ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತಂದೆತಾಯಿಗಳಿಗೂ ಎಂತಹ ಆಘಾತ ಆಗುತ್ತದೆ ಎಂಬುದನ್ನು ವಿವರಿಸಬೇಕಿಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೇಳನೆಯ ಬರಹ
ಈ ನಡುವೆ ನಡೆದ ಎರಡು ವಿದ್ಯಮಾನಗಳು ನನ್ನ ಮನಸ್ಸನ್ನು ಬಹಳ ವಿಚಲಿತಗೊಳಿಸಿದವು. ಅವು ಈ ಕೆಳಗಿನಂತಿವೆ.
1. “ನೋಡಮ್ಮ ಇಲ್ಲಿ ಈ ಸುದ್ದಿ. `ಮೊಬೈಲು ಕೊಡಿಸಲಿಲ್ಲವೆಂದು ತಾಯಿಗೆ ಮಾರಣಾಂತಿಕವಾಗಿ ಹೊಡೆದ ಬಾಲಕ’ … ಯಾಕ್ ಹೀಗ್ಹಾಗೋದ್ರು ಮಕ್ಳು! ಮನೆಕೆಲಸ ಮಾಡಿ ಎಷ್ಟೋ ಕಷ್ಟ ಪಟ್ಟು ಮಗನ್ನ ಪಿಯುಸಿ ಓದಿಸ್ತಿದ್ಲಂತೆ ಈ ತಾಯಿ, ಅವ್ಳಿಗೆ ಹೀಗ್ ಹೊಡ್ದಿದಾನಲ್ಲ ಈ ಹುಡ್ಗ!
ಅದೇನೋ ಫೋಮೋ. `ಫಿಯರ್ ಆಫ್ ಮಿಸ್ಸಿಂಗ್ ಔಟ್’ ಅಂತೆ, ಅಂದ್ರೆ ತಾವೆಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರೋ ಸಂತೋಷಾನ ಕಳ್ಕೊಂಡುಬಿಡ್ತೀವೋ ಅಂತ ಹದಿಹರೆಯದ ಮಕ್ಕಳು, ಯುವಕ ಯುವತಿಯರು ಆತಂಕಕ್ಕೆ ಒಳಗಾಗ್ತಿದಾರಂತೆ. ಹೀಗಾಗಿ ಆ ವಯಸ್ಸಿನವರಲ್ಲಿ ಈ ಅಪರಾಧ ಮನೋಭಾವ ಜಾಸ್ತಿ ಆಗ್ತಾ ಇದ್ಯಂತೆ. ನೋಡು, ಈ ಲೇಖನದಲ್ಲಿ ವಿವರವಾಗಿ ಬರ್ದಿದಾರೆ. ಛೆ, ಎಂತಹ ಕಾಲ ಬಂತಮ್ಮ!”… ನಮ್ಮ ಮನೆಗೆ ಆ ಬೆಳಿಗ್ಗೆ ಬಂದಿದ್ದ, ಎಪ್ಪತ್ತೈದರ ಪ್ರಾಯದ ನನ್ನ ಚಿಕ್ಕಪ್ಪ ಅಂದಿನ ದಿನಪತ್ರಿಕೆ ಓದುತ್ತಿದ್ದಾಗ ನನ್ನೊಂದಿಗೆ ಹಂಚಿಕೊಂಡ ಅನಿಸಿಕೆ ಇದು.
2. “ನೋಡಿ ಮೇಡಂ, ಹೆಣ್ಮಕ್ಕಳ ಸಬಲೀಕರಣದ ಬಗ್ಗೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹೊತ್ತಲ್ಲಿ ಜನ ಬಹಳ ಮಾತಾಡ್ತಾರೆ. ಅದು ತಪ್ಪು ಅನ್ನಲ್ಲ ನಾನು. ಆದ್ರೆ ಒಬ್ಬ ಸ್ತ್ರೀರೋಗ ತಜ್ಞೆಯಾಗಿ ನನ್ನ ಅನುಭವ ಬೇರೆಯೇ ಇದೆ” ಅಂದರು ಡಾ.ಮೃಣಾಲಿನಿ. ನಮ್ಮ ರಾಜ್ಯದ ದೊಡ್ಡ ಪಟ್ಟಣ ಅಥವಾ ಪುಟ್ಟ ನಗರ ಅನ್ನಬಹುದಾದ ಪ್ರದೇಶದ ವೈದ್ಯಕೀಯ ಕಾಲೇಜೊಂದರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅತಿಥಿಯಾಗಿ ಹೋಗಿದ್ದ ನನ್ನನ್ನು ರೈಲು ನಿಲ್ದಾಣಕ್ಕೆ ತಮ್ಮ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಅವರು ಹೇಳಿದ ಮಾತಿದು. ಅವರ ಮುಖದಲ್ಲಿ ಕಾಣುತ್ತಿದ್ದ ಕಾಳಜಿ, ಗಾಂಭೀರ್ಯ, ಆತಂಕಗಳು ನನ್ನನ್ನು ಮುಟ್ಟಿದವು. “ಯಾವ ರೀತಿಯ ಅನುಭವ ನಿಮ್ಮದು ಮೇಡಂ?” ಎಂದು ಕೇಳಿದೆ ನಾನು.
