ನಮ್ಮ ಜೊತೆಗೆ ಬಂದಿದ್ದ ಮಹಿಳೆಯೊಬ್ಬರು ಹೋಟಲ್‌ನಲ್ಲಿ ಊಟ ಮಾಡುತ್ತಿದ್ದಾಗ ನಮ್ಮ ದೇಶದವರೇ ಆದ ಹೋಟಲ್ ಮಾಲಿಕನಿಗೆ `ಸಿಂಗಾಪುರದಲ್ಲಿ ಕ್ರೈಮ್ ರೇಟ್ ಏನಿದೆ?’ ಎಂದು ಕೇಳಿಬಿಟ್ಟರು. ಆತ, `ಮೇಡಮ್ ಸಿಂಗಾಪುರದಲ್ಲಿ ಕ್ರೈಮ್ ರೇಟ್ ಝೀರೋ. ಅದೆಲ್ಲ ಭಾರತದಲ್ಲಿ’ ಎಂದು ಕೋಪ ಮಾಡಿಕೊಂಡು ಹೇಳಿದರು. ಈಗ ಬೆಂಗಳೂರಿನ ರಸ್ತೆಗಳಲ್ಲಿ ಜನರಾಗಲಿ, ವಾಹನಗಳಾಗಲಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಆದರೆ ದೇಶದ ಜನರೆಲ್ಲ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಬಹುಮಿಲಿಯ ಕಂಪನಿಗಳಿಗೂ ಬೆಂಗಳೂರೇ ಬೇಕು.
ಡಾ. ವೆಂಕಟಸ್ವಾಮಿ ಪ್ರವಾಸ ಕಥನದಲ್ಲಿ ಸಿಂಗಪೂರ್‌ ಕುರಿತ ಬರಹ ಇಲ್ಲಿದೆ

ಭೂಲೋಕದ ಮೇಲೆ ಕಾಸಿವೆ ಕಾಳಿನಷ್ಟು ಭೂವಿಸ್ತೀರ್ಣ ಹೊಂದಿರುವ (ಕೇವಲ 725.10 ಚ.ಕಿ.ಮೀ.) ದ್ವೀಪ ಸಿಂಗಾಪುರ. ಭೂಪ್ರದೇಶದಲ್ಲಿ ಬೆಂಗಳೂರಿಗಿಂತ ಸಣ್ಣದು. ನಮ್ಮ ದೇಶದ ಒಟ್ಟು ಭೂವಿಸ್ತೀರ್ಣ 3.28 ದಶಲಕ್ಷ ಚ.ಕಿ.ಮೀ. ಅಂದರೆ ಸಿಂಗಾಪುರವನ್ನು ಭಾರತಕ್ಕೆ ಹೋಲಿಸಲು ಯಾವ ರೀತಿಯಲ್ಲೂ ಸಾಧ್ಯವೇ ಇಲ್ಲ. ಆದರೆ ಸಿಂಗಾಪುರ ನೋಡಿ ಬಂದ ನನಗೆ ತೀರಾ ನಾಚಿಕೆ ಮತ್ತು ಅಸೂಯೆ ತುಂಬಿಕೊಂಡಿತು. ಸಿಂಗಾಪುರಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅದು 23%ರಷ್ಟು ದ್ವೀಪದ ದಂಡೆಯ ಸುತ್ತಲಿನ ಸಮುದ್ರದ ಮೇಲೆ ಮಣ್ಣು/ಕಲ್ಲು ಸುರಿದು ಗಗನಚುಂಬಿ ಕಟ್ಟಡಗಳನ್ನು ಕಟ್ಟಿ ನಿಲ್ಲಿಸಿದೆ. 1891ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸಿಂಗಾಪುರ ದ್ವೀಪದಲ್ಲಿ ವಾಣಿಜ್ಯ ಪೋಸ್ಟ್ ಸ್ಥಾಪಿಸಿ ಲೆಫ್ಟಿನೆಂಟ್ ಗವರ್ನರ್ ಸ್ಟ್ಯಾಮ್ಫರ್ಡ್‌ ರಾಫಲ್ಸ್‌ರನ್ನು ಮುಖ್ಯಸ್ಥರನ್ನಾಗಿ ನೇಮಿಸಿತು. ನಂತರ 1924ರಲ್ಲಿ ಬ್ರಿಟಿಷ್ ಕಾಲೋನಿ ಸ್ಥಾಪನೆಯಾಯಿತು. ಎರಡನೇ ವಿಶ್ವ ಮಹಾಯುದ್ಧದ ಕಾಲದಲ್ಲಿ ಈ ದ್ವೀಪ ಜಪಾನ್ ವಶಕ್ಕೆ ಬಂದರೂ ಮತ್ತೆ ಬ್ರಿಟಿಷರ ಕೈಸೇರಿತು. ಕೊನೆಗೆ ಬ್ರಿಟಿಷರಿಂದ ಸಿಂಗಾಪುರ ಮತ್ತು ಮಲೇಷ್ಯಾ ಸ್ವಾತಂತ್ರ್ಯ ಪಡೆದುಕೊಂಡಿದ್ದು 1963ರಲ್ಲಿ. 1965ರಲ್ಲಿ ಸಿಂಗಾಪುರ ಮತ್ತೆ ಮಲೇಷ್ಯಾದಿಂದ ಪ್ರತ್ಯೇಕಗೊಂಡಿತು.

