಕಾಡು ಕಣಿವೆ ಪರ್ವತ ಶ್ರೇಣಿಗಳು ಹಸಿರನ್ನೆ ಮೈತುಂಬಾ ಹೊದ್ದುಕೊಂಡು ಕುಳಿತಿವೆ. ಭೌಗೋಳಿಕವಾಗಿ ದೇಶವನ್ನು `ಸ್ವಿಸ್ ಪ್ರಸ್ಥಭೂಮಿ’ ಮತ್ತು `ಆಲ್ಫಾಸ್ ಪರ್ವತ ಶ್ರೇಣಿಗಳು’ ಎಂದು ವಿಭಾಗಿಸಲಾಗಿದೆ. ಜ್ಯೂರಿಚ್, ಜಿನೀವಾ ಮತ್ತು ಬಾಸೆಲ್ ದೊಡ್ಡ ಆರ್ಥಿಕ ಕೇಂದ್ರ ನಗರಗಳಾಗಿವೆ. ಪವಿತ್ರ ರೋಮನ್ ಸಾಮ್ರಾಜ್ಯದಿಂದ 1648ರಲ್ಲಿ ಸ್ವಿಟ್ಜರ್ಲೆಂಡ್ ಸ್ವಾತಂತ್ರ್ಯ ಪಡೆದುಕೊಂಡಿತು. ಈ ಸಣ್ಣ ದೇಶದಲ್ಲಿ 13 ವಿಶ್ವಪರಂಪರೆಯ ತಾಣಗಳಿದ್ದು ಅವುಗಳಲ್ಲಿ ಒಂಬತ್ತು ಸಾಂಸ್ಕೃತಿಕ ಮತ್ತು ನಾಲ್ಕು ನೈಸರ್ಗಿಕ ತಾಣಗಳಿವೆ. ಪ್ರಾಚೀನ ನಗರ ಬೆರ್ನ್, ಅಬ್ಬೆ ಆಫ್ ಸೇಂಟ್ ಗಾಲ್, ಬೆನೆಡಿಕ್ಟೈನ್ ಅಬ್ಬೆ ಆಫ್ ಸೇಂಟ್ ಜಾನ್ ಅಟ್ ಮುಸ್ಟೈರ್, ಮೂರು ಕೋಟೆಗಳ ಬೆಲ್ಲಿನ್ಜೋನಾದ ಮಾರುಕಟ್ಟೆ-ಪಟ್ಟಣ ರಾಂಪಾರ್ಟ್ಸ್, ಆಲ್ಫಾಸ್ ಜಂಗ್‌ಫ್ರೋ-ಅಲೆಟ್ ಹಿಮಶಿಖರ, ಮಾಂಟೆ ಸ್ಯಾನ್ ಜಾರ್ಜಿಯೊ ಹಿಮಶಿಖರ, ಲಾವಾಕ್ಸ್-ವೈನ್ಯಾರ್ಡ್ ಟೆರೇಸ್‌ಗಳು, ಅಲ್ಬುಲಾ/ಬಿರ್ನಿನಾ ಭೂದೃಶ್ಯಗಳ ನಡುವಿನ ರೈಟಿಯನ್ ರೈಲು ಮಾರ್ಗ, ಸ್ವಿಸ್ ಟೆಕ್ಟೋನಿಕ್ ಅರೆನಾ ಸರ್ಡೀನಾ, ಲಾ ಚೋಕ್ಸ್-ಡಿ-ಪಾಂಡ್ಸ್ ವಾಚ್ ಮೇಕಿಂಗ್ ಟೌನ್ ಪ್ಲಾನಿಂಗ್ ಇತ್ಯಾದಿ ಮುಖ್ಯವಾದವು.