`ಈ ನಡುವೆ ನಮ್ಮೂರಲ್ಲಿ ಟೀನೇಜ್ ಪ್ರೆಗ್ನೆನ್ಸಿ’ (ಹದಿಹರೆಯದ ಬಸಿರು) ತುಂಬ ಜಾಸ್ತಿ ಆಗ್ತಾ ಇದೆ. ಹದಿಮೂರು, ಹದಿನಾಲ್ಕು, ಹದಿನಾರು ವರ್ಷದ ಹೆಣ್ಣುಮಕ್ಕಳನ್ನು ಕರ್ಕೊಂಡು ಬರ್ತಾರೆ. ಹೊಟ್ಟೆನೋವು ಅಂತ ಗೋಳಾಡ್ತಿರ್ತವೆ ಆ ಮಕ್ಕಳು. ನೋಡಿದ್ರೆ ಅವರಿಗೆ ಬಸಿರಾಗಿಬಿಟ್ಟಿರುತ್ತೆ! ಹನ್ನೆರಡು ವರ್ಷದ ಹುಡುಗಿ ಒಬ್ಳು ಬಂದಿದ್ಳು. ಋತುಮತಿ ಆಗಿ ಬರೀ ನಾಲ್ಕು ತಿಂಗಳು ಆಗಿದೆ ಅಷ್ಟೆ. ಅಷ್ಟರಲ್ಲೇ ಬಸುರಿ ಅವಳು. ಇನ್ನೊಬ್ಬಳು ಹದಿನಾರು ವರ್ಷದ ಹುಡುಗಿ ಬಚ್ಚಲು ಮನೆಗೆ ಹೋದವಳು `ಅಮ್ಮಾ ಅಮ್ಮಾ… ಕತ್ರಿ ಕೊಡು, ಕತ್ರಿ ಕೊಡು’ ಅಂತ ಕೂಗಿಕೊಂಡ್ಲಂತೆ, ತಾಯಿ ಗಾಬರಿಯಿಂದ ಹೋಗಿ ನೋಡಿದರೆ ಮಗಳಿಗೆ ಗರ್ಭಪಾತ ಆಗಿ ಆರು ತಿಂಗಳ ಭ್ರೂಣ ಕೆಳಗೆ ಬಿದ್ದಿದ್ದಂತೆ! ಕಸ(ಹೊಕ್ಕುಳ ಬಳ್ಳಿ ಸಮೇತವಾದ ಮಾಸು ಚೀಲ – ಪ್ಲಾಸೆಂಟಾ) ಇನ್ನೂ ಬಿದ್ದಿರಲಿಲ್ಲ. ಆಸ್ಪತ್ರೆಗೆ ಓಡಿ ಬಂದರು. ಆಮೇಲೆ ಕಸ ಎಲ್ಲ ತೆಗೆದು ಅವಳಿಗೆ ಚಿಕಿತ್ಸೆ ಕೊಟ್ಟೆವು. ಇದು ಪೋಕ್ಸೊ(ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷುವಲ್ ಅಬ್ಯೂಸ್ – ಮಕ್ಕಳನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶ ಹೊಂದಿದ 2012ರ ಕಾಯಿದೆ) ಪ್ರಕರಣ ಆಗುತ್ತೆ, ಪೋಲಿಸರಿಗೆ ತಿಳಿಸ್ತೀವಿ ಅಂದ್ರೆ ಕೈಕಾಲು ಹಿಡ್ಕೊಂಡು “ಬೇಡಾ ಬೇಡಾ ಡಾಕ್ಟ್ರೆ, ಮನೆಯ ಮಾನಮರ್ಯಾದೆ ಹೋಗುತ್ತೆ” ಅಂತ ಅಂಗಲಾಚಿಬಿಟ್ರು ಆ ಹುಡುಗಿಯ ಹೆತ್ತವರು. ಮೇಡಂ, ಒಬ್ಬ ಗೈನಕಾಲಜಿಸ್ಟ್ ಆಗಿ ನಾನು ಯಾವ ಸ್ಥಿತಿಗೆ ಬಂದಿದ್ದೀನಿ ಅಂದ್ರೆ ಈ ಮಕ್ಕಳಿಗೆ `ಕಡೇ ಪಕ್ಷ ಗರ್ಭನಿರೋಧಕಗಳನ್ನು ಬಳಸಿ, ನಿಮ್ಮ ಆರೋಗ್ಯ ಕಾಪಾಡ್ಕೊಳ್ಳಿ’ ಅನ್ನುವ ಹಾಗಾಗಿದೀನಿ” ಅಂದರು.
