ಭಾರತಕ್ಕೆ ಬಂದ ಮೇಲೆ ನಮ್ಮ ದೇಶಕ್ಕೆ ಮರಳಿದ ಸಂತಸ, ನಮ್ಮ ಸ್ನೇಹಿತರನ್ನು, ಸಂಬಂಧಿಕರನ್ನು ನೋಡಿದಾಗ ಆಗುವ ಆನಂದವೇ ಬೇರೆ. ಹಾಗಾಗಿ ನಮ್ಮ ದೇಶವೇ ನಮಗೆ ಸರಿ ಅನ್ನಿಸಿದ್ದು ಸುಳ್ಳಲ್ಲ. ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಬೇಕಾಯಿತು. ಸರ್ಕಾರಿ ಶಾಲೆಯಲ್ಲಿ ಊಟ ಉಚಿತ, ಆದರೆ ಶುಚಿತ್ವ ಇಲ್ಲ. ಓದು ಉಚಿತ, ಉತ್ತಮ ಸೌಲಭ್ಯವಿಲ್ಲ. ಸಣ್ಣ ಸಣ್ಣ ಕೆಲಸ ಮಾಡುವವರೂ, ದಿನಗೂಲಿ ಮಾಡುವವರೂ ಕೂಡ ಅವರ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಕಡಿಮೆ ಫೀ ತೆಗೆದುಕೊಳ್ಳುವ ಖಾಸಗಿ ಶಾಲೆ ಬೆಂಗಳೂರಿನಲ್ಲಿ ಕಾಣ ಸಿಗದು.
ಪ್ರಶಾಂತ್ ಬೀಚಿ ಅಂಕಣ
“ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ,
ಅಂಗೈ ಅಗಲ ಜಾಗ ಸಾಕು ಹಾಯಾಗ್ ಇರೋಕೆ.”
ಈ ಹಾಡನ್ನು ಕೇಳದೆ ಇರೋ ಕನ್ನಡಿಗರು ಬಹಳ ವಿರಳ. ಆದರೆ ಈ ಹಾಡು ಕೇವಲ ಮೋಜಿಗಾಗಿ ಅಲ್ಲ, ನಿಜವಾಗಿಯೂ ನಿಜ. ಪ್ರತಿಯೊಬ್ಬ ಮನುಷ್ಯನಿಗೆ ತಿನ್ನೋಕೆ ಅನ್ನ, ಉಡೋಕೆ ಬಟ್ಟೆ, ಇರೋಕೆ ಜಾಗ ಬೇಕೆ ಬೇಕು. ಇವುಗಳನ್ನು ಕನಿಷ್ಟ ಅವಶ್ಯಕತೆಗಳ ಪಟ್ಟಿಗೆ ಸೇರಿಸಬಹುದಾಗಿದೆ. ಹಾಗೆ ಮುಂದುವರೆದು, ವಿದ್ಯಾಭ್ಯಾಸ ಮತ್ತು ಆರೋಗ್ಯ ಕೂಡ ಪ್ರತೀ ನಾಗರೀಕನ ಹಕ್ಕು. ಆ ದೇಶಗಳ ಮೂಲಭೂತ ಸೌಕರ್ಯಗಳಲ್ಲಿ ಇವುಗಳು ಇರಲೇಬೇಕು ಮತ್ತು ಉಚಿತವಾಗಿ ಅಥವ ಕೈಗೆಟಕುವ ಹಾಗೆ ಇರಬೇಕು.