ಭೂಮಿಯ ಮೇಲೆ ಸಾಸುವೆ ಕಾಳಿನಷ್ಟು ಗಾತ್ರ ಇರುವ ಸ್ವಿಟ್ಜರ್ಲೆಂಡ್ ಕೇವಲ 41,285 ಚ.ಕಿ.ಮೀ.ಗಳ (ಕರ್ನಾಟಕದ 21 ಭಾಗದಷ್ಟು) ಭೂಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ಆದರೆ ಸ್ವಿಟ್ಜರ್ಲೆಂಡ್ ಜಗತ್ತಿನಲ್ಲಿಯೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದಾಗಿದ್ದು, ಶಾಂತಿ-ಸಮೃದ್ಧಿ ಐಶ್ವರ್ಯದಿಂದ ತುಂಬಿ ತುಳುಕಾಡುತ್ತಿದೆ. ಸ್ವಿಟ್ಜರ್ಲೆಂಡ್ 16ನೇ ಶತಮಾನದಿಂದಲೂ ಸಶಸ್ತ್ರ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದು ಕ್ರಿ.ಶ.1815 ರಿಂದ ಯಾವುದೇ ಯುದ್ಧದಲ್ಲೂ ಭಾಗಿಯಾಗಿಲ್ಲ. ವಿಶ್ವದ ಎರಡು ಮಹಾಯುದ್ಧಗಳಲ್ಲೂ ಅದು ಪಾಲ್ಗೊಳ್ಳಲಿಲ್ಲ. ಜನಸಂಖ್ಯೆ ಒಂದು ಕೋಟಿಗಿಂತ ಕಡಿಮೆ ಇದ್ದು ಒಟ್ಟು ನೆಲದ 4.34% ಮೇಲ್ಮೈ ನೀರಿನ ಸಂಪನ್ಮೂಲ ಹೊಂದಿದೆ. ಸ್ವಿಟ್ಜರ್ಲೆಂಡ್ ದೇಶದ ಒಟ್ಟು ಆರ್ಥಿಕತೆ 905.68 ಬಿಲಿಯನ್ (ಶತಕೋಟಿ) ಡಾಲರ್ ಇದ್ದು, ವಾರ್ಷಿಕ 102,865 ಡಾಲರ್ ತಲಾದಾಯವನ್ನು ಹೊಂದಿದೆ. ಆಶ್ಚರ್ಯವೆಂದರೆ ಇತರೆ ದೇಶಗಳಂತೆ ಸ್ವಿಟ್ಜರ್ಲೆಂಡ್ ಯಾವುದೇ ಖನಿಜ ಸಂಪತ್ತನ್ನು ಹೊಂದಿಲ್ಲ. ದೇಶದಲ್ಲಿ 62.6% ಕ್ರೈಸ್ತರು, 29.4% ಯಾವುದೇ ಧರ್ಮಕ್ಕೆ ಸೇರದವರು, 5.4% ಇಸ್ಲಾಮ್ ಮತ್ತು 0.6 ಹಿಂದೂಗಳು ಇದ್ದಾರೆ. ಸ್ವಿಟ್ಜರ್ಲೆಂಡ್ ದೇಶದ ಜನರು ಯಾವುದೇ ಧರ್ಮದ ಅಮಲನ್ನು ತಲೆಗೆ ಏರಿಸಿಕೊಂಡಿಲ್ಲ.
ಎಲ್ಲಾ ರೀತಿಯಲ್ಲೂ ಸುರಕ್ಷಿತವಾದ ಸ್ವಿಟ್ಜರ್ಲೆಂಡ್ ರೆಡ್‌ಕ್ರಾಸ್‌ನ ಜನ್ಮಸ್ಥಳವಾಗಿದೆ. ಜೊತೆಗೆ ಡಬ್ಲೂಟಿಒ, ಡಬ್ಲೂಎಚ್‌ಒ, ಐಎಲ್‌ಒ, ಫಿಫಾ ಮತ್ತು ಯುನೈಟೆಡ್ ನೇಷನ್ಸ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಧಾನ ಕಛೇರಿಗಳನ್ನು ಹೊಂದಿದ್ದು ಬಹುಮುಖ್ಯ ಅಂತರರಾಷ್ಟ್ರೀಯ ಸಭೆಗಳನ್ನು ಆಯೋಜಿಸುತ್ತದೆ. ಸ್ವಿಟ್ಜರ್ಲೆಂಡ್ ಫೆಡರಲ್ ಗಣರಾಜ್ಯವಾಗಿದ್ದು 26 ಜಿಲ್ಲೆಗಳನ್ನು (ಕ್ಯಾಂಟನ್‌ಗಳನ್ನು) ಒಳಗೊಂಡಿದೆ. ಸ್ವಿಟ್ಜರ್ಲೆಂಡ್ ಜಗತ್ತಿನ ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದಾಗಿದ್ದು, ಪ್ರತಿ ವಯಸ್ಕರಿಗೆ ಅತ್ಯಧಿಕ ಸಂಪತ್ತು ಮತ್ತು ಎಂಟನೇ ಅಧಿಕ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ತಲಾವಾರು ಆದಾಯ ಹೊಂದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿರುವುದಲ್ಲದೆ ಜೀವನದ ಗುಣಮಟ್ಟದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿದೆ. ದೇಶದ ಜನರ ಪ್ರಸ್ತುತ ಜೀವಿತಾವಧಿ 84.37 ವರ್ಷಗಳು.