ಎರಡನೇ ಶತಮಾನದ ಟಾಲೆಮಿ ತನ್ನ ದಾಖಲೆಯಲ್ಲಿ ಮಲಯ ಪರ್ಯಾಯ ದ್ವೀಪದ ದಕ್ಷಿಣದ ತುದಿಯಲ್ಲಿ ಸಬಾನಾ ಎಂದು ಕರೆಯಲ್ಪಡುವ ಕರಾವಳಿ ಬಂದರನ್ನು ಗುರುತಿಸಿದ್ದಾನೆ. ಇತಿಹಾಸಕಾರರು 3ನೇ ಶತಮಾನದ ಚೀನೀ ಪ್ರವಾಸಿಗರ ದಾಖಲೆಯನ್ನು ಪುವೊ ಚುಂಗ್ ಎಂದು ಕರೆಯಲ್ಪಡುವ ಅದೇ ಸ್ಥಳದಲ್ಲಿ ಒಂದು ದ್ವೀಪವನ್ನು ವಿವರಿಸಿದ್ದಾರೆ. ಇದು ಸಿಂಗಾಪುರದ ಆರಂಭಿಕ ಮಲಯ ಹೆಸರು ಪುಲೌ ಉಜೊಂಗ್‌ನ ಪ್ರತಿಲೇಖನ ಮತ್ತು ಅದರ ಅಸ್ತಿತ್ವದ ಮೊದಲ ದಾಖಲೆಯಾಗಿದೆ. 13ನೇ ಮತ್ತು 14ನೇ ಶತಮಾನದಲ್ಲಿ ಇದನ್ನು ಟೆಮಾಸೆಕ್ ಎಂದು ಕರೆಯಲಾಗುತ್ತಿತ್ತು, ಬಹುಶಃ 14ನೇ ಶತಮಾನದ ಅಂತ್ಯದ ವೇಳೆಗೆ ಅದರ ಹೆಸರನ್ನು ಬದಲಾಯಿಸಿರಬಹುದು! ಈ ಅವಧಿಯಲ್ಲಿ ಸಿಯಾಮೀಸ್ ಮತ್ತು ಜಾವಾನೀಸ್ ಮೂಲಕ ದ್ವೀಪದ ಹಕ್ಕನ್ನು ಸಾಧಿಸಲಾಯಿತು. ಸಿಂಗಾಪುರದ ಕೊನೆಯ ದೊರೆ ಪರಮೇಶ್ವರ ಅವರು ಜಪಾನೀಸ್ ಅಥವಾ ಸಯಾಮಿಗಳ ದಾಳಿಯ ನಂತರ ಮಲಕ್ಕಾಗೆ ಪಲಾಯನವಾದರು ಮತ್ತು ಮಲಕ್ಕಾ ರಾಜ್ಯವನ್ನು ಸ್ಥಾಪಿಸಿದರು. ಇದನ್ನು 15ನೇ ಶತಮಾನದಲ್ಲಿ ಮಲಕ್ಕಾ ಸುಲ್ತಾನೇಟ್ ಮತ್ತು 16ನೇ ಶತಮಾನದಿಂದ ಜೋಹರ್ ಸುಲ್ತಾನರು 19ನೇ ಶತಮಾನದಲ್ಲಿ ಬ್ರಿಟಿಷರು ವಸಾಹತುವನ್ನು ಸ್ಥಾಪಿಸುವವರೆಗೂ ನಿಯಂತ್ರಿಸಿದ್ದರು.