ನಾನು ಇಂಗ್ಲೇಡ್ ನಲ್ಲಿ ಕೆಲವು ತಿಂಗಳು ಇದ್ದೆ. ಆ ದೇಶದ ಪ್ರಜೆಯಾಗಿರಲಿಲ್ಲ, ನನಗೆ ಅಲ್ಲಿ ಕೆಲಸ ಮಾಡುವ ಅವಕಾಶವಿದ್ದುದರಿಂದ ಅಲ್ಲಿ ನೆಲೆಸಿದ್ದೆ. ಆರೋಗ್ಯದ ತಪಾಸಣೆ ಮತ್ತು ವೈದ್ಯಕೀಯ ಚಿಕಿತ್ಸೆ ಉಚಿತವಾಗಿ ದೊರೆಯುತ್ತಿತ್ತು. ವೈದ್ಯಕೀಯ ವಿಮೆ ಇದ್ದರೆ ಔಷಧಿಗಳು ಉಚಿತ, ಇಲ್ಲದಿದ್ದರೆ ಅದಕ್ಕೆ ಮಾತ್ರ ಹಣ ಕೊಡಬೇಕಾಗಿತ್ತು. ಮಕ್ಕಳಿಗೆ ವಿದ್ಯಾಭ್ಯಾಸ ಸಂಪೂರ್ಣ ಉಚಿತ, ಶಾಲೆ ಎನ್ನುವುದು ಒಂದು ಸುಂದರ ಪರಿಸರ, ಓದು ಎನ್ನುವುದು ಮಕ್ಕಳಿಗೆ ಹಿತವೆನ್ನಿಸುವ ಹವ್ಯಾಸ. ಒಂದು ದೇಶ ತನ್ನ ನಾಗರೀಕರನ್ನು ಹೇಗೆ ತಯಾರಿ ಮಾಡಬೇಕೆಂದು ತಯಾರಿ ಮಾಡಿಕೊಂಡಂತಿತ್ತು.
ನನ್ನ ಅಮ್ಮ ಇಂಗ್ಲೆಂಡ್ ದೇಶಕ್ಕೆ ಬಂದಿದ್ದರು. ಅಲ್ಲಿಯ ಗ್ರಂಥಾಲಯಕ್ಕೆ ಹೋಗಿ ಸಮಯ ಕಳೆದು ಬರುತ್ತಿದ್ದರು. ಅಲ್ಲಿನ ಗ್ರಂಥಾಲಯ ಕೇವಲ ಓದಿಗೆ ಅಥವ ಪುಸ್ತಕಕ್ಕೆ ಸೀಮಿತವಾಗಿರಲಿಲ್ಲ. ಸಿನೇಮ, ಆಟಿಕೆ, ಕರಕುಶಲತೆಗಳಿಗೆ ಬಹಳವಾದ ಅವಕಾಶವಿತ್ತು. ಭಾಷೆ ಬಾರದಿದ್ದರೂ, ಅಲ್ಲಿನ ಪರಿಚಾರಕರು ಹಿರಿಯ ನಾಗರೀಕರಿಗೆ ಅನೇಕ ವಿಧವಾಗಿ ಸಹಕರಿಸುತ್ತಿದ್ದರು. ನಾವಿದ್ದ ಊರಿನ ಸುತ್ತ ಮುತ್ತ ಓಡಾಡಲು ಹೋದಾಗ ಹಿರಿಯ ನಾಗರೀಕರ ಅನುಕೂಲಕ್ಕೆ ಅವರಿಗೆ ಬಸ್ ಪಾಸ್ ಸಿಗುತ್ತದೆ ಎಂದು ಹೇಳಿ, ಉಚಿತ ಬಸ್ ಪಾಸ್ ಕೊಡಿಸಿದರು. ಅಲ್ಲಿದ್ದಷ್ಟು ಕಾಲ ಅನೇಕ ಸವಲತ್ತುಗಳನ್ನು ಪಡೆದುಕೊಂಡೆವು. ಇದೆಲ್ಲ ಆ ದೇಶ ಸುಮ್ಮನೆ ಕೊಡಲಿಲ್ಲ, ಅದಕ್ಕಾಗಿ ದುಡಿಯುವ ಪ್ರತಿಯೊಬ್ಬರೂ ಟ್ಯಾಕ್ಸ್ ರೂಪದಲ್ಲಿ ಉತ್ತಮ ಪಾಲನ್ನೆ ದೇಶಕ್ಕಾಗಿ ಕಟ್ಟುತ್ತಿದ್ದರು. ಅದು ಬಿಟ್ಟರೆ ಸರ್ಕಾರದ ಯಾವುದೇ ಕೆಲಸಕ್ಕೆ ಲಂಚದ ರೂಪದಲ್ಲಿ ಹಣ ಕೊಡುವುದು ದೂರವಾಗಿರಲಿ, ನಮಗೆ ಸಿಗಬೇಕಾದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದರಲ್ಲಿ ಸ್ವಲ್ಪ ತಡವಾದರೆ ಕ್ಷಮೆ ಕೋರುತ್ತಿದ್ದರು. ಭ್ರಷ್ಟಾಚಾರವೆನ್ನುವುದು ಸರ್ಕಾರದ ಉನ್ನತ ಮಟ್ಟದಲ್ಲಿ ನಡೆಯಬಹುದು, ಆದರೆ ಸಾಮಾನ್ಯ ಮನುಷ್ಯನ ದೈನಂದಿನ ಕೆಲಸದಲ್ಲಿ ಭ್ರಷ್ಟಾಚಾರ ಹುಡುಕಿದರೂ ಕಾಣುವುದಿಲ್ಲ.