ಸ್ವಿಟ್ಜರ್ಲೆಂಡ್ ನಾಲ್ಕು ಪ್ರಮುಖ ಭಾಷಾವಾರು ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಹೊಂದಿದೆ: ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು ರೋಮನ್; ಆದರೆ ಜನರು ಹೆಚ್ಚಾಗಿ ಸ್ವಿಸ್-ಜರ್ಮನ್ ಮಾತನಾಡುತ್ತಾರೆ. ಯಾವುದೇ ಅಧಿಕೃತ ಭಾಷೆ ಇಲ್ಲ. ಆಯಾ ಪ್ರದೇಶಕ್ಕೆ ತಕ್ಕಂತೆ ಜರ್ಮನ್, ಫ್ರೆಂಚ್, ಇಟಲಿ ಮತ್ತು ರೋಮನ್ಸ್ ಭಾಷೆಯಲ್ಲೆ ಶಿಕ್ಷಣ ನೀಡಲಾಗುತ್ತದೆ. ಮೂರು ಭಾಷೆಗಳ ಸೂತ್ರವನ್ನು ಬಳಸಲಾಗುತ್ತದೆ, ಇಲ್ಲ ಇಂಗ್ಲಿಷ್ ಮಿಶ್ರಭಾಷೆಯಲ್ಲಿ ಶಿಕ್ಷಣ ನೀಡುತ್ತಿದೆ. ರಾಷ್ಟ್ರೀಯ ಗುರುತು/ಸಂಕೇತ ಸಾಮಾನ್ಯ ಐತಿಹಾಸಿಕ ಹಿನ್ನೆಲೆಯಿಂದ ಬೇರೂರಿದ್ದು ಫೆಡರಲಿಸಂ-ನೇರ ಪ್ರಜಾಪ್ರಭುತ್ವ ಮತ್ತು ಆಲ್ಫೈನ್ ಸಂಕೇತಗಳಂತಹ ಮೌಲ್ಯಗಳನ್ನು ಹಂಚಿಕೊಂಡಿದೆ.
ಟಿಟ್ಲಿಸ್ ಮತ್ತು ಜಂಗ್‌ಫ್ರೌಜೋಚ್ ಹಿಮಚ್ಛಾದಿತ ಶಿಖರಗಳು
ಯುರೋಪ್‌ನ ಆಲ್ಫಾಸ್ ಪರ್ವತ ಶ್ರೇಣಿಗಳ ಎರಡು ಸುಂದರ ಹಿಮಚ್ಛಾದಿತ ಯಾತ್ರಾ ತಾಣಗಳಾದ ಟಿಟ್ಲಿಸ್ ಮತ್ತು ಜಂಗ್‌ಫ್ರೌಜೋಚ್ ಕೇವಲ 42 ಕಿ.ಮೀ.ಗಳ ಅಂತರದಲ್ಲಿವೆ.