*****
ರೈಲಿನಲ್ಲಿ ಕುಳಿತು ನನ್ನ ಚಿಕ್ಕಪ್ಪ ಓದಿ ಹೇಳಿದ ಸುದ್ದಿಯನ್ನು ಮತ್ತು ನಾನು ಆಗಷ್ಟೇ ಭೇಟಿ ಮಾಡಿದ್ದ ಅನುಭವೀ ವೈದ್ಯೆಯ ಮಾತುಗಳನ್ನು ಕುರಿತು ಯೋಚಿಸುತ್ತಿದ್ದ ನನಗೆ ಈ ಕಾಲದ ಹದಿಹರೆಯದ ಮಕ್ಕಳ ಅಪ್ಪ ಅಮ್ಮಂದಿರ ಬಗ್ಗೆ ಬಹಳ ಚಿಂತೆಯಾಯಿತು.
ಆನ್ಲೈನ್ ಗೇಮಿಂಗ್‌ನಲ್ಲಿ ಆಟ ಆಡಲು ಹೋಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಕಿಶೋರ-ಕಿಶೋರಿಯರು, ಚಲನವಾಣಿಯನ್ನು ವಿಪರೀತವಾಗಿ ಬಳಸಿ ಮಾನಸಿಕ ಅಸ್ಥಿರತೆ, ಏಕಾಗ್ರತೆಯ ಕೊರತೆ ಅನುಭವಿಸುವ ಮಕ್ಕಳು, ದೂರವಾಣಿ ಕೊಡಿಸಲಿಲ್ಲವೆಂದು ತಂದೆ ತಾಯಿಯರನ್ನು ಹೊಡೆಯುವ ಮಟ್ಟಕ್ಕೆ ಹೋಗುವ ಮಕ್ಕಳು, ಫೋಮೋ ಎಂಬ ಹೊಸ ಗೀಳು(ಫಿಯರ್ ಆಫ್ ಮಿಸ್ಸಿಂಗ್ ಔಟ್ – ಸಮಾಜಿಕ ಮಾಧ್ಯಮಗಳಲ್ಲಿ ನಮ್ಮ ಪೀಳಿಗೆಯವರು, ಓರಗೆಯವರು ಮಾಡುವುದನ್ನು ನಾನು ಮಾಡುತ್ತಿಲ್ಲ ಎಂಬ ಕಳವಳವನ್ನು ಸದಾ ಅನುಭವಿಸುವುದು) …….ಅಬ್ಬ! ಇಂದಿನ ಅಪ್ಪಅಮ್ಮಂದಿರು ಏನೆಲ್ಲವನ್ನು ಎದುರಿಸಬೇಕು!
ಇಷ್ಟೇ ಅಲ್ಲದೆ ಎಲ್‌ಜಿಬಿಟಿ(ಮೂರನೇ ಲಿಂಗಿಗಳ) ಸಮುದಾಯದ ಬಗ್ಗೆ ಅರಿವು ಹೆಚ್ಚುತ್ತಿರುವ ಈ ಕಾಲದಲ್ಲಿ ಮಕ್ಕಳು ಎಂಟಿಎಫ್(ಗಂಡಾಗಿದ್ದವರು ಹೆಣ್ಣಾಗುವುದು), ಎಫ್‌ಟಿಎಂ(ಹೆಣ್ಣಾಗಿದ್ದವರು ಗಂಡಾಗುವುದು) ಮುಂತಾದ ಲಿಂಗ ಬದಲಾವಣೆಯ ಸಾಹಸಗಳಿಗೂ, ಅಂತಹ ಶಸ್ತ್ರಚಿಕಿತ್ಸೆಗಳ ಸಾಧಕ-ಬಾಧಕಗಳ ಸಂಪೂರ್ಣ ಅರಿವಿಲ್ಲದೆ ಕೈಹಾಕುತ್ತಿದ್ದಾರೆ.
ಝೆನ್ ಝೀ ಎಂದು ಕರೆಯಲಾಗುವ ಪೀಳಿಗೆಯ ಮಕ್ಕಳು (2000ನೇ ಇಸವಿಯ ನಂತರ ಹುಟ್ಟಿರುವ ಪೀಳಿಗೆ) ಹುಟ್ಟುತ್ತಿದ್ದಂತೆಯೇ ಚಲನವಾಣಿ, ಗಣಕಯಂತ್ರ, ವಿದ್ಯುನ್ಮಾನ ಪುಸ್ತಕ(ಟ್ಯಾಬ್) ಮುಂತಾದ ಹೊಸ ತಂತ್ರಜ್ಞಾನದ ಸಲಕರಣೆಗಳಿಗೆ ತೆರೆದುಕೊಳ್ಳುತ್ತಾರೆ. ತಮ್ಮ ಜೈವಿಕ ಅಪ್ಪ ಅಮ್ಮ ಅವರಿಗೆ ಎಷ್ಟರ ಮಟ್ಟಿಗೆ ಜೀವನಗುರುಗಳಾಗಿರುತ್ತಾರೋ ಅದಕ್ಕಿಂತ ಹೆಚ್ಚಾಗಿ ಅಂತರ್ಜಾಲ ಅವರ ಜೀವನಗುರುವಾಗುತ್ತಿದೆ!