ಸಿಂಹದ ಶಿಲ್ಪ ಇರುವ ಸ್ಥಳದ ನೋಟ…

ಕ್ರಿ.ಶ.1891ರಲ್ಲಿ ಸಿಂಗಾಪುರವನ್ನು ಸ್ಥಾಪನೆ ಮಾಡಿದ್ದು ರಾಫೆಲ್ಸ್ ಎಂದರೂ ಕೆಲವರು ವಿಲಿಯಂ ಫಾರ್ಕರ್ ಮತ್ತು ಜಾನ್ ಕ್ರಾಫರ್ಡ್‌ ಶ್ರಮವೂ ಇದೆ ಎನ್ನುತ್ತಾರೆ. ಆದರೆ ಆಧುನಿಕ ಸಿಂಗಾಪುರ ನ್ಯೂಯಾರ್ಕ್, ಲಂಡನ್ ಮತ್ತು ಸ್ವಿಟ್ಜರ್ಲೆಂಡ್ ಮಾದರಿ ನಗರಗಳ ಮಟ್ಟದಲ್ಲಿ ಜಾಗತಿಕವಾಗಿ ಬೆಳೆಯಲು ಕಾರಣವಾದವರು ಸ್ಥಳೀಯ ನಾಯಕ ಲೀ ಕುವಾನ್ ಯೂ ಅವರು. ಮೊದಲಿಗೆ ಈ ದ್ವೀಪದಲ್ಲಿ ಯಾವುದೇ ಮೂಲ ನೈಸರ್ಗಿಕ ಸಂಪನ್ಮೂಲಗಳೂ ಇರಲಿಲ್ಲ, ಈಗಲೂ ಇಲ್ಲ. ಆದರೆ ಸಿಂಗಾಪುರವನ್ನು ಕಳೆದ ಮೂರು ದಶಕಗಳಲ್ಲಿ ಜಗತ್ತಿನ ಪ್ರಮುಖ ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಲಾಯಿತು. ಲೀ ಅವರು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮತ್ತು ಸರ್ವಾಧಿಕಾರಿ ಎಂಬ ಅಪವಾದ ಹೊತ್ತರೂ ಅಧಿಕಾರ ಮತ್ತು ಸ್ಥಿರತೆಯ ನಿರ್ವಹಣೆಯ ಮೂಲಕ ಭ್ರಷ್ಟತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಿ ಮುಕ್ತ ಆರ್ಥಿಕ ಹೂಡಿಕೆಗೆ ನಾಂದಿ ಹಾಕಿದರು. ಇದರಿಂದ ವಿದೇಶಿ ಹೂಡಿಕೆ ಸಿಂಗಾಪುರದ ಕಡೆಗೆ ನೀರಿನಂತೆ ಹರಿಯತೊಡಗಿತು.