ಟಿಟ್ಲಿಸ್ ಶಿಖರ: ಯುರಿ ಆಲ್ಫಾಸ್ ಪರ್ವತ ಶ್ರೇಣಿಗಳ ಒಬ್ವಾಲ್ಡೆನ್ ಮತ್ತು ಬರ್ನ್ ರಾಜ್ಯಗಳ ನಡುವಿನ ಗಡಿಯಲ್ಲಿ ಸಮುದ್ರಮಟ್ಟದಿಂದ 10,623 ಅಡಿಗಳ ಎತ್ತರದ ಟಿಟ್ಲಿಸ್ ಶಿಖರಕ್ಕೆ ಎಂಜೆಲ್ ಬರ್ಗ್‌ನ ಉತ್ತರ ಭಾಗದಿಂದ ಹೋಗಬೇಕಾಗುತ್ತದೆ. ಇಲ್ಲಿ ಜಗತ್ತಿನ ಮೊದಲ ತಿರುಗುತ್ತಾ ಸಾಗುವ ಪ್ರಸಿದ್ಧ ಕೇಬಲ್ ಕಾರ್‌ಅನ್ನು ಅಳವಡಿಸಲಾಯಿತು. ಇದು 3,268 ಅಡಿಗಳ ಎತ್ತರದ ಎಂಜೆಲ್‌ಬರ್ಗ್‌ನಿಂದ 9,934 ಅಡಿಗಳ ಕ್ಲೈನ್ ಟಿಟ್ಲಿಸ್ ಬೆಟ್ಟಕ್ಕೆ ತಲುಪಿಸುತ್ತದೆ. ಈ ಎತ್ತರಕ್ಕೆ ತಲುಪಬೇಕಾದರೆ ಮೂರು ಹಂತಗಳನ್ನು ದಾಟಬೇಕು. ಗೆರ್ಷ್ನಿಯಾಲ್ಪ್ (4,140 ಅಡಿಗಳು), ಟ್ರಬ್ಸೀ (5,892 ಅಡಿಗಳು) ಮತ್ತು ಸ್ಟ್ಯಾಂಡ್ (7,966 ಅಡಿಗಳು). 1916ರಲ್ಲಿ ನೇರವಾಗಿ ಒಂದೇ ಮಾರ್ಗ (ಕೇಬಲ್ ಕಾರನ್ನು) ಮಾಡಿ ಗೆರ್ಷ್ನಿಯಾಲ್ಪ್ ಅನ್ನು ಬೈಪಾಸ್ ಮಾಡಲಾಯಿತು.
ಕೇಬಲ್ ಕಾರ್‌ನ ಕೊನೆಯ ಭಾಗವು ಹಿಮನದಿಯ ಮೇಲೆ ಹಾದುಹೋಗುತ್ತದೆ. ಕ್ಲೈನ್ ಟಿಟ್ಲಿಸ್‌ನಲ್ಲಿ ಕೇಬಲ್ ಕಾರ್ ನಿಲ್ದಾಣದ ಪ್ರವೇಶದ್ವಾರದಿಂದ ಬೆಳ್ಳನೆಬಿಳುಪಾಗಿ ಹೊಳೆಯುವ ಹಿಮನದಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ದೊಡ್ಡದಾದ ಮೂರು ಅಂತಸ್ತುಗಳ ಕಟ್ಟಡವನ್ನು ಕಟ್ಟಿ ಅಂಗಡಿಗಳು ಮತ್ತು ರೆಸ್ಟೋರೆಂಟುಗಳನ್ನು ನಿರ್ಮಿಸಲಾಗಿದೆ. ಟಿಟ್ಲಿಸ್‌ನ ಒಂದು ಪಾರ್ಶ್ವದಲ್ಲಿ ಕ್ಲಿಫ್ ವಾಕ್ ಮಾಡಲು ತೆರೆದ ಅಟ್ಟವನ್ನು ಕಟ್ಟಲಾಗಿದೆ. ಇದು ಯುರೋಪ್‌ನಲ್ಲಿಯೇ ಅತಿ ಎತ್ತರದ ತೂಗುಸೇತುವೆಯಾಗಿದೆ. ಟಿಟ್ಲಿಸ್ ಜಂಗ್‌ಫ್ರೌಜೋಚ್ ಹಿಮಶಿಖರಕ್ಕಿಂತ ಕಡಿಮೆ ವೆಚ್ಚದಲ್ಲಿ ನೋಡಬಹುದಾದ ಮತ್ತು ಇಲ್ಲಿ ನಿಂತುಕೊಂಡು ಸುತ್ತಲೂ ನೋಡಿದರೆ ಆಲ್ಫಾಸ್ ಪರ್ವತ ಶ್ರೇಣಿಗಳ ಒಂದು ವಿಹಂಗಮ ನೋಟವೇ ದೊರಕುತ್ತದೆ.