ಜಾಗತೀಕರಣಕ್ಕೊಳಗಾಗಿ ಮೂರು ದಶಕಗಳು ಕಳೆದಿರುವ ನಮ್ಮ ಸಮಾಜದಲ್ಲಿ ಮಕ್ಕಳು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಂತರ್ಜಾಲದ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ; ಹೀಗಾಗಿ ದೊಡ್ಡವರ `ಒಳ್ಳೆಯ, ಕೆಟ್ಟ ಮತ್ತು ಕುರೂಪಿ’(ಗುಡ್ ಬ್ಯಾಡ್ ಅಂಡ್ ದ ಅಗ್ಲಿ) ಪ್ರಪಂಚಕ್ಕೆ ಬಲುಬೇಗ ತೆರೆದುಕೊಳ್ಳುತ್ತಿದ್ದಾರೆ. ಹದಿಹರೆಯದ ಬಸಿರು, ಮಾದಕ ದ್ರವ್ಯ ವ್ಯಸನ, ಧೂಮಪಾನ, ಅಂತರ್ಜಾಲದ ಹಣ ಸಂಬಂಧೀ ಆಟಗಳು(ಆನ್ಲೈನ್ ಗೇಮಿಂಗ್) ಇಂಥವು ಬರೀ ಮಹಾನಗರ, ನಗರಗಳಲ್ಲನ್ನಷ್ಟೇ ಅಲ್ಲದೆ ಪಟ್ಟಣ, ಹಳ್ಳಿಗಳಿಗೂ ವ್ಯಾಪಿಸುತ್ತಿವೆ. ಈ ಕಾಲಮಾನದಲ್ಲಿ ಮಕ್ಕಳನ್ನು ಆರೋಗ್ಯಯುತವಾದ ವ್ಯಕ್ತಿಗಳಾಗುವಂತೆ ಸಾಕುವುದು ಅಪ್ಪ ಅಮ್ಮಂದಿರಿಗೆ ಸುಲಭದ ಕೆಲಸವಲ್ಲ.
ಮೇಲ್ನೋಟಕ್ಕೆ ಮಕ್ಕಳನ್ನು ಬೆಳೆಸುವ ಎರಡು ರೀತಿಗಳು ಕಾಣುತ್ತವೆ. ಮೊದಲನೆಯದು ತಾವು ಬಾಲ್ಯಕಾಲದಲ್ಲಿ ಅನುಭವಿಸದೆ ಹೋದ ಎಲ್ಲ ಸುಖ-ಸಂತೋಷ, ಅನುಕೂಲಗಳನ್ನು ಮಕ್ಕಳಿಗೆ ಕೊಡಬೇಕು, ಅವರು ಕೇಳಿದ್ದನ್ನು ಕೊಡಿಸಬೇಕು, ಅವರಿಂದ ಯಾವುದೇ ಮನೆಕೆಲಸ ಮಾಡಿಸದೆ ಅವರು ಓದುವಷ್ಟು ವರ್ಷ ಅವರನ್ನು ಓದಿಸಬೇಕು, ಅವರಿಗಾಗಿ ಆಸ್ತಿ ಮಾಡಿಡಬೇಕು, ಅವರು ಮುಂದೆ ಜೀವನದಲ್ಲಿ ಕಷ್ಟ ಪಡಬಾರದು….. ಈ ರೀತಿ ಯೋಚಿಸುವ ಅಪ್ಪ ಅಮ್ಮಂದಿರ ರೀತಿ. ಈ ರೀತಿಯು ಎಲ್ಲ ಸಮಸ್ಯೆಗಳಿಗೂ ರಾಮಬಾಣ ಎಂದೇನಲ್ಲ. `ಮಕ್ಕಳು ಮಾತು ಕೇಳಲ್ಲ, ಚೆನ್ನಾಗಿ ಓದಲ್ಲ, ಎಷ್ಟು ಕೊಟ್ರೂ ಇನ್ನೂ ಸಾಲದು ಅಂತಾರೆ, ಏನು ಮಾಡಬೇಕು ಗೊತ್ತಾಗಲ್ಲ’ ಅಂತ ಅಪ್ಪ ಅಮ್ಮ ಒದ್ದಾಡುತ್ತಾರೆ.