ಲೀ ಕುವಾನ್ ಯೂ ಅವರು `ಸಿಂಗಾಪುರ ಡಾಲರ್’ ಹೊರಗೆ ಹೋಗದಂತೆ ಅಂತರರಾಷ್ಟ್ರೀಕರಣಕ್ಕೆ ತಡೆ ಒಡ್ಡುವ ಮೂಲಕ ವಿದೇಶಿ ಬ್ಯಾಂಕುಗಳ ಕಾರ್ಯಾಚರಣೆಯನ್ನು ಸೀಮಿತಗೊಳಿಸುವ ಮೂಲಕ ದೇಶೀಯ ಹಣಕಾಸಿನ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದರು. ಇದರಿಂದ ಅಂತರರಾಷ್ಟ್ರೀಯಯ ಕಂಪನಿಗಳು ಸಿಂಗಾಪುರ ದ್ವೀಪದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುವ ಆವಕಾಶವನ್ನು ಕಂಡುಕೊಂಡವು. ಉತ್ತಮ ಆರ್ಥಿಕ ನೀತಿ, ಭ್ರಷ್ಟಾಚಾರಮುಕ್ತ ಮತ್ತು ತಾಂತ್ರಿಕ ಪ್ರಗತಿಯೊಂದಿಗೆ ಅನೇಕ ಬಹುರಾಷ್ಟ್ರೀಯಯ ಸಂಸ್ಥೆಗಳು, ಬ್ಯಾಂಕುಗಳು ಸಿಂಗಾಪುರವನ್ನು ಪ್ರಾದೇಶಿಕ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡವು. ಅಂದರೆ ಸಿಂಗಾಪುರ ಮುಕ್ತ ವ್ಯಾಪಾರಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿತು. ಇದರಿಂದ ಜಗತ್ತಿನ ಬ್ಯಾಂಕುಗಳು ಮತ್ತು ಬಹುರಾಷ್ಟ್ರೀಯಯ ಸಂಸ್ಥೆಗಳು ಸಿಂಗಾಪುರಕ್ಕೆ ಬಂದು ನೆಲೆಸಿದವು. ಪುಟ್ಟ ದ್ವೀಪದಲ್ಲಿ ಸ್ಥಳವಿಲ್ಲದ ಕಾರಣ ಗಗನಚುಂಬಿ ಕಟ್ಟಡಗಳು ಆಕಾಶದ ಕಡೆಗೆ ಮುಖಮಾಡಿ ಎದ್ದುನಿಂತವು.

ಪುಟ್ಟ ದ್ವೀಪದಲ್ಲಿ ನಯನಾಜೂಕಿನ ರಸ್ತೆಗಳನ್ನು ಮಾಡಿ ಇರುವ ಸ್ಥಳದಲ್ಲೇ ಅನೇಕ ರೀತಿಯ ಅದ್ಭುತ ಆಕರ್ಷಣೆಗಳನ್ನು ಸೃಷ್ಟಿಸಲಾಯಿತು. ಸಿಂಗಾಪುರ ಯೂನಿವರ್ಸಲ್ ಸ್ಟುಡಿಯೊ, ಗಾರ್ಡನ್ಸ್ ಬೈ ದಿ ಬೇ, ಫ್ಲವರ್ ಡೋಮ್ ಆ್ಯಂಡ್ ಕ್ಲೌಡ್ ಫಾರೆಸ್ಟ್ (ಗ್ಲಾಸ್ ಡೋಮ್ ಒಳಗೆ ಉದ್ಯಾನ), ಮರೀನಾ ಬೇ ಸ್ಯಾಂಡ್ಸ್ ಸ್ಕೈ ಪಾರ್ಕ್, ಸಂಟೋಸ್ ದ್ವೀಪ-ಸುತ್ತಲೂ ಸರೋವರ (ಮಾನವ ನಿರ್ಮಿತ), ಕೇಬಲ್ ಕಾರ್, ಸಾಗರ ಅಕ್ವೇರಿಯಂ, ಕಡಲ ತಡಿಯಲ್ಲಿ ನಿರ್ಮಿಸಿರುವ ಅದ್ಭುತ ಲೇಝರ್ ಪ್ರದರ್ಶನ ಹೀಗೆ 50 ಕ್ಕಿಂತ ಹೆಚ್ಚು ವಸ್ತುಸಂಗ್ರಹಾಲಯಗಳು ಮತ್ತು ಗ್ಯಾಲರಿಗಳನ್ನು ನಿರ್ಮಿಸಲಾಯಿತು. ಇನ್ನು ಥಳಥಳನೆ ಹೊಳೆಯುವ ಗಗನಚುಂಬಿ ಕಟ್ಟಡಗಳು. ರಸ್ತೆಗಳನ್ನು ನೋಡಿದರೆ ಸಾಕು ಅಸೂಯೆ ಮೂಡುತ್ತದೆ. ಯಾರೂ ರಸ್ತೆಗಳಲ್ಲಿ ಓಡಾಡದಂತೆ, ಉಗುಳದಂತೆ, ಸಣ್ಣ ಪೇಪರ್ ಬಿದ್ದರೂ ತಕ್ಷಣವೆ ತೆಗೆಯುವ ವ್ಯವಸ್ಥೆಯನ್ನು ಮಾಡಲಾಯಿತು. ರಸ್ತೆಗಳಲ್ಲಿ ಕಾಗದ ಎಸೆದರೂ ದಂಡ ವಿಧಿಸಲಾಗುತ್ತದೆ. ನಿರುದ್ಯೋಗದ ಸಂಖ್ಯೆ ಸೊನ್ನೆ. ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮತ್ತು ಹತ್ಯೆ ಮಾಡಿದವರಿಗೆ ಮರಣ ದಂಡನೆ ಕಾನೂನು ತರಲಾಯಿತು.