ಟಿಟ್ಲಿಸ್‌ನ ಎತ್ತರದ ಶಿಖರವು (ಗ್ರಾಸ್ ಟಿಟ್ಲಿಸ್ ಎಂದೂ ಕರೆಯಲಾಗುತ್ತದೆ) ಮತ್ತು ಕ್ಲೈನ್ ಟಿಟ್ಲಿಸ್ ಇವೆರಡೂ ಉತ್ತರದಲ್ಲಿ ಎಂಜೆಲ್‌ಬರ್ಗ್ ಮತ್ತು ದಕ್ಷಿಣದಲ್ಲಿ ಗ್ಯಾಡ್‌ಮೆನ್ ಪುರಸಭೆಗಳ ನಡುವಿನ ಭಾಗವಾಗಿದೆ. ಟಿಟ್ಲಿಸ್ ಶೃಂಗಶ್ರೇಣಿ ಕೂಡ ನಿಡ್ವಾಲ್ಡೆನ್‌ನಲ್ಲಿ ಭಾಗಶಃ ನೆಲೆಗೊಂಡಿದೆ, ಅಲ್ಲಿ ಆ ರಾಜ್ಯದ ಅತ್ಯುನ್ನತ ಬಿಂದು ಕಾಣಿಸುತ್ತದೆ. ಸ್ವಿಟ್ಜರ್ಲೆಂಡ್‌ನ ಭೌಗೋಳಿಕ ಕೇಂದ್ರವು ಪರ್ವತದ ಪಶ್ಚಿಮಕ್ಕೆ 15 ಕಿ.ಮೀ.ಗಳ ದೂರದಲ್ಲಿದೆ. ಶೃಂಗಶ್ರೇಣಿಯ ಉತ್ತರದ ಭಾಗವು ಟಿಟ್ಲಿಸ್ ಗ್ಲೇಸಿಯರ್‌ನಿಂದ ಆವೃತಗೊಂಡಿದೆ. ಜಾಗತಿಕ ತಾಪಮಾನದ ಏರಿಕೆಯಿಂದ ಹಿಮನದಿ ಈಗಾಗಲೇ ಸಾಕಷ್ಟು ಹಿಂದಕ್ಕೆ ಸರಿದುಹೋಗಿದೆ. ಈ ಸುಂದರ ಹಿಮನದಿ ಕೇವಲ 20 ವರ್ಷಗಳಲ್ಲಿ ಕಣ್ಮರೆಯಾಗಿ ಕೊರಕಲು ಬೋಳುಬೆಟ್ಟಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ!
ಇಲ್ಲಿನ ತಪ್ಪಲುಗಳಲ್ಲಿ ಕೃಷಿ ಮಾಡುತ್ತಿದ್ದ ಸ್ಥಳೀಯ ರೈತ ಟುಟಿಲೋಸ್ ಹೆಸರಿನಿಂದ ಟಿಟ್ಲಿಸ್‌ಬರ್ಗ್ ಬಂದಿತು ಎನ್ನಲಾಗಿದೆ. 1739ರಲ್ಲಿ ಇಗ್ನಾಜ್ ಹೆಸ್ ಮತ್ತು ಜೆ. ಇ. ವಾಸರ್ ಮತ್ತು ಇನ್ನಿಬ್ಬರು ಪುರುಷರು ಟಿಟ್ಲಿಸ್‌ನ ಮೊದಲ ಪರ್ವತ ಆರೋಹಣ ಮಾಡಿದರು ಎಂಬ ಪುರಾವೆ ಎಂಗಲ್‌ಬರ್ಗರ್ ದಾಖಲಾತಿಯಲ್ಲಿ ದೊರಕುತ್ತದೆ. ನಂತರ 1904 ಜನವರಿ 21ರಂದು ಟಟ್ಲಿಸ್‌ನ ಮೊದಲ ಆರೋಹಣವನ್ನು ಜೋಸೆಫ್ ಕುಸ್ಟರ್ ಮತ್ತು ವಿಲ್ಲಿ ಅಮ್ರೇನ್ ಮಾಡಿದರು.