ಭಾರತಕ್ಕೆ ಬಂದ ಮೇಲೆ ನಮ್ಮ ದೇಶಕ್ಕೆ ಮರಳಿದ ಸಂತಸ, ನಮ್ಮ ಸ್ನೇಹಿತರನ್ನು, ಸಂಬಂಧಿಕರನ್ನು ನೋಡಿದಾಗ ಆಗುವ ಆನಂದವೇ ಬೇರೆ. ಹಾಗಾಗಿ ನಮ್ಮ ದೇಶವೇ ನಮಗೆ ಸರಿ ಅನ್ನಿಸಿದ್ದು ಸುಳ್ಳಲ್ಲ. ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಬೇಕಾಯಿತು. ಸರ್ಕಾರಿ ಶಾಲೆಯಲ್ಲಿ ಊಟ ಉಚಿತ, ಆದರೆ ಶುಚಿತ್ವ ಇಲ್ಲ. ಓದು ಉಚಿತ, ಉತ್ತಮ ಸೌಲಭ್ಯವಿಲ್ಲ. ಸಣ್ಣ ಸಣ್ಣ ಕೆಲಸ ಮಾಡುವವರೂ, ದಿನಗೂಲಿ ಮಾಡುವವರೂ ಕೂಡ ಅವರ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ವರ್ಷಕ್ಕೆ ಒಂದು ಲಕ್ಷಕ್ಕಿಂತ ಕಡಿಮೆ ಫೀ ತೆಗೆದುಕೊಳ್ಳುವ ಖಾಸಗಿ ಶಾಲೆ ಬೆಂಗಳೂರಿನಲ್ಲಿ ಕಾಣ ಸಿಗದು. ಇನ್ನು ವೈದ್ಯಕೀಯ ಎನ್ನುವುದು ಗಗನ ಕುಸುಮ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧೋಪಚಾರ ಎನ್ನುವುದು ಒಂದು ಅಪಚಾರ. ಲಂಚ ಕೊಡದೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ದುಡ್ಡು ಕೊಟ್ಟರೂ ಅಲ್ಲಿಯ ವ್ಯವಸ್ಥೆ ಅಧೋಮಯ. ಹೀಗೆಂದು ಖಾಸಗಿ ಆಸ್ಪತ್ರೆಗೆ ಹೋದರೆ, ಅವರ ಫೀ ಕಟ್ಟುವುದರಲ್ಲಿ ಹೆಣ ಬಿದ್ದು ಹೋಗಿರುತ್ತದೆ.
ಅಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಸಂಪೂರ್ಣ ಉಚಿತ, ಶಾಲೆ ಎನ್ನುವುದು ಒಂದು ಸುಂದರ ಪರಿಸರ, ಓದು ಎನ್ನುವುದು ಮಕ್ಕಳಿಗೆ ಹಿತವೆನ್ನಿಸುವ ಹವ್ಯಾಸ. ಒಂದು ದೇಶ ತನ್ನ ನಾಗರೀಕರನ್ನು ಹೇಗೆ ತಯಾರಿ ಮಾಡಬೇಕೆಂದು ತಯಾರಿ ಮಾಡಿಕೊಂಡಂತಿತ್ತು.