ಇನ್ನೊಂದು ರೀತಿ ಅಂದರೆ ಮಕ್ಕಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ರೀತಿ. ಮನೆಯನ್ನೇ ಸೆರೆಮನೆ ಮಾಡುವ ಅಥವಾ ನಿರ್ಬಂಧಗಳೇ ಜೀವನವಾದ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನು ಬಿಡುವ ಅಪ್ಪ ಅಮ್ಮಂದಿರ ದಾರಿ ಇದು. `ಮನೆಯಲ್ಲಿ ಬಹಳ ಶಿಸ್ತಿನಿಂದ ಬೆಳೆಸುವುದರಿಂದ ಅಥವಾ ಧಾರ್ಮಿಕ ಮಠಗಳೋ, ಮಹಾತ್ವಾಕಾಂಕ್ಷಿಯಾದ ಖಾಸಗಿ ಸಂಸ್ಥೆಗಳೋ ನಡೆಸುವ ವಿಪರೀತ ಬಿಗಿ ನಿಯಮಗಳುಳ್ಳ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನು ಬಿಡುವುದರಿಂದ, ಅವರು ಚೆನ್ನಾಗಿ ಬೆಳೆಯುತ್ತಾರೆ’ ಎಂಬ ನಂಬಿಕೆ ಇಲ್ಲಿ ಕೆಲಸ ಮಾಡುತ್ತದೆ. ಬೆಳಿಗ್ಗೆ ಏಳುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದ ತನಕ ಪ್ರತಿಯೊಂದೂ ಅಂದರೆ ಇಂಚಿಂಚು ಜೀವನವೂ ನಿರ್ಬಂಧಮಯವಾದ ಜೀವನಶೈಲಿ ಇರುವ ಸನ್ನಿವೇಶ ಇದು. ಮಕ್ಕಳನ್ನು ಅದರಲ್ಲೂ ವಿಜ್ಞಾನ ಶಿಕ್ಷಣ ಆರಿಸಿಕೊಂಡವರಿಗೆ ಜಂಗಮವಾಣಿಯನ್ನು ಮುಟ್ಟಲೂ ಬಿಡದ, ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಿಗೆ ತೊಡಗಿಸದ ಮನೆಗಳಿವೆ, ವಿದ್ಯಾರ್ಥಿನಿಲಯಗಳಿವೆ! ಈ ವ್ಯವಸ್ಥೆಗೆ ಕೆಲವು ಮಕ್ಕಳು ಹೇಗೋ ಹೊಂದಿಕೊಂಡರೆ ಇನ್ನು ಕೆಲವರು ಆ `ಸೆರೆಮನೆ’ಯಿಂದ ಓಡಿ ಹೋಗಿಬಿಡುವುದು, ಅಥವಾ ದಿಕ್ಕು ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವುದು ಇಂತಹ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ತಂದೆತಾಯಿಗಳಿಗೂ ಎಂತಹ ಆಘಾತ ಆಗುತ್ತದೆ ಎಂಬುದನ್ನು ವಿವರಿಸಬೇಕಿಲ್ಲ.
ಹಾಗಾದರೆ, ಇಲ್ಲಿನ ಕೋಟಿ ರೂಪಾಯಿ ಮೌಲ್ಯದ ಪ್ರಶ್ನೆ(ಮಿಲಿಯನ್ ಡಾಲರ್ ಕ್ವೆಶ್ಚನ್ ಎಂಬ ಪದಪುಂಜಕ್ಕೆ ಸಂವಾದಿಯಾಗಿ ಬಳಸಿದ್ದೇನೆ) ಎಂದರೆ `ಸರಿಯಾದ’ ತಾಯ್ತಂದೆತನ(ಪೇರೆಂಟಿಂಗ್) ಎಂದರೆ ಯಾವುದು?
ಒಂದು ಮುಖ್ಯ ವಿಷಯ ಅಂದರೆ ಇಲ್ಲಿ `ಒಂದೇ ಅಳತೆಯು ಎಲ್ಲರಿಗೂ ಹೊಂದುವುದಿಲ್ಲ’, ಪ್ರತಿ ಮಗುವೂ ವಿಭಿನ್ನ, ಅನನ್ಯ. ಅಪ್ಪ ಅಮ್ಮಂದಿರಿಗೂ ತಾಯ್ತಂದೆತನ ಎಂಬುದು ಹುಟ್ಟಿನಿಂದಲೇ ಬರುವಂತಹ ಕೌಶಲ್ಯವೇನಲ್ಲ. ಅವರೂ ಮೊದಲ ಮಗುವನ್ನು ಹೆತ್ತಾಗ ಮೊದಲ ಸಲ ಅದನ್ನು ಕಲಿಯುವಂಥವರೇ ಅಗಿರುತ್ತಾರೆ. “ನೀನು ಎರಡು ವರ್ಷದ ಕಂದ. ನಾನು ಎರಡು ವರ್ಷದ ತಂದೆ, ನಾವಿಬ್ಬರೂ ಒಂದೆ’ ಎಂಬ ಕುವೆಂಪು ಅವರ ಸಾಲು ನೆನಪಾಗುತ್ತದೆ ನನಗೆ.