ಜಂಗ್‌ಫ್ರೌಜೋಚ್ ಹಿಮಚ್ಛಾದಿತ ಶಿಖರ
ಜಂಗ್‌ಫ್ರೌಜೋಚ್ ಎಂದರೆ ಮೊದಲ ತಡಿ (ಮೇಡನ್ ಸ್ಯಾಡಲ್) ಎನ್ನುವುದು. ಇದು ಬರ್ನೀಸ್ ಆಲ್ಫಾಸ್ ಜಂಗ್‌ಫ್ರೌ ಮತ್ತು ಮೊಂಚ್ ಎರಡೂ ಶಿಖರಗಳು ಕೂಡುವ ಸ್ಥಳವಾಗಿದ್ದು ಸಮುದ್ರಮಟ್ಟದಿಂದ 11,362 ಅಡಿಗಳ ಎತ್ತರದಲ್ಲಿದೆ. ಎದುರಿಗೆ ಸ್ಪಿನಿಕ್ಸ್‌ನಂತಹ (ಸಿಂಹನಾರಿ) ಬೆಟ್ಟ ನೇರವಾಗಿ ಕಾಣಿಸುತ್ತದೆ. ಜಂಗ್‌ಫ್ರೌಜೋಚ್ ಒಂದು ಹಿಮನದಿಯ ತಡಿಯಾಗಿದ್ದು ಅಲೆಟ್ಚ್ ಹಿಮನದಿಯ ಮೇಲಿನ ಜಂಗ್‌ಫ್ರೌ-ಅಲೆಟ್ಚ್ ಪ್ರದೇಶದ ಭಾಗವಾಗಿದೆ. ಇದು ಇಂಟರ್‌ಲೇಕನ್ ಮತ್ತು ಫಿಯೆಷ್ ನಡುವೆ ಅರ್ಧದಾರಿಯಲ್ಲಿ ಬರ್ನ್ ಮತ್ತು ವಲೈಸ್ ರಾಜ್ಯಗಳ ನಡುವಿನ ಗಡಿಯಲ್ಲಿದೆ. 1912 ರಿಂದಲೇ ಜಂಗ್‌ಫ್ರೌಜೋಚ್ ಪ್ರವೇಶಕ್ಕೆ ಮಾರ್ಗವನ್ನು ಕಲ್ಪಿಸಲಾಗಿದೆ. ಇಂಟರ್‌ಲೇಕನ್ ಮತ್ತು ಕ್ಲೈನ್ ಸ್ಕೈಡೆಗ್‌ನಿಂದ ಈಗರ್ ಮತ್ತು ಮೊಂಚ್‌ಗೆ ಸುರಂಗದ ಮೂಲಕ ಭಾಗಶಃ ಭೂಗತ ರೈಲು ಚಲಿಸುತ್ತದೆ. ಇದು ಯುರೋಪ್‌ನಲ್ಲಿ 11,332 ಅಡಿಗಳ ಅತಿ ಎತ್ತರದಲ್ಲಿ ಚಲಿಸುವ ರೈಲು ಮಾರ್ಗವಾಗಿದೆ.
ಇದು ಸ್ಯಾಡಲ್‌ನ ಪೂರ್ವಕ್ಕೆ, ಸ್ಪಿನಿಕ್ಸ್ ನಿಲ್ದಾಣದ ಕೆಳಗಿದ್ದು ಯುರೋಪ್‌ನ ಮೇಲ್ಭಾಗದ ಕೃತಕ ಕಟ್ಟಡಕ್ಕೆ ಸಂಪರ್ಕವನ್ನು ಹೊಂದಿದೆ. ಇಲ್ಲಿ ಹಲವಾರು ವಿಹಂಗಮ ರೆಸ್ಟೋರೆಂಟುಗಳು, ಅಂಗಡಿಗಳು, ಪ್ರದರ್ಶನಗಳು ಮತ್ತು ಅಂಚೆ ಕಚೇರಿಯೂ ಇದೆ. ಬೆಟ್ಟದ ಸುತ್ತಲೂ ಸುರಂಗ ರೈಲು ಮಾರ್ಗವಿದೆ. ಹಿಮನದಿಯ ಮೇಲೆ ಸುರಕ್ಷಿತವಾಗಿ ಯಾತ್ರೆಯ ದಾರಿಯನ್ನು ಅನುಸರಿಸಬಹುದು ಮತ್ತು ನಿರ್ದಿಷ್ಟವಾಗಿ ಮಂಚ್ಸ್ಜೋಚ್ ಅಟ್ಟಕ್ಕೆ ದಾರಿ ಸಾಗುತ್ತದೆ. ವಿಶ್ವದ ಅತಿ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದಾದ ಸ್ಪಿನಿಕ್ಸ್ ವೀಕ್ಷಣಾಲಯವು 11,719 ಅಡಿಗಳ ಎತ್ತರದಲ್ಲಿ ವೀಕ್ಷಣಾ ವೇದಿಕೆಯನ್ನು ಒದಗಿಸುತ್ತದೆ. ಇದು ಸ್ವಿಟ್ಜರ್ಲೆಂಡ್‌ನ ಎರಡನೇ ಅತಿಎತ್ತರದ ಶಿಖರವಾಗಿದೆ. ಜಂಗ್‌ಫ್ರೌಜೋಚ್‌ನಿಂದ ಎಲಿವೇಟರ್ ಮೂಲಕವೂ ಇದನ್ನ ತಲುಪಬಹುದು. ವೀಕ್ಷಣಾಲಯವು ಜಾಗತಿಕ ವಾತಾವರಣದ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ಜಂಗ್‌ಫ್ರೌಜೋಚ್‌ನಲ್ಲಿ ರೇಡಿಯೊ ರಿಲೇ ನಿಲ್ದಾಣವಿದ್ದು ಇದು ಯುರೋಪ್‌ನಲ್ಲಿ ಅತಿ ಎತ್ತರದ ನಿಲ್ದಾಣವಾಗಿದೆ.