ನಮ್ಮ ಬೆಂಗಳೂರನ್ನು ಸಿಂಗಾಪುರ ಮಾಡಬೇಕೆಂದು ಹೇಳಿದ ಎಸ್. ಎಂ. ಕೃಷ್ಣ ಅವರ ಮಾತು ಜ್ಞಾಪಕಕ್ಕೆ ಬರುತ್ತದೆ. ನಮ್ಮ ರಾಜಕಾರಣಿಗಳು, ಬಹುಮಿಲಿಯ ಕಂಪನಿಗಳ ಮಾಲೀಕರು, ದೊಡ್ಡದೊಡ್ಡ ಅಧಿಕಾರಿಗಳು, ಹಣವಂತರು ಮತ್ತು ಸಾರ್ವಜನಿಕರು ಸಿಂಗಾಪುರಕ್ಕೆ ಪಕ್ಕದ ಹಳ್ಳಿಗೆ ಹೋದಂತೆ ಆಗಾಗ ಹೋಗಿಬರುತ್ತಾರೆ. ಅವರೆಲ್ಲರಿಗೂ ಏನು ಅನ್ನಿಸುತ್ತದೊ ಏನೊ? ನನಗೆ ಮಾತ್ರ ಅಸೂಯೆ ಮತ್ತು ತೀರಾ ನಾಚಿಕೆ ಆಗುತ್ತದೆ. ನಮ್ಮ ಜೊತೆಗೆ ಬಂದಿದ್ದ ಮಹಿಳೆಯೊಬ್ಬರು ಹೋಟಲ್‌ನಲ್ಲಿ ಊಟ ಮಾಡುತ್ತಿದ್ದಾಗ ನಮ್ಮ ದೇಶದವರೇ ಆದ ಹೋಟಲ್ ಮಾಲಿಕನಿಗೆ `ಸಿಂಗಾಪುರದಲ್ಲಿ ಕ್ರೈಮ್ ರೇಟ್ ಏನಿದೆ?’ ಎಂದು ಕೇಳಿಬಿಟ್ಟರು. ಆತ, `ಮೇಡಮ್ ಸಿಂಗಾಪುರದಲ್ಲಿ ಕ್ರೈಮ್ ರೇಟ್ ಝೀರೋ. ಅದೆಲ್ಲ ಭಾರತದಲ್ಲಿ’ ಎಂದು ಕೋಪ ಮಾಡಿಕೊಂಡು ಹೇಳಿದರು. ಈಗ ಬೆಂಗಳೂರಿನ ರಸ್ತೆಗಳಲ್ಲಿ ಜನರಾಗಲಿ, ವಾಹನಗಳಾಗಲಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಆದರೆ ದೇಶದ ಜನರೆಲ್ಲ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಬಹುಮಿಲಿಯ ಕಂಪನಿಗಳಿಗೂ ಬೆಂಗಳೂರೇ ಬೇಕು.