*****
ಕಾಲ ಸರಿಯುತ್ತಾ ಹೋದಂತೆ ತಾಯ್ತಂದೆತನ ಎನ್ನವುದು ಎಷ್ಟು ಬದಲಾಗುತ್ತಿದೆಯಲ್ಲ ಎಂಬುದನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಅಂದರೆ ಈಗ ಮುದುಕರಾಗಿರುವವರು ಎಳೆಯ ಮಕ್ಕಳಾಗಿದ್ದ ಕಾಲದಲ್ಲಿ ನಮ್ಮ ಕುಟುಂಬಗಳು ಆಗ ಹೊಸದಾಗಿ ಪರಿಚಯವಾಗಿದ್ದ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ತೆರೆದುಕೊಳ್ಳುತ್ತಿದ್ದ ಕಾಲ. ಬಡತನ ಹೆಚ್ಚು ಹಾಗೂ ಪರಿಸರ ಮಾಲಿನ್ಯ ಕಡಿಮೆ ಇದ್ದ ಕಾಲವದು. ಸ್ವಾತಂತ್ರ್ಯ ಬಂದಾಗ ಎಂಟು ವರ್ಷದ ಹುಡುಗನಾಗಿದ್ದ ನನ್ನ ತಂದೆಯವರು ಹೇಳುವಂತೆ ಮತ್ತು ಆ ಕಾಲದ ಕನ್ನಡ ಕಥೆ-ಕಾದಂಬರಿಗಳಲ್ಲಿ ಚಿತ್ರಿತವಾಗಿರುವಂತೆ ತಾಯ್ತಂದೆತನದ `ತಾತ್ವಿಕತೆ, ವೈಧಾನಿಕತೆಗಳ’ ಬಗ್ಗೆ ಯಾರೂ ಬಹಳವಾಗಿ ತಲೆ ಕೆಡಿಸಿಕೊಳ್ಳದಿದ್ದ ಯುಗವದು. ಆಗ ಒಟ್ಟು ಕುಟುಂಬಗಳಿದ್ದವು. `ಭಗವಂತನ ಕರುಣೆ’ಯಿಂದ ಹುಟ್ಟಿರುವ ಡಝನುಗಟ್ಟಲೆ ಮಕ್ಕಳಿಗೆ ಹೊತ್ತುಹೊತ್ತಿಗೆ ಹೊಟ್ಟೆಗೆ ಹಾಕಿದರೆ, ಕೋರಾ ಬಟ್ಟೆಯಿಂದ ಎರಡೆರಡು ಅಂಗಿ-ಚಡ್ಡಿ ಅಥವಾ ಲಂಗ-ಜಂಪರ್ ಹೊಲಿಸಿಬಿಟ್ಟರೆ ಅಪ್ಪ ಅಮ್ಮನ ಜವಾಬ್ದಾರಿ ಮುಗಿಯಿತು, ಆಟ ಆಡಿಕೊಂಡು, ಹೊಲ ಗದ್ದೆ ತೋಟ ಬಯಲು ಸುತ್ತಾಡಿಕೊಂಡು, ಮರಕೋತಿಯಾಟ, ಚಿಣ್ಣಿದಾಂಡು, ಪಗಡೆ, ಕಲ್ಲಾಟ, ಚೆನ್ನೆಮಣೆ ಆಡಿಕೊಂಡು ಅಪ್ಪ ಅಮ್ಮನಿಗೆ ಗೊತ್ತೇ ಆಗದಂತೆ `ಬೆಳೆದುಬಿಡುತ್ತಿದ್ದರು’ ಮಕ್ಕಳು. ಜೀವನೋಪಾಯಕ್ಕಾಗಿ ಒಂದೋ ಕುಟುಂಬದ ಕಸುಬನ್ನು ಮುಂದುವರಿಸುತ್ತಿದ್ದರು ಅಥವಾ ಒಂದು ನೌಕರಿ/ಚಾಕರಿ ಹಿಡಿಯುತ್ತಿದ್ದರು. ವಯಸ್ಸಿಗೆ ಬಂದಾಗ ತಮ್ಮ ಜಾತಿ-ಕುಲ-ಗೋತ್ರಕ್ಕೆ ಹೊಂದುವ ಗಂಡು/ಹೆಣ್ಣು ನೋಡಿ ಮದುವೆ ಮಾಡಿಬಿಟ್ಟರೆ ಮುಗಿಯಿತು ಅಲ್ಲಿಗೆ ಅಪ್ಪ ಅಮ್ಮ ಗೆದ್ದಂತೆ!