ಒಂದೆರಡು ನಿಮಿಷ ತಡಬಡಿಸಿಹೋದೆ
ನಾನು ಕೇಬಲ್ ಕಾರ್‌ನಿಂದ ರೈಲು ಮಾರ್ಗಕ್ಕೆ ವರ್ಗವಾಗುವ ವೇಳೆ ಒಂದು ಸಮಸ್ಯೆ ಎದುರಾಗಿ ಒಂದೆರಡು ನಿಮಿಷ ತಡಬಡಿಸಿಹೋಗಿದ್ದೆ. ನಮ್ಮ ಗೈಡ್ ಮೊದಲಿಗೆ ಎಲ್ಲರಿಗೂ ಎರಡೆರಡು ಟಿಕೆಟ್‌ಗಳನ್ನು ಕೊಟ್ಟು ಇವುಗಳನ್ನು ಭದ್ರವಾಗಿ ಇಟ್ಟುಕೊಳ್ಳಿ. ಟಿಕೆಟ್‌ಗಳನ್ನು ಸ್ಕ್ಯಾನರ್ ಮುಂದೆ ಇಟ್ಟರೆ ಮಾತ್ರ (ಮೆಟ್ರೋ ನಿಲ್ದಾಣಗಳ ರೀತಿಯಲ್ಲಿ) ನಿಮಗೆ ಒಳಗೆ ಹೋಗಲು ದಾರಿ ತೆರೆಯುತ್ತದೆ, ಹಿಂದಿರುಗುವಾಗಲೂ ತೋರಿಸಬೇಕು, ಎಂದು ಎಚ್ಚರಿಕೆ ಕೊಟ್ಟಿದ್ದನು. ನಮ್ಮಿಬ್ಬರ ನಾಲ್ಕು ಟಿಕೆಟ್‌ಗಳನ್ನು ನಾನು ತೆಗೆದುಕೊಂಡು ಒಂದನ್ನು ಸುಶೀಲಳಿಗೆ ಕೊಟ್ಟು (ಕೇಬಲ್ ಕಾರ್‌ಗೆ) ಮೂರನ್ನು ನನ್ನ ಪಾಕೆಟ್‌ನಲ್ಲಿ ಇಟ್ಟುಕೊಂಡೆ. ಕೇಬಲ್ ಕಾರ್ ಇಳಿದು ಸುರಂಗದ ರೈಲಿಗೆ ಹೋಗುವಾಗ ಸುಶಿಗೆ ಒಂದು ರೈಲು ಟೆಕೆಟ್ ಕೊಟ್ಟು ನನ್ನಲ್ಲಿ ಒಂದನ್ನು ಇಟ್ಟುಕೊಂಡೆ. ಎಲ್ಲರೂ ಸ್ಕ್ಯಾನರ್‌ಗೆ ಟಿಕೆಟ್ ತೋರಿಸಿ ಒಳಗೆ ಹೋದರು, ಸ್ಮಿತಾ ರೆಡ್ಡಿ ಸುಶೀಲ ಕೂಡ ಒಳಗೆಹೋದರು. ನನ್ನ ಟಿಕೆಟ್‌ಅನ್ನು ಸ್ಕ್ಯಾನರ್ ಮುಂದೆ ಇಟ್ಟಾಗ ಅದು ನಿರಾಕರಿಸಿತು. ಹಿಂದೆಮುಂದೆ ತಿರುಗಿಸಿ ಇಟ್ಟೆ, ಉಹೂಃ ಅದು ಒಪ್ಪಿಕೊಳ್ಳಲಿಲ್ಲ. ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ. ಮತ್ತೆಮತ್ತೆ ಜೇಬುಗಳನ್ನೆಲ್ಲ ಹುಡುಕಾಡಿ ಎಲ್ಲೋ ಸೇರಿಕೊಂಡಿದ್ದ ಟಿಕೆಟ್‌ಗಳನ್ನು ಸರಿಯಾಗಿ ನೋಡಿ ಇಟ್ಟುಕೊಂಡೆ.