ಈ ದಿನ ಜಗತ್ತಿನ ಜನರೆಲ್ಲ ಸಿಂಗಾಪುರ ನೋಡಲು ಬರುತ್ತಾರೆ. ಭ್ರಷ್ಟತೆ ಇಲ್ಲ, ಕಳ್ಳತನವಿಲ್ಲ, ಯಾವುದೇ ರೀತಿಯ ಭಯವಿಲ್ಲ. ಸಂಪೂರ್ಣ ಸುರಕ್ಷಿತ. ಇನ್ನೇನು ಬೇಕು? ಸಿಂಗಾಪುರದ ಜನ ಕೋಪಗೊಳ್ಳುವುದಾಗಲಿ, ಜಗಳವಾಡುವುದಾಗಲಿ ನೋಡಲು ಸಿಗುವುದಿಲ್ಲ. ಸಿಂಗಾಪುರ ಏರ್‌ಲೈನ್ಸ್ ಸಿಬ್ಬಂದಿ ಪ್ರಯಾಣಿಕರನ್ನು ಉಪಚರಿಸುವ ರೀತಿಯಿಂದಲೇ ಜನರು ಅದೇ ಏರ್‌ಲೈನ್ಸ್ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಭಾರತಕ್ಕೆ ಹಿಂದಿರುಗುವಾಗ ಅದರಲ್ಲಿ 90% ಬೆಂಗಳೂರಿನವರೇ ಇದ್ದರು. ಸಿಂಗಾಪುರ ಬಿಟ್ಟಿದ್ದೆ ಅವರೆಲ್ಲ ಅಸಲಿ ಭಾರತೀಯರಾಗಿಬಿಟ್ಟರು. ಅವರು, ಇವರ ಆಸನಗಳಲ್ಲಿ, ಇವರು ಅವರ ಆಸನಗಳಲ್ಲಿ ಕುಳಿತುಕೊಂಡಿದ್ದಲ್ಲದೆ ಕೆಲವರು ಜಗಳಕ್ಕೆ ನಿಂತುಕೊಂಡುಬಿಟ್ಟಿದ್ದರು. ಕೆಲವರು ತಲೆಯ ಮೇಲಿದ್ದ ಸಿಗ್ನೆಲ್ ಲೈಟನ್ನು ಪದೇಪದೇ ಒತ್ತಿಒತ್ತಿ ಮದ್ಯ ತರಿಸಿಕೊಂಡು ಕುಡಿದರೆ, ಇನ್ನೂ ಕೆಲವರು ವೆಜ್ಜು, ನಾನ್‌ವೆಜ್ಜು ಎಂದು ಕೂಗಿಕೊಳ್ಳುತ್ತಿದ್ದರು. ಗಗನಸಖಿಯರು ಮಾತ್ರ ಎಲ್ಲದಕ್ಕೂ ನಗುತ್ತಲೇ ಇದ್ದರು.

ಈಗ ಸಿಂಗಾಪುರ ಜಗತ್ತಿನಲ್ಲಿ ಶಿಕ್ಷಣ, ಹಣಕಾಸು, ಆರೋಗ್ಯ, ನಾವೀನ್ಯತೆ, ಉತ್ಪಾದನೆ, ತಂತ್ರಜ್ಞಾನ, ಪ್ರವಾಸೋದ್ಯಮ, ವ್ಯಾಪಾರ ಮತ್ತು ಸಾರಿಗೆಯಲ್ಲಿ ಅಂತರರಾಷ್ಟ್ರೀಯಯ ಮಟ್ಟದಲ್ಲಿ ಜಗತ್ತಿನ ಶ್ರೀಮಂತ ದೇಶಗಳ ಜೊತೆಗೆ ಪೈಪೋಟಿ ನಡೆಸುತ್ತಿದೆ. ಇದೊಂದು ಪುಟ್ಟ ದ್ವೀಪ (ದೇಶ) ಎನ್ನುವುದನ್ನು ನಿಮಗೆ ಮತ್ತೆ ಹೇಳಬಯಸುತ್ತೇನೆ. ಆಧುನಿಕ ತಂತ್ರಜ್ಞಾನ, ಸ್ಪರ್ಧಾತ್ಮಕ ಆರ್ಥಿಕತೆ, ಉನ್ನತ ಅಂತರರಾಷ್ಟ್ರೀಯ ಸಭೆಗಳು ನಡೆಯುವ ನಗರವಾಗಿದೆ. ಸುರಕ್ಷಿತ ದೇಶ, ಉತ್ತಮ ಆರ್ಥಿಕತೆ ಹೂಡಿಕೆ, ಭ್ರಷ್ಟರಹಿತ, ಅತಿದೊಡ್ಡ ವಿನಿಮಯ ದೇಶ ಹೀಗೆ ಅದು ಅನೇಕ ಗರಿಗಳನ್ನು ತನ್ನ ಮುಡಿಗೆ ಸಿಕ್ಕಿಸಿಕೊಂಡಿದೆ. ಎಲ್ಲಾ ಪ್ರಮುಖ ಏಜೆನ್ಸಿಗಳಿಂದ ಏಏಏ ರೇಟಿಂಗ್ ಹೊಂದಿರುವ ಏಷ್ಯಾಖಂಡದ ಏಕೈಕ ದೇಶ ಸಿಂಗಾಪುರ.