ಭಾರತದಲ್ಲೂ ಗಳಿಕೆಯ ಒಂದು ಮುಖ್ಯಭಾಗವನ್ನು ತೆರಿಗೆಯ ರೂಪದಲ್ಲಿ ಕಟ್ಟುತ್ತೇವೆ. ಆದರೆ ಅದಕ್ಕೆ ಪ್ರತಿಯಾಗಿ ನಾಗರೀಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಉಚಿತವಾಗಿ ಸಿಗುವುದಿಲ್ಲ. ಸಾಮಾನ್ಯ ಜನರು ಸರ್ಕಾರದ ಪ್ರತೀ ಕೆಲಸಕ್ಕೂ ಲಂಚ ಕೊಡುವುದು ಒಂದು ಪದ್ಧತಿಯಾಗಿದೆ. ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎನ್ನುವುದು ನಾಗರೀಕರ ನಂಬಿಕೆ ಮತ್ತು ನಿಜ.
ದಶಕಗಳ ಹಿಂದೆ ಅಣ್ಣಾ ಹಜಾರೆ ಮಾಡಿದ ಆಂದೋಲನದ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಟೋಪಿ ಹಾಕಿ ಹೋದರೆ ಹೆದರಿ ಕೆಲಸ ಮಾಡಿಕೊಡುತ್ತಿದ್ದರು. ಲಂಚ ಕೇಳಲು ಸರ್ಕಾರಿ ನೌಕರರು ಹೆದರುತ್ತಿದ್ದರು. ಆಂದೋಲನ ಮುಗಿಯಿತು, ಮತ್ತೆ ಲಂಚಗುಳಿತನ ಎದ್ದಿತು. ಅಣ್ಣ ಹಜಾರೆ ಆಂದೋಲನದ ಬೆಳಕಿನಲ್ಲೆ ಎದ್ದುಬಂದ ಆಮ್ ಆದ್ಮಿ ಪಾರ್ಟಿ ಒಂದು ಹುಮ್ಮಸ್ಸನ್ನು ಜನರಲ್ಲಿ ಹುಟ್ಟಿಸಿತ್ತು. ಭ್ರಷ್ಟ ರಾಜಕಾರಣದ ಮಧ್ಯೆ ಒಂದು ಬೆಳಕು ಮೂಡಿತ್ತು, ಆದರೆ ನೋಡ ನೋಡುತ್ತಲೆ ಕತ್ತಲು ಆವರಿಸಿ ಪ್ರಾಮಾಣಿಕತೆ ಎನ್ನುವುದು ಮರೀಚಿಕೆಯಾಯಿತು.
ಕೆನಡಾ ದೇಶದಲ್ಲಿ ಬಂದು ನೆಲಸುವ ಅವಕಾಶದಿಂದ ಮತ್ತೆ ಜನ ಸಾಮಾನ್ಯರಿಗೆ ಸಿಗಬೇಕಾದ ಸೌಕರ್ಯಗಳು ಹೇಗೆ ಉಚಿತವಾಗಿ ಸಿಗುತ್ತಿದೆ ಎಂದು ತಿಳಿದುಕೊಂಡೆ. ಇಲ್ಲೂ ಕೂಡ ನಾವು ಗಳಿಸುವ ಒಂದು ಪ್ರಮುಖ ಭಾಗವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಕಟ್ಟುತ್ತೇವೆ, ಅದರ ಬದಲಿಗೆ ಸರ್ಕಾರ ಯಾವುದೇ ಲಂಚ ಪಡೆಯದೆ ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯಗಳಂತ ಮೂಲಭೂತ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತದೆ. ಇದೆಲ್ಲ ಸರ್ಕಾರದ ಆದ್ಯ ಕರ್ತವ್ಯ ಎಂದು ಭಾಸಿವಿಸಿವೆ. ಕೆನಡಾದಂತಹ ದೇಶದಲ್ಲಿ ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಯಾವುದೇ ಲಂಚ ಕೊಡಬೇಕಾಗಿಲ್ಲ. ಉತ್ತಮ ನಾಗರೀಕರನ್ನು ನಿರ್ಮಾಣ ಮಾಡುವುದು ಸರ್ಕಾರದ ನಿಯಮಗಳು ಮತ್ತು ಅದರ ನಿಯತ್ತು. ಲಂಚವೆನ್ನುವ ಭೂತವಿಲ್ಲದಿದ್ದರೆ ಜೀವನ ಎಷ್ಟು ಸುಲಭ ಎನ್ನುವುದು ತಿಳಿಯುತ್ತದೆ.
ಭಾರತದಂತಹ ದೇಶದಲ್ಲಿ ಸರ್ಕಾರ ನಡೆಸುವವರೆ ಲಂಚಕ್ಕೆ ಬಿದ್ದಿರುವಾಗ, ನೀಯತ್ತು ಕಳೆದುಕೊಂಡವರು ಜನ ನಾಯಕರಾದಾಗ ಉತ್ತಮ ನಾಗರೀಕರು ಹೇಗಾದರು ಸೃಷ್ಟಿಯಾದಾರು? ಭಾರತದಿಂದ ದೂರವಿರುವ ಜನ ಭಾರತಕ್ಕೆ ಮರಳದಿರಲು ಏಕೈಕ ಕಾರಣ ಲಂಚಗುಳಿತನ. ಅನೇಕ ಸಂಸ್ಥೆಗಳು ಮತ್ತು ಅನೇಕ ವೇದಿಕೆಗಳು ಲಂಚದ ವಿರುದ್ಧ ಹೋರಾಟ ನಡೆಸಿದರೂ, ನಡೆಸುತ್ತಿದ್ದರೂ ಅವುಗಳ ಗೆಲವು ಬಹಳ ಸಣ್ಣದು. ಒಂದು ಉದಾಹರಣೆ ಎಂಬಂತೆ: ದಶಕಗಳಿಂದ ರವಿಕೃಷ್ಣಾ ರೆಡ್ಡಿ ಮತ್ತು ಅವರ ಜೊತೆಗಾರರು ಅನೇಕ ರೀತಿಯಲ್ಲಿ ಹೋರಾಡುತ್ತಿದ್ದರೂ ಅವರಿಗೆ ಸಿಗಬೇಕಾದ ಸಹಕಾರ ಅಥವ ಗೆಲುವು ಸಿಗುತ್ತಿಲ್ಲ. ಏನಾದರಾಗಲಿ ನೀನು ಒಳಿತನ್ನೆ ಮಾಡು- ಎನ್ನುವಂತೆ ಅವರು ತಮ್ಮ ಕೈಂಕರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸದ್ಯಕ್ಕೆ ‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ’ ಎನ್ನುವ ಒಂದು ರಾಜಕೀಯ ಪಕ್ಷದ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಓಡಾಡಿಕೊಂಡು ಲಂಚಕೋರರನ್ನು ಬೀದಿಗೆಳೆಯುತ್ತಿದ್ದಾರೆ. ಆದರೆ ಕೆಲವು ಭ್ರಷ್ಟ ರಾಜಕಾರಣಿಗಳ ಕೃಪಾ ಪೋಷಿತರು ಇವರನ್ನು ಇಲ್ಲ ಸಲ್ಲದ ಆರೋಪದಡಿ ಸಿಲುಕಿಸುತ್ತಿದ್ದಾರೆ. ಲಂಚಗುಳಿತನದ ವಿರುದ್ಧ ಯಾರೇ ಹೋರಾಡಲಿ ಅವರ ಬೆಂಬಲಕ್ಕೆ ನಾಗರೀಕ ಸಮಾಜ ನಿಂತಾಗ ಅಂಥಹ ಹೋರಾಟಕ್ಕೆ ಬಲ ಬರುತ್ತದೆ. ನಮ್ಮ ದೇಶದಿಂದ ಲಂಚವೆನ್ನುವ ಭೂತ ಹೋದರೆ ಭಾರತ ನಿಜವಾಗಿಯೂ ಪುಣ್ಯಭೂಮಿಯಾಗುತ್ತದೆ.