ಶಿಖರದ ಕೊನೆ ಹಂತ ತಲುಪಿದ ಮೇಲೆ ನಮ್ಮ ಗೈಡ್ ನೋಡುವ ನಾಲ್ಕು ಸ್ಥಳಗಳ ಬಗ್ಗೆ ವಿವರಿಸಿ, ಕೊನೆಗೆ ಎಲ್ಲರೂ ಇಲ್ಲಿಗೆ ಬರಬೇಕೆಂದು ಒಂದು ರೆಸ್ಟೋರೆಂಟ್ ಪ್ರಾಂಗಣವನ್ನು ತೋರಿಸಿ ಸಮಯ ನಿಗದಿಪಡಿಸಿದ. ಎಲ್ಲರೂ ಬಿಡಿಬಿಡಿಯಾಗಿ ಹೊರಟುಹೋದರು. ನಾವಿಬ್ಬರು ಮೊದಲಿಗೆ ಐಸ್ ಸುರಂಗದಲ್ಲಿ ಒಂದು ಸುತ್ತಾಕಿಕೊಂಡು ಬರೋಣ ಎಂದು ಹೊರಟೆವು. ಸಾಕಷ್ಟು ಬೆಚ್ಚನೆ ಉಡುಪುಗಳನ್ನು ಹಾಕಿಕೊಂಡಿದ್ದ ನಾವು ಐಸ್ ಸುರಂಗ ಹೊಕ್ಕಿದ್ದೆ ದೇಹವನ್ನು ದಿಢೀರನೆ ತಣ್ಣನೆ ಕೋಲ್ಡ್ ಸ್ಟೋರ್‌ಗೆ ನೂಕಿದಂತಾಯಿತು. ಸುರಂಗದಲ್ಲಿ ಅಲ್ಲಲ್ಲಿ ದೊಡ್ಡದಾದ ಕಿಟಕಿಗಳಿದ್ದು ಹೊರಗಿನ ಹಿಮಪಾತವನ್ನು ನೋಡಬಹುದಾಗಿತ್ತು. ಅದನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಸುಶೀಲ ಗಂಟಲಲ್ಲಿ ಉಸಿರು ಸಿಕ್ಕಿಕೊಂಡಂತಾಗಿ ಕಪ್ಪೆಯನ್ನು ನುಂಗಿದ ಬಾತುಕೋಳಿಯಂತೆ ಸೆಟೆದುಕೊಂಡುಬಿಟ್ಟಳು. ಸರಿಯಾಗಿ ಮಾತನಾಡಲಾಗದೆ ಪ್ರಜ್ಞೆ ಕಳೆದುಕೊಂಡವಳಂತೆ ತಟ್ಟಾಡುತ್ತ ನಡೆಯತೊಡಗಿದಳು. ಗಾಬರಿಯಾದ ನಾನು ಆಕೆಯನ್ನು ಕರೆದುಕೊಂಡು ರೆಸ್ಟೋರೆಂಟ್ ಪ್ರಾಂಗಣಕ್ಕೆ ಬಂದುಬಿಟ್ಟೆ. ಅಲ್ಲಿ ಏಸಿ ಇದ್ದು ಸುಮಾರು ಹೊತ್ತು ಸುಧಾರಿಕೊಂಡು ಕಾಫಿ ಕುಡಿದೆವು. ನಮ್ಮ ಜೊತೆಗಿದ್ದವರು ಮೂರನೇ ಫ್ಲೋರ್ ಮೇಲೆಹೋದರೆ ಐಸ್ ಶಿಖರಗಳನ್ನು ನೋಡಬಹುದು ಎಂದರು. ಇಷ್ಟು ದೂರ ಬಂದಮೇಲೆ ಸುಮ್ಮನೆ ಹಿಂದಿರುಗುವುದು ಸರಿಯಲ್ಲ ಎಂದುಕೊಂಡು ಹೊರಟೆವು.
(ಮುಂದುವರೆಯುವುದು…)
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.