ಈ ದ್ವೀಪದಲ್ಲಿ 5.61 ದಶಲಕ್ಷ ಜನರಿದ್ದು ಅದರಲ್ಲಿ 39% ವಿದೇಶಿಗರು ಶಾಶ್ವತ ನಿವಾಸಿಗಳಾಗಿದ್ದಾರೆ. ಮೂಲ ಜನಾಂಗೀಯ ಗುಂಪುಗಳಾದ 74.3% ಚೈನೀಸ್, 13.5 ಮಲಯ, 9% ಭಾರತೀಯರು ಮತ್ತು 3.2% ಇತರರು ಇದ್ದಾರೆ. ಇನ್ನು ಧರ್ಮಗಳಿಗೆ ಬಂದರೆ 32.1% ಬೌದ್ಧ ಧರ್ಮ, ಯಾವುದೇ ಧರ್ಮವಿಲ್ಲದ 20% ಜನರು, 19% ಕ್ರೈಸ್ತರು, 15.6% ಇಸ್ಲಾಂ ಜನರು, 8.8% ಟಾವೋ ತತ್ವವಾದಿಗಳು ಮತ್ತು 5% ಹಿಂದೂಗಳಿದ್ದಾರೆ. ಸರ್ಕಾರ ಏಕೀಕೃತ ಪ್ರಾಬಲ್ಯ-ಪಕ್ಷ ಸಂಸದೀಯ ಗಣರಾಜ್ಯವಾಗಿದೆ. 2024ರಲ್ಲಿ ಒಟ್ಟು ಜಿಡಿಪಿ 794.179 ಶತಕೋಟಿ ಯು.ಎಸ್. ಡಾಲರುಗಳು ಮತ್ತು ವಾರ್ಷಿಕ ತಲಾದಾಯ 133,737 ಯು.ಎಸ್.ಡಾಲರುಗಳು.

ಇಲ್ಲಿ ನಾಲ್ಕು ಅಧಿಕೃತ ಭಾಷೆಗಳಿದ್ದು ಅವು ಇಂಗ್ಲಿಷ್, ಮಲಯ, ಮ್ಯಾಂಡರೀನ್ (ಚೀನಿ) ಮತ್ತು ತಮಿಳು ಭಾಷೆಗಳಾಗಿವೆ. ಎಲ್ಲಾ ಭಾಷಿಗರು ಎಲ್ಲಾ ಹಬ್ಬಗಳನ್ನು ಖುಷಿಯಿಂದ ಆಚರಿಸುತ್ತಾರೆ. ಯಾವುದೇ ಜನಾಂಗದ ಜನರು ತಮಗೆ ಇಷ್ಟವಾದ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ಓದಬಹುದು. ಒಂದು ದೇಶ ಶಿಸ್ತು ಮತ್ತು ಅಭಿವೃದ್ಧಿಯ ಅಮಲು ಬೆಳೆಸಿಕೊಂಡರೆ ಹೇಗಿರುತ್ತದೆ ಎನ್ನುವುದಕ್ಕೆ ಸಿಂಗಾಪುರ ಒಂದು ಜೀವಂತ ಉದಾಹರಣೆಯಾಗಿದೆ. ಅಂದಹಾಗೆ ಸಿಂಗಾಪುರ ಮೂಲ ಅಭಿವೃದ್ಧಿಗೆ ತಮಿಳರ ಕೊಡುಗೆ ಅಪಾರವಾಗಿದೆ (ಪ್ರವಾಸ: ಅಕ್ಟೋಬರ್ 2018).