ಈ ಪೀಳಿಗೆಯ ನಂತರದ ಪೀಳಿಗೆಯವರು ತಾಯ್ತಂದೆಯರಾದಾಗ ಕಾಲ ಹೇಗಿತ್ತು? ಅಂದರೆ ನಮ್ಮ ತಂದೆತಾಯಿಯರ ಕಾಲ. ಆಗ ಸ್ವಾತಂತ್ರ್ಯ ಬಂದು ಇಪ್ಪತ್ತೈದು ವರ್ಷಗಳಾಗಿದ್ದವು. ಹೆಚ್ಚುತ್ತಿದ್ದ ವಿದ್ಯಾಭ್ಯಾಸ, ಸರ್ಕಾರದ ಕುಟುಂಬ ಯೋಜನೆ ಇವುಗಳಿಂದಾಗಿ `ಮನೆ ತುಂಬ-ಡಝನುಗಟ್ಟಲೆ ಮಕ್ಕಳಿರುವ’ ಕಾಲ ಹೋಗಿ ಮನೆಯಲ್ಲಿ ಎರಡು ಅಥವಾ ಮೂರು ಮಕ್ಕಳಿರುತ್ತಿದ್ದ ಕಾಲ ಬಂತು. ಒಟ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿ ಬದಲಾದವು.
ಈ ಕಾಲದಲ್ಲಿ ಅಂದರೆ ನಮ್ಮ ಅಪ್ಪ ಅಮ್ಮನ ಪೀಳಿಗೆಯವರು ತಾಯ್ತಂದೆಗಳಾದಾಗ (ಜಾಗತೀಕರಣ ಆಗುವುದಕ್ಕಿಂತ ಇಪ್ಪತ್ತು ವರ್ಷ ಹಿಂದೆ), ಮುಖ್ಯವಾಗಿ ಕೆಳ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದವರ ಆದ್ಯತೆಗಳು ಸ್ವಲ್ಪ ಬದಲಾಗಿದ್ದವು. `ಹೊಟ್ಟೆಬಟ್ಟೆಗೆ ನೇರ ಮಾಡಿಕೊಳ್ಳಬೇಕು’ ಎನ್ನುವುದಕ್ಕಿಂತ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು, ಮನೆಮಂದಿಗಾಗಿ ಒಂದು ಸ್ಕೂಟರನ್ನಾದರೂ ಕೊಳ್ಳಬೇಕು, ಮಕ್ಕಳಿಗೆ ಪದವಿ ಮಟ್ಟದವರೆಗಾದರೂ ಶಿಕ್ಷಣ ಕೊಡಿಸಬೇಕು ಎಂಬುದು ಅಪ್ಪ ಅಮ್ಮಂದಿರನ್ನು ಕಾಡುತ್ತಿದ್ದ ವಿಷಯವಾಗಿತ್ತು. ಆದರೂ `ಒಳ್ಳೆಯ ಮಕ್ಕಳು ಅಂದ್ರೆ ವಿಧೇಯ ಮಕ್ಕಳು, ಹೇಳಿದ್ಹಾಗೆ ಕೇಳಬೇಕು ಅವ್ರು. ಅಪ್ಪ ಅಮ್ಮ ಏನ್ಹೇಳಿದ್ರೂ ಅವರ ಒಳ್ಳೆಯದಕ್ಕೆ ತಾನೆ?’ ಈ ಗಟ್ಟಿ ನಂಬುಗೆಯು ಅಪ್ಪ ಅಮ್ಮಂದಿರಲ್ಲಿ ತನ್ಮೂಲಕ ಮಕ್ಕಳಲ್ಲೂ ಇದ್ದ ಸನ್ನಿವೇಶ ಅದು. ಈ ಸಾಮಾಜೋ ಸಾಂಸ್ಕೃತಿಕ – ಆರ್ಥಿಕ ಸಂಗತಿಗಳ ಬಗ್ಗೆ ಮಕ್ಕಳು ಇನ್ನು ಹೇಗಾದರೂ ಯೋಚಿಸಲು, ಬೇರೆ ರೀತಿಯ ಚಿಂತನೆಗಳಿಗೆ ತೆರೆದುಕೊಳ್ಳಲು ಆಗಿನ ದಿನಗಳಲ್ಲಿ ಈಗ ಇರುವಂತಹ ಅಂತರ್ಜಾಲ, ಸಾಮಾಜಿಕ ಮಾದ್ಯಮಗಳ ಭರಾಟೆ ಇರಲಿಲ್ಲವಲ್ಲ. `ಅತಿಜಾಣರಾಗಿದ್ದರೆ ವಿಜ್ಞಾನ, ಸುಮಾರಾಗಿದ್ದರೆ ವಾಣಿಜ್ಯ, ದಡ್ಡರಾಗಿದ್ದರೆ ಕಲೆಯ ಶಿಕ್ಷಣ! – ಇದರಲ್ಲಿ ಪಿಯುಸಿಯೋ, ಪದವಿಯೋ ಓದಿಸಿಬಿಟ್ಟರೆ ಮತ್ತು `ಓದುತ್ತಿರುವಾಗ ಲವ್ ಗಿವ್ ಮಾಡದಂತೆ ತಡೆದು’, ಓದು ಮುಗಿದ ಮೇಲೆ, ಹುಡುಗರಾದರೆ ಕೆಲಸ ಸಿಕ್ಕಿದ ಮೇಲೆ ಹೆಣ್ಣು ಹುಡುಕಿ, ಹುಡುಗಿಯರಾದರೆ ಗಂಡು ಹುಡುಕಿ `ಮದುವೆ ಮಾಡಿಬಿಟ್ಟರೆ’ ಅಪ್ಪ ಅಮ್ಮನ ಜವಾಬ್ದಾರಿ ಮುಗಿಯಿತು – ಈ ಸರಳರೇಖಾ ಚಿಂತನೆ ಇದ್ದ ಸಂದರ್ಭವದು.
