ತಿಳಿದಿತ್ತು, ನಕ್ಷತ್ರಗಳು ಕೈಗೆಟುಕದ ಕನಸುಗಳೆಂದು
ಆದರೂ, ಹಿಡಿಯಲು ಹೋಗಿ ವಿವಶನಾಗಿ ಕುಳಿತೆ


ಒಮ್ಮೆ ಅನಿಸಿದ್ದು, ಪಾರಿಜಾತವಾಗಿದ್ದರೆ ಸಾಕಿತ್ತು
ಹೀಗೆ ನಿತ್ಯ ನೊಂದು ಸಾಯದೆ ಸಂಜೆ ಘಮಿಸಿಲು


ನೀನು ಭುವಿಯಾದೆ, ನಾನು ಬಾನಾದೆನು
ಕೊನೆಗೂ, ನಾವು ಸಂಧಿಸದೆ ಕ್ಷಿತಿಜವಾದೆವು


ಕನಸುಗಳು ಕಾಣದಂತೆ ಕಣ್ಣೊಳಗೆ ಕಾಡಿದವು
ಬೆಳಗಲಿ ಅರಿವಿಲ್ಲದೆಯೇ ಬಾನಿಗೆ ಜಿಗಿದವು


ಮಳೆ ಸುರಿದು ನೆಲ ಹದವಾಯಿತು ಖುಷಿಯಲಿ
ನೀನಿಲ್ಲದೆ ಬರಡಾಯಿತು ಈ ಎದೆ ಇರುಳಲಿ‌

(ಕಲೆ: ರೂಪಶ್ರೀ ವಿಪಿನ್)