ಕರ್ನಾಟಕದ ಕೆಲವು ಪ್ರಮುಖ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯುವ ಯೋಜನೆ ನಡೆಯುತ್ತಿದೆ. ಅನೇಕ ವೈದ್ಯರು ಕೆಲಸಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅರ್ಜಿ ಹಾಕಿದ್ದಾರೆ. ನನಗೆ ಅತಿಯಾಗಿ ಪರಿಚಯವಿರುವ, ಬಹಳ ಸೌಜನ್ಯ ಮತ್ತು ಪ್ರಾಮಾಣಿಕ ವೈದ್ಯರು ಕೂಡ ಅವರವರ ಮೆಚ್ಚಿನ ಜಿಲ್ಲಾ ಕೆಂದ್ರದ ಕಾಲೇಜಿಗೆ ಅರ್ಜಿ ಹಾಕಿದ್ದಾರೆ. ಅವರ ಆಸೆ ಏನೆಂದರೆ ತಮ್ಮ ಜಿಲ್ಲೆಯ ಜನಕ್ಕೆ ಪ್ರಾಮಾಣಿಕವಾಗಿ ಸೇವೆ ಮಾಡಬೇಕು ಮತ್ತು ತಾವು ಹುಟ್ಟಿ ಬೆಳೆದ ಜಿಲ್ಲೆಯಲ್ಲೆ ವಾಸಮಾಡಬೇಕು ಎನ್ನುವ ಸಣ್ಣ ಸ್ವಾರ್ಥ. ಅವರನ್ನು ಪರೀಕ್ಷೆ ಬರೆಯಲು ಕರೆಸಿ ಮಧ್ಯವರ್ತಿಗಳಿಂದ ನಲವತ್ತು ಲಕ್ಷ ಲಂಚದ ಬೇಡಿಕೆಯಿಟ್ಟಿದ್ದಾರೆ. ವಿಪರ್ಯಾಸ ಎಂದರೆ ಈಗಾಗಲೆ ಕೆಲವು ವೈದ್ಯರು ಅದನ್ನು ಕೊಟ್ಟಿದ್ದಾರೆ ಕೂಡ. ನಲವತ್ತು ಲಕ್ಷ ಲಂಚ ಕೊಟ್ಟು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಿ ಹಣವನ್ನು ಹಿಂಪಡೆಯಲು ಯಾವ ದಾರಿ ಹಿಡಿಯುತ್ತಾರೆ?
ಪ್ರಶಾಂತ್ ಬೀಚಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ. ತಾಂಜಾನಿಯಾ (ಪೂರ್ವ ಆಫ್ರಿಕಾ), ಯೂಕೆ ಯಲ್ಲಿ ಕೆಲವು ವರುಷ ಇದ್ದು ಸದ್ಯಕ್ಕೆ ಕೆನಡಾದಲ್ಲಿ ನೆಲೆಸಿದ್ದಾರೆ. ‘ಲೇರಿಯೊಂಕ’ (ಅನುವಾದಿತ ಕಾದಂಬರಿ) ಮತ್ತು ‘ಕಿಲಿಮಂಜಾರೋ’ ಪ್ರಕಟಿತ ಪುಸ್ತಕಗಳು. ವಸುದೇವ ಭೂಪಾಲಂ ದತ್ತಿ, ದ ರಾ ಬೇಂದ್ರೆ ಮತ್ತು ಪರಮೇಶ್ವರ ಭಟ್ಟ್ ಪ್ರಶಸ್ತಿಗಳು ದೊರೆತಿವೆ.