ಅಬ್ಬ! ಈ ಸಲೀಸುಸರಳತೆಗೆ ಹೋಲಿಸಿದರೆ ಈಗ ಹದಿಹರೆಯದ ಮಕ್ಕಳನ್ನು ಸಾಕುತ್ತಿರುವ ನಮ್ಮ ಸಮಕಾಲೀನ ಅಪ್ಪಅಮ್ಮಂದಿರ ಚಿಂತೆ-ತಾಪತ್ರಯಗಳನ್ನು ನೆನಪಿಸಿಕೊಂಡರೆ ಗಾಬರಿ ಆಗುತ್ತದೆ. `ಶಾಲೆ ಕಾಲೇಜಿಗೆ ಹೋದರೇನಂತೆ, ಟ್ಯೂಷನ್ ಎಂಬುದು ಕಡ್ಡಾಯ – ಮನರಂಜನೆ ಅಂದ್ರೆ ಮಾಲ್ ಸುತ್ತಾಟ – ಕೂದಲಿಗೆ ಬಣ್ಣ ಹಾಕಿಕೊಳ್ಳದಿದ್ದರೆ ಅವರು ಸ್ಟೈಲಿಶ್ ಅಲ್ಲ – ಬಾಯ್ ಫ್ರೆಂಡ್‌ನೊಂದಿಗೆಯೇ ಮದುವೆ ಮಾಡಿಕೊಳ್ಳಬೇಕಂತ ಕಡ್ಡಾಯವೇನಿಲ್ಲ – ಅಕ್ಕಿರೊಟ್ಟಿ ಬೋರಿಂಗ್, ಪಿಜ್ಝಾ ಈಸ್ ಕೂಲ್ – ಥೆರಪಿಗೆ ಹೋಗುವುದು ಇನ್ ಥಿಂಗ್ – ನಾನು ಅವನಲ್ಲ ಅವಳು, ನಾನು ಅವಳಲ್ಲ ಅವನು – (ಹೊಲಸು ಅನ್ನಿಸುವ) ಬೈಗುಳದ ಪದಗಳನ್ನು ವಾಕ್ಯಕ್ಕೆ ಎರಡರಂತೆ ಬಳಸುವುದು ಪ್ರಾಮಾಣಿಕತೆಯ ಲಕ್ಷಣ …!!!! ಓದಿನ ಮಧ್ಯೆ ಬ್ರೇಕ್ ಇಯರ್ ತಗೊಳ್ಳುವುದು ಕೂಲ್, ಹತ್ತು ವರ್ಷದಿಂದ ಇದ್ದ ಬಾಯ್‌ಫ್ರೆಂಡಿನ ಜೊತೆ ಬ್ರೇಕ್ ಅಪ್ ಆದ್ರೆ ಅಪ್ಪ ಅಮ್ಮ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ! ಇಂಜಿನಿಯರಿಂಗ್ ಪದವಿ ತೆಗೆದುಕೊಂಡರೆ ಏನಂತೆ, ನಾನು ಮೇಕ್ ಅಪ್ ಆರ್ಟಿಸ್ಟ್ ಕೆಲಸ ಮಾಡುತ್ತೇನೆ, ಇಟ್ ಈಸ್ ಮೈ ಲೈಫ್!’
ಹೀಗೆ ಯೋಚಿಸುವ ಪೀಳಿಗೆಯನ್ನು ಅಪ್ಪ ಅಮ್ಮಂದಿರು ಹೇಗೆ ನಿರ್ವಹಿಸುವುದು!
ಅದಕ್ಕೇ ನನ್ನಲ್ಲಿ ಈ ಪ್ರಶ್ನೆ ಮೂಡಿದ್ದು – ಮಕ್ಕಳನ್ನು ಬೆಳೆಸುವ `ಕಲೆ’ – ಎಂದಾದರೂ ಸಿದ್ಧಿಸೀತೇ ಮನುಕುಲಕ್ಕೆ?
ಉತ್ತರ ಕೊಡುವವರು ಯಾರು